ಸದಸ್ಯ:Sneha.j.gowda/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಚಲಿಂಗದರ್ಶನದ ಪೂಜಾವಿಧಾನ[ಬದಲಾಯಿಸಿ]

ಮೊದಲಿಗೆ ಇಲ್ಲಿರುವ ಕಾವೇರಿ ನದಿಗಿಂತಲೂ ಅನಾದಿಯಾಗಿರತಕ್ಕಂತಹ "ಗೋಕರ್ಣ ತೀರ್ಥದಲಿ" ಮಿಂದು ಗೋಕರ್ಣೇಶ್ವರ ದರ್ಶನಮಾಡಿ, ಅಲ್ಲಿಂದ ಉತ್ತರಕ್ಕಿರುವ ಚೌಡೇಶ್ವರಿ ದೇವಿಯನ್ನು ಪೂಜಿಸಿ ನಂತರ ವೈದ್ಯನಾಥೇಶ್ವರ ಸನ್ನಿಧಿಗೆ ಬಂದು ಪಂಚಲಿಂಗದರ್ಶನ ಯಾತ್ರೆಗೆ ಅಪ್ಪಣೆ ಕೋರಿ, ಉತ್ತರವಾಹಿನಿಯಲ್ಲಿ ಮಿಂದು, ಅರ್ಕೇಶ್ವರ ದರ್ಶನಮಾಡಿ ಮತ್ತೆ ವ್ಯೆದ್ಯಥೇಶ್ವರನಲ್ಲಿಗೆ ಬಂದು ವರದಿ ಸಲ್ಲಿಸಬೇಕು. ಆನಂತರ ದಕ್ಷಿಣ ವಾಹಿನಿಯಲ್ಲಿ ಮಿಂದು ಮರಳೇಶ್ವರನ ದರ್ಶನಮಾಡಿ ಯಥಾ ಪ್ರಕಾರ ವೈದ್ಯನಾಥೇಶ್ವರನಲ್ಲಿಗೆ ಬಂದು ವರದಿ ಒಪ್ಪಿಸಿ ಭಕ್ತ್ತಿಯಿಂದ ಪೂಜಿಸಿ ಪುನೀತರಾಗುವುದು. ಎಲ್ಲಕಡೆ ಸುತ್ತಿ ಇವಿಷ್ಟನ್ನು ಮಾಡಲು ಸಾಧ್ಯವಾಗದವರು ಗೋಕರ್ಣ ತೀರ್ಥದಲ್ಲಿ ಸ್ನಾನಮಾಡಿ ಗೋಕರ್ಣೇಶ್ವರ, ಚೌಡೇಶ್ವರಿ ಮತ್ತು ಪಂಚಲ್ಲಿಂಗಗಲಲ್ಲಿ ಪ್ರಧಾನವಾದ ವೈದ್ಯನಾಥೇಶ್ವರನ ದರ್ಶನ ಮಾಡಿ ತೀರ್ಥ ಪ್ರಸಾದ ಪಡೆದರೂ ಪಂಚಲಿಂಗ ದರ್ಶನದ ಪುಣ್ಯ ಫಲ ದೊರೆಯುತ್ತದೆ.

ಗೋಕರ್ಣ ತೀರ್ಥ[ಬದಲಾಯಿಸಿ]

ಪಂಚಲಿಂಗದರ್ಶನ ಪೂಜೆಗೆ ಇದೇ ಮೂಲವಾಗಿದ್ದು ಮೊದಲು ಇಲ್ಲಿ ಮಿಂದು ಆನಂತರ ಮುಂದಿನ ಪೂಜಾಕೈಂಕರ್ಯಕ್ಕೆ ಅಣಿಯಾಗಬೇಕು. ಸಕಲ ಪಾಪತೊಳೆಯುವ ಪುಣ್ಯಪುಷ್ಕರಣಿ ಇದು. ಪ್ರತೀ ವರ್ಷ ತುಲಾಸಂಕ್ರಮಣ ಕಾಲದಲ್ಲಿ ಅಂದರೆ ಅಕ್ಟೋಬರ್-ನವೆಂಬರ್ ಮಾಸದಲ್ಲಿ ಕಾಶಿಯಿಂದ ಪವಿತ್ರಗಂಗೆ ಇಲ್ಲಿಗೆ ಹರಿದು ಬರುತ್ತಾಳೆಂದು ಪ್ರತೀತಿ ಇದೆ. ಹಾಗಾಗಿ ಗೋಕರ್ಣ ತೀರ್ಥ ಸ್ನಾನ ಅತ್ಯಂತ ಶ್ರೇಷ್ಠವೆನಿಸಿದೆ. ಇಲ್ಲಿ ಮಿಂದು ಪುನೀತರಾಗಲು ಭಕ್ತಸಮೂಹ ತುದಿಗಲಲ್ಲಿ ನಿಂತಿರುತ್ತದೆ.

ಇದುವರೆಗಿನ ಪಂಚಲಿಂಗ ದರ್ಶನಗಳು[ಬದಲಾಯಿಸಿ]

ಕ್ರಿ.ಶ.೨೪೭ ರಿಂದ ೨೬೬ರವರೆಗೆ ತಲಕಾಡನ್ನು ಆಳಿದ ಗಂಗರ ದೊರೆ ಹರಿವರ್ಮ ಕಾಲದಲ್ಲೇ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆಚರಣೆಯಲ್ಲಿತ್ತೆಂಬುದು ಇತಿಹಾಸವಾದರು ಇದರ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಿಲ್ಲ. ಆದರೆ ಕಳೆದ ೨೦ನೇ ಶತಮಾನದಿಂದೀಚೆಗೆ ೧೯೦೮, ೧೯೧೫, ೧೯೨೫, ೧೯೩೮, ೧೯೫೨, ೧೯೫೯, ೧೯೬೬, ೧೯೭೯, ೧೯೮೬, ೧೯೯೩ರಲ್ಲಿ ಪಂಚಲಿಂಗ ದರ್ಶನ ನಡೆದಿದ್ದು ೨೧ನೇ ಶತಮಾನದ ಮೊದಲ ಪಂಚಲಿಂಗದರ್ಶನವಾಗಿ ೨೦೦೬ ನವೇಂಬರ್ ೨೦ ರಂದು ನಡೆದಿದ್ದು, ಆ ನಂತರ ೨೦೦೯ನೇ ನವೆಂಬರ್ ೧೬ರಂದು ನಡೆದಿದೆ, ಈ ವರ್ಷ ೨೦೧೩ರಲ್ಲಿ ಡಿಸೆಂಬರ್ ೨ ರಂದು ಪಂಚಲಿಂಗ ದರ್ಶನ ಮಹೋತ್ಸವ ಜರುಗುತ್ತಿದೆ. ಸಾಮಾನ್ಯವಾಗಿ ೧೨ ವರ್ಷಗಳಿಗೊಮ್ಮೆ ಮಾತ್ರ ಪಂಚಲಿಂಗ ದರ್ಶನ ನಡೆಯುತ್ತದೆಂಬ ತಪ್ಪುಕಲ್ಪನೆ ಜನರಲ್ಲಿದೆ. ಅದು ಸರಿಯಲ್ಲ. ಕಾರ್ತೀಕಮಾಸ, ಅಮಾವಾಸ್ಯೆ, ಐದು ಸೋಮವಾರ, ವೃಶ್ಚಿಕರಾಶಿ, ಕಹೂಯೋಗ ಈ ಅಂಶಗಳು ಒಟ್ಟಾಗಿ ಬಂದಾಗ ಎಷ್ಟು ವರ್ಷಗಳಿಗೆ ಬೇಕಾದರೂ ಪಂಚಲಿಂಗ ದರ್ಶನ ಬರಬಹುದು. ಇದುವರೆಗೆ ನಡೆದುಕೊಂಡು ಬಂದಿರುವ ಪಂಚಲಿಂಗದರ್ಶನಗಳಲ್ಲಿ ಇದನ್ನು ಕಾಣಬಹುದಾಗಿದೆ.

