ವಿಷಯಕ್ಕೆ ಹೋಗು

ಸದಸ್ಯ:Shravya gowda123/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೇಲೂರು

ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ವರ್ಷ ೨೦೦೫ರಲ್ಲಿ ಆರ್ಖಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ.[೧] ಈ ದೇವಾಲಯವನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದೂ, ಸೌಮ್ಯಕೇಶವಸ್ವಾಮಿ ದೇವಸ್ಥಾನವೆಂದೂ ಕರೆಯುವ ವಾಡಿಕೆ ಇರುವುದಾಗಿ ಸ್ಥಳೀಯ ಜನರಿಂದ ಕಂಡು ಬರುತ್ತದೆ.


ಇತಿಹಾಸ

ಇದನ್ನು ಹಿ೦ದೆ 'ವೇಲುಪುರ'ಎ೦ದು ಕರೆಯುತ್ತಿದ್ದರು.ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಶುರುವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ ಆನೆ ಬಾಗಿಲು ಎಂದು ಕರೆಯುತ್ತಾರೆ.