ಸದಸ್ಯ:Shwetha mundruppady/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

'''ಚಂದ್ರನಾಥ ಸ್ವಾಮಿ ಬಸದಿ, ವಿಟ್ಲ'''

ಸ್ಥಳ[ಬದಲಾಯಿಸಿ]

ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಪೇಟೆಯಲ್ಲಿ ಈ ಬಸದಿಯಿದ್ದು, ಶ್ರೀ ಚಂದ್ರನಾಥ ಸ್ವಾಮಿಯನ್ನು ಮೂಲ ನಾಯಕನಾಗಿ ಪೂಜಿಸಲಾಗುತ್ತದೆ. ಇದರ ಪಕ್ಕದಲ್ಲಿ ಇಂದ್ರರ ಮನೆ ಹಾಗೂ ಪಂಚಲಿಂಗೇಶ್ವರ ದೇವಸ್ಥಾನವಿದೆ. ಇದು ಮೂಡಬಿದಿರೆ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ವಿಟ್ಲದ ಖಾಸಗಿ ಬಸ್ಸು ತಂಗುದಾಣದಿಂದ ಪುತ್ತೂರು ರಸ್ತೆಯಲ್ಲಿ ನೂರು ಮೀಟರ್ ಸಾಗಿದರೆ ಈ ಬಸದಿಯನ್ನು ಸಂಪರ್ಕಿಸಬಹುದು. ಇದು ತಾಲೂಕು ಕೇಂದ್ರದಿಂದ ಸುಮಾರು ಹದಿನೇಳು ಕಿ.ಮೀ. ದೂರದಲ್ಲಿದೆ. ಇಲ್ಲಿ ಗರ್ಭಗುಡಿ ಮತ್ತು ಅದರ ಎದುರಿನ ಮಂಟಪವು ಶಿಲಾಮಯಗೊಂಡಿದ್ದು, ತಾಮ್ರದ ಹೊದಿಕೆ ಮತ್ತು ಹೊರಗಿನ ಜಗಲಿಗೆ ಹಂಚಿನ ಮಾಡನ್ನು ಮಾಡಲಾಗಿದೆ. ಈ ಬಸದಿಗೆ ಮೇಗಿನ ನೆಲೆ ಇದೆ. [೧]

ವಿಗ್ರಹಗಳು[ಬದಲಾಯಿಸಿ]

24ನೇ ತೀರ್ಥಂಕರನಾದ ವರ್ಧಮಾನ ಅಥವಾ ಮಹಾವೀರನ ಪ್ರತಿಮೆಯಿದೆ. ಪದ್ಮಾವತಿ ದೇವಿ ಮತ್ತು ಜ್ವಾಲಾಮಾಲಿನಿ ದೇವಿಯ ಮೂರ್ತಿಗಳಿವೆ.

ನಿರ್ಮಾಣ[ಬದಲಾಯಿಸಿ]

ಈ ಬಸದಿಯನ್ನು ಪೂಜ್ಯ ಮಂಜಯ್ಯ ಹೆಗ್ಗಡೆಯವರ ಪೂರ್ವಜರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದರೆಂದು ಹೇಳಲಾಗುತ್ತದೆ.

ಆಚರಣೆ[ಬದಲಾಯಿಸಿ]

24ನೇ ತೀರ್ಥಂಕರನಾದ ವರ್ಧಮಾನ ಅಥವಾ ಮಹಾವೀರನ ಪ್ರತಿಮೆಯಿದ್ದು, ನಿತ್ಯವೂ ಪೂಜೆ ನಡೆಯುತ್ತದೆ. ಇಲ್ಲಿ ಪದ್ಮಾವತಿ ದೇವಿ ಮತ್ತು ಜ್ವಾಲಾಮಾಲಿನಿ ದೇವಿಯ ಮೂರ್ತಿಗಳಿವೆ. ಇದಕ್ಕೆ ಮಾನಸ್ತಂಭ ಇಲ್ಲ. ಬಸದಿಯ ಹಿಂಭಾಗದಲ್ಲಿ ಒಂದು ಪಾರಿಜಾತ ಹೂವಿನ ಗಿಡವಿದ್ದು, ಉಳಿದ ಹೂವಿನ ಗಿಡಗಳನ್ನೂ ಬೆಳೆಸಲಾಗಿದೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಇಕ್ಕೆಲಗಳ ಗೋಪುರವನ್ನು ಶ್ರಾವಕರಿಗೆ ವಿಶ್ರಾಂತಿ ಪಡೆಯಲು ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ಎಡ ಬದಿಯ ಗೋಪುರದ ಗೋಡೆಯಲ್ಲಿ ಎಲೆಕ್ಟ್ರಾನಿಕ್ ಡೋಲನ್ನು ಇರಿಸಲಾಗಿದೆ. ಈ ಬಸದಿಯನ್ನು ಪ್ರವೇಶಿಸುವಾಗ ದ್ವಾರಪಾಲಕರ ಕಲ್ಲಿನ ಮೂರ್ತಿ ಅಥವಾ ವರ್ಣಚಿತ್ರಗಳು ಕಂಡು ಬರುವುದಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪವಿದ್ದು ಜಯಘಂಟೆ, ಜಾಗಟೆಗಳನ್ನು ಒಳಗೆ ಒಳಗಿನ ಮಂಟಪದಲ್ಲಿ ತೂಗಿ ಹಾಕಲಾಗಿದೆ. ಇಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪವೆಂದು ಕರೆಯುತ್ತಾರೆ.

ಶ್ರುತ, ಪದ್ಮಾವತಿ ದೇವಿ ಮತ್ತು ಜ್ವಾಲಾಮಾಲಿನಿಯನ್ನು ಯಕ್ಷಿಯರನ್ನಾಗಿ ಪೂಜಿಸಲಾಗುತ್ತದೆ. ಮಾತೆ ಪದ್ಮಾವತಿ ದೇವಿಯ ಮೂರ್ತಿಯು ಈಗ ಪಶ್ಚಿಮಕ್ಕೆ ಮುಖ ಮಾಡಿಕೊಂಡಿದೆ. ಆದರೆ ಅದನ್ನು ಉತ್ತರಕ್ಕೆ ಮುಖ ಮಾಡುವ ಪ್ರಸ್ತಾಪ ಇದೆ. ಇವುಗಳಿಗೆ ನಿತ್ಯವೂ ಅಲಂಕಾರ ಮಾಡಿ ಪೂಜೆ ನಡೆಸಲಾಗತ್ತಿದ್ದು, ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ. ಇಲ್ಲಿ ಅಮ್ಮನವರೆದುರು ಹೊಂಬುಚ್ಚದಂತೆ ಹೂಹಾಕಿ ನೋಡುವ ಕ್ರಮವಿದೆ. ಹಾಗೂ ಹರಕೆ ಹೇಳಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆಂಬ ನಂಬಿಕೆ ಜನರಲ್ಲಿದೆ. ಇಲ್ಲಿನ ಜಿನಬಿಂಬದ ಮೇಲೆ ಓದಲು ಸಾಧ್ಯವಾಗದ ಅಸ್ಪಷ್ಟ ಬರವಣಿಗೆ ಇದೆ. ಪದ್ಮಾಸನ ಭಂಗಿಯಲ್ಲಿರುವ ಇಲ್ಲಿನ ಮೂಲಬಿಂಬವು ಬಿಳಿಶಿಲೆಯಿಂದ ಮಾಡಲ್ಪಟ್ಟಿದ್ದು, ಸುಮಾರು ಎರಡೂವರೆ ಅಡಿ ಎತ್ತರವಿದೆ. ಮೂಲ ಸ್ವಾಮಿಯ ಸುತ್ತಲೂ ಮಾಲೆದೀಪದ ಅಲಂಕಾರ ಇದೆ. ಮೂಲಸ್ವಾಮಿಗೆ ನಿತ್ಯವೂ ಕ್ಷೀರಾಭೀಷೇಕ, ಜಲಾಭಿಷೇಕ, ಯಾರಾದರೂ ಹೇಳಿದರೆ ಪಂಚಾಮೃತ ಅಭಿಷೇಕಗಳನ್ನು ಮಾಡಲಾಗುತ್ತದೆ. ಮೂಲಸ್ವಾಮಿಯ ಬಿಂಬಕ್ಕೆ ಒಮ್ಮೆ ವಜ್ರಲೇಪನ ಮಾಡಲಾಗಿದೆ. ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಏನಾದರೂ ಹರಕೆ ಹೇಳಿದರೆ ವಿಶೇಷ ಪೂಜೆ ನಡೆಸಲಾಗುತ್ತದೆ. ವಿಶೇಷ ಹಬ್ಬಗಳಾದ ನವರಾತ್ರಿ, ಜೀವದಯಾಷ್ಟಮಿ, ನೂಲಹುಣ್ಣಿಮೆ ಹಾಗೂ ವಿಜಯದಶಮಿಯಂದು ಭತ್ತದ ತೆನೆ ಕಟ್ಟುವ ಕ್ರಮಗಳನ್ನು ಆಚರಿಸಲಾಗುತ್ತದೆ. ಬಸದಿಯ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದ್ದು ಅಲ್ಲಿ ನಾಗನಕಲ್ಲು, ತ್ರಿಶೂಲಗಳನ್ನು ಬೇರೆ ಬೇರೆ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಹಿಂಭಾಗದಲ್ಲಿ ಒಂದು ಶೀಲಾಶಾಸನವಿದೆ . ಇಲ್ಲಿ ಅಷ್ಟದಿಕ್ಪಾಲಕರ ಕಲ್ಲುಗಳು ಕಂಡು ಬರುವುದಿಲ್ಲ. ಬಸದಿಯ ಮೂರು ಬದಿಗಳಲ್ಲಿ ಮಾತ್ರ ಮುರಕಲ್ಲಿನಿಂದ ಕಟ್ಟಿದ ಭದ್ರವಾದ ಪ್ರಾಕಾರ ಗೋಡೆಯಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರ ದರ್ಶನ (೧ ed.). ಉಜಿರೆ: ಮಂಜುಶ್ರೀ ಪಿಂಟರ್ಸ್. p. ೩೧೧-೩೧೨.