ವಿಷಯಕ್ಕೆ ಹೋಗು

ಸದಸ್ಯ:Suvin Tharika/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೋಡು ನಮ್ಮೆ

[ಬದಲಾಯಿಸಿ]
ಬೋಡು ನಮ್ಮೆ
ಬೋಡು ವೇಷ

ಕಣ್ಮನ ಸೆಳೆವ ಕೊಡಗಿನ ಸಂಭ್ರಮದ ಬೋಡು ನಮ್ಮೆ

[ಬದಲಾಯಿಸಿ]

ಕೊಡಗು ವಿಶಿಷ್ಟ ಪದ್ಧತಿ, ಜಾನಪದ ಹಾಗೂ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಅದೇ ರೀತಿ ಇಲ್ಲಿನ ಧಾರ್ಮಿಕ ಕಾರ್ಯಕ್ರಮ ಕೂಡ ವಿಭಿನ್ನವಾಗಿ ನಡೆಯುತ್ತಿದ್ದು, ಜಾನಪದ ಹಾಗೂ ಸಂಸ್ಕೃತಿಯೊಂದಿಗೆ ತಳಕು ಹಾಕಿಕೊಂಡಿದೆ. ಇವು ಮೂರು ಕೊಡಗಿನ ಜನರ ಬದುಕಿನಲ್ಲಿ ಬೇರ್ಪಡಿಸಲಾಗದಂತೆ ಹಾಸುಹೊಕ್ಕಾಗಿದೆ.

ಕೊಡಗಿನಲ್ಲಿ ನಡೆಯುವ ಹಬ್ಬಗಳು ಇತರೆ ಕಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಇಂತಹ ಹಬ್ಬಗಳ ಪೈಕಿ ಬೋಡು ಹಬ್ಬವೂ ಒಂದಾಗಿದೆ. ಈ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುವುದಿಲ್ಲ. ಕೆಲವೇ ಕೆಲವು ಗ್ರಾಮಗಳಲ್ಲಿ ಅದರಲ್ಲೂ ಭದ್ರಕಾಳಿ ದೇವಾಲಯವಿರುವ ಊರುಗಳಲ್ಲಿ ಮಾತ್ರ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಗ್ರಾಮಕ್ಕೊಂದು ಭದ್ರಕಾಳಿ ದೇವಾಲಯವಿದ್ದು, ಈ ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಬೋಡು ಹಬ್ಬವನ್ನು ಆಚರಿಸಲಾಗುತ್ತದೆ.

ದೇವರ ಹರಕೆ, ಜಾನಪದ ನಂಬಿಕೆ ಹಾಗೂ ಪದ್ಧತಿಯ ರೂಪದಲ್ಲಿ ಬೋಡು ಹಬ್ಬ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಡೆಯುತ್ತದೆ. ಪ್ರತಿ ವರ್ಷ ಈ ಕಾರ‍್ಯಕ್ರಮಕ್ಕೆ ಸಾವಿರಾರು ಮಂದಿ ಸೇರುತ್ತಾರೆ. ಅದರಲ್ಲಿಯೂ ದಕ್ಷಿಣ ಕೊಡಗಿನಲ್ಲಿ ಈ ಹಬ್ಬವನ್ನು ವೀಕ್ಷಿಸಲು ಹಾಗೂ ಅದರಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದಲೂ ಜನರು ಆಗಮಿಸುತ್ತಾರೆ.

ಐತಿಹಾಸಿಕ ಕುಂದಾ ಬೋಡು ಹಬ್ಬ

[ಬದಲಾಯಿಸಿ]

ಕುಂದದಲ್ಲಿ ಆರಂಭ: ಬೋಡು ಹಬ್ಬ ಪೊನ್ನಂಪೇಟೆ ಸನಿಹದ ಕುಂದ ಬೆಟ್ಟದಲ್ಲಿ ಪ್ರತಿ ವರ್ಷ ಅಕ್ಟೋಬರ್‌ 18 ರಂದು ಆರಂಭವಾಗುತ್ತದೆ. ಬಳಿಕ ಗೋಣಿಕೊಪ್ಪಲು ಬಳಿಯ ಬೇರಳಿನಾಡುವಿನ ಪಾರಾಣ ನಮ್ಮೆಯಲ್ಲಿ ಕೊನೆಗೊಳ್ಳುತ್ತದೆ. ಇದು ಕೊಡಗಿನಲ್ಲಿ ಗಾದೆಯ ರೂಪದಲ್ಲಿ ಬಳಕೆಯಾಗುತ್ತಿದೆ. ''ಕುಂದತ್‌ ಬೊಟ್ಟ್‌ಲ್‌ ನೇಂದ ಕುದುರೆ, ಪಾರಾಣ ಮಾನಿಲ್‌ ಅಳ್‌ಂದ ಕುದುರೆ'' ಎಂದು ಹೇಳುತ್ತಾರೆ. ಅಂದರೆ, ಬೇಡು ಹಬ್ಬದಲ್ಲಿ ಕಟ್ಟುವ ಕುದುರೆ ಕುಂದ ಬೆಟ್ಟದಲ್ಲಿ ಎದ್ದು ಪಾರಾಣ ನಮ್ಮೆಯಲ್ಲಿ ಇಳಿಯಿತು ಎನ್ನುವ ಅರ್ಥ. ಪಾರಾಣ ನಮ್ಮೆ ಮುಗಿದ ಬಳಿಕ ಮುಂದಿನ ಬೋಡು ಹಬ್ಬಕ್ಕೆ ಕುಂದದಲ್ಲಿ ಆರಂಭವಾಗುವ ಉತ್ಸವದ ತನಕ ಕಾಯಬೇಕು.

ಕುಂದದ ಬಳಿಕ ಹಳ್ಳಿಗಟ್ಟ್‌, ಹುದೂರು, ಈಚೂರು, ಬೆಕ್ಕೆಸೊಡ್ಲೂರು, ನಲ್ಲೂರು, ಕಿರುಗೂರು, ನಡಿಕೇರಿ, ಬೆಸಗೂರು, ಚೆಂಬೆಬೆಳ್ಳೂರು, ಐಮಂಗಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಬ್ಬ ಸಂಭ್ರಮದಿಂದ ನಡೆಯುತ್ತದೆ. ಹಾಗೆನೋಡಿದರೆ ಚೆಂಬೆಬೆಳ್ಳೂರಿನಲ್ಲಿ ನಡೆಯುವ ಬೋಡು ಹಬ್ಬಕ್ಕೆ ತನ್ನದೇ ಆದ ಇತಿಹಾಸ ಮತ್ತು ಆಚರಣೆಯಿದೆ. ಒಂದಷ್ಟು ವಿಶೇಷತೆಗಳನ್ನು ಕಾಣಬಹುದಾಗಿದೆ. ಹಬ್ಬವು ವಾರಗಳ ಕಾಲ ನಡೆಯುತ್ತಿದ್ದು, ಹಬ್ಬದ ಸಂಪ್ರದಾಯದಂತೆ ಹರಕೆ ಹೊತ್ತವರು ವಿವಿಧ ವೇಷ ಭೂಷಣ ಧರಿಸಿ ರಂಜಿಸುವುದು ಇಲ್ಲಿನ ವಿಶೇಷತೆಯಾಗಿದೆ. ಈ ವೇಳೆ ಹುಲಿ ವೇಷಧರಿಸಿದವರು ಒಂದೆಡೆಯಾದರೆ, ಮತ್ತೊಂದೆಡೆ ಕೆಸರು ಮೈಗೆ ಹಚ್ಚಿಕೊಂಡು, ಹುಲ್ಲನ್ನು ಮೈಗೆ ಕಟ್ಟಿಕೊಂಡು ಕುಣಿದು ಕುಪ್ಪಳಿಸುತ್ತಾ ತಮ್ಮ ಹರಕೆ ತೀರಿಸುತ್ತಾರೆ.

ಬೇಡುವ ಹಬ್ಬ
ಹುಲಿ ವೇಷ

ಬೋಡು ಹಬ್ಬದ ವಿಶೇಷತೆ ಮತ್ತು ಆಚರಣೆ

[ಬದಲಾಯಿಸಿ]

ಹುಲಿವೇಷ ಮತ್ತು ಬೋಡು ವೇಷ ಹಾಕಿದವರು ಹಬ್ಬದ ದಿನ ಹಬ್ಬ ನಡೆಯುವ ದೇವಾಲಯದ ದೇವನೆಲೆಯಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಚಂಡೆ(ಕೊಟ್ಟ್) ಮತ್ತು ವಾಲಗಕ್ಕೆ ಹೆಜ್ಜೆ ಹಾಕುತ್ತಾ ದೇವನೆಲೆಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರೂ ಪಾಲ್ಗೊಳ್ಳುತ್ತಾರೆ. ಸುಮಾರು ಒಂದು ವಾರಗಳ ಕಾಲ ಭದ್ರಕಾಳಿ ದೇವಾಲಯದ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಹಬ್ಬದ ಮೊದಲ ದಿನ ಊರಿನವರೆಲ್ಲ ದೇವನೆಲೆಯಲ್ಲಿ ಸೇರಿ ಹಬ್ಬದ ಕಟ್ಟು ಹಾಕಲಾಗುತ್ತದೆ. ಇದನ್ನು ಊರಿನಲ್ಲಿ ಕಟ್ಟು ಬೀಳುವುದು ಎಂದು ಹೇಳಲಾಗುತ್ತದೆ. ಕಟ್ಟು ಬಿದ್ದ ಬಳಿಕ ಅಂದಿನಿಂದ ಹಬ್ಬ ಮುಗಿಯುವ ತನಕ ಊರಿನಲ್ಲಿ ಮಾಂಸಸೇವನೆ, ಮರಕಡಿಯುವುದು, ಇನ್ನಿತರ ಯಾವುದೇ ಕೈಂಕರ್ಯಗಳನ್ನು ಮಾಡುವಂತಿಲ್ಲ. ಆ ನಂತರ ಪಟ್ಟಣಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಊರಿನವರೆಲ್ಲ ಹಗಲು ಹೊತ್ತು ಅನ್ನ ಸೇವಿಸದೆ ಇತರೆ ತಿಂಡಿ ಸೇವಿಸಿ ರಾತ್ರಿ ಮಾತ್ರ ಅನ್ನ ಸೇವಿಸುತ್ತಾರೆ.

ಆ ನಂತರ 10 ರಿಂದ 12 ವರ್ಷದೊಳಗಿನ ಮಕ್ಕಳು ಸಂಜೆ ವೇಳೆಯಲ್ಲಿ ದೇವಾಲಯದ ಆವರಣದಲ್ಲಿ ಪೀಳಿಯಾಟವಾಡುತ್ತಾರೆ. ಆ ನಂತರ ಪೊದಕೇರಿ, ಪೊದಕೋಟೆ ಹಾಗೂ ನಡಿಕೇರಿ ಮೂರು ಕೇರಿಗಳ ಜನರು ಬಿದಿರಿನಿಂದ ತಯಾರು ಮಾಡಿದ ಕೃತಕ ಕುದುರೆಯನ್ನು ದೇವಾಲಯಕ್ಕೆ ತಂದು ಕುದುರೆ ಆಟ ಆಡುವ ಮೂಲಕ ಹರಕೆ ಹೊತ್ತವರು ತಮ್ಮ ಹರಕೆ ತೀರಿಸುತ್ತಾರೆ. ಮಾರನೆಯ ದಿನ ಊರಿನವರೆಲ್ಲ ಸೇರಿ ಸಾಂಪ್ರದಾಯಿಕ ವೇಷಧರಿಸಿ ಊರಿನ ಪ್ರತಿಯೊಂದು ಮನೆಮನೆಗಳಿಗೆ ತೆರಳಿ ಭಿಕ್ಷೆ ಕೇಳುವ ಮೂಲಕ ಬೋಡು ನಮ್ಮೆ(ಬೇಡುವ ಹಬ್ಬ)ಯನ್ನು ಆಚರಿಸುತ್ತಾರೆ. ವೇಷಧಾರಿಗಳು ಮನೆಗೆ ಬಂದ ಸಂದರ್ಭ ಮನೆಯವರು ಸತ್ಕಾರ ಮಾಡಿ ಕಳುಹಿಸಿಕೊಡುತ್ತಾರೆ. ಆ ನಂತರ ಮತ್ತೆ ಸಂಜೆ ದೇವಾಲಯದ ಆವರಣದಲ್ಲಿ ಸೇರಿ ತಮಟೆ ವಾದ್ಯಕ್ಕೆ ಹೆಜ್ಜೆಹಾಕುತ್ತಾರೆ.

ಚೆಂಬೆಬೆಳ್ಳೂರಿನ ಭದ್ರಕಾಳಿ ದೇವಿ

[ಬದಲಾಯಿಸಿ]

ಚೆಂಬೆಬೆಳ್ಳೂರಿನ ಭದ್ರಕಾಳಿಗೆ 900 ವರ್ಷಗಳ ಇತಿಹಾಸವಿದ್ದು, ಹಿಂದೆ ಅಜ್ಜಿಯ ರೂಪದಲ್ಲಿ ಗ್ರಾಮಕ್ಕೆ ಆಗಮಿಸಿದ ಭದ್ರಕಾಳಿಗೆ ಚೇಂದಂಡ ಕುಟುಂಬದವರು ನೆಲೆಕರುಣಿದರು. ದಿನಕಳೆದಂತೆ ಅಜ್ಜಿಯ ಪವಾಡದಿಂದ ಆಕೆ ಬರೀ ಅಜ್ಜಿಯಲ್ಲ ಅಜ್ಜಿಯ ರೂಪದಲ್ಲಿ ಬಂದ ಗ್ರಾಮದೇವತೆ ಭದ್ರಕಾಳಿ ಎಂಬುದು ತಿಳಿದು ಆಕೆ ದೇವಾಲಯ ಕಟ್ಟಿಸುವ ಮೂಲಕ ಶಾಶ್ವತ ನೆಲೆ ನೆಲೆನೀಡಲಾಯಿತೆಂಬ ಮಾತುಗಳು ಜನವಲಯದಲ್ಲಿದೆ.

ಭದ್ರಕಾಳಿ ಬೇಡಿದ್ದನ್ನು ನೀಡುವ ಕರುಣಾಮಯಿಯಾಗಿದ್ದು, ಇಲ್ಲಿ ಬೇಡಿಕೊಂಡ ಬಯಕೆ ಈಡೇರಿದ ಉದಾಹರಣೆಗಳು ಸಾಕಷ್ಟಿವೆ ಎಂದು ಹಿರಿಯರಯ ಹೇಳುತ್ತಾರೆ. ಹೀಗಾಗಿಯೇ ಪ್ರತಿವರ್ಷ ಊರವರು ಸೇರಿ ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಬೋಡುಹಬ್ಬವನ್ನು ಆಚರಿಸುವುದು ಕಂಡು ಬರುತ್ತಿದೆ.

ಈ ಸಂದರ್ಭ ವಿವಿಧ ವೇಷಧಾರಿಗಳು ಮನೆ ಮನೆಗೆ ತೆರಳುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ.ಜನರು ಸಂಭ್ರಮದಿಂದ ಕಾಲ ಕಳೆಯುತ್ತಾರೆ. ಮುಂದೆ ಕೊಡಗಿನ ಮಂದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಈ ರೀತಿಯ ಜಾತ್ರೆ, ಹಬ್ಬಗಳಿಗೆ ಬಿಡುವು ನೀಡಲಾಗುತ್ತದೆ. ಹಬ್ಬಗಳಿಗೆ ಬಿಡುವು ನೀಡಲಾಗುತ್ತದೆ. ಪಾರಾಣ ಮಾನಿ ಹಬ್ಬ ಭಾವನಾತ್ಮಕವಾಗಿ ಕೊನೆಗೊಂಡು ಭಾರವಾದ ಹೃದಯದಿಂದ ಜನರು ಹಿಂತಿರುಗುತ್ತಾರೆ.

ಉಲ್ಲೇಖ

[ಬದಲಾಯಿಸಿ]

<r>https://www.deccanherald.com/state/mangaluru/fun-frolic-devotion-mark-bod-namme-730327.html</r>

<r>https://kodavaclan.co/kodaguheritage/folk-dance-folk-songs-of-kodavas/</r>