ಸದಸ್ಯ:Krishnaprashanthv/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ. ಎಸ್. ಪುಟ್ಟಣ್ಣ[ಬದಲಾಯಿಸಿ]

ಪುಟ್ಟಣ್ಣನವರ ಮೂಲ[ಬದಲಾಯಿಸಿ]

ಎಂ. ಎಸ್. ಪುಟ್ಟಣ್ಣನವರು ಕನ್ನಡದ ಮುನ್ನಡೆಗಾಗಿ ದುಡಿದ ಹಿರಿಯ ಮಹನೀಯರಲ್ಲಿ ಒಬ್ಬರು. ಪುಟ್ಟಣ್ಣನವರ ತಾತ ಲಕ್ಷ್ಮೀಕಾಂತಭಟ್ಟರು ಚನ್ನಪಟ್ಟಣದ ನಾಗವಾರ ಗ್ರಾಮದವರು, ವೇದ ವಿದ್ಯೆ ತಿಳಿದವರು, ಜ್ಯೋತಿಷ್ಯದಲ್ಲಿ ಪಾರಂಗತರು. ಅವರ ಮಕ್ಕಳು ನರಹರಿ ಭಟ್ಟರು, ಸೂರ್ಯನಾರಾಯಣ ಭಟ್ಟರು ಇಬ್ಬರೂ ವೈದಿಕ ವೃತ್ತಿಯವರು.

ಬಾಲ್ಯ[ಬದಲಾಯಿಸಿ]

ಸೂರ್ಯನಾರಾಯಣಭಟ್ಟರ ಒಬ್ಬರೇ ಮಗ ಎಂ.ಎಸ್.ಪುಟ್ಟಣ್ಣನವರು 1854 ರಲ್ಲಿ ತಾಯಿಯ ತವರಾದ ಮೈಸೂರಿನಲ್ಲಿ ಜನಿಸಿದರು. ಹುಟ್ಟಿದ ಹತ್ತು ದಿನಗಳೊಳಗೆ ತಾಯಿಯನ್ನು ಕಳೆದುಕೊಂಡ ಈ ಮಗುವನ್ನು ಸೋದರ ಮಾವ ಸಾಕಿದರು. ಜೊತೆಗೆ ಇನ್ನೊಬ್ಬ ಸೋದರತ್ತೆಯ ಆರೈಕೆಯ ಭಾಗ್ಯವೂ ಸಿಕ್ಕಿತು. ತಂದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಕಾಶಿಗೆ ಹೋಗಿ ಸನ್ಯಾಸಿಯಾದರು. ಪುಟ್ಟಣ್ಣನವರಿಗೆ ದೊಡ್ಡವರಾದ ಮೇಲೆ ತಂದೆಯ ಮುಖದರ್ಶನವಾಗಲೇ ಇಲ್ಲ. ಪುಟ್ಟಣ್ಣನವರ ನಿಜನಾಮಧೇಯ ಲಕ್ಷ್ಮಿನರಸಿಂಹ ಶಾಸ್ತ್ರಿ. ಎಳೆವರೆಯದ, ಚುರುಕುಗಣ್ಣುಗಳ ತಬ್ಬಲಿ ಮಗುವನ್ನು ಕಂಡವರೆಲ್ಲಾ ಕರೆದ ಮುದ್ದಿನ ಹೆಸರು ಪುಟ್ಟಣ್ಣ. ಮುಂದೆ ಅದೇ ಹೆಸರು ಗಟ್ಟಿಯಾಯಿತು.

ಜೀವನ ಶೈಲಿ[ಬದಲಾಯಿಸಿ]

ಸಂಪ್ರದಾಯಸ್ಥ ಮನೆತನದ ಪುಟ್ಟಣ್ಣನವರ ವಿದ್ಯಾಭ್ಯಾಸ ಪ್ರಾರಂಭದಲ್ಲಿ ಪಂತರ ಖಾಸಗಿ ಮಠಗಳಲ್ಲಿ ನಡೆಯಿತು. ಅನಂತರ ರಾಜಾ ಸ್ಕೂಲಿನಲ್ಲಿ ಎಫ್. ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹಾಯೋಪಾಧ್ಯಾಯರಾಗಿ ನೇಮಕಗೊಂಡರು.ಪುಟ್ಟಣ್ಣನವರ ಮೊದಲ ದಾಂಪತ್ಯದಲ್ಲಿ ಹೊಂದಾಣಿಕೆಯಿಲ್ಲದೇ ಗಂಡ ಹೆಂಡಿರು ಬೇರ್ಪಟ್ಟರು. ಪತ್ನಿಯ ಶೀಲಶಂಕೆಯವರೆಗೆ ಪತಿಯ ಮನಸ್ಸು ವಿಮುಖವಾದ ಮೇಲೆ ಹಾಗಾಗದೆ ವಿಧಿಯಿರಲಿಲ್ಲ. ಅನಂತರ ಬೇರೆ ಯಾವ ಆಯ್ಕೆಯಲ್ಲೂ ನಂಬಿಕೆಯಿರದೇ ಮುಂದೆ ತಾವೇ ಆರಿಸಿದ ಹೆಣ್ಣನ್ನು ಮದುವೆಯಾಗಿ ಆಕೆಗೆ ಪಾಠ ಹೇಳಿದರು, ಹೇಳಿಸಿದರು. ಅವರ ಈ ಎರಡನೆಯ ದಾಂಪತ್ಯದಲ್ಲಿ ಅವರಿಗೆ ಮೂವರು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳು ಜನಿಸಿದರು.

ವೃತ್ತಿ ಜೀವನ[ಬದಲಾಯಿಸಿ]

  • ವೃತ್ತಿಯೊಂದಿಗೆ ಅಧ್ಯಯನಕ್ಕೂ ಮನಸ್ಸು ಕೊಟ್ಟ ಪುಟ್ಟಣ್ಣನವರು 1885ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಬಿ.ಎ ಪದವಿಯನ್ನು ಪಡೆದರು. ಮರುವರ್ಷವೇ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಜೆ.ಭಾಷಾ ಅವರೊಡನೆ ಭಿನ್ನಾಭಿಪ್ರಾಯವುಂಟಾಗಿ ರಾಜಿ ಮಾಡಿಸಿಕೊಳ್ಳಲಿಚ್ಚಿಸದೇ ತಮ್ಮ ಹುದ್ದೆಗೆ ರಾಜಿನಾಮೆ ಇತ್ತರು. ಕೆಲವು ಕಾಲ ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ ಭಾಷಾಂತರಕಾರರಾಗಿ ದುಡಿದರು. 1897ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರರನ್ನಾಗಿ ನೇಮಿಸಲಾಯಿತು. ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿಯೂ ಅವರು ಅಮಲ್ದಾರರಾಗಿ ಕಾರ್ಯನಿರ್ವಹಣೆ ಮಾಡಿದರು. ಅತ್ಯಂತ ಶಿಸ್ತಿನಿಂದಿದ್ದ, ಋಜುಮಾರ್ಗದಲ್ಲಿ ನಂಬಿಕೆಯಿದ್ದ ಪುಟ್ಟಣ್ಣನವರಿಗೆ ಕಡೆಗೂ ಸರಕಾರದ ನೌಕರಿ ನೋವು ಬೇಸರಗಳನ್ನು ತಂದಿತು. 1908 ರಲ್ಲಿ ಅವರು ತಮ್ಮ ವೃತ್ತಿಗೆ ರಾಜಿನಾಮೆ ನೀಡಿದರು. ಪುಟ್ಟಣ್ಣನವರಿಗೆ ಸರಕಾರವೇ ದೇವರು, ಪ್ರಜಾಭಿವೃದ್ಧಿಯೇ ಗುರಿ. ಅವರಿಗೆ ಕೆಲಸದ ಅವಧಿ ವಿಸ್ತರಣೆ ಸಿಗುವುದು ನ್ಯಾಯವಾಗಿತ್ತು. ಹಾಗಿರುವಾಗ ಪೂರ್ಣಾವಧಿ ಕೆಲಸವನ್ನೂ ಮಾಡದೇ ರಾಜಿನಾಮೆ ಕೊಟ್ಟಿದ್ದು ಒಂದು ವ್ಯಂಗ್ಯ. ಆನಂತರ ಸ್ವಲ್ಪ ಕಾಲ ವಕೀಲರಾಘಿದ್ದರು. ತಮ್ಮ ಬೇರೆ ಬೇರೆ ವೃತ್ತಿಗಳಲ್ಲಿದ್ದಾಗಲೂ ಅವರು ಸಾರಸ್ವತ ಸೇವೆಯನ್ನು ನಿಲ್ಲಿಸಲಿಲ್ಲ. ವಿಶ್ವವಿದ್ಯಾನಿಲಯ, ಶಿಕ್ಷಣ ಮಂಡಳಿಗಳಲ್ಲಿ ಪರೀಕ್ಷಕರಾಗಿ, ಪಠ್ಯ ಪುಸ್ತಕ ಸಮಿತಿಗಳಲ್ಲಿ ಸದಸ್ಯರಾಗಿ, ಭಾಷೆಯ ಸಾಧು ಅಸಾಧು ರೂಪಗಳನ್ನು ಚರ್ಚಿಸುವ ಸಮಿತಿಗಳಲ್ಲಿ ಒಬ್ಬರಾಗಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅವರು ಕೆಲಕಾಲ ಅದರ ಕಾರ್ಯದರ್ಶಿ ಕೂಡ ಆಗಿದ್ದರು. ಸಾರ್ವಜನಿಕ ಚಟುವಟಿಕೆಗಳಲ್ಲಿ ಅವರದ್ದು ಅಪಾರವಾದ ಆಸಕ್ತಿ. ಬೆಂಗಳೂರಿನ ತೆರಿಗೆದಾರರ ಸಂಘದ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿನ ದಾಖಲೆಗಳು ಕಾರಣರಾದರು.
  