ಸದಸ್ಯ:Siddharthsks/sandbox
ಮದರ್ ತೆರೇಸಾ>>
ಮದರ್ ತೆರೇಸಾ ವಿದೇಶದಿಂದ ಭಾರತಕ್ಕೆ ಬಂದು, ಬ್ರಹ್ಮಚಾರಿಣಿಯಾಗಿದ್ದು ಕೊಂಡು ತಮ್ಮ ಇಡೀ ಜೀವನವನ್ನೇ ಸಮಾಜಸೇವೆಗೆ ಮುಡುಪಾಗಿಟ್ಟರು. ಅವರು ಸೇವೆ, ತ್ಯಾಗ ಮಾಡುತ್ತಲೇ ಇಡೀ ಪ್ರಪಂಚದ ಗಮನವನ್ನು ತಮ್ಮತ್ತ ಸೆಳೆದವರು.
ಜನನ, ಜೀವನ>> ೨೬ ಆಗಸ್ಟ್ ೧೯೧೦ ರಲ್ಲಿ ಆಲ್ಬೇನಿಯಾದ ಸ್ಕೊಪಿಯೆ ಎಂಬಲ್ಲಿ ಜನಿಸಿದ ಆಗ್ನೆಸ್ ಗಾಂಕ್ಸಾ ಬೊಜಾಜಿಯು ೧೯೨೮ ರಲ್ಲಿ ಲೊರೆಟೊ ಕಾನ್ವೆಂಟ್ (ಕ್ರೈಸ್ತ ಸನ್ಯಾಸಿನಿಯರ ಮಠ) ಸೇರಿ "ಸೋದರಿ ತೆರೇಸಾ" ಆದರು. ನಂತರ ೬ ಜನವರಿ ೧೯೨೯ರಂದು ಇಂಡಿಯಾ ದೇಶಕ್ಕೆ ಬಂದು ಕಲ್ಕತ್ತಾ ನಗರದ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವಾನಿರತರಾದರು. ೧೯೪೪ರಲ್ಲಿ ಆ ಶಾಲೆಯ ಪ್ರಿನ್ಸಿಪಾಲರೂ ಆದರು. ಸುಮಾರು ೧೯೪೮ರಲ್ಲಿ ಕಲ್ಕತ್ತೆಯ ಆಸ್ಪತ್ರೆಯೊಂದರ ಮುಂದೆ ಸಾವಿನಂಚಿನಲ್ಲಿದ್ದ ಅನಾಥ ಹೆಂಗಸನ್ನು ಕಂಡರು. ಆ ಹೆಂಗಸಿಗೆ ಸಾಂತ್ವನ ಹೇಳುತ್ತಾ ಶುಶ್ರೂಷೆ ಮಾಡುತ್ತಿದ್ದಂತೆ ಅವಳು ಕೊನೆಯುಸಿರೆಳೆದಳು. ಅನಾಥರು ಸಾವಿನ ಸಂದರ್ಭದಲ್ಲಾದರೂ ಶಾಂತಮನಸ್ಕರಾಗಿ ಗೌರವಯುತ ಮರಣ ಹೊಂದುವುದಕ್ಕೆ ಶ್ರಮಿಸುತ್ತೇನೆಂದು ನಿರ್ಧರಿಸಿದರು. ಮದರ್ ತೆರೇಸಾ ತಾವಿದ್ದ ಕಾನ್ವೆಂಟನ್ನು ತೊರೆದು ಏಕಾಂಗಿಯಾಗಿ ಆಗಸ್ಟ್ ೧೭, ೧೯೪೮ ರಂದು ಮೊತ್ತಮೊದಲ ಬಾರಿಗೆ ನೀಲಿಯಂಚಿನ ಬಿಳಿಸೀರೆ ಉಟ್ಟು ಬೀದಿಗೆ ಇಳಿದು ತಮ್ಮ ಗುರಿಗೆ ಅಂಟಿಕೊಂಡರು. ಕ್ರಮೇಣ ೧೨ ಇತರ ಸನ್ಯಾಸಿನಿಯರು ಅವರನ್ನು ಸೇರಿಕೊಂಡರು. ಅಕ್ಟೋಬರ್ ೭, ೧೯೫೦ ರಲ್ಲಿ ಅವರದೇ ಆದ "ಮಿಷನರೀಸ್ ಆಫ್ ಚಾರಿಟಿ" ಎಂಬ ಕಾನ್ವೆಂಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು.