ಸದಸ್ಯ:Sumukha g hegde/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ನಲ್ಲೂರು ಬಸದಿಗಳು

ಸ್ಥಳ[ಬದಲಾಯಿಸಿ]

ಶ್ರೀ ಕ್ಷೇತ್ರ ನಲ್ಲೂರು ಪಶ್ಚಿಮ ಕರ್ನಾಟಕದಲ್ಲೇ ಬಹು ಪ್ರಸಿದ್ಧವಾದ ಒಂದು ಜೈನ ತೀರ್ಥ ಕ್ಷೇತ್ರ. ಜೈನ ಕಾಶಿ ಮೂಡಬಿದರಿಯಿಂದ ಈಶಾನ್ಯ ದಿಕ್ಕಿನಲ್ಲಿ ೧೫ ಕಿ.ಮೀ ಹಾಗೂ ಕಾರ್ಕಳ ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ಸುಮಾರು ೧೦ ಕಿ.ಮೀ ದೂರದಲ್ಲಿದೆ.

ಇತಿಹಾಸ[ಬದಲಾಯಿಸಿ]

ಇದಕ್ಕೆ ಬಹುದೀರ್ಘವಾದ ಸುಂದರ ಇತಿಹಾಸವಿದೆ. ಒಂದು ಉಜ್ವಲ ಪರಂಪರೆಯಿದೆ. ಅನೇಕಾನೇಕ ಆಧ್ಯಾತ್ಮಿಕ ಸಾಧಕರನ್ನು ತನ್ನಲ್ಲಿಗೆ ಆಕರ್ಷಿಸಿರುವಂತೆ ಬಹು ಪ್ರಾಚೀನ ಕಾಲದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಪೂಜ್ಯ ಭಟ್ಟಾರಕರನ್ನು ತನ್ನಲ್ಲಿಗೆ ಬರಮಾಡಿಕೊಂಡು ಅವರು ತಮ್ಮ ಒಂದು ಮಠವನ್ನೇ ಸ್ಥಾಪಿಸುವಂತೆ ಮಾಡಿದೆ. ಪ್ರಸ್ತುತ ಮೂಡಬಿದಿರೆಯ ಪೂಜ್ಯ ಶ್ರೀಗಳವರ ಮಾರ್ಗದರ್ಶನದಲ್ಲಿ ಊರು ಪರವೂರು ಶ್ರಾವಕರ ಪೂರ್ಣ ಸಹಕಾರದಿಂದ ಪೂರ್ಣ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಷ್ಟು ಪ್ರದಾಯಿನಿ ಮಹಾಮಾತೆ ಶ್ರೀ ಕೂಷ್ಮಾಂಡಿನೀ ದೇವಿಯ ದಿವ್ಯ ಸಾನಿಧ್ಯದಿಂದ ಇಲ್ಲಿ ಬಹು ಶೀಘ್ರವಾಗಿ ಮನದ ಅಭೀಷ್ಟಗಳು ಈಡೇರಿಸುತ್ತದೆ. ಇಲ್ಲಿ ವಿರಾಜಮಾನವಾಗಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯಿಂದಾಗಿ ಮನಸ್ಸು ಪುನೀತಗೊಂಡು ದೇವತಾ ಗುಣಗಳನ್ನು ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರುತ್ತದೆ. ವ್ಯಕ್ತಿತ್ವವು ಭವ್ಯವಾಗಿ ಬೆಳೆಯುತ್ತವೆ. ಈ ಕಾರಣದಿಂದಾಗಿಯೇ ನಲ್ಲೂರು ಕ್ಷೇತ್ರವು ಜನಾಕರ್ಷಕವಾಗಿ ಬೆಳೆಯುತ್ತಾ ಜನಮಾನಸದಲ್ಲಿ ಶ್ರದ್ಧೆಯ ಕೇಂದ್ರವಾಗಿದೆ.

ಶ್ರೀ ಪಾರ್ಶ್ವನಾಥ ಬಸದಿ[ಬದಲಾಯಿಸಿ]

ಅತಿಶಯ ಕ್ಷೇತ್ರ ನಲ್ಲೂರಿನಲ್ಲಿ ಶ್ರೀ ಪಾಶ್ವನಾಥ ಸ್ವಾಮಿ ಹಾಗೂ ಶ್ರೀ ಶಾಂತಿನಾಥ ಸ್ವಾಮಿ ಬಸದಿ ಪ್ರಮುಖವಾದವು.

ವಿಗ್ರಹ ವಿನ್ಯಾಸ[ಬದಲಾಯಿಸಿ]

ಶ್ರೀ ಪಾಶ್ವನಾಥ ಸ್ವಾಮಿ ಖಡ್ಗಾಸನ ಭಂಗಿಯಲ್ಲಿ ನಿಂತಿಕೊಂಡು ನಿರಾಬರಣರಾಗಿ ವಿರಾಜಮಾನರಾಗಿದ್ದಾರೆ. ಸಪ್ತ ಹೆಡೆಗಳ ಸರ್ಪ ಗೌರವಪೂರ್ವಕವಾಗಿ ಸ್ವಾಮಿಯನ್ನು ರಕ್ಷಿಸುವಂತೆ ಕಂಡು ಬರುತ್ತದೆ. ಪಾಶ್ವನಾಥ ಸ್ವಾಮಿಯ ಬಿಂಬವನ್ನು ನೆಲ್ಲಿಕಾರು ಶಿಲೆಯಿಂದ ನಿರ್ಮಿಸಲಾಗಿದೆ. ಇದು ಸುಮಾರು ೫ ಅಡಿ ಎತ್ತರವಿದೆ. ಶಿರದ ಸುತ್ತಲೂ ಮಕರ ತೋರಣದ ಅಲಂಕಾರವಿದೆ. ಸ್ವಾಮಿಯ ಎಡ ಬಲಗಳಲ್ಲಿ ಚಿತ್ರಿಕೆಯಿರುವ ಸ್ತಂಭಗಳ ಆಕೃತಿಯಿದೆ ಹಾಗೂ ಎಡಬದಿಗೆ ಪದ್ಮಾಸನ ದೇವಿಯ ಮೂರ್ತಿಯಿದೆ.

ಪೂಜಾ ವಿಧಾನ[ಬದಲಾಯಿಸಿ]

ಬಸದಿಯಲ್ಲಿ ಪ್ರತಿದಿನ ಬೆಳಿಗ್ಗೆ ಗಂಟೆ ೯ ರಿಂದ ಗೌರವಾರ್ಥ ಪೂಜೆ ಮಾಡುತ್ತಾರೆ. ಅಭಿಷೇಕವನ್ನು ಅಷ್ಟ ಮಂಗಳ ದ್ರವ್ಯಗಳಿಂದ ಮಾಡಲಾಗುತ್ತದೆ. ದೊಡ್ಡ ದೊಡ್ಡ ಪೂಜೆಗಳಲ್ಲಿ ಕಷಾಯಾಭಿಷೇಕ, ಛಾಯಾಭಿಷೇಕ ಹಾಗೂ ಗಂಧಾಭಿಷೇಕವನ್ನು ಮಾಡಲಾಗುತ್ತದೆ. ನಂತರ ೧೨ ಗಂಟೆಗೆ ಸರಿಯಾಗಿ ತೀರ್ಥಂಕರನ್ನು ಆಹ್ವಾನ ಮಾಡಿ ಪೂಜೆ ಮಾಡಲಾಗುತ್ತದೆ. ನಂತರ ಮೇಗಣನೆಲೆ ಶಾಂತಿನಾಥ ಸ್ವಾಮಿಗೆ ಪೂಜೆಯನ್ನು ಮಾಡಲಾಗುತ್ತದೆ. ಬಾಹುಬಲಿ ಸ್ವಾಮಿಗೆ ಪೂಜೆ, ಸರಸ್ವತಿ ದೇವಿಗೆ ಪೂಜೆ, ಅಥವಾ ಶ್ರುತ ಪೂಜೆ, ಗಣಧರರ ಪೂಜೆ, ಬ್ರಹ್ಮದೇವರ ಪೂಜೆ ಹಾಗೂ ಕ್ಷೇತ್ರದ ಸಮಸ್ತ ಪರಿವಾರ ದೇವರಿಗೆ ಪೂಜೆಯನ್ನು ಮಾಡಲಾಗುತ್ತದೆ. ಅನಂತರದ ಮಹಾಪೂಜೆಯಲ್ಲಿ ನೈವೇದ್ಯ ಸಮರ್ಪಣೆಯನ್ನು ಮಾಡಿ, ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಹಾಪೂಜೆಯಲ್ಲಿ ಪಂಚಾರತಿ ಹಾಗೂ ಕರ್ಪೂರಾರತಿ ಬೆಳಗಲಾಗುತ್ತದೆ. ಅನಂತರ ಶಾಂತಿ ಮಂತ್ರವನ್ನು ಪಠಿಸಿ, ದೇವರ ವಿಸರ್ಜನೆಯನ್ನು ಮಾಡಲಾಗುತ್ತದೆ.

ಮೇಗಿನ ನೆಲೆಯ ಶ್ರೀ ಶಾಂತಿನಾಥ ಬಸದಿ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ನಲ್ಲೂರಿನಲ್ಲಿ ಜೈನ ಆರಾಧನ ಕೇಂದ್ರಗಳ ಪೈಕಿ ಇಲ್ಲಿನ ಪಾರ್ಶ್ವನಾಥಸ್ವಾಮಿಯ ಮಂದಿರ ಅತ್ಯಂತ ಪ್ರಾಚೀನವಾದುದು. ಬಸದಿಯೂ ಶಾಸನೋಕ್ತ ಆರಾಧಗಳ ಅನುಸಾರವಾಗಿದೆ. ಕ್ರಿ.ಶ ೧೨೧೮ರಲ್ಲಿ ಕಳಸದಲ್ಲಿ ಆಳುತ್ತಿದ್ದ ರಾಣಿ ಕಾಳಲ ದೇವಿಯು ಅನತಿದೂರದ ಹಮನಿಬೆಟ್ಟು ಎಂಬಲ್ಲಿ ಲಭ್ಯವಾಗುವ ಒಂದು ಶಿಲಾಶಾಸನವನ್ನು ದುರ್ಮುಖಿ ಸಂವತ್ಸರದ ಶ್ರಾವಣ ಶುದ್ಧ ಪಾಡ್ಯದಂದು ನಲ್ಲೂರು ಪಾರ್ಶ್ವದೇವರ ಅಮೃತಪಡಿಗೆ ಸಂಪನ್ಮೂಲವನ್ನು ಒದಗಿಸಿದ್ದಳು. ಹಿಂದೆಯೇ ಈ ಬಸದಿಯು ನಿರ್ಮಾಣಗೊಂಡು ಶ್ರೀ ಪಾರ್ಶ್ವನಾಥ ಸ್ವಾಮಿಯ ಪ್ರತಿಷ್ಠಾಪನೆಯಾಗಿ ತನ್ನ ಧಾರ್ಮಿಕ ಅನುಷ್ಠಾನಗಳು ಮಹತ್ವದಿಂದಾಗಿ ಆ ರಾಜ್ಯವಂಶದ ಗಮನವನ್ನು ತನ್ನ ಕಡೆಗೆ ಸೆಳೆದುಕೊಂಡಿತು. ಈ ಶಾಂತಾರ ಅರಸರ ಉಲ್ಲೇಖಗಳ ಪ್ರಕಾರ ಕ್ರಿ.ಶ ೭೦೦ ರಿಂದಲೇ ಶಿಲಾಶಾಸನಗಳಿಂದ ದೊರಕಿದೆ. ಈ ವಿಗ್ರಹವು ಹೊಯ್ಸಳ ಉಗಮಕ್ಕಿಂತ ಮೊದಲು (ಕ್ರಿ. ಶ. ೧೦೦೦ ಕ್ಕಿಂತ ಮೊದಲು)ಕ್ಕೆ ಸೇರಿದುದು ಎನ್ನಬೇಕು. ದೇವಿಯ ಪೀಠದ ಕೆಳಗೆ ಚಿತ್ರಿತವಾಗಿರುವ ಕುಕ್ಕುಟ ಸರ್ಪವು ಹೊಯ್ಸಳರ ಕಾಲದಲ್ಲಿ ಅನುಸರಿಸುತ್ತಿದ್ದ ಸ್ಪಷ್ಟತೆಯನ್ನೂ, ಅಲಂಕಾರವನ್ನೂ ಹೊಂದಿಲ್ಲ. ಪೀಠದ ಅಂಕಣಗಳು ಹಾಗೂ ಅವುಗಳಲ್ಲಿ ಮೂಡಿರುವ ಚಿತ್ರಿಕೆಗಳು ಕಲ್ಯಾಣದ ಚಾಲುಕ್ಯರ ವಿನ್ಯಾಸವನ್ನು ಹೊಂದಿದೆ. ಆದುದರಿಂದ ಈ ಮೂರ್ತಿಯು ಸುಮಾರು ಕ್ರಿ.ಶ ೯೫೦ ನೇ ಇಸವಿಗೆ ಸಂಬಂಧಿಸಿದ್ದೆಂದು ಹೇಳಬಹುದು. ಅಲ್ಲದೇ ನಲ್ಲೂರಿನ ಈ ಜಿನಾಲಯಕ್ಕೆ ಕಾಳಲ ಮಹಾದೇವಿ (ಕ್ರಿ. ಶ ೧೨೭೦-೧೨೯೬) ಯು ಇಲ್ಲಿಯ ಶ್ರೀ ಪಾರ್ಶ್ವನಾಥ ಸ್ವಾಮಿಯ ಅಮೃತಪಡಿಗ ಸಂಪನ್ಮೂಲವನ್ನು ಒದಗಿಸಲುಕೊಟ್ಟದ್ದು ತೀರ ಸಹಜವಾಗಿಯೂ ಕಾಣುತ್ತದೆ. ಶಾಂತಾರ ಅರಸು ಮನೆತನದ ಇತಿಹಾಸದಿಂದ ತಿಳಿಯುವುದೆನೆಂದರೆ ಕಲ್ಯಾಣದ ಚಾಲುಕ್ಯರು ತಮ್ಮ ರಾಜ್ಯಕ್ಕೆ ಸೇರಿದ್ದ ಮಲೆನಾಡು ಪ್ರದೇಶಗಳ, ಮುಖ್ಯವಾಗಿ ಬನವಾಸಿ ಹಾಗೂ ನೊಳಂಬವಾಡಿಗಳ ಆಳ್ವಿಕೆಯ ಅಧಿಕಾರವನ್ನು ಶಾಂತಾರರಿಗೆ ನೀಡಿದ್ದರು. ಆದುದರಿಂದ ಈ ಬಿಂಬವನ್ನು ತಯಾರಿಸುವಾಗ ತಮ್ಮ ಮೇಲಾಧಿಕಾರಿಗಳಾದ ಚಾಲುಕ್ಯರ ಶಿಲ್ಪ ಶೈಲಿಯನ್ನು ಅನುಸರಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಆದರೂ ಕೊನೆಯಲ್ಲಿ ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ವಿಚಾರವೆಂದರೆ ತಮ್ಮಲ್ಲಿ ಬಹಳ ಹಿಂದಿನ ಕಾಲದಿಂದ ಅರ್ಚಿಸಲ್ಪಡುತ್ತಿದ್ದ ದೇವಿಯ ಈ ಚರಕಮೂರ್ತಿಯನ್ನು ಈ ನೆಲ್ಲೂರಿನ ಜಿನಾಲಯಕ್ಕೆ ನೀಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಿಗ್ರಹ ವಿನ್ಯಾಸ[ಬದಲಾಯಿಸಿ]

ಮೇಗಿನ ನೆಲೆಯ ಶಾಂತಿನಾಥ ಬಸದಿಯ ಸ್ವಾಮಿ ಖಡ್ಗಾಸನ ಭಂಗಿಯಲ್ಲಿ ನಿಂತಿದೆ. ತಲೆಯ ಸತ್ತಲೂ ಪ್ರಭಾವಳಿಯಲ್ಲಿ ಮಕರ ತೋರಣವಿದೆ ಹಾಗೂ ಶಿರದ ಮೇಲೆ ಜಿನೇಶ್ವರರ ಅಷ್ಟಮಹಾಪ್ರಂತಿಹಾರ್ಯಗಳಲ್ಲಿ ಒಂದಾದ ಮುಕ್ಕೊಡಿಯಿದೆ. ಈ ಜಿನಬಿಂಬವು ಸುಮಾರು ೨ ಅಡಿ ಎತ್ತರವಿದೆ. ಗಂಧಕುಡಿಯ ಹಿಂಬದಿ ಶಿಲಾಪೀಠದ ಹಿಂದೆ ಈ ಶಾಂತಿನಾಥನ ಶಿಲಾಮೂರ್ತಿ ಜೊತೆಗೆ ಇನ್ನೂ ಕೆಲವು ಜಿನಬಿಂಬಗಳಿವೆ.

ಒಳಾಂಗಣ ವಿನ್ಯಾಸ[ಬದಲಾಯಿಸಿ]

ಶ್ರೀ ಪಾರ್ಶ್ವನಾಥ ಸ್ವಾಮಿಯ ವಿಗ್ರಹದಲ್ಲಿ ಪ್ರತಿಬಿಂಬಿತವಾಗಿರುವ ಪ್ರಾಕ್ತನ ಶಾಸ್ತ್ರೀಯ ಲಕ್ಷಣಗಳಿವೆ. ವಿಗ್ರಹವು ಪ್ರಭಾವಲಯದಲ್ಲಿ ಮೇಲ್ಗಡೆ ಹೊಯ್ಸಳ ಶಿಲ್ಪ ಶೈಲಿಯ ಮಕರ ತೋರಣವು ಕಂಡುಬರುತ್ತದೆ. ಹೊಯ್ಸಳರ ಆಳ್ವಿಕೆ ಪ್ರಾರಂಭ ಕಾಲ ( ಸುಮಾರು ಕ್ರಿ.ಶ ೧೦೦೦-೧೦೫೦)ದಲ್ಲಿ ಅನುಸರಿಸುತ್ತಿದ್ದ ಶಿಲ್ಪ ಶೈಲಿಯ ಲಕ್ಷಣಗಳನ್ನಷ್ಟೇ ಹೊಂದಿದ್ದು, ಸರಳವಾಗಿದೆ. ಇನ್ನು, ಇದೇ ವಿಗ್ರಹದ ಎಡ ಬಲಗಳಲ್ಲಿರುವ ಕಂಬದಂತಹ ರಚನೆಯನ್ನು ನೋಡಬೇಕು. ಅವುಗಳಲ್ಲಿ ಕಲ್ಯಾಣದ ಚಾಲುಕ್ಯ ಶಿಲ್ಪ ಶೈಲಿಯ ಎಸಳು ಎಸಳಾಗಿರುವಂತಹ ಶಲಾಕೆಯ ಹಲವು ರಚನೆಗಳನ್ನು ಸ್ಪಷ್ಟವಾಗಿ ಕಾಣಬಹುದು. ಇದನ್ನು ವೀಕ್ಷಕರು ಸ್ಪಷ್ಟವಾಗಿ ಗಮನಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಶಿಲ್ಪಿಯು ಇದನ್ನು ಬಹು ನಿಖರವಾಗಿ ಹಾಗೂ ಆಳವಾಗಿ ಕೆತ್ತಿದ್ದಾನೆ. ಈ ಎರಡು ಶೈಲಿಯ ಲಕ್ಷಣಗಳು ಸಮ್ಮಿಲನಗೊಳಿಸಿಕೊಂಡು ಕಾಲ ನಿರ್ಣಯಕ್ಕೆ ಅಮೂಲ್ಯವಾದ ಸೂಚನೆಗಳನ್ನು ನೀಡಲು ಈ ಭಗವಾನ್ ಪಾರ್ಶ್ವನಾಥ ವಿಗ್ರಹವು ಐತಿಹಾಸಿಕ ಮಹತ್ವ ನೀಡಿದೆ. ಒಟ್ಟಿನಲ್ಲಿ ಈ ಎರಡೂ ಲಕ್ಷಣಗಳು ಸಮ್ಮಿಲನಗೊಂಡಿರುವ ಈ ಮೂರ್ತಿಯ ಅಧ್ಯಯನದಿಂದ ಈ ಜಿನೇಶ್ವರ ಬಿಂಬವನ್ನು ಕ್ರಿ.ಶ ೧೦೦೦ ರಿಂದ ೧೦೩೦ನೇ ಇಸವಿಯ ಒಳಗಿನ ಕಾಲದಲ್ಲಿ ಸಿದ್ಧಗೊಳಿಸಿ ಈ ಬಸದಿಯಲ್ಲಿ ಪ್ರತಿಷ್ಟಾಪಿಸಿದರು. ಈ ಜಿನಾಲಯದ ನಿರ್ಮಾಣ ಕಾಲವನ್ನು ನಿರ್ದಿಷ್ಟವಾಗಿ ಹೇಳಬಹುದು. ಸಹಕಾರಿಯಾದ ಶಿಲಾಶಾಸನಾದಿ ಲಿಖಿತ ದಾಖಲೆಗಳು ಇಲ್ಲದಿರುವಾಗ ಈ ಕಾಲವನ್ನೇ ಬಸದಿ ನಿರ್ಮಾಣದ ಕಾಲವೆಂದು ಹೇಳಬೇಕಷ್ಟೇ!ಆದುದರಿಂದ ಈ ಬಸದಿಯು ಕ್ರಿ.ಶ ೧೦೩೦ನೇ ಇಸವಿಗಿಂತ ಸ್ವಲ್ಪ ಮೊದಲು ನಿರ್ಮಾಣವಾಗಿಬೇಕು. ಮೂಡಬಿದಿರೆ ಶ್ರೀ ಜೈನ ಮಠದ ಆಶ್ರಯದಲ್ಲಿ ಚಂದಯ್ಯ ಉಪಾಧ್ಯಾಯೆಂಬುವರು ಕ್ರಿ.ಶ ೧೮೨೮ರಲ್ಲಿ ರಚಿಸಿದ ಜೈನಾಚಾರ ಎಂಬ ಸಾಂಗತ್ಯ ಗ್ರಂಥದ ತೌಳವದೇಶದ ತೀರ್ಥಯಾತ್ರೆ ಎಂಬ ೨೬ನೇ ಸಂಧಿಯಲ್ಲಿ ತುಳುನಾಡಿನ ಎಲ್ಲಾ ಬಸದಿಗಳ ಕುರಿತು ವಿವರಗಳು ಕಂಡು ಬರುತ್ತದೆ.

ಪೂಜಾ ವಿಧಾನ[ಬದಲಾಯಿಸಿ]

ಕ್ಷೇತ್ರಪಾಲನೆಗೆ ನಿತ್ಯವೂ ಪೂಜೆ ನಡೆಯುತ್ತದೆ. ಶ್ರೀ ಪಾರ್ಶ್ವನಾಥ ಮತ್ತು ಕೂಷ್ಮಾಂಡಿನೀ ಅಮ್ಮನವರ ಪೂಜೆಯ ಅನಂತರ ಜರುಗುವುದು ಇಲ್ಲಿನ ಪದ್ಧತಿ. ಪೂಜೆಯಲ್ಲಿ ನೈವೇದ್ಯ ಇಡುತ್ತಾರೆ. ಪೂಜಾ ಸುಮಾರು ಮಧ್ಯಾಹ್ನ ೧೨ ಗಂಟೆಗೆ ನಡೆಯುತ್ತದೆ. ಕೆಲವರು ಹರಕೆಗೋಸ್ಕರ ಈ ಪೂಜೆಯನ್ನು ಮಾಡಿಸುತ್ತಾರೆ. ಅವುಗಳಲ್ಲಿ ಕೃಷಿ ಪೂಜೆ, ವರದ ಪೂಜೆ ಎಂಬುದು ಮುಖ್ಯವಾದವುಗಳಿರುತ್ತದೆ. ಎಳನೀರಿನಿಂದ ಅಭಿಷೇಕ ಮಾಡುವುದು ಕೂಡ ಅರ್ಚನಾ ವಿಧಾನ ಒಂದಾಗಿದೆ.

ಕೆರೆಯ ವಿ್ನ್ಯಾಸ[ಬದಲಾಯಿಸಿ]

ನೆಲ್ಲೂರಿನಿಂದ ದಕ್ಷಿಣ ದಿಕ್ಕಿಗೆ ೧ ಕಿ.ಮೀ ದೂರದಲ್ಲಿರುವ ಒಂದು ತಗ್ಗಿನ ಪ್ರದೇಶದಲ್ಲಿ ಕೆರೆಯನ್ನು ನೋಡಬಹುದಾಗಿದೆ.ಬಹಳ ಕಾಲದಿಂದಲೂ ಊರಿನ ಮಳೆಯ ನೀರು ಕೆರೆಗೆ ಸೇರಿ ಹೂಳು ತುಂಬಿ ಕೆರೆಯು ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಇಲ್ಲಿ ಮರ ಗಿಡಗಳ ನಡುವೆಯೂ ಜಲೀಯ ಸಸ್ಯಗಳನ್ನೂ, ಪೊದೆಗಳ ರಾಶಿಯನ್ನೂ ಕಾಣಬಹುದು. ಈ ಕೆರೆಯು ಸರಿಸುಮಾರು ೮ ರಿಂದ ೧೦ ಎಕರೆವರೆಗೆ ತನ್ನ ವ್ಯಾಪ್ತಿಯನ್ನು ಹೊಂದಿತ್ತು. ಈಗಲೂ ಇಲ್ಲಿ ನೀರಿನ ಒಸರುತ್ತಿರುತ್ತದೆ. ಹಚ್ಚ ಹಸಿರಿನಿಂದ ಕೂಡಿದ ಹುಲ್ಲುಗಳನ್ನು ನೋಡಬಹುದು. ಇಲ್ಲಿ ವಾತಾವರಣ ತುಂಬಾ ತಂಪಾಗಿದೆ. ಇಲ್ಲಿ ಕೆರೆಯ ಗಡಿ ಕಲ್ಲನ್ನು ಹೊಂದಿದೆ. ಅವುಗಳ ಮೇಲೆ ತ್ರಿಶೂಲದ ಚಿಹ್ನೆಯಿದೆ. ಈ ಕಲ್ಲು ಒಂದುವರೆ ಅಡಿ ಎತ್ತರ ಮತ್ತು ಅರ್ಧ ಅಡಿ ಅಗಲ ಕಲ್ಲು ಚಪ್ಪಡಿಯ ರೀತಿಯಲ್ಲಿದೆ. ಹಿಂದಿನ ಕಾಲದಲ್ಲಿ ಈ ಗಡಿ ಕಲ್ಲನ್ನು ನೆಟ್ಟು ಸ್ಥಳವನ್ನು ಗುರುತಿಸುತ್ತಿದ್ದರು. ಇಲ್ಲಿ ಕೆರೆಯ ಬದಿಗೆ ಗೋಡೆಯ ರೀತಿಯಲ್ಲಿ ಕಟ್ಟಿದ ಕಲ್ಲನ್ನು ನಾವು ಈಗ ಕೂಡಾ ನೋಡಬಹುದು. ಇವುಗಳು ಹಿಂದೆಯೇ ನೀರಿನಿಂದ ಕೂ[೧]ಡಿದ ಒಂದು ಬಾವಿ ನೋಡಬಹುದಾಗಿದೆ.

ಸಮವಸರಣ[ಬದಲಾಯಿಸಿ]

ಹರಿಹಂತ ಪರಮೇಷ್ಠಿಗಳು ವಿರಾಜಮಾನರಾಗಿ ಉಪದೇಶವನ್ನು ಮಾಡುತ್ತಾ ವಿರಾಜಮಾನರಾಗಿರುವ ಸಭಾಮಂಟಪವೇ ಸಮವಸರಣ. ತೀರ್ಥಂಕರರು ಸಂಸಾರದ ಶರೀರ ಭೋಗಗಳಲ್ಲಿ ವೈರಾಗ್ಯ ಹೊಂದಿ ತಪೋವನಕ್ಕೆ ಹೋಗಿ ದೀಕ್ಷೆ ಪಡೆಯುತ್ತಾರೆ. ಅವರು ಜ್ಞಾನ-ಧ್ಯಾನ-ತಪಗಳಲ್ಲಿ ತೊಡಗುತ್ತಾರೆ. ಆದುದರಿಂದ ಅವರ ಆತ್ಮನಿಗೆ ಅನಾದಿ ಕಾಲದಿಂದಲೂ ಅಂಟಿ ಬಂದಿದ್ದ ಜ್ಞಾನಾವರಣೀಯ, ದರ್ಶನಾವರಣೀಯ, ಮೋಹನೀಯ, ಅಂತರಾಯವೆಂಬ ಆತ್ಮಘಾತಕವಾದ ಘಾತಿ ಕರ್ಮಗಳು ನಾಶ ಆಗುತ್ತವೆ. ಆಗ ಅವರು ಆಕಾಶದಲ್ಲಿ ನಿಲ್ಲುತ್ತಾರೆ. ದೇವೆಂದ್ರನಿಗೆ ಇದು ಗೊತ್ತಾಗುತ್ತದೆ. ಕೂಡಲೇ ಕುಬೇರನಿಂದ ಸಮವಸರಣವನ್ನು ಅರಿಹಂತರು ಇರುವ ಜಾಗದಲ್ಲಿ ಇದನ್ನು ನಿರ್ಮಾಣ ಮಾಡಿದ್ದಾರೆ.

ವಿನ್ಯಾಸ[ಬದಲಾಯಿಸಿ]

ಸಮವಾಸರಣವು ಭೂಮಿಯಿಂದ ಮೇಲೆ ೫೦೦೦ ಧನಸ್ಸು ಎತ್ತರದ ಅಂತರದಲ್ಲಿರುತ್ತದೆ. ಇದಕ್ಕೆ ಭೂಮಿಯಿಂದ ಸಮವಸರಣದವರೆಗೆ ೨೦,೦೦೦ ಮೆಟ್ಟಿಲುಗಳಿರುತ್ತವೆ. ಸಮವಸರಣಕ್ಕೆ ಹೋಗ ಬಯಸುವವರು ತೀರಾ ಕೆಳಗಿನ ಮೊದಲ ಮೆಟ್ಟಿಲ ಮೇಲೆ ನಿಂತರೆ ಸಾಕು, ಅವರು ಕ್ಷಣಾರ್ಧದಲ್ಲಿ ಸಮವಸರಣವನ್ನು ತಲುಪುತ್ತಾರೆ. ಕಾರಣ ಮೆಟ್ಟಿಲುಗಳಿಗೆ ಪಾದಲೇಪನವೆಂಬ ಔಷಧಿ ಲೇಪನವಾಗಿರುತ್ತದೆ. ಮೆಟ್ಟಿಲುಗಳು ನಾಲ್ಕು ದಿಕ್ಕಿನಲ್ಲಿ ಇರುತ್ತವೆ. ಸಮವಸರಣವು ನೀಲಿಮಣಿಯಿಂದ ರಚಿಸಲಾಗಿರುತ್ತದೆ. ಇದು ಆದಿನಾಥರಿಗೆ ಹನ್ನೆರಡು ಯೋಜನ ಸಮವಸರಣವು ವಿಸ್ತಾರವಾಗಿದ್ದಿತು. ಬರುತ್ತಾ ಅರ್ಧ-ಅರ್ಧ ಯೋಜನ ಕಡಿಮೆಯಾಗುತ್ತಾ ಮಹಾವೀರರ ಕಾಲದಲ್ಲಿ ಒಂದು ಯೋಜನೆಯಾಗಿತ್ತು. ಸಮವಸರಣದ ಸುತ್ತಲೂ ಪಂಚರತ್ನಗಳ ಧೂಳಿನಿಂದ ತುಂಬಿರುವ ಧೂಳೀ ಸಾಲವೆಂಬ ಕೋಟೆ ಇದೆ. ಇದರ ನಾಲ್ಕು ದಿಕ್ಕಿನಲ್ಲಿ ಹೆಬ್ಬಾಗಿಲುಗಳಿವೆ. ಅಕ್ಕಪಕ್ಕಗಳಲ್ಲಿ ದ್ವಾರ ಪಾಲಕರಿರುತ್ತಾರೆ. ಆ ಬಾಗಿಲುಗಳ ಒಳಗೆ ಎದುರಿನಲ್ಲಿ ಎತ್ತರವಾದ ಮಾನಸ್ತಂಭವಿರುತ್ತದೆ. ನಾಲ್ಕು ದಿಕ್ಕಿನಲ್ಲಿರುವ ಈ ಮನಸ್ತಂಭಗಳ ನಡುವೆ ೫-೫ ಜೀನ ಮಂದಿರಗಳಿರುತ್ತವೆ. ನೆಲ್ಲೂರಿನಲ್ಲಿ ನಿರ್ಮಿಸಿರುವ ಸಮವಸರಣದಲ್ಲಿ ಇವೆಲ್ಲವೂ ಇವೆ. ಈ ಧೂಳೀ ಸಾಲ ಕೋಟೆಯನ್ನು ದಾಟಿದರೆ ನಿರ್ಮಲವಾದ ಜಲದಿಂದ ತುಂಬಿರುವ ಸದಾ ಕಮಲಗಳು ಅರಳಿರುವ ಖಾತಿಕಾ ಎಂಬ ಭೂಮಿಯಿರುತ್ತದೆ. ಅದರಿಂದ ಮುಂದೆ ಲತಾ ಭೂಮಿಯಿದೆ. ಅಲ್ಲಿ ವಿವಿಧ ಪುಷ್ಪಗಳಿಂದ ತುಂಬಿದ ಬಳ್ಳಿಗಳಿವೆ. ಮುಂದೆ ೧೦೮ ಮಂಗಳ ದ್ರವ್ಯಗಳಿಂದ ಕೂಡಿದ ಜಿನಚೈತ್ರ ಭೂಮಿಯಿದೆ. ಅಲ್ಲಿಂದ ಮುಂದೆ ಹಲವು ಚಿಹ್ನೆಗಳಿಂದ ಕೂಡಿದ ಧ್ವಜ ಭೂಮಿಯಿದೆ. ಅದರಿಂದಾಚೆಗೆ ಕಲ್ಪವೃಕ್ಷಗಳು ತುಂಬಿದ ಭೂಮಿ. ಅದರಲ್ಲಿ ಸಿದ್ಧ ಪ್ರತಿಮೆಗಳು ವಿರಾಜಮಾನವಾಗಿರುತ್ತವೆ. ಅಲ್ಲಿಂದ ಮುಂದೆ ಬಳ್ಳಿಯ ಕೋಟೆ ಇರುತ್ತದೆ. ಇದರ ನಾಲ್ಕು ದಿಕ್ಕುಗಳಲ್ಲಿ ಗೋಪುರಗಳು, ನಾಟ್ಯಶಾಲೆಗಳಿವೆ. ಅಲ್ಲಿ ಜೋತಿರ್ವ್ಯಂತರ ಭುವನ ವಾಸಿಗಳು ನಡೆದಾಡುತ್ತಾರೆ. ಆಕಾಶ ಸ್ಪಟಿಕದ ಕೋಟೆ ಇರುತ್ತದೆ. ಅಲ್ಲಿಂದ ಮುಂದೆ ೧೨ ಕೋಷ್ಠಕಗಳಿವೆ. ೧. ಪ್ರಸಾದ ಚೈತನ್ಯ ಭೂಮಿ ೨. ಜಲಖಾತಿಕ ಭೂಮಿ ೩. ವಲ್ಲೀವನ ಭೂಮಿ ೪. ಉಪವನ ಭೂಮಿ ೫. ಧ್ವಜಮಾಲಾ ೬. ಕಲ್ಪಮಹೀರುಕ ಭೂಮಿ ೭. ಭುವನ ಸಂದೋಹ ಭೂಮಿ. ೮. ದ್ವಾದಶಾಂಗಣ ಭೂಮಿ ೯. ವೈಢೂರ್ಯ ಪೀಠ ೧೦. ಕನಕ ಪೀಠ ೧೧. ರತ್ನ ಸಿಂಹಾಸನ ಎಂಬ ೧೧ ಭಾಗಗಳಿರುತ್ತವೆ.

ನಿರ್ಮಾಣ[ಬದಲಾಯಿಸಿ]

ನಲ್ಲೂರಿನ ಬಸದಿಯಲ್ಲಿರುವ ಸಮವಸರಣವು ೧೯೯೯ರಲ್ಲಿ ನಿರ್ಮಿಸಲ್ಪಟ್ಟಿತು. ಇದನ್ನು ಅತಿಶಯ ಕ್ಷೇತ್ರ ನಲ್ಲೂರಿನ ಮಾತೆ ಕೂಷ್ಮಾಂಡಿನೀ ಮಂದಿರದ ಎದುರಿಗಿರುವ ಮುಖ ಮಂಟಪದಲ್ಲಿ ಕಾಣಬಹುದು. ಶುದ್ಧಾತ್ಮರಿಗೆ ಇಲ್ಲಿ ಮುಕ್ತ ಪ್ರವೇಶವಿದೆ. ಶ್ರವಣಬೆಳಗೊಳದ ಶ್ರೀ ಸ್ವಾಮಿಯವರು ತಮ್ಮ ನೆನಪಿನ ಕಾಣಿಕೆಯಾಗಿ ಇದನ್ನು ಸ್ಥಾಪಿಸಿದರು. ಸಮವಸರಣವು ಕರ್ನಾಟಕದ ಬೆಂಗಳೂರು ಮತ್ತು ಶ್ರವಣಬೆಳಗೊಳವನ್ನು ಬಿಟ್ಟರೆ ಬೇರೆ ಇರುವುದು ನಲ್ಲೂರಿನಲ್ಲಿಯೇ. ಸಮವಸರಣದ ಯಾವ ದಿಕ್ಕಿನಲ್ಲಿ ನಿಂತು ನೋಡಿದರೂ ತೀರ್ಥಂಕರರ ಭಗವಾನರು ಕಂಡುಬರುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜೀನ ಮಂದಿರಗಳ ದರ್ಶನ (1 ed.). ಮಂಜೂಶ್ರೀ ಪ್ರಿಂಟರ್ಸ್. p. 51-55.