ಸದಸ್ಯ:Preetham noronha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಣದ ಅಪಮೌಲಿಕರಣ[ಬದಲಾಯಿಸಿ]

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ 500 ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಅನಾಣ್ಯೀಕರಣದ ಘೊಷಣೆಯಾಗಿ ಇಂದಿಗೆ ಸರಿಯಾಗಿ 50 ದಿನಗಳು. ಮೊದಲ ಒಂದು ವಾರದಲ್ಲಿ ಎಲ್ಲೆಲ್ಲೂ ಗೊಂದಲ, ಸಣ್ಣ ಮೌಲ್ಯದ ನೋಟುಗಳಿಗಾಗಿ ಹಾಹಾಕಾರ; ಎಟಿಎಂಗಳ ಮುಂದೆ, ಬ್ಯಾಂಕುಗಳಲ್ಲಿ ಉದ್ದೋಉದ್ದದ ಸಾಲುಗಳು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಎಸ್​ಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಮೋದಿಯವರ ಯಾವ ಮಾತನ್ನೂ ಕೇಳಲು ತಯಾರಿಲ್ಲ. ಅನಾಣ್ಯೀಕರಣದ ವಿರುದ್ಧ ಅವು ಯುದ್ಧವನ್ನೇ ಸಾರಿವೆ, ತಮ್ಮ ಕೂಗಾಟಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಇಡಿಯಾಗಿ ಬಲಿಗೊಟ್ಟಿವೆ. ಇದಕ್ಕೆ ಪ್ರತಿಯಾಗಿ ಜೆಡಿ(ಯು), ಬಿಜು ಜನತಾದಳ ಮುಂತಾದ ಕೆಲ ಪಕ್ಷಗಳು ಪ್ರಧಾನಮಂತ್ರಿಯವರ ಕಾರ್ಯಯೋಜನೆಗಳಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಸಮಾಜವಾದಿ ಪಕ್ಷದಂತಹ ಮತ್ತೆ ಕೆಲವು, ಅಡ್ಡಗೋಡೆಯನ್ನೇರಿ ಕೂತಿವೆ. ಒಟ್ಟಿನಲ್ಲಿ ದೇಶದ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಗೊಂದಲವೋ ಗೊಂದಲ. ಆದರೆ ಈ ಗೊಂದಲದ ಅಬ್ಬರದ ಹಿಂದೆಯೇ ತೆರೆಮರೆಯಲ್ಲಿ ಹಲವಾರು ಕರಾಳಸತ್ಯಗಳು ಬೆತ್ತಲಾಗಿಹೋಗಿವೆ.

ಅನಾಣ್ಯೀಕರಣದ ಇತಿಹಾಸ: ಹಾಗೆ ನೋಡಿದರೆ, ಉನ್ನತ ಮೌಲ್ಯದ ಕರೆನ್ಸಿ ನೋಟುಗಳ ಅನಾಣ್ಯೀಕರಣ ಮಾಡಿದ್ದರಲ್ಲಿ ಭಾರತ ಮೊದಲಿನದೇನೂ ಅಲ್ಲ, ಭಾರತದಲ್ಲೇ ನರೇಂದ್ರ ಮೋದಿ ಸರ್ಕಾರ ಮೊದಲಿನದೂ ಅಲ್ಲ. ಎರಡನೆಯ ಮಹಾಯುದ್ಧದಿಂದ ತತ್ತರಿಸಿಹೋಗಿದ್ದ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂನಂತಹ ದೇಶಗಳು ಈ ಕ್ರಮಕ್ಕೆ ಮುಂದಾಗಿ, ಅದರ ಬಿಸಿ ಭಾರತಕ್ಕೂ ತಟ್ಟಿ, ಜನವರಿ 1946ರಲ್ಲಿ 500, 1000, 5000 ಹಾಗೂ 10000 ರೂ. ಮುಖಬೆಲೆಯ ನೋಟುಗಳು ಅನಾಣ್ಯೀಕರಣಗೊಂಡವು. 1954ರಲ್ಲಿ ಮತ್ತೆ ಚಲಾವಣೆಗೆ ಬಂದ 5000 ಹಾಗೂ 10000 ರೂ. ಮುಖಬೆಲೆಯ ನೋಟುಗಳು ಜನವರಿ 1978ರಲ್ಲಿ ಅನಾಣ್ಯೀಕರಣಗೊಂಡವು.

ವಿದೇಶಗಳ ಬಗ್ಗೆ ಹೇಳುವುದಾದರೆ, ಅಮೆರಿಕದಲ್ಲಿ 1969ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ 100 ಡಾಲರ್​ಗಳಿಗಿಂತ ಹೆಚ್ಚಿನ ಮುಖಬೆಲೆಯ ಎಲ್ಲ ನೋಟುಗಳನ್ನೂ ಅಮಾನ್ಯಗೊಳಿಸಿಬಿಟ್ಟರು. ಆಸ್ಟ್ರೇಲಿಯಾ ಕೂಡ 1996ರಲ್ಲಿ ಇಂತಹದೇ ಕ್ರಮಕ್ಕೆ ಮುಂದಾಯಿತು. ಈ ಎರಡೂ ದೇಶಗಳು ಈ ಕ್ರಮ ಕೈಗೊಂಡದ್ದು ಕಾಳಧನದ ಹಾವಳಿಯನ್ನು ನಿಗ್ರಹಿಸುವ ಉದ್ದೇಶದಿಂದ. ನೈಜೀರಿಯಾ, ಝಾಯಿರೆ, ಜಿಂಬಾಬ್ವೆ, ಉತ್ತರ ಕೊರಿಯಾ ಕೂಡ ವಿವಿಧ ಬಗೆಯ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ಅನಾಣ್ಯೀಕರಣದ ಮೊರೆಹೋಗಿವೆ. ಕೆಲವು ಯಶಸ್ವಿಯಾದರೆ ಮತ್ತೆ ಕೆಲವು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿಕೊಂಡವು. ನೆರೆಯ ಪಾಕಿಸ್ತಾನ ಕೂಡ ಕಾಳಧನದ ಸಂಗ್ರಹ ಮತ್ತು ಖೋಟಾನೋಟುಗಳ ಹಾವಳಿಯನ್ನು ತಪ್ಪಿಸಲು ಜೂನ್ 2015ರಲ್ಲಿ 500 ರೂ. ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿತು. ಆದರೆ ಅವುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಜನತೆಗೆ ಒಂದೂವರೆ ವರ್ಷಗಳ ಕಾಲಾವಕಾಶ ನೀಡಿ, ಅದೀಗ ಇದೇ ಡಿಸೆಂಬರ್ 1ಕ್ಕೆ ಅಂತ್ಯಗೊಂಡಿದೆ. ಸರ್ಕಾರದ ಕ್ರಮಕ್ಕೆ ಈ ದೀರ್ಘ ಕಾಲಾವಕಾಶವೇ ಮುಳುವಾಗಿ, ಕಾಳಧನ ಶ್ವೇತಧನವಾಗಿ ಬದಲಾಗಿಹೋಗಿದೆ ಮತ್ತು ಖೋಟಾನೋಟು ಮುದ್ರಕರು ಹೊಸ ನೋಟುಗಳನ್ನೂ ಯಶಸ್ವಿಯಾಗಿ ಅನುಕರಿಸಿಬಿಟ್ಟಿದ್ದಾರೆ. ಹೀಗಾಗಿ ಸರ್ಕಾರದ ಉದ್ದೇಶ ಸಾಧನೆಯಾಗಿಲ್ಲ.

ಅಧಿಕ ಮುಖಬೆಲೆಯ ನೋಟುಗಳ ನರ್ತನ: ಪ್ರಸಕ್ತ ಭಾರತ ಸರ್ಕಾರ ಉನ್ನತ ಮೌಲ್ಯದ ನೋಟುಗಳ ಅನಾಣ್ಯೀಕರಣಕ್ಕೆ ನೀಡಿದ ಕಾರಣಗಳು ಮುಖ್ಯವಾಗಿ ಎರಡು- ಕತ್ತಲಲ್ಲಿ ಅಡಗಿಕೂತ ಅಗಾಧ ಕಾಳಧನವನ್ನು ಹೊರಗೆಳೆದು ಅರ್ಥವ್ಯವಸ್ಥೆಗೆ ತರುವುದು ಅಥವಾ ಕತ್ತಲಲ್ಲೇ ಕೊಳೆತುಹೋಗುವಂತೆ ಮಾಡುವುದು ಹಾಗೂ ಖೋಟಾನೋಟುಗಳ ಕಳೆಯನ್ನು ಅರ್ಥವ್ಯವಸ್ಥೆಯ ಹೊಲದಿಂದ ಕಿತ್ತುಹಾಕುವುದು. ಈ ಉದ್ದೇಶಗಳು ಸಾಧಿತವಾಗುತ್ತಿವೆಯೇ ಎಂದು ನೋಡುವುದಕ್ಕೆ ಮೊದಲು ಈ ಕಾರಣಗಳು ವಾಸ್ತವವೇ ಎಂದು ನೋಡೋಣ.