ಸದಸ್ಯ:Priyadarshini100/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳೆ ಸಂಬಂಧಿ ರೈತರ ಆಚರಣೆಗಳು- ಕರಿಕೊಳ್ಳಿ ಹಾಕುವುದು[ಬದಲಾಯಿಸಿ]

ಗದ್ದೆಯನ್ನು ಕೊಯ್ಲು ಮಾಡುವಾಗ ಪೈರನ್ನು ಸಂಪೂರ್ಣವಾಗಿ ಕಟಾವು ಮಾಡದಿರುವುದು ಒಂದು ವಿಶೇಷ. ಮಲೆನಾಡಿನ ಭಾಗಗಳಲ್ಲಿ ಕೊನೆಯಲ್ಲಿ ಐದು ಸಸಿಗಳನ್ನು ಉಳಿಸುತ್ತಾರೆ. ಕೊಯ್ಲು ಮಾಡಿದ ಹುಲ್ಲನ್ನು ಹೊರೆ ಮಾಡಿ ಬಣವೆಗೆ ಹೊತ್ತು ಸಾಗಿಸುತ್ತಾರೆ. ಐದು ಸಸಿಗಳ ಜಾಗದ ಹತ್ತಿರದ ಕೊನೆಯ ಹೊರೆಯನ್ನು ನಿಶ್ಚಿತ ಮನುಷ್ಯನೊಬ್ಬ ಹೊತ್ತು ಹೊರಡುತ್ತಾನೆ. ಆಗ ಅವನು ಯಾರು ಮಾಡನಾಡಿಸಿದರೂ ಮಾತನಾಡದೆ ಬಣವೆಗೆ ಹಾಕಿ, ಮನೆಯ ಒಲೆಯಲ್ಲಿ ಕೊಳ್ಳಿಯೊಂದನ್ನು ತಂದು ಪ್ರಸ್ತುತ ಗದ್ದೆಗೆ ಹಣಿದು ಬರುತ್ತಾನೆ. ಇದಕ್ಕೆ `ಕರಿಕೊಳ್ಳಿ ಹಾಕುವುದು’ ಎನ್ನುತ್ತಾರೆ. ಇಷ್ಟು ದಿವನ ಪೈರಿನಿಂದ ತುಂಬಿ ತುಳುಕಿದ ಗದ್ದೆ ಬೋಳಾಗಿರುವುದನ್ನು ಕಂಡು ಯಾರೂ ಕಣ್ಣು ಹಾಕಬಾರದೆಂದು ಈ ಆಚರಣೆ.

ಬಯಲು ನಾಡಿನಲ್ಲಿ ಐದು ಸಸಿ ಉಳಿಸಿ ಪೂಜಿಸುವುದನ್ನೇ `ಬೆಳೆಮುಂಬು’ ಎಂದು ಕರೆಯುತ್ತಾರೆ. ಕೊನೆಯಲ್ಲಿನ ಸಸಿಗಳನ್ನು ತುದಿಗಂಟು ಹಾಕಿ ಕಟ್ಟಿ ಕುಡುಗೋಲು ಮಸಗಲ್ಲುಗಳನ್ನಿಟ್ಟು ಪೂಜಿಸಿ ಎಡೆ ಹಿಡಿದು ಊಟ ಮಾಡುತ್ತಾರೆ. ಬೆಳೆಮುಂಬು ಆಚರಣೆಗೆ ದಾಸಯ್ಯ ಪೂಜಾರಿಗಳನ್ನೂ ಆಹ್ವಾನಿಸುವುದುಂಟು. ಆಗ ಜೊತೆ – ಜೊತೆಗೆ ಮಂತ್ರ ಹೇಳುವುದು, ಶಂಖ ಊದುವುದು, ಜಾಗಟೆ ಬಾರಿಸುವುದು ನಡೆಯುತ್ತದೆ. ಬೆಳೆ ಮುಂಬನ್ನೇ ಹೋಲುವಂತಹ ಹತ್ತಿದೇವರ ಆಚರಣೆ ಒಂದಿದೆ. ಮೊದಲ ಬಾರಿಗೆ ಹತ್ತಿ ಬಿಡಿಸುವಾಗ ಆಯ್ದ ಗಿಡವೊಂದಕ್ಕೆ ಪೂಜಿಸಿ ಬಿಡಿಸಿದ ಮೊದಲ ಹತ್ತಿಯನ್ನು ಏರಿಸುತ್ತಾರೆ. ನಂತರ ಪ್ರತಿ ಸಾರಿ ಹಾಗೆಯೇ ಇರುತ್ತದೆ. ಎಲ್ಲ ಗಿಡಗಳನ್ನು ಕತ್ತರಿಸಿ ಹಾಕಿದರೂ ಹತ್ತಿ ದೇವರ ಗಿಡ ಮಾತ್ರ ಮುಂದಿನ ಉಳುಮೆಯಾಗುವ ತನಕ ಹಾಗೆಯೇ ಇರುತ್ತದೆ.

ಪ್ರಸ್ತುತ ಬೆಳೆಮುಂಬು ಮತ್ತು ಹತ್ತಿ ದೇವರ ಪೂಜೆ ಆಚರಣೆಯು ಪ್ರಾಕ್ತನ ಮಾನವನ ನಂಬಿಕೆಯ ಪಳೆಯುಳಿಕೆಯಂತೆ ಕಾಣುತ್ತದೆ. ಧಾನ್ಯಗಳಲ್ಲಿ, ಬೆಳೆಗಳಲ್ಲಿ ಆತ್ಮವಿದೆ. ಅದನ್ನು ಪೂರ್ಣ ಕೊಯ್ದು ಹಾಕಿದರೆ ಪುನಃ ನಮಗೆ ಸಿಕ್ಕಲಾರದು ಎಂಬ ನಂಬಿಕೆಯ ಪರಿಣಾಮವೂ ಇದ್ದಂತೆ ತೋರುತ್ತದೆ. ಪ್ರಪಂಚದಾದ್ಯಂತ ಹರಡಿರುವ ಇಂತಹ ಅನೇಕ ಆಚರಣೆಗಳನ್ನು ಫ್ರೇಜರ್‌ರವರು ಗಮನಿಸಿ ವಿಶ್ಲೇಷಿಸಿದ್ದಾರೆ. ಆದಿವಾಸಿಗಳ ಪ್ರಕಾರ ಒಂದು ಹೊಲದಲ್ಲಿ ಬೆಳೆ ಬೆಳೆದಿದ್ದರೆ ಹಾಗಾಗಲು ಅದರಲ್ಲಿ ಧಾನ್ಯಮಾತೃವಿನ ಆತ್ಮ ಇರುವುದೇ ಕಾರಣ. ಬೆಳೆಯನ್ನು ಕೊಯ್ಯುವವರೆಗೆ ಮಾತ್ರ ಧಾನ್ಯಮಾತೃ ಹೊಲವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಆದರೆ ಬೆಳೆಯನ್ನು ಕೊಯ್ಯುತ್ತಾ ಬಂದಂತೆ ಸಾಯುವುದನ್ನು ತಪ್ಪಿಸಿಕೊಳ್ಳಲು ಒಂದರಿಂದ ಇನ್ನೊಂದು ಪೈರಿಗೆ ಓಡುತ್ತದೆ.

ಆದರೆ ಹೊಲದಲ್ಲಿ ಎಲ್ಲ ಪೈರನ್ನೂ ಕೊಯ್ದು ಇನ್ನೊಂದು ಮಾತ್ರ ಉಳಿದಿದ್ದರೆ ಅದರಲ್ಲಿಯೇ ಧಾನ್ಯಮಾತೃ ಇರುವುದೆಂದು ಅವರ ನಂಬಿಕೆ. ಆದುದರಿಂದ ಧಾನ್ಯಮಾತೃ ಆ ಕೊನೆಯ ಪೈರಿನಲ್ಲಿ, ಕೊನೆಯ ಕಂತೆಯಲ್ಲಿ, ಕೊನೆಯ ಪೈರನ್ನು ಕೊಯ್ಯುವ ವ್ಯಕ್ತಿಯಲ್ಲಿ, ಕೊನೆಯ ಕಂತೆ ಕಟ್ಟುವ ವ್ಯಕ್ತಿಯಲ್ಲಿ ಇರಲು ಸಾಧ್ಯ. ಈ ಧಾನ್ಯಮಾತೃವನ್ನು ಹೊರಗೆ ಹೋಗದಂತೆ ಸಾಯಿಸಿದರೆ ಅದರ ಶಕ್ತಿ ಹೊಲದಲ್ಲಿಯೇ ಉಳಿದು ಮುಂದಿನ ವರ್ಷ ಬೆಳೆ ಬೆಳೆಯಲು ಸುಗಮವಾಗುತ್ತದೆ. ಈ ಮಾತುಗಳ ಆಧಾರದ ಮೇಲೆ ನಮ್ಮ ಬೆಳೆಮುಂಬು ಈ ಹೊಲದ ಧಾನ್ಯದ ಆತ್ಮವನ್ನು ತನ್ನಲ್ಲೇ ಉಳಿಸಿಕೊಂಡು ಮುಂದಿನ ಫಲಶಕ್ತಿಗೆ ಕಾರಣವಾಗುವ ಸಂಕೇತವಾಗಿದೆ. ಹತ್ತಿ ದೇವರ ಪೂಜೆ ಆಚರಣೆಯೂ ಇದನ್ನೇ ನೆನಪಿಸುತ್ತದೆ. ಪ್ರಾಯಶಃ ಬಲಿ ಕೊಡುವ ಪದ್ಧತಿ ಸುಧಾರಣೆ ಆಗಿ ಆಗಿ ಬೆಳೆ ಉಳಿಸುವ ಕ್ರಮಕ್ಕೆ ಬಂದು ನಿಂತಿದೆ.