ಸದಸ್ಯ:Sharoona coelho/sandbox

ವಿಕಿಪೀಡಿಯ ಇಂದ
Jump to navigation Jump to search

ಹಾರ್ಸಿ ಹಿಲ್ಸ್


ನಗರದ ಒತ್ತಡದ ಬದುಕಿನಿಂದ ಹೊರಬರಲು ‘ಹಾರ್ಸಿ ಹಿಲ್ಸ್’ ಹೇಳಿ ಮಾಡಿಸಿದ ಜಾಗ. ಪ್ರಕೃತಿಯ ಚೆಲುವಿನಿಂದ ಕೂಡಿರುವ ಇಲ್ಲಿ ಕೆಲವೇ ಗಂಟೆ ಕಳೆದರೂ ಎಲ್ಲ ಜಂಜಾಟಗಳನ್ನು ಮರೆಯಬಹುದು. ವಿಶಾಲವಾಗಿ ಮೈ ಚಾಚಿರುವ ಬೆಟ್ಟ ಸಾಲುಗಳು, ಎಲ್ಲೆಡೆ ಇರುವ ಹಚ್ಚ ಹಸಿರಿನ ಹೊದಿಕೆ ಎಂತಹವರನ್ನೂ ಬೆರಗುಗೊಳಿಸುತ್ತದೆ. ಸಮುದ್ರ ಮಟ್ಟದಿಂದ ೧,೨೬೫ ಮೀಟರ್ ಎತ್ತರದಲ್ಲಿರುವ ಈ ಪ್ರದೇಶಕ್ಕೆ ಯಾವುದೇ ಋತುವಿನಲ್ಲಿ ಭೇಟಿ ನೀಡಬಹುದು. ಚಳಿಗಾಲ ಹಾಗೂ ಮಳೆಗಾಲದಲ್ಲಂತೂ ದಟ್ಟ ಮಂಜು ಆವರಿಸಿಕೊಂಡಿರುವುದರಿಂದ ಬೇರೊಂದು ಲೋಕಕ್ಕೆ ಬಂದಂತಹ ಅನುಭವವಾಗುತ್ತದೆ. ಬೆಟ್ಟದ ಅಂಚು ತಲುಪಲು ನಿಸರ್ಗದ ಮಡಿಲಲ್ಲಿ ಸುಮಾರು ಹತ್ತು ಕಿ.ಮೀ. ಪಯಣಿಸಬೇಕು. ಇಲ್ಲಿನ ಕಿರಿದಾದ ಕಾಂಕ್ರೀಟ್ ರಸ್ತೆಯಲ್ಲಿ ಸಾಗುತ್ತಿದ್ದರೆ ಪ್ರಕೃತಿಯ ಹಲವು ಮುಖಗಳು ಕಣ್ಮುಂದೆ ಅನಾವರಣಗೊಳ್ಳುತ್ತವೆ. ನೀಲಗಿರಿ, ಜಕಾರಂದಾ, ಅಲಮಂಡಾ, ರೋಸ್ ಟ್ರೀ, ನೀಲಗಿರಿ ಹೀಗೆ ಬಗೆಬಗೆಯ ಗಿಡಗಳ ಸಾಲಿನಲ್ಲಿರುವ ಗುಲ್ಮೊಹರ್ ಅದಕ್ಕೆ ಮತ್ತಷ್ಟು ಅಂದವನ್ನು ತಂದುಕೊಡುತ್ತದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಗಿಡದಿಂದ ಗಿಡಕ್ಕೆ ಹಾರುವ ಮಂಗಗಳು. ಮರಗಳ ಸಾಲಿನಿಂದ ಆಗೊಮ್ಮೆ ಈಗೊಮ್ಮೆ ಬರುವ ಸೂರ್ಯನ ಕಿರಣಗಳನ್ನು ನೋಡುವುದೇ ಬಲು ಸೊಗಸು. ಬೆಟ್ಟದ ಮೇಲಿರುವ ಹೂದೋಟ ಎಂತಹವರಿಗೂ ಖುಷಿ ನೀಡುತ್ತದೆ. ವ್ಯೂ ಪಾಯಿಂಟ್ನಲ್ಲಿ ನಿಂತರೆ ಸೂರ್ಯೋದಯ, ಸೂರ್ಯಾಸ್ತದನೋಟ ಮನಸ್ಸಿನಲ್ಲಿ ಬೇರೂರುತ್ತದೆ. ‘ಹಾರ್ಸಿ ಹಿಲ್ಸ್’ ನೋಡುತ್ತಿದ್ದರೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ನೋಡಿದ ಅನುಭವ ಆಗುತ್ತದೆ. ಎಲ್ಲ ವಯೋಮಾನದವರಿಗೂ ಈ ಸ್ಥಳ ಹೇಳಿ ಮಾಡಿಸಿದಂತಿದೆ. ಸಾಹಸಪ್ರಿಯರಿಗೆ ಚಾರಣ, ರ್ಯಾಫ್ಟಿಂಗ್ ವ್ಯವಸ್ಥೆ, ಮಕ್ಕಳಿಗಾಗಿ ಕಿರು ಆಟದ ಮೈದಾನ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ರೆಸಾರ್ಟ್, ಈಜು ಕೊಳ ಹಾಗೂ ಉಳಿದುಕೊಳ್ಳಲು ಅತ್ಯುತ್ತಮವಾದ ವಸತಿಗೃಹಗಳು ಇವೆ. ಹತ್ತಿರದಲ್ಲೇ ಇರುವ ಗಂಗೋತ್ರಿ ಕೊಳ, ಉದ್ಯಾನ ಮತ್ತು ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಬಹುದು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ‘ಹಾರ್ಸಿ ಹಿಲ್ಸ್’ ಬೆಂಗಳೂರಿನಿಂದ ೧೬೫ ಕಿ.ಮೀ. ದೂರದಲ್ಲಿದೆ. ಇದರಿಂದ ಒಂದು ದಿನದ ಪ್ರವಾಸಕ್ಕೆ ಅಡ್ಡಿಯಿಲ್ಲ. ಕೋಲಾರ ಮಾರ್ಗ ಅಥವಾ ದೇವನಹಳ್ಳಿ, ಶಿಡ್ಲಘಟ್ಟ ಮಾರ್ಗ ಬಳಸಿಕೊಂಡು ಮದನಪಲ್ಲಿ ಮೂಲಕ ಹೋಗಬಹುದು. ಉತ್ತಮ ರಸ್ತೆ ಇರುವುದರಿಂದ ಸ್ವಂತ ವಾಹನದಲ್ಲಿ ೨ರಿಂದ ೩ ಗಂಟೆಯಲ್ಲಿ ತಲುಪಬಹುದು. ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವಾರಾಂತ್ಯಕ್ಕೆ ಬಸ್ ವ್ಯವಸ್ಥೆ ಇದೆ. ಆದರೆ, ಇದಕ್ಕಾಗಿ ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಬೇಕು. ೧೮೪೦ರಲ್ಲಿ ಬ್ರಿಟಿಷ್ ಅಧಿಕಾರಿ ಡಬ್ಲ್ಯು.ಡಿ. ಹಾರ್ಸಿ ಇಲ್ಲಿಗೆ ಭೇಟಿ ನೀಡಿದ್ದರು. ಇದರ ಸೌಂದರ್ಯಕ್ಕೆ ಸೋತು ಅಲ್ಲೇ ಮನೆ ನಿರ್ಮಿಸಿಕೊಂಡಿದ್ದರು. ಪ್ರತಿ ಬೇಸಿಗೆಯನ್ನು ಅಲ್ಲೇ ಕಳೆಯುತ್ತಿದ್ದರು. ಇದರಿಂದಾಗಿ ಈ ಪ್ರದೇಶ ಬೆಳಕಿಗೆ ಬಂತು. ಈ ಕಾರಣಕ್ಕೆ ಈ ಪ್ರದೇಶಕ್ಕೆ ‘ಹಾರ್ಸಿ ಹಿಲ್ಸ್’ ಎಂಬ ಹೆಸರು ಬಂತು. ಈಗ ಈ ಪ್ರದೇಶವನ್ನು ಆಂಧ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಭಿವೃದ್ಧಿಪಡಿಸಿದ್ದು, ಇಲ್ಲಿಗೆ ನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ.