ಸದಸ್ಯ:Sushma Uppin/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಅ.ನೇ.ಉಪಾಧ್ಯೆ[ಬದಲಾಯಿಸಿ]

ಸವಾ‍ಧ್ಯಕ್ಷರಾಗಿ ಡಾ.ಅ.ನೇ.ಉಪಾಧ್ಯೆ[ಬದಲಾಯಿಸಿ]

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವ ಯಾರಿಗಾದರೂ ಸಿಕ್ಕರೆ ಒಲ್ಲೆನೆನ್ನುವುದುಂಟೇ? ‘ಅಸಂಭವ’ ಎನ್ನುವುದು ಸಾಮಾನ್ಯ ಉತ್ತರವಾದರೂ ಇಂಥ ಅಸಂಭವಗಳೂ ಒಂದೆರೆಡು ಬಾರಿ ಘಟಿಸಿರುವ ಅಪರೂಪದ ಉದಾಹರಣೆಗಳಿವೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸುವ ‘ಕನ್ನಡ ಸಾಹಿತ್ಯ ಸಮ್ಮೇಳನ’ದ ಇತಿಹಾಸದಲ್ಲಿ ಹೀಗೆ ಕನಿಷ್ಟ ಎರಡು ಬಾರಿ ನಡೆದಿದೆ. ಒಂದು ಬಾರಿ ತೀನಂಶ್ರೀ ಅವರು ತಮ್ಮ ಪಾಲಿಗೆ ಬಂದಿದ್ದು ಈ ಸಾಹಿತ್ಯ ಲೋಕದ ಅತ್ಯುನ್ನತ ಗೌರವವನ್ನು ನನಗಿಂತ ಡಿ.ಎಲ್. ನರಸಿಂಹಾಚಾರ್ ಇದಕ್ಕೆ ಹೆಚ್ಚು ಅರ್ಹರು ಎಂದು ಅದನ್ನು ಅತ್ತ ತಿರುಗಿಸಿದರು. ಇನ್ನೊಮ್ಮೆ ಹಿಗೆ ಒಲ್ಲೆ ಎಂದವರು ಅಂತರಾಷ್ಟ್ರೀಯ ಖ್ಯಾತಿಯ ಪ್ರಾಕೃತ ವಿದ್ವಾಂಸ ಡಾ.ಆದಿನಾಥ ನೇಮಿನಾಥ ಉಪಾಧ್ಯೆ ಅವರು. 1967ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ಅವರನ್ನು ಈ ಸ್ಥಾನ ಸ್ವೀಕರಿಸಲು ಒಪ್ಪಿಸುವುದೇ ಕಷ್ಟವಾಯಿತು. ಆ ಬಗ್ಗೆ ಆಗ ಪರಿಷತ್ತಿನ ಕಾರ್ಯದರ್ಶಿಯಾಗಿದ್ದ ಡಾ. ಹಂಪ ನಾಗರಾಜಯ್ಯ ಹೀಗೆ ಬರೆದಿದ್ದಾರೆ. “ಆಗ ನಾನು ಪರಿಷತ್ತಿನ ಕಾರ್ಯದರ್ಶಿ, ಅವರನ್ನು ಅಧ್ಯಕ್ಷತೆಗೆ ಒಪ್ಪಿಸಲು ಪ್ರಯಾಸವಾಯಿತು. ಅದೊಂದು ಅಪರೂಪದ ಅನುಭವ. ಎರಡು ಕಾರಣಗಳಿಂದ ತಮಗೆ ಸಂಕೋಚವಾಗುತ್ತಿದೆ ಎಂದು ಅವರು ವಿವರಿಸಿದರು. ಒಂದು:ತಾವು ಕನ್ನಡದಲ್ಲಿ ಮಾಡಿರುವ ಬರವಣಿಗೆ ಕಡಿಮೆಯಾಗಿ, ಇಂಗ್ಲಿಷಿನಲ್ಲಿ ವಿಫುಲವಾಗಿ ಬಂದಿರುವುದರಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಒಪ್ಪಿಕೊಂಡರೆ ಔಚಿತ್ಯವಿರುತ್ತದೆಯೇ ಎಂಬುದು. ಎರಡು:ತಮಗಿಂತ ಹಿರಿಯರಿದ್ದಾರೆ. ಅವರಿಗೆ ಈ ಮರ್ಯಾದೆ ಸಲ್ಲುವ ಮೊದಲು ತಾವು ಒಪ್ಪಿಕೊಳ್ಳುವುದು ತಪ್ಪಾಗುವುದಿಲ್ಲವೆ ಎಂಬುದು. ಅವರ ಹುಟ್ಟು ಕನ್ನಡಿಗರಾಗಿ ಕನ್ನಡದಲ್ಲೂ ಬರವಣಿಗೆ ಮಾಡಿರುವುದನ್ನೂ, ಇಂಗ್ಲಿಷಿನಲ್ಲಿ ಬರೆದಿರುವುದರಿಂದ ಕನ್ನಡದ ಸಂಗತಿಗಳನ್ನು, ಸಾಹಿತ್ಯ ಕೃತಿಗಳನ್ನು ಜಗತ್ತಿಗೆ ಪರಿಚಯಿಸಿ ಮಹದುಪಕಾರವೆಸಗಿರುವುದನ್ನೂ, ಕನ್ನಡಕ್ಕೂ ಹೊರನಾಡಿಗೂ ಜೀವಂತ ಸಂಪರ್ಕವಾಗಿರುವುದರಿಂದ ಆಗಿರುವ ಪ್ರಯೋಜನಗಳನ್ನು ಮನದಟ್ಟು ಮಾಡಿದ ಮೇಲೇ ಅಧ್ಯಕ್ಷತೆಗೆ ಒಪ್ಪಿಗೆ ಕೊಟ್ಟಿದ್ದು. ಆಗಲೂ ಮೊದಲು ಆಜೀವ-ಸದಸ್ಯತ್ವದ ಹಣ ಕೊಟ್ಟು ರಶೀದಿ ಬರೆಸಿ ಆಮೇಲೆ ಆಗಲಿ ಎಂದರು. ಸಮ್ಮೇಳನದ ಕಾಲದಲ್ಲಿ ತೆಗೆದ ಭಾವ ಚಿತ್ರಗಳ ಸಂಪುಟವನ್ನು ತಾವೇ ಹಣ ತೆತ್ತು ಪಡೆದರು. ಈ ಬಗೆಯ ಆದರ್ಶ ಹೊಂದಿರುವ ದೊಡ್ಡವರು ಅಪರೂಪ.

ಬಹುಭಾಷಾ ತಜ್ಞ[ಬದಲಾಯಿಸಿ]

ಡಾ.ಅ.ನೇ.ಉಪಾಧ್ಯೆ ಅವರದ್ದು ತುಂಬಿದ ಕೊಡದಂತಹ ವ್ಯಕ್ತಿತ್ವ. ಸಂಸ್ಕøತ, ಪ್ರಾಕೃತ, ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದವರು. ತಾಡವೋಲೆಗಳಲ್ಲಿ ಹುದುಗಿದ್ದ ಅದೆಷ್ಟೋ ಪ್ರಾಕೃತ, ಅರ್ಧಮಾಗಧಿ, ಸಂಸ್ಕøತ, ಕನ್ನಡ ಗ್ರಂಥಗಳನ್ನು ತುಂಬ ಶಾಸ್ತ್ರೀಯವಾಗಿ ಸಂಪಾದನೆ ಮಾಡಿ, ವಿಸ್ತøತವಾದ ಅಮೂಲ್ಯ ಪ್ರಸ್ತಾವನೆ ಮತ್ತು ಅನುಭಂಧಗಳೊಡನೆ ಅವನ್ನು ಪ್ರಕಟಿಸಿ, ಭಾರತೀಯ ವಿದ್ವತ್ ಲೋಕಕ್ಕೆ ಅವರು ಸಲ್ಲಿಸಿರುವ ಸೇವೆ ಅಮೂಲ್ಯವಾದದ್ದು. ರಾಷ್ಟ್ರದ ಪ್ರಖ್ಯಾತ ಸಂಶೋಧನಾ ಸಂಸ್ಥೆಗಳಲ್ಲಿಯೂ ಸಲಹೆಗಾರರಾಗಿದ್ದುಕೊಂಡು ಅವರು ಮಾಡಿಸಿದ ವಿದ್ವತ್ ಕಾರ್ಯಗಳು ಈ ಕ್ಷೇತ್ರಕ್ಕೆ ಅನೇಕ ಹೊಸ ಬೆಳಕನ್ನು ಕೊಟ್ಟವು. ಕರ್ನಾಟಕದ ಆದ್ಯ ಆರ್ಕಿಯಾಲಜಿಸ್ಟ್ ಪ್ರೊ.ಕೆ.ಜಿ.ಕುಂದಣಗಾರ ಅವರ ಬದುಕಿಗೆ ಒಂದು ನೆಲೆ ಕಲ್ಪಿಸಿದ್ದು, ಖ್ಯಾತ ಲೇಖಕ ಮಿರ್ಜಿ ಅಣ್ಣಾರಾಯ ಅವರನ್ನು ಒಬ್ಬ ವಿದ್ವಾಂಸರನ್ನಾಗಿ ರೂಪಿಸಿದವರು ಪ್ರೊ. ಆ.ನೇ.ಉಪಾಧ್ಯೆ ಅವರೇ. ಭಾರತೀಯ ಜ್ಞಾನಪೀಠ, ಸೊಲ್ಲಾಪುರದ ಜೀವರಾಜ ಗ್ರಂಥಮಾಲೆಯಂಥ ಸಂಸ್ಥೆಗಳ ಮೂಲಕ ಅನೇಕಾನೇಕ ವಿದ್ವತ್ ಪೂರ್ಣ ಹೆಬ್ಬೊತ್ತಗೆಗಳು ಹೊರಬರುವಂತೆ ಆದದ್ದು ಪ್ರೊ. ಉಪಾಧ್ಯೆ ಅವರ ಪರಿಶ್ರಮದ ಫಲ. ಜ್ಞಾನೋಪಾಸನೆಯನ್ನು ಒಂದು ವ್ರತದಂತೆ ಕೈಗೊಂಡು ಅದರ ಸಾಧನೆಯೊಂದೇ ತಮ್ಮ ಪ್ರಪಂಚವೆಂಬಂತೆ ಬದಿಕಿದ ಋಷಿ ಸದೃಶ ವ್ಯಕ್ತಿ ಡಾ. ಅ.ನೇ.ಉಪಾಧ್ಯೆ ಅವರು. ಅವರು ವಿದ್ವತ್ತಿನ ಅರಮನೆಯಲ್ಲಿ ಅನೇಕ ಸಾಲುದೀಪಗಳನ್ನು ಹಚ್ಚಿಟ್ಟವರು. ಸ್ವತಃ ಅವರ ವ್ಯಕ್ತಿತ್ವವೇ ಒಂದು ನಂದಾದೀಪ.

ಹುಟ್ಟು ಬಾಲ್ಯ ಬೆಳವಣಿಗೆ[ಬದಲಾಯಿಸಿ]

ಡಾ.ಅ.ನೇ.ಉಪಾಧ್ಯೆ ಅವರ ಪೂರ್ಣ ಹೆಸರು ಆದಿನಾಥ ನೇಮಿನಾಥ ಉಪಾಧ್ಯೆ ಎಂದು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಸದಲಗಾ ಎಂಬ ಗ್ರಾಮವಿದೆ. ಅಲ್ಲಿನ ಒಂದು ಸಾಮಾನ್ಯ ಜೈನಪುರೋಹಿತ ಕುಟುಂಬದಲ್ಲಿ ಹುಟ್ಟಿದ ಮಗು ಈ ಆದಿನಾಥ. ತಂದೆಯ ಹೆಸರು ನೇಮಿನಾಥ. ತಾಯಿ ಚಂದ್ರಾಬಾಯಿಯವರು. ಜೀನರಲ್ಲಿ ಪೌರೋಹಿತ್ಯ ಮಾಡುವವರಿಗೆ- ಉಪಾಧ್ಯೆ, ಪಂಡಿತ, ಬಸ್ತಿ ಪಂಡಿತ- ಹೀಗೆ ಯಾವುದಾದರೊಂದು ಅಡ್ಡ ಹೆಸರು ಉತ್ತರ ಕರ್ನಾಟಕದಲ್ಲಿ ಇರುತ್ತದೆ. ಈಗಲೂ ಇದೇ ರೂಢಿ. ಈ ಕಾರಣದಿಂದ ಈ ಮನೆತನಕ್ಕೆ ‘ಉಪಾಧ್ಯೆ’ ಎಂಬುದು ವಂಶನಾಮವಾಗಿತ್ತು. ಆದಿನಾಥರ ಮೂಲ ಹೆಸರು ಕಲ್ಲಪ್ಪ. ಹಾಗೆ ಕರೆಯುವುದರ ಹಿಂದಿರುವ ಕಾರಣ ಮನೋವೇದಕವಾದದ್ದು. ಈ ಮಗುವುಗಿಂತ ಮೊದಲು ನೇಮಿನಾಥ ಚಂದ್ರಾಛಾಯಿ ದಂಪತಿಗಳಿಗೆ ನಾಲ್ವರು ಗಂಡು ಮಕ್ಕಳು ಹುಟ್ಟಿದ್ದರು. ಆದರೆ ಆ ನಾಲ್ಕು ಮಕ್ಕಳೂ ತೀರಾ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡು ತಾಯಿ ತಂದೆಗಳ ಒಡಲಲ್ಲಿ ಸಂಕಟದ ಕಿಚ್ಚು ಹಚ್ಚಿದ್ದವು. ಆನಂತರ ಹುಟ್ಟಿದ ಈ ಐದನೇಯ ಮಗುವಾದರೂ ಗಟ್ಟಿಮುಟ್ಟಾಗಿ ಕಲ್ಲಿನಂತೆ ಬಾಳಲಿ ಎಂಬ ಆಶಯದಿಂದ ಈ ಮಗುವಿಗೆ ಕಲ್ಲಪ್ಪ ಎಂದು ಹೆಸರಿಟ್ಟರು. ಕಲ್ಲಪ್ಪ ಹುಟ್ಟಿದ್ದು 1906 ಫೆಬ್ರವರಿ ಎರಡನೇ ದಿನದಂದು. ಕಲ್ಲಪ್ಪ ಬೆಳೆದು ದೊಡ್ಡವನಾಗುತ್ತಿದ್ದಂತೆ ಸದಲಗಾ ಗ್ರಾಮದಲ್ಲಿಯೇ ಪ್ರಾಥಮಿಕ ಶಾಲೆಗೆ ಸೇರಿದರು. ಶಾಲೆಗೆ ಸೇರಿಸುವಾಗ ಇವರ ಹೆಸರನ್ನು ‘ಆದಿನಾಥ’ ಎಂದು ಬರೆಸಲಾಯಿತು. ಇದು ಜೈನರ ಇಪ್ಪತ್ನಾಲ್ಕನೇ ತೀರ್ಥಂಕರನ ಹೆಸರು. ಹೀಗೆ ‘ಕಲ್ಲಪ್ಪ’ ಎಂದಿದ್ದು ಮಗು ಆದಿನಾಥ ನೇಮಿನಾಥ ಉಪಾಧ್ಯೆ ಆದ. ತಂದೆ ನೇಮಿನಾಥ ಉಪಾಧ್ಯೆಯವರು ಬೇಗನೇ ತೀರಿಕೊಂಡರು. ಮಗುವನ್ನು ಲಾಲಿಸಿ ಪೋಷಿಸುವ ಹೊಣೆ ತಾಯಿ ಚಂದ್ರಾಬಾಯಿ ಹಾಗೂ ಅಜ್ಜನ ಮೇಲೆ ಬಿದ್ದಿತು. ಸ್ವಲ್ಪ ಜಮೀನು ಸಹ ಇದ್ದು ಒಕ್ಕಲುತನವನ್ನು ಇವರು ನಡೆಸುತ್ತಿದ್ದರು. ಸದಲಗಾ ಮತ್ತು ಶಮನೇವಾಡಿಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಬಾಲಕನ ಪ್ರಾಥಮಿಕ ಶಿಕ್ಷಣ ನಡೆಯಿತು. ನಂತರ ಪ್ರೌಢಶಾಲೆಗೆ ಸೇರಲೆಂದು ಬೆಳಗಾವಿಗೆ ಹೋಗಬೇಕಾಯಿತು. ಅಲ್ಲಿತ ಮಾಣಿಕಭಾಗ ಎಂಬಲ್ಲಿ ಜೈನ್ ಬೋರ್ಡಿಂಗ್ ಇತ್ತು. ಇದೊಂದು ಉಚಿತ ವಿದ್ಯಾರ್ಥಿ ನಿಲಯ. ಆದಿನಾಥ ಇಲ್ಲಿದ್ದುಕೊಂಡು ಸಮೀಪದಲ್ಲಿಯೇ ಇದ್ದ ‘ಕೋಟೆ ಜಿ.ಶಿ. ಸ್ಕೂಲ್’ ಎಂದು ಕರೆಯಲ್ಪಡುತ್ತಿದ್ದ ‘ಗಿಲಗಿಂಜಿ ಅರಟಾಳ ಸ್ಕೂಲ್‍ಗೆ ಸೇರಿದನು. ಹೈಸ್ಕೂಲಿನಲ್ಲಿ ವಿದ್ಯಾರ್ಥಿವೇತನವೂ ಸಿಕ್ಕಿತು. ಮಾಣಿಕಭಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಪ್ರತಿದಿನವೂ ಧಾರ್ಮಿಕ ಶಿಕ್ಷಣವನ್ನು ಕ್ಲುಪ್ತಕಾಲದಲ್ಲಿ ನೀಡಲಾಗುತ್ತಿತ್ತು. ಪ್ರಖ್ಯಾತ ಜೈನ ವಿದ್ವಾಂಸರೂ ಮೈಸೂರು ಅರಮನೆಯ ಆಸ್ಥಾನ ಪಂಡಿತರೂ ಆದ ಪಂಡಿತ್ ಎ.ಶಾಂತಿರಾಜ ಶಾಸ್ತ್ರೀ ಅವರು ವರ್ಷಕ್ಕೊಂದು ಬಾರಿ ಈ ವಿದ್ಯಾರ್ಥಿ ನಿಲಯಕ್ಕೆ ಭೇಟಿಕೊಟ್ಟು ಕೆಲವು ದಿನಗಳ ಕಾಲ ತಂಗಿದ್ದು ವಿದ್ಯಾರ್ಥಿಗಳಿಗೂ ಅಲ್ಲಿಗೆ ಬರುತ್ತಿದ್ದ ಶ್ರಾವಕರಿಗೂ ಜೈನಧರ್ಮ, ಶಾಸ್ತ್ರ, ಸಾಹಿತ್ಯಗಳ ಬಗ್ಗೆ ಅಭಿರುಚಿ ಕೆರಳಿಸಿದ ಮೊಟ್ಟಮೊದಲ ಸಂಗತಿ. ಕೈಗೆ ಸಿಕ್ಕ ಪುಸ್ತಕಗಳನ್ನು ಲಕ್ಷ್ಯಗೊಟ್ಟು ತಿರುವಿ ಹಾಕುವ, ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳುವ ಆಸಕ್ತಿ ಸಾಮರ್ಥ್ಯ ಬೆಳೆದಿದ್ದು ಈ ಅವಧಿಯಲ್ಲಿಯೇ. ಅಧ್ಯಯನದ ಕಡೆ ಆಧಿನಾಥ ಒಲವನ್ನು ತಿರುಗಿಸಿದ ಇನ್ನೊಂದು ಅಂಶವೆಂದರೆ ಸದಲಗಾದ ಅವರ ಮನೆಯಲ್ಲಿದ್ದ ಗ್ರಂಥಭಂಡಾರ. ಈ ಗ್ರಂಥ ಭಂಢಾರದಲ್ಲಿ ಪ್ರಾಕೃತ, ಅಪ್ರಭಂಶ ಕಾವ್ಯಗಳು, ಶಬ್ಧಮಣಿ ದರ್ಪಣ, ಹಳಗನ್ನಡ ಗ್ರಂಥಗಳು, ತೆಲುಗು- ಕನ್ನಡ ದೇವನಾಗರಿ ಲಿಪಿಯಲ್ಲಿನ ಗ್ರಂಥಗಳನ್ನು ರಜೆಗೆ ಮನೆಗೆ ಬಂದಾಗಲೆಲ್ಲಾ ಓದುವ ಅಭ್ಯಾಸ ಬೆಳೆಯಿತು. ಸಣ್ಣ ಈ ಹುಡುಗ ಈ ಗ್ರಂಥಗಳನ್ನು ಒರಟೊರಟಾಗಿ ಎಳೆದು ಹಾಳು ಮಾಡಿ ಬಿಟ್ಟಾನು ಎಂಬ ಸಹಜ ಭಯದಿಂದ ಅಜ್ಜ ಈ ಹುಡುಗನನ್ನು ಪುಸ್ತಕದ ಬೀರುವಿನಲ್ಲಿ ಕೈ ಹಾದಂತೆ ಬೆದರಿಸುತ್ತಿದ್ದರು. ಆದರೆ ಹುಡುಗನಿಗೆ ಆ ಗ್ರಂಥಲೋಕದಲ್ಲಿ ವಿಹರಿಸುವ ಬಯಕೆ; ಹೀಗಾಗಿ ಅಜ್ಜನ ಕಣ್ಣು ತಪ್ಪಿಸಿ ಅಲ್ಲಿಂದ ಪುಸ್ತಕಗಳನ್ನೆತ್ತಿಕೊಂಡು ಓದುತ್ತಿದ್ದ.

ವಿದ್ಯಾಭಾಸದಲ್ಲಿ ಪ್ರಗತಿ[ಬದಲಾಯಿಸಿ]

ಆದಿನಾಥ 1923ರಲ್ಲಿ ಮೆಟ್ರಿಕ್ಯೂಲೇಷನ್ ಮುಗಿಸಿದನು. ಕಾಲೇಜು ಶಿಕ್ಷಣ ಪಡೆಯುವ ಆಸೆ, ಆದರೆ ಬಡತನ, ಇಂಥ ವೇಳೆಯಲ್ಲಿ ನೆರವಿಗೆ ಬಂದವರು ಅಂದು ಕೊಲ್ಲಾಫುರದ ದಿವಾನರಾಗಿದ್ದ ಅಣ್ಣಾಸಾಹೇಬ್ ಲಠ್ಠೆ ಅವರು. ಅವರು ಸಂಪನ್ನ ವ್ಯಕ್ತಿ. ಸಂಸ್ಥಾನಾಧೀಶರೊಡನೆಯೂ ಜೈನ ಸಮಾಜದಲ್ಲೂ, ಸಾರ್ವಜನಿಕರಿಂದಲೂ ಒಳ್ಳೆಯ ಸಂಬಂಧ, ಸದಾಭಿಪ್ರಾಯಗಳನ್ನು ಸಂಪಾದಿಸಿಕೊಂಡಿದ್ದ ವ್ಯಕ್ತಿ. ಇವರ ನೆರವಿನಿಂದ ಕೊಲ್ಲಾಪುರದ ರಾಜಾರಾಮ್ ಕಾಲೇಜು ಸೇರಿದರು. ಸ್ವಲ್ಪ ಕಾಲದ ನಂತರ ಅದನ್ನು ತೊರೆದು ಅದಕ್ಕಿಂತಲೂ ಚಿಕ್ಕ ಊರಾದ ಸಾಂಗ್ಲಿಯಲ್ಲಿದ್ದ, ರಾಜಾರಾಮ ಕಾಲೇಜಿಗಿಂತಲೂ ಹೆಚ್ಚು ಹೆರುವಾಸಿಯಾಗಿದ್ದ ವಿಲಿಂಗ್ಡನ್ ಕಾಲೇಜನ್ನು ಸೇರಿದರು. ಸಂಸ್ಕøತ ಮತ್ತು ಅರ್ಧ ಮಾಗಧಿ ವಿಷಯಗಳನ್ನು ಪ್ರಧಾನ ವಿಷಯಗಳನ್ನಾಗಿ ಆರಿಸಿಕೊಂಡು ಬಿ.ಎ ಪದವಿಯನ್ನು 1928ರಲ್ಲಿ ಪಡೆದರು. ಅಲ್ಲಿಂದ ಮುಂದೆ ಉಪಾಧ್ಯೆ ಪುಣೆಯ ಭಂಢಾರಕರ್ ಓರಿಯೆಂಟಲ್ ರಿಸರ್ಚ ಇನ್ಸಿಟಿಟ್ಯೂಟ್ ಸೇರಿದರು. ಅಂತರಾಷ್ಟ್ರೀಯ ಖ್ಯಾತಿಯ ಪ್ರಾಚ್ಯ ವಿದ್ಯಾ ವಿದ್ವಾಂಸರೂ ಸದಾಕಾಲಕ್ಕೂ ಪ್ರಾತಃಸ್ಮರಣೀಯರೂ ಆದ ಡಾ.ಪಿ.ಎಲ್,ವೈದ್ಯ, ವಿ.ಎಸ್. ಸುಕ್ತಂಕರ, ಪ್ರೊ,ಎಸ್.ಕೆ ಬಿಳವಲಕರ್ ಅವರ ಪರಿಚಯ, ಮಾರ್ಗದರ್ಶನ, ವಾತ್ಸಲ್ಯ ಇವರಿಗೆ ಲಭ್ಯವಾಯಿತು. ಆ ಮಹನೀಯರು ಇವರ ವಿದ್ವತ್ ಜೀವದ ರೂವಾರಿಗಳಾದರು. ಸಂಶೋಧನೆ, ಗ್ರಂಥ ಸಂಪಾದನೆಯ ಮರ್ಮಗಳನ್ನೆಲ್ಲ ಇವರಿಗೆ ತಿಳಿಸಿಕೊಟ್ಟರು. ಇವರ ಸಾಹಚರ್ಯದಲ್ಲಿ ಉಪಾಧ್ಯೆ 1930ರಲ್ಲಿ ಮುಂಬೈ ವಿಶ್ವವಿದಾಲಯದ ಎಂ.ಎ ಪದವಿ ಪಡೆದರು.

ಅಧ್ಯಾಪಕ ವೃತ್ತಿ[ಬದಲಾಯಿಸಿ]

ಎಂ.ಎ ಮುಗಿಯುತ್ತಿದ್ದಂತೆ ಕೊಲ್ಲಾಪುರದ ರಾಜಾರಮ ಕಾಲೇಜಿನಲ್ಲಿ ಅರ್ಧಮಾಗಧಿ ಅಧ್ಯಾಪಕರಾಗಿ ನೇಮಕಗೊಂಡ ಉಪಾಧ್ಯೆ ತಮ್ಮ ವಿದ್ವತ್ತು ಹಾಗೂ ಭೋಧನಾ ಸಾಮರ್ಥ್ಯದಿಂದಾಗಿ 1993ರಲ್ಲಿ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ಮುಂದೆ ತಮ್ಮ ಮೂವತ್ಮೂರು ವರ್ಷಗಳ ದೀರ್ಘಕಾಲದ ಅಧ್ಯಾಪಕ ವೃತ್ತಿಯನ್ನು ರಾಜಾರಾಂ ಕಾಲೇಜಿನಲ್ಲಿಯೇ ನಡೆಸಿದರು.1938 ರಲ್ಲಿ ಅಂದರೆ ತಮ್ಮ 33ನೇ ವಯಸ್ಸಿನಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದರು. ಮುಂಬೈ ವಿಶ್ವವಿದ್ಯಾಲಯವು ಸಂಶೋಧಕರಿಗೆ ಪ್ರಖ್ಯಾತ ಸ್ಟ್ರಿಂಜರ್ ರಿಸರ್ಚ ಸ್ಕಾಲರ್ ಶಿಪ್, ಡಾ.ಉಪಾಧ್ಯೆಯವರಿಗೆ ಅದೇ ವರ್ಷ ದೊರಕಿತು. 1939ರಿಂದ 1942ರವರೆಗೆ ಮೂರು ವರ್ಷಗಳ ಕಾಲ ಈ ಯೋಜನೆಯಡಿಯಲ್ಲಿ ಸಂಶೋಧನೆ ನಡೆಸಿದರು. ಇದೇ ಅವಧಿಯಲ್ಲಿ ಹೈದರಾಬಾದಿನಲ್ಲಿ ನಡೆದ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಪ್ರಾಕೃತ, ಪಾಲಿ, ಬೌದ್ಧದರ್ಮ ಮತ್ತು ಜೈನಧರ್ಮಕ್ಕೆ ಸಂಬಂಧಿಸಿದ ವಿಭಾಗದ ಅಧ್ಯಕ್ಷತೆಯ ಗೌರವ ಅವರಿಗೆ ಪ್ರಾಪ್ತವಾಯಿತು. ತಮ್ಮ ತಾಯಿ ಎಂದರೆ ಉಪಾಧ್ಯೆ ಅವರಿಗೆ ಪಂಚಪ್ರಾಣ. ಇವರ ವಿದ್ವತ್ ಗ್ರಂಥಗಳು ಪ್ರಕಟವಾಗಿ ಖ್ಯಾತಿಲತೆ ಹಬ್ಬುತ್ತಿದಂತೆ ಜರ್ಮನಿಗೆ ಬರಬೇಕೆಂದು ಒಂದು ಆಮಂತ್ರಣ ಬಂದಿತು. ತಾಯಿ ಮಗನನ್ನು ಅಷ್ಟು ದೂರ ಕಳಿಸಲು ಒಪ್ಪಲಿಲ್ಲ. ಜರ್ಮನಿಗೆ ಹೋಗುವುದನ್ನು ಬಿಟ್ಟು ಬಿಟ್ಟರು. ಇಂಥ ಮತ್ತೊಂದು ಪ್ರಸಂಗವೂ ಮುಂದೆ ಬಂದಿತು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅರ್ಧಮಾಗಧಿ ವಿಭಾಗವನ್ನು ಅಭಿವೃದ್ಧಿಪಡಿಸಲೆಂದು ಕುಲಪತಿ ಡಾ.ಡಿ.ಸಿ ಪಾವಟೆಯವರು ಉಪಾಧ್ಯೆಯವರನ್ನು ಅಲ್ಲಿಗೆ ಕರೆ ತರುವ ಯೋಜನೆ ಹಾಕಿದರು(1956). ಮುಪ್ಪಿನ ತಾಯಿ ಬಿಡಲೊಲ್ಲೆನೆಂದಿದ್ದರಿಂದ ಉಪಾಧ್ಯೆ ಧಾರವಾಡಕ್ಕೂ ಬರಲು ಒಪ್ಪಲಿಲ್ಲ. ಕೊಲ್ಲಾಪುರವೇ ಅವರ ಜೀವಮಾನದ ಕರ್ಮಭೂಮಿಯಾಯಿತು. 1963ರಲ್ಲಿ ನಿವೃತ್ತರಾದ ಬಳಿಕ ಒಂಭತ್ತು ವರ್ಷ ಯು.ಜಿ.ಸಿ ಫೆಲೋಶಿಪ್‍ನ ಅಡಿಯಲ್ಲಿ ಸಂಶೋಧನ ಕಾರ್ಯ ಮುಂದುವರೆಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಜೈನಶಾಸ್ತ್ರ’ ಮತ್ತು ಪ್ರಾಕೃತ ಅಧ್ಯಯನ ವಿಭಾಗ 1971 ರಲ್ಲಿ ಆರಂಭವಾಯಿತು. ಅದರ ಮುಖ್ಯಸ್ಥರಾಗಿ ಬರಬೇಕೆಂಬ ಆಹ್ವಾನ ಸ್ವೀಕರಿಸಿ ಅಲ್ಲಿಗೆ ಬಂದ ಡಾ.ಉಪಾಧ್ಯೆ ಆ ವಿಭಾಗವನ್ನು ಕಟ್ಟಿ ಬೆಳೆಸಿದರು. ಮೈಸೂರು ಬೆಂಗಳೂರುಗಳಲ್ಲಿನ ಸಾಹಿತ್ಯ ಸಂಶೋಧಕರಿಗೆ ಉಪಾಧ್ಯೆ ಸ್ಪೂರ್ತಿ ಆದರು. ತರುಣ ಸಂಶೋಧಕರನ್ನು ಪ್ರೇರೆಪಿಸಿದರು. ಮೈಸೂರಿನಿಂದ ನಿವೃತ್ತಿ ಪಡೆದು ಹೊರಡುವ ಮುನ್ನ ಅವರಿಗೆ ರಾಷ್ಟ್ರಕವಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಬೆಂಗಳೂರಲ್ಲೂ ಬೀಳ್ಕೊಡುಗೆ ಸಮಾರಂಭಗಳು ನಡೆದವು. ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿಂದ ಕೊಲ್ಲಾಪುರ ತಲುಪುತ್ತಿದ್ದಂತೆ ತೀವ್ರ ಹೃದಯಘಾತಕ್ಕೆ ಒಳಗಾದ ಈ ಆಚಾರ್ಯರನ್ನು ನೇರವಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಮುಂದೆ ಒಂದೆರಡೇ ದಿನಗಳಲ್ಲಿ ತಾ.8-10-1975ರಂದು ಈ ಸಾರಸ್ವತ ತಪಸ್ವಿ ಶಾಶ್ವತವಾಗಿ ಕಣ್ಮುಚ್ಚಿದರು. ಅವರ ಆಕಸ್ಮಿಕ ಅಗಲಿಕೆಯನ್ನು ಡಾ. ಹಂಪನಾ ಹೀಗೆ ವರ್ಣಿಸುತ್ತಾರೆ: ದೀಪದ ಕುಡಿ ಆರುವಂತೆ ತಟಕ್ಕನೆ ಕಣ್ಮರೆಯಾದರು. ಸಂಶೋಧನೆಯ ದೊಡ್ಡ ಹಡಗು ತನ್ನೆಲ್ಲ ಸರಕಿನೊಂದಿಗೆ ಮುಳುಗಿತು.

ಉಪಾಧ್ಯೆ ಬರಹಗಳು[ಬದಲಾಯಿಸಿ]

‘ಡಾ. ಆ.ನೇ. ಉಪಾಧ್ಯೆಯವರು ಬರಹವನ್ನು ಲಘುವಾಗಿ ತೆಗೆದುಕೊಳ್ಳಲಿಲ್ಲ. ಅವರು ಯಾವಾಗಲೂ ಲೇಖನಕೃಷಿ ಗಂಭೀರವಾದ ಶ್ರಮದ ವ್ಯವಸಾಯವೆಂದು ನಂಬಿದರು. ಏನೇ ವಿಷಯ ಆರಿಸಿಕೊಂಡರೂ, ತತ್ಸಂಬಂಧವಾದ ಲಭ್ಯ ಮಾಹಿತಿಗಳನ್ನು ಕೂಲಂಕಷವಾಗಿ ಜಾಲಾಡುತ್ತಿದ್ದರು. ಅದಷ್ಟೂ ಮೂಲ ಸಾಮಗ್ರಿ ಶೋಧನೆಗೆ ತೊಡಗುತ್ತಿದ್ದರು’. ಅವರ ಮಟ್ಟದ ವಿದ್ವತ್ತನ್ನು ಹೊಂದುವ ಆಕಾಂಕ್ಷೆಯನ್ನಾದರೂ ಯಾರಾದರೂ ಇಟ್ಟುಕೊಳ್ಳಬಹುದೇ ಎಂಬುದೂ ಸಹ ಸಂಶಯಾಸ್ಪದ... ಜೈನ ಅಧ್ಯಯನದ ಇತಿಹಾಸವು ಡಾ. ಉಪಾಧ್ಯೆ ಅವರ ಕೊಡುಗೆಯ ಉಲ್ಲೇಖವಿಲ್ಲದೆ ಖಂಡಿತಾ ಪೂರ್ಣವಾಗದು. ಡಾ.ಉಪಾಧ್ಯೆ ಅವರು ಪ್ರಮುಖವಾಗಿ ಗ್ರಂಥಸಂಪಾದನಾ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಅವರನ್ನು ‘ಗ್ರಂಥ ಸಂಪಾದನಾಚಾರ್ಯ’ ಎಂದೇ ಅವರಿಂದ ಪ್ರೇರಣೆ ಪಡೆದವರಲ್ಲೊಬ್ಬರಾದ ಡಾ. ಹಂಪನಾ ವರ್ಣಿಸಿದ್ದಾರೆ. ಅದಕ್ಕೆ ಹೊಂದಿಕೊಂಡತೆ ಸಾಹಿತ್ಯ, ಇತಿಹಾಸ, ಭಾಷಾ ಶಾಸ್ತ್ರ, ಶಬ್ದನಿಷ್ಪತ್ತಿ-ಇತ್ಯಾದಿ ಶಾಖೆಗಳಲ್ಲಿ ಪ್ರಾವೀಣ್ಯ ಪಡೆದಿದ್ದವರು. ಡಾ.ಉಪಾಧ್ಯೆ ತಮ್ಮ ಮೊದಲ ಸಂಶೋಧನ ಲೇಖನ ಬರೆದದ್ದು 1929ರಲ್ಲಿ samathabadra an outstanding personality ಎಂಬ ಲೇಖನ ಅದು. ಸಮಂತಭದ್ರರೆಂಬ ಪ್ರಸಿದ್ಧ ಜೈನಾಚಾರ್ಯರನ್ನು ಕುರಿತ ಲೇಖನ ಅದು. ಅವರು ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಿದ ಮೊದಲ ಗ್ರಂಥ ‘ಪಂಚಸುತ್ತಂ’ ಎಂಬುದು. ಅದು ಒಬ್ಬ ಅಜ್ಞಾತ ಕವಿಯಿಂದ ರಚಿತವಾಗಿದ್ದ ಪ್ರಾಕೃತ ಕೃತಿ. ಇದು ಜೈನ ಸಿದ್ಧಾಂತ ಗ್ರಂಥ. ಇದಕ್ಕೆ ಬರೆದ ವಿಸ್ತøತ ಪ್ರಸ್ತಾವನೆಯಲ್ಲಿ ಆ ಕೃತಿಯ ವಸ್ತು ಮತ್ತು ಪ್ರತಿಪಾದಿತ ಸಿದ್ಧಾಂತವನ್ನು ಹಲವು ಮಗ್ಗುಲುಗಳಿಂದ ಚರ್ಚಿಸಿದ್ದಾರೆ. ಇದನ್ನು ಇಷ್ಟೊಂದು ಪ್ರಬುದ್ಧವಾಗಿ ಸಂಪಾದಿಸಿ ಪ್ರಕಟಿಸಿದಾಗ ಅವರಿಗಿನ್ನೂ ಕೇವಲ 29 ವರ್ಷ(1935). ಆಗಿನ್ನೂ ಅವರಿಗೆ ಡಾಕ್ಟರೇಟ್ ಬಂದಿರಲಿಲ್ಲ. ಈ ತರುಣ ಸಂಪಾದಿಸಿದ ಈ ಮಹತ್ವದ ಗ್ರಂಥದ ಬಂಗ್ಗೆ ವಿದೇಶೀ ವಿದ್ವಾಂಸರಾದ-ಷೂಬ್ರಿಂಗ್, ಎಲ್.ಡಿ. ಬಾರ್ನೆಟ್, ವಿಂಟರ್‍ನಿಟ್ಸ್ ಮೊದಲಾದ ಖ್ಯಾತ ಪಂಡಿತರು ಮಕ್ತಕಂಠದ ಪ್ರಶಂಸೆ ಮಾಡಿದರು. ಅದರ ಮರುವರ್ಷ (1935) ಅವರು ಮತ್ತೊಂದು ಮಹಾಕೃತಿಯ ಸಂಪಾದನಾ ಕಾರ್ಯ ಮುಗಿಸಿ ಪ್ರಕಟಿಸಿದರು. ಅದು ಕುಂದಕುಂದಾಚಾರ್ಯರೆಂಬ ಮತ್ತೊಬ್ಬ ಪ್ರಸಿದ್ಧ ಜೈನಾಚಾರ್ಯರ ಪ್ರಾಕೃತ ಗ್ರಂಥ- ‘ಪ್ರವಚನ ಸಾರ’. ಈ ಗ್ರಂಥದ ಅಧ್ಯಯನ ಟಿಪ್ಪಣಿಯನ್ನು ಅವರು ತಮ್ಮ 21ನೆಯ ವಯಸ್ಸಿನಿಂದಲೇ ಆರಂಭಿಸಿದ್ದರು. ಈ ಗ್ರಂಥದ ಪೀಠಿಕೆಯಲ್ಲಿ ಗ್ರಂಥ ಸಂಪಾದನೆಗೆ ಬಳಸಿದ ಹಸ್ತಪ್ರತಿಗಳ ಸ್ವರೂಪ, ಕುಂದಕುಂದಾಚಾರ್ಯರ ಕಾಲ ಮತ್ತು ಜೀವನ, ಈ ಕೃತಿಯಲ್ಲಿ ನಿರೂಪಿತವಾಗಿರುವ ಜೈನತತ್ವ ವಿಚಾರ –ಇವೆಲ್ಲವನ್ನೂ ವಿವರವಾಗಿ ಚರ್ಚಿಸಿದ್ದಾರೆ. ಈ ಪುಸ್ತಕವನ್ನೂ ಇದಕ್ಕಿಂತ ಹಿಂದೆ ಪ್ರಕಟಿಸಿದ ತಮ್ಮ ಸಂಪಾದಿತ ಕೃತಿಗಳನ್ನೂ ಸಂಪ್ರಬಂಧಗಳನ್ನೂ ಒಟ್ಟಾಗಿ ಸೇರಿಸಿ ಮುಂಬೈ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದಾಗ ಆ ಕೃತಿಗಳು ಹೊರಸೂಸುವ ವಿದ್ವತ್ ಪ್ರತಿಭೆಯನ್ನೂ ಸಂಪಾದನಾ ಕಾರ್ಯದಲ್ಲಿನ ವಿಚಕ್ಷಣತೆಯನ್ನೂ ಜ್ಞಾನದ ನಿರ್ದುಷ್ಟತೆಯನ್ನೂ ಗಮನಿಸಿದ ಪರೀಕ್ಷಕರು ಬೆರಗಾದರು. ಸಂತೋಷದಿಂದ ಅವರಿಗೆ ಡಿ. ಲಿಟ್. ಪದವಿಗೆ ಶಿಫಾರಸ್ಸು ಮಾಡಿದರು. ಇವರ ಗುರುಗಳಾದ ಡಾ. ಪಿ.ಎಲ್. ವೈದ್ಯ ಹಾಗೂ ಡಾ. ಸುಕ್ತಂಕರ್ ಇವರುಗಳು ತುಂಬುಹೃದಯದಿಂದ ಇವರನ್ನು ಹೊಗಳಿ ‘ಗುರುವನ್ನು ಮೀರಿಸಿದ ಗುರುವಾಗಿದ್ದೀರಿ’ ಎಂದು ಮೆಚ್ಚಿದರು. ಅನಂತರ ಇವರಿಗೆ ಸ್ಟ್ರಿಂಜರ್ ಫೆಲೋಶಿಪ್ ದೊರತದ್ದು ಡಾ. ಸುಕ್ತಂಕರ್ ಅವರ ಶಿಫಾರಸ್ಸಿನಿಂದಲೇ. ತಮ್ಮ ಜೀವಿತಾವಧಿಯಲ್ಲಿ ಉಪಾಧ್ಯೆ ಮಾಡಿದ ವಿದ್ವತ್‍ಕಾರ್ಯ ಬೃಹತ್ ಮಹತ್ತುಗಳಲ್ಲಿ ಘನವಾದದ್ದು. ಅವರು ಬರೆದಿರುವ, ಸಂಪಾದಿಸಿರುವ ಗ್ರಂಥಗಳ ಸಂಖ್ಯೆ ಮೂವತ್ತು. ವಿದ್ವತ್ ಪ್ರಬಂಧಗಳ ಸಂಖ್ಯೆ ಸುಮಾರು ಇನ್ನೂರು. ಪುಸ್ತಕ ವಿಮರ್ಶೆಗಳು ಎಪ್ಪತ್ತೈದು.

ಡಾ. ಆ.ನೇ.ಉಪಾಧ್ಯೆಯವರು ಸಂಪಾದಿತ ಕೃತಿಗಳು[ಬದಲಾಯಿಸಿ]

ಅನ್ಯ ಸಮಾನಧರ್ಮ ವಿದ್ವಾಂಸರ ಜೊತೆ ಸೇರಿಯೂ ಅನೇಕ ಕೃತಿಗಳನ್ನು ಉಪಾಧ್ಯೆಯವರು ಸಂಪಾದಿಸಿಕೊಂಡಿದ್ದಾರೆ. ಪ್ರೊ. ಕೆ.ಜಿ.ಕುಂದಣಗಾರರೊಡನೆ ಸೇರಿ ಎರಡು ಕನ್ನಡ ಕಾವ್ಯಗಳನ್ನು ಸಂಪಾದಿಸಿದ್ದಾರೆ. ಇವುಗಳೆಂದರೆ – ಚಿನ್ಮಯ ಚಿಂತಾಮಣಿ (1930) ಹಾಗೂ ಜ್ಞಾನಭಾಸ್ಕರ ಚರಿತೆ (1931), ಅಧ್ಯಾಪನ ವೃತ್ತಿಗೆ ಸೇರಿದ ಆರಂಭದಲ್ಲಿಯೇ ಈ ಕೃತಿಗಳು ಪ್ರಕಟವಾಗಿರುವುದನ್ನೂ ಗಮನಿಸಬೇಕು. ಇವೆರಡೂ ನಡುಗನ್ನಡದ ಸಣ್ಣ ಕಾವ್ಯಗಳು. ಡಾ.ಉಪಾಧ್ಯೆಯವರು ಕನ್ನಡದಲ್ಲಿ ಇಪ್ಪತ್ತೊಂದು ಲೇಖನಗಳನ್ನೂ, ಮೂರು ಪುಸ್ತಕಗಳನ್ನೂ ಬರೆದಿದ್ದಾರೆ. ಈ ಮೂರು ಪುಸ್ತಕಗಳಲ್ಲಿ ಎರಡು ಮೇಲೆ ಉಲ್ಲೇಖಿಸಿರುವ ಸಂಪಾದಿತ ಕಾವ್ಯಗಳು. ಇನ್ನೊಂದು ಮೂರು ಉಪನ್ಯಾಸಗಳ ಸಂಗ್ರಹ. ಅದೊಂದೇ – ಉಪಾಧ್ಯೆಯವರು ಕನ್ನಡದಲ್ಲಿ ಬರೆದಿರುವ ಸ್ವತಂತ್ರ ಕೃತಿ. ಆ ಕೃತಿಯ ಹೆಸರು – ‘ಪಾಲಿ ಮತ್ತು ಪ್ರಾಕೃತ’. ಇದು ಇವರು 1966ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಆಶ್ರಯದಲ್ಲಿ ಇದೇ ವಿಚಾರದಲ್ಲಿ ನೀಡಿದ ಮೂರು ಉಪನ್ಯಾಸಗಳ ಸಂಕಲನ. ಇದರಲ್ಲಿನ ಮೊದಲನೆಯ ಉಪನ್ಯಾಸದಲ್ಲಿ ಅವರು ಬೌದ್ಧಧರ್ಮ ಹಾಗೂ ಪಾಳಿ ಭಾಷೆಗಳಿಗಿರುವ ಬಿಡಿಸಲಾಗದ ಬಾಂಧವ್ಯವನ್ನು ವಿವರಿಸಿದ್ದಾರೆ. ನಂತರದ ಉಪನ್ಯಾಸವು ಪಾಳಿ ಮತ್ತು ಪ್ರಾಕೃತಗಳ ಸಂಬಂಧವನ್ನೂ ಮೂರನೆಯದು ಪ್ರಾಕೃತಕ್ಕೂ ಕನ್ನಡಕ್ಕೂ ಇರುವ ಸಂಬಂಧವನ್ನೂ ವಿವರಿಸುತ್ತದೆ. ಕನ್ನಡನಾಡಿನಲ್ಲಿ ಹುಟ್ಟಿ, ಕನ್ನಡ, ಸಂಸ್ಕøತ, ಪ್ರಾಕೃತ- ಹೀಗೆ ವಿವಿಧ ಭಾಷೆಗಳಲ್ಲಿ ಕಾವ್ಯಗಳನ್ನು ಶಾಸ್ತ್ರಗ್ರಂಥಗಳನ್ನೂ ರಚಿಸಿದ ಪ್ರತಿಭಾವಂತ ಕವಿಗಳು, ಆಚಾರ್ಯರು ಆಗಿ ಹೋಗಿದ್ದಾರೆ. ಅವರನ್ನು, ಅವರ ಕೃತಿಗಳ ಮಹತ್ವವನ್ನು ಕುರಿತು ಉಪಾಧ್ಯೆಯವರು ಇಂಗ್ಲೀಷಿನಲ್ಲಿ, ಹಿಂದಿಯಲ್ಲಿ ಲೇಖನಗಳನ್ನು ಬರೆದಿದ್ದಾರೆ. ಇದರಿಂದಾಗಿ ಕನ್ನಡ ಸಾಹಿತ್ಯ ಹಾಗೂ ಇಲ್ಲಿನ ಮಹಾಪ್ರತಿಭೆಯ ಪೂರ್ವಸೂರಿಗಳ ಬಗೆಗೆ ತಿಳಿಯಲು ಸಾಧ್ಯವಾಯಿತು. ಡಾ.ಉಪಾಧ್ಯೆ ಕೆಲವು ಮಹತ್ವಪೂರ್ಣ ಗ್ರಂಥಗಳನ್ನೂ ಡಾ. ಹೀರಾಲಾಲ್ ಜೊತೆ ಸೇರಿ ಸಂಪಾದಿಸಿದ್ದಾರೆ. ಡಾ. ಹೀರಾಲಾಲ್ ಜೈನ್, ಉಪಾಧ್ಯೆಯವರಿಗಿಂತ ಹಿರಿಯರು. ಭಾರತದ ಈ ಕಾಲದ ಪ್ರಕಾಂಡ ಪಂಡಿತರಲ್ಲೊಬ್ಬರು. ಇಬ್ಬರೂ ಸಮಾನ ಆಸಕ್ತಿಯುಳ್ಳವರು ಹಾಗೂ ಇಬ್ಬರ ಕಾರ್ಯಕ್ಷೇತ್ರವೂ ಒಂದೇ. ಉಪಾಧ್ಯೆಯವರಿಗೆ ಬಹುಕಾಲ ಬೆಂಬಲ ನೀಡಿದವರು ಇವರು. ಈ ಇಬ್ಬರ ಅಪೂರ್ವ ವಿದ್ವಜ್ಜೋಡಿ ಜೈನಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಗ್ರಂಥಗಳನ್ನು ಸಂಪಾದಿಸಿತು. ಹೀಗೆ ಇವರಿಬ್ಬರೂ ಕೂಡಿ ಸಂಪಾದಿಸಿದ ಗ್ರಂಥಗಳ ಪೈಕಿ ಶಿಖರಪ್ರಾಯವಾದುದೆಂದರೆ ‘ಧವಲಾ’ ಗ್ರಂಥದ ಸಂಪಾದನೆ. ಜೈನಾಗಮಗಳ ಸಾರ ಸಂಗ್ರಹವನ್ನು ಒಳಗೊಂಡಿರುವ ಈ ಪ್ರಾಕೃತ ಮಹತ್ ಗ್ರಂಥದ ಏಕೈಕ ಹಸ್ತಪ್ರತಿ ಮೂಡಬಿದಿರೆಯಲ್ಲಿತ್ತು. ಬಹುಕಷ್ಟದಿಂದ ಈ ಪ್ರತಿಯ ಒಂದು ನಕಲನ್ನು ತಯಾರಿಸಿಕೊಳ್ಳಲಾಗಿತ್ತು. ಡಾ. ಉಪಾಧ್ಯೆ ಮತ್ತು ಡಾ. ಹೀರಾಲಾಲ್ ಜೈನ್ ಇಬ್ಬರೂ ಕೂಡಿ ವರ್ಷಗಟ್ಟಲೇ ಶ್ರಮದಿಂದ ಗ್ರಂಥಸಂಪಾದನೆಯ ಆಧುನಿಕ ಮತ್ತು ಶಾಸ್ತ್ರೀಯ ತತ್ವಗಳನ್ನೆಲ್ಲ ಅನ್ವಯಿಸಿ ಸಂಪಾದಿಸಿ ಭಾಷಾಂತರ ಸಮೇತ ಹದಿನಾರು ಸಂಪುಟಗಳಲ್ಲಿ ಭಾರತೀಯ ಜ್ಞಾನಪೀಠದ ಮೂಲಕ ಪ್ರಕಟಿಸಿದರು. ಪ್ರತಿ ಸಂಪುಟವೂ ಐನೂರು ಪುಟಗಳ ಪ್ರಮಾಣದ್ದು. ಅಂದರೆ –ಇಡೀ ‘ಧವಲಾ’ ಗ್ರಂಥ ಒಟ್ಟು ಎಂಟುಸಾವಿರ ಪಟ್ಟುಗಳಷ್ಟು ವಿಸ್ತಾರದ್ದು. ಇದೊಂದೇ ಕೆಲಸ ಮಾಡಿದ್ದರೂ ಅವರಿಗೆ ವಿಶ್ವವಿಖ್ಯಾತಿ ಖಾತ್ರಿಯಾದದ್ದಾಗಿತ್ತು. ಇದು ಹಿಮಾಲಯದುನ್ನತಿಗೆ ಸಾಟಿಯಾದ ಗ್ರಂಥ ಸಂಪಾದನಾ ಕಾರ್ಯ. ಜೈನ ಆಗಮತತ್ವವನ್ನು ಅಭ್ಯಾಸ ಮಾಡಬೇಕೆನ್ನುವ ಯಾರಿಗೇ ಆಗಲಿ, ಇದೊಂದು ಮೂಲಭೂತ ಅಧಿಕೃತ ಆಧಾರಗ್ರಂಥ. ನಲವತ್ತು ವರ್ಷಗಳ ದೀರ್ಘ ಸಾಹಚರ್ಯದ ಗೆಳೆಯರಾಗಿದ್ದ ಹೀರಾಲಾಲ್ ಜೈನ ಮತ್ತು ಉಪಾಧ್ಯೆಯವರು ಎಷ್ಟೋ ವೇಳೆ ವಿದ್ವತ್ ವಿಷಯವಾಗಿ ಭರ್ಜರಿ ಜಟಾಪಟಿ ನಡೆಸಿದ್ದುಂಟು. ಆದರೂ ಅವರ ಸ್ನೇಹ ಸ್ನಿಗ್ಧತೆ ಹಾಗೆಯೇ ಉಳಿದಿತ್ತು. ವಿದ್ವಾಂಸರ ನಡುವೆ ಇರಬೇಕಾದ ಬಾಂಧವ್ಯಕ್ಕೆ ಈ ಇಬ್ಬರ ಸ್ನೇಹ ಒಂದು ಅತ್ಯುತ್ತಮ ಉದಾಹರಣೆಯಾಗಿತ್ತು. ಇವರಿಬ್ಬರೂ ಕೂಡಿ ಸಂಪಾದಿಸಿದ ಇತರ ಕೆಲವು ಗ್ರಂಥಗಳೆಂದರೆ- ಆತ್ಮಾನುಶಾಸನ (ಸಂಸ್ಕøತ ಗ್ರಂಥ) ‘ಪಂಚವಿಂಶತಿ', ಆತ್ಮಾನುಶಾಸನ, (ಸಂಸ್ಕøತ) ತಿಲೋಯ ಪಣ್ಣತ್ತಿ, ಭಾಗ 1 ಮತ್ತು 2 (ಪ್ರಾಕೃತ, ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಇದರ ಪ್ರಸ್ತಾವನೆ ಇದೆ) ಬೃಹತ್ ಕಥಾಕೋಶ (ಸಂಸ್ಕøತದ ಸುಪ್ರಸಿದ್ಧ ಕಥಾಕೋಶ) ಇತ್ಯಾದಿ.

ಡಾ.ಅ.ನೇ.ಉಪಾಧ್ಯೆಯವರ ಸ್ವತಂತ್ರ ಕೃತಿಗಳು[ಬದಲಾಯಿಸಿ]

ಡಾ.ಉಪಾಧ್ಯೆಯವರು ಸ್ವತಂತ್ರವಾಗಿ ಸಂಪಾದಿಸಿರುವ ಕೆಲವು ಮಹತ್ವಪೂರ್ಣ ಕೃತಿಗಳೆಂದರೆ- ಆನಂದ ಸುಂದರಿ ( ಪ್ರಾಕೃತ-ನಾಟಕ), ಉಷಾಣಿರುದ್ಧ (ಪ್ರಾಕೃತ ಕಾವ್ಯ) ಕಾರ್ತಿಕೇಯಾನು ಪ್ರೇಕ್ಷ್ಯಾ-ಪ್ರಾಕೃತ,- ಜೈನ ಸಿದ್ಧಾಂತ ಗ್ರಂಥ) ಕುವಲಯ ಮಾಲಾಕಹಾ (ಕುವಲಯಾಲಾ ಕಥಾ-ಪ್ರಾಕೃತ-ಶೃಂಗಾರ ಪ್ರಧಾನ ಕಾವ್ಯ-ಎಂಟನೇ ಶತಮಾನದ್ದು) ಕಥಾ ಕೋಶ( ಸಂಸ್ಕøತ-ಗದ್ಯಕೃತಿ) ಜಂಬೂದೀವ ಪಣ್ಣತ್ತಿ ಸಂಗ್ರಹ (ಪ್ರಾಕೃತ ಶಾಸ್ತ್ರ ಗ್ರಂಥ-ಹತ್ತನೇ ಶತಮಾನದ್ದು) ಧೂರ್ತಾಖ್ಯಾನ- ಎ ಕ್ರಿಟಿಕಲ್ ಸ್ಟಡಿ- ವಿಶಿಷ್ಟವಾದೊಂದು ವಿಡಂಬನ ಕಥಾಕೋಶ-ಅಸಂಬದ್ಧವಾದ ಕತೆಗಳ ಸಂಗ್ರಹ-ಸಂಸ್ಕøತದ್ದು), ಚಂದ್ರಲೇಖಾ(ಪ್ರಾಕೃತ ನಾಟಕ-ಸಟ್ಟಕ ಎಂಬ ಪ್ರಕಾರಕ್ಕೆ ಸೇರಿದ್ದು), ಪ್ರವಚನ ಸಾರ( ಆಚಾರ್ಯ ಕುಂದಕುಂದರ ಮಹತ್ಕøತಿಗಳಲ್ಲೊಂದು. ಪ್ರಾಕೃತ ಗ್ರಂಥ-ಜೈನಾಗಮಕ್ಕೆ ಸಂಬಂಧಿಸಿದ್ದು. ಅನ್ಯ ಟೀಕಾಕಾರರು ಸಂಸ್ಕøತ, ಹಿಂದಿಗಳಲ್ಲಿ ಬರೆದಿರುವ ಟೀಕೆಗಳನ್ನೂ ಅಳವಡಿಸಲಾಗಿದೆ. ಇಂಗ್ಲೀಷ್‍ನಲ್ಲಿ ವಿಸ್ತøತ ವಿಮರ್ಶೆ ಬರೆದಿದೆ. ಕನ್ನಡದ ಭರತೇಶ ವೈಭವದ ಮೇಲೆ ಈ ಕೃತಿಯ ಪ್ರಭಾವವಿದೆ). ಪುಣ್ಯಾಸ್ರವ ಕಥಾಕೋಶ (ಸಂಸ್ಕøತ). ಈ ಗ್ರಂಥಗಳಲ್ಲಿ ಪ್ರತಿಯೊಂದಕ್ಕೂ ವಿವರವಾದ ಉಪೋದ್ಘಾತವನ್ನು ಬರೆದು ಅದರಲ್ಲಿ ಹಸ್ತಪ್ರತಿಯ ವಿವರಗಳು, ಕವಿಯ ಕಾಲ, ದೇಶ ಜೀವನ ವಿವರಗಳು, ಪಡೆದ ಮತ್ತು ಬೀರಿದ ಪ್ರಭಾವಗಳು ಮತ್ತು ವಿಷಯ ವಿವೇಚನೆ, ಅಲ್ಲಿ ಉಲ್ಲಿಖಿತವಾಗಿರುವ ಗಾದೆಗಳು ಅನ್ಯಗ್ರಂಥದ ಪದ್ಯಗಳು ಇತ್ಯಾದಿಗಳಿಗೆ ಮೂಲ ಯಾವುದು ಎಂಬುದರ ವಿವರ- ಇಂಥ ಎಲ್ಲ ಮಾಹಿತಿಗಳ ಶೋಧಪೂರ್ಣ ವಿವರವಿದೆ. ಕೆಲವು ಉಪೋದ್ಘಾತಗಳಂತೂ ಒಂದೊಂದು ಪಿಎಚ್.ಡಿ. ನಿಬಂಧದಷ್ಟು ಬೆಲೆಯುಳ್ಳವು. ಮೇಲೆ ಉಲ್ಲೇಖಿಸಿದ ಗ್ರಂಥಗಳಲ್ಲದೆ ಇಂಗ್ಲೀಷಿನಲ್ಲಿ ಬರೆದಿರುವ ಎರಡು ಕೃತಿಗಳು ಪ್ರಸಿದ್ಧವಾಗಿದೆ. ‘ಪ್ರಾಕೃತ ಲಾಂಗ್ವೇಜಸ್ ಅಂಡ್ ಲಿಟರೇಚರ್’ ಎಂಬುದು ನಾಲ್ಕು ಉಪನ್ಯಾಸಗಳ ಸಂಗ್ರಹ. ಪುಣೆ, ವಿಶ್ವವಿದ್ಯಾಲಯದಿಂದ ಪ್ರಕಟವಾದದ್ದು (1971). ಇನ್ನೊಂದು ಗೋವಿಂದ ಪೈ-ಮ್ಯಾನ್ ಆಫ್ ಲಿಟರ್ಸ್ ಎಂಬುದು (1976). ಕನ್ನಡದಲ್ಲಿ ಅವರು – ವರಾಂಗಚರಿತೆ, ವಡ್ಡಾರಾಧನೆ, ಆದಿಪುರಾಣ, ಧರ್ಮಪರೀಕ್ಷೆ, ಜೀವಸಂಬೋಧನೆ – ಈ ಕಾವ್ಯಗಳನ್ನು ಕುರಿತು, ಪ್ರಾಕೃತ ಭಾಷೆ, ಕವಿ ರನ್ನ ಇತ್ಯಾದಿಗಳನ್ನು ಕುರಿತು ಲೇಖನಗಳನ್ನು ಬರೆದಿದ್ದಾರೆ. ಅವರು ಕನ್ನಡದಲ್ಲಿ ಬರೆದಿರುವುದಕ್ಕಿಂತ ಕನ್ನಡದಲ್ಲಿರುವುದನ್ನು ಕುರಿತು ಇಂಗ್ಲೀಷಿನಲ್ಲಿ ಬರೆದಿರುವುದೇ ಬಹಳ. ಗ್ರಂಥ ಸಂಪಾದನೆಯಲ್ಲಿ ಉಪಾಧ್ಯೆ ಹೊಸದಾದ ಪರಿಪುಷ್ಪವಾದ ಹೊಸ ರಾಜಮಾರ್ಗವೊಂದನ್ನು ನಿರ್ಮಿಸಿಕೊಟ್ಟರು. ಆ ರೀತಿ ಹೊಸ ಪಂಥವನ್ನು ನಿರ್ಮಿಸಿದ್ದೇ ಒಂದು ಸೃಜನಶೀಲ ಕಾರ್ಯ. ಅವರು ಹಾಕಿಕೊಟ್ಟ ಪದ್ಧತಿಯನ್ನು ‘ಉಪಾಧ್ಯೆ ಪಂಥ’ (Upadhya school of critical methodology in editing classical texts) ಎಂದು ಈ ಕ್ಷೇತ್ರದ ಸರ್ವೋತ್ತಮ ಆಚಾರ್ಯರುಗಳು ಪ್ರಶಂಶಿಸಿದ್ದಾರೆ. ಉಪಾಧ್ಯೆಯವರ ಅದ್ಭುತ ವಿದ್ವತ್ತಿಗೆ, ಬರವಣಿಗೆಯಲ್ಲಿನ ನಿಖರತೆಗೆ ಮೆಚ್ಚಿದವರ ಪಟ್ಟಿ ಬಹು ದೊಡ್ಡದು. ಇವೆಲ್ಲ ದಾಖಲೆಯಲ್ಲಿರುವ ಅಂಶಗಳು. ಜರ್ಮನಿಯ ವಿದ್ವಾಂಸರಾದ ಡಾ. ಡಬ್ಲ್ಯೂ, ಷುಬ್ರಿಂಗ್, ಡಾ. ಎಂ. ವಿಂಟರನಿಟ್ಜ್, ಟಾ. ಎ.ಬಿ. ಕೀತ್ ಡಾ. ಲುಡ್ವಿಗ್ ಆಲ್ಸಡಾರ್ಫ್, ಇಟಲಿಯ ಡಾ. ಎಲ್. ನೌಲಿ- ಇಂಥ ವಿದೇಶೀ ಸೂರಿಗಳಲ್ಲದೆ, ಭಾರತದ ಶ್ರೇಷ್ಠ ಪಂಡಿತರುಗಳಾದ - ಪಂಡಿತ ನಾಥರಾಮ ಪ್ರೇಮಿ, ರಾ. ನರಸಿಂಹಾಚಾರ್, ಆರ್. ಶಾಮಾಶಾಸ್ತ್ರಿ, ಪ್ರೊ. ಸುನೀತಿ ಕುಮಾರ ಚಟರ್ಜಿ (ಇವರು 26 ಭಾಷೆಗಳನ್ನು ಬಲ್ಲವರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು) ಹೆಚ್. ಡಿ. ವೇಲಣಕರ್, ಎಂ. ಗೋ ವಿಂದ ಪೈ, ಪ್ರೊ. ಎಂ. ಹಿರಿಯಣ್ಣ, ಎಸ್.ಎಂ. ಕತ್ರೆ, ಸಿ.ಡಿ. ದೇಶಮುಖ್ –ಇಂಥ ಇನ್ನೂ ನೂರಾರು ಮಹಾನುಭಾವರಿಂದ ನಿರ್ಮತ್ಸರ ಪ್ರಶಂಸೆ ಪಡೆದ ಯಶೋಜೀವಿ ಡಾ. ಆ.ನೇ. ಉಪಾಧ್ಯೆ ಅವರು. ಈ ಮಹಾವಿದ್ವಾಂಸನ ಆಕಸ್ಮಿಕ ನಿಧನ ವಿಶ್ವದೆಲ್ಲೆಡೆಯ ಪ್ರಾಚ್ಯ ವಿದ್ಯಾ ವಿದ್ವಾಂಸರನ್ನು ಶೋಕತಪ್ತರನ್ನಾಗಿಸಿತು. ‘ಭಾರತೀಯ ಜ್ಞಾನಪೀಠ’ ಎಲ್ಲೆಡೆಯ ತನ್ನ ಕಛೇರಿಗಳನ್ನು ಆ ದಿನ ಮುಚ್ಚಿ ತನ್ನ ಗೌರವ ಸಲ್ಲಿಸಿತು. ಇವರು ಸತ್ತ ದಿನವೇ (9-10-1975) ಬೆಂಗಳೂರು ಆಕಾಶವಾಣಿ ಇವರ ಸಂದರ್ಶನವನ್ನು ಪ್ರಸಾರಮಾಡಿತು. ಇವರ ಬಗ್ಗೆ ಅನೇಕ ಶ್ರದ್ಧಾಂಜಲಿ ಲೇಖನಗಳು, ಕವಿತೆಗಳು ಪ್ರಕಟವಾದವು. ಡಾ. ಆ.ನೇ.ಉಪಾಧ್ಯೆ ಎಂಬುದು ಸಂಶೋಧನೆಗೆ ಇನ್ನೊಂದು ಹೆಸರು. ಅವರಂಥ ಸಂಶೋಧಕ ವಿದ್ವಾಂಸರು ಯಾವ ಭಾಷೆಗಾದರೂ ದೊಡ್ಡ ಸಂಪತ್ತು, ಆಸ್ತಿ. ಆದರೆ ಅಂಥವರು ಶತಮಾನಕ್ಕೊಮ್ಮೆ ಬಂದರೂ ಸಂತೋಷವೇ. ಮಹಾಕವಿ ಯುಗಕ್ಕೊಮ್ಮೆ ಬರುತ್ತಾನಂತೆ : ಮಹಾ ಸಂಶೋಧಕರೂ ಅಷ್ಟೇ (ಹಂಪನಾ ಪೂರ್ವೋಕ್ತ ಗ್ರಂಥ, ಪು. 42) ಡಾ. ಉಪಾಧ್ಯೆಯವರ ಬದುಕು, ಕಾರ್ಯಗಳ ಶ್ರೇಷ್ಠತೆಯ ಬಗ್ಗೆ ಇದಕ್ಕಿಂತ ಉತ್ತಮ ಶ್ಲಾಘನೆ ಬಹುಶಃ ಅಸಾಧ್ಯ.