ಸದಸ್ಯ:Mural Jovita Crasta/sandbox

ವಿಕಿಪೀಡಿಯ ಇಂದ
Jump to navigation Jump to search

ಕುವೆಂಪು - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿಗಳಲ್ಲೊಬ್ಬರು, ಎರಡನೆ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಪ್ರಥಮ ವ್ಯಕ್ತಿ. 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-"ಕಿಶೋರ ಚಂದ್ರವಾಣಿ" -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು. ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಪತ್ನಿ ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

ಪರಿವಿಡಿ [ತೋರಿಸು] ವಿಶ್ವ ಮಾನವ ದಿನ[ಬದಲಾಯಿಸಿ] ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು

ಸಾರಸ್ವತ ಲೋಕದ ಪ್ರತಿಕ್ರಿಯೆಗಳು[ಬದಲಾಯಿಸಿ] ಜ್ಞಾನಪೀಠ ಪ್ರಶಸ್ತಿ ಉಲ್ಲೇಖ ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣ ಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.

ಬಿ.ಎಂ.ಶ್ರೀ. ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ.

ದ.ರಾ.ಬೇಂದ್ರೆ

ಯುಗದ ಕವಿಗೆ ಜಗದ ಕವಿಗೆ ಶ್ರೀ ರಾಮಾಯಣ ದರ್ಶನದಿಂದಲೇ ಕೈ ಮುಗಿದ ಕವಿಗೆ – ಮಣಿಯದವರು ಯಾರು? ರಾಮಕೄಷ್ಣ ವಚನೋದಿತ ಪ್ರತಿಭೆ ತೆರೆದ ಕವನ ತತಿಗೆ ತಣಿಯದವರು ಆರು? ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ ಕವಿಯ ಜತೆಗೆ ಕುಣಿಯದವರು ಆರು? ಕನ್ನಡಿಸಲಿ ಶಿವ ಜೀವನ ಮುನ್ನಡೆಸಲಿ ಯುವ-ಜನ-ಮನ ಇದೆ ಪ್ರಾರ್ಥನೆ ನಮಗೆ ತಮವೆಲ್ಲಿದೆ ರವಿಯಿದಿರಿಗೆ? ಉತ್ತಮ ಕವಿ ನುಡಿ – ಚದುರಗೆ ಚಾರುತ್ವದ ಕುಂದಣದಲಿ ಚಾರಿತ್ರ್ಯದ ರತ್ನ ಚಾತುರ್ಯದ ಮಂತಣದಲಿ ಸತ್ಸಂಗದ ಯತ್ನ ಇದೆ ತೄಪ್ತಿಯು ನಿಮಗೆ

ಸ.ಸ.ಮಾಳವಾಡ ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು. ಅವರು ಸಾಹಿತ್ಯ ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ. ಅವರು ಏಕಾಂತ ಜೀವಿ, ಧ್ಯಾನಶೀಲರು, ಭಾವಸಮಾಧಿಯಲ್ಲಿ ವಿರಮಿಸುವವರು. ಆದರೆ ಕನ್ನಡ ನಾಡು ನುಡಿಗಳ ಹಿತರಕ್ಷಣೆಗಾಗಿ ಸತತವೂ ಹೋರಾಟದಲ್ಲಿ ತೊಡಗಿದವರು. ಜನಸಂಪರ್ಕದಿಂದ ದೂರವುಳಿದರೂ ಜನ ಹಿತಕಾರ್ಯದಿಂದ ವಿಮುಖರಾಗಿಲ್ಲ. ಸನಿಹದಲ್ಲಿ ಅವರನ್ನು ಕಂಡಾಗ ಅವರು ಸ್ನೇಹಪರರು, ಕುಟುಂಬವತ್ಸಲರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಡಿ.ಎಲ್.ನರಸಿಂಹಚಾರ್ ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ.

ಹಾ.ಮಾ.ನಾಯಕ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ.

ಸುಜನಾ ಶ್ರೀ ಕುವೆಂಪು ದರ್ಶನದ ವೈಶಿಷ್ಟ್ಯ ಪರಂಪರೆ-ಯುಗ ಪ್ರಜ್ಞೆಗಳೆರಡರ ಸಮನ್ವಯದಿಂದ ಬಂದದ್ದು. ಈ ಅತಿಶಯ ಸಿದ್ಧಿ ಸಾಹಿತ್ಯಲೋಕದಲ್ಲಿ ವಿರಳ.

ಜಿ.ಎಸ್.ಶಿವರುದ್ರಪ್ಪ ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ.

ದೇ.ಜ.ಗೌ ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.

ಕೀರ್ತಿನಾಥ ಕುರ್ತಕೋಟಿ ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ 'ರೊಮ್ಯಾಂಟಿಕ್' ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪು ರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ. ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಆಧ್ಯಾತ್ಮಿಕತೆ ವೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಕೋ.ಚೆನ್ನಬಸಪ್ಪ ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ - ಆತ್ಮಜ್ಞಾನ - ಪುಟ್ಟಪ್ಪನವರಿಗೆ ಚಿಕ್ಕಂದಿನಿಂದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳ ಗುರಿ; ಜೀವನೋದ್ದೇಶದ ಆದಿ ಅಂತ್ಯ. ಅವರಿಗೆ ಜೀವನದಲ್ಲಿ ಮತ್ತಾವ ಉಪಾಧಿಗಳೂ ಇರಲಿಲ್ಲ. ಇಂಥ ಅವರ ಜೀವನೋದ್ದೇಶಕ್ಕೆ ನೆರವಾದುದು ಅವರ ಕಾವ್ಯಶಕ್ತಿ. ಅದನ್ನವರು ಎಂದೂ ಮರೆಮಾಚಿಲ್ಲ. ಆದರೂ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.

ಕೆ. ಸಚ್ಚಿದಾನಂದನ್ ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ 'ರಾಮಾಯಣ ದರ್ಶನಂ' ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ 'ರಸೋ ವೈ ಸಃ'ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.