ತಲಕಾಡಿನ ಪೌರಾಣಿಕ ಹಿನ್ನಲೆ[ಬದಲಾಯಿಸಿ]

ಹಿಂದೊಮ್ಮೆ ವಸಿಷ್ಠ ಕುಲದ ಸೋಮದತ್ತನೆಂಬ ಋಷಿಯು ಸಶರೀರ ಮೋಕ್ಷ ಬಯಸಿ ವಾರಣಾಸಿಯಲ್ಲಿ ತಪಸ್ಸು ಮಾಡುತ್ತಿದ್ದಾಗ ಕಾಶಿವಿಶ್ವೇಶ್ವರ ಪ್ರತ್ಯಕ್ಷನಾಗಿ ನಿನ್ನ ಉದ್ದೇಶ ಫಲಿಸಬೇಕೆಂದರೆ ಕಾಶಿಗಿಂತಲೂ ಮಿಗಿಲಾದ ದಕ್ಷಿಣ ಗಂಗೆಯೆಂದು ಹೆಸರಾಗಿರುವ ಕಾವೇರಿ ನದಿತೀರದ ತಲವನಪುರದ ಸಿದ್ದಾರಣ್ಯ ಕ್ಷೇತ್ರಕ್ಕೆ ಹೋಗುವಂತೆ ಹೇಳುತ್ತಾನೆ. ಆಗ ಸೋಮದತ್ತನು ತನ್ನ ಶಿಷ್ಯರೊಡಗೂಡಿ ಸಿದ್ದಾರಣ್ಯ ಕ್ಷೇತ್ರಕ್ಕೆ ಬರುತ್ತಿದ್ದಂತೆಯೇ ಆನೆಗಳ ಹಿಂಡಿಗೆ ಸಿಲುಕಿ ಭಯಭೀತರಾಗಿ. 'ಆನೆ...ಆನೆ...' ಎಂದು ಕೂಗಿಕೊಂಡೇ ಗುರು ಶಿಷ್ಯರೆಲ್ಲಾ ಸಾವಿಗೀಡಾಗುತ್ತಾರೆ. ಸಾಯುವ ಸಮಯದಲ್ಲಿ ಆನೆಯ ಸ್ಮರಣೆಗೈದ ಅವರು ಮುಂದೆ ಸಿದ್ದಾರಣ್ಯ ಕ್ಷೇತ್ರದಲ್ಲೇ ಆನೆಗಳಾಗಿ ಜನ್ಮತಾಳುತ್ತಾರೆ. ಈ ಆನೆಗಳು ಪ್ರತಿದಿನ ಗೋಕರ್ಣ ತೀರ್ಥದಲ್ಲಿ ಮಿಂದು ಕಮಲಪುಷ್ಪಗಳನ್ನು ಸೊಂಡಿಲಿನಿಂದ ತೆಗೆದುಕೊಂಡು ಹೋಗಿ ಅಲ್ಲಿಯೇ ಸಮೀಪದಲ್ಲಿದ್ದ ಶಾಲ್ಮಲ ವೃಕ್ಷ(ಬೂರಗದಮರ) ದ ಪೊದೆಯೊಂದಕ್ಕೆ ನಿತ್ಯ ಪೂಜೆ ಮಾಡುತ್ತಿರುತ್ತವೆ. ಇದನ್ನು ಕಂಡು ಕುತೂಹಲಗೊಂಡ ತಲ ಮತ್ತು ಕಾಡ ಎಂಬ ಬೇಡರು ತಮ್ಮ ಕೊಡಲಿಗಳಿಂದ ಬೂರಗದ ಮರದ ಪೊದೆಯನ್ನು ಕತ್ತರಿಸಿದಾಗ ಕೊಡಲಿ ತಾಗಿ ಅಲ್ಲಿದ್ದ ಲಿಂಗದಿಂದ ರಕ್ತ ಚಿಮ್ಮುತ್ತದೆ. ಇದರಿಂದ ಭಯಗೊಂಡ ಬೇಡರು ನಡುಗತೊಡಗುತ್ತಾರೆ. ಆಗ ಅಶರೀರವಾಣಿಯೊಂದು ಕೇಳಿಬರುತ್ತದೆ. ಆಶರೀರವಾಣಿಯ ಆಣತಿಯಂತೆ ಆ ಬೇಡರು ಬೂರಗದ ಮರದ ಎಲೆ ಮತ್ತು ಕಾಯಿಗಳನ್ನು ಜಜ್ಜಿ ಅರೆದು ಲಿಂಗಕ್ಕೆ ಹಚ್ಚಿದಾಗ ರಕ್ತ ಚಿಮ್ಮುತ್ತದೆ. ಅದನ್ನು ಕುಡಿದ ತಲ ಮತ್ತು ಕಾಡರು ಹಾಗೂ ಆನೆ ಜನ್ಮ ತಾಳಿದ ಸೋಮದತ್ತ ಋಷಿ ಮತ್ತು ಅವನ ಶಿಷ್ಯರು ಮೋಕ್ಷ ಪಡೆಯುತ್ತಾರೆ. ಅಂದಿನಿಂದ ತಲ-ಕಾಡರೆಂಬ ಬೇಡರಿಂದಾಗಿ ತಲವನಪುರ "ತಲಕಾಡು" ಎಂದು ಹೆಸರಾದರೆ ಆನೆ ಜನ್ಮತಾಳಿ ಇಲ್ಲಿ ಮುಕ್ತ್ತಿಹೊಂದಿದ ಸೋಮದತ್ತ ಋಷಿಯಿಂದ ಸಿದ್ದಾರಣ್ಯ ಕ್ಷೇತ್ರವು ಗಜಾರಣ್ಯ ಕ್ಷೇತ್ರವಾಗಿ ಪ್ರಸಿದ್ಧಿಯಾಗುತ್ತದೆ. ಹಾಗೆಯೇ ತನಗೆ ತಾನೆ ವೈದ್ಯ ಮಾಡಿಕೊಂಡ ಪರಶಿವನು ವೈದ್ಯನಾಥೇಶ್ವರನಾಗಿ ಇಲ್ಲಿ ನೆಲೆಗೊಂಡಿದ್ದಾನೆಂಬುದು ಪುರಾಣ ಪ್ರಸಿದ್ಧ ಕಥೆ.

ತಲಕಾಡಿನ ಚಾರಿತ್ರಿಕ ಒಳನೋಟ[ಬದಲಾಯಿಸಿ]

ತಲಕಾಡಿನ ವಿಷಯವಾಗಿ ವಿಶೇಷವಾಗಿ ಗಂಗರಿಗೆ ಹೆಚ್ಚಿನ ಪ್ರಾಧಾನ್ಯವಿದೆ. ಇವರು ತಲಕಾಡಿನ ಗಂಗರೆಂದೇ ಪ್ರಸಿದ್ಧರು. ತಲಕಾಡುನ್ನು ಬಹು ವೈಭವದಿಂದ ಮೆರೆಸಿದ ಕೀರ್ತಿಕೂಡ ಇವರದೇ. ಕ್ರಿ.ಶ. ೨೪೭-೨೬೬ರಲ್ಲಿ ಗಂಗರಸ ಹರಿವರ್ಮನು ಇಂದಿನ ತಲಕಾಡನ್ನು ತಲವನಪುರ ಹೆಸರಿನಲ್ಲಿ ಆಳ್ವಿಕೆ ನಡೆಸಿದ್ದು ಮುಂದೆ ಈತನ ವಂಶಕ್ಕೆ ತಲಕಾಡು ರಾಜಧಾನಿಯಾಗಿ ಮುಂದುವರಿದು ೮ನೇ ಶತಮಾನದಲ್ಲಿ ಗಂಗರಾಜ ಶ್ರೀಪುರುಷನು ಅತ್ಯಂತ ವೈಭವದಿಂದ ತಲಕಾಡನ್ನು ಆಳಿದ್ದನೆಂದು ಚರಿತ್ರೆ ಸಾರುತ್ತದೆ. ನಂತರ ಗಂಗರು, ರಾಷ್ಟ್ರಕೂಟರ ಸಾಮಂತರಾಗಬೇಕಾಗುತ್ತದೆ. ೧೧ನೇ ಶತಮಾನದ ಆರಂಭದಲ್ಲಿ ಗಂಗರ ಕೈಬಿಟ್ಟು ತಲಕಾಡು ಚೋಳರ ಕೈವಶವಾಗಿ ರಾಜಪುರ ಎಂಬ ಹೊಸ ಹೆಸರು ಹೊಂದುತ್ತದೆ. ಆದರೆ ಹೆಚ್ಚು ಕಾಲ ಚೋಳರು ಇಲ್ಲಿ ನೆಲೆಗೊಳ್ಳಲು ಹೊಯ್ಸಳರು ಅವಕಾಶ ಕೊಡುವುದಿಲ್ಲ. ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಚೋಳರ ಮೇಲೆ ಯುದ್ಧ ಮಾಡಿ ಅವರನ್ನು ತಮಿಳುನಾಡಿಗೆ ಅಟ್ಟಿ ತಲಕಾಡಿನ್ನು ವಶಪಡಿಸಿಕೊಂಡು 'ತಲಕಾಡುಗೊಂಡ' ಎಂಬ ಅಭಿದಾನಕ್ಕೆ ಪಾತ್ರನಾಗುತ್ತಾನೆ. ಅದೇ ಸಮಯಕ್ಕೆ ಕೀರ್ತಿನಾರಾಯಣ ದೇವಸ್ಥಾನವನ್ನು ಅದ್ಭುತವಾಗಿ ನಿರ್ಮಿಸುತ್ತಾನೆ. ಈಗಲೂ ತಲಕಾಡಿನಲ್ಲಿ ಎಲ್ಲಾ ದೇವಾಲಯಗಳಿಗಿಂತಲೂ, ಹೊಯ್ಸಳ ಶೈಲಿಯ ದೇವಾಲಯಗಳು ಹೆಚ್ಚು ಆಕರ್ಷಣೀಯ. ೧೪ನೇ ಶತಮಾನದ ತನಕವೂ ತಲಕಾಡು ಹೊಯ್ಸಳರ ಆಳ್ವಿಕೆಯಲ್ಲಿ ಮೆರೆದು ತದನಂತರ ವಿಜಯನಗರದ ಅರಸರ ಅಧಿಪತ್ಯಕ್ಕೆ ಒಳಪಡುತ್ತದೆ. ಮುಂದೆ ಕ್ರಿ.ಶ.೧೬೩೪ರಲ್ಲಿ ಇದು ಮೈಸೂರು ಅರಸರ ಪಾಲಾಗುತ್ತದೆ. ಕ್ರಿ.ಶ.೧೮೬೮ರ ವರೆಗು ತಲಕಾಡು ತಾಲ್ಲೂಕು ಕೇಂದ್ರವಾಗಿಯಿತ್ತು. ೧೮೮೨ನಲ್ಲಿ ತಾಲ್ಲೂಕು ಕೇಂದ್ರ ಟಿ.ನರಸೀಪುರಕ್ಕೆ ವರ್ಗಾವಣೆಯಾಗಿದೆ.