ಸದಸ್ಯ:Sathwikprasad/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಳ್ವಾಸ್ ವಿರಾಸತ್[ಬದಲಾಯಿಸಿ]

ವಿರಾಸತ್ ಎಂದರೆ ‘ಪಾರಂಪರಿಕ ಮೌಲ್ಯ’ ಎಂದರ್ಥ. ಇದು ಸ್ಟಿಕ್‍ಮೆಕೆ ಪ್ರಣೀತ ಕಾರ್ಯಕ್ರಮ. ಸ್ಟಿಕ್‍ಮೆಕೆ ಭಾರತೀಯ ಕಲಾಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಶಾಸ್ತ್ರೀಯವಾಗಿ ಹಂಚುವ ಕಲಾವೇದಿಕೆ. ಆಳ್ವಾಸ್ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗುವುದಕ್ಕಿಂತ ಮೊದಲು ಮೂಡುಬಿದಿರೆಯ ಜನತೆಗಾಗಿ ಪ್ರಯತ್ನಪೂರ್ವಕವಾಗಿ ತಂದ ಕಾರ್ಯಕ್ರಮವಿದು. ಕ್ರಮೇಣ ಸ್ವಂತ ಅಸ್ತಿತ್ವ ಪಡೆದು ಆಳ್ವಾಸ್ ವಿರಾಸತ್ ಎಂದು ರೂಪಾಂತರಗೊಂಡು ಒಂದುವಾರಗಳ ಶಾಸ್ತ್ರೀಯ ನೃತ್ಯ-ಸಂಗೀತಗಳ ರಸದೌತಣವನ್ನು ವಿದ್ಯಾರ್ಥಿಗಳಿಗೂ-ಸಾರ್ವಜನಿಕರಿಗೂ ಉಣಬಡಿಸುತ್ತಿದೆ. ಕಾರ್ಯಕ್ರಮದ ಮೊದಲ ದಿನ ಸಣ್ಣ ಸಭಾ ಕಾರ್ಯಕ್ರಮ ಹಾಗೂ ಪ್ರತಿ ದಿನ ಕಲಾವಿದರ ಸ್ವಾಗತ-ಧನ್ಯವಾದಗಳನ್ನುಳಿದು ಎಲ್ಲೂ ಮಾತುಗಳಿಗೆ ಅವಕಾಶವಿಲ್ಲ. ಗಣ್ಯ ವ್ಯಕ್ತಿಗಳ ದೀಪ ಪ್ರಜ್ವಲನದ ಮೂಲಕ ಪ್ರಾರಂಭವಾಗುವ ಪ್ರತಿ ದಿನದ ಕಾರ್ಯಕ್ರಮಗಳು ದಿನದಲ್ಲಿ ಎರಡು ಅವಧಿಗಳಾಗಿ ವಿಂಗಡಿಸಿ ಮೊದಲ ಅವಧಿ ಶಾಸ್ತ್ರೀಯ-ಜಾನಪದ ಸಂಗೀತಕ್ಕೆ, ಎರಡನೇ ಅವಧಿ ಶಾಸ್ತ್ರೀಯ-ಜಾನಪದ ನೃತ್ಯಕ್ಕೂ ಮೀಸಲು. ದಿನವೊಂದಕ್ಕೆ 30,000 ಕ್ಕಿಂತಲೂ ಹೆಚ್ಚು ಪ್ರೇಕ್ಷಕರು ಸೇರುವ ಆಳ್ವಾಸ್ ವಿರಾಸತ್ ಒಂದುವಾರಗಳ ಕಾಲ ನಡೆಯುವ ಬೃಹತ್ ಸಾಂಸ್ಕøತಿಕ ಉತ್ಸವ. ಆಳ್ವಾಸ್ ವಿರಾಸತ್ ಆಸಕ್ತರ ತಂಡಗಳೇ ದೇಶ-ವಿದೇಶಗಳಲ್ಲಿ ಮೈವೆತ್ತಿದ್ದು ವಿರಾಸತ್ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿಗಳಾಗುತ್ತಿದ್ದಾರೆ. ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾತಂಡಗಳು ಈ ವೇದಿಕೆಯಲ್ಲಿ ಪ್ರದರ್ಶನ ನೀಡಿ ಪುಳಕಿತಗೊಂಡಿವೆ. ಮುಸ್ಸಂಜೆ ಪ್ರಾರಂಭಗೊಂಡು ನಾಲ್ಕು ಗಂಟೆಗಳ ಕಾಲ ರಾತ್ರಿ ಹೊತ್ತಿನ ನೀರವ, ಪ್ರಶಾಂತ ನಿಸರ್ಗದ ಮಡಿಲಲ್ಲಿ ನಡೆಯುವ ಈ ಕಾರ್ಯಕ್ರಮದ ವಿದ್ಯುದ್ದೀಪಾಲಂಕಾರ, ಬೃಹತ್ ಆಲಂಕಾರಿಕ ವೇದಿಕೆ, ಅಪೂರ್ವ ಜನಸ್ತೋಮವೇ ನೋಡುಗರಿಗೆ ರೋಮಾಂಚನವನ್ನೂ, ಸಂಗೀತ-ಕಲಾ ಅನುಭೂತಿಯನ್ನೂ ನೀಡುತ್ತಿದೆ. ಕಲಾವಿದರ ಬದುಕಿಗೆ ಆಸರೆಯಾಗುವ, ಅವರ ಕಲೆಯ ಅನಾವರಣಕ್ಕೆ ವೇದಿಕೆಯಾಗುವ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರೊಬ್ಬರು 1,00,000 ಮೊತ್ತದ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಪ್ರತಿವರ್ಷವೂ ಭಾಜನರಾಗುತ್ತಿದ್ದಾರೆ. ಈಗಾಗಲೇ ಪದ್ಮಭೂಷಣ ಸೋನಾಲ್ ಮಾನ್‍ಸಿಂಗ್, ಪದ್ಮಶ್ರೀ ಝಕೀರ್ ಹುಸೇನ್, ಪಂಡಿತ್ ಹರಿಪ್ರಸಾದ್ ಚೌರಾಸಿಯ, ಪದ್ಮಶ್ರೀ ಕದ್ರಿ ಗೋಪಾಲನಾಥ್, ಪದ್ಮವಿಭೂಷಣ ಬಾಲಮುರಳೀಕೃಷ್ಣ, ಪದ್ಮಭೂಷಣ ಕೆ.ಜೆ.ಜೇಸುದಾಸ್, ಪದ್ಮಶ್ರೀ ಅಜೋರ್ಯ ಚಕ್ರವರ್ತಿ, ಪದ್ಮಭೂಷಣ ಡಾ.ಪದ್ಮಾಸುಬ್ರಹ್ಮಣ್ಯಂ, ಪದ್ಮಶ್ರೀ ಪದ್ಮಭೂಷಣ ಡಾ.ತೀಜನ್ ಬೈ, ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಆಲಿಖಾನ್,[೧] ಪದ್ಮಶ್ರೀ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಸಂದರ್ಭದಲ್ಲಿ ‘ಆಳ್ವಾಸ್ ವರ್ಣವಿರಾಸತ್ ‘ ಎಂಬ ಚಿತ್ರಕಲೆ-ಶಿಲ್ಪಕಲೆಗಳ ರಚನೆ-ಪ್ರದರ್ಶನಗಳ ಶಿಬಿರವನ್ನು ಏರ್ಪಡಿಸಲಾಗುತ್ತಿದೆ. ವೃತ್ತಿ ಕಲಾವಿದರಿಂದ ತೊಡಗಿ ರಾಷ್ಟ್ರೀಯ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು ಈ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಕೈಚಳಕ, ಪ್ರತಿಭೆಗಳನ್ನು ಅನಾವರಣ ಮಾಡುತ್ತಿದ್ದಾರೆ. ಇಲ್ಲಿಯೂ ಶ್ರೇಷ್ಠ ಕಲಾವಿದರೊಬ್ಬರನ್ನು 25,000 ನಗದಿನೊಂದಿಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

  1. http://www.daijiworld.com/news/news_disp.asp?n_id=289064