ಸದಸ್ಯ:Samskruthibl/sandbox
ಕನ್ನಡ
[ಬದಲಾಯಿಸಿ]ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ.[೯] ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನಗಳು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನಗಳ ಮಾತೃಭಾಷೆ ಕನ್ನಡವಾಗಿದೆ. ಕದಂಬ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ [೧೦] ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ಹೆಚ್ಚಿನ ರಾಜಾಶ್ರಯ ಪಡೆಯಿತು.[೧೧][೧೨] ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.[೧೩]ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.ಭಾಷಿಕ ಚರಿತ್ರೆ ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು; ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ, ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.[೧೪] ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ. ಪ್ರಾಚೀನ ಹಳಗನ್ನಡ - ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ ಹಳಗನ್ನಡ - ೭ರಿಂದ ೧೨ನೆಯ ಶತಮಾನದವರೆಗೆ ನಡುಗನ್ನಡ - ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ ಹೊಸಗನ್ನಡ - ೧೮ನೆಯ ಶತಮಾನದ ಆದಿಯಿಂದ ಈಚೆಗೆ ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ. ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ.[೧೫][೧೬][೧೭][೧೮][೧೯] ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥವಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ
ಸಂಸ್ಕೃತದ ಪ್ರಭಾವ
[ಬದಲಾಯಿಸಿ]ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು.ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ. ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ. ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.
ಸಾಹಿತ್ಯ
[ಬದಲಾಯಿಸಿ]ಹಳಗನ್ನಡ ==== ತ್ರಿಪದಿ ಛಂಧಸ್ಸಿನಲ್ಲಿ ರಚನೆಗೊಂಡ ಕನ್ನಡದ ಮೊದಲ ಕವಿತೆ ಕ್ರಿ.ಶ. ೭೦೦ರ ಕಪ್ಪೆ ಅರಭಟ್ಟನ ಶಾಸನದಲ್ಲಿ ಕಂಡುಬರುತ್ತದೆ. ರಾಜಾ ನೃಪತುಂಗ ಅಮೋಘ ವರ್ಷ ರಚಿಸಿದ ಕವಿರಾಜ ಮಾರ್ಗಂ ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಒಳಗೊಂಡಂಥ ಈ ಕೃತಿ ಆ ಕಾಲದಲ್ಲಿ ಅಸ್ತಿತ್ವದಲ್ಲಿ ಕನ್ನಡದ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದೆ. ಈ ಕೃತಿ ಕ್ರಿ.ಶ. ೬ನೆಯ ಶತಮಾನದ ರಾಜಾ ದುರ್ವಿನೀತನ ಬಗ್ಗೆಯೂ ಕ್ರಿ. ೬೩೬ರ ಐಹೊಳೆ ಶಾಸನ ಬರೆದ ರವಿಕೀರ್ತಿಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ. ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಕೃತಿ ವ್ಯಾಕರಣವನ್ನು ವಿವರಿಸುವಂಥದ್ದೂ ವಿವಿಧ ಕನ್ನಡ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುವುದರಿಂದಲೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಅದಕ್ಕಿಂತಲೂ ಕೆಲ ಶತಮಾನಗಳ ಹಿಂದೆಯೇ ಆರಂಭಗೊಂಡಿರಬಹುದೆಂದು ಊಹಿಸಬಹುದಾಗಿದೆ.ಕ್ರಿ.ಶ. ೯೦೦ರಲ್ಲಿ ಶಿವಕೋಟ್ಯಾಚಾರ್ಯರು ರಚಿಸಿದ ವಡ್ಡಾರಾಧನೆ ಎಂಬ ಗದ್ಯಕೃತಿಯಲ್ಲಿ ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳು ಲಭ್ಯವಾಗತವೆ
ನಡುಗನ್ನಡ
[ಬದಲಾಯಿಸಿ]ಹದಿನೈದನೆಯ ಮತ್ತು ಹದಿನೆಂಟನೆಯ ಶತಮಾನದ ನಡುವಣ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯದ ಉಚ್ಛ್ರಾಯ ಕಾಲವಾಗಿತ್ತು. ಆ ಕಾಲದ ಅತ್ಯಂತ ಶ್ರೇಷ್ಠನೆನಿಸಿಕೊಂಡ ಕವಿ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಎಂಬ ಕೃತಿಯೊಂದಿಗೆ ವಿಶ್ವವಿಖ್ಯಾತನಾದನು. ಮಹಾಭಾರತವನ್ನು ಆಧರಿಸಿದ ಕೃತಿ ಭಾಮಿನಿ ಷಟ್ಪದಿ ಛಂದಸ್ಸಿನ ಪದ್ಯಗಳನ್ನೊಳಗೊಂಡಿದೆ. ಈ ಕಾಲದಲ್ಲಿ ಕನ್ನಡದ ಮೇಲೆ ಸಂಸ್ಕೃತದ ಧಾರ್ಮಿಕವೂ ಸಾಮಾಜಿಕವೂ ಆದ ಪ್ರಭಾವ ಮೂರ್ಧನ್ಯಾವಸ್ಥೆಯಲ್ಲಿತ್ತು. ಈ ಕಾಲದಲ್ಲಿ ರಾಜ್ಯಾಡಳಿತ ಮತ್ತು ಜಮೀನ್ದಾರಿಗೆ ಸಂಬಂಧಿಸಿದ ಮರಾಠಿ ಮತ್ತು ಹಿಂದಿ ಭಾಷೆಯ ಹಲವಾರು ಶಬ್ದಗಳು ಕನ್ನಡದಲ್ಲಿ ಬಳಕೆಗೆ ಬಂದುವು. ಕನಕ ದಾಸರು, ಪುರಂದರ ದಾಸರು, ನರಸಿಂಹ ತೀರ್ಥರು, ವ್ಯಾಸತೀರ್ಥರು, ಶ್ರೀಪಾದ ರಾಯರು, ವಾದಿರಾಜ ತೀರ್ಥರು, ವಿಜಯ ದಾಸರು, ಜಗನ್ನಾಥ ದಾಸರು, ಪ್ರಸನ್ನವೆಂಕಟ ದಾಸರೇ ಮೊದಲಾದ ವೈಷ್ಣವ ಸಂತರು ಕನ್ನಡದಲ್ಲಿ ದಾಸರ ಪದಗಳೆಂದು ಖ್ಯಾತವಾದ ಶ್ರೇಷ್ಠ ಭಕ್ತಿಕಾವ್ಯಗಳನ್ನು ರಚಿಸಿದರು. . ಅವುಗಳಲ್ಲಿ ಹೆಚ್ಚಿನವು ಇಂದಿಗೆ ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಆದರಿಸಲ್ಪಡುವ ಕೃತಿಗಳಾಗಿವೆ ಕನಕ ದಾಸರ ರಾಮಧಾನ್ಯ ಚರಿತೆ ಎಂಬ ಕೃತಿಯಲ್ಲಿ ಧಾನ್ಯಗಳ ರೂಪಕದೊಂದಿಗೆ ವರ್ಗ ಸಂಘರ್ಷವನ್ನು ಸೂಚಿಸಿರುವುದು ಮನಗಾಣಬಹುದು. ಇಲ್ಲಿ ಹೆಸರಿಸಲಾದ ಮತ್ತು ಇತರ ವೈಷ್ಣವ ಸಂತರು / ಹರಿದಾಸರು ತಮ್ಮ ದಾಸಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೂ ಆ ಮೂಲಕ ಕರ್ಣಾಟಕ ಸಂಗೀತಕ್ಕೂ ಶ್ರೇಷ್ಠವೆನಿಸಿದ ಕೊಡೂಗೆಗಳನ್ನು ನೀಡಿದರು. ಇವರಲ್ಲಿ ಅತ್ಯಂತ ಪ್ರಸಿದ್ಧರಾದವರು ಕರ್ಣಾಟಕ ಸಂಗೀತದ ಪಿತಾಮಹ ಎಂದು ಖ್ಯಾತರಾದ ಪುರಂದರದಾಸರು.
ಹೊಸಗನ್ನಡ
[ಬದಲಾಯಿಸಿ]ಹತ್ತೊಂಬತ್ತನೆಯ ಶತಮಾನದ ನಂತರದ ಕನ್ನಡ ಕೃತಿಗಳ ಭಾಷೆಯಲ್ಲಿ ಗಮನಾರ್ಹ ವ್ಯತ್ಯಯ ಕಂಡುಬಂದಿತು. ಈ ಬಗೆಯಲ್ಲಿ ರೂಪುಗೊಂಡ ಕನ್ನಡ ಭಾಷೆಯನ್ನು ಹೊಸಗನ್ನಡ ಎಂದು ಕರೆಯುತ್ತೇವೆ. ಹೊಸಗನ್ನಡ ಬರಹಗಾರರಲ್ಲಿ ಅತ್ಯಂತ ಪ್ರಮುಖನಾದವನು ಮುದ್ದಣ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧನಾದ ನಂದಳಿಕೆ ಲಕ್ಷ್ಮಿನಾರಣಪ್ಪ. ಮುದ್ದಣನ ಕಾವ್ಯ ಕನ್ನಡದಲ್ಲಿ ಹೊಸದೊಂದು ಪರಂಪರೆಗೆ ನಾಂದಿಯಾಗಿದ್ದರೂ ಭಾಷಾವಿದಗ್ಧರು ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು ಎಂಬ ಕೃತಿಯನ್ನು ಹೊಸಗನ್ನಡದ ಮೊದಲ ಕೃತಿಯನ್ನು ಗುರುತಿಸುತ್ತಾರೆ. ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. *೧೮೨೦ರಲ್ಲಿ ಜೋನ್ ಹಾನ್ಸ್ ಬೈಬಲಿನ ಕನ್ನಡದ ಅನುವಾದವನ್ನು ಪ್ರಕಟಿಸಿದರು. ಅಚ್ಚುಗೊಂಡ ಮೊದಲ ಕಾದಂಬರಿ ಪಿಲ್‍ಗ್ರಿಂಸ್ ಪ್ರೋಗ್ರೆಸ್ ಎಂಬ ಕೃತಿಯಾಗಿದೆ. ಕಾನರೀಸ್ ಪ್ರೋವರ್ಬ್ಸ್ (ಕನ್ನಡ ಗಾದೆಗಳು) ಎಂಬ ಕೃತಿಯೂ ಮೇರಿ ಮಾರ್ತ್ ಷೆರ್ವುಡ್ ಬರೆದ ದ ಹಿಸ್ಟರಿ ಆಫ್ ಹೆನ್ರಿ ಅಂಡ್ ಹಿಸ್ ಬೇರರ್ ಎಂಬ ಕೃತಿಯೂ ಕ್ರಿಸ್ತಿಯನ್ ಗೋತ್ಲೋವ್ ಬಾರ್ತನು ಬರೆದ ಬೈಬಲ್ ಸ್ಟೋರೀಸ್ ಮತ್ತು ಕನ್ನಡ ಸ್ತೋತ್ರ ಪುಸ್ತಕ ಇಲ್ಲಿ ಪ್ರಕಾಶನಗೊಂಡವು. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಪ್ರಮುಖವಾದುವು ನವೋದಯ. ನವ್ಯ, ನವ್ಯೋತ್ತರ, ದಲಿತ, ಬಂಡಾಯ ಎಂಬಿವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಲಿದೆ. ಅಷ್ಟಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಆದ ಕುವೆಂಪು, ದ.ರಾ.ಬೇಂದ್ರೆ, ವಿ.ಕೃ. ಗೋಕಾಕ್ ಮುಂತಾದ ಕವಿಗಳೂ ಸಾಹಿತಿಗಳೂ ಬಾಳಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಸಾರಿ ಜ್ಞಾನಪೀಠ ಪುರಸ್ಕಾರ ದೊರೆತಿದೆ. ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರವು ಎಂಟು ಬಾರಿ ಕನ್ನಡ ಭಾಷೆಗೆ ದೊರೆಯಿತು. ಹಲವು ಬಾರಿ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರಗಳೂ ಕನ್ನಡ ಭಾಷೆಗೆ ಲಭ್ಯವಾಗಿವೆ. ದಿಲ್ಲಿಯ ಕೆ. ಕೆ. ಬಿರ್ಲಾ ಫೌಂಡೇಷನ್ ಕೊಡಮಾಡುವ ಸರಸ್ವತಿ ಸಮ್ಮಾನವೂ ಕನ್ನಡ ಭಾಷೆಗೆ ಲಭ್ಯವಾಗಿದೆ. ಎಸ್. ಎಲ್. ಭೈರಪ್ಪನವರ ಮತ್ತು ಶಿವರಾಮ ಕಾರಂತರ ಕೃತಿಗಳು ಭಾರತದ ಹದಿನಾಲ್ಕು ಭಾಷೆಗಳಲ್ಲಿ ಅನುವಾದಗೊಂಡಿವೆ.
ಕನ್ನಡ ಉಪಭಾಷೆಗಳು
[ಬದಲಾಯಿಸಿ]ಬರೆಯಲು ಉಪಯೋಗಿಸುವ ಮತ್ತು ಮಾತನಾಡುವ ಭಾಷೆಯಲ್ಲಿ ಇರುವ ವ್ಯತ್ಯಾಸ ಇತರ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲಿಯೂ ಇದೆ. ಮಾತನಾಡಲು ಉಪಯೋಗಿಸುವ ಕನ್ನಡ ಪ್ರದೇಶಕ್ಕೆ ಅನುಸಾರವಾಗಿ ಬದಲಾಗುತ್ತದೆ. ಆದರೆ ಬರೆಯಲು ಉಪಯೋಗಿಸುವ ಕನ್ನಡ ಕರ್ಣಾಟಕದ ಹೆಚ್ಚಿನ ಎಲ್ಲೆಡೆ ಒಂದೇ ಬಗೆಯದಾಗಿದೆ. ಕುಂದಗನ್ನಡ, ಹವಿಗನ್ನಡ, ಅರೆಭಾಷೆ, ಸೋಲಿಗ ಕನ್ನಡ ಎನ್ನುವಂಥ ಇಪ್ಪತ್ತರಷ್ಟು ಉಪಭಾಷೆಗಳು ಕನ್ನಡಕ್ಕಿವೆ ಇವುಗಳಲ್ಲಿ ಕುಂದಗನ್ನಡ ಕುಂದಾಪುರದ ಸಮೀಪ ಮಾತನಾಡಲು ಉಪಯೋಗಿಸುವ ಭಾಷೆಯಾಗಿದ್ದು ಇದರಂತೆಯೇ ಹವ್ಯಕ ಮತ್ತು ಸೋಲಿಗ ಕನ್ನಡ ಆಯಾ ಸಮುದಾಯಕ್ಕೆ ಸೇರಿದವರು ಮಾತನಾಡಲು ಉಪಯೋಗಿಸುವ ಭಾಷೆಯಾಗಿದೆ. ಹೀಗೆ ಪ್ರದೇಶಕ್ಕೂ ಸಮುದಾಯಕ್ಕೂ ಅಳವಟ್ಟ ಇತರ ಕನ್ನಡ ಉಪಭಾಷೆಗಳೆಂದರೆ ನಾಡವ ಕನ್ನಡ, ಮಲೆನಾಡ ಕನ್ನಡ, ಧಾರವಾಡದ ಕನ್ನಡ ಮುಂತಾದುವುಗಳು. ಕನ್ನಡದ ಒಂದು ಉಪಭಾಷೆಯಂತೆಯೇ ತೋರಿಬರುವ ಭಾಷೆಯೆಂದರೆ ಬಡಗ ಭಾಷೆ. ಬಡಗ ಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ೧೮೯೦ರಲ್ಲೇ ಉಪಯೋಗಿಸಲಾಗುತ್ತಿತ್ತು. ಬಡಗ ಮಾತ್ರವಲ್ಲದೆ ಕನ್ನಡದೊಂದಿಗೆ ನಿಕಟ ಸಾಮ್ಯವನ್ನು ಹೊಂದಿರುವಂಥ ಭಾಷೆಗಳಾಗಿವೆ ಹೊಲಿಯ ಮತ್ತು ಉರಾಳಿ.