ವಿಷಯಕ್ಕೆ ಹೋಗು

ಸದಸ್ಯ:Mutturaju

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ವಿವೇಕಾನಂದರು[ಬದಲಾಯಿಸಿ]

ಸ್ವಾಮಿ ವಿವೆಕಾನಂದ

೧೯ನೆಯ ಶತಮಾನದ ಅಂತ್ಯಭಾಗದ ಹೊತ್ತಿಗೆ ಭಾರತದಾದ್ಯಂತ ಸಾಮಾಜಿಕ, ಧಾರ್ಮಿಕ, ಆರ್ಥಿಕ ಹಾಗೂ ರಾಜಕೀಯವಾದ ಸಂಘರ್ಷವು ತೀವ್ರವಾಗಿದ್ದವು. ಪಾಶ್ಚಿಮಾತ್ಯ ಪ್ರಭಾವವು ಒಂದೆಡೆ ಪ್ರಧಾನವಾದರೆ, ಸ್ಥಳೀಯವಾಗಿ ತಲೆದೋರಿದ್ದ ಧಾರ್ಮಿಕ ಅಂಧಶ್ರದ್ಧೆಗಳು, ಸಾಮಾಜಿಕ ಕೀಳರಿಮೆಗಳು, ಭಿನ್ನ ಸಮುದಾಯಗಳ ಸಂಕುಚಿತ ಸ್ವಭಾವಗಳು ಪ್ರಭಾವಿಯಾಗಿದ್ದವು. ಈ ಸಂಧರ್ಭದಲ್ಲಿ ಭಾರತೀಯ ಧಾರ್ಮಿಕ ವಲಯದಲ್ಲಿ ಆಧ್ಯಾತ್ಮಿಕ ಸ್ಫೂರ್ತಿಯಾಗಿ ರೂಪುಗೊಂಡವರು ಸ್ವಾಮಿ ವಿವೇಕಾನಂದರು. ಮಾನವ ಇತಿಹಾಸ ಕಂಡ ಅದ್ಭುತ ಶಕ್ತಿಯಾಗಿ, ಸನಾತನ ಧರ್ಮದ ಪ್ರತಿವಾದಕರಾಗಿ, ವೈಚಾರಿಕ ಚಿಂತನೆಯ ಹರಿಕಾರರಾಗಿ, ಭಾರತೀಯರ ಆತ್ಮಗೌರವದ ಸಂಕೇತವಾಗಿ ಎದ್ದು ನಿಂತವರು ವಿವೇಕಾನಂದರು. ಭಾರತೀಯ ಆಧ್ಯಾತ್ಮಿಕ ಪ್ರತಿನಿಧಿಯಾಗಿ, ಮಾನವಧರ್ಮದ ಅಂತಃಶಕ್ತಿಯನ್ನು ಎತ್ತಿಹಿಡಿಯುವ ಮೂಲಕ ಹಿಂದೂಧರ್ಮವನ್ನು ಪುನರ್‌ವ್ಯಾಖ್ಯಾನಿಸುವ ಪ್ರಯತ್ನಶೀಲ ವ್ಯಕ್ತಿಯಾಗಿ ಅವರು ನಮ್ಮ ಮುಂದೆ ನಿಲ್ಲುತ್ತಾರೆ. ಜನತೆಯ ಸೇವೆಯೇ ‘ಜನಾರ್ದನ’ ಸೇವೆ ಎಂದು ಪರಿಕಲ್ಪಿಸಿದ, ದೀನ-ದರದ್ರರ ಉದ್ಧಾರವೇ ಪರಮಧ್ಯೇಯವಾಗಿ ‘ದರಿದ್ರ ದೇವೋಭವ’, ‘ದರಿದ್ರ ನಾರಾಯಣ,’ ಏಳಿ!ಎದ್ದೇಳಿ! ಗುರಿ ಮುಟ್ಟುವ ತನಕ ವಿಶ್ರಮಿಸದಿರಿ’ ಮುಂತಾದ ಅವರ ನುಡಿವಾಕ್ಯಗಳಿಂದ ಜನಜನಿತರಾದವರು ಸ್ವಾಮಿ ವಿವೇಕಾನಂದರು. ಅವರು ತಮ್ಮ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು.

ಬದುಕು[ಬದಲಾಯಿಸಿ]

ವಿವೇಕಾನಂದರು ಜನಿಸಿದ್ದು ಕಲ್ಕತ್ತಾದಲ್ಲಿ ಜನವರಿ ೧೨, ೧೮೬೩ರಲ್ಲಿ. ತಂದೆ ವಿಶ್ವನಾಥದತ್ತ, ತಾಯಿ ಭುವನೇಶ್ವರಿದೇವಿ. ಕಲ್ಕತ್ತ ಹೈಕೋರ್ಟಿನಲ್ಲಿ ವಕೀಲರಾಗಿದ್ದ ತಂದೆ ಶಾಂತ ಹಾಗೂ ಮೃದುಸ್ವಭಾವದ ದಾನಿಗಳಾಗಿದ್ದರೆ; ಮಾತೃವಾತ್ಸಲ್ಯದ ತಾಯಿ ಸಾತ್ವಿಕಗುಣಗಳ ಸಂಪನ್ನೆ. ರಾಮಾಯಣ ಮತ್ತು ಮಹಾಭಾರತದಂಥ ಗ್ರಂಥಗಳು ಮನೆಯಂಗಳದ ಮಾತಾಗಿ ದೈವಶ್ರದ್ಧೆಯ ವಾತಾವರಣದಲ್ಲಿ ಬೆಳೆದ ಬಾಲಕ ನರೇಂದ್ರನಾಥದತ್ತ. ಮುಂದೆ ವಿವೇಕಾನಂದರೆಂದು ಖ್ಯಾತರಾದ ನರೇಂದ್ರ ಎಂಟು ವರ್ಷದ ಬಾಲಕನಾಗಿದ್ದಾಗ ಈಶ್ವರಚಂದ್ರ ವಿದ್ಯಾಸಾಗರ ಮೆಟ್ರಿಕ್ಯುಲೇಷನ್ ಸಂಸ್ಥೆಗೆ ಸೇರಿ, ಶಿಕ್ಷಣದೊಂದಿಗೆ ಕ್ರೀಡೆ ಮತ್ತು ವ್ಯಾಯಾಮಗಳಲ್ಲಿ ತೊಡಗುವುದರೊಂದಿಗೆ ಪಠ್ಯೇತರ ಗ್ರಂಥಗಳ ಪರಿಚಯ ಮಾಡಿಕೊಂಡನು. ಮುಂದೆ ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜು, ನಂತರ ಜನರಲ್ ಅಸೆಂಬ್ಲಿ ಇನ್‌ಸ್ಟಿಟ್ಯೂಟ್‌ನ್ನು ಸೇರಿದ ಅವಧಿಯಲ್ಲಿ ಪಾಶ್ಚಾತ್ಯ ವಿಚಾರಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಇತಿಹಾಸ, ತತ್ವಜ್ಞಾನ, ವಿಜ್ಞಾನ, ಕಲೆ, ಸಂಗೀತ ಮತ್ತು ವೈದ್ಯಕೀಯ ಪದ್ಧತಿಗಳ ಬಗ್ಗೆ ಅವರು ವಿಶೇಷ ಆಸಕ್ತಿ ತೋರಿದರು. ಅವರು ಪದವಿ ಶಿಕ್ಷಣ ಮುಗಿಸಿದರು. ಆದರೆ ಅವರಲ್ಲಿದ್ದ ಆಧ್ಯಾತ್ಮಿಕ ಸೆಳೆತದಿಂದ ದಕ್ಷಿಣೇಶ್ವರದ ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರಾಗುವ ತುಡಿತ ಹೊಂದಿದ್ದರು. ಮುಂದೆ ವಿದೇಶ ಪ್ರಯಾಣವನ್ನು ಕೈಗೊಂಡರು. ಚಿಕಾಗೋ ವಿಶ್ವಧರ್ಮ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಅವರು ಜನದಗಲ ತಮ್ಮ ಆಧ್ಯಾತ್ಮ ಚಿಂತನೆಗಳನ್ನು ಹರಡುವ ಪ್ರಯತ್ನವನ್ನು ಮಾಡಿದರು. ನಾನಾ ದೇಶಗಳಲ್ಲಿ ಭಾರತೀಯ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರಚುರಪಡಿಸುವ ಹಾಗೂ ಅನ್ಯಧರ್ಮಗಳ ತತ್ವವನ್ನು ಅರಿಯುವ ಸಲುವಾಗಿ ವಿಶ್ವಪರ್ಯಟನೆಯನ್ನು ಕೈಗೊಂಡರು. ಅಮೆರಿಕಾ, ಇಂಗ್ಲೆಂಡ್, ಚೀನಾ, ಜಪಾನ್, ಕೆನಡಾ, ಪ್ಯಾರಿಸ್ ಮುಂತಾದ ದೇಶಗಳ ಸುತ್ತಾಟವನ್ನು ಅವರು ಮಾಡಿದರು. ಈ ಮಧ್ಯೆ ರಾಮಕೃಷ್ಣ ಮಿಷನನ್ನು ಸ್ಥಾಪಿಸಿದರು. ವಿವೇಕಾನಂದರು ಅದರ ಶಾಖೆಗಳನ್ನು ದೇಶ ವಿದೇಶಗಳಲ್ಲಿ ಸ್ಥಾಪಿಸುವ ಇರಾದೆಯನ್ನು ಇಟ್ಟುಕೊಂಡಿದ್ದರು. ಆದರೆ ಅವರು ಅಕಾಲೀಕವಾಗಿ ಅಸ್ತಮ, ಅತಿಸಾರ, ಮಧುಮೇಹಕ್ಕೆ ಬಲಿಯಾಗಿ ತಮ್ಮ ೪೦ ವರ್ಷಗಳನ್ನು ಪೂರೈಸುವ ಮೊದಲೇ ಅಸ್ತಂಗತರಾದರು.

ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ[ಬದಲಾಯಿಸಿ]

ಯುವ ನರೇಂದ್ರ ೧೮೮೧ರಲ್ಲಿ ಎಫ್.ಎ. ತರಗತಿಯ ವಿದ್ಯಾರ್ಥಿಯಾಗಿದ್ದಾಗ ವಿಲಿಯಂ ವರ್ಡ್ಸ್‌‌ವರ್ತನ ‘ದಿ ಎಕ್ಸ್‌ಕರ್ಷನ್’ ಪದ್ಯವೊಂದು ಬಹುವಾಗಿ ಕಾಡಿತು. ಪರಿಣಾಮವಾಗಿ ದೇವರನ್ನು ಕಾಣುವ ತನ್ನ ಮನೋಗತವನ್ನು ವಿದ್ವನ್ಮಣಿ ಪ್ರೊಫೆಸರ್ ವಿಲಿಯಂ ಹೇಸ್ಟರಲ್ಲಿ ತೋಡಿಕೊಂಡರು. ಆಗ ಹೇಸ್ಟರ್ ಅವರು ದೇವರನ್ನು ಕಾಣುವಲ್ಲಿ ದಾರಿದೀಪವಾಗಿರುವ, ಆಧ್ಯಾತ್ಮಿಕತೆಯಲ್ಲಿ ಅನಿರ್ವಚನೀಯತೆಯ ಪರವಶತೆಯನ್ನು ಅನುಭವಿಸಿರುವ ವ್ಯಕ್ತಿಯಾದ ಶ್ರೀರಾಮಕೃಷ್ಣ ಪರಮಹಂಸರ ಬಳಿಗೆ ಹೋಗುವಂತೆ ಸಲಹೆ ಮಾಡಿದರು. ಸಲಹೆಯಂತೆ ದಕ್ಷಿಣೇಶ್ವರಕ್ಕೆ ಹೋದಾಗ ಕಂಡದ್ದು ಕೇವಲ ಶ್ರೀರಾಮಕೃಷ್ಣರನ್ನಲ್ಲ, ಅವರಲ್ಲಿ ಸಾಕ್ಷಾತ್ಕಾರವಾಗಿದ್ದ ವಿಶ್ವಧರ್ಮವನ್ನು, ಸಂಗಮಗೊಂಡಿದ್ದ ಸರ್ವಧರ್ಮ ಸಮನ್ವಯತೆಯನ್ನು. ‘ಜೀವ-ಶಿವ’ ಎಂಬ ಉದಾತ್ತದರ್ಶನವನ್ನು. ನರನಲ್ಲಿಯೇ ನಾರಾಯಣನ ಸಾಕ್ಷಾತ್ಕಾರವಾಗುವ ಮಹಾನ್ ಮಾನವತಾತತ್ವವನ್ನು. ಈ ಸಂದರ್ಭವನ್ನು ಎರಡು ಮಹಾಚೇತನಗಳ ಐತಿಹಾಸಿಕ ಮಿಲನವೆಂದು ಭಾರತೀಯ ಆಧ್ಯಾತ್ಮಿಕ ಚಿಂತಕರು, ತತ್ವಜ್ಞಾನಿಗಳು ದಾಖಲಿಸಿದ್ದಾರೆ.

ಮುಂದೆ ನರೇಂದ್ರನಾಥನ ಮೂಲಭೂತ ಪ್ರಶ್ನೆಯಾದ ದೇವರನ್ನು ಕಾಣುವ ಇಂಗಿತಕ್ಕೆ ಶ್ರೀರಾಮಕೃಷ್ಣರ ಜೀವನದ ಸತ್ಯಸಂಗತಿಗಳೇ ಮಾರ್ಗದಿರ್ಶಿ ಸೂತ್ರಗಳಾದವು. ಕ್ರಮೇಣ ನರೇಂದ್ರನಾಥ ಅವರಿಂದ ಪ್ರಭಾವಿತರಾದರು. ಶ್ರೀರಾಮಕೃಷ್ಣರು ಅಪಾರವಾದ ತಾಳ್ಮೆಯಿಂದ, ತಮ್ಮ ತರುಣ ಶಿಷ್ಯನ ಹೋರಾಟ ಮನೋಭಾವವನ್ನು ಶಾಂತಗೊಳಿಸಿ, ಸಂದೇಹದಿಂದ ನಿರ್ಧಾರದ ಕಡೆಗೆ, ಬೇಗುದಿಯಿಂದ ಆಧ್ಯಾತ್ಮಿಕದ ಆನಂದದೆಡೆಗೆ ಕರೆದೊಯ್ದರು. ಇಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಬೆಂಬಲಕ್ಕಿಂತ ಮಿಗಿಲಾದ ಪ್ರೀತಿ ನರೇಂದ್ರನನ್ನು ಗೆದ್ದಿತು. ಆ ವೇಳೆಗಾಗಲೇ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಹೃದಯದಲ್ಲಿ ಅವಿರ್ಭವಿಸಿಕೊಂಡಂತೆ ದಾರ್ಶನಿಕ ತತ್ವದ ಕಾಲಕ್ಕೆ ವಿಶ್ವವು ವಿವಿಧ ಮಜಲುಗಳನ್ನು ದಾಟಿ ಬಂದಿತ್ತು. ಪ್ರತಿಯೊಂದು ಧರ್ಮವು ತನ್ನದನ್ನೇ ಶ್ರೇಷ್ಠವೆಂದು ಸಾರಿತ್ತು. ಇದಕ್ಕೂ ಮೀರಿದ ಅಂತಃಕರಣವನ್ನು ಒಳಗೊಂಡ ಸಾಕ್ಷಾತ್ಕಾರಗೊಂಡ ಸಿದ್ದಿಗಳು ಸಕಲ ಚರಾಚರಗಳಲ್ಲಿ ಮಿಂಚಿ ಚದುರಿಹೋಗಿದ್ದವು. ಆದಿಶಂಕರರು ಹೇಳುವ ಕಾಲಕ್ಕಿಂತ ಪೂರ್ವದಲ್ಲೇ ಉಪನಿಷತ್ತುಗಳಲ್ಲಿ ಅದ್ವೈತದ ದರ್ಶನ ವ್ಯಕ್ತವಾಗಿತ್ತು. ಅದು ಪರಮಹಂಸರ ಅವಧಿಗೆ ‘ಜೀವ-ಶಿವ’ ಎಂಬ ವ್ಯಾಪಕ ದೃಷ್ಟಿಯಿಂದ ತತ್ವವಾಗಿ ಪ್ರಕಟಗೊಂಡಿತ್ತು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳೆಲ್ಲವೂ ಹೃದಯದಲ್ಲಿ ತಾಳಬೇಕಾದ ಮಾನವೀಯ ದೃಷ್ಟಿಗೆ, ಇಹದಲ್ಲೆ ಪರದ ಸಾಧನೆ ಎಂಬ ತಿಳಿವಿಗೆ, ನರನಲ್ಲೇ ನಾರಾಯಣನ ದರ್ಶನ ಮಾಡುವ ಅನುವರ್ಚನೀಯ ಸಿದ್ಧಾಂತಕ್ಕೆ ಅದು ಮಾರ್ಗದರ್ಶಿಯಾಗಬೇಕೆಂದರು. “ಇಹಲೋಕವನ್ನು ಪ್ರೀತಿಸುವಾತನು ತನ್ನ ಪರಲೋಕಕ್ಕೆ ಹಾನಿ ಮಾಡಿಕೊಳ್ಳುತ್ತಾನೆ. ಹಾಗೆ ಪರಲೋಕವನ್ನು ಪ್ರೀತಿಸುವಾತನು ತನ್ನ ಇಹಲೋಕಕ್ಕೆ ಹಾನಿ ಮಾಡಿಕೊಳ್ಳುತ್ತಾನೆಂದು” ಎನ್ನುವ ಮಹಮ್ಮದ್ ಪೈಗಂಬರ ಉಕ್ತಿಯನ್ನು ಉದಾಹರಿಸಿ, ಅದ್ವೈತ ಸಿದ್ಧಾಂತದೊಂದಿಗೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಮಾಡಿದವರು. ಅಂಥ ಅವ್ಯಕ್ತ ಶಕ್ತಿಯನ್ನು ಪ್ರತಿಯೊಬ್ಬರಲ್ಲೂ, ಪ್ರತಿಯೊಂದರಲ್ಲೂ ಕಾಣುವ, ಬಡವರಿಗಾಗಿ ಕಣ್ಣೀರು ಕರೆವ, ಅಶಕ್ತರಿಗಾಗಿ, ತುಳಿತಕ್ಕೆ ಒಳಗಾದವರ ಬಗ್ಗೆ ತುಡಿವ, ಧರ್ಮಾಧರ್ಮಗಳಲ್ಲಿದ್ದ ದ್ವಂದ್ವಗಳನ್ನು ಧಿಕ್ಕರಿಸಿ ಮಾನವಧರ್ಮವನ್ನು ಸಮನ್ವಯಗೊಳಿಸುವ ಶ್ರೀರಾಮಕೃಷ್ಣರ ವಿಶಾಲ ದೃಷ್ಟಿಯನ್ನು ಕಂಡ ವಿವೇಕಾನಂದರು ಪರಮಶಿಷ್ಯರಾಗುತ್ತಾರೆ. ಮುಂದೆ ವಿವೇಕಾನಂದರು “ನನ್ನ ಗುರಿ ಪರಮಹಂಸರೂ ಅಲ್ಲ, ವೇದಾಂತವೂ ಅಲ್ಲ, ಸಮಷ್ಟಿ” ಎಂದು ಆ ತತ್ವದ ವ್ಯಾಪಕತೆಯ ವಿಸ್ತಾರದಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳುತ್ತಾರೆ.

ರಾಮಕೃಷ್ಣ ಮಿಷನ್ ಸ್ಥಾಪನೆ[ಬದಲಾಯಿಸಿ]

ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರ ಧ್ಯೇಯಾದರ್ಶಗಳನ್ನು ಪ್ರಚಾರಪಡಿಸಲೆಂದು ಆರಂಭಗೊಂಡ ಸಂಸ್ಥೆ ರಾಮಕೃಷ್ಣ ಮಿಷನ್. ಈ ಸಂಸ್ಥೆಯ ಶಾಖೆಗಳು ಜಗತ್ತಿನಲ್ಲೆಡೆ ಸ್ಥಾಪಿಸಲಾಗಿದೆ. ರಾಮಕೃಷ್ಣರ ಶಿಷ್ಯವೃಂದ ಹಾಗೂ ಸನ್ಯಾಸಿಗಳೆಲ್ಲರೂ ಕೂಡಿ ಬಲರಾಮ್ ಬೋಸರ ಮನೆಯಲ್ಲಿ ಸಭೆಯೊಂದನ್ನು ಕರೆದರು. ಸಭೆಯಲ್ಲಿ ಗುರುಗಳ ಮಾನವೀಯ ಆದರ್ಶಗಳಿಗೆ, ಪರಿಶುದ್ಧವಾದ ಆಧ್ಯಾತ್ಮಿಕತೆಗೆ ನೆಲೆ ಒದಗಿಸು ಒಂದು ಸಂಘಟನೆಯ ಅಗತ್ಯವಿದೆ ಎಂದು ತೀರ್ಮಾನಿಸಿದರು. ಪರಿಣಾಮವಾಗಿ ೧೮೯೭ನೆಯ ಮೇ ೧ರಂದು ‘ರಾಮಕೃಷ್ಣ ಮಿಷನ್’ ಸ್ಥಾಪನೆಯಾಯಿತು. ಸ್ಥಾಪನೆಯ ಹಿಂದಿನ ಉದ್ದೇಶವನ್ನು ಪ್ರಮುಖವಾಗಿ ಕೆಳಕಂಡ ಅಂಶಗಳ ಮೂಲಕ ಗುರುತಿಸಬಹುದು. ೧. ಶ್ರೀರಾಮಕೃಷ್ಣರಿಂದ ಬೋಧಿತವಾದ ಸರ್ವಧರ್ಮ ಸಮನ್ವಯ ತತ್ವವನ್ನು ಪ್ರಚಾರ ಮಾಡುವುದು ಹಾಗು ಅನುಷ್ಠಾನಗೊಳಿಸುವುದು. ಇಲ್ಲಿ ವ್ಯಕ್ತಿಪೂಜೆಗಿಂತ ತತ್ವದ ಸಿದ್ದಾಂತಕ್ಕೆ ಮಹತ್ವ ನೀಡಬೇಕು. ೨. ವಿಶ್ವದೆಲ್ಲೆಡೆ ಸ್ಥಾಪಿತಗೊಂಡಿರುವ ಧರ್ಮಗಳು ಏಕದೇವೋಪಾಸನೆಯಿಂದ ಕೂಡಿದ್ದು ಸನಾತನ ಧರ್ಮದ ರೂಪಾಂತರಗಳೆಂದು ಭಾವಿಸಿ ಧರ್ಮಾವಲಂಬಿಗಳ ನಡುವೆ ಆತ್ಮೀಯತೆಯನ್ನು ಸ್ಥಾಪಿಸುವುದು. ೩.ಶ್ರೀರಾಮಕೃಷ್ಣರ ಜೀವನೋಪದೇಶಗಳಿಗೆ ಅನುಗುಣವಾಗಿ ವ್ಯಕ್ತಿಗಳ ಲೌಕಿಕ, ಸಾಂಸಾರಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ವಿದ್ಯಾಯಾನ ನೀಡುವುದು. ೪. ಇಹ-ಪರಗಳೆರಡಲ್ಲಿಯೂ ಕ್ಷೇಮವಾಗುವಂತಹ ಜ್ಞಾನ ಮತ್ತು ವಿಜ್ಞಾನ ವಿದ್ಯೆಯನ್ನು ಸಾರ್ವಜನಿಕವಾಗಿ ಹರಡಲು ಸಮರ್ಥ ಬೋಧಕರನ್ನು ನೇಮಿಸುವುದು, ಇಲ್ಲವಾದಲ್ಲಿ ಅರ್ಹರಿಗೆ ತರಬೇತಿ ನೀಡುವುದು. ೫. ಅನ್ಯಧರ್ಮಿಯರ ನಡುವೆ ಸೌಹಾರ್ದತೆಯನ್ನು ಏರ್ಪಡಿಸುವುದರೊಂದಿಗೆ ಅನ್ಯಧರ್ಮಿಯರಿಗೆ ಶ್ರೀರಾಮಕೃಷ್ಣರು ಕಂಡುಕೊಂಡ ಸರ್ವಧರ್ಮ ಸಮನ್ವಯತೆಯ ತಿರುಳನ್ನು ಮನವರಿಕೆ ಮಾಡಿಕೊಡುವುದು. ೬. ವ್ಯಕ್ತಿತ್ವ ವಿಕಸನದ ಕಲೆ ಮತ್ತು ಜೀವನೋಪಾಯದ ಕೃಷಿ, ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುವುದು. ೭. ಭಾರತದ ಪ್ರಮುಖ ನಗರಗಳಲ್ಲಿ ಅನಾಥಾಶ್ರಮ ಮತ್ತು ಮಠಗಳನ್ನು ಸ್ಥಾಪಿಸಿ ಸನ್ಯಾಸಿಗಳಿಂದ ಪ್ರಚಾರ ಕೈಗೊಳ್ಳುವುದು. ಸಾಧ್ಯವಾದರೆ ಸಮಾಜಸೇವೆ ಮಾಡುವ ಮನಸ್ಸುಳ್ಳ ಗೃಹಸ್ಥರಿಗೂ ಸೇವೆಗೆ ಅನುಗೊಳಿಸುವುದು. ೮. ವಿದೇಶಗಳಿಗೆ ಸಂಘದ ಸದಸ್ಯರನ್ನು ಕಳುಹಿಸಿ ಅಲ್ಲಿಯೂ ಸಹ ಸಂಸ್ಥೆಗಳನ್ನು ಸ್ಥಾಪಿಸುವುದು. ಆ ಮೂಲಕ ಹಿಂದೂ ಧರ್ಮದೊಂದಿಗೆ ಸ್ಥಳೀಯಧರ್ಮಗಳನ್ನು ಸಮನ್ವಯತೆಗೊಳಿಸುವ ನಿಟ್ಟಿನಲ್ಲಿ ಪ್ರಚಾರಕಾರ‍್ಯ ಕೈಗೊಳ್ಳುವುದು. ಹೀಗೆ ಹಲವಾರು ಧರ್ಮಸಮನ್ವಯದ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಯಿತು. ಇಂಥ ಜೀವಪರ ನೀತಿಯಿಂದ ತಲೆ ಎತ್ತಿದ ರಾಮಕೃಷ್ಣ ಆಶ್ರಮಗಳು ವಿಶ್ವದೆಲ್ಲೆಡೆ ತನ್ನ ಕಾರ್ಯಚಟುವಟಿಕೆಯನ್ನೂ ಇಂದಿಗೂ ನಡೆಸಿಕೊಂಡು ಬರುತ್ತಿದೆ.

ಚಿಕಾಗೋ ವಿಶ್ವಧರ್ಮ ಸಮಾವೇಶ[ಬದಲಾಯಿಸಿ]

ಚಿಕಾಗೋ ವಿಶ್ವಧರ್ಮ ಸಮಾವೇಶ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವು ನೀಡಿದ ಐತಿಹಾಸಿಕ ಘಟನೆ. ಸಮ್ಮೇಳನದಲ್ಲಿ ಮೊಳಗಿಸಿದ ತೂರ್ಯಧ್ವನಿ ವಿಶ್ವದೆಲ್ಲೆಡೆ ಪಸರಿಸಿತು. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವಕ್ಕೆ ಅಸಂಖ್ಯ ಧಾರ್ಮಿಕ ವಟುಗಳು ಆಕರ್ಷಿತರಾದರು. ಆಧ್ಯಾತ್ಮಿಕ ನೆಲೆಯಲ್ಲಿ ಭಾರತದ ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಈ ಸಮಾವೇಶ ಬೆಳಕಿಂಡಿಯಾಯಿತು. ೧೮೯೩ ಸೆಪ್ಟೆಂಬರ್ ೧೦ ಸೋಮವಾರ ವಿವೇಕಾನಂದರ ಜೀವನದಲ್ಲಿ ಒಂದು ಮಹತ್ವದ ದಿನ. ಅಂದು ಬೆಳಗ್ಗೆ ಹತ್ತು ಗಂಟೆಗೆ ವಿಶ್ವಧರ್ಮ ಸಮ್ಮೇಳನ ಆರ್ಟ್‌ಪ್ಯಾಲೇಸ್‌ನಲ್ಲಿ ಆರಂಭಗೊಂಡಿತು. ವಿಶ್ವದೆಲ್ಲೆಡೆಯಿಂದ ಆಗಮಿಸಿದ ಧಾರ್ಮಿಕ ಪ್ರತಿನಿಧಿಗಳೂ ಅಲ್ಲಿದ್ದರು. ಭಾರತದಿಂದ ವಿವೇಕಾನಂದರಲ್ಲದೆ, ಬ್ರಹ್ಮ ಸಮಾಜದ ಮಜುಂದಾರರು, ಬೊಂಬಾಯಿಯಿಂದ ನಗರ್‌ಕರ್, ಜೈನರ ಪ್ರತನಿಧಿಯಾದ ಗಾಂಧಿ, ಥಿಯಾಸಫಿಕಲ್ ಸೊಸೈಟಿಯ ಪ್ರತನಿಧಿಯಾಗಿ ಶ್ರೀಮತಿ ಆನಿಬೆಸೆಂಟ್ ಮತ್ತು ಸಿಲೋನಿನ ಬೌ‌ದ್ಧ ಪ್ರತಿನಿಧಿ ಧರ್ಮಪಾಲರು ಹಾಜರಿದ್ದರು. ಏಳು ಸಾವಿರ ಪ್ರತಿನಿಧಿಗಳಿದ್ದ ತುಂಬು ಸಭೆಯನ್ನುದ್ಧೇಶಿಸಿ ವಿವೇಕಾನಂದರು ಭಾಷಣ ಮಾಡಲು ಎದ್ದು ನಿಂತರು. ಆರಂಭದಲ್ಲಿ ಅಧೈರ್ಯಗೊಂಡರೂ ‘ಗುರುದೇವವಾಣಿಯನ್ನು’ ಸ್ಮರಿಸಿ ಮಾತನ್ನು ಆರಂಭಿಸಿದರು. ಅಮೆರಿಕಾದ ಸಹೋದರ ಸಹೋದರಿಯರೇ, ನೀವು ನಮಗೆ ಪ್ರೀತಿಪೂರ್ವಕ ಕೊಟ್ಟ ಸ್ವಾಗತಕ್ಕೆ ಉತ್ತರವನ್ನು ಹೇಳಬೇಕೆಂದು ಬಯಸಿದಾಗ ನನ್ನ ಹೃದಯ ಅವರ್ಣೀಯ ಆನಂದದಿಂದ ತುಂಬಿ ತುಳುಕುತ್ತಿದೆ. ಬೌದ್ಧ, ಜೈನ ಧರ್ಮಗಳು ಯಾವುದರ ಶಾಖೆಗಳೋ ಅಂತಹ ಸಕಲಧರ್ಮಗಳ ಮಾತೆಯಾದ ಹಿಂದೂಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ವಿವಿಧ ಜಾತಿಮತಗಳಿಗೆ ಸೇರಿದ ಕೋಟ್ಯಾನುಕೋಟಿ ಹಿಂದೂಗಳ ಪರವಾಗಿ ಧನ್ಯವಾದಿಗಳನ್ನು ಈ ವೇದಿಕೆ ಮುಖೇನ ಸಲ್ಲಿಸುತ್ತಿದ್ದೇನೆ. ಜಗತ್ತಿನ ಸಹಿಷ್ಣುತೆಯನ್ನು ಸರ್ವಧರ್ಮ ಸ್ವೀಕಾರ ಭಾವನೆಯನ್ನು ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮ ನನ್ನದು. ನಾವು ಸರ್ವಮತ ಸಹಿಷ್ಣುತೆಯನ್ನು ಒಪ್ಪುತ್ತೇವೆಯಷ್ಟೇ ಅಲ್ಲದೇ ಸಕಲಧರ್ಮಗಳು ಸತ್ಯವೆಂದು ನಂಬುತ್ತೇನೆ. ನಿರಾಶ್ರಿತರಿಗೆ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ಅನೇಕ ಸ್ಥಳಗಳಲ್ಲಿ ಹುಟ್ಟಿದ ಹಲವು ನದಿಗಳೆಲ್ಲ ಕೊನೆಗೆ ಸಾಗರಕ್ಕೆ ಸೇರುವಂತೆ ಮಾನವರು ಅವರವರ ಸಂಸ್ಕಾರಗಳಿಗೆ ತಕ್ಕಂತೆ ಬೇರೆ ಬೇರೆ ದಾರಿಗಳಿಂದ ಭಗವಂತನೆಡೆಗೆ ಕರೆದೊಯ್ಯಲಾಗುತ್ತದೆ ಹಿಂದೂಧರ್ಮದಲ್ಲಿ. ಭಗವದ್ಗೀತೆಯಲ್ಲಿ ಬೋಧಿಸಿರುವಂತೆ ಯಾರಾದರಾಗಲೀ ಯಾವ ಆಕಾರವನ್ನು ಪೂಜಿಸಿದವರಾಗಲೀ ನನ್ನಲ್ಲಿಗೆ ಬಂದರೆ ನಾನು ಅವರನ್ನು ಹಾಗೆಯೇ ಅನುಗ್ರಹಿಸುವೆನು ಕೊನೆಗೆ ನನ್ನನ್ನು ಮುಟ್ಟುವ ಹಲವು ದಾರಿಗಳಲ್ಲಿ ಮಾನವರೆಲ್ಲರೂ ಪ್ರಯತ್ನ ಶೀಲರಾಗಿರುವರು. ಎಂದು ಸ್ವಾಮಿ ವಿವೇಕಾನಂದರು ಮನಮುಟ್ಟುವಂತೆ ಹೃದಯಸ್ಪರ್ಶಿ ಭಾಷಣವನ್ನು ಮಾಡಿದರು. ಮುಂದುವರೆದು ಅವರು, ಸ್ವಮತಾಭಿಮಾನ, ಅನ್ಯಮತ ದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಜಗತ್ತನ್ನು ಆವರಿಸಿಕೊಂಡಿರುವುವು. ಇವು ಜಗತ್ತನ್ನೆಲ್ಲಾ ಹಿಂಸೆ ರಕ್ತದಿಂದ ತೋಯಿಸಿವೆ, ಸಂಸ್ಕೃತಿಯನ್ನು ನಾಶ ಮಾಡಿವೆ. ಇಂತಹ ಧರ್ಮಾಂಧರಿಲ್ಲದೇ ಇದ್ದರೆ ಮಾನವ ಜನಾಂಗ ಎಂದೋ ಮುಂದುವರೆಯುತ್ತಿತ್ತು. ಖಡ್ಗದ ಮೂಲಕವಾಗಲೀ ಲೇಖನಿಯ ಮೂಲಕವಾಗಲೀ ಆದ ಎಲ್ಲಾ ಮತಾಂಧತೆ ಹಿಂಸೆಯ ಭೂತಗಳ ಅಂತ್ಯ ಕ್ರಿಯೆಯನ್ನು ಈ ವೇದಿಕೆಯ ಮೂಲಕ ಜಗತ್ತಿಗೆ ಸೂಚಿಸುವ ಧ್ವನಿಯಾಗಲೆಂಬುದೇ ನನ್ನ ಆಶಯ. ಎಂದಿರುವುದು ಗಮನಾರ್ಹವಾಗಿದೆ. ಅಂದರೆ ಧರ್ಮವು ಮನುಷ್ಯನನ್ನು ಮೃದುವು ಮಾಡಬಹುದು; ಕ್ರೂರಿಗಳನ್ನು ಮಾಡಬಹುದು, ಅಂತಹ ಶಕ್ತಿ ಧರ್ಮಕ್ಕಿದೆ ಎನ್ನುತ್ತಾರೆ ಅವರು. ಪ್ರತಿಯೊಂದು ಧರ್ಮದ ಮೂಲಭೂತ ಗುಣಗಳನ್ನು ಗುರುತಿಸುತ್ತಾರೆ. ಪ್ರಮುಖವಾಗಿ ಈ ಸಂಧರ್ಭದಲ್ಲಿ ಅವರು ಮೂರು ಅಂಶಗಳನ್ನು ಗುರುತಿಸುತ್ತಾರೆ. ಅವುಗಳು ಹೀಗಿವೆ: ೧.ಮೂಲತತ್ವದ ಗುರಿ ಮತ್ತು ಸಾಧಿಸುವ ಬಗೆಯನ್ನು ವಿವರಿಸುವುದು. ೨.ಕಾಲ್ಪನಿಕ ಮಾನವ ಮತ್ತು ದೇವರ ಮೂಲಕ ಪುರಾಣವನ್ನು ಉದಾಹರಿಸುವುದು. ೩.ಮತಾಚಾರದಲ್ಲಿರುವ ಹಲವು ಕ್ರಿಯೆಗಳು ಆಚರಣೆಗಳು. ವಿವೇಕಾನಂದರ ಪ್ರಕಾರ, ಸರ್ವಧರ್ಮ ಸಮ್ಮೇಳನವು ಜಗತ್ತಿಗೆ ಏನನ್ನಾದರೂ ತೋರಿಸಿದ್ದರೆ ಅದು ಪವಿತ್ರತೆ, ಪರಿಶುದ್ಧತೆ ಮತ್ತು ಉದಾರತೆ. ಇವು ಯಾವುದೇ ಮತಪಂಥಕ್ಕೆ ಸೀಮಿತಗೊಂಡಿರುವುದಂತದ್ದಲ್ಲ. “ಯಾರು ಹಿಂದೂಗಳಿಗೆ ‘ಬ್ರಹ್ಮ’ ನಾಗಿರುವನೋ, ಜರಾತುಷ್ಟ್ರರಿಗೆ ‘ಅಹುರಮಜ್ದಾ’ ಆಗಿರುವನೋ, ಬೌದ್ಧರಿಗೆ ‘ಬುದ್ಧ’ ನಾಗಿರುವನೋ, ಯಹೂದಿಗಳಿಗೆ ‘ಜಹೂವ’ ನಾಗಿರುವನೋ, ಕ್ರಿಶ್ಚಿಯನ್ನರಿಗೆ ‘ದೇವಲೋಕದ ತಂದೆ’ ಯಾಗಿರುವನೋ ಅವನು ನಿಮಗೆ ಶಕ್ತಿ ಕೊಡಲಿ” ಎನ್ನುತ್ತಾರೆ. ಅಂದರೆ, ಪ್ರತಿಯೊಂದು ಧರ್ಮಕ್ಕೂ ತನ್ನದೆಯಾದ ಚಾರಿತ್ರಿಕ ಹಿನ್ನೆಲೆಯಿದೆ. ಉತ್ತಮ ಚಾರಿತ್ರ್ಯವುಳ್ಳ ಸ್ತ್ರೀಪುರುಷರನ್ನು ನೀಡಿದೆ. ಆದರೆ ಸ್ವಧರ್ಮದ ಅಮಲಿನಲ್ಲಿ ತನ್ನ ಧರ್ಮವೇ ಶ್ರೇಷ್ಠ, ಉಳಿದವು ಕನಿಷ್ಠವೆಂಬ ಸಂಕುಚಿತ ಮನಸ್ಸಿನವರನ್ನು ಕಂಡಾಗ ಅವರನ್ನು ಕನಿಕರದಿಂದಲೇ ನೋಡುತ್ತಾರೆಯೇ ವಿನಾ ವಿರೋಧಿಸುವುದಿಲ್ಲ. ಪರಸ್ಪರ ಧಾರ್ಮಿಕತೆಯ ನಡುವೆ ಸಮರವಲ್ಲ-ಸಹಕಾರ, ನಾಶವಲ್ಲ-ನಿರ್ಮಾಣ, ಒಡಕಲ್ಲ ಶಾಂತಿ ಮತ್ತು ಸೌಹಾರ್ದತೆ ಎಂಬುದನ್ನು ಪ್ರತಿಪಾದಿಸುತ್ತಾರೆ. ಕನಿಷ್ಠ ಪಕ್ಷ ಉಪಕಾರ ಮಾಡದಿದ್ದರು ಪರವಾಗಿಲ್ಲ, ಅಪಕಾರವನ್ನು ಮಾಡಬೇಡಿ. ದುರ್ಬಲ ವ್ಯಕ್ತಿಗಳನ್ನು, ದೀನರನ್ನು ಮೇಲೆಕ್ಕೆತ್ತಿ ಮುನ್ನಡೆಸಿ. ಅದೇ ನಿಜವಾದ ಧರ್ಮ. ಹಾಗಾದಾಗ ಮಾತ್ರ ನಿಜವಾದ ದೇವರ ಸಾಕ್ಷಾತ್ಕಾರವಾಗುತ್ತದೆನ್ನುತ್ತಾರೆ. ಈ ನಿಟ್ಟಿನಲ್ಲಿ ವಿವೇಕಾನಂದರ ಚಿಕಾಗೋ ಧರ್ಮಸಮ್ಮೇಳನದ ಭಾಷಣವು ವಿದೇಶಿ ಆಳರಸರ ವಸಾಹತುಶಾಹಿ ಧೋರಣೆಯ ತುಳಿತಕ್ಕೊಳಗಾಗಿದ್ದ ಭಾರತೀಯರಿಗೆ ಸ್ವಾಭಿಮಾನದ ಸಂಕೇತವಾಯಿತು.

ಸಾಮಾಜಿಕ ಸುಧಾರಣೆಗಳು[ಬದಲಾಯಿಸಿ]

ಈ ಮೊದಲೇ ತಿಳಿಸಿದಂತೆ ೧೯ನೆಯ ಶತಮಾನದ ವೇಳೆಗೆ ವಸಾಹತುನೀತಿಯ ಬ್ರಿಟಿಷರು ರಾಜಕೀಯವಾಗಿ ಭಾರತದಲ್ಲಿ ಪ್ರಬಲರಾಗಿದ್ದರು. ಸ್ಥಳೀಯ ಆಡಳಿತದಲ್ಲಿ ಹಲವಾರು ಬದಲಾವಣೆಗಳನ್ನು ತಂದು ಆಳ್ವಿಕೆಯ ಕಪಿಮುಷ್ಟಿಯನ್ನು ಎಲ್ಲೆಡೆ ಚಾಚಿದ್ದರು. ಇದರಿಂದ ದೇಶಿ ಸಂಸ್ಕೃತಿಗೆ ಅಗಾಧವಾದ ಪೆಟ್ಟು ಬಿದ್ದಿತ್ತು; ವ್ಯತಿರಿಕ್ತವಾದ ಪರಿಣಾಮಗಳು ಸಾಮಾಜಿಕ ಬದುಕಿನಲ್ಲಿ ತಲೆದೋರಿದ್ದವು. ಇಂಥ ತಮ್ಮ ಹಕ್ಕು ಚ್ಯುತಿಯನ್ನು ಸಹಿಸದ ಸಾರ್ವಜನಿಕರಿಂದ ದೇಶದೆಲ್ಲೆಡೆ ದಂಗೆಗಳಾದವು. ಈ ದಂಗೆಗಳನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಹಿಂಸಾವಾದವು ಒಂದು ರೀತಿಯದಾದರೆ, ಅಹಿಂಸಾವಾದ ಇನ್ನೊಂದು ರೀತಿಯದು. ಮೊದಲನೆಯದು, ಬ್ರಿಟಿಷರ ಆಗಮನವಾದಾಗಿನಿಂದ ಅವರ ವಿರುದ್ಧ ನಡೆದ ಸಾಂಪ್ರಾದಾಯಿಕ ಪ್ರತಿರೋಧದ ಶಸ್ತ್ರಾಸ್ತ್ರ ದಂಗೆಗಳು. ಎರಡನೆಯದು, ಅಹಿಂಸಾತತ್ವದ ಆಧಾರದ ಮೇಲೆ ಆಧುನಿಕ ವಿಚಾರಧಾರೆಗಳಿಂದ ಪ್ರಭಾವಿತವಾದ ಅಹಿಂಸಾವಾದ. ಈ ವಾದಗಳು ವ್ಯಕ್ತಿಯಿಂದ ವ್ಯಕ್ತಿಗೆ, ಸಂಘಟನೆಯಿಂದ ಸಂಘಟನೆಗೆ ಭಿನ್ನವಾಗಿತ್ತು. ವಸಾಹತುನೀತಿಯ ಗ್ರಹಿಕೆಯ ಹಿನ್ನೆಲೆಯಲ್ಲಿ ಅವರವರ ಪ್ರತಿರೋಧಗಳು ವ್ಯಕ್ತವಾಗುತ್ತಿತ್ತು. ಇಂಥ ಸಂದರ್ಭದಲ್ಲಿ ವಿವೇಕಾನಂದರ ಆಲೋಚನೆಗಳು ಹಾಗೂ ಸಾಮಾಜಿಕ ಸುಧಾರಣೆಗಳು ಹೊಸ ಆಯಾಮವನ್ನು ಪಡೆಯುತ್ತವೆ.

ವಿವೇಕಾನಂದರ ಕಾಲಕ್ಕಾಗಲೇ ರಾಜಾರಾಂ ಮೋಹನ್‌ರಾಯ್ ಮತ್ತು ಸ್ವಾಮಿ ದಯಾನಂದ ಸರಸ್ವತಿಯವರು ಹಿಂದೂಧರ್ಮದಲ್ಲಿನ ಲೋಪದೋಷಗಳ ಬಗ್ಗೆ ವ್ಯಾಖ್ಯಾನಿಸಿ ಸರಿಪಡಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಪ್ರಯತ್ನಶೀಲರಾಗಿದ್ದರು. ಮುಂದುವರೆದು ಇವರಿಬ್ಬರಿಗೂ ಭಿನ್ನ ನೆಲೆಯಲ್ಲಿ ವಿವೇಕಾನಂದರು ಚಿಂತಿಸಿದರು. ಧಾರ್ಮಿಕ ಸುಧಾರಣೆಯಲ್ಲದೆ ಸಾಮಾಜಿಕ ಸುಧಾರಣೆಗಳಿಗೆ ಹೆಚ್ಚು ಒತ್ತು ಕೊಟ್ಟರು. ಸಾಮಾಜಿಕ ಬದಲಾವಣೆಗೆ ಆರ್ಥಿಕ ಸಮಾನತೆ ಬಹುಮುಖ್ಯವೆಂದು ಭಾವಿಸಿದರು. ಶಿಕ್ಷಿತರು ಮತ್ತು ಶ್ರೀಮಂತರ ತ್ಯಾಗದ ಮೂಲಕ ಅಶಿಕ್ಷಿತರು-ಬಡವರು ಉದ್ಧಾರವಾಗಲು ಸಾಧ್ಯವೆಂದರು. ಹಾಗಾದಾಗ ಮಾತ್ರ ಪ್ರತಿಯೊಂದು ಸಮುದಾಯದ ಸಮಸ್ಯೆಯನ್ನು ಪರಿಹರಿಸಬಹುದು. ರೈತರು, ಮೀನುಗಾರರು, ಚಮ್ಮಾರರು, ಕಮ್ಮಾರರು, ಬಡಗಿಗಳು, ನೇಕಾರರು, ಕುಶಲಕರ್ಮಿಗಳು ಮತ್ತು ಕಾರ್ಮಿಕರು ತಮ್ಮ ಜೀವನ ಅಭಿವೃದ್ಧಿಗೊಳ್ಳುವತ್ತ ಜಾತೃತರಾಗಿ ಪರಿತ್ಯಾಗ ಸೇವಾಪ್ರವೃತ್ತರಾಗಲಿ ಪ್ರಚೋದಿಸಿದರು. ಪರವ್ರಾಜಕರಾದ ವಿವೇಕಾನಂದರು ದೇಶದುದ್ದಗಲ ಸಂಚರಿಸಿ ಭಾರತೀಯರ ಸಮಸ್ಯೆಗಳನ್ನು ಅರ್ಥೈಸಿಕೊಂಡವರು. ಅವರ ಪರಿವ್ರಾಜಕ ಯಾತ್ರೆ ಕೇವಲ ಯಾತ್ರೆಯಾಗಿರಲಿಲ್ಲ, ಅದೊಂದು ಜೀವನಾನುಭವವಾಗಿತ್ತು. ಹಿಮಾಲಯ ಶಿಖರದ ಔನ್ನತ್ಯದಲ್ಲಿ ಕಂಡ ಭವ್ಯ ಸಂಸ್ಕೃತಿ ಒಂದು ಕಡೆ. ಆ ಸಂಸ್ಕೃತಿಯನ್ನೊಳಗೊಂಡ ಭರತಭೂಮಿಯಲ್ಲಿ ತಾಂಡವಾಡುತ್ತಿದ್ದ ದುಃಖ ದಾರಿದ್ಯ್ರಗಳು, ಅಜ್ಞಾತ ಅಂಧಕಾರಗಳು ಮತ್ತೊಂದು ಕಡೆ. ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುವಂಥ ಉಪಟಳವನ್ನು ಕಂಡರು. ದೇವರು ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿಗಳು ಮುಗ್ಧ ಜನರನ್ನು ಶೋಷಿಸುತ್ತಿದ್ದುದನ್ನು ಕಂಡು ಕುದಿದರು, ಮಮ್ಮಲ ಮರುಗಿದರು. ತಾನು ಕಂಡ ಭವ್ಯ ಭಾರತದ ಕನಸು, ಆದರ್ಶ ಛಿದ್ರವಾಗಿತ್ತು, ಬಡತನ, ಅಜ್ಞಾನ, ರೋಗರುಜಿನಗಳು ಜನಸಾಮಾನ್ಯರನ್ನು ಆವರಿಸಿದ್ದುದು ಕಣ್ಮುಂದೆ ನಿಂತಿತು. ಎಲ್ಲಿಯವರೆಗೆ ಅಜ್ಞಾನ, ಬಡತನ, ಮೂಢನಂಬಿಕೆಗಳಿರುತ್ತವೆಯೋ, ಪುರೋಹಿತರು ಬಡಜನರ ರಕ್ತವನ್ನು ಜಿಗಣಿಗಳಂತೆ ಹೀರುತ್ತಿರುವೋ ಅಲ್ಲಿಯವರೆಗೆ ಭಾರತಮಾತೆಗೆ ದಾಸ್ಯ ತಪ್ಪದೆಂದು ಕಣ್ಣೀರು ಹರಿಸಿದರು. ದಾಸ್ಯಕ್ಕೋಳಗಾದವರ ಬಿಡಿಗಡೆಯ ದಾರಿಗಾಗಿ ಪರಿತಪಿಸಿದರು. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ, ಹಿಂದೂ, ಮುಸಲ್ಮಾನ, ಪಾರಸಿ, ಕ್ರೈಸ್ತ ಮುಂತಾದ ನೂರಾರು ಮತ ಭೇದಗಳನ್ನು ಖಂಡಿಸಿದರು. ಗೊಡ್ಡುಪದ್ಧತಿಯನ್ನು ಧರ್ಮವೆಂದು ಬೋಧಿಸಿ ಮತಾಂತರ ಪ್ರಕ್ರಿಯೆಗೆ ಒಳಗು ಮಾಡುತ್ತಿದ್ದ ಪಾದ್ರಿಗಳ ಹುನ್ನಾರವನ್ನು ಪ್ರತಿಭಟಿಸಿದರು. ದೀನದಲಿತರನ್ನು ಉದ್ಧಾರ ಮಾಡಬೇಕೇ ಹೊರತು ಅವಕಾಶವನ್ನು ಉಪಯೋಗಿಸಿಕೊಂಡು ತನ್ನತ್ತ ಸೆಳೆಯುವ ಮತಾಂಧರನ್ನು ಅಲ್ಲಗಳೆದರು. ನಿಜವಾದ ದೀನ-ದಲಿತರನ್ನು ಅಸ್ಪೃಶ್ಯ ವರ್ಗಗಳನ್ನು ಮುಖ್ಯವಾಹಿನಿಗೆ ತರಬೇಕೆಂದು ಹಂಬಲಿಸಿದರು. ಅಂತೆಯೇ “ದರಿದ್ರ ದೇವೋಭವ”, “ದರಿದ್ರ ನಾರಾಯಣ” ಎಂಬ ಕಾರ್ಯ ವಿಧಾನವನ್ನು ಜಾರಿಗೆ ತಂದರು. ಅಸ್ಪೃಶ್ಯ ವರ್ಗಗಳ ಉನ್ನತಿಗಾಗಿ ಆ ವೇಳೆಗಾಗಲೇ ಜ್ಯೋತಿಭಾ ಪುಲೆಯವರು ಸಾಮಾಜಿಕ ಸುಧಾರಣೆಯ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸಿದ್ದರು. ಅದರ ಮುಂದುವರೆದ ಭಾಗವಾಗಿ ವಿವೇಕಾನಂದರು ಕಾರ‍್ಯವಿಧಾನವನ್ನು ರೂಪಿಸಿದರು. ಮುಖ್ಯವಾಗಿ ಅವರು ಗುರುತಿಸಿದ್ದು ಜಾತಿ ವ್ಯವಸ್ಥೆ. ಪಾಶ್ಚಿಮಾತ್ಯರಲ್ಲಿ ಜಾತೀಯತೆಯನ್ನು ಅಧಿಕಾರ ಹಾಗೂ ಸಂಪತ್ತಿನ ಕ್ರೋಡೀಕರಣದಲ್ಲಿ ವ್ಯಕ್ತವಾದರೆ, ಭಾರತದಲ್ಲಿ ವರ್ಣವ್ಯವಸ್ಥೆಯ ಮೇಲೆ ಜಾತಿವ್ಯವಸ್ಥೆ ರೂಪುಗೊಂಡಿರುವುದನ್ನು ಕಂಡುಕೊಂಡರು. ವರ್ಣವ್ಯವಸ್ಥೆಯನ್ನು ಬೆಂಬಲಿಸಿದರಾದರೂ ಅದರೊಳಗಿನ ಜಾತಿವ್ಯವಸ್ಥೆಯನ್ನು ಖಂಡಿಸಿದರು. ಭಾರತದಲ್ಲಿ ವರ್ಣವ್ಯವಸ್ಥೆಯ ಆಧಾರದ ಮೇಲೆ ವಿವಿಧ ವರ್ಗಗಳು ರೂಪುಗೊಂಡಿವೆ. ಕೆಲವೊಂದು ವರ್ಗಗಳಿಂದ ಆಗುವ ಶೋಷಣೆ, ದುರುಪಯೋಗವನ್ನು ವಿರೋಧಿಸಬೇಕೆಂದರು. ಆಗ ಮಾತ್ರ ಕೆಳವರ್ಗಗಳು ಉನ್ನತ ಮಟ್ಟಕ್ಕೇರಲು ಸಾಧ್ಯವೆಂದು ಪ್ರತಿಪಾದಿಸಿದರು. ಈ ಜಾತಿ ವಿಭಜನೆಯಿಂದ ಪ್ರಗತಿಗೆ ಅಡ್ಡಿಯಾಗಿದೆ. ಇದರಿಂದ ಶ್ರಮದ ವಿಭಜನೆಯಾಗಿದ್ದರೂ ಸರ್ವರಿಗೂ ತಿನ್ನಲು ಬ್ರೆಡ್ಡನ್ನು ನೀಡುವಲ್ಲಿ ವಿಫಲವಾಗಿದೆ. ಅಲ್ಲದೆ, ಪರಸ್ಪರರ ನಡುವೆ ಬೆರೆಯುವ ಅವಕಾಶವಿಲ್ಲದೆ ಭದ್ರವಾದ ಗೋಡೆಯನ್ನು ನಿರ್ಮಿಸಲಾಗಿದೆ. ಈ ಗೋಡೆಯನ್ನು ಒಡೆದು ಜಾತಿವ್ಯವಸ್ಥೆಯನ್ನು ನಿರ್ನಾಮ ಮಾಡಬೇಕೆಂದರು. ಆಗ ಮಾತ್ರ ಅಸ್ಪೃಶ್ಯವರ್ಗ ಸಾಮಾಜಿಕವಾಗಿ ಮೇಲೇಳಲು ಸಾಧ್ಯವೆಂದರು.

ವೈಜ್ಞಾನಿಕ ಮನೋಭಾವ[ಬದಲಾಯಿಸಿ]

ವಿವೇಕಾನಂದರು ವೈಜ್ಞಾನಿಕ ಸಂಶೋಧನೆ ಹಾಗೂ ಅನ್ವೇಷಣೆಯಲ್ಲಿ ನಂಬಿಕೆ ಹೊಂದಿದವರು. ಅದು ಅವರ ಚಿಕಾಗೋ ಪ್ರವಾಸದಲ್ಲೇ ವ್ಯಕ್ತವಾಗಿತ್ತು. ಚೀನಾ ಮತ್ತು ಜಪಾನ್ ದೇಶಗಳಲ್ಲಿ ಕಂಡುಬಂದ ವಿಜ್ಞಾನದ ಪ್ರಗತಿ ಅವರನ್ನು ಆಕರ್ಷಿಸಿತ್ತು. ಭಾರತದಲ್ಲಿ ಇಂಥ ಪ್ರಗತಿಯನ್ನು ಕಾಣುವ ಇರಾದೆಯನ್ನು ಹೊಂದಿದ್ದರು. ಧರ್ಮದ ವಿಷಯದಲ್ಲೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಂಡರು. ವಿಜ್ಞಾನವನ್ನು ಅನ್ವೇಷಣೆಯ ಮೂಲಕ ಅಧ್ಯಯನ ಮಾಡುವಂತೆ ಧರ್ಮವನ್ನು ವೈಜ್ಞಾನಿಕವಾದ ಒರೆಗಲ್ಲಿಗೆ ಹಚ್ಚಬೇಕೆಂದರು. ಆಗ ಮಾತ್ರ ಧರ್ಮ ಮತ್ತು ಜಾತಿಯ ಹೆಸರಲ್ಲಿ ಆಚರಿಸಲ್ಪಟುತ್ತಿರುವ ಅಸ್ಪೃಶ್ಯತೆ ಹಾಗೂ ಸ್ತ್ರೀಪುರುಷರ ನಡುವಿನ ತಾರತಮ್ಯವನ್ನು ನಿವಾರಿಸಬಹುದೆಂದರು. ಧರ್ಮವು ಮಾನವೀಯ ಮೌಲ್ಯಗಳಿಂದ ಕೂಡಿರಬೇಕೆಂದರು. ಅದರಲ್ಲಿ ಸಾರ್ವತ್ರಿಕ, ವೈಚಾರಿಕ ಹಾಗೂ ವೈಜ್ಞಾನಿಕತೆಗಳು ನೆಲಗೊಳ್ಳಬೇಕೆಂದರು. ಅದಕ್ಕಾಗಿ ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಿದರು. ಸರ್ವರಿಗೂ ಶಿಕ್ಷಣ ದೊರಕಬೇಕೆಂಬುದು ವಿವೇಕಾನಂದರ ಆಶಯವಾಗಿತ್ತು. ಆದರೆ ಪ್ರಸ್ತುತ ಶಿಕ್ಷಣ ಪದ್ಧಿತಿಯು ದೋಷಪೂರಿತವಾಗಿತ್ತು. ಶಿಕ್ಷಣ ಜೀವನದ ಮಾರ್ಗದರ್ಶಿಯಾಗಬೇಕು. ಜನಸಮುದಾಯಕ್ಕೆ ಸಮಾನ ಸ್ಥಾನಮಾನಗಳನ್ನು ಕಲ್ಪಿಸಲು ಸಹಾಯ ಮಾಡಬೇಕು. ವ್ಯಕ್ತಿಯ ಚಾರಿತ್ರ್ಯವನ್ನು ಬಲಿಷ್ಟಗೊಳಿಸಲು ಮತ್ತು ಧೈರ್ಯವಂತರನ್ನಾಗಿ ಮಾಡಲು ಶಿಕ್ಷಣ ಸಹಾಯವಾಗುತ್ತದೆ ಎಂದರು. ವ್ಯಕ್ತಿಯ ಭವಿಷ್ಯದ ಅಭಿವೃದ್ಧಿಗೆ ಸಹಾಯವಾಬೇಕು. ಮಾನವೀಯತೆಯನ್ನು ಅರಳಿಸುವ ಮತ್ತು ಸ್ವತಂತ್ರ ವಿಚಾರಶಕ್ತಿಯನ್ನು ನೀಡುವ ಶಿಕ್ಷಣ ಬೇಕೆಂದರಲ್ಲದೆ ಅದು ಮಾತೃಭಾಷೆಯಲ್ಲಿಯೇ ಸಿಗುವಂತಾಗಬೇಕೆಂದರು. ದೇಶದೆಲ್ಲೆಡೆ ಆವರಿಸಿದ್ದ ಮೂಢನಂಬಿಕೆಗಳನ್ನು ಕಟುಮಾತುಗಳಲ್ಲಿ ಟೀಕಿಸುತ್ತ ಅವುಗಳನ್ನು ನಿರ್ಲಕ್ಷಿಸಲು ಹೇಳಿದರಲ್ಲದೆ ಚಿತ್ತವು ಸತ್ಯದ ಕಡೆಗೇ ಹರಿಯಬೇಕೆಂದರು. ಇದಕ್ಕೆ ಆಧುನಿಕ ಶಿಕ್ಷಣ ಪದ್ಧತಿಯ ಅಗತ್ಯವಿದೆ ಎಂದರು. ಈ ಸಂದೇಶವನ್ನು ಸಾರಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರವಾಸ ಮಾಡಿದರು. ಇದೇ ಪರಿವ್ರಾಜಕ ಸಂದರ್ಭದಲ್ಲಿ ಮೈಸೂರಿಗೂ ಅವರು ಭೇಟಿ ನೀಡಿದರು. ಮೈಸೂರಿನಲ್ಲಿ ಆಗಿನ ಅರಸು ಚಾಮರಾಜೇಂದ್ರ ಒಡೆಯರ್ ಅವರ ಅತಿಥಿಯಾಗಿದ್ದರು. ಒಡೆಯರ್ ಅವರಿಗೆ ವಿವೇಕಾನಂದರ ಧಾರ್ಮಿಕ ಚಿಂತನೆಗಳು, ಸನ್ಯಾಸದ ಪ್ರಾಮಾಣಿಕತೆಗಳು ಪರಿಚಯವಾಯಿತು. ಕಪಟರಹಿತ ಇಂಥ ಅಪ್ಪಟ ಸನ್ಯಾಸಿಗೆ ಸಹಾಯ ಮಾಡಬೇಕೆನಿಸಿತು. ‘ಸ್ವಾಮೀಜಿ,ನಾನು ನಿಮಗೆ ಯಾವ ಸಹಾಯ ಮಾಡಲಿ?’ ಎಂದು ಕೇಳಿದರು. ಅದಕ್ಕೆ ವಿವೇಕಾನಂದರು, ಮಹಾರಾಜ, ನಮ್ಮಭರತ ಭೂಮಿಯು ಪ್ರಾಚೀನವಾಗಿ ಪಡೆದುಕೊಂಡು ಬಂದ ಆಸ್ತಿ ಎಂದರೆ ಉನ್ನತವಾದಿ ತಾತ್ವಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳು. ಈಗ ಅದಕ್ಕೆ ಬೇಕಾಗಿರುವುದು ಆಧುನಿಕ ವಿಜ್ಞಾನದ ಜೋಡಣೆ. ಭಾರತದಲ್ಲಿ ಅಡಿಯಿಂದ ಮುಡಿಯವರೆಗೆ ರಚನಾತ್ಮಕ ಸುಧಾರಣೆಗಳನ್ನು ತರಬೇಕಾಗಿದೆ. ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಪಾಶ್ಚಾತ್ಯ ಜಗತ್ತಿಗೆ ಕೊಡುವ ಹೊಣೆ ಭಾರತಕ್ಕೆ ಸೇರಿದೆ. ಪ್ರತಿಯಾಗಿ ಪಾಶ್ಚಾತ್ಯ ರಾಷ್ಟ್ರಗಳು ಭಾರತೀಯರಿಗೆ ಆಧುನಿಕ ಕೃಷಿವಿಜ್ಞಾನ, ಕೈಗಾರಿಕೆ ಹಾಗೂ ಇತರ ವಿಷಯಗಳಲ್ಲಿ ಶಿಕ್ಷಣ ನೀಡಬೇಕಾಗಿದೆ. ಆ ಮೂಲಕ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಭಿ‌ವೃದ್ಧಿ ಪಡಿಸುವಲ್ಲಿ ನೆರವಾಗಬೇಕೆಂದು ನಾನು ನಿರೀಕ್ಷಿಸುತ್ತೇನೆ. ಎಂದಿರುವುದು ಗಮನಾರ್ಹ. ವಿವೇಕಾನಂದರ ಈ ಮಾತುಗಳು ಮಹಾರಾಜರ ಮೇಲೆ ಗಾಢವಾದ ಪರಿಣಾಮ ಬೀರಿತು. ವಿವೇಕಾನಂದರ ಮಾತನ್ನು ನೆರವೇರಿಸುವ ಭರವಸೆಯನ್ನು ಅವರು ಇತ್ತರು. ಮಹಾರಾಜರು ವಿವೇಕಾನಂದರ ಪಾದಪೂಜೆ ಮಾಡಲು ಇಷ್ಟಪಟ್ಟಾಗ ವಿವೇಕಾನಂದರು ಅದನ್ನು ನಯವಾಗಿ ನಿರಾಕರಿಸಿದರು. ಹೀಗೆ ವೈಜ್ಞಾನಿಕ ಮನೋಭಾವದ ವಿವೇಕಾನಂದರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಆಧ್ಯಾತ್ಮಿಕ ತಳಹದಿಯ ಮೇಲೆ ವೈಜ್ಞಾನಿಕ ಶಿಕ್ಷಣವನ್ನು ನೀಡಬೇಕೆನ್ನುತ್ತಾರೆ. ವೇದಾಂತದ ಜೊತೆ ಪಾಶ್ಚಾತ್ಯ ವಿಜ್ಞಾನವನ್ನು ಕೂಡ ಬೋಧಿಸಬೇಕು ಹಾಗೂ ಅದರಲ್ಲಿರುವ ಗುಣಾತ್ಮಕ ಹಾಗೂ ರಚನಾತ್ಮಕ ಅಂಶಗಳು ಅನುಷ್ಠಾನಗೊಳ್ಳಬೇಕೆನ್ನುತ್ತಾರೆ. ವಿಜ್ಞಾನ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಉತ್ತಮ ಧ್ಯೇಯ, ಆತ್ಮಶ್ರದ್ಧೆ ಮತ್ತು ನಂಬಿಕೆಯನ್ನು ಬೆಳಗಬೇಕು. ಆತ್ಮದಿಂದ ಬರುವ ಸ್ಫೂರ್ತಿ ಮತ್ತು ಇಚ್ಛಾಶಕ್ತಿಗಳು ವ್ಯಕ್ತಿಗತವಾಗಿ ಬೆಳೆಯುವಂತಿರಬೇಕೆನ್ನುತ್ತಾರೆ. ಇಂಥ ವಿಚಾರಕ್ರಾಂತಿಗೆ ಮನಸೋತ ಡಾ.ಎಸ್.ರಾಧಾಕೃಷ್ಣನ್ ಅವರು “ಭಾರತದಂತಹ ದೇಶದಲ್ಲಿ ಸಾಮಾಜಿಕ ಶಿಕ್ಷಣವನ್ನು ಉತ್ತಮವಾಗಿ ಕಾರ್ಯಗತಗೊಳಿಸಲು ವಿವೇಕಾನಂದರಂತಹ ಆಧ್ಯಾತ್ಮಿಕ ವ್ಯಕ್ತಿಗಳಿಂದ ಮಾತ್ರ ಸಾಧ್ಯ” ಎಂದಿರುವುದು ಪ್ರಸ್ತುತವಾಗಿದೆ.

ಕ್ರಾಂತಿಕಾರಿ ಸನ್ಯಾಸಿ

ಮಹಾಶಕ್ತಿ ಈ ಕ್ರಾಂತಿಕಾರಿ ಸನ್ಯಾಸಿ[ಬದಲಾಯಿಸಿ]

ವಿವೇಕಾನಂದರು ಕಾವಿತೊಟ್ಟರೂ ಕೆಂಡದಂಥ ವಿಚಾರಗಳನ್ನು ಅಭಿವ್ಯಕ್ತಿಸಿದವರು. ಜನತೆಯಲ್ಲಿ ರೂಢಿಗೊಂಡ ಎಲ್ಲ ಬಗೆಯ ಮೌಢ್ಯವನ್ನು ಬೇರು ಸಹಿತ ಕಿತ್ತುಹಾಕಲು ಯತ್ನಿಸಿದವರು. ಜೀವನ ಪ್ರೀತಿಯ ತಿರುಳನ್ನು ತೆರೆದಿಟ್ಟು ತಮ್ಮ ವೀರವಾಣಿಯಿಂದ ಭಾರತೀಯರನ್ನು ಬಡಿದೆಬ್ಬಿಸಿದ ಮಹಾಶಕ್ತಿ ಈ ಕ್ರಾಂತಿಕಾರಿ ಸನ್ಯಾಸಿ. ವಿವೇಕಾನಂದರು ಸನ್ಯಾಸಿಯಾಗಿದ್ದರೂ ವ್ಯಕ್ತಿಗೆ ಹಾಗೂ ವ್ಯಕ್ತಿಯ ಇರುವಿಕೆಗೆ, ವ್ಯಕ್ತಿಯ ಸಾಮರ್ಥ್ಯಕ್ಕೆ ಹೆಚ್ಚು ಮಹತ್ವ ನೀಡಿದರು. ಮೌಢ್ಯತೆಗಳಿಂದ ಕೂಡಿರುವ ಸಮಾಜದ ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ಹೋರಾಡಲು ಪ್ರಚೋದಿಸಿದರು. ಕುರುಡನಂಬಿಕೆ ಆಚರಣೆಗಳಿಂದ ಸಮಾಜದ ಪರಿಸ್ಥಿತಿ ಅಧಃಪತನಕ್ಕೆ ಇಳಿದಿವೆ. ಇದು ಯುದ್ಧ ಹಾಗು ರಕ್ತಪಾತಗಳಿಗೆ ಹಾದಿಯಾಗಿವೆ. ಇದರಿಂದ ರೂಪುಗೊಂಡ ಇಂತಹ ಸಾಮಾಜಿಕ ಕಟ್ಟಳೆಗಳನ್ನು ಮುರಿಯಬೇಕೆಂದರು. ಇದರಿಂದ ಸಮಾಜದ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಬಹುದು. ಆಗ ವ್ಯಕ್ತಿಯು ಉತ್ತಮ ನಡತೆಯುಳ್ಳವನಾಗಿ ಯಶಸ್ವಿ ಬದುಕಿನತ್ತ ಸಾಗುತ್ತಾನೆ; ಸತ್ಯ-ಪ್ರಾಮಾಣಿಕತೆ-ಸಮಗ್ರತೆಯ ಜೀವನವನ್ನು ನಡೆಸುತ್ತಾನೆ ಎಂದರು. ವ್ಯಕ್ತಿಯ ಸುಧಾರಣೆಯಾದರೆ ಸಮಾಜದ ಸುಧಾರಣೆಯು ತಾನಾಗೇ ಆಗುತ್ತದೆಂದರು. ಇದಕ್ಕೆ ಆಧ್ಯಾತ್ಮಿಕ ಅರಿವಿನ ಅಗತ್ಯವಿದೆ ಎಂದರು. ನಿಜದ ಆಧ್ಯಾತ್ಮಿಕತೆಯ ಅರಿವಿರುವವನಿಗೆ ಮಾತ್ರ ಸಕಾರಾತ್ಮಕ ಜಾತ್ಯಾತೀತವಾದಿಯಾಗಲೂ ಹಾಗೂ ಸರ್ವಧರ್ಮದ ಸಾರವನ್ನು ತಿಳಿಯಲು ಸಾಧ್ಯವೆನ್ನುತ್ತಾರೆ ವಿವೇಕಾನಂದರು. ಈ ತಿಳುವಳಿಕೆಯ ನೆಲೆಯಲ್ಲಿ ಹಿಂದೂ ಧರ್ಮವನ್ನು ಗೌರವಿಸಬೇಕೆನ್ನುವ ವಿವೇಕಾನಂದರು, “ಪಾಶ್ಚಿಮಾತ್ಯರು ಜಗತ್ತನ್ನು ತಮ್ಮ ಭೌತಿಕ ಬೆಳವಣಿಗೆಯಿಂದ ಆಳಲು ಸಾಧ್ಯವಾಗಿದ್ದರೆ; ಅದಕ್ಕೆ ಪರ್ಯಾಯವಾಗಿ ಹಿಂದೂ ಧರ್ಮದ ಆಧ್ಯಾತ್ಮಿಕ ಶಕ್ತಿಯಿಂದ ಜಗತ್ತನ್ನೇ ಗೆಲ್ಲುವ ಸಾಧ್ಯತೆಯಿದೆ” ಎಂದು ಪ್ರತಿಪಾದಿಸಿದರು. ರಾಷ್ಟ್ರೀಯವಾದದ ಬಗೆಗೂ ವಿವೇಕಾನಂದರ ವಿಚಾರಗಳು ಆಧ್ಯಾತ್ಮಿಕ ನೆಲೆಯಿಂದ ಕೂಡಿರುವಂತಹದು. ರಾಷ್ಟ್ರವನ್ನು ವ್ಯಾಖ್ಯಾನಿಸುತ್ತಾ ರಾಷ್ಟ್ರ ಹಾಗೂ ಅದರ ಪ್ರಜೆಗಳನ್ನು ದೇವರೆಂದು ಆರಾಧಿಸಲು ಕರೆ ನೀಡಿದರು. ರಾಷ್ಟ್ರ ಮತ್ತು ಧರ್ಮವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದರ ಸುಧಾರಣೆ ಕಾಣದೆ ಮತ್ತೊಂದರ ಪ್ರಗತಿ ಸಾಧ್ಯವಿಲ್ಲವೆಂದರು. ಸಕಾರಾತ್ಮಕ ಜಾತ್ಯಾತೀತವಾದಿಯಾಗಿ, ಆಧ್ಯಾತ್ಮಿಕವಾದಿಯಾಗಿ, ರಾಷ್ಟ್ರೀಯವಾದಿಯಾಗಿ, ಸರ್ವಧರ್ಮ ಸಮನ್ವಯಕರಾಗಿ, ವಿಶ್ವಮಾನವರಾಗಿ ಅವರು ತಮ್ಮ ಛಾಪನ್ನು ಮೂಡಿಸಿದ್ದಾರೆ. ಇಂದಿಗೂ ವಿವೇಕಾನಂದರ ಅನೇಕ ಅನುಯಾಯಿಗಳು ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಂತಹ ಮಹಾನ್ ಸಾಧಕನ ಸಾಧನೆಯನ್ನು ಗುರುತಿಸಿದ ವಿಶ್ವಸಂಸ್ಥೆಯು ವಿವೇಕಾನಂದರ ಹುಟ್ಟುಹಬ್ಬವನ್ನು ‘ಅಂತಾರಾಷ್ಟ್ರೀಯ ಯುವ ದಿನಾಚರಣೆ’ ಎಂದು ಘೋಷಿಸುವುದರ ಮೂಲಕ ಅವರಿಗೆ ದೊಡ್ಡ ಗೌರವವನ್ನು ಅರ್ಪಿಸಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ.