ಸದಸ್ಯ:Manjunatha7353/ನನ್ನ ಪ್ರಯೋಗಪುಟ4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೇಮಿನಾಥ ಸ್ವಾಮಿ ಬಸದಿ, ಗೇರುಸೊಪ್ಪೆ

ಸ್ಥಳ[ಬದಲಾಯಿಸಿ]

ಶ್ರೀ ನೇಮಿನಾಥ ಸ್ವಾಮಿಯ ಸುಂದರ ಬಿಂಬವಿರುವ ಈ ಬಸದಿಯು ಪ್ರಸಿದ್ಧ ಚತುರ್ಮುಖ ಬಸದಿಯ ಎದುರುಗಡೆಯ ರಸ್ತೆಯ ಬಲಭಾಗದಲ್ಲಿದೆ. ಸುತ್ತಲೂ ಪ್ರಾಕಾರಗೋಡೆ ಇದೆ. ಒಳಗಡೆ ಉತ್ತಮ ಸ್ಥಿತಿಯಲ್ಲಿರುವ ಗರ್ಭಗೃಹವಿದ್ದು ಎದುರುಗಡೆ ಪೂರ್ಣ ನಿರ್ಮಾಣಗೊಳ್ಳದ ಪ್ರಾರ್ಥನಾ ಮಂಟಪವನ್ನು ಹೊಂದಿದೆ. ಇದು ಕೂಡ ಪ್ರಾಚ್ಯ ಇಲಾಖೆಗೆ ಸೇರಿದೆ.

ವಿನ್ಯಾಸ[ಬದಲಾಯಿಸಿ]

ಗರ್ಭಗೃಹವು ಕೇವಲ ಆರೂಢವನ್ನು ಮಾತ್ರ ಹೊಂದಿದ್ದು ಮೇಲ್ಗಡೆ ಕಲ್ಲು ಕಪ್ಪಡಿಗಳನ್ನು ಹಾಸಲಾಗಿದೆಯೇ ಹೊರತು ಇದಕ್ಕೆ ಹಂಚು ಇತ್ಯಾದಿಗಳ ಮೇಚ್ಛಾವಣಿಯಿಲ್ಲ. ಗರ್ಭಗೃಹದಲ್ಲಿರುವ ಶ್ರೀ ನೇಮಿನಾಥ ಸ್ವಾಮಿಯ ಶಿಲಾಮೂರ್ತಿಯು ಪೀಠ ಸಹಿತವಾಗಿ ಸುಮಾರು ಮೂರುವರೆ ಅಡಿ ಎತ್ತರವಿದೆ. ದೃಢವಾದ ದಷ್ಟಪುಷ್ಟವಾದ ಶರೀರವನ್ನು ಹೊಂದಿದೆ. ಮೇಲಿನ ಅರ್ಧಚಂದ್ರಾಕೃತಿಯ ಪ್ರಭಾವಳಿಯಲ್ಲಿ ಮಕರತೋರಣದ ಅಲಂಕಾರವಿದೆ. ಅದಕ್ಕಿಂತ ಹೊರಭಾಗದಲ್ಲಿ ಚತುವಿರ್ಂಶತಿ ತೀರ್ಥಕರ ಸುಂದರ ಆಕೃತಿಗಳಿವೆ.ಸ್ವಾಮಿಯ ಎಡಬಲಭಾಗಗಳಲ್ಲಿ ಸರ್ವಾಹ್ನ ಯಕ್ಷ ಮತ್ತು ಕೂಷ್ಮಾಂಡಿನಿ ಯಕ್ಷಿಯರ ಬಿಂಬಗಳಿವೆ. ಇವುಗಳ ಮೇಲ್ಗಡೆ ಕಂಬದ ರೀತಿಯ ಕೆತ್ತನೆಗಳು ಹಾಗೂ ಅದಕ್ಕಿಂತ ಮೇಲ್ಗಡೆ ಮಕರ ಮೃಗ ಹಾಗೂ ಬಳಿಯಲ್ಲಿ ಚಾಮರ ಧಾರಿಗಳ ಬಿಂಬಗಳಿವೆ. ಇವು ಗಮನೀಯವಾದುವುಗಳು. ಈ ಸಮಗ್ರ ಬಿಂಬವು ಹೊಯ್ಸಳ ಶಿಲ್ಪಶೈಲಿಯನ್ನು ತೋರಿಸುತ್ತದೆ. ಪ್ರಭಾವಳಿಯಲ್ಲಿ ಹೂಗಳ ಅಲಂಕಾರವಿದೆ. ಸ್ವಾಮಿಯ ಶಿರೋಭಾಗದಲ್ಲಿ ಅಲಂಕೃತವಾದ ಮುಕ್ಕೊಡೆ ಇದೆ. ಅದರ ಮೇಲ್ಗಡೆ ಕೀರ್ತಿ ಮುಖವಿದೆ,ಕಣ್ಣುಗಳ ರಚನೆಯು ಹೊಳೆಯುವ ಕಣ್ಣುಗಳನ್ನು ಪ್ರತಿಬಿಂಬಿಸುತ್ತದೆ. ಸಿಂಹಪೀಠದ ಮೇಲಿರುವ ಪದ್ಧಪೀಠದ ಮೇಲ್ಬಾಗದ ವರ್ತುಲದಲ್ಲಿ “ಪನಸೋಕಾವಳಿಮಂಜುಳ ದೇವಿಗಣ ಲಲಿತಕೀರ್ತಿ ಮುನಿಗಳ" ಎಂಬ ಉಲ್ಲೇಖವಿದೆ ಪನಸೋಗೆಯ ಲಲಿತಕೀರ್ತಿ ಭಟ್ಟಾರಕರು ಈ ಬಸದಿಯ ನಿರ್ಮಾಣದ ಸಮಯದಲ್ಲಿ ಕಾರ್ಕಳದ ಶ್ರೀ ದಿಗಂಬರ ಜೈನಮಠದ ಭಟ್ಟಾರಕರಾಗಿದ್ದರು ಎಂಬುದು ಗಮನೀಯ. ಇದೇ ವರ್ತುಲದ ಮೇಲೈಯಲ್ಲಿ ಒಂದು ಯಂತ್ರವನ್ನು ರೇಖಿಸಿದ್ದು ಇದನ್ನು ಶಂಖವೆಂದೂ ಕೆಲವರು ಹೇಳುತ್ತಾರೆ. ಅಕ್ಕಪಕ್ಕದಲ್ಲಿ ಇತರ ಯಾವುದೇ ಮೂರ್ತಿಗಳಿಲ್ಲ. ಹಿಂದೆ ಈ ಬಸದಿಗೆ ಪ್ರತ್ಯೇಕವಾದ ಮಾನಸ್ತಂಭ ಇತ್ತಂತೆ. ಈಗ ಅದು ಇಲ್ಲ. ಆದರೆ ಅದರ ಪೀಠದ ಕುರುಹುಗಳಿವೆ . ಇಲ್ಲಿ ಕ್ಷೇತ್ರಪಾಲನ ಸಾನ್ನಿಧ್ಯ ಕಂಡುಬರುವುದಿಲ್ಲ. ಇಲ್ಲಿರುವ ಪ್ರಾಚ್ಯ ಇಲಾಖೆಯ ಒಂದು ಸೂಚನಾ ಫಲಕದಲ್ಲಿ ಹೀಗೆಂದು ಬರೆದಿಡಲಾಗಿದೆ.[೧]

ಇತರೆ[ಬದಲಾಯಿಸಿ]

ಸಂರಕ್ಷಿತ ಸ್ಮಾರಕ:“ಪ್ರಾಚೀನ ಸ್ಮಾರಕ, ಪುರಾತತ್ತೀಯ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 1958 (1958ರ 24) ರ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸಾರಕವೆಂದು ಘೋಷಿಸಲಾಗಿದೆ.ಯಾರಾದರೂ ಇದನ್ನು ನಾಶಮಾಡಿದರೆ, ಸ್ಥಳಾಂತರಿಸಿದರೆ, ಹಾನಿಯುಂಟು ಮಾಡಿದರೆ, ಬದಲಿಸಿದರೆ, ವಿಕೃತಗೊಳಿಸಿದರೆ ಅಥವಾ ದುರುಪಯೋಗ ಪಡಿಸಿದರೆ ಅಂಥವರನ್ನು 3 ತಿಂಗಳವರೆಗೆ ಹೆಚ್ಚಿಸಬಹುದಾದ ಕಾರಾಗೃಹ ವಾಸಕ್ಕೆ ಒಳಪಡಿಸಲಾಗುವುದು. ಅಥವಾ 5000 ರೂಪಾಯಿಗಳ ವರೆಗೆ ಹೆಚ್ಚಿಸಬಹುದಾದ ದಂಡ ಅಥವಾ ಎರಡೂ ರೀತಿಯ ಶಿಕ್ಷೆಗೆ ಒಳಪಡಿಸಲಾಗುವುದು.ಇದಲ್ಲದೆ ಪ್ರಾಚೀನ ಸಾರಕ ಹಾಗೂ ಪುರಾತತೀಯ ಸ್ಥಳ ಹಾಗೂ ಅವಶೇಷಗಳ ನಿಯಮಾವಳಿ 1959ರ 32ನೆಯ ನಿಯಮದ ಪ್ರಕಾರ ಸಂರಕ್ಷಿತ ಸ್ಮಾರಕದ ಸಮೀಪವಿರುವ ಅಥವಾ ಅದಕ್ಕೆ ಹೊಂದಿಕೊಂಡಂತಿರುವ ಸಂರಕ್ಷಿತ ಪ್ರದೇಶದ ಗಡಿಯಿಂದ 100 ಮೀಟರ್‍ವರೆಗಿನ ಪ್ರದೇಶಗಳನ್ನು ಗಣನೆಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕ್ರಮವಾಗಿ ನಿಷೇಧಿತ ಹಾಗೂ ನಿಯಂತ್ರಿತ ಪ್ರದೇಶಗಳಿಂದ ಘೋಷಿಸಲಾಗಿದೆ.

ಉಲ್ಲೇಖ[ಬದಲಾಯಿಸಿ]

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೯.