ಸದಸ್ಯ:Rashwin N/sandbox
ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ
ನಮ್ಮ ವಿಶ್ವ ಹಿಗ್ಗುತ್ತಿದೆಯೇ? ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ? ಅಥವಾ ಜಗತ್ತಿಗೆ ಮೊದಲೂ ಇಲ್ಲ, ಕೊನೆಯೂ ಇಲ್ಲದೆ ಸ್ಥಿರವಾಗಿ ಹೇಗಿದೆಯೋ ಸದಾ ಹಾಗೇ ಇದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಕಳೆದ ವಾರ ಅಮೇರಿಕಾದ ಹಾರ್ವರ್ಡ್ -ಸ್ಮಿತ್ಸೋನಿಯನ್ ಖಗೋಳಭೌತ ಸಂಸ್ಥೆಯ ವಿಜ್ಞಾನಿಗಳು ಈ ವಿಷಯ ಕುರಿತಂತೆ ಅಧ್ಬುತ ಶೋಧನೆಯೊಂದಕ್ಕೆ ಕಾರಣರಾಗಿದ್ದಾರೆ. 'ವಿಶ್ವ ಹಿನ್ನೆಲೆ ಕಿರಣ' (ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ರೇಡಿಯೇಷನ್) ಗಳಲ್ಲಿ ಅಡಕವಾಗಿರುವ 'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದು ನಮ್ಮ 'ವಿಶ್ವ ಹಿಗ್ಗುತ್ತಿರುವ (ಕಾಸ್ಮಿಕ್ ಇನ್ ಫ಼್ಲೆಷನ್) ಸಿದ್ದಾಂತ'ಕ್ಕೆ ದೊಡ್ಡ ಪುರಾವೆ ಒದಗಿಸಿದೆ. ಈ ಶೋಧನೆ ಹಿಗ್ಸ್-ಬೋಸಾನ್ ಮೂಲಕಣದ ಆವಿಷ್ಕಾರದಷ್ಟೇ ಮಹತ್ವ ಹೊಂದಿದೆ. ಈ ಆವಿಷ್ಕಾರದಿಂದಾಗಿ 'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳ ಉದ್ಭವಕ್ಕೆ ಕಾರಣವಾಗಿರುವ ಪ್ರಕ್ರಿಯೆಗಳನ್ನು ಅರಿಯಲು ಹಾಗೂ ಮಹಾಸ್ಫೋಟ ಸಮಯದಲ್ಲಿ ವಿಶ್ವದ ಹಿಗ್ಗುವಿಕೆಗೆ ಕಾರಣಗಳನ್ನು ತಿಳಿಯಲು ಸಾಧ್ಯವಾಗುತ್ತದೆ. 'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳು ಮತ್ತು 'ವಿಶ್ವ ಹಿನ್ನೆಲೆ ಕಿರಣ' ಗಳಿಗೂ ಇರುವ ವ್ಯತ್ಯಾಸ ಏನು? ಗುರುತ್ವದ ತರಂಗಗಳು ವಿಶ್ವದೆಲ್ಲೆಡೆ ವ್ಯಾಪಿಸಿದ್ದು ಅಲೆಗಳೋಪಾದಿಯಲ್ಲಿ ಶಕ್ತಿಯನ್ನು ಕೊಂಡೊಯ್ಯುತ್ತವೆ. ಇಂಥಹ ತರಂಗಗಳು ಇವೆಯೆಂದು 1916 ರಲ್ಲಿ ಆಲ್ಬರ್ಟ್ ಐನ್ ಸ್ಟೀನ್ ತನ್ನ 'ಸಾಮಾನ್ಯ ಸಾಪೇಕ್ಷ ಸಿದ್ದಾಂತ' ದಲ್ಲಿ ತರ್ಕಿಸಿದ್ದ. ಗುರುತ್ವದ ತರಂಗಗಳು ಇರುವುದು ಪರೋಕ್ಷವಾಗಿ ತಿಳಿದಿದ್ದರೂ ಅವುಗಳನ್ನು ನೇರವಾಗಿ ಪರೀಕ್ಷಿಸುವುದು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವು ಪದಾರ್ಥವೊಂದರ ಸಣ್ಣಾತಿಸಣ್ಣ ಕಣವಾದ ಪರಮಾಣುವಿಗೆ ಹೋಲಿಸಿದರೆ ಗಾತ್ರದಲ್ಲಿ ದಶಲಕ್ಷ ಪಟ್ಟು ಸಣ್ಣವು. ಉದಾಹರಣೆಗೆ, ಕೆರೆಯೊಂದರ ಮೇಲ್ಭಾಗವನ್ನು ನಾವು ದೂರದಿಂದ ಗಮನಿಸಿದರೆ ಅದು ಪ್ರಶಾಂತವಾಗಿರುವಂತೆ ಕಾಣುತ್ತದೆ. ನಾವು ಅತಿ ಹತ್ತಿರದಿಂದ ನೋಡಿದಾಗ ಮಾತ್ರ ಕೆರೆಯ ನೀರಿನ ಮೇಲ್ಭಾಗದ ಅಲೆಗಳು, ಇತ್ಯಾದಿ ವಿವರಗಳನ್ನು ಗಮನಿಸಲು ಸಾಧ್ಯ. ನಮ್ಮ ವಿಶ್ವ ಸುಮಾರು 1400 ಕೋಟಿ ವರ್ಷಗಳ ಹಿಂದೆ ಮಹಾಸ್ಫೋಟದ ಮೂಲಕ ಅಸ್ತಿತ್ವಕ್ಕೆ ಬಂದಿದೆ. ಮಹಾಸ್ಫೋಟ ಸಂಭವಿಸಿದಾಕ್ಷಣದ ಸೆಕೆಂಡಿನ ನೂರು ಕೋಟಿ ಭಾಗಗಳಲ್ಲಿ ಮೊದಲ ಭಾಗದಲ್ಲಿ ವಿಶ್ವ ಅತಿ ವೇಗೋತ್ಕರ್ಷದಿಂದ ಹಿಗ್ಗತೊಡಗಿ ನಮ್ಮ ದೂರದರ್ಶಕಗಳಿಗೂ ಕಾಣಸಿಗದಷ್ಟು ವ್ಯಾಪಿಸಿತು, ನಂತರ ನಿಧಾನಗೊಂಡಿತು. ಇದನ್ನು ವಿಶ್ವದ ಹಿಗ್ಗುವಿಕೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಉದ್ಭವಿಸಿರುವುದು 'ಆದಿಸ್ವರೂಪದ' ಗುರುತ್ವಾಕರ್ಷಣ ತರಂಗಗಳು'. ಇದಾದ 3,80,000 ವರ್ಷಗಳ ನಂತರ, ಪದಾರ್ಥವು ಒಗ್ಗೂಡತೊಡಗಿ ಸ್ಫೋಟದ ಶಕ್ತಿಯು ಎಲ್ಲೆಡೆ ಅಡೆತಡೆಯಿಲ್ಲದೆ ಪಸರಿಸತೊಡಗಿತು. ಈ ಅವಶೇಷ ಶಕ್ತಿಯನ್ನೇ 'ವಿಶ್ವ ಹಿನ್ನೆಲೆ ಕಿರಣ' ಎಂದು ಕರೆಯುವುದು. ಸಾಮಾನ್ಯ ಸಾಪೇಕ್ಷತೆ ಎಂದರೇನು? ಗಣಿತದ ವಿಧಾನದ ಮುಖೇನಾ ಗುರುತ್ವ ಶಕ್ತಿಯನ್ನು ಐನ್ ಸ್ಟೀನ್ ವಿವರಿಸಿದ್ದು, ಅದನ್ನು ಸಾಮಾನ್ಯ ಸಾಪೇಕ್ಷ ಸಿದ್ದಾಂತ ಎಂದು ಕರೆದಿದ್ದಾನೆ. ಇದರಲ್ಲಿ 'ಸ್ಥಳ-ಕಾಲ' ಎಂಬ ಎರಡು ಪರಿಕಲ್ಪನೆಗಳು ಮುಖ್ಯ. ಪದಾರ್ಥವೊಂದರಲ್ಲಿ ದ್ರವ್ಯ ಮತ್ತು ಶಕ್ತಿ ಇರುವುದು ನಮಗೆ ತಿಳಿದಿದೆ. ದ್ರವ್ಯ ಮತ್ತು ಶಕ್ತಿ ಇವೆರಡೂ 'ಸ್ಥಳ-ಕಾಲ'ಗಳ ನಿರಂತತೆಯನ್ನು ವಕ್ರಗೊಳಿಸುತ್ತವೆ. ಉದಾಹರಣೆಗೆ, ನೀರು ಅಥವಾ ರಟ್ಟಿನ ಮೇಲೆ ಅತಿಭಾರದ ವಸ್ತುವೊಂದನ್ನು ಇಟ್ಟಾಗ ನೀರು ಅಥವಾ ರಟ್ಟು ವಕ್ರಗೊಳ್ಳುವಂತೆ. ಈ ವಕ್ರತೆಯು ಗುರುತ್ವಾಕರ್ಷಣ ಶಕ್ತಿಯನ್ನು ಉಂಟು ಮಾಡುತ್ತದೆ. ಗುರುತ್ವ ತರಂಗಗಳು 'ಸ್ಥಳ-ಕಾಲ'ಗಳ ನಿರಂತತೆಯಲ್ಲಿರುವ ಸಣ್ಣಾತಿಸಣ್ಣ ಅಲೆಗಳು. ಗುರುತ್ವ ಶಕ್ತಿಯು ಕಾಲದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ಸಾಪೇಕ್ಷ ಸಿದ್ದಾಂತ ತಿಳಿಸುತ್ತದೆ. ಉದಾಹರಣೆಗೆ, ನಾವೆಲ್ಲಿದ್ದೇವೆಂದು ನಿಖರವಾಗಿ ಹೇಳಲು ಉಪಗ್ರಹ ಭೂಪಟದಲ್ಲಿ ಗುರುತ್ವ ಶಕ್ತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.