ಸದಸ್ಯ:Pavithra bk/sandbox4
ಅರ್ಕಿಮಿಡೀಸು
[ಬದಲಾಯಿಸಿ]೧.ಅರ್ಕಿಮಿಡೀಸನು ಅಕ್ಕಸಾಲೆಯ ಮೋಸವನ್ನು ಕಂಡುಹಿಡಿದದ್ದು
[ಬದಲಾಯಿಸಿ]ಈಗ್ಗೆ ಸುಮಾರು ಎರಡು ಸಾವಿರದ ಇನ್ನೂರು ವರುಷಗಳ ಹಿಂದೆ ಇಟಲಿ ದೇಶದ ಸಮೀಪದಲ್ಲಿರುವ ಸಿಸಿಲೀ ದ್ವೀಪದ ಮುಖ್ಯಪಟ್ಟಣವಾದ ಸೈರಕ್ಯೂಸ್ ನಗರದಲ್ಲಿ ಹಯರೋ ಎಂಬ ದೊರೆಯು ರಾಜ್ಯಭಾರ ಮಾಡುತ್ತಿದ್ದನು. ಆತನ ಆಸ್ಥಾನದಲ್ಲಿ ದೊರೆಯ ಸಂಬಂಧಿಯೂ ಸ್ನೇಹಿತನೂ ಆದ ಆರ್ಕಿಮಿಡೀಸೆಂಬ ಅತಿ ಚತುರನಾದ ಒಬ್ಬ ಪಂಡಿತ ಶ್ರೇಷ್ಠನಿರುವನು. ಈತನು ಗಣಿತಶಾಸ್ತ್ರ ವಿಶಾರದನು; ಐಶ್ವರ್ಯವಂತನಾಗಿದ್ದರೂ ಪ್ರಪಂಚದ ಸೌಖ್ಯಗಳಲ್ಲಿ ಲೋಲುಪನಾಗಿ ಹೆಮ್ಮೆಯಿಂದ ಮೆರೆಯದೆ ಭೌತಿಕಜ್ಞಾನವನ್ನು ಸಂಪಾದಿಸುವುದರಲ್ಲಿಯೇ ಕೇವಲ ಆಸಕ್ತನಾಗಿ ಜ್ಞಾನಾನಂದವನ್ನು ಅನುಭವಿಸುತ್ತಿರುವನು. ಈತನು ಪ್ರಪಂಚದಲ್ಲಿ ನಡೆಯುವ ಆರ್ಕಿಮಿಡೀಸು. (ಕ್ರಿ.ಪೂ.287-212) ಪ್ರತಿಯೊಂದು ಕಾರ್ಯವೂ ಯಾವುದೋ ಒಂದು ನಿಯಮವನ್ನನುಸರಿಸಿಯೇ ನಡೆಯುವುದೆಂದೂ ಅದರ ತತ್ವವನ್ನು ತಿಳಿದಲ್ಲಿ ಪ್ರಪಂಚವನ್ನೇ ತನ್ನ ವಶಮಾಡಿಕೊಳ್ಳಬಹುದೆಂದೂ ಸಂಪೂರ್ಣವಾಗಿ ನಂಬಿದ್ದನು.
ಆರ್ಕಿಮಿಡೀಸನು ಬಾಲ್ಯದಲ್ಲಿರುವಾಗ ಗ್ರೀಕರಿಗೂ, ರೋಮನ್ನರಿಗೂ, ಕಾರ್ತಜಿನಿಯನ್ನರಿಗೂ, ಬಹಳ ಫಲವತ್ತಾಗಿಯೂ ಸೊಗಸಾಗಿಯೂ ಇರುವ ಸಿಸಿಲೀ ದೇಶದ ಪ್ರಭುತ್ವಕ್ಕಾಗಿ, ಏಕಪ್ರಕಾರಯುದ್ಧ ನಡೆಯುತ್ತಿತ್ತು. ಹಯರೋ ದೊರೆಯು ರೋಮನ್ನರಿಗೆ ಸಹಾಯಕನಾಗಿ ಸೇರಿ, ಅವರುಜಯವನ್ನು ಹೊಂದಲು, ಮುಂದೆ ಐವತ್ತು ವರುಷಗಳವರೆಗೂ ಇವನು ನಿರಾತಂಕನಾಗಿ ಸೈರಕ್ಯೂಸಿನಲ್ಲಿ ರಾಜ್ಯಭಾರ ಮಾಡಿಕೊಂಡಿದ್ದನು. ದೇಶವು ಇಂತಹ ಸ್ಥಿಮಿತ ಸ್ಥಿತಿಯಲ್ಲಿರುವಾಗಲೇ ಅಲ್ಲವೇ ವಾಣಿಜ್ಯವಾಗಲೀ ಕುಶಲವಿದ್ಯೆಗಳಾಗಲೀ ಅಭಿವೃದ್ಧಿಗೆ ಬರಲು ಸಾಧ್ಯವು? ದೊರೆಯು ಅನೇಕ ಜಹಜುಗಳನ್ನು ಕಟ್ಟಿ ಈಜಿಪ್ಟು, ಆಫ್ರಿಕ, ಫ್ರಾನ್ಸು ಮೊದಲಾದ ದೂರದೇಶಗಳೊಡನೆ ಕೂಡ ವ್ಯಾಪಾರ ಮಾಡಿ ತನ್ನ ಪ್ರಜೆಗಳನ್ನು ಕೇವಲ ಉತ್ತಮ ಸ್ಥಿತಿಗೆ ತಂದನು.
ಆರ್ಕಿಮಿಡೀಸನು ಜಹಜುಗಳನ್ನು ಕಟ್ಟುವ ಕಾರ್ಖಾನೆಗಳಲ್ಲಿಯೂ, ಜಹಜುಗಳು ನಿಲ್ಲುವ ಬಂದರಿನಲ್ಲಿಯೂ ತನ್ನ ಕಾಲವನ್ನು ಕಳೆಯುತ್ತ, ಅಲ್ಲಿನ ಕೆಲಸಗಾರರಿಗೂ ನಾವಿಕರಿಗೂ ಅವರ ಕೆಲಸಕ್ಕುಪಯೋಗವಾಗುವ ಹೊಸಹೊಸ ಯುಕ್ತಿಗಳನ್ನು ತನ್ನ ಬುದ್ಧಿ ಕುಶಲತೆಯಿಂದ ಆಲೋಚಿಸಿ ಹೇಳಿಕೊಡುತ್ತಿದ್ದನು. ಅವರುದೊಡ್ಡ ಭಾರಗಳನ್ನು ಬಹುಕಷ್ಟಪಟ್ಟು ಎತ್ತುವುದನ್ನು ನೋಡಿ, ಆ ಕೆಲಸವನ್ನು ಸುಲಭವಾಗಿ ಮಾಡುವುದಕ್ಕೆ ತಕ್ಕ ಉಪಾಯಗಳನ್ನು ಕಲ್ಪಿಸಿಕೊಡುತ್ತಿರುವನು. ಆಗಲೂ ಭಾರವಾದ ಕಲ್ಲು ಮೊದಲಾದುವನ್ನು ಎತ್ತುವುದಕ್ಕಾಗಿ ಹಾರೆಯಕೋಲನ್ನು ಉಪಯೋಗಿಸುತ್ತಿದ್ದರು. ಮೊನೆಯಾದ ಕೊನೆಯನ್ನು ಕಲ್ಲಿನ ಕೆಳಕ್ಕೆ ಕೊಂಚ ತೂರಿಸಿ, ಆ ಕೊನೆಯ ಹತ್ತಿರವೇ ಹಾರೆಯನ್ನು ಒಂದು ಕಲ್ಲಿನತುಂಡಿನ ಮೇಲಿಟ್ಟು, ಹಾರೆಯ ಮತ್ತೊಂದು ಕೊನೆಯನ್ನು ಒತ್ತುವುದರಿಂದ ಕಲ್ಲನ್ನು ಸುಲಭವಾಗಿ ಎತ್ತುವರು. ಈ ಸನ್ನೆಯಿಂದ ಐದಾರು ಜನರಿಂದಲೂ ಎತ್ತಲು ಸಾಧ್ಯವಲ್ಲದ ಭಾರವನ್ನು ಒಬ್ಬನೇ ಎತ್ತುವುದಕ್ಕೆ ಹೇಗೆ ಸಾಧ್ಯವಾಗುವುದೆಂಬ ವಿಷಯವನ್ನು ಆರ್ಕಿಮಿಡೀಸನು ಚೆನ್ನಾಗಿ ಪರ್ಯಾಲೋಚಿಸಿ, ಅಚೇತನ ಪದಾರ್ಥವಾದ ಹಾರೆಯು ಸ್ವತಃ ಯಾವ ಶಕ್ತಿಯನ್ನೂ ಕೊಡಲಾರದೆಂದೂ, ಮನುಷ್ಯನ ಶಕ್ತಿಯನ್ನೇ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಅವಕಾಶ ಕೊಡುವ ಸಲಕರಣೆಯೆಂದೂ ತಿಳಿದು, ಇದರ ಉಪಯೋಗವನ್ನು ಸರಿಯಾಗಿ ತಿಳಿಯಲು ಪ್ರಯೋಗ ಪರೀಕ್ಷೆಯನ್ನು ಮಾಡಿದನು. ಹಾರೆಯ ಮೊನೆಯಾದ ಕೊನೆಯಿಂದ ತುಂಡುಕಲ್ಲಿನವರೆಗೂ ಇರುವ ಭುಜವು ಕಡಿಮೆಯಾಗಿಯೂ, ಮತ್ತೊಂದು ಭುಜವು ಉದ್ದವಾಗಿಯೂ, ಇದ್ದ ಹಾಗೆಲ್ಲಾ ಭಾರವನ್ನೆತ್ತುವುದು ಹೆಚ್ಚಾಗಿ ಸುಲಭವಾಗುವುದು. ಉದ್ದವಾದ ಭುಜವು ಮೋಟಾದ ಭುಜದ ಐದರಷ್ಟಿದ್ದಲ್ಲಿ, ಉದ್ದವಾದ ಭುಜದ ಕೊನೆಯಲ್ಲಿಟ್ಟ ಬಲವು ಮೊನೆಯಾದ ಕೊನೆಯಲ್ಲಿ ಐದರಷ್ಟಾಗುವುದು. ಆದರೆ ಉದ್ದವಾದ ಭುಜದ ಕೊನೆಯು ಐದು ಅಂಗುಲ ಕೆಳಕ್ಕಿಳಿದಲ್ಲಿ ಮೊನೆಯಾದ ಕೊನೆಯು ಒಂದು ಅಂಗುಲ ಮಾತ್ರವೇ ಮೇಲಕ್ಕೇಳುವುದು. ಹೀಗೆಯೇ ಉದ್ದವಾದ ಭುಜವು ಮೋಟಾದ ಭುಜದ ಹತ್ತರಷ್ಟಿದ್ದಲ್ಲಿ, ಮೊನೆಯಾದ ಕೊನೆಯಲ್ಲಿ ಮೊಂಡುಕೊನೆಯ ಬಲದ ಹತ್ತರಷ್ಟು ಬಲವೂ, ಹತ್ತರಲ್ಲಿ ಒಂದು ಭಾಗ ಚಲನೆಯೂ ಉಂಟಾಗುವುವು. ಆದುದರಿಂದ ಹತ್ತು ಜನರು ಎತ್ತಬೇಕಾದ ಭಾರವನ್ನು ಹಾರೆಯ ಮೂಲಕ ಒಬ್ಬನೇ ಎತ್ತಬಹುದಾಯಿತು. ಇದನ್ನು ನೋಡಿ ಆರ್ಕಿಮಿಡೀಸನು, “ಆಹಾ! ತಕ್ಕಷ್ಟು ಉದ್ದವಾದ ಹಾರೆಯ ಕೋಲು ಸಿಕ್ಕಿದರೆ ಎಷ್ಟು ದೊಡ್ಡದಾದ ಭಾರವನ್ನಾದರೂ ಎತ್ತಬಹುದಲ್ಲವೇ !ಹೀಗೆ ನಮ್ಮ ಭೂಮಿಯನ್ನೆಲ್ಲವನ್ನೂ ನಾನೊಬ್ಬನೇ ಎತ್ತಲುತಡೆಯೇನಿರುವುದು? ನನಗೆ ಬೇಕಾದದ್ದುತಕ್ಕ ಉದ್ದವುಳ್ಳ, ಬಗ್ಗದೇ ಇರುವ, ಹಾರೆಯೊಂದು, ಅದನ್ನು ಮೊನೆಯಾದ ಕೊನೆಯ ಒಳಿ ಇಡಲು ತಕ್ಕ ಆಧಾರವೊಂದು, ನಾನು ನಿಂತುಕೊಳ್ಳುವುದಕ್ಕೆ ಸ್ಥಿರವಾದ ಸ್ಥಳವೊಂದು, ಇವನ್ನು ನನಗೆ ಕೊಟ್ಟಲ್ಲಿ ನಮ್ಮ ಭೂಗೋಳವನ್ನು ನಾನೊಬ್ಬನೇ ಎತ್ತುವುದರಲ್ಲಿ ಸಂಶಯವಿಲ್ಲ”, ಎಂದು ಆರ್ಕಿಮಿಡೀಸನು ದೊರೆಯೊಡನೆ ಹೇಳಿದನು.ಆದರೆ ನಮಗೆ ಈಗ ತಿಳಿದಿರುವ ಮೇರೆ, ಭೂಮಿಯು ಆಕಾಶದಲ್ಲಿ ತೇಲಾಡುತ್ತಿರುವ ಗೋಳವಾಗಿರುವುದರಿಂದ, ಈ ಮಾತು ಬರೀಯುಕ್ತಿಯ ಮಾತೇ ವಿನಾ ಸಾಧಿಸಲು ಎಂದಿಗೂ ಆಗಲಾರದು. ಈ ರೀತಿಯಲ್ಲಿ ಅತಿಚಾತುರ್ಯದಿಂದ ಅನೇಕ ಯುಕ್ತಿಗಳನ್ನೂ ದೊರೆಗೂ ಜನರಿಗೂ ಅತ್ಯಂತ ಪ್ರೇಮಪಾತ್ರನಾಗಿ ಆರ್ಕಿಮಿಡೀಸನು ಎಲ್ಲರಿಂದಲೂ ಗೌರವವನ್ನು ಹೊಂದುತಿದ್ದನು.
ಹೀಗಿರುವಲ್ಲಿ ಆರ್ಕಿಮಿಡೀಸನ ಹೆಸರು ಪ್ರಪಂಚದಲ್ಲೆಲ್ಲಾ ಎಂದಿಗೂ ಮರೆಯದಂತೆ ನೆಲೆಗೊಳ್ಳುವ ಸಂದರ್ಭವೊಂದು ಒದಗಿತು. ದೊರೆಯು ತನ್ನ ಪಟ್ಟಣದಲ್ಲಿರುವ ದೇವಸ್ಥಾನಗಳಲ್ಲೊಂದರಲ್ಲಿನ ದೇವರಿಗಾಗಿ ಒಂದು ಚಿನ್ನದ ಕಿರೀಟವನ್ನು ಮಾಡಿಸಿದನು. ಅದು ನೋಡುವುದಕ್ಕೆ ಥಳಥಳನೆ ಹೊಳೆಯುತ್ತ ಎಷ್ಟೋ ಸುಂದರವಾಗಿ, ದೊರೆಯು ಕೊಟ್ಟಿದ್ದ ಚಿನ್ನದ ತೂಕಕ್ಕೆ ಗುಲಗಂಜಿ ತೂಕವೂ ಕಡಿಮೆಯಿಲ್ಲದೆ, ಸರಿಯಾಗಿತ್ತು. ಆದರೆ ಸಾಮಾಜಿಕರಲ್ಲೊಬ್ಬನು ಅಕ್ಕಸಾಲೆಯು ಕಿರೀಟದಲ್ಲಿ ಕೊಂಚ ಬೆಳ್ಳಿಯನ್ನು ಸೇರಿಸಿ ಆ ತೂಕದ ಚಿನ್ನವನ್ನು ಕಳ್ಳತನ ಮಾಡಿರುವಂತಿದೆಯೆಂದು ಸಲಹೆ ಕೊಟ್ಟದ್ದರಿಂದ ದೊರೆಗೆ ಅನುಮಾನ ಹುಟ್ಟಿತು.ದೊರೆಯು ಕೇವಲ ನ್ಯಾಯ ಪಕ್ಷಪಾತಿಯಾದುದರಿಂದ, ಕಾರಣತೋರಿಸದೆ, ಅಕ್ಕಸಾಲೆಯ ಮೇಲೆ ಮೋಸವನ್ನು ಹೊರಿಸಲು ಒಡಂಬಡಲಿಲ್ಲ. ಆದುದರಿಂದ ನಿಜಸ್ಥಿತಿಯನ್ನು ಕಂಡುಹಿಡಿಯಬೇಕೆಂದೆನಿಸಿ, ಆರ್ಕಿಮಿಡೀಸನನ್ನು ಕರೆಯಿಸಿ ಆತನ ಕೈಗೆ ಆ ಕಿರೀಟವನ್ನು ಕೊಟ್ಟು, “ಅಯ್ಯಾ! ಈ ಕೆಲಸವು ನಿನ್ನಿಂದಲ್ಲದೆ ಮತ್ತಾರಿಂದಲೂ ಸಾಧ್ಯವಿಲ್ಲ; ಇದು ಅಪ್ಪಟವಾದ ಚಿನ್ನವೋ? ಅಥವಾ ಬೆಳ್ಳಿಯು ಬೆರಕೆಯಾಗಿದೆಯೋ? ಹಾಗೆ ಬೆರಕೆಯಾಗಿದ್ದಲ್ಲಿ ಎಷ್ಟು ಬೆಳ್ಳಿ ಬೆರಿಕೆಯಾಗಿರುವುದು? ಇವನ್ನು ಕಂಡುಹಿಡಿದು ನನಗೆ ತಿಳಿಸಬೇಕಯ್ಯ” ಎಂದು ಹೇಳಿದನು. ಆರ್ಕಿಮಿಡೀಸನು, ನೋಡುವೆನೆಂದು ಹೇಳಿ, ಕಿರೀಟವನ್ನು ತೆಗೆದುಕೊಂಡು ಮನೆಗೆ ಹೋದನು. ಅಂದಿನಿಂದಲೂ ಆತನಿಗೆಯಾವಾಗಲೂ ಅದೇ ಆಲೋಚನೆ ಮನಸ್ಸನ್ನು ಪಿಶಾಚಿ ಹಿಡಿದಂತೆ ಹಿಡಿಯಿತು. ಹೊರಗೆ ಹೋಗುವಾಗಲೂ, ಊಟ ಮಾಡುವಾಗಲೂ, ಕನಸಿನಲ್ಲಿಯೂ ಇದೇ ಆಲೋಚನೆ. “ಕಿರೀಟವನ್ನು ನೋಡಿದರೆ ಚಿನ್ನದ ಕಾಂತಿಯೇ ಇದೆ, ಬಿಳುಪಿಲ್ಲ; ಬೆಳ್ಳಿ ಸೇರಿದ್ದರೂ ಕೊಂಚವೇ ಸೆರಿರಬೇಕು; ನೋಡೋಣ” ಎಂದು ಹೇಳಿ, ಒಂದು ಆಲೋಚನೆ ಹೊಳೆಯಲು, ಕೂಡಲೇ ಅಪ್ಪಟವಾದ ಚಿನ್ನದಗಟ್ಟಿಯೊಂದನ್ನು ಬೆಳ್ಳಿಯ ಗಟ್ಟಿಯೊಂದನ್ನು ತರಿಸಿ, ಬೇರೆ ಬೇರೆ ಕರಗಿಸಿ, ಚಚ್ಚೌಕನಾಗಿ ಒಂದೇ ಅಳತೆಯಿರುವಂತೆ ಒಂದು ಚಿನ್ನದಗಟ್ಟಿಯನ್ನೂ ಒಂದುಬೆಳ್ಳಿಯ ಗಟ್ಟಿಯನ್ನೂ ಮಾಡಿಸಿದನು. ಅಳತೆಯಲ್ಲಿ ಎರಡೂ ಒಂದೇ ಸಮನಾಗಿದ್ದರೂ, ತೂಕದಲ್ಲಿ ಮಾತ್ರ ಚಿನ್ನದಗಟ್ಟಿಯು ಬೆಳ್ಳಿಯ ಗಟ್ಟಿಯ ಒಂದೂ ಮುಕ್ಕಾಲಿಗಿಂತಲೂ ಕೊಂಚ ಹೆಚ್ಚಾಗಿತ್ತು.“ಕಿರೀಟವು ಅಪ್ಪಟ ಚಿನ್ನವಾಗಿರುವ ಪಕ್ಷಕ್ಕೆ ಅದನ್ನು ಕರಗಿಸಿ ಚಚ್ಚೌಕನಾದ ಗಟ್ಟಿಯಾಗಿ ಮಾಡಿ ಅದೇ ಅಳತೆಯ ಅಪ್ಪಟ ಚಿನ್ನದಗಟ್ಟಿಯೊಡನೆ ತೂಗಿದಲ್ಲಿ ಎರಡೂ ಒಂದೇ ತೂಕವಾಗಿರಬೇಕಲ್ಲವೇ? ಹಾಗಿಲ್ಲದ ಪಕ್ಷಕ್ಕೆ ಚಿನ್ನದ ಗಟ್ಟಿಗಿಂತಲೂ ತೂಕದಲ್ಲಿ ಕಡಿಮೆಯಾಗಿಯೂ ಅದೇ ಅಳತೆಯ ಬೆಳ್ಳಿಯ ಗಟ್ಟಿಗಿಂತಲೂ ಹೆಚ್ಚಾಗಿಯೂ ಇರುವುದು. ಇದಕ್ಕೆ ಕಿರೀಟವನ್ನು ಕರಗಿಸಬೇಕಾಗುವುದು”ಎಂದು ಆಲೋಚಿಸಿ, “ಅಯ್ಯೋ! ಇಷ್ಟು ಸೊಗಸಾಗಿ ಮಾಡಿರುವ ಕಿರೀಟವನ್ನು ಹಾಳುಮಾಡುವುದೇ?”ಎಂದು ಹಿಂದೆಗದು, ಕೂಡಲೇ ಮತ್ತೊಂದು ಆಲೋಚನೆ ತೋರಲು, “ಇಷ್ಟು ತೊಂದರೆ ಏಕೆ! ಕಿರೀಟದಲ್ಲಿನ ಚಿನ್ನದ ಸಲೆ ಅಳತೆಯನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾದಲ್ಲಿ ಕೆಲಸ ಸುಲಭವಾಯಿತಲ್ಲಾ! ಒಂದು ಸಲೆ ಅಂಗುಲದ ಅಪ್ಪಟ ಚಿನ್ನದ ತೂಕವು 4880 ಗ್ರ್ರೈಗಳು ( 1ತೊಲೆತೂಕ=180 ಗ್ರ್ರೈಗಳು) ಈ ಕಿರೀಟದಲ್ಲಿನ ಚಿನ್ನದ ಸಲೆಅಳತೆ ತಿಳಿದಲ್ಲಿ, ಅಪ್ಪಟ ಚಿನ್ನವಾಗಿದ್ದರೆ ಎಷ್ಟು ತೂಕವಿರಬೇಕೆಂದು ತಕ್ಷಣ ಕಂಡುಹಿಡಿಯಬಹುದು; ಆದರೆ ಈ ಅಳತೆಯನ್ನು ತಿಳಿಯುವ ಬಗೆ ಹೇಗೆ !”ಎಂದು ಚಿಂತಿಸುತ್ತಿದ್ದನು.
ಆರ್ಕಿಮಿಡೀಸನಿಗೆ ಯಾವುದಾದರೂ ಒಂದು ವಿಷಯವಾದ ಆಲೋಚನೆ ಹುಟ್ಟಿದಲ್ಲಿ ಅದರ ಕೊನೆಗಾಣುವವರೆಗೂ ಆತನು ಬಿಡುತ್ತಿರಲಿಲ್ಲ. ಸಾಮಾನ್ಯರಂತೆ ಬೇಸರಪಟ್ಟು, ವಿಷಯವು ಅಸಾಧ್ಯವೆಂದು ಹೇಳಿ, ಅದಕ್ಕಾಗಿ ತಲೆಚಚ್ಚಿಕೊಂಡು ಸಾರ್ಥಕವೇನೆಂದು ತಣ್ಣಗಾಗುತ್ತಿರಲಿಲ್ಲ. ಆತನು ತನ್ನಲ್ಲಿತಾನೇ ಮಾತನಾಡಿಕೊಳ್ಳುತ್ತ, ಬೆರಳುಗಳಿಂದ ಆಕಾಶದಲ್ಲಿ ಗೆರೆಗಳನ್ನು ಹಾಕುತ್ತ, ಬಹಿರ್ದೇಶಕ್ಕೆ ಹೋದಾಗ ನೆಲದಮೇಲೆ ರೇಖೆಗಳನ್ನೆಳೆಯುತ್ತ, ಅಭ್ಯಂಜನ ಮಾಡಿಕೊಂಡಾಗ ತನ್ನ ಮೈಮೇಲೆಲ್ಲಾ ಉಗುರುಗಳಿಂದ ಚಿತ್ರಗಳನ್ನು ಬರೆದುಕೊಳ್ಳುತ್ತ ನೋಡುವವರಿಗೆ ಹುಚ್ಚನಂತೆ ಕಾಣುತ್ತಿದ್ದನು. ನಿಶ್ಚಯವಾದ ಜ್ಞಾನವನ್ನು ಪಡೆಯಬೇಕಾದರೆ ಮನಸ್ಸು ಹೀಗಲ್ಲವೇ ಏಕಾಗ್ರತೆಯಿಂದಿರಬೇಕು! ಈತನಿಗೆ ಕಿರೀಟದ ಆಲೋಚನೆಯು ಪೂರಾ ಹತ್ತಿಹೋಯಿತು. ಆಗಿನ ಕಾಲದಲ್ಲಿ ಆ ಪ್ರಾಂತದ ಜನರು ಸ್ನಾನ ಮಾಡುವುದಕ್ಕಾಗಿಯೇ ಬೇರೆ ಕಟ್ಟಡಗಳನ್ನು ಕಟ್ಟಿ ಅವುಗಳಲ್ಲಿ ಐಶ್ವರ್ಯವಂತರಾದವರು ಚಿತ್ರ ವಿಚಿತ್ರವಾದ ಕೆಲಸಗಳನ್ನು ಮಾಡಿದ ಅಮೃತಶಿಲೆಯ ತೊಟ್ಟಿಗಳನ್ನು ಇಟ್ಟಿರುವರು. ಅವುಗಳಲ್ಲಿ ನೀರುತುಂಬಿ ಆ ನೀರಿನಲ್ಲಿ ಮಲಗಿಕೊಳ್ಳುವರು. ಆರ್ಕಿಮಿಡೀಸನು ಎಂದಿನಂತೆ ತೊಟ್ಟಿಯಲ್ಲಿ ಇಳಿಯಲು, ಪೂರಾ ತುಂಬಿದ್ದ ತೊಟ್ಟಿಯ ನೀರಿನಲ್ಲಿ ಕೊಂಚಭಾಗ ಕೆಳಕ್ಕೆ ಚೆಲ್ಲಿ ಹೋಯಿತು. ಆತನು ಹೊರಕ್ಕೆ ಬಂದಾಗ ತೊಟ್ಟಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಹೀಗೆಯೇ ಪ್ರತಿನಿತ್ಯವೂ ನಡೆಯುತ್ತಿದ್ದರೂ ಆ ದಿನ ಕಿರೀಟದ ಆಲೋಚನೆ ತುಂಬಿರುವ ಆರ್ಕಿಮಿಡೀಸನಿಗೆ ಈ ವಿಷಯವು ಥಟ್ಟನೆ ಒಂದು ಹೊಸ ಸಲಹೆಯನ್ನುಕೊಟ್ಟಿತು. “ನಾನು ತೊಟ್ಟಿಯನ್ನು ಹೊಕ್ಕರೆ ಅದರಲ್ಲಿದ್ದ ನೀರು ಏಕೆ ಚೆಲ್ಲಿ ಹೋಗಬೇಕು? ನನ್ನ ದೇಹವೂ ನೀರೂ ಸಹಾ ಒಂದೇ ಸಮಯದಲ್ಲಿ ಒಂದೇ ಸ್ಥಳವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಅಲ್ಲವೇ? ಚೆಲ್ಲಿ ಹೋದ ನೀರಿನ ಅಳತೆಯನ್ನು ಕಂಡುಹಿಡಿ¬¬ಯುವುದು ಅತಿ ಸುಲಭ; ಈ ಅಳತೆಯು ನನ್ನ ದೇಹದ ಅಳತೆಗೆ ಸರಿಯಾಗಿರಬೇಕು. ಇನ್ನು ನನ್ನ ದೇಹದ ಸಲೆ ಅಳತೆಯನ್ನು ತಿಳಿಯಬೇಕಾದರೆ ಅದನ್ನು ಕರಗಿಸಿ ಚೌಕನಾದ ಗಟ್ಟಿಯಾಗಿ ಮಾಡಬೇಕಾದ ಅವಶ್ಯಕತೆ ಇಲ್ಲವಲ್ಲಾ! ಬದುಕಿದೆ. ಹೀಗೆಯೇ ಕಿರೀಟದ ಸಲೆ ಅಳತೆಯನ್ನೂ ಕಂಡುಹಿಡಿಯಬಹುದಲ್ಲವೇ?” ಎಂದು ಚಿಂತಿಸಿ, ಸಂತೋಷ ಪರವಶನಾಗಿ ಮೈಮರೆತು, ಬೆತ್ತಲೆ ಮೈಯಿಂದ ನೀರನ್ನು ಸುರಿಸಿಕೊಳ್ಳುತ್ತ ಹೊರಕ್ಕೆ ಬಂದು, “ತಿಳಿದು ಹೋಯಿತು, ತಿಳಿದು ಹೋಯಿತು” ಎಂದು ಹುಚ್ಚನಂತೆ ಬೀದಿ ಯುದ್ದಕ್ಕೂ ಗಟ್ಟಿಯಾಗಿ ಕೂಗುತ್ತ ಮನೆಗೆ ಓಡಿಹೋದನು.
ಮನೆಗೆ ಹೋದೊಡನೆಯೇ ಆರ್ಕಿಮಿಡೀಸನು ಒಂದು ದೊಡ್ಡ ಕೊಳಗ ಪಾತ್ರೆಯನ್ನು ತರಿಸಿ, ಅದರ ತುಂಬ ನೀರು ತುಂಬಿಸಿ, ಕಿರೀಟವನ್ನು ತೆಗೆದು ಅದಕ್ಕೊಂದು ದಾರವನ್ನು ಕಟ್ಟಿ, ಅದನ್ನು ಹಿಡಿದು ಕಿರೀಟವನ್ನು ಕೊಳಗ ಪಾತ್ರೆಯ ನೀರಿನೊಳಕ್ಕೆ ಮೆಲ್ಲನೆ ಬಿಟ್ಟನು. ಅದು ನೀರಿನೊಳಗೆ ಪೂರಾ ಮುಳುಗುವಲ್ಲಿ ಅದರ ಅಳತೆಗೆ ಸರಿಯಾದ ನೀರು ಹೊರಕ್ಕೆ ಚೆಲ್ಲಿಹೋಯಿತು. ಕೂಡಲೇ ಕಿರೀಟವನ್ನು ಹೊರಕ್ಕೆ ತೆಗೆದು ಒಂದು ಅಳತೆಯ ಪಾತ್ರೆಯಿಂದ ನೀರನ್ನು ಪುನಃ ಕೊಳಗಪಾತ್ರೆಯ ತುಂಬ ತುಂಬಿ, ಕಿರೀಟದ ಅಳತೆಯನ್ನು ಕಂಡುಹಿಡಿದನು.
ತರುವಾಯ ಕಿರೀಟದ ತೂಕದಷ್ಟು ಅಪ್ಪಟ ಚಿನ್ನವನ್ನು ಅದೇ ತೂಕದ ಅಪ್ಪಟ ಬೆಳ್ಳಿಯನ್ನೂ ಬೇರೆ ಬೇರೆ ಕರಗಿಸಿ ಗಟ್ಟಿಗಳಾಗಿ ಮಾಡಿಸಿ, ದಾರಕಟ್ಟಿ ಇವುಗಳನ್ನು ಒಂದೊಂದಾಗಿ ನೀರುತುಂಬಿದ ಪಾತ್ರೆಯೊಳಕ್ಕೆ ಬಿಡಲು ಚಿನ್ನದ ಗಟ್ಟಿಯು ಕಿರೀಟಕ್ಕಿಂತಲೂ ಕಡಿಮೆಯಾದ ನೀರನ್ನೂ, ಬೆಳ್ಳಿಯ ಗಟ್ಟಿಯು ಕಿರೀಟಕ್ಕಿಂತಲೂ ಹೆಚ್ಚಾದ, ಎಂದರೆ ಚಿನ್ನದ ಒಂದೂ ಮುಕ್ಕಾಲು ಸುಮಾರಷ್ಟು, ನೀರನ್ನೂ ಚೆಲ್ಲಿದುವು. ಈ ಪ್ರಯೋಗ ಪರೀಕ್ಷೆಯಿಂದ ಕಿರೀಟವು ಅಪ್ಪಟವಾದ ಚಿನ್ನವಲ್ಲವೆಂದೂ, ಅದರಲ್ಲಿಚಿನ್ನಕ್ಕಿಂತಲೂ ಹಗುರವಾದ ಬೆಳ್ಳಿಯು ಕೊಂಚ ಸೇರಿರುವುದೆಂದೂ ಗೊತ್ತಾಯಿತು.
ದೊರೆಯು ಕೇಳಿದ ಮೊದಲೆರಡು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಯಿತು; ಮೂರನೆಯ ಪ್ರಶ್ನೆಗೆ ಆರ್ಕಿಮಿಡೀಸನು ಉತ್ತರವನ್ನು ಕಂಡುಹಿಡಿಯತೊಡಗಿದನು. ಚಿನ್ನಕ್ಕೆ ಬೇರೆ ಬೇರೆ ಪರಿಮಾಣದ ಬೆಳ್ಳಿಯನ್ನು ಸೇರಿಸಿ, ಎರಡನ್ನೂ ಒಟ್ಟಿಗೆ ಕರಗಿಸಿ, ಕಿರೀಟದ ತೂಕಕ್ಕೆ ಸಮನಾಗಿರುವಂತೆ ಬೇರೆ ಬೇರೆ ಗಟ್ಟಿಗಳನ್ನು ಮಾಡಿಸಿ, ಆ ಗಟ್ಟಿಗಳು ಎಷ್ಟು ನೀರನ್ನು ಚೆಲ್ಲುವುವೋ ಪರೀಕ್ಷಿಸಿ, ಕೊನೆಯ ಕಿರೀಟದಷ್ಟು ಸರಿಯಾಗಿ ನೀರನ್ನು ಚೆಲ್ಲುವ ಒಂದು ಗಟ್ಟಿಯನ್ನು ಕಂಡುಹಿಡಿದನು. ಈ ಗಟ್ಟಿಯ ತೂಕವು ಕಿರೀಟದ ತೂಕಕ್ಕೆ ಸಮನಾಗಿದ್ದದ್ದರಿಂದಲೂ, ಅದರ ಸಲೆ ಅಳತೆಯು ಕಿರೀಟದ ಅಳತೆಗೆ ಸಮನಾಗಿದ್ದದ್ದರಿಂದಲೂ ಈ ಗಟ್ಟಿಯಲ್ಲಿರುವಷ್ಟು ಬೆಳ್ಳಿಯೇ ಕಿರೀಟದಲ್ಲಿಯೂ ಸೇರಿರುವುದೆಂದೂ, ಅಷ್ಟು ಚಿನ್ನವನ್ನು ಅಕ್ಕಸಾಲೆಯು ಕದ್ದಿರುವನೆಂದೂ, ಇದಕ್ಕೆ ಯಾವ ಸಂಶಯವೂ ಇಲ್ಲವೆಂದೂ, ಆರ್ಕಿಮಿಡೀಸನು ನಿರ್ಧರಿಸಿ, ಈ ವಿಷಯವೆಲ್ಲವನ್ನೂ ದೊರೆಗೆ ವಿಶದಪಡಿಸಿದನು. ದೊರೆಯು ಇದನ್ನು ಕೇಳಿ ಆಶ್ಚರ್ಯಪಟ್ಟು ಸಂತೋಷ ಪರವಶನಾಗಿ, ಆರ್ಕಿಮಿಡೀಸನಿಗೆ ಅತ್ಯಂತ ಮರ್ಯಾದೆಯನ್ನು ಮಾಡಿದನು. ತರುವಾಯ ಅಕ್ಕಸಾಲೆಯನ್ನು ಕರೆಯಿಸಿ, ಅವನ ಮೋಸವನ್ನು ಕಂಡುಹಿಡಿದಿರುವೆನೆಂದೂ ಅದಕ್ಕೆ ಏನು ಹೇಳುವೆಯೆಂದೂ ಕೇಳಲಾಗಿ, ಅವನು ಗಡಗಡನೆ ನಡುಗುತ್ತ, ತಾನು ಮೋಸ ಮಾಡಿದ್ದುಂಟೆಂದೂ, ಸರಿಯಾಗಿ ಅಷ್ಟು ಚಿನ್ನವನ್ನು ತಾನು ಇಟ್ಟುಕೊಂಡೆನೆಂದೂ ಒಪ್ಪಿಕೊಂಡು, ತನ್ನ ಅಪರಾಧವನ್ನು ಮನ್ನಿಸಬೇಕೆಂದು ಬೇಡಿಕೊಂಡನು. ದೊರೆಯು ಉಳಿದ ಚಿನ್ನವನ್ನು ಅವನಿಂದ ತರಿಸಿಕೊಂಡು ಅವನಿಗೆ ತಕ್ಕ ಶಿಕ್ಷೆಯನ್ನು ವಿಧಿಸಿದನು.