ಸದಸ್ಯ:Manavi M Gowda

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಸಿರು ಬಕ ಹೆಚ್ಚು ಕಮ್ಮಿ ಕೋಳಿ ಗಾತ್ರದ ಈ ಬಕನಿಗೆ ಆಂಗ್ಲ ಭಾಷೆಯಲ್ಲಿ ಲಿಟ್ಲ್ ಗ್ರೀನ್ ಹೆರಾನ್ ಅಥವಾ ಲಿಟ್ಲ್ ಹೆರಾನ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಹಸಿರು ಬಕ ಜೌಗು ಹಕ್ಕಿ ಎಂಬ ಹೆಸರುಗಳಿವೆ. ಜೌಗು ಪ್ರದೇಶ ನೀರಿನ ಬಳಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ನೀರ ಹಕ್ಕಿಯ ಬೆನ್ನಿನಲ್ಲಿ ಕಡು ಬೂದು ಬಣ್ಣ ಇದೆ. ಜೊತೆಗೆ ಕಡು ಹಸಿರು ಪುಕ್ಕಗಳಿವೆ. ಎದೆ ಮತ್ತು ಗದ್ದದಲ್ಲಿ ಬಿಳಿಬಣ್ಣ ಇದೆ. ಕೆಳಭಾಗದಲ್ಲಿ ನಸು ಬೂದು ಬಣ್ಣವಿದ್ದು ಸಾಮಾನ್ಯವಾಗಿ ಏಕಾಂಗಿಯಾಗಿರುತ್ತದೆ. ಕೊಕ್ಕು ಚೂಪಾಗಿ ಗಟ್ಟಿಮುಟ್ಟಾಗಿದೆ. ಕಾಲುಗಳಲ್ಲಿ ನಸು ಹಳದಿ ಬಣ್ಣವಿದೆ. ಒಟ್ಟಿನಲ್ಲಿ ಹಸಿರು ಮಿಶ್ರಿತ ಬೂದು ಬಣ್ಣದ ಈ ಹಕ್ಕಿಯಲ್ಲಿ ಗಂಡು ಮತ್ತು ಹೆಣ್ಣುಗಳೆರಡು ನೋಡಲು ಒಂದೇ ಥರ ಇವೆ. ಭಾರತದಾದ್ಯಂತ ಕಾಣಲು ಸಿಗುವ ಹಸಿರು ಬಕ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್ ನಲ್ಲೂ ಇದೆ. ನಮ್ಮ ಕರಾವಳಿಯಲ್ಲೂ ಇದು ಎಲ್ಲೆಡೆ ಕಾಣಲು ಸಿಗುತ್ತದೆ. ಹರಿವ ನೀರು, ಕೊಳ, ಕಡಲ ತಡಿ, ಕಾಂಡ್ಲಾವನಗಳ ಬಳಿ ಈ ಬಕವನ್ನು ನೋಡಬಹುದು. ನೆರಳಿರುವ ನೀರಿನ ಜಾಗದಲ್ಲಿ ಸುಮ್ಮನೆ ನಿಂತು ಆಹಾರಕ್ಕಾಗಿ ಹೊಂಚು ಹಾಕಿಕೊಂಡಿರುವಾಗ ಅದರ ಇರುವನ್ನು ತಕ್ಷಣ ಗುರುತಿಸುವುದು ಕಷ್ಟ. ಕಾರಣ ಅದರ ಮರಸು ಬಣ್ಣ. (ಕಮೊಫ್ಲಜ್) ನಿಂತಲ್ಲಿಂದ ಚಲಿಸಿದರಷ್ಟೆ ಅದರ ಇರುವು ಕಣ್ಣಿಗೆ ಗೋಚರಿಸುತ್ತದೆ. ಕರಾವಳಿಯಲ್ಲಿ ಹಸಿರು ಬಕಗಳು ಸಂಖ್ಯೆಯ ದೃಷ್ಟಿಯಿಂದಲೂ ಪರ್ವಾಗಿಲ್ಲ ಎನ್ನಬಹುದು. ಮೂಲ್ಕಿ, ಚಿತ್ರಾಪು, ಸಸಿಹಿತ್ಲು, ಕೆಂಜಾರು, ಕುಂದಾಪುರ, ಉಡುಪಿ, ಕಟಪಾಡಿಯ ಸಮುದ್ರ ಬಳಿಯ ಕಾಂಡ್ಲಾ ಮರಗಳಿರುವಲ್ಲಿ ಅವುಗಳು ಕಾಣಲು ಸಿಕ್ಕಿದ ಬಗ್ಗೆ ವರದಿಗಳಿವೆ. ಕಾರ್ಕಳ ಸಮೀಪದ ದುರ್ಗಾಕಾಡಿನಲ್ಲಿ ಹರಿಯುವ ನದಿ ಬಳಿ ಅದರ ಚಿತ್ರವನ್ನು ನಿಸರ್ಗ ಛಾಯಾಗ್ರಹಕ ಶಿವಶಂಕರ್ ಸೆರೆ ಹಿಡಿದಿದ್ದಾರೆ. ಉಳಿದಂತೆ ಕುಂದಾಪುರದಿಂದ ಲಕ್ಷ್ಮೀನಾರಾಯಣ ಉಪಾಧ್ಯಾಯ, ಮಂಜಲ್ಪಾದೆಯಿಂದ ವಿವೇಕ್ ನಾಯಕ್, ಅರ್ನಾಲ್ಡ್, ಲಕ್ಶ್ಮೀಶ್, ಅವಿನಾಶ್ ಅಡಪ, ಮೂಲ್ಕಿಯಿಂದ ಶ್ರೀಕಾಂತ್ ಭಟ್, ಉಡುಪಿಯ ಸಂತೆ ಕಟ್ಟೆಯಿಂದ ಷಣ್ಮುಖರಾಜ್, ಪಿತ್ರೊಡಿಯಿಂದ ಆಶಿಕ್ ಅವರು ಹಸಿರು ಬಕಗಳ ಬಗ್ಗೆ ಕೋಸ್ಟಲ್ ಕರ್ನಾಟಕ ಬರ್ಡ್ ವಾಚರ್ಸ್ ನೆಟ್ ವರ್ಕ್ ನ ಫೇಸ್ ಬುಕ್ ವೇದಿಕೆಯಲ್ಲಿ ವರದಿ ಮಾಡಿದ್ದಾರೆ. ಈ ಹಕ್ಕಿ ಇತರ ನೀರ ಹಕ್ಕಿಗಳಂತೆ ಕಾಲೊನಿಗಳಲ್ಲಿ ಗೂಡು ಕಟ್ಟುವುದಿಲ್ಲ. ಹಾಗಾಗಿ ಅದು ಕರಾವಳಿಯಲ್ಲಿ ಗೂಡು ಕಟ್ಟಿ ಸಂತಾನ ಅಭಿವ್ರದ್ಧಿ ಮಾಡಿದ ಬಗ್ಗೆ ಪ್ರತ್ಯಕ್ಷ ವರದಿಗಳು ಇಲ್ಲ. ಆದರೆ ಕರಾವಳಿಯ ಸಮುದ್ರ ಪಕ್ಕದ ಕಾಂಡ್ಲಾ ಕಾಡುಗಳಲ್ಲಿ ಅವುಗಳ ಸಂತಾನ ಅಭಿವ್ರದ್ಧಿ ಚಟುವಟಿಕೆಗಳ ಬಗ್ಗೆ ವರದಿಗಳಿವೆ. ಗೂಡು ಕಟ್ಟಲು ಕಡ್ಡಿಗಳನ್ನು ಒಯ್ಯುವುದನ್ನು ಜೊತೆಗೆ ಅದರ ಮರಿಗಳನ್ನು (ಜುವನೈಲ್) ಕೂಡಾ ಕರಾವಳಿಯ ಕೆಲವು ಪಕ್ಷಿ ಪ್ರೇಮಿಗಳು ಗಮನಿಸಿದ್ದಾರೆ. ಮಾರ್ಚಿನಿಂದ ಆಗಸ್ಟ್ ನಡುವೆ ಸಂತಾನ ಅಭಿವೃದ್ಧಿ ಚಟುವಟಿಕೆ ನಡೆಸುವ ಹಸಿರು ಬಕಗಳು ಸಾಮಾನ್ಯವಾಗಿ ನೀರಿನ ಬಳಿಯ ಸಣ್ಣ ಮರಗಳಲ್ಲಿ ಕಡ್ಡಿಗಳನ್ನು ಸೇರಿಸಿ ಒರಟಾದ ಗೂಡು ಕಟ್ಟಿ ೩ ರಿಂದ ೫ ಮೊಟ್ಟೆ ಇಡುವುದು. ಸಾಮಾನ್ಯವಾಗಿ ನಸುಗತ್ತಲಿರುವ ಮಬ್ಬು ಬೆಳಕಿನಲ್ಲಿ, ನೆರಳಿನಲ್ಲಿ ಹೆಚ್ಚು ಚಟುವಟಿಕೆ ನಡೆಸುವ ಈ ನೀರ ಹಕ್ಕಿ ಹಗಲಿನಲ್ಲೂ ಚಟುವಟಿಕೆ ನಡೆಸುವುದು. ಕಪ್ಪೆ, ಮೀನು, ಏಡಿ, ಮೃದ್ವಂಗಿ ಅದರ ಮುಖ್ಯ ಆಹಾರ. ಹಸಿರು ಬಕದ ವೈಜ್ಞಾನಿಕ ಹೆಸರು ಬುಟೊರೈಡ್ಸ್ ಸ್ಟ್ರೈಟಸ್ ಸಿಕೋನಿಫಾರ್ಮಿಸ್ ಗಣದ ಆಡ್ರೈಡೇ ಕುಟುಂಬಕ್ಕೆ ಸೇರಿದೆ.