ಸದಸ್ಯ:Manavi m s/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                         ನೈಸರ್ಗಿಕ ಸಾಬೂನು ಮುಳಿಕಾಯಿ

ಇದೀಗ ದಿನಕ್ಕೊಂದು ಹೆಸರಿನ ಸಾಬೂನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಯುವಜನತೆಯ ಮನ ಗೆಲ್ಲುವ ಪ್ರಯತ್ನವನ್ನು ಮಾಡುತ್ತಿವೆ. ಪ್ರತಿಯೊಂದು ಸಾಬೂನು ಕೂಡಾ ಆರೋಗ್ಯವರ್ಧಕ, ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ

ಎಂಬ ಜಾಹೀರಾತಿಗೆ ಮರುಳಾಗಿ ಹೆಚ್ಚಿನ ಮಂದಿ ಅಂತಹ ಸಾಬೂನುಗಳನ್ನು ಇಷ್ಟಪಡುತ್ತಾರೆ!

ಹಿಂದಿನ ಕಾಲದಲ್ಲಿ ಇಂದಿನಂತೆ ಬಗೆ ಬಗೆಯ ಸಾಬೂನುಗಳು ಇರಲಿಲ್ಲ. ಕಾಡಿನಲ್ಲಿ ದೊರೆಯುವ ಕೆಲವೊಂದು ಹಣ್ಣುಗಳನ್ನು ತಂದು ಅವುಗಳನ್ನು ಹುಡಿಮಾಡಿ ಅದರಿಂದ ಸ್ನಾನ ಮಾಡುತ್ತಿದ್ದರು. ಅಂತಹ ಹಣ್ಣುಗಳ ಸಾಲಿನಲ್ಲಿ ಮುಳಿಕಾಯಿ ಕೂಡಾ ಒಂದು. ಕಾಡಿನಲ್ಲಿ ಹೆಚ್ಚಾಗಿ ಕಾಣಸಿಗುವ ಮುಳಿಕಾಯಿ ಪೊದೆಯಾಕಾರದ ಗಿಡದಲ್ಲಿ ಬೆಳೆಯುವ ಒಂದು ಜಾತಿಯ ಕಾಡು ಹಣ್ಣು. ಹಣ್ಣು ಗೋಧಿಯಷ್ಟು ದೊಡ್ಡದಾಗಿದ್ದು ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಗಿಡದಲ್ಲಿ ಕಾಯಿಗಳು ಕಾಣಲು ಸಿಗುತ್ತವೆ. ಕಾಯಿ ಒಂದು ತಿಂಗಳುಗಳ ಕಾಲ ಹಾಳಾಗುವುದಿಲ್ಲ. ಗಿಡದಲ್ಲಿ ಹೂ ಬಿಟ್ಟು ಒಂದು ವಾರದಲ್ಲಿ ಕಾಯಿ ಬಿಡುತ್ತದೆ. ಕಾಯಿ ಗೊಂಚಲಾಗಿದ್ದು ಒಂದು ಪೊದೆಯಲ್ಲಿ 300 ರಿಂದ 800 ಗ್ರಾಂ ಕಾಯಿ ಸಿಗುತ್ತದೆ. 500 ಗ್ರಾಮ ಕಾಯಿಯನ್ನು ಬಳಸಿ ನಾಲ್ಕು ಮಂದಿಗೆ ಒಂದಿ ತಿಂಗಳ ಕಾಲ ಸ್ನಾನಕ್ಕೆ ಬೇಕಾದಷ್ಟು ತಯಾರಿಸಬಹುದಂತೆ. ವಿಶೇಷವೆಂದರೆ ಇಲ್ಲಿ ಯಾವುದೇ ರಾಸಾಯನಿಕವನ್ನು ಬೆರೆಸದ ಹುಡಿಯನ್ನು ಬೇಕಾದ ಗಾತ್ರದಲ್ಲಿ ಉಂಡೆ ಮಾಡಿ ಇಡುತ್ತಾರೆ. ಇದೊಂದು ಸರಳ ವಿಧಾನವಾಗಿದ್ದು ಕಾಯಿಯನ್ನು ಗುದ್ದಿ ಚೆನ್ನಾಗಿ ಹುಡಿ ಮಾಡಿ ಎರಡು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಸ್ನಾನಕ್ಕೆ ನೇರವಾಗಿ ಬಳಸಬಹುದು. ಸಾಬೂನಿನಂತೆ ಪರಿಮಳ ಇರದಿದ್ದರೂ ಮೈಮೇಲಿನ ಮಣ್ಣು, ಎಣ್ಣೆಯ ಅಂಶ ಸಾಬೂನಿಗಿಂತ ಚೆನ್ನಾಗಿ ಬೇರ್ಪಡುತ್ತದೆ. ಪ್ರತಿನಿತ್ಯ ಈ ನೈಸರ್ಗಿಕ ಸಾಬೂನಿನಲ್ಲಿ ಸ್ನಾನ ಮಾಡಿದರೆ ಮುಖದಲ್ಲಿನ ಕಲೆಗಳು, ಮೊಡವೆಗಳು ದೂರವಾಗುತ್ತವೆಯಂತೆ. ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಕೂಡಾ ಇದು ಸಹಕಾರಿ. ಹುಡಿ ಕಣ್ಣಿಗೆ ತಾಗಿದರೆ ಉರಿಯಲು ಆರಂಭವಾಗುತ್ತದೆ. ಮಳೆಗಾಲದಲ್ಲಿ ಉಪಯೋಗಕ್ಕಾಗಿ ಹುಡಿಯನ್ನು ಡಬ್ಬಗಳಲ್ಲಿ ಜೋಪಾನವಾಗಿ ಸಂಗ್ರಹಿಸಿಡುತ್ತಿದ್ದರು. ಆದರೆ ಇದೀಗ ಮುಳಿಕಾಯಿ ಗಿಡ ಕಾಣಸಿಗುವುದೇ ಅಪರೂಪ. ನೈಸರ್ಗಿಕವಾಗಿ ತಯಾರಿಸಿದ ವಸ್ತುಗಳೆಂಬ ಜಾಹೀರಾತಿಗೆ ಮರುಳಾಗುವ ಬದಲು ಇಂತಹ ಕಾಡ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿ ಬಳಸಿದರೆ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಅಲ್ಲವೇ?