ಸದಸ್ಯ:Louella100/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಿಭಂಟನ ಪೂಜೆ[ಬದಲಾಯಿಸಿ]

ಹುಬ್ಬೆ-ಉತ್ತರೆ ಮಳೆಯಲ್ಲಿ ಹುಲುಸಾಗಿ ಬೆಳೆದ ಬೆಳೆಗಳಿಗೆ ರೋಗ-ರುಜಿನ, ನೋಡುಗರ ಕೆಟ್ಟ ದೃಷ್ಟಿ ತಾಕದಿರಲಿ ಎಂಬ ಉದ್ದೇಶದಿಂದ ಬಯಲು ಸೀಮೆ ಹಳ್ಳಿಗರು ಆಚರಿಸುವ ಕರಿಭಂಟನ ಆಚರಣೆ ಅತ್ಯಂತ ವಿಶಿಷ್ಟವಾದದ್ದು. ಇಡೀ ಗ್ರಾಮ ಸಮುದಾಯ ಒಂದುಗೂಡಿ, ಮೂರು ದಾರಿ ಕೂಡುವಲ್ಲಿ ಬೂದಿಯಿಂದ ರಾಕ್ಷಸಿಯ ಚಿತ್ರ ಬರೆದು ಅದರ ಹೊಟ್ಟೆಯ ಮೇಲೆ ಹಾರೆಯಿಂದ ರಂಧ್ರ ಮಾಡಿ, ಹೊಲದಲ್ಲಿ ಪಚ್ಚಾಡಿ ಮರದ ಕೊಂಬೆಗಳನ್ನು ನೆಟ್ಟು ಹರಿಶಿಣದ ಬಟ್ಟೆಯಲ್ಲಿ ಸೇರಿಸಿದ ನವಧಾನ್ಯಗಳನ್ನು ಗಂಟು ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ.ಕೋಳಿ ಇಲ್ಲವೇ ಕುರಿ ಬಲಿ ಕೊಟ್ಟು ಅದರ ರಕ್ತದ ಜೊತೆ ರಾಗಿ ಪೈರಿನ ಎಳೆ ಗರಿಗಳನ್ನು ಸೇರಿಸಿ ಹೊಲಕ್ಕೆ ಬಲಿಯೋ ಬಲಿ ಎಂದು ಕೂಗುತ್ತಾ ಎರಚಲಾಗುತ್ತದೆ. ಬೆಳೆಗಳು ಬೆಳವಣಿಗೆ ಹಂತದಲ್ಲಿರುವಾಗ ಇದನ್ನು ಆಚರಿಸುವುದರಿಂದ ಬೆಳೆಗಳಿಗೆ, ಅದರಲ್ಲಿಯೂ ಮುಖ್ಯವಾಗಿ ರಾಗಿ ಪ್ಶೆರಿಗೆ ಬರುವ ಇಲುಕು ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಈ ಆಚರಣೆಯು ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಮೂಹಿಕವಾಗಿ ಇಡೀ ಗ್ರಾಮವು ಒಗ್ಗಟ್ಟಾಗಿ ಮಾಡುವುದನ್ನು ಕಾಣಬಹುದು. ರಾಗಿ ಮುಖ್ಯ ಬೆಳೆಯಾಗಿ ಬೆಳೆಯುವ ಪ್ರದೇಶಗಳಲ್ಲಿ ಇದು ಅತ್ಯಂತ ವೈಭವಯುತವಾಗಿ, ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ, ಉಳಿದ ಭಾಗಗಳಲ್ಲಿ ಸಾಧಾರಣ ರೀತಿಯಲ್ಲಿ ಹೊಲಕ್ಕೆ ಚರಗ ಚೆಲ್ಲಿ ಪಚ್ಚಾಡಿ ಕೊಂಬೆಗಳನ್ನು ನೆಡುವ ಮೂಲಕ ಆಚರಿಸುತ್ತಾರೆ.

ಸಾಮೂಹಿಕ ಕರಿಭಂಟನ ಆಚರಣೆ: ಇಡೀ ಗ್ರಾಮ ಸಮುದಾಯ ಸೇರಿ ಮಾಡುವ ಕರಿಬಂಟನ ಪೂಜೆಯ ವಿಧಿ-ವಿಧಾನಗಳು ಈ ರೀತಿ ಇರುತ್ತವೆ: ಹುಬ್ಬೆ ಮಳೆ ಹುಟ್ಟಿದಾಗ ಗ್ರಾಮಸ್ಥರು ಒಂದೆಡೆ ಕಲೆತು ಹಬ್ಬ ಮಾಡುವ ದಿನಾಂಕವನ್ನು ಗೊತ್ತುಪಡಿಸುತ್ತಾರೆ. ಹಬ್ಬಕ್ಕಾಗಿ ಮನೆಗೆ ಇಂತಿಷ್ಟು ಹಣ ವಸೂಲು ಮಾಡಲಾಗುತ್ತದೆ. ಹಬ್ಬದ ಹಿಂದಿನ ದಿನವೇ ಗ್ರಾಮದ ಹಿರಿಯರು ಜವಾಬ್ದಾರಿಗಳನ್ನು ಎಲ್ಲರಿಗೂ ಹಂಚಿಬಿಡುತ್ತಾರೆ. ಆ ಪ್ರಕಾರ ಕೆಲವರು ಮೂರು ತೆರನಾದ ಬೂದಿ ತರಬೇಕು, ಮತ್ತೆ ಕೆಲವರು ಪಚ್ಚಾಡಿ ಮರದ ಕೊಂಬೆಗಳನ್ನು ಕಡಿದು ತರಬೇಕು, ಉಳಿದವರು ಬಲಿ ಕೊಡಲು ಮರಿ ವ್ಯವಸ್ಥೆ ಮಾಡಬೇಕು ಮತ್ತು ರಾಗಿ ಗರಿಗಳನ್ನು ಕತ್ತರಿಸಿ ತರಬೇಕು. ಹಾಗೆಯೇ ಹಿಂದಿನ ದಿನವೇ ಊರಿನಲ್ಲಿ ಡಂಗೂರ ಸಾರುವ ಮೂಲಕ ಹಬ್ಬದ ಬಗ್ಗೆ ತಿಳಿಸಲಾಗುತ್ತದೆ. ಎಲ್ಲ ಮನೆಯವರೂ ರಾತ್ರಿ ಅಡುಗೆ ಉಳಿಕೆಯನ್ನು- ಅಂದರೆ ಮುದ್ದೆ, ಅನ್ನ ಇತ್ಯಾದಿ- ಬೆಳಿಗ್ಗೆ ತಂದು ಒಂದೆಡೆ ಗುಡ್ಡೆ ಹಾಕಬೇಕು.

ಕರಿಬಂಟನ ಅಚರಣೆಗೆ ಮೂರು ರೀತಿಯ ಬೂದಿ ತರುವುದು ಕಡ್ಡಾಯ. ಒಂದು-ಕುಂಬಾರರ ಮನೆಯ ಬೂದಿ, ಎರಡು- ಕಮ್ಮಾರರ ಮನೆಯ ಬೂದಿ ಮತ್ತು ಮೂರು- ಮಡಿವಾಳರ ಮನೆ ಬೂದಿ. ಇವುಗಳಿಗೆ ಕ್ರಮವಾಗಿ ಆವಿಗೆ ಬೂದಿ, ಕುಲುಮೆ ಬೂದಿ, ಮತ್ತು ಉಬ್ಬೆ ಬೂದಿ ಎಂದು ಕರೆಯುತ್ತಾರೆ. ಈ ಮೂರು ಬಗೆಯ ಬೂದಿಗಳನ್ನು ತಂದು ಮಿಶ್ರ ಮಾಡಿ ಇಟ್ಟುಕೊಳ್ಳುತ್ತಾರೆ. ಪಚ್ಚಾಡಿ ಕೊಂಬೆ ನೆಡುವುದು ಈ ಆಚರಣೆಯ ಅತ್ಯಂತ ಮುಖ್ಯ ಕ್ರಿಯೆ. ಆಚಿಟbಚಿಡಿರಿiಚಿ ಠಿಚಿಟಿiಛಿuಟಚಿಣಚಿ ಎಂಬ ವ್ಶೆಜ್ಞಾನಿಕ ಹೆಸರಿನ ಪಚ್ಚಾಡಿ ಮರ ಕುರುಚಲು ಕಾಡುಗಳಲ್ಲಿ ಸಾಧಾರಣ ಎತ್ತರ ಬೆಳೆಯುವ ಮರ. ಕಾಂಡವು ಬಿಳುಪಾಗಿದ್ದು ಕಾಸಗಲದ ಎಲೆಗಳಿರುತ್ತವೆ. ಈ ಮರದ ವಿಶೇಷವೆಂದರೆ ಕೊಂಬೆಯನ್ನು ಕತ್ತರಿಸಿ ಹೊಲದಲ್ಲಿ ನೆಟ್ಟರೆ ೨೪ ಗಂಟೆಗಳೊಳಗಾಗಿ ಎಲೆಗಳು ಕಪ್ಪನೆ ಬಣ್ಣಕ್ಕೆ ತಿರುಗುತ್ತವೆಯೇ ಹೊರತು ಒಣಗಿ ಉದುರುವುದಿಲ್ಲ. ಬಹಳ ದಿವಸಗಳ ನಂತರ ಒಣಗಿದ ಎಲೆಗಳು ಉದುರುತ್ತವೆ.

ಹಬ್ಬದ ದಿನ ಬೆಳಿಗ್ಗೆಯೇ ಒಂದು ನಿಗದಿತ ಸ್ಥಳದಲ್ಲಿ ಎಲ್ಲರೂ ಸೇರಿ ಚಪ್ಪರ ಹಾಕುತ್ತಾರೆ, ಸಾಮಾನ್ಯವಾಗಿ ಮೂರು ದಾರಿ ಕೂಡುವ ಸ್ಥಳವನ್ನು ಚಪ್ಪರ ಹಾಕಲು ಅಯ್ಕೆ ಮಾಡುತ್ತಾರೆ. ಚಪ್ಪರಕ್ಕೂ ಸಹ ಪಚ್ಚಾಡಿ ಕೊಂಬೆಗಳನ್ನು ಬಳಸುತ್ತಾರೆ. ಅಷ್ಟೊತ್ತಿಗೆ ಎಲ್ಲ ಮನೆಯವರೂ ಉಳಿಕೆ ಅಡುಗೆಯನ್ನು ತಂದು ಅಲ್ಲಿ ಹಾಕುವುದು ನಡೆದಿರುತ್ತದೆ. ರಾಗಿ ಗರಿಗಳನ್ನು ತುಂಡು-ತುಂಡಾಗಿ ಕತ್ತರಿಸಿ ಅದಕ್ಕೆ ಮೂರು ರೀತಿಯ ಬೂದಿಯ ಮಿಶ್ರಣದಲ್ಲಿ ಸ್ವಲ್ಪವನ್ನು ಬೆರೆಸಲಾಗುತ್ತದೆ. ಮೂರು ದಾರಿ ಕೂಡುವ ಸ್ಥಳದಲ್ಲಿ ಬೂದಿಯಿಂದ ಒಂದು ರಾಕ್ಷಸಾಕೃತಿಯನ್ನು ಬರೆಯುತ್ತಾರೆ. ಹಳ್ಳಿಗರ ಪ್ರಕಾರ ಅದು ಪುಂಡರೀಕಾಕ್ಷಿ ಎಂಬ ರಾಕ್ಷಸಿ. ಕೇವಲ ಊರಿನ ಮೂರು ದಾರಿ ಕೂಡುವಲ್ಲಲ್ಲದೆ ಆಯಾ ಹೊಲದವರು ತಮ್ಮ ಹೊಲಗಳಲ್ಲಿಯೂ ಸಹ ಈ ರಾಕ್ಷಸಿ ಚಿತ್ರವನ್ನು ಬರೆಯುತ್ತಾರೆ. ಹಾಗೂ ಊರಿನ ಬೇರೆ-ಬೇರೆ ಭಾಗಗಳಲ್ಲಿಯೂ ಸಹ ಚಿತ್ರ ಬರೆಯುವುದು ರೂಢಿ. ಇದೆಲ್ಲ ಮುಗಿಯುವ ಹೊತ್ತಿಗೆ ಬಲಿ ಕೊಡುವ ಮರಿಯನ್ನು ತಂದು ಅದಕ್ಕೆ ಪೂಜೆ ಮಾಡಿ ಚಪ್ಪರದ ಮುಂದೆ ನಿಲ್ಲಿಸಿ ಊರವರ ಅಪ್ಪಣೆ ಕೇಳಿ ಬಲಿ ಕೊಡಲಾಗುತ್ತದೆ.

ಬಲಿ ಕೊಟ್ಟ ಪ್ರಾಣಿಯ ರಕ್ತವನ್ನು ಬೂದಿ ಮತ್ತು ರಾಗಿ ಗರಿ ಮಿಶ್ರಣದೊಂದಿಗೆ ಮತ್ತು ಉಳಿಕೆ ಅಡುಗೆಯೊಂದಿಗೆ ಬೆರೆಸುತ್ತಾರೆ. ಪ್ರತಿಯೊಂದು ಹೊಲದವರೂ ಒಂದೊಂದು ಬೋಕಿ ಬಿಂಚೆ (ಮಣ್ಣಿನ ಮಡಕೆಯ ಚೂರು) ಯನ್ನು ತಂದು ಹಿರಿಯರ ಕೈಲಿ ಆ ಚರಗವನ್ನು ಹಾಕಿಸಿಕೊಂಡು ತಮಗೆ ಎಷ್ಟು ಬೇಕೋ ಅಷ್ಟು ಪಚ್ಚಾಡಿ ಕೊಂಬೆಗಳನ್ನು ತೆಗೆದುಕೊಂಡು ಹೊರಡುತ್ತಾರೆ. ಕೈಯಲ್ಲೊಂದು ಹಾರೆಯೂ ಇರುತ್ತದೆ. ಇಬ್ಬರು ಮೂವರು ಗುಂಪಾಗಿ ಹೊರಟು ತಂತಮ್ಮ ಹೊಲಗಳಿಗೆ ಚರಗವನ್ನು ಚೆಲ್ಲುತ್ತಾ ಬಲಿಯೋ ಬಲಿ ಎಂದು ಕೂಗುತ್ತಾರೆ. ಹಾರೆಯಿಂದ ಒಂದು ದಸಿ ಹಾಕಿ ಪಚ್ಚಾಡಿ ಕೊಂಬೆಯನ್ನು ನೆಡುತ್ತಾರೆ, ಅಲ್ಲದೆ ರಾಕ್ಷಸಿ ಚಿತ್ರದ ಹೊಟ್ಟೆಯ ಭಾಗಕ್ಕೆ ಹಾರೆಯಿಂದ ತಿವಿಯುತ್ತಾರೆ.

ಎಲ್ಲರೂ ತಂತಮ್ಮ ಹೊಲಗಳಿಗೆ ಈ ರೀತಿ ಮಾಡಿ ಊರಿಗೆ ಹಿಂತಿರುಗುತ್ತಾರೆ, ನಂತರ ಬಲಿ ಕೊಟ್ಟ ಮರಿಯನ್ನು ಕೊಯ್ದು ಪಾಲು ಮಾಡಿ ಗುಡ್ಡೆ ಹಾಕಿ ಎಲ್ಲರೂ ಹಂಚಿಕೊಳ್ಳುತ್ತಾರೆ. ಅಂದು ಎಲ್ಲರ ಮನೆಯಲ್ಲಿ ವಿಶೇಷ ಅಡುಗೆ.

ಈ ಆಚರಣೆಗೆ ಹಸಿರುಬಲಿ, ಅತ್ತೆ ಮಳೆ ವಂಗಲು ಎಂಬ ಹೆಸರುಗಳೂ ಇವೆ. ಕೆಲವರು ಹಸಿರು ಬಲಿ ಮತ್ತು ಕರಿಬಂಟನ ಆಚರಣೆ ಬೆರೆ-ಬೇರೆ ಎನ್ನುತ್ತಾರಾದರೂ ಆಚರಿಸುವ ರೀತಿಯನ್ನು ನೋಡಿದರೆ ಹೆಚ್ಚು-ಕಡಿಮೆ ಒಂದೇ ರೀತಿ ಇರುತ್ತವೆ. ಒಟ್ಟಾರೆ ಈ ಆಚರಣೆಯಿಂದ ರಾಗಿ ಬೆಳೆಗೆ ಬರುವ ಇಲುಕೆ ರೋಗ ನಿವಾರಣೆಯಾಗುತ್ತದೆ ಎಂದು ರೈತಾಪಿಗಳ ದೃಢವಾದ ನಂಬಿಕೆ. ಅಲ್ಲದೆ ಹುಲುಸಾಗಿ ಬೆಳೆದ ಪ್ಶೆರಿಗೆ ನೋಡುಗರ ದೃಷ್ಟಿ ತಾಗದಿರಲಿ ಎಂಬ ಆಶಯವೂ ಇದರ ಹಿಂದಿದೆ.