ಸದಸ್ಯ:Mariaalice22

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಯಾರಾವ್ (೧೯೨೮)

ಕೋರಿಯೋಗ್ರಫಿ ಎಂದು ಕರೆಯಲಾಗುವ ನಾಟ್ಯ ಸಂಯೋಜನೆಯಲ್ಲಿ ರಷ್ಯಾ ದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆದ ಏಕೈಕ ಭಾರತೀಯ ನೃತ್ಯ ಕಲಾವಿದೆ ಮಾಯಾರಾವ್, ನೃತ್ಯ ರಚನೆ,ಸಂಯೋಜನೆಗಳಲ್ಲಿ ಪ್ರೌಢಿಮೆ ಗಳಿಸಿದ್ದಾರೆ. ಮಾಯಾರಾವ್ ಬೆಂಗಳೂರಿನಲ್ಲಿ ೧೯೨೮ ರಲ್ಲಿ ಜನಿಸಿದರು. ತಂದೆ ಸಂಜೀವರಾವ್, ತಾಯಿ ಲಲಿತಾಬಾಯಿ. ಚಿಕ್ಕಂದಿನಲ್ಲಿ ಹಿಂದೂಸ್ಥಾನಿ ಸಂಗೀತ ಕಲಿತರು. ಅನಂತರ ಕಥಕ್ ನೃತ್ಯ ಪದ್ಧತಿಯಲ್ಲಿ ನೃತ್ಯ ಶಿಕ್ಷಣ ಪಡೆದರು. ಇವರ ಗುರುಗಳು ಪ್ರಖ್ಯಾತ ಕಥಕ್ ನೃತ್ಯ ಪರಿಣತರಾದ ಸೋಹನ್ ಲಾಲ್, ಶಂಭು ಮಹಾರಾಜ್ ಮತ್ತು ಸುಂದರಪ್ರಸಾದ್. ಮಾಯಾ ಅವರು ನೃತ್ಯಭ್ಯಾಸದೊಡನೆ ಇಂಗ್ಲಿಷ್ ಭಾಷಾ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು.

ಕಥಕ್ ಶೈಲಿಯಲ್ಲಿ ಅಲ್ಲದೆ ಮಣಿಪುರಿ ಮತ್ತು ಸಂಹಳದ ಕ್ಯಾಂಡನ್ ನೃತ್ಯ ಪದ್ದತಿಗಳಲ್ಲೂ ಪರಿಣತಿ ಗಳಿದಿದ್ದಾರೆ. ಜನಪದ ನೃತ್ಯಗಳನ್ನೂ ಅಭ್ಯಸಿಸಿದ್ದಾರೆ. ಇದರಿಂದ ಅವರ ನೃತ್ಯ ನಾಟಕಗಳ ಕಲ್ಪನೆ ಮತ್ತು ಸಂಯೋಜನೆಗಳಿಗೆ ಭಾರತೀಯ ದೇಸೀ ಪರಂಪರೆಯ ಸೊಬಗು ಒದಗಿದೆ. ಕಥಕ್ ನೃತ್ಯ ಪದ್ದತಿ ಒಂದು ಅಭಿಜಾತ ಕಲೆಯಾಗಿ ರೂಪುಗೊಂಡಿತು. ಇದರ ಮೂಲ, ಸಾಮೂಹಿಕ ಶೃಂಗಾರ ನೃತ್ಯವಾದ ರಾಸಲೀಲೆಯಾಗಿದೆ. ಶ್ರೀಕೃಷ್ಣನ ಬಗೆಗೆ ಮಧುರ ಭಕ್ತಿ ಇಲ್ಲಿ ಪ್ರಧಾನ. ಶ್ರೀಕೃಷ್ಣನ ಕಥಾ ಪ್ರಸಂಗಗಳನ್ನು ಆಧರಿಸಿ ನೃತ್ಯ ನಾಟಕಗಳನ್ನು ಸಂಯೋಜಿಸಿದ್ದಾರೆ. ಜಯದೇವ ಕವಿಯ ಸಂಸ್ಕ್ರತ 'ಗೀತಗೋವಿಂದ', ರವೀಂದ್ರನಾಥ ಠಾಕೂರರ ಕವನಗಳು, ಪುರಂದರದಾಸರ ಕೀರ್ತನೆಗಳು, ತುಲಸೀದಾಸರ ರಾಮಾಯಣ, ಕಾಳಿದಾಸನ ಅಭಿಜ್ಞಾನ ಶಾಕುಂತಲ, ಕುಮಾರ ಸಂಭವ ಮುಂತಾದುವನ್ನು ಆಧರಿಸಿ ನೃತ್ಯ ನಾಟಕಗಳನ್ನು ರೂಪಿಸಿದ್ದಾರೆ. 'ಹೋಯ್ಸಳ ವೈಭವ', ಅಮಿರ್ ಖುಸ್ರೂ'. 'ತುಲಸೀ ರಾಮ್' ಮತ್ತು ರಷ್ಯಾ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೇ ಹೋಗಿ ರೂಪಿಸಿದ ಶಾಕುಂತಲ ಮತ್ತು ರಾಮಾಯಣ ನೃತ್ಯ ನಾಟಕಗಳು ಅಥವಾ ಬ್ಯಾಲೆಗಳು ವಿಶ್ವಖ್ಯಾತಿ ಗಳಿಸಿವೆ. ಕುವೆಂಪು ಅವರ 'ರಾಮಾಯಣ ದರ್ಶನಂ" ಮಹಾಕಾವ್ಯದ ಕೆಲವು ಭಾಗಗಳನ್ನು ನೃತ್ಯ ರೂಪಕ್ಕೆ ಪರಿವರ್ತಿಸಿ ಪ್ರದರ್ಶಿಸಿದ್ದಾರೆ.

೧೯೪೭ರಲ್ಲಿ ಮಾಯಾರಾವ್ ಅವರು ಬೆಂಗಳೂರಿನಲ್ಲಿ 'ನಾಟ್ಯ ಸರಸ್ವತಿ' ಎಂಬ ನೃತ್ಯ ಸಂಸ್ಥೆ ಸ್ಥಾಪಿಸಿ ನಡೆಸುತ್ತಿದ್ದರು. ಅನಂತರ ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ನೃತ್ಯ ಶಿಕ್ಷಣವನ್ನು ಹಲವು ವರ್ಷ ನೀಡಿದರು. ೧೯೬೪ರಲ್ಲಿ ದೆಹಲಿಯಲ್ಲಿ 'ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಮತ್ತು ಕೋರಿಯೋಗ್ರಫಿ' ಯನ್ನು ಸ್ಥಾಪಿಸಿದರು. 'ನಾಟ್ಯ ಬ್ಯಾಲೆ ಸೆಂಟರ್' ವತಿಯಿಂದ ಅನೇಕ ಪ್ರದರ್ಶನ ನೀಡಿದ್ದಾರೆ. ೧೯೮೭ರಲ್ಲಿ ದೆಹಲಿಯ 'ನಾಟ್ಯ ಸಂಸ್ಥೆಯನ್ನು ಬೆಂಗಳೂರಿಗೆ ವರ್ಗಾಯಿಸಿ ಇಲ್ಲಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.

ಮಾಯಾರಾವ್ ಅವರನ್ನು ಭಾರತ ಸರ್ಕಾರ ವಿಶೇಷವಾಗಿ ಆರಿಸಿ, ದೇಶ ವಿದೇಶಗಳಲ್ಲಿ ನಡೆಸಲಾದ ಉತ್ಸವಗಳಲ್ಲಿ ಭಾರತದ ವಿಶಿಷ್ಟ ಕಲೆಯ ಪ್ರದರ್ಶನ ವ್ಯವಸ್ಥೆ ಮಾಡಿದೆ. ಅವರಿಗೆ ದೇಶ ವಿದೇಶಗಳಲ್ಲಿ ಅನೇಕ ಪ್ರಶಸ್ತಿ ಗೌರವಗಳು ದೊರೆತಿವೆ. ಫಿನ್ಲೆಂಡಿನ ಹೆಲ್ಸಿಂಕಿಯಲ್ಲಿ ನಡೆದ ವಿಶ್ವಕಲಾ ಉತ್ಸವದಲ್ಲಿ ಸ್ವರ್ಣ ಪದಕ, ಉಜ್ಜಯನಿಯಲ್ಲಿ ಕಾಳಿದಾಸ ಉತ್ಸವದಲ್ಲಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಮುಂಬಯಿಯ ಸುರ ಸಿಂಗಾರ್ ಸಂಸ್ಥೆಯಿಂದ ' ನೃತ್ಯವಿಲಾಸ' ಬಿರುದು,ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದವು ಅವರಿಗೆ ಸಂದ ಕೆಲವು ಗೌರವಗಳು ಮಾತ್ರ. ೧೯೮೭ ರಿಂದ ೧೯೯೦ರವರೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.

ಕರ್ನಾಟಕದ ವಿಶ್ವವಿಖ್ಯಾತ ಶಿಲ್ಪಕಲೆಯ ಬೀಡಾದ ಪಟ್ಟದಕಲ್ಲು, ಹಳೇಬೀಡು, ಸೋಮನಾಥಪುರ ದೇಮಾಲಯಗಳ ಹಿನ್ನಲೆಯನ್ನು ಬಳಸಿಕೊಂಡು ನೃತ್ಯೋತ್ಸವಗಳನ್ನು ನಡೆಸಿ ಇತಿಹಾಸ ಕಾಲದ ವೈಭವವನ್ನು ಜೀವಂತಗೊಳಿಸಿದರು. ಮಾಯಾರಾವ್ ಅವರ ಜನಪದ ನೃತ್ಯ ಕಲೆಯ ಆಸಕ್ತಿಯ ಪರಿಣಾಮವಾಗಿ ದೇಸೀ ಕಲಾ ಪರಂಪರೆಯೂ ಪರಿಷ್ಕಾರಗೊಂಡು ಉಳಿದುಬುರುವಂತಾಗಿದೆ.


ಈ ಸದಸ್ಯರ ಊರು ಮಂಗಳೂರು.