ಸದಸ್ಯ:Tubelight87/ನನ್ನ ಪ್ರಯೋಗಪುಟ
ದೂರದರ್ಶನ ( ಟೆಲಿವಿಷನ್, ಟಿವಿ), ಒಂದು ದೂರಸಂವಹನ ಸಾಧನ. ಇದು ಕಪ್ಪು - ಬಿಳುಪು ಹಾಗು ಬಣ್ಣದ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದೊಂದು ಸಮೂಹ ಸಂವಹನ ಸಾಧನವಾಗಿದ್ದು, ಸುದ್ದಿ, ಮನೋರಂಜನೆ ಹಾಗು ಇತರೆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ.
2013 ರ ಅಂಕಿ ಅಂಶಗಳ ಪ್ರಕಾರ, ಜಗತ್ತಿನ ಶೇಕಡಾ 79 ಪ್ರತಿಶತ ಮನೆಗಳು ದೂರದರ್ಶನವನ್ನು ಹೊಂದಿವೆ. ಈ ಹಿಂದೆ CRT ತಂತ್ರಜ್ಞಾನದಿಂದ ತಯಾರಿಸಲ್ಪಡುತ್ತಿದ್ದ ದೂರದರ್ಶನಗಳು, ಈಗ LED ಹಾಗು OLED ತಂತ್ರಜ್ಞಾನದಿಂದ ತಯಾರಿಸಲ್ಪಡುತ್ತಿವೆ. ಈಗಿನ ದಿನಗಳಲ್ಲಿ ಅಂತರಜಾಲವನ್ನೊಳಗೊಂಡ ಸ್ಮಾರ್ಟ್ ದೂರದರ್ಶನಗಳು ಜನಪ್ರಿಯಗೊಳ್ಳುತ್ತಿವೆ.
ದೂರದರ್ಶನದ ಇತಿಹಾಸ
[ಬದಲಾಯಿಸಿ]ದೂರದರ್ಶನವನ್ನು ಮೊದಲು ಯಾಂತ್ರಿಕ ರೂಪದಲ್ಲಿ ತಯಾರಿಸಲಾಯಿತು. 1909 ರಲ್ಲಿ ಜಾರ್ಜ್ಸ್ ರಿಗ್ನೌಕ್ಸ್ ಮತ್ತು ಎ. ಫೌರ್ನಿಯರ್ ಪ್ಯಾರಿಸ್ನಲ್ಲಿ ಚಿತ್ರಗಳ ಲೈವ್ ಪ್ರಸರಣದ ಮೊದಲ ಪ್ರದರ್ಶನ ಮಾಡಿದರು. 1920 ರ ದಶಕದಲ್ಲಿ, ಸ್ಕಾಟಿಷ್ ಸಂಶೋಧಕ ಜೆ ಲ್ ಬೈರ್ಡ್, ದೂರದರ್ಶನದ ಮೊದಲ ಪ್ರದರ್ಶನವನ್ನು ಮಾಡಿ, 1927 ರಲ್ಲಿ ಲಂಡನ್ ಇಂದ ಗ್ಲ್ಯಾಸ್ಗೋ ಗೆ ದೂರವಾಣಿ ತಂತಿಯ ಮುಖಾಂತರ ದೂರದರ್ಶನದ ಸಂಕೇತವನ್ನು ರವಾನಿಸಿದರು.[೧]
ಇಲೆಕ್ಟ್ರಾನಿಕ್ ದೂರದರ್ಶನ
[ಬದಲಾಯಿಸಿ]1900 ರ ಸುಮಾರಿಗೆ, CRT (ಕ್ಯಾಥೋಡೆ ರೇ ಟ್ಯೂಬ್) ಚಾಲ್ತಿಗೆ ಬಂತು. 1926 ರಲ್ಲಿ ಹಂಗೇರಿಯಾದ ಇಂಜಿನಿಯರ್ ಕಲ್ಮನ್ ತಿಹಂಯಿ ಚಾರ್ಜ್ ಸ್ಟೋರೇಜ್ ವಿಧಾನವನ್ನು ಕಂಡುಹಿಡಿದ. ಈ ವಿಧಾನವನ್ನು ಇಂದಿಗೂ ಕೂಡ ಉಪಯೋಗಿಸುತ್ತಿದ್ದಾರೆ. 1926 ಜಪಾನಿನಲ್ಲಿ ಕೆಂಜಿರೋ ಟಕಾಯನಾಗಿ ಹಾಗು 1928 ರಲ್ಲಿ, ಅಮೇರಿಕಾದಲ್ಲಿ ಸಂಶೋಧಕ ಫಿಲೋ ಫಾರ್ನ್ಸ್ವರ್ಥ್, ಮೊದಲ ಇಲೆಕ್ಟ್ರಾನಿಕ್ ದೂರದರ್ಶನದ ಪ್ರದರ್ಶನ ಮಾಡಿದರು.
ಕಲರ್ ದೂರದರ್ಶನ
[ಬದಲಾಯಿಸಿ]1928 ರಲ್ಲಿ ಜೆ ಲ್ ಬೈರ್ಡ್ ಮೆಕ್ಯಾನಿಕಲ್ ರೀತಿಯ ಕಲರ್ ದೂರದರ್ಶನವನ್ನು ಪರಿಚಯಿಸಿದರು. 1944 ರ ಸುಮಾರಿಗೆ, ಮೊದಲ ಇಲೆಕ್ಟ್ರಾನಿಕ್ ಕಲರ್ ದೂರದರ್ಶನವನ್ನು ಸಿದ್ಧ ಪಡಿಸಲಾಯಿತು. ನಂತರದ ದಿನಗಳಲ್ಲಿ, ದೂರದರ್ಶನವು ಜನಪ್ರಿಯತೆ ಪಡೆಯುತ್ತಿದ್ದಂತೆ, ಕಲರ್ ಹಾಗು ಕಪ್ಪು ಬಿಳುಪು ದೂರದರ್ಶನಗಳಿಗೆ ಏಕಕಾಲದಲ್ಲಿ ಪ್ರಸಾರ ಮಾಡಲು ಅನುಕೂಲವಾಗುವಂತೆ, ಪ್ರಸಾರದ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು.
ಡಿಜಿಟಲ್ ದೂರದರ್ಶನ
[ಬದಲಾಯಿಸಿ]ಸುಮಾರು 1990 ರ ಸಮಯದಲ್ಲಿ, ಡಿಜಿಟಲ್ ದೂರದರ್ಶನದ ಆಗಮನವಾಯಿತು. 2000 ಸಾವಿರ ಇಸವಿಯ ನಂತರ, ಈ ಹಿಂದೆ ಅನಲಾಗ್ ಮಾದರಿಯ ಸಂದೇಶದ ಮೂಲಕ ಕಾರ್ಯ ನಿರ್ವಹಿಸುತ್ತಿದ್ದ ದೂರದರ್ಶನಗಳು, ಕ್ರಮೇಣವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಲು ಶುರು ಮಾಡಿದವು.
ಸ್ಮಾರ್ಟ್ ದೂರದರ್ಶನ
[ಬದಲಾಯಿಸಿ]ಡಿಜಿಟಲ್ ದೂರದರ್ಶನವು ಇನ್ನಿತರ ಆವಿಷ್ಕಾರಗಳಿಗೆ ಎಡೆಮಾಡಿಕೊಟ್ಟಿತು. ಸೆಟ್ ಟಾಪ್ ಬಾಕ್ಸ್ ಹಾಗು ಅಂತರಜಾಲ ಸಂಪರ್ಕವಿರುವ ಸ್ಮಾರ್ಟ್ ದೂರದರ್ಶನಗಳು ಮಾರುಕಟ್ಟೆಗೆ ಬರಲು ಆರಂಭಿಸಿದವು.
ಪ್ರಸಾರ ವ್ಯವಸ್ಥೆಗಳು
[ಬದಲಾಯಿಸಿ]ಟೆರೆಸ್ಟ್ರಿಯಲ್ ದೂರದರ್ಶನ
[ಬದಲಾಯಿಸಿ]ಈ ರೀತಿಯ ಪ್ರಸಾರದಲ್ಲಿ, ದೂರದರ್ಶನ ಕೇಂದ್ರಗಳು ಸರ್ಕಾರಗಳು ನಿಯೋಜಿಸಿದ ಆವರ್ತನ ಬ್ಯಾಂಡುಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸರಿಸುತ್ತವೆ. ದೂರದರ್ಶನದ ವೀಕ್ಷಕರು ಆಂಟೆನ್ನಾವನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ಪ್ರಸಾರ ಕೇಂದ್ರದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಕೇಬಲ್ ದೂರದರ್ಶನ
[ಬದಲಾಯಿಸಿ]ಈ ರೀತಿಯ ಪ್ರಸಾರದಲ್ಲಿ, ಕಾರ್ಯಕ್ರಮಗಳನ್ನು ಕೋಆಕ್ಸಿಅಲ್ ಕೇಬಲ್ ಅಥವಾ ಫೈಬರ್ ಆಪ್ಟಿಕ್ ಕೇಬಲ್ ಮುಖಾಂತರ ಪ್ರಸರಿಸೂಲಾಗುತ್ತದೆ. ಮೊದಲು ಅನಲಾಗ್ ಮಾದರಿಯಲ್ಲಿ ಸಂದೇಶಗಳನ್ನು ಕೇಬಲ್ ಮುಖಾಂತರ ರವಾನಿಸಲಾಗುತ್ತಿತ್ತು. 2000 ನೇ ಇಸವಿಯ ನಂತರ ಕ್ರಮೇಣ ಡಿಜಿಟಲ್ ಮಾದರಿಯ ಸಂದೇಶಗಳು ಕೇಬಲ್ಲ್ಲಿನ ಮುಖಾಂತರ ದೂರದರ್ಶನ ಪೆಟ್ಟಿಗೆಗೆ ರವಾನಿಸಲು ಶುರುವಾಯಿತು.
ಸ್ಯಾಟಲೈಟ್ ದೂರದರ್ಶನ
[ಬದಲಾಯಿಸಿ]ಅಂತರಿಕ್ಷದಲ್ಲಿ ದೂರದರ್ಶನ, ರೇಡಿಯೋ, ಅಂತರಜಾಲ ಪ್ರಸಾರಣಕ್ಕೆಂದೇ ಹಲವು ಕಮ್ಯುನಿಕೇಷನ್ ಸ್ಯಾಟಲೈಟ್ ಗಳು ಇವೆ. ಈ ಸ್ಯಾಟಲೈಟ್ ಗಳನ್ನು ಉಪಯೋಗಿಸಿ ದೂರದರ್ಶನ ಪ್ರಸರಣ ಮಾಡುವುದನ್ನು ಸ್ಯಾಟಲೈಟ್ ದೂರದರ್ಶನ ಎಂದು ಕರೆಯುತ್ತಾರೆ. ಉದಾಹರಣೆಗೆ - DTH ( ಡೈರೆಕ್ಟ್ ಟು ಹೋಂ ). ಇಂತಹ ವ್ಯವಸ್ಥೆಯಲ್ಲಿ, ಒಂದು ಚಿಕ್ಕದಾದ ಆಂಟೆನಾ ( ಡಿಶ್ ಆಂಟೆನಾ ) ದೂರದರ್ಶನದ ಪ್ರಸರಣ ಸಂದೇಶಗಳನ್ನು ಸ್ವೀಕರಿಸಿ, ದೂರದರ್ಶನದ ಕಾರ್ಯಕ್ರಮಗಳನ್ನು ಪ್ರಸರಿಸುತ್ತದೆ.
ಅಂತರಜಾಲ ದೂರದರ್ಶನ
[ಬದಲಾಯಿಸಿ]ಹಿಂದಿನಿಂದ ಉಪಯೋಗಿಸುತ್ತಿರುವ ಪದ್ಧತಿಗಳಾದ ಟೆರ್ರೆಸ್ಟ್ರಿಯಲ್, ಕೇಬಲ್, ಸ್ಯಾಟಲೈಟ್ ದೂರದರ್ಶನಗಳಿಗೆ ವಿಭಿನ್ನವಾಗಿ, ಅಂತರಜಾಲ ದೂರದರ್ಶನ ಇತ್ತೀಚಿನ ದಿನಗಳಲ್ಲಿ ಬಂದಿದೆ. ದೂರದರ್ಶನದ ಕಾರ್ಯಕ್ರಮಗಳನ್ನು ಲೈವ್ ಆಗಿ ಅಂತರಜಾಲದ ಮೂಲಕ ವೀಕ್ಷಕರಿಗೆ ತಲುಪಿಸಲಾಗುತ್ತದೆ.
ದೂರದರ್ಶನ ಉಪಕರಣಗಳು
[ಬದಲಾಯಿಸಿ]CRT ( ಕ್ಯಾಥೋಡೆ ರೇ ಟ್ಯೂಬ್ ) ದೂರದರ್ಶನ
[ಬದಲಾಯಿಸಿ]ಇದು ಅತಿ ಮೊದಲ ದೂರದರ್ಶನ ಉಪಕರಣ. ಈ ರೀತಿಯ ದೂರದರ್ಶನ ಉಪಕರಣದಲ್ಲಿ, ಒಂದು ವ್ಯಾಕ್ಯುಮ್ ಟ್ಯೂಬ್ ನಲ್ಲಿ, ಒಂದು ಅಥವಾ ಅದಕ್ಕಿಂತ ಅಧಿಕ ಎಲೆಕ್ಟ್ರಾನ್ ಗನ್ ಗಳು ( ಎಲೆಕ್ಟ್ರಾನನ್ನು ಉತ್ಪತ್ತಿ ಮಾಡಲು ) ಇರುತ್ತವೆ. ಹಾಗು ಒಂದು ಪ್ರತಿದೀಪಕ ಪರದೆ ಚಿತ್ರವನ್ನು ನೋಡಲು ಇರುತ್ತದೆ. ಸುರಕ್ಷತೆಯ ದೃಷ್ಟಿಯಿಂದ ದೂರದರ್ಶನ ಉಪಕರಣದ ಮುಂದಿನ ಭಾಗವನ್ನು ದಪ್ಪದಾದ ಸೀಸದ ಗಾಜಿನಿಂದ ಮಾಡಲಾಗುತ್ತದೆ. ಇದು ಗಟ್ಟಿಯಾಗಿರುವುದಲ್ಲದೆ, ಕ್ಪ-ಕಿರಣಗಳಿಂದ ಭದ್ರತೆಯನ್ನು ಒದಗಿಸುತ್ತದೆ.
ಪ್ಲಾಸ್ಮಾ ದೂರದರ್ಶನ
[ಬದಲಾಯಿಸಿ]ಈ ದೂರದರ್ಶನ ಉಪಕರಣವು ಸಪಾಟಾಗಿರುತ್ತದೆ. ಇದರಲ್ಲಿ ಸಣ್ಣ ಸಣ್ಣ ಕೋಶಗಳಲ್ಲಿ ಪ್ಲಾಸ್ಮಾ - ವಿದ್ಯುತ್ ಅಯಾನೀಕರಿಸಿದ ಅನಿಲವನ್ನು - ಉಪಯೋಗಿಸುತ್ತಾರೆ. ಇದು ಸ್ವಲ್ಪ ವರ್ಷಗಳ ಮಟ್ಟಿಗೆ ಚಾಲ್ತಿಯಲ್ಲಿತ್ತಾದರೂ, ಈಗ ಈ ಉಪಕರಣವನ್ನು ಯಾರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿಲ್ಲ.
LCD ದೂರದರ್ಶನ
[ಬದಲಾಯಿಸಿ]LCD ದೂರದರ್ಶನವು ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ತಂತ್ರಜ್ಞಾನವನ್ನು ಉಪಯೋಗಿಸುತ್ತದೆ. ಈ ಉಪಕರಣವು CRT ಉಪಕರಣಕ್ಕಿಂತ ತೆಳ್ಳಗಿದ್ದು, CRT ಗಿಂತ ಹೆಚ್ಚಿನ ಪ್ರದರ್ಶಕ ಗಾತ್ರದಲ್ಲಿ ಲಭ್ಯವಿರುತ್ತದೆ. ಈ ಉಪಕರಣದಲ್ಲಿ, ಹಿಂಬದಿಯಿಂದ ಬೆಳಕಿನ ಮೂಲವಿರುತ್ತದೆ. LCD ದೂರದರ್ಶನದಲ್ಲಿ, ಈ ಬೆಳಕಿನ ಮೂಲ ಪ್ರತಿದೀಪಕ ದೀಪಗಳಾಗಿರುತ್ತವೆ. ಈ ರೀತಿಯ ಉಪಕರಣಗಳು ಜನಪ್ರಿಯತೆ ಪಡೆದಿದ್ದವು. ಆದರೆ ಈ ನಡುವೆ LED ದೂರದರ್ಶನ ಉಪಕರಣಗಳು ಹೆಚ್ಚಿನ ಬಳಕೆಯಲ್ಲಿವೆ. LCD ಉಪಕರಣಗಳ ತಯಾರಿಕೆಯನ್ನು ಬಹಳಷ್ಟು ದೂರದರ್ಶನ ಉತ್ಪಾದಕರು ನಿಲ್ಲಿಸಿದ್ದಾರೆ.
LED ದೂರದರ್ಶನ
[ಬದಲಾಯಿಸಿ]LED ದೂರದರ್ಶನದಲ್ಲಿಯೂ ಸಹ LCD ( ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ) ತಂತ್ರಜ್ಞಾನವನ್ನು ಉಪಯೋಗಿಸುತ್ತಾರೆ. ಆದರೆ ವ್ಯತ್ಯಾಸವೇನೆಂದರೆ, ಹಿಂಬದಿಯ ಬೆಳಕನ್ನು LED ದೀಪಗಳು ಪೂರೈಸುತ್ತವೆ. ಇದು ಸದ್ಯದ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದ್ದು, ಬಹುತೇಕ ದೂರದರ್ಶನ ಉಪಕರಣಗಳ ಹಿಂದಿನ ತಂತ್ರಜ್ಞಾನ ಇದೇ ಆಗಿದೆ.[೨]
OLED ದೂರದರ್ಶನ
[ಬದಲಾಯಿಸಿ]OLED - ಆರ್ಗಾನಿಕ್ ಲೈಟ್ ಎಮಿಟಿಂಗ್ ಡಯೋಡ್. ಈ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಬಂದಿದ್ದು, ಇದರಲ್ಲಿ ಆರ್ಗಾನಿಕ್ ಕಾಂಪೌಂಡ್ ನಿಂದ ಮಾಡಿದ ಎಲೆಕ್ಟ್ರೋಲುಮಿನಿಸ್ಸೆಂಟ್ ಪದರವಿರುತ್ತದೆ. ಇದು ವಿದ್ಯುತ್ತಿಗೆ ಅನುಸಾರವಾಗಿ ಬೆಳಕನ್ನು ಹೊರಸೂಸುತ್ತದೆ. ಈ ತಂತ್ರಜ್ಞಾನದಲ್ಲಿ ಹಿನ್ನೆಲೆಯ ಬೆಳಕಿನ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಈ ಉಪಕರಣಗಳಲ್ಲಿ, ಹೆಚ್ಚಿನ ಕಪ್ಪಿನ ಮಟ್ಟ ದೊರೆಯುತ್ತದೆ. ಇದರಿಂದ ಈ ಉಪರಕಣಗಳು ಹೆಚ್ಚಿನ ವ್ಯತಿರಿಕ್ತ ಅನುಪಾತವನ್ನು ( ಕಾಂಟ್ರಾಸ್ಟ್ ರೇಶಿಯೋ ) ಹೊಂದಬಹುದು. ಈ ಕಾರಣ, ಇದರ ಚಿತ್ರದ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ.
ದೂರದರ್ಶನ ಉಪಕರಣಗಳ ಪ್ರಮುಖ ತಯಾರಕರು
[ಬದಲಾಯಿಸಿ]ಜಗತ್ತಿನಲ್ಲಿ ದೂರದರ್ಶನ ಉಪಕರಣದ ಹಲವಾರು ತಯಾರಾಕರಿದ್ದು, ಇದರಲ್ಲಿ ಈ ಕೆಳಕಂಡ ತಯಾರಕರು ಪ್ರಮುಖರಾಗಿರುತ್ತಾರೆ.
೧. ಸ್ಯಾಂಸಂಗ್
೨. LG ಎಲೆಕ್ಟ್ರಾನಿಕ್ಸ್
೩. TCL
೪. ಹೈಸೆನ್ಸ್
೫. ಸೋನಿ
೬. ಶಾರ್ಪ್
೭. ಸ್ಕೈ ವರ್ತ್
೮. ಹೈರ್
೯. ಪ್ಯಾನಸೋನಿಕ್