ವಿಷಯಕ್ಕೆ ಹೋಗು

ಸದಸ್ಯ:Poornachandra

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಪಟ್ಟದ್ದೇವರು ಡಾ. ಚನ್ನಬಸವ ಪಟ್ಟದೇವರು

[ಬದಲಾಯಿಸಿ]

ಆಧುನಿಕ ಜಗತ್ತಿನ ಬಹುಮುಖ್ಯ ತಲ್ಲಣವೆಂದರೆ ಹಿಂಸೆ ಸಾಮಾನ್ಯವಾಗಿ ಅಪರಾಧಿಗಳು, ಭಯೋತ್ಪಾದಕ ಕೃತ್ಯಕ್ಕೆ ತೊಡುಗುವವರು, ಅನಾಥರಾಗಿರುತ್ತಾರೆ. ಇಲ್ಲ ಬಡತನದಿಂದಲಾದರೂ ಅನಾಥರಾಗಿರುತ್ತಾರೆ. ಅಥವಾ ಕುಟುಂಬ ಪ್ರೀತಿಯಿಂದ ವಂಚಿತರಾಗಿರುತ್ತಾರೆ . ಇದಕ್ಕೆ ಅಪವಾದವೆಂಬಂತೆ ಮಹಾ ಅನಾಥರಾಗಿಯೂ ಜೀವನ ಪ್ರೀತಿಯನ್ನು , ಮಾತೃ ಹೃದಯವನ್ನೂ ತಂದೆ ತಾಯಿಯನ್ನು ಕಳೆದುಕೊಂಡರು ತಾಯ್ತತನದ ಪ್ರೀತಿ ಮೆರೆಯುತ್ತಲೇ ಅಹಿಂಸೆ ಕಾಯಕ ದಾಸೋಹ ತತ್ವಗಳನ್ನು ಮೈಗೂಡಿಸಿಕೊಂಡು ಸತ್ಯ ಶುದ್ಧವಾದ ರೀತಿಯಲ್ಲಿ ಈ ಜಗತ್ತಿಗೆ ಬದುಕಿ ತೋರಿದವರು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ|| ಚನ್ನಬಸವ ಪಟ್ಟದ್ದೇವರು. ಇವರು ೧೭ನೆಯ ಶತಮಾನದ ಬಸವಾದಿ ಶರಣರ ಮಣಿಹ ಹೊತ್ತು ೨೦ನೇ ಶತಮಾನದಲ್ಲಿ ಶರಣ ತತ್ವವನ್ನು ಕೇವಲ ಉಪದೇಶ ಮಾಡದೆ ಬದುಕಿನ ಭಾಗವಾಗಿಸಿಕೊಂಡ “ಕಾಯಕ ಪರಿಣಾಮಿ”ಗಳು. ಸಾಮಾಜಿಕ ಸಮತೆ, ಮತೀಯ ಸಾಮರಸ್ಯಕ್ಕಾಗಿ ದೀನ ದಲಿತರ, ಶೋಷಿತರ, ಬಡವರ, ಪರನಿಂತು ಎಲ್ಲ ಕಷ್ಟಗಳನ್ನು ಎದುರಿಸಿದರು. ಅವರು ಬೇರೆ ಭಾಷೆ ಒಡೆತನದಿಂದ ಕಮರಿ ಹೋಗಿದ್ದ ಕನ್ನಡ ಭಾಷೆಗೆ ಕಾಯಕಲ್ಪ ನೀಡಿ ಬಸವತತ್ವ, ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದರು. ಈ ಭಾಗದ ಜನತೆಗೆ ಶೈಕ್ಷಣಿಕ ಶೀಸ್ತನ್ನು ನಿಡಿದ್ದೇ ಪಟ್ಟದೇವರು. ಹೀಗೆ ಅವರು ೧೦೯ ವಸಂತ-ಸಿಸಿರಗಳನ್ನು ಕಳೆದು ಸಾವಿನ ಕೊನೆಯವರೆಗೂ ಕ್ರಿಯಾಶೀಲರಾಗಿ ಬಾಳಿದ್ದು. ವಾಸ್ತವವಾದರು ಸಾದೃಶ್ಯವಾಗಿದೆ. ಒಬ್ಬ ವ್ಯಕ್ತಿ ಶಕ್ತಿಯಾಗಿ, ಸಂಸ್ಥೆಗೆಯಾಗಿ ಪ್ರಚಾರದ ಅಬ್ಬರವಿಲ್ಲದೇ ಹಲವಾರು ವಿಧಾಯಕವಾದ ರಚನಾತ್ಮಕ ಕಾರ್ಯಗಳನ್ನು ಕೈಗೊಂಡು ಕಾರ್ಯರೂಪಕ್ಕೆ ತಂದರೂ “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲವೆಂಬತೆ” ಬದುಕಿದ ಶ್ರೀಗಳು ಜಿವನದುದ್ದಕ್ಕೂ “ಮುಗಿದು ಕೈಬಾಗಿದ ತಲೆ” ಅವರದ್ದು. ಇಡೀ ಬದುಕಿನ ಒಂದೊಂದು ಹೆಜ್ಜೆಕೂಡ ಆದರ್ಶ ಹಾಗೂ ಅನುಕರಣೀಯವಾಗಿದೆ. ಆದ್ದರಿಂದ ಅವರು ನಡೆದಾಡುವ ದೇವರಾದರು.

ಚೆನ್ನಬಸವ:

[ಬದಲಾಯಿಸಿ]

ಹಿಂದಿನಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ (ಹೈದ್ರಾಬಾದ) ಕರ್ನಾಟಕವು ಪರಕೀಯ ಆಳ್ವಿಕೆ. ಸ್ಠಳೀಯರ ಅಭಿಮಾನ ಶೂನ್ಯತೆ ಜನಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರವಾಗಿ ಬಂದವರು ಡಾ.ಚೆನ್ನಬಸವ ಪಟ್ಟದೇವರು. ಇವರ ಮೊದಲ ಹೆಸರು ಮಹಾರುದ್ರಪ್ಪ. ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದಲ್ಲಿ ಬುಳ್ಳಾ ಮನೆತನದ ರಾಜಪ್ಪ- ಸಂಗಮ್ಮ ದಂಪತಿಗಳಿಗೆ ಮಗುವಾಗಿ ಹುಟ್ಟಿದ ಇವರು ಐದು ವರ್ಷ ತುಂಬುವಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಮಹಾ ಅನಾಥರಾದರು. ಬಾಲ್ಯದ ೮-೧೦ ವರ್ಷಗಳವರೆಗೆ ಭಾಲ್ಕಿ ಹಿರೇಮಠ ಶಾಖಾ ಮಠದ ಕಮಲನಗರದಲ್ಲಿ ಅನಾಥ ಬಾಲಕನಾಗಿ ಕ೦ತಿ ಭಿಕ್ಷೆ ಎತ್ತಿದರು. ಮಠಗಳ ದನ ಕಾಯ್ದು ಬದುಕು ಸವೆಸುತ್ತಿರುವಾಗ, ಭಾಲ್ಕಿ ಹಿರೇಮಠದ ಶ್ರೀ ಸಿದ್ಧ ಬಸವ ಸ್ವಾಮಿಗಳು ದೀಕ್ಷೆ ನೀಡಿ ಸಂಸ್ಕಾರ ಬೋಧಿಸಿ, “ ಚನ್ನಬಸವ” ನೆಂಬ ಹೆಸರಿಟ್ಟು ಸಮೀಪದ ಮುಧೋಳ ಶಿವಲಿಂಗ ಸ್ವಾಮಿಗಳ ಸೇವೆಗೆ ಕಳುಹಿಸಿದರು. ಈ ಹೊತ್ತಿಗಾಗಲೆ “ಚೆನ್ನಬಸವ” ಅಕ್ಷರ ಜ್ಜಾನ ಪಡೆದು ಮರಾಠಿ- ಕನ್ನಡ ಕಲಿಯುತ್ತಿದ್ದರು. ವಿಶೇಷವೆಂದರೇ ಕನ್ನಡ ಭಾಷೆಯನ್ನು ಮೊಡಿ ಲಿಪಿಎಲ್ಲಿ ಬರೆಯುತ್ತಿದ್ದರು ಇವರ ಅಕ್ಷರ ಪ್ರೀತಿಯನ್ನು ಕಂಡ ಶಿವಲಿಂಗ ಮಹಾಸ್ವಾಮಿಗಳು ಔರದ (ಬಿ) ದಲ್ಲಿನ ಕೇದಾರಗಳಂಗಳಪ್ಪನವರ ಕನ್ನಡ ಶಾಲೆಗೆ (ಜಿಲ್ಲೆಯಲ್ಲಿ ಇವರೊಬ್ಬರೆ ಕನ್ನಡ ಕಲಿಸುವವರಿದ್ದರು) ಕಳುಹಿಸಿದರು. ಚೆನ್ನಬಸವ ಇಲ್ಲಿಯೇ ಕನ್ನಡದ ಪ್ರಮುಖ ಕಾವ್ಯಗಳಾದ “ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ಕರ್ನಾಟಕ ಶಬ್ದ ಮಂಜರಿ, ಬಸವರಾಜ, ವಿಜಯ” ಅಭ್ಯಾಸ ಮಾಡಿದರು. ಪ್ರಸಾದ (ಊಟ)ಕ್ಕಾಗಿ ವಾರದ ಮನೆ ನಿಗದಿಗೊಂಡಿದ್ದು , ದಾಸೋಹ ಮನೆಗೆ ಮನೆಗೆ ಕಾಂತಿ ಭಿಕ್ಷೆ ತರಬೇಕಾಗುತ್ತಿತ್ತು. ಓದುವ ಗೀಳು ಹೊಂದಿದ್ದ ಚೆನ್ನಬಸವ ಮೈಸೂರಿನಿಂದ ಬರುತ್ತಿದ್ದ ಕನ್ನಡ ಪತ್ರಿಕೆ “ಮೈಸೂರು ಸ್ಟಾರ್” ಓದುತ್ತಿದ್ದರು. ಅದರಲ್ಲಿ ಶಿವಯೋಗ ಮಂದಿರದ ವಿಷಯಗಳು ಓದಿ ಅಲ್ಲಿಗೆ ಹೋಗುವ ಹಂಬಲವಾದರೂ ಅದಮಿಟ್ಟುಕೊಂಡರು. ಇತ್ತ ಭಾಲ್ಕಿ ಹಿರೇಮಠಕ್ಕೆ ಹೊಸ ಪಟ್ಟಾಧ್ಯಕ್ಷರು ಬೇಕಾಗಿದ್ದರು. ಕಾಸಿರಾಯ ದೇಶಮುಖ, ಶಿವಲಿಂಗಪ್ಪ ಖಂಡ್ರೆ ಇದಕ್ಕಾಗಿ ಯೋಗ್ಯರನ್ನು, ಹುಡುಕುತ್ತಿರುವಾಗ ನಿಷ್ಠೆ, ಕರುಣೆ, ಸಚ್ಚಾರಿತ್ರ್ಯ ಮೈಗೂಡಿಸಿಕೊಂಡು ತಿಳಿವಳಿಕೆಯಿಂದ ಜ್ಜಾನಿಯಾಗಿದ್ದ ಕ್ರಿಯಾಸಿಲ ಚೆನ್ನಬಸವ ಜನಾನುರಾಗಿಯಾಗಿ ಬೆಳೆಯುತ್ತಿರುವುದನ್ನು ದೇಶಮುಖರು ಗಮನಿಸಿ ತರಬೇತಿಗಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿದ್ದರು. ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ್ ಸ್ವಾಮಿಗಳ ಪ್ರೀತಿಯ ಶಿಷ್ಯನಾಗಿ, ಕನ್ನಡ ಭಾಷೆ-ಸಾಹಿತ್ಯ ವಚನಗಳ ಅಧ್ಯಯನದೊಂದಿಗೆ ಬದುಕಿನಲ್ಲಿ ಶರಣ ತತ್ವಗಳನ್ನು ರೂಢಿಸಿಕೊಂಡರು. ಇವೆಲ್ಲದರ ಮಧ್ಯ ಲೌಕಿಕ ಬದುಕಿನ ಬಗ್ಗೆ ಆಸಕ್ತಿಯೇ ತೋರಲಿಲ್ಲ. ಆದ್ದರಿಂದ ಅವರ ಬದುಕಿನ ಸ್ಥಾಯಿ “ವಿರಕ್ತ”ವಾಯಿತು ಕಾಯಕ ದಾಸೋಹ ಅವರ ಜೀವನವಾದರೆ ಲೋಕಸೇವೆ ಜೀವನದ ಗುರಿಯಾಯಿತು. ಹೀಗೆ ಶಿವಯೋಗ ಮಂದಿರ ಬದುಕಿನ ಬೆಳಕಾಯಿತು.

ಪಟ್ಟದೇವರು:

[ಬದಲಾಯಿಸಿ]

ಹಾನಗಲ್ ಶಿವಯೋಗ ಮಂದಿರದಲ್ಲಿ ತರಬೇತಿಯನ್ನು ಪಡೆದಾದ ಮೇಲೆ “ಚೆನ್ನಬಸವ” “ಪಟ್ಟದೇವರು” ಆದ್ದದ್ದು ೧೯೨೪ರಲ್ಲಿ ನಡೆದ ಭಾಲ್ಕಿ ಹಿರೇಮಠ ಪೀಠಾರೋಹಣದಂದು. ಶಿವಯೋಗ ಮಂದಿರದ್ಲ್ಲಿ ತರಬೇತಿ ನಿಡಿದ ಹಾನಗಲ್ ಕುಮಾರ ಸ್ವಾಮಿಯವರೆ ಬಂದು ತಮ್ಮ ಪ್ರೀತಿಯ ಶಿಷ್ಯನಿಗೆ ಪೀಠಾರೋಹಣ ಮಾಡಿಸಿದ್ದು, ಜೋತೆಗೆ “ಮಠಕ್ಕಾಗಿ ನೀನಲ್ಲ ನೀನಗಾಗಿ ಮಠವಿದೆ” ಈ ಭಾಗದಲ್ಲಿ ಶಿಕ್ಷಣ, ಶರಣತತ್ವ, ದಿನ ದಲಿತರ ಸೇವೆಗೆ ಬದುಕು ಮೀಸಲಾಗಿರಲಿ ಎಂದು ಹೇಳಿ ಜವಾಬ್ದಾರಿಗಳನ್ನು ಹೊರಿದರು. ಆದರೆ ಮಠದ ವ್ಯವಸ್ಠೆ ಶಿಥಿಲವಾಗಿತ್ತು . ಶಾಖಾ ಮಠಗಳು ಸ್ವತಂತ್ರವೆಂಬಂತೆ ಇದ್ದವು. ಇದೆಲ್ಲ ಒಂದು ವರ್ಷದಲ್ಲಿ ಸರಿಪಡಿಸಿ ಎಲ್ಲಾ ಶಾಖಾ ಮಠಗಳು ಭಾಲ್ಕಿ ಹಿರೇಮಠದ ಅಧೀನಕ್ಕೆ ತಂದರು, ಕಾರೆಮುಂಗಿ, ಮೊರಗಿಯಲ್ಲಿರುವ ಮಠದ ಹೊಲಗಳ ಉಳುಮೆಯನ್ನು ಸ್ವತ: ತಾವೇ ಮಾಡಿದರು. ಕೃಷಿ ಕಾಯಕದಲ್ಲಿ ತೊಡಗಿಸಿಕೊಂದಾಗ ಆಳುಗಳು ಇವರೊಂದಿಗೆ ಕೆಲಸಕ್ಕೆ ಬರಲು ಹೆದರುತ್ತಿದ್ದರು. ಹಾಗೆ ನಿರಂತರ ಶ್ರಮವಹಿಸಿ ಮಠದ ಸರ್ವಾಂಗೀಣ ಏಳಿಗೆಗೆ ಮುಂದಾದರೂ.

ಕಲ್ಯಾಣ:

[ಬದಲಾಯಿಸಿ]

ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು. ಸಂವಿಧಾನದಲ್ಲಿ ಕಲ್ಯಾಣ ರಾಜ್ಯ ಕಟ್ಟುವುದು ಮತ್ತು ಮಾನವ ಹಕ್ಕುಗಳ ಪ್ರತಿಪಾದನೆಯೊಂದಿಗೆ ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆದರೆ ಜಾಗತೀಕರಣದ ಕರಿನೆರಳಿನಿಂದ ತೃತೀಯ ರಾಷ್ಟ್ರಗಳು ಸಂವಿಧಾನಾತ್ಮಕ ಕಲ್ಯಾಣ ಗುಣಗಳನ್ನು ತೊರೆದು ಖಾಸಗೀಕರಣಕ್ಕೆ ಮೊರೆ ಹೋಗಿವೆ. ಹೀಗಾಗಿ ಪಟ್ಟದೇವರು ಗುರುಗಳ ಸದಾಶಯ ಈಡೇರುಸುವಂತೆ ಈ ಭಾಗದಲ್ಲಿ ಹಲವಾರು ಕಲ್ಯಾಣ (ವೇಲ್ಫೆರ) ಯೋಜನೆಗಳನ್ನು ಹಾಕಿಕೊಂಡರು. ಅದರಲ್ಲಿ ಬಹುಮುಖ್ಯವೆಂದರೆ ಶಿಕ್ಷಣ. ಧರ್ಮ ಸಹಿಷ್ಣುತೆ, ಸಾಮಾಜಿಕ ಸಮನ್ವಯತೆಗಳು.

ಅರಿವಿನ ಆಗರ

[ಬದಲಾಯಿಸಿ]

ಮನುಷ್ಯರ ಮೂಲಭೂತ ಅಗತ್ಯಗಳೇಂದರೆ ಅನ್ನ, ಅರಿವೆ, ಆಶ್ರಯ ,ಅರಿವು ಮತ್ತು ಔಷಧ. ಇವನ್ನು ಲಿಂಗಾಯತ ಪರಿಭಾಷೆಯಲ್ಲಿ ಶಿವ ಪಂಚಾಯತಗಳೆಂದು ಕರೆವರು. ಇವುಗಳಲ್ಲಿ “ಅರಿವು.” ಅತ್ಯಂತ ಮುಖ್ಯವಾದದ್ದು. ಆಧುನಿಕ ಪರಿಭಾಷೆಯಲ್ಲಿ ಅರಿವು ಎಂದರೆ ಶಿಕ್ಷಣ ಎಂದರ್ಥ : ಶಿಕ್ಷಣವು ಮನುಷ್ಯರ ಮೌಢ್ಯತೆಗಳನ್ನು ಕಳೆಯುವುದರೊಂದಿಗೆ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಿಯೂ ನಿಲ್ಲಬಲ್ಲದು. ಶಿಕ್ಷಣದಿಂದ ಸಾಮಾಜಿಕ ಅರಿವು ತರಲು ಸಾಧ್ಯ ಎಂಬುದನ್ನೂ ಮನಗಂಡ ಪಟ್ಟದೇವರು. ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರು. ಈ ಉದ್ದೇಶದ ಹಿಂದೆ ಯಾವುದೆ ಲಾಭದ ಅಥವಾ ಹಣಗಳಿಸುವ ಉದ್ದೇಶವಿರಲಿಲ್ಲ. ಬದಲಾಗಿ ಶಿಕ್ಷಣ ಎಲ್ಲರ ಸ್ವತ್ತಾಗಬೇಕು ಮತ್ತು ಎಲ್ಲ ಸಮೂದಾಯದವರಿಗೂ ದಕ್ಕಬೇಕು ಎಂಬ ನಿಲುವು ಅವರದಾಗಿತ್ತು. ೧೯೨೬ರಲ್ಲಿ ಇಂದಿನ ಆಂಧ್ರಪ್ರದೇಶ ನಾರಾಯಣಖೇಡ ತಾಲೂಕಿನ ಮೋರ್ಗಿ ಗ್ರಾಮದಲ್ಲಿ “ಶಾಂತಿವರ್ಧಕ ಗುರುಕುಲಾಶ್ರಮ” ಎಂಬ ಹೆಸರಿನಿಂದ ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು. ಭಾರತ ಹಳ್ಳಿಗಳ ರಾಷ್ಟ್ರ, ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರವೆಂಬ ಮಾತಿನಂತೆ ಒಂದು ಸಣ್ಣ ಗಡಿಭಾಗದ ಹಳ್ಳಿಯಿಂದ ಅರಿವಿನ (ಶಿಕ್ಷಣ) ಆಂದೋಲನ ಆರಂಭಿಸಿದರು. ಈ ಪ್ರಾಂತ ಅಂದು ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದರಿಂದ ಉರ್ದು ಆಡಳಿತ ಭಾಷೆಯಾಗಿತ್ತು. ಆದ್ದರಿಂದ ಹೊರಗೆ ಉರ್ದು ಫಲಕ “ಉರ್ದು ಪಾಠಶಾಲೆ” ಎಂದು ಬರೆಯಿಸಿ ಒಳಗೆ “ಕನ್ನಡ” ಕಲಿಸುತ್ತಿದ್ದರು. ಮೋರ್ಗಿ ಶಾಲೆಗೆ ಕೊಪ್ಪಳದ ಖಾನಾಪೂರ ಶಾಸ್ತ್ರಿಗಳು ಮುಖ್ಯ ಗುರುಗಳಾಗಿದ್ದರು. ನಾರಾಯಣಖೇಡದ ನಾಗಶೇಟ್ಟೇಪ್ಪ ಶೇಟ್ಕಾರ್ ಅಧ್ಯಕ್ಷರಾಗಿದ್ದರು. ಅಲ್ಲಿ ನೂರಾರು ವಿಧ್ಯಾರ್ಥಿಗಳು ಕಲಿಯುತ್ತಿದ್ದರು. ಅಲ್ಲಿ ಕಲಿತವರು ಉನ್ನತ ಹುದ್ದೆಗೆ ಏರಿದರು. ಆದರೆ ಈ ಕನ್ನಡ ಶಾಲೆ ಜನರ ತೀವ್ರ ವಿರೋಧಕ್ಕೂ ಒಳಗಾಯಿತು. ವ್ಯವಹಾರ ಭಾಷೆ “ಉರ್ದುವಾದ್ದರಿಂದ” ಜನ ಸಹಜವಾಗಿ ಉರ್ದು ಕಲಿಸಲು ದುಂಬಾಲು ಬಿದ್ದರು. ಜೊತೆಗೆ ಕನ್ನಡ ಅಂದು ಜಂಗಮರ ಭಾಷೆಯಾದ್ದರಿಂದ ತಮ್ಮ ಮಕ್ಕಳು ಕನ್ನಡ ಕಲಿತು ಜಂಗಮರಾಗಿ ಪಂಚಾಂಗ ( ಜೋತಿಷ್ಯ) ಹೇಳಬೇಕೆ? ಎಂದು ಪ್ರಶ್ನಿಸುತ್ತಿದ್ದರು. ಆಗ ಜನರಿಗೆ ಕನ್ನಡದೊಂದಿಗೆ ಉರ್ದು ಮರಾಠಿ ಸಹ ಕಲಿಸುತ್ತೇವೆಂದು ತಿಳಿ ಹೇಳುತ್ತಿದ್ದರು. ಇದರಿಂದ ನಿಜಾಮ ಸರ್ಕಾರದ ಪೋಲಿಸರು ಬಂದು ಶಾಲೆ ತಪಾಸಣೆ ಮಾಡಿದಾಗ ಶಾಲೆಯಲ್ಲಿದ್ದ ಮಹಾತ್ಮಗಾಂಧಿ,ನೆಹರು, ವಿವೇಕಾನಂದ, ಬಸವಣ್ಣ ಮೊದಲಾದವರ ಭಾವಚಿತ್ರಗಳನ್ನು ಕಿತ್ತೆಸದು ತಕಾರಾರು ಮಾಡಿದರು. “ನೀವು ಸರಕಾರಕ್ಕೆ ದ್ರೋಹ ಮಾಡುತ್ತಿರುವಿರಿ” ಎಂದು ಬೆದರಿಸಿದಾಗ ಬಡ ಜನತೆಗೆ ಶಿಕ್ಷಣ ನೀಡಿ ಸರಕಾರವನ್ನು ಬಲಪಡಿಸುತ್ತೇವೆಂದು ಹೇಳಿ ಪೊಲೀಸರ ಮನವೊಲಿಸಿದರು. ಇದರ ಮುಂದುವರಿಕೆಯಾಗಿ ಕಮಲನಗರ, ಭಾಲ್ಕಿ, ಹೊಳಸಮುದ್ರ, ಬಳತ್ ಮೊದಲಾದೆಡೆ ಕನ್ನಡ ಶಾಲೆಗಳು ಆರಂಭವಾದವು. ಪಟ್ಟದೇವರು ಹೀಗೆ ಅರಿವಿನ ಆಗರ ತೆರೆದರು. ಕಾಯಕ ನಿಷ್ಠೆ-ದಾಸೋಹ ಭಾವ ಹೊಂದಿದ್ದ ಶ್ರೀಗಳು ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹವನ್ನೂ ಆರಂಭಿಸಿದರು. ಆರ್ಥಿಕವಾಗಿ ಮಠ ದುರ್ಬಲವಾದ್ದರಿಂದ ಮಕ್ಕಳ ಪ್ರಸಾದ, ಶಿಕ್ಷಕರ ವೇತನ ಏಕಕಾಲಕ್ಕೆ ಭರಿಸುವ ಶಕ್ತಿ ಇರಲಿಲ್ಲ. ಅದ್ದರಿಂದ “ಮುಷ್ಠಿಫಂಡ್” ಆರಂಭಿಸಿದರು. ಪ್ರತಿಯೊಬ್ಬರು ಬಿಸುವಾಗ ಒಂದು ಮುಷ್ಠಿ ಕಾಳು ತೆಗೆದಿರಿಸುವಂತೆ ಕೋರಿ ಪ್ರಸಾದ ದಾಸೋಹ ನೆರೆವೇರಿಸಿದರು. ಅನೇಕ ಸಂದರ್ಭಗಳಲ್ಲಿ ಪೂಜ್ಯರೆ ಸ್ವತ: ಗ್ರಾಮ ಗ್ರಾಮ ಅಲೆದಾಡಿ ಮುಷ್ಠಿಫಂಡ್ ತಂದ ಉದಾಹರಣೆಗಳಿವೆ. ಹೀಗೆ ಪ್ರತಿ ಕಾರ್ಯದಲ್ಲಿಯೂ ತಮ್ಮನ್ನು ಮನಸಾ ತೋಡಿಗಿಸಿಕೊಳ್ಳುತ್ತಿದ್ದರು. ೧೯೪೩ರಲ್ಲಿ ಮೋರಗಿ ನೀರಿನ ಅಭಾವಕ್ಕೆ ಒಳಗಾಗಿ ಅಲ್ಲಿನ ಶಾಲೆಯನ್ನು ಔರಾದ ತಾಲೂಕಿನ ಖೇಡ ಸಂಗಮದ (ದೇವಣಿ ಮಾಂಜ್ರಾ ನದಿಗಳ ಸಂಗಮ) ದಡಕ್ಕೆ ಸ್ಥಳಾಂತರಿಸಿದರು. ವಿಶಾಲವಾದ ದಿಣ್ಣಿಯ ಮೇಲೆ ಶಾಲೆ ಕಟ್ಟಡ ಆರಂಭವಾದಾಗ ಸ್ವತ: ಪಟ್ಟದೇವರೇ ಕಲ್ಲು-ಮಣ್ಣು ಹೊತ್ತು ಶಾಲಾ ನಿರ್ಮಾಣ ಪೂರ್ಣಗೊಳಿಸಿದರು. ಮುಂದೆ ರಜಾಕಾರ ಹಾವಳಿ ಎದುರಾದಾಗ ಹೇದರದೇ ವಿದ್ಯಾರ್ಥಿಗಳನ್ನು ಸೊಲ್ಲಾಪೂರಕ್ಕೆ ಕರೆದೊಯ್ದರು. ಅಲ್ಲಿ ವಾರದ ಬಾಬಾ ಸಾಹೇಬ, ಡಾ|| ಜಯಾದೇವಿ ತಾಯಿ ಲಿಗಾಡೆ ಮತ್ತು ಕುಂಟೋಜಿ ಮಠದ ಆಶ್ರಯ ಪಡೆದರು.ರಜಾಕಾರ ಹಾವಳಿ ನಿಂತ ಮೇಲೆ ಪುನ: ಸಂಗಮಕ್ಕೆ ವಿದ್ಯಾರ್ಥಿಗಳನ್ನು ಕರೆ ತಂದರು ಸಂಗಮದಲ್ಲಿ ಮಹಾಪೂರ ಬಂದರಿಂದ ಆ ಶಾಲೆಯ ಮಕ್ಕಳನ್ನು ಕಮಲನಗರಕ್ಕೆ ಸ್ಥಳಾಂತರಿಸಿಲಾಯಿತು. ಕಮಲನಗರ ಶಾಲೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರಿಂದ ಅಡಿಗಲ್ಲು ಹಾಕಿಸಿ ಪುನಃ ಕಷ್ಟಪಟ್ಟು ಶಾಲೆ ಕಟ್ಟಡ ಮುಗಿಸಿದರು. ಡಾ. ಚೆನ್ನಬಸವ ಪಟ್ಟದ್ದೇವರು ನಡೆಸುತ್ತಿದ್ದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಶಾಲೆಗಳಿಗೆ ಸರ್ಕಾರದ ಮನ್ನಣಿ ದೊರೆಯಲಿಲ್ಲ. ಪ್ರಾಥಮಿಕ ಮಾಧ್ಯಮಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಬಾರದೆಂದು ತಕ್ಷಣವೇ ಲಾತೂರಿನಲ್ಲಿ ರಾಜಸ್ಥಾನದ ಮಾರವಾಡಿ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಿಸಿದರು. ಅಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಬೋಧಿಸಲಾಗುತ್ತಿತ್ತು. ಈ ಸಂಗಮ ಶಾಲೆಗೆ ಬಂದು ಲಾತೂರ ಶಾಲೆಗೆ ಸೇರಿ ಒದಿದ್ದವರಲ್ಲಿ ಈ ಭಾಗದ ಖ್ಯಾತ ಸಾಹಿತಿ ಡಾ.ಶಾಂತರಸ ಹೆಂಬೇರಾಳು ಒಬ್ಬರು. ಅವರು ಬಿದರನಲ್ಲಿ ಜರುಗಿದ ಅಖಿಲ ಭಾರತ ೨೭ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಲಾತೂರಿನಲ್ಲಿ ಓದುವಾಗ ನಗರದ ಪೂರ್ವ ದಿಕ್ಕಿನ ಸುಡುಗಾಡು ಮಠದಲ್ಲಿನ ಅವರ ವಾಸದ ಭಯಾನಕ ವಿವರವನ್ನು ಶಾಂತರಸರು ಕಾಯಕ ಪರಿಣಾಮಿ (ಶ್ರೀ ಚನ್ನಬಸವ ಪು. ೨೬೩-೨೭೧) ಯಲ್ಲಿ ದಾಖಲಿಸಿದ್ದಾರೆ . ಈ ಭಾಗದ ಜನತೆಗೆ ಕಾಲೇಜು ಮಟ್ಟದ ಉನ್ನತ ಶಿಕ್ಷಣವು ದೊರೆಯಲೆಂಬ ಉದ್ದೇಶದಿಂದ ಭಾಲ್ಕಿಯಲ್ಲಿ ಕಾಲೇಜು ಆರಂಬಿಸಬೇಕೆಂದಾಗ ಇದಕ್ಕೆ ಹಣದ ಕೊರತೆಯುಂಟಾಯಿತು. ಆಗ ಮಠದ ಆಸ್ತಿ ಸಂಸ್ಥೆಯ ಹೆಸರಿಗೆ ವರ್ಗಾಯಿಸಿ, ಭಾಲ್ಕಿಯಲ್ಲಿ ಚೆನ್ನಬಸವ ಕಾಲೇಜು ಆರಂಭಿಸಿದರು. ಶ್ರೀ ಚೆನ್ನಬಸವ ಪಟ್ಟದೇವರು ಬಸವಾದಿ ಶರಣರ ತತ್ವಗಳನ್ನು ಅಕ್ಷರಸ: ಪಾಲಿಸುವ ನಿಟ್ಟಿನಲ್ಲಿದ್ದುದರಿಂದ ವಚನ ಕಾರರು ೧೨ನೆಯ ಶತಮಾನ ಮಹಿಳಾ ಶಿಕ್ಷಣ ನೀಡಿದರೆ ಪಟ್ಟದೇವರು ಸಾಂಪ್ರದಾಯಿಕ ಮಡಿವಂತಿಕೆಗಳನ್ನು ಮುರಿದು ಬೀದರನಲ್ಲಿ ಮೊದಲ ಮಹಿಳಾ ಕಾಲೇಜು ಆರಂಭಸಿದರು. ಹೀಗೆ ೧೯೩೬ ರಿಂದ ೧೯೭೫ರ ವರೆಗೆ ಚೆನ್ನಬಸವ ಪಟ್ಟದೇವರು ಈ ಭಾಗದ ಜನತೆಗೆ ಅರಿವು (ಶಿಕ್ಷಣ) ನೀಡಲು ಏಕಾಂಗ ವೀರರಾಗಿ ಅವಿರತ ಶ್ರಮ ವಹಿಸಿದ್ದಾರೆ. ಮೋರ್ಗೀಯಲ್ಲಿ ಬೀತ್ತಿದ ಸಣ್ಣ ಅರಿವಿನ ಬೀಜ ಬೆಳೆದು ಹೆಮ್ಮರವಾಗಿ ವ್ರತ್ತಿಪರ ಐ.ಟಿ.ಐ ಇಂಜಿನಿಯರಿಂಗ್ ಮೊದಲಾದ ಹತ್ತಾರು ಶಾಲಾ ಕಾಲೇಜುಗಳು ತಲೆ ಎತ್ತಿನಿಂತಿವೆ. ಅವರ ಅರಿವಿನಾಗರದ ಉತ್ಕಟನೆ ದೂರದ್ರಷ್ಟ ಅವಿಸ್ಮರಣೀಯ.

ಕನ್ನಡದ ಶರಣ:

[ಬದಲಾಯಿಸಿ]

“ತಾಯಿ, ತಾಯ್ನೆಲ ಸ್ವರ್ಗಕ್ಕೆ ಸಮಾನ”ವೆಂಬ ಮಾತಿದೆ. ಹಾಗಾಗಿ ಶ್ರೀ ಚೆನ್ನಬಸವ ಪಟ್ಟದ್ದೇವರಿಗೆ “ಕನ್ನಡ” ಭಾಷೆ-ಸಾಹಿತ್ಯ ಬಸವಾದಿ “ಶರಣರ ತತ್ವಗಳು” “ಉಭಯ ದೃಷ್ಟಿ ಏಕವಾಗಿ ಕಾಂಬಂತೆ” ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಬೇಕಾದರೆ ಅವರು ಮೊದಲು ಕನ್ನಡ ಕಲಿಯಲೇಬೇಕೆಂಬ ಮೂಲ ಆಶಯದಿಂದ ಕನ್ನಡ ಭಾಷೆ-ಸಾಹಿತ್ಯವನ್ನು ಆದರದಿಂದ ಗೌರವಿಸದರು. ಎಂಥ ಸಂದರ್ಭದಲ್ಲಿಯೂ ನಾಡು ನುಡಿ – ಸಂಸ್ಕೃತಿಯ ವಿಷಯದಲ್ಲಿ ಯಾವುದೇ ರಾಜಿಗೆ ಒಪ್ಪಲಿಲ್ಲ. ಉರ್ದು ಫಲಕ ಹಾಕಿ ಕನ್ನಡ ಕಲಿಸಿದ್ದೆ ಜ್ವಲಂತ ನಿದರ್ಶನ ಸ್ವಾತಂತ್ರ್ಯ ಚಳವಳಿಗೆ ತೊಡಗಿಸಿಕೊಂಡು ಶ್ರೀಗಳು ಹೈದ್ರಾಬಾದ ಕರ್ನಾಟಕ ವಿಮೋಚನೆಗಾಗಿಯೂ ಹೊರಡಿದರು. ಮುಂದೆ ಕರ್ನಾಟಕ ಏಕೀಕರಣಕ್ಕೆ ಪಣತೊಟ್ಟುನಿಂತರು. ಇದಕ್ಕಾಗಿ 1955ರಲ್ಲಿ ಅವರು ಕಮಲನಗರದಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕರು ಸೇರಿ ಭಕ್ತರೊಂದಿಗೆ ರೈಲು ಹಳಿಯ ಮೇಲೆ ಕುಳಿತು “ರೈಲು ರೋಕೋ ಆಂದೋಲನ” ಮಾಡಿದರು. ಸೊಲ್ಲಾಪೂರವು ಕರ್ನಾಟಕದಲ್ಲಿಯೇ ಉಳಿಯಬೇಕೆಂಬ ಉತ್ಕಟ ಬಯಕೆ ಡಾ|| ಜಯದೇವಿ ತಾಯಿ ಲಿಗಾಡೆಯವರದಾಗಿತ್ತು ಆಗ ಮರಾಠಿಗರು ಸಹಜವಾಗಿ ಕಮಲನಗದಲ್ಲಿ ದಾಂಧಲೆ ಮಾಡಿದರು. ಹೀಗೆ ಕರ್ನಾಟಕ ಏಕೀಕರಣ,ಕನ್ನಡ ಅದ್ಯಾಯನಕ್ಕೆ ಪುಷ್ಟಿ ನೀಡಿದ್ದರಿಂದ ಕಿಡಿಗೇಡಿಗಳಿಂದ ನಿಜಾಮ ಸರ್ಕಾರದಲ್ಲಿ ಮೊಕದ್ದಮೆ ಎದುರಿಸಿದ್ದನ್ನು ಡಾ.ಜಿ. ಬಿ. ವಿಸಾಜಿಯವರು (ಕಾಯಕ ಪರಿಣಾಮಿಯಲ್ಲಿ) ವಿವರವಾಗಿ ದಾಖಲಿಸಿದ್ದಾರೆ. ಕನ್ನಡತಾಣ ಕನ್ನಡವನ್ನು ಕಲಿಸುತ್ತಲೇ ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದರು. ವಚನ ಪಠಣ ಮಾಡಿಸುತ್ತಿದ್ದರು.ವಚನಗಳು ಸರಳಿಕರಿಸಿ ಹೇಳುತ್ತಿದ್ದರು.ಜೊತೆಗೆ ಶರಣ ಸಂಸ್ಕ್ರತಿ-ಶರಣತತ್ವದ ಪ್ರಸ್ತುತತೆ, ವೈಚಾರಿಕ ಪ್ರಖರತೆ ಕುರಿತು ಜನರಿಗೆ ಮನದಟ್ಟು ಮಾಡಿಕೊಡುತ್ತಿದ್ದರು. ಹೀಗೆ ಕನ್ನಡ ಮತ್ತು ಶರಣತತ್ವ ಅವರ ಬದುಕಿನ ಉಸಿರಾಗಿದ್ದವು ಜೀವನಾದರ್ಶವಾಗಿದ್ದವು.

ಮಾನವೀಯ ಪ್ರೀತಿ:

[ಬದಲಾಯಿಸಿ]

ಜೀವ ಜಗತ್ತಿನ ಮೂಲಧಾತು ಪ್ರೀತಿ ಹಾಗಾಗಿಯೇ ಎಲ್ಲ ದಾರ್ಶನಿಕರು ಪ್ರೀತಿಯ ಖಣಿಯಾಗಿರುತ್ತಾರೆ. ಏಸು, ಬುದ್ದ, ಮಾಹಾವೀರ, ಪೈಗಂಬರ, ಬಸವ, ಗುರುನಾನಕ, ಅಂಬೇಡ್ಕರ, ಗಾಂಧಿ ಮೊದಲಾದವಾರು ಅದಮ್ಯವಾದ ಜೀವನ ಪ್ರೀತಿ ಹೊಂದಿದ್ದರು. ಅವರು ಜೀವ ಜಗತ್ತಿನ ಒಳತಿಗಾಗಿ ತಮ್ಮನ್ನು ಸವೇಸಿಕೊಂಡಿದ್ದಾರೆ. ಅಂಥವರ ಸಾಲಿನಲ್ಲಿ ಭಾಲ್ಕಿ ಹಿರೇಮಠದ ಡಾ|| ಚೆನ್ನಾಬಸವ ಪಟ್ಟದ್ದೇವರು ಬರುತ್ತಾರೆ. ಜಗತ್ತಿಗೆ ಇವರ ಪರಿಚಯವಿರಲಿಕ್ಕಿಲ್ಲ. ಆದರೆ ಪಟ್ಟದ್ದೇವರ ಮಾನವೀಯ ಪ್ರೀತಿ ಅಗಾಧವಾದದ್ದು. ಅವರು ಮಾಡಿರುವ ಜೀವ ಪರ ಕಾರ್ಯಗಳು ಅನನ್ಯವಾದವುಗಳು. ಸಾವಿರಾರು ವರ್ಷಗಳ ಸನಾತನ ಧರ್ಮದ ಕೊಳೆಗಳನ್ನು, ಮೂಢ ಸಂಪ್ರದಾಯಗಳನ್ನು ವೇದಕ್ಕೆ ಒರೆಯಿಕ್ಕುವ ಮೂಲಕ ೧೨ನೇ ಶತಮಾನದ ಬಸವಾದಿ ಶರಣರು ಮುರಿದರು. ಅದನ್ನು ಅನೂಚಾನವಾಗಿ (ಶರಣತತ್ವ) ಮೈಗೂಡಿಸಿಕೊಂಡವರು ೨೦ನೇ ಶತಮಾನದ ಡಾ. ಚೆನ್ನಬಸವ ಪಟ್ಟದ್ದೇವರು. ಏಕೆಂದರೆ “೧೨ನೆಯ ಶತಮಾನ ಶರಣರ ತತ್ವಗಳ ಪ್ರಚಾರ ಮಾಡುವ ಯುಗವಾಗಿದೆ” ಎಂಬ ರಮಜಾನ್ ದರ್ಗಾರವರ ಮಾತುಗಳು ಔಚಿತ್ಯ ಪೂರ್ಣವಾಗಿವೇ. ಶರಣ ತತ್ವಗಳ ಪ್ರಚಾರ ಮಾಡುವುದೆಂದರೆ, ಮಾನವ ಹಕ್ಕುಗಳ ಪ್ರಚಾರ ಮಾಡಿದಂತೆ, ಶ್ರಮ ಮೂಲದ ದೇಶಿ ಸಂಸ್ಕೃತಿಯ ಪ್ರಚಾರ ಮಾಡಿದಂತೆ. ದಾಸೋಹ ಬದುಕನ್ನು ಪ್ರಚಾರಗೊಳಿಸಿದಂತೆ ಇವೆಲ್ಲ ಮೀರಿ ಮನುಷ್ಯರನ್ನು ಪ್ರೀತಿಸುವುದು ಪ್ರಚಾರ ಮಾಡಿದಂತೆ. ಪ್ರಜಾಪ್ರಭುತ್ವ ದೇಶವಾದ ಭಾರತದ ಸಂವಿಧಾನ ಬರೆದ ಡಾ.ಬಿ. ಆರ್. ಅಂಬೇಡ್ಕರವರು ದಲಿತರೊಂದಿಗೆ ಕೆರೆಯ ನೀರು ಮುಟ್ಟಲು ಅನೇಕ ರೀತಿಯ ಆಂದೋಲನ ಮಾಡುಬೇಕಾಯಿತು. ಸ್ವತಂತ್ರ್ಯೋತ್ತರದ ಕಾಲದಲ್ಲಿಯೂ ಈ ದೇಶದಲ್ಲಿ ಅನೇಕ ಕಡೆ ಇಂದಿಗೂ ಮಡಿವಂತಿಕೆ ನಿಂತಿಲ್ಲ. ಅಂಥದರಲ್ಲಿ ಪಟ್ಟದ್ದೇವರು ಸ್ವಾತಂತ್ರ್ಯ ಪೂರ್ವದಲ್ಲಿ ಹರಿಜನರನ್ನು ಕರೆಯಿಸಿ ಮೊಟ್ಟ ಮೊದಲ ಬಾರಿಗೆ ಶ್ರೀಮಠದ ಬಾವಿಯನೀರನ್ನು ಮುಟ್ಟಿಸಿದರು. ೧೯೪೮ರಲ್ಲಿ ಭಾಲ್ಕಿಗೆ ನೀರಿನ ಬರಗಾಲ ಬಂದಾಗ ದಲಿತರಿಗೆ ಮಠದ ಬಾವಿಯ ನೀರು ಪಡೆಯಲು ಅನುಮತಿಸಿದರು. ನೀರನ್ನು ಮುಟ್ಟುಡುದೆಂದರೆ ಜೀವವನ್ನು ಮೂಟ್ಟಿದಂತೆ( ಜೀವ ಜಲ: ಜಲವೆ ಜೀವ!) ಅನೇಕ ದಲೀತರಿಗೆ ಲಿಂಗದೀಕ್ಷೆ ನೀಡಿದರು. ಅವರೊಂದಿಗೆ ಲಿಂಗಾಯತರ ಸಂಭಂಧ ಬೆಳೆಸಲು ಶ್ರಮಿಸಿದರು. ಅವರ ಪೂಜಾ ಕೋಣಿಯಲ್ಲಿ ದಲಿತರಿಗೆ ಪ್ರವೇಶ ವಿತ್ತು. ಜೊತೆಗೆ ಸಹ ಭೋಜನಕ್ಕೆ ಅವಕಾಶ ನೀಡಿದರು. ನಂದಿ ನಾಗೂರಿನಲ್ಲಿ ಹರಿಜನರಿಗೆ ದೀಕ್ಷೆ ಮಾಡುವಾಗ ಒಬ್ಬ ವೀರಶೈವ ಲಿಂಗಾಯತ ವ್ಯಕ್ತಿ ಬಂದು “ಸ್ವಾಮಿ ನೀವು ಹೊಲೆಯರಿಗೆ ಲಿಂಗ ಕಟ್ಟುತ್ತಿರುವಿರಿ ಆದರೆ ನಮ್ಮ ಸತ್ತ ದನಗಳನ್ನು ಯಾರು ಎಳೆಯಬೇಕು?” ಎಂದು ಪ್ರಶ್ನಿಸಿದಾಗ ಥಟ್ಟನೆ “ನೀವು” ಎಂದು ಪಟ್ಟದ್ದೆವರು ಉತ್ತರಿಸಿದ ಧೀರ ನಿಲುವುಗಳನ್ನು ಬಸವಶ್ರೀ ಸಿದ್ಧರಾಮೇಶ್ವರ ಶರಣರು ಬೆಲ್ದಾಳ ಅವರು (ಕಾಯಕ ಪರಿಣಾಮಿಯಲ್ಲಿ) ವಿವರಿಸಿದ್ದಾರೆ. ಇದೆಲ್ಲದರ ಪರಿಣಾಮ ಎದುರಿಸಿಬೇಕಾಗಿ ಬಂದಾಗ “ಲೋಕ ವಿರೋಧಿ ಶರಣನಾರಿಗೂ ಅಂಜುವವನಲ್ಲ ಎಂಬ ಬಸವಣ್ಣನವರ ಮಾತಿನಂತೆ ಧೈರ್ಯ ತಾಳಿದರು. ದಲಿತರ ಕಾಳಜಿ ಸಹಿಸದ ಮೂಲಭೂತವಾದಿಗಳು ಮಠದವರು ಹಿಟ್ಟಿನ ಭಿಕ್ಷೆಗೆ ಹೋದಾಗ ಸಗಣಿಯ ಕುಳ್ಳು ಹಾಕಿ ನಿಮ್ಮ ಮಠದ ಸಂಪರ್ಕ ಬೇಡ ಎಂದು ನಿರಾಕರಿಸಿದರು. ಮುಂದೆ ಜನ ತಿಳುವಳಿಕೆ ಪಡೆದು ತಾವೇ ಮಠಕ್ಕೆ ಬರಲಾರಂಭಿಸಿದರು. ಇನ್ನೊಂದು ಮಹತ್ವದ ವಿಷಯವೆಂದರೆ ೧೯೭೪ ಜನವೇರಿ ೧೪ ರಂದು ಔರಾದ (ಬಿ) ದಲ್ಲಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವಿತ್ತು. ಔರಾದ ತಾಲೂಕಿನ ಬೆಲ್ದಾಳ ಗ್ರಾಮದ ದಲಿತ “ವಿಠಲ” ಎಂಬ ಯುವಕ ತುಂಬಾ ಬುದ್ಧಿವಂತ, ಪಟ್ಟದ್ದೇವರನ್ನು ನೋಡಲು ಕಾರ್ಯಕ್ರಮಕ್ಕೆ ಬಂದಿದ್ದನು . ತುಂಬಾ ಜ್ಞಾನಿಯಾದರೂ ಅಂತ್ಯಜನೆಂಬ ಕಾರಣಕ್ಕೆ ಸಮಾಜ ಗುರುತಿಸಿರಲಿಲ್ಲ. ಆದರೆ ಅಂದು ಕಾರ್ಯಕ್ರಮದ ಕೊನೆಗೆ ಸ್ನೇಹಿತರ ಒತ್ತಾಯದಿಂದ ಮಾತನಾಡಿದ ವಿಠಲ ಅತ್ಯಂತ ವಿನಯದಿಂದ ನಾನು ಸಾಹಿತಿಯಲ್ಲ. ಪ್ರಾಜ್ಞನಲ್ಲ ಜೊತೆಗೆ ಮೇಲ್ವರ್ಗದವನೂ ಅಲ್ಲ. ಎಂದು ಹೇಳುತ್ತಲೇ ಅರ್ಥಪೂರ್ಣವಾಗಿ ಶಿವಯೋಗದ ಬಗ್ಗೆ ಮಾತನಾಡಿದಾಗ ಪಟ್ಟದ್ದೇವರು ಪಟ್ಟ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿಠಲನನ್ನು ಅಪ್ಪಿಕೊಂಡು ನೀವು ಅಂತ್ಯಜರಲ್ಲ. ನಿಮ್ಮಿಂದಲೇ ಈ ಜಯಂತಿ ಅರ್ಥಪೂರ್ಣವಾಯಿತು. ನೀವೇ “ಸಿದ್ಧರಾಮ” ನೆಂದು ಹೇಳಿ ಹೂವಿನ ಹಾರ ಹಾಕಿ ಗೌರವಿಸಿದರು. ಇಂದಿನಿಂದ ನಿಮ್ಮ ಹೆಸರು “ಸಿದ್ಧರಾಮ” ವೆಂದು ಹೇಳಿದರು. ಅಂದು ಅನೇಕ ಸಮುದಾಯಗಳ ಜನ ಅಲ್ಲಿ ನೆರೆದಿದ್ದು ಸಹ ಭೋಜನ ಕೂಡ ನಡೆಯಿತು. ಮುಂದೆ ಕೆಲ ದಿನಗಳಲ್ಲಿ ಬೆಲ್ದಾಳದ ವಿಠಲ ತಮ್ಮ ಮನೆಗೆ “ಭಿನ್ನಹಕ್ಕಾಗಿ” ಬರಬೇಕೆಂದು ಕರೆದಾಗ ೨೩-೦೪-೧೯೭೪ ರಂದು ಸುತ್ತಲಿನ ಹಲವಾರು ಹಳ್ಳಿಯ ಜನರೊಂದಿಗೆ “ಸಿದ್ಧರಾಮನಿಗೆ” ಜಯವಾಗಲಿ. ಜಾತಿಯ ಭೂತ ಓಡಿ ಹೋಗಲಿ ಮಾನವರೆಲ್ಲ ಶಿವನ ಮಕ್ಕಳೇ ಎಂದು ಅರಿವು ಬರಲಿ” ಎಂಬ ಜೈಕಾರ ಹಾಕುತ್ತಾ ಎರಡು ದಿನಗಳು ಕಾಲ ಬೆಲ್ದಾಳದ (ವಿಠಲ)ರ ಮನೆಯಲ್ಲಿ ಪೂಜೆ-ಪ್ರಸಾದ ನಡೆಸಿದರು. ಮುಂದೆ ೨೭-೧-೧೯೭೫ ರಂದು ಬಸವಕಲ್ಯಾಣ ಅನುಭವ ಮಂಟಪದಲ್ಲಿ ವಿಠಲನಿಗೆ ಲಿಂಗದೀಕ್ಷೆ ಮಾಡಿ ಸಿದ್ಧರಾಮನೆಂದು ಮರು ನಾಮಕರಣ ಮಾಡಿದರು. ಆ ಸಿದ್ಧರಾಮರೆ ಇಂದು ಬಸವತತ್ವ ಮೇರುವಾಗಿ ಬೆಳೆದು, ಶೂನ್ಯ ಸಂಪಾದನೆಗೆ ವ್ಯಾಖ್ಯೆ ಬರೆದಿದ್ದಾರೆ. ವಚನ ಸಾಹಿತ್ಯದ ಹತ್ತಾರು ಪುಸ್ತಕ ಬರೆದು ಬಸವಶ್ರೀ ಪ್ರಶಸ್ತಿಗೆ ಭಾಜರಾಗಿದ್ದಾರೆ. ಹೀಗೆ ಅನೇಕ ದಲಿತರಿಗೆ ಲಿಂಗ ದೀಕ್ಷೆ, ಉದ್ಯೋಗವಕಾಶ ನೀಡಿ ಆತ್ಮಸ್ಥೈರ್ಯ ತುಂಬಿರುವುದು ಅನುಪಮವಾಗಿದೆ. ಸ್ವತಃ ತಾವೇ ಮಹಾ ಅನಾಥರಾಗಿ ಬಾಲ್ಯ ಕಳೆದ ಶ್ರೀ ಚನ್ನಬಸವಪ್ಪಟ್ಟದ್ದೇವರಿಗೆ ಲೋಕವೇ ಮಹಾಮನೆಯಾಗಿತ್ತು ಲೋಕವನ್ನು ಪ್ರೀತಿಸಿದರು. ಎಲ್ಲಾ ಜನರ ಆದರಕ್ಕೆ ಒಳಗಾದರು. “ನೊಂದವರ ನೋವ ನೋಯದವರೆತ್ತ ಬಲ್ಲರು ಎಂಬುದನ್ನೂ ಅರಿತಿದ್ದ ಶ್ರೀಗಳು ಅನಾಥ ಮಕ್ಕಳೀಗಾಗಿ ವಸತಿ ನಿಲಯವೊಂದನ್ನು ತೆರೆದರು. ಅದಕ್ಕೆ “ಶ್ರೀ ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ” ಎಂದು ಹೆಸರಿಟ್ಟರು. ಕೇವಲ ಹತ್ತಾರು ಮಕ್ಕಳಿಂದ ಆರಂಭವಾದ ಈ ವಸತಿ ನಿಲಯದಲ್ಲಿ ಇಂದು ಸುಮಾರು ೪೦೦ ಕ್ಕೂ ಹೆಚ್ಚು ಮಕ್ಕಳು ಯಾವುದೇ ಜಾತಿ, ಮತಭೇದವಿಲ್ಲದೆ ಸೌಹಾರ್ದತೆಯಿಂದಿದ್ದಾರೆ. ಅವರೆಲ್ಲರಿಗೂ ಪಟ್ಟದ್ದೇವರು ತಾಯಿ ತಂದೆಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅಂತೆಯೇ ಅಲ್ಲಿ ಉಳಿದುಹೋದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಅನಾಥರನ್ನು ದೀನದಲಿತರನ್ನು ಬಡವರನ್ನು ಪಟ್ಟದ್ದೇವರು ನೋಡಿದ ಮಾನವೀಯ ದೃಷ್ಠಿ ತೋರಿದ ಆತ್ಮೀಯತೆಯಿಂದ ಮಕ್ಕಳು ಎಲ್ಲಾ ನೋವುಗಳನ್ನು ಮರೆಯುತ್ತಿದ್ದರು. ಮಹಿಳೆಯರ ಬಗ್ಗೆಯೂ ಶ್ರೀ ಚೆನ್ನಬಸವಪಟ್ಟದ್ದೇವರಿಗೆ ಎಲ್ಲಿಲ್ಲದ ಗೌರವವಿತ್ತು. ಎಲ್ಲಾ ಹೆಣ್ಣು ಮಕ್ಕಳಲ್ಲಿ ಅವರು “ಅಕ್ಕಮಹಾದೇವಿ”ಯನ್ನು ಕಾಣುತ್ತಿದ್ದರು. ಸಭೆ, ಸಮಾರಂಭಗಳ ಆರಂಭಕ್ಕೆ “ಮಹಾತಾಯಿಯರೆ” ಎಂದೇ ಸಂಬೋಧಿಸುತ್ತಿದ್ದರು. ಮಹಾದೇವಿ ಅಕ್ಕನ ಆತ್ಮಸ್ಥೈರ್ಯ, ದಿಟ್ಟನಿಲುವು, ಪರುಷಾಕೃತಿಯನ್ನು ಮುರಿಯುವ ಪ್ರಮೇಯ ಮಹಿಳೆಯರಿಗೆ ತಲುಪಿಸುವ ಕೆಲಸ ಮಾಡಿದರು. ಮಹಿಳೆಯರಿಗೆ ಸಂಗೀತ ಒಳಗೊಂಡಂತೆ ಅನೇಕ ಕಲೆಗಳ ತರಬೇತಿಕೊಡಿಸಿದರು. ಮಹಿಳಾ ಜಯಂತಿಗಳೇ ಆಚರಿಸದ ಕಾಲದಲ್ಲಿ ಅಕ್ಕನಾಗಮ್ಮನ ಭಾವ ಚಿತ್ರವಿಟ್ಟು ಮರೆವಣಿಗೆ ಮಾಡಿ ಮಹಿಳೆಯರಿಗೆ ಗೌರವ ತಂದು ಕೊಟ್ಟರು. ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನವೆಂಬ ಶರಣರ ಸೊಲ್ಲು ಸಾಕ್ಷಾತ್ಕರಿಸಿದರು. ಆಧುನಿಕ ಜಗತ್ತಿನ ಮುಖ್ಯ ಘೋಷಣೆಯೆಂದರೆ “ವಿಶ್ವ ಮಾನವ ಪ್ರಜ್ಞೆ” ಅದೂ ಮಾನವ ಹಕ್ಕುಗಳ ಪ್ರತಿಪಾದನೆ ಮೂಲಕ, ವಾಸ್ತವವಾಗಿ ೧೯೪೮ರ ಡಿಸೆಂಬರ ೧೦ರಂದು ಮಾನವ ಹಕ್ಕುಗಳ ಘೋಷಣೆಯಾಯಿತು. ಅದಕ್ಕಿಂತ ಮೋದಲೇ ಪಟ್ಟದ್ದೇವರು ದಲಿತರಲ್ಲಿ ಹೋಗಿ ಸಹಭೋಜನ ನಡೆಸಿಕೋಟ್ಟದ್ದು, ಮಹಿಳೆಯರಿಗೆ ಆದ್ಯತೆ ನೀಡಿ ಗೌರವಿಸಿದ್ದು, ಮಾನವೀಯ ಪ್ರೀತಿಯಾಗಿದೆ, ಅದು ಮಾನವ ಹಕ್ಕಗಳ ನಿಜವಾದ ರಕ್ಷಣೆಯಾಗಿದೆ, ಎಕೆಂದರೆ ಪ್ರಪಂಚದಲ್ಲಿ ಯಾವುದೇ ಪ್ರಾಣಿಯು ತನ್ನ ಸಜಾತಿಯ ಪ್ರಾಣಿಯ ಮೇಲೆ ದೌರ್ಜನ್ಯಮಾಡಿ ಶೋಷಣೆಗೆ ಒಳಪಡಿಸದು, ಆದರೆ ಮನುಷ್ಯ ಮಾತ್ರ ಮನುಷ್ಯರ ಮೇಲೆ ಸವಾರಿಮಾಡಿ ಮನುಷ್ಯರನ್ನು ಶೋಷಣೆಗೆ ಒಳಪಡಿಸುತ್ತಾನೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯೆಂಬುವುದು ಪಟ್ಟದ್ದೇವರು ಮನಗಂಡು ಎಲ್ಲಾ ಮಾನವರ ಅಂತರಂಗದ ಘನತೆ, ಗೌರವ ಕಾಪಾಡುದರೊಂದಿಗೆ ಗೌರವಿಸುವುದೇ ನಿಜವಾದ ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಶಾಂತಿ ಮತ್ತು ಪ್ರೀತಿಯೆಂದು ಬಲವಾಗಿ ನಂಬಿ ಮಾನವೀಯ ಪ್ರೀತಿಯನ್ನು ಮೆರೆದರು. ಅನುಭವ ಮಂಟಪದ ರೂವಾರಿ: ಜಗತ್ತಿನ ಬಹು ಅಚ್ಚರಿಗಳಲ್ಲಿ ಒಂದು ೧೨ನೆಯ ಶತಮಾನದ ಬಸವಾದಿ ಶರಣರ ಸಮಾಜೋಧಾರ್ಮಿಕ ಕ್ರಾಂತಿ. ಅದು ನಡೆದದ್ದು ಅನುಭವ ಮಂಟಪದ ಮೂಲಕ. ಮನುಷ್ಯರ ಬದುಕಿನ ಎಲ್ಲಾ ಆಯಾಮಗಳ ಚಿಂತನೆಗಾಗಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೋಳ್ಳುವುದಕ್ಕಾಗಿ ಹುಟ್ಟಿಕೊಂಡ ಅನುಭವ ಮಂಟಪವು ಮೊದಲ ಪ್ರಜಾಸತ್ತೆಯ ಧ್ವನಿ, ಮನುಕುಲ ಚರಿತ್ರೆ ಮೊದಲ ಪ್ರಜಾಪ್ರಭುತ್ವದ ಅಧ್ಯಾತ್ಮಿಕ ಸಂಪತ್ತು. ಅನುಭವ ಮಂಟಪದ ಸದಸ್ಯರು ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದರು. ಹಾಗಾಗಿ ಅದು ಉತ್ತಮ ಮನುಷ್ಯರ ಉತ್ತಮ ಸಮಾಜ ಕಟ್ಟುವ ಕಮ್ಮಟವಾಗಿತ್ತು. ಅದಕ್ಕೆ ಮರುಚಾಲನೆ ದೊರೆತದ್ದು ಶ್ರೀ ಚನ್ನಬಸವ ಪಟ್ಟದ್ದೇವರ ಮೂಲಕ ೨೦ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾವರಕ್ಕಿಂತ ಜಂಗಮಕ್ಕೆ ಮಹತ್ವ ನೀಡಿದರ ಫಲವಾಗಿ ಮಂಟಪದಂತಹ ಸಂಸ್ಥೆಯ ಕುರುಹುಗಳೆ ಇಲ್ಲದಿದ್ದಾಗ ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪದ ಕನಸು ಕಂಡು ಸಾಕಾರಗೊಳಿಸಿದರು. ಮತ್ತೋಮ್ಮೆ ೭೭೦ ಅಮರ ಗಣಂಗಳು ಒಂದು ಲಕ್ಷದ ಮೊಂಬತ್ತಾರು ಸಾವಿರ ಜಂಗಮರು ಸೇರಿ ಜಾತಿ,ವರ್ಗ,ವರ್ಣ ರಹಿತ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕೆಂಬ ಉತ್ಕಟತೆಯಿಂದ ಕಟ್ಟಲಾದ ನೂತನ ಅನುಭವ ಮಂಟಪಕ್ಕೆ ಸ್ವತ: ತಾವೇ ಕಲ್ಲು, ಮಣ್ಣು ಹೋತ್ತರು.ಅದನ್ನು ಪಟ್ಟದ್ದೇವರ ಸಮಕಾಲಿನವರಾಗಿದ್ದ ಡಾ|| ಜಯದೇವಿತಾಯಿ ಲಿಗಾಡೆಯವರ ನುಡಿಗಳಲ್ಲಿ ಕೇಳಬೇಕು.

ಮಂಟಪದ ಕಾರ್ಯಕ್ಕೆ ಸೊಂಟಕಟ್ಟಿ ನಿಂತರು

[ಬದಲಾಯಿಸಿ]

ಕಟ್ಟಡಕ್ಕೆ ಕಲ್ಲು, ಮಣ್ಣು ಹೋತ್ತರು ಬಂದಂಥ

[ಬದಲಾಯಿಸಿ]

ನೂರ ಕಂಟಕಗಳಿಗೆ ಎದುರಿಸಿ

[ಬದಲಾಯಿಸಿ]

ಈ ಮೂರು ಸಾಲಿನ ತ್ರಿಪಾದಿಯು ಶ್ರೀ ಪಟ್ಟದ್ದೇವರ ಅನುಭವ ಮಂಟಪ ಕುರಿತ ಪ್ರೀತಿ, ಕಾಳಜಿ ತೋರಿಸುತ್ತವೆ. ಅಲ್ಲಿ ಪ್ರಸಾದನಿಲಯ ತೆರೆದು ದಾಸೋಹ ನಡೆಸಲು ಮುಂದಾದರೂ. ದಾಸೋಹ ನಿಧಿಯನ್ನು ಸ್ಥಾಪಿಸಿದರು.

ಬಯಸದೆ ಬಂದುದು.

[ಬದಲಾಯಿಸಿ]

ಕೀರ್ತಿಯನ್ನು ಕುವೆಂಪು ಅವರು ಶನಿತೋಲಗೆಂದು ಹೇಳಿದರು. ಆದರೆ ಶ್ರೀ ಚನ್ನಬಸವ ಪಟ್ಟದ್ದೆವರು. “ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗ ಭೋಗ” ಎಂಬ ಶರಣರ ವಚನದಂತೆ ಎಲ್ಲದಕ್ಕೂ ನಿರ್ಲಿಪ್ತರಾಗಿದ್ದರು. ಯಾವತ್ತೂ ಪ್ರಚಾರದ ಹಂಬಲವಿರದಿದ್ದರು ಜನಮನ ಇವರ ಕರ್ತ್ಯವ್ಯ ಶಕ್ತಿಗೆ ಸೋತು ಗೌರವಿಸಿತು. ಹಾಗಾಗಿ ಬಸವ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭೆ, ಒಳಗೊಂಡಂತೆ ಹತ್ತಾರು ಪ್ರಶಸ್ತಿ. ಸಂಘ ಸಂಸ್ತೆಗಳೀಂದ ಗೌರವ ಸನ್ಮಾನಗಳು ಸಂದಿವೆ. ಅದರಲ್ಲಿ ಮುಖ್ಯವಾದವುಗಳು ಎಂದರೆ ೧೯೮೭ರಲ್ಲಿ ರಾಜ್ಯೋತ್ಸವ ಸನ್ಮಾನ. ೨೨-೦೯-೧೯೯೦ ರಂದು ಹೊಸ ದೇಹಲಿಯ ಕರ್ನಾಟಕ ಭವನದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಗ್ಯಾನೀ ಜೇಲಸಿಂಗ್ ಅವರಿಂದ ಸಾಮಾಜಿಕ ಸುಧಾರಣೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ೧೯೯೩ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲವು ಇವರ ಸಮಗ್ರ ಬದುಕಿನ ಹೋರಾಟ ಸಂದೇಶವನ್ನು ಗಮನಿಸಿ ಗೌರವ ಡಾಕ್ಟರೇಟ ಪದವಿ ನೀಡಿ ಗೌರವಿಸಿತ್ತು. ಜೋತೆಗೆ ಅವರು ಕನ್ನಡ ಪಟ್ಟದ್ದೇವರೆಂದು ಪ್ರಖ್ಯಾತಿಹೊಂದಿದ್ದರಿಂದ ಮಠದ ಕನ್ನಡ ಪರ ಚಟುವಟಿಕೆಗಳನ್ನು ಗಮನಿಸಿ ೦೧-೧೧-೨೦೦೬ರಂದು “ಸುವರ್ಣ ಕರ್ನಾಟಕ ವರ್ಷಾಚಾರಣೆ” ನಿಮಿತ್ಯ ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ “ಕರ್ನಾಟಕ ಏಕೀಕರಣ ಪುರಸ್ಕಾರ”ವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರಿಂದ ನೀಡಲಾಯಿತ್ತು. (ಈ ಪ್ರಶಸ್ತಿಯನ್ನು ಡಾ. ಚನ್ನಬಸವ ಪಟ್ಟದ್ದೆವರು ಉತ್ತರಾಧಿಕಾರಿಯಾಗಿರುವ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಸ್ವೀಕರಿಸಿದರು.) ಇಂತಹ ಹಲವಾರು ಪ್ರಶಸ್ತಿ ಗೌರವಗಳು ಬಂದಾಗಲು ಅಹಂ ಇವರ ಬಳಿ ಸುಳಿಯಲಿಲ್ಲ. ದೇಶೀಯತೆ ಶ್ರೀ ಚನ್ನಬಸವ ಪಟ್ಟದ್ದೇವರು, ಅಪ್ಪಟ್ಟ ದೇಶೀಯ ಬದುಕು, ನೀಲ ನಿಷ್ಠ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸಿದ ಶ್ರೀಗಳು ನೀರಂತರ ಕಾಯಕ ಮಾಡುತ್ತಿದ್ದರೂ. ಕಾಯಕದಲ್ಲಿ ಮೇಲು ಕೀಳು ಎಣಿಸುತ್ತಿರಲ್ಲಿಲ್ಲ. ಮೀತ ಆಹಾರ, ಖಾದಿಬಟ್ಟೆ ಬಳಸುತಿದ್ದರು. ಎಂದು ಅವರು ಆಧುನಿಕತೆಯ ಸೋಕಿಗೆ ಮಾರು ಹೋಗಲಿಲ್ಲ ಬದುಕಿನ ಕೊನೆಯ ದಿನಗಳ ವರೆಗೂ ಹಲ್ಲುಜ್ಜಲು ಬೇವಿನ ಕಡ್ಡಿಯನ್ನೇ ಬಳಸುತಿದ್ದರು. ಹೀಗೆ ಮಿತ ಆಹಾರ, ಸಾಮಾನ್ಯ ಹಾಸಿಗೆ, ಸರಳ ನಡೆ ನುಡಿ ಹೊಂದಿದ್ದ ಶ್ರೀಗಳು ತಮ್ಮೆಲ್ಲ ಜ್ಞಾನ - ಶಕ್ತಿಯನ್ನು ತಮ್ಮ ಸುತ್ತಲಿನ ಪರಿಸರಕ್ಕೆ ಬಳಸಿ ಕೊಂಡಿದ್ದು ದೇಶೀಯತೆ ಕಾಳಜಿಯನ್ನು ತೋರಿಸುತದ್ದೆ.

ಬಯಲು ...

[ಬದಲಾಯಿಸಿ]

ಶ್ರೀ ಚನ್ನಬಸವ ಪಟ್ಟದ್ದೆವರದು ಮೂರು ಶತಮಾನ ಕಂಡ ಅಪರೂಪದ ವ್ಯಕ್ತಿತ್ವ ೧೯ ನೇಯ ಶತಮಾನದಲ್ಲಿ ಹುಟ್ಟಿ ೨೦ನೇ ಶತಮಾನದಲ್ಲಿ ಬಾಳಿ ಬದುಕಿ ೨೧ ನೇ ಶತಮಾನದಲ್ಲಿ ಬಯಲಾದರೂ ೧೦೯ ವಯಸ್ಸಿನಲ್ಲಿಯೂ ಕಡಲೆ ತಿನ್ನುವಷ್ಟು ಗಟ್ಟಿ ಹಲ್ಲುಗಳು ಹೊಂದಿದ್ದ ಅವರದು ವಜ್ರಕಾಯ. ಒಮ್ಮೆಯೂ ತಮ್ಮ ದಿನಚರಿಯಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ನಿತ್ಯ ಪೂಜೆ, ಧ್ಯಾನ, ಯೋಗದೊಂದಿಗೆ ಇರುತ್ತಿರುವುದರಿಂದಲೇ ಶತಾಯುಷಿಗಳಾಗಿದ್ದರು. ಆರೋಗ್ಯ ತೀರ ಕ್ಷೀಣವಾದಾಗ ಗುಲ್ಬರ್ಗಾದ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಆಸ್ಪತ್ರೇಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತ್ತು. ಸಾವಿಗೆ ಅವರು ಎಂದು ಹೆದರಲಿಲ್ಲಾ. ಎಕೆಂದರೆ ಶರಣರಿಗೆ ಮರಣವೇ ಮಹಾನವಮಿ ಎಂಬುದನ್ನೂ ಬಲವಾಗಿ ನಂಬಿದ್ದರು. ದೀರ್ಘ ಕಾಲದ ಚಿಕಿತ್ಸೆಯನಂತರ ೨೨-೦೪-೧೯೯೯ ರಂದು ಬಸವ ಸ್ಮರಣೆಯೊಂದಿಗೆ ಬಯಲಲ್ಲೆ ಬಯಲಾದರೂ. ಅವರ ನಿಧನ ಕನ್ನಡ ಪರ ಚಿನಂತನೆಯ. ದಿನದಲಿತರ ಧ್ವನಿಯ, ಬಸವ ಸಂಸ್ಕೃತಿ ಚಿಂತನೇಯ ಮಹಾಚೇತನ ಒಂದು ಮರೆಯಾದಂತ್ತಾಯಿತು. ಅವರ ಸಮರ್ಥ ಉತ್ತರಾಧಿಕಾರಿಯಾಗಿರುವ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ಹಿರಿಯ ಶ್ರೀಗಳ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತಾ ಕನ್ನಡ ಸೇವೆ, ಶಿಕ್ಷಣ ಪ್ರಜ್ಞೆ, ಬಸವ ಸಂಸ್ಕೃತಿಯ ಪ್ರಸಾರ, ಇಂಬಿಲ್ಲದಂತೆ ನಡೆಸಿಕೋಂಡು ಬರುತ್ತಿದ್ದಾರೆ. ಶ್ರೀ ಡಾ. ಚನ್ನಬಸವ ಪಟ್ಟದ್ದೆವರ ಕೊರತೆಯನ್ನು ತುಂಬುತಿದ್ದಾರೆ. ದೌರ್ಬಲ್ಯಗಳು ಮನುಷ್ಯ ಬದುಕಿನ ಭಾಗಗಳಾಗಿರುತ್ತವೆ. ಆದರೆ ಅದಕ್ಕೆ ಅಪವಾದವೆಂಬಂತೆ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬದುಕಿದವರೆಂದರೆ, ಶ್ರೀ ಚನ್ನಬಸವ ಪಟ್ಟದ್ದೇವರು ಸಾಮಾನ್ಯವಾಗಿ ದಾರ್ಶನಿಕರನ್ನೋಳಗೊಂಡ೦ತೆ. ಮನುಷ್ಯರು ಪರಿಪೂರ್ಣ ಇರುವುದಿಲ್ಲ. ದೌರ್ಬಲ್ಯಗಳು ಬದುಕಿನ ವಿಶಿಷ್ಟತೆಗಳಾಗುತ್ತವೆ. ಅನೇಕ ಮಹಾತ್ಮರ ಬಗೆಗೊ ಅನುಮಾನ ಗುಮಾನಿಯ ಮಾತುಗಳೀಗೆ. ಸ್ವತಃ ಅನೇಕರು ತಮ್ಮ ದೌರ್ಬಲ್ಯಗಳ ಪರೀಕ್ಷೆಗೆ ಒಳಪಡಿಸಿಕೊಂಡು ಪರಿಶುದ್ಧರಾಗಿ ಹೊರಬಂದ ಉದಾರಣೆಗಳಿವೆ. ಆದರೆ ಪಟ್ಟದ್ದೆವರ ವಿಷಯದಲ್ಲಿ ಮಾತ್ರ ಹಾಗಲ್ಲ. ಇಡಿ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆಯ ಸಾಧ್ಯತೆಗಳಿಲ್ಲ. ಅವರ ಅತೀ೦ದ್ರಿಯ ಪ್ರಜ್ಞೆ, ಮುಖ್ಯವಾದದ್ದು ಜೋತೆಗೆ ಪಟ್ಟದ್ದೇವರು ಒಬ್ಬ ಮಠಾಧೀಶರಾಗಿ ಮಠಗಳೆಂದರೆ ಧರ್ಮ ಪ್ರಚಾರವೆಂಬ ಸ್ಥಾಪಿತ ನಂಬಿಕೆಗಳನ್ನು ಮುರಿದು ಮಠಗಳು ಸಹ ಧರ್ಮಪ್ರಚಾರದೊಂದಿಗೆ ಸಾಮಾಜಿಕ ನ್ಯಾಯ ಒದಗಿಸಿದರೂ. ಜೋತೆಗೆ ಕಲೆ, ಸಾಹಿತ್ಯ, ಸಂಸ್ಕೃತಿಕ ಸಂವರ್ಧನೆಗೆ ದುಡಿದರು. ಈ ಎಲ್ಲಾ ಕಾರಣಗಳಿಂದಾಗಿ ಪಟ್ಟದ್ದೇವರದ್ದು, ಅಚ್ಚರಿಯ ವ್ಯಕ್ತಿತ್ವ, ಪರಿಪೂರ್ಣ ಬದುಕು. ಇಂದು ಮನುಷ್ಯ ನಾಗರಿಕನಾದಂತೆ ಭೌತಿಕವಾಗಿ ಬೆಳೆದು ಅಂತರಂಗದಲ್ಲಿ ಕುಸಿಯುತ್ತಿದ್ದಾನೆ. ಇದರಿಂದ ಮಾನವೀಯ ಮೌಲ್ಯ ಜೀವನ ಪ್ರೀತಿ ಇಲ್ಲವಾಗುತ್ತಿವೆ. ಇದಕ್ಕೆ ಏಕೈಕ ಪರಿಹಾರವೆಂದರೆ ಪಟ್ಟದ್ದೇವರ ಜೀವನ ಆದರ್ಶಗಳು ನಮ್ಮ ಬದುಕಿನ ಭಾಗವಾಗಬೇಕು. ಎಕೆಂದರೆ ಅವರು ಶರಣ ತತ್ವಗಳನ್ನು ಭೋಧಿಸಲಿಲ್ಲ. ಬದುಕಿ ತೋರಿಸಿದರು. ಪ್ರಯೋಗ ಮಾಡಿನೋಡಲಿಲ್ಲ. ಬದುಕ್ಕನ್ನೇ ಪ್ರಯೋಗಕ್ಕೆ ಒಳಪಡಿಸಿಕೊಂಡರು. ಅಂತೆಯೇ ಎಲ್ಲವರ್ಗದ ಜನರ ಆದರ, ಗೌರವಕ್ಕೆ ಪಾತ್ರರಾದರು. ಭವಿಷ್ಯದ ಬದುಕಿಗೆ ಗತಕಾಲದ ಚಾರಿತ್ರ್ಯಕ್ಕೆ ಪ್ರಜ್ಞೆ ಅವಶ್ಯಕ. ಹಾಗಾಗಿ ಇವರನ್ನು ನೋಡಿ ಮುಂದಿನವರು ಕಲಿಯಬೇಕಾದದ್ದು ಬಹಳಷ್ಟಿದೆ. ಎಕೆಂದರೆ “ಹಿಂದಣ ಹೆಜ್ಜೆಯನ್ನರಿತಲ್ಲದೆ ನಿಂದಹೆಜ್ಜೆಯನರಿಯಬಾರದು” ಎಂಬ ಅಲ್ಲಮನ ಮಾತು ಅರ್ಥಪೂರ್ಣವಾಗಿದೆ. ಇಂತಹ ಕಾಯಕ ಪರಿಣಾಮಿಯನ್ನು ಪಡೆದ ನಾಡು ನಿಜಕ್ಕೂ ಧನ್ಯ.

ಈ ನಿಜಸ್ವರೂಪ ಎತ್ತಿ ಹಿಡಿದು ಬರೆದವರು

ಡಾ: ಬಸವರಾಜ ಬಲ್ಲೂರ

[ಬದಲಾಯಿಸಿ]

ಇದನ್ನು ವಿಕೀಪೀಡಿಯಾಗೆ ಸೇರಿಸಿದವರು

ಕೆ. ಪೂರ್ಣಚಂದ್ರ

[ಬದಲಾಯಿಸಿ]