ವಿಷಯಕ್ಕೆ ಹೋಗು

ಸದಸ್ಯ:Nikithagowdakalmanja/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾಮಸ್ತಾಕಾಭಿಷಿಕ್ತ ಬಾಹುಬಲಿಯ ಧ್ಯಾನ

[ಬದಲಾಯಿಸಿ]

ಶ್ರವಣಬೆಳಗೊಳದ ಬಾಹುಬಲಿಯ ಅಂದಕ್ಕೆ ಮಾರುಹೋಗದವರಿಲ್ಲ.  ಆ ಮೂರ್ತಿಯಲ್ಲಿರುವ  ತೇಜಸ್ಸು, ಅಪ್ಯಾಯಮಾನವಾದದ್ದು.  "ನಗ್ನತೆಗೆ ನಾಚದೆಲೆ ಸಿರಿ ತಳಿರ ತೆಕ್ಕೆಯಿಂ ನೋಡು ಸುಗ್ಗಿಯನೊಲಿವ ಹೂವಿನಂತೆ" ಎಂಬ  ಕುವೆಂಪು ಅವರ ಕವನದ ಭಾವ ಈ ಶಿಲೆಯಲ್ಲಿ ಸಾಕ್ಷಾತ್ಕಾರವಾದಂತ  ಭಾವ  ಹೃದಯದಲ್ಲಿ ಸ್ಪುರಿಸುತ್ತದೆ.  ಈ ಮಹಾಮೂರ್ತಿಗೆ ಸಲ್ಲುತ್ತಿರುವ  ಮಹಾಮಜ್ಜನದ ವೈಭೋಗಕ್ಕೆ ಮಿಗಿಲಾದದ್ದು ಈ ಮೂರ್ತಿಯಲ್ಲಿ ಕಾಂತಿಸುವ ಅನನ್ಯ ಅಂತಃಪ್ರಕಾಶ.

ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಥಂಕರರು ವೃಷಭನಾಥರು. ಇವರಿಗೆ ಸುನಂದ ಮತ್ತು ನಂದಾ ಯೆಂಬ ಇಬ್ಬರು ಪತ್ನಿಯರು.ಇವರಿಂದ ನೂರುಜನ ಗಂಡು ಮಕ್ಕಳೂ ಮತ್ತು ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರು. ಬಾಹುಬಲಿಯು ಸುನಂದೆಯ ಮಗ. ವೃಷಭನಾಥರಿಗೆ ವೈರಾಗ್ಯ ಉಂಟಾದಾಗ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು.

ಪ್ರಥಮ ಪುತ್ರನಾದ ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೊಹಿತರು ಹೇಳಿದರು. ಕಾಣಿಕೆಗಳೊಡನೆ ಬರುವ೦ತೆ ತಮ್ಮ೦ದಿರಿಗೆ ಹೇಳಿಕಳಿಸಿದಾಗ ಬಾಹುಬಲಿಯನ್ನುಳಿದು ಇತರರು ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು.

ಬಾಹುಬಲಿಯು ತ೦ದೆಯ ಹೊರತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆ೦ದು ಭರತನ ದೂತರಿಗೆ ಹೇಳಿಕಳಿಸಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು.

ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆಂದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆನಿ೦ತಿತು.

ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉ೦ಟಾಗಿ ರಾಜ್ಯವನ್ನು ತೊರೆದು ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು.

ಬಹುಕಾಲ ತಪಸ್ಸು ಆಚರಿಸಿದರೂ ಕೇವಲಜ್ಞಾನವನ್ನು ಪಡೆಯಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಭರತನು ಬ೦ದು ಈ ಭೂಮಿಯನ್ನು ನೀನು ಗೆದ್ದು ನನಗೆ ಕೊಟ್ಟಿರುವೆ ಆದ್ದರಿ೦ದ ಮನದಲ್ಲಿ ಈ ಭಾವನೆ ತೊರೆದು ಬಿಡು ಎಂದು ಬೇಡಿದನು. ನಂತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು.

ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹ ವಿಷಯವಾಗಿ ಹಲವು ಕಥೆಗಳು ಪ್ರಚಲಿತವಿವೆ. ಪ್ರತಿಮೆಯ ಮೇಲೆ ದೊರೆಯುವ ಶಿಲಾಲೇಖನದಿಂದ ಚಾವುಂಡರಾಯ ಇದನ್ನು ಮಾಡಿಸಿದನೆಂದು ತಿಳಿದುಬರುತ್ತದೆ. ಈತ ಗಂಗವಂಶದ ರಾಚಮಲ್ಲನ (924-984) ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ. ಸುಮಾರು 982ರಲ್ಲಿ ಈ ವಿಗ್ರಹವನ್ನು ಕೆತ್ತಿಸಿ ಮುಗಿಸಿರಬೇಕೆಂದು ತೋರುತ್ತದೆ. ವಿಗ್ರಹದ ಸುರಕ್ಷಣೆಗಾಗಿ ಹೊಯ್ಸಳ ವಿಷ್ಣುವರ್ಧನನ ದಂಡಾಧಿಪತಿಯಾದ ಗಂಗರಾಜ ಸುತ್ತಲಯವನ್ನು ಕಟ್ಟಿಸಿದ (ಸುಮಾರು 1117). ಇದರ ಮಾಹಿತಿ ವಿಗ್ರಹದ ಮೇಲಿನ ಶಿಲಾಲೇಖನಗಳಿಂದ ಗೊತ್ತಾಗುತ್ತದೆ.

ಪೌದನಪುರದಲ್ಲಿಯ ಪ್ರತಿಮೆ ಆಗಮ್ಯವೆನಿಸಿದ್ದರಿಂದ ತನ್ನ ತಾಯಿ ದರ್ಶಿಸಲೆಂದು ಚಾವುಂಡರಾಯ ಈ ಮೂರ್ತಿಯನ್ನು ಕೆತ್ತಿಸಿದಂತೆ ಆಖ್ಯಾನಕವಿದೆ. ಈ ವಿಗ್ರಹಕ್ಕೆ ಗೊಮ್ಮಟೇಶ್ವರ ಎಂಬ ಹೆಸರು ಬಂದದ್ದು ಚಾವುಂಡರಾಯನಿಂದಲೇ. ನೇಮಿಚಂದ್ರಸಿದ್ಧಾಂತ ಚಕ್ರವರ್ತಿಯಿಂದ ರಚಿತವಾದ ಗೊಮ್ಮಟಸಾರವೆಂಬ ಗ್ರಂಥದಿಂದ ಚಾವುಂಡರಾಯನಿಗೆ ಗೊಮ್ಮಟರಾಯನೆಂಬ ಹೆಸರಿದ್ದುದೂ ಆತ ಬೆಳ್ಗೊಳದಲ್ಲಿ ಕಟ್ಟಿಸಿದ ಬಸದಿಯ ಮತ್ತು ಕೆತ್ತಿಸಿದ ಈ ವಿಗ್ರಹ ವಿಷಯವೂ ತಿಳಿಯುತ್ತದೆ. ಗೊಮ್ಮಟ ಅಂದರೆ ಸುಂದರ, ಚೆಲುವ ಮನ್ಮಥ ಎಂದರ್ಥ. ಇದು ಅವನ ಮನೆಯ ಹೆಸರಾಗಿರಬೇಕು. ಆತ ಕೆತ್ತಿಸಿದ ಈಶ್ವರ ಅಂದರೆ ಆರಾಧ್ಯ ದೇವತೆಯ ಹೆಸರು ಗೊಮ್ಮಟೇಶ್ವರ. ಇದರಿಂದ ಮುಂದಿನ ಕಾಲದಲ್ಲಿ ಬಾಹುಬಲಿಯ ಮೂರ್ತಿಗಳು, ಕಾರ್ಕಳ, ವೇಣೂರು ಮೊದಲಾದ ಸ್ಥಳಗಳಲ್ಲಿ ಗೊಮ್ಮಟೇಶ್ವರ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಧವಲಾದಿಸಿದ್ಧಾಂತ ಗ್ರಂಥಗಳ ಸಾರವಾಗಿ ನೇಮಿಚಂದ್ರ ಚಾವುಂಡರಾಯ ಅಥವಾ ಗೊಮ್ಮಟರಾಯನ್ನು ಕುರಿತು ಬರೆದ ಗ್ರಂಥದ ಹೆಸರು ಗೊಮ್ಮಟಸಾರ.

ಗೊಮ್ಮಟೇಶ್ವರನ ಈ ವಿಶಾಲಕಾರ ಮತ್ತು ಅದ್ವಿತೀಯ ಪ್ರತಿಮೆಯಿಂದ ಶ್ರವಣಬೆಳ್ಗೊಳ ತೀರ್ಥಕ್ಷೇತ್ರ ಮತ್ತು ಯಾತ್ರಾಸ್ಥಳವಾಗಿದೆ. ವಿಂಧ್ಯಗಿರಿಯ ಮೇಲಿನ ಬೃಹತ್ಕಾಯದ ಬಾಹುಬಲಿಯ ಪೂಜೆಯೆಂದರೆ ಒಂದು ಮಹೋತ್ಸವವೇ ಅಲ್ಲದೆ ಧಾರ್ಮಿಕ ಜನರಿಗೆ ಪುಣ್ಯಕಾರಿ ಪ್ರಯೋಜನವೂ ಹೌದು. ಈ ರೀತಿಯ ಮಹಾಮಸ್ತಕಾಭಿಷೇಕ ಪೂಜೆಯನ್ನು ಪ್ರತಿ ಹನ್ನೆರಡು ವರ್ಷಕ್ಕೆ ಒಮ್ಮೆ ಒಂದು ವಿಶೇಷ ಮುಹೂರ್ತವನ್ನು ನೋಡಿ, ನಡೆಯಿಸುವ ಪರಂಪರೆಯುಂಟು. ಶ್ರವಣಬೆಳ್ಗೊಳದ 1398ರ ಶಿಲಾಲೇಖನದಿಂದ ಪಂಡಿತಾರ್ಯ ಏಳುಸಾರಿ ಮಸ್ತಕಾಭಿಷೇಕ ಮಾಡಿಸಿದ ಸಂಗತಿಗೊತ್ತಾಗುತ್ತದೆ. ಅದರಂತೆ 1500ರಲ್ಲಿ 1612ರಲ್ಲಿಯೂ ಮಸ್ತಕಾಭಿಷೇಕವಾಗಿರಬೇಕು. 1612ರಲ್ಲಿ ಶಾಂತವರ್ಣೀ, 1677ರಲ್ಲಿ ಚಿಕ್ಕದೇವರಾಜ ಒಡೆಯರ ಮಂತ್ರಿಯಾದ ವಿಶಾಲಾಕ್ಷ ಪಂಡಿತ 1825ರಲ್ಲಿ ಮೈಸೂರು ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರು ಮಾಡಿಸಿದ ಮಸ್ತಕಾಭಿಷೇಕಗಳ ಉಲ್ಲೇಖ ಉಂಟು. ಇತ್ತೀಚಿಗೆ 1827,1871, 1887, 1909 ಮತ್ತು 1925-(ಅನಂತರ ಸಾಧಾರಣ ಹನ್ನೆರಡು ವರ್ಷಕ್ಕೊಮ್ಮೆ) ಮಸ್ತಕಾಭಿಷೇಕಗಳು ನಡೆಯುತ್ತ ಬಂದಿದೆ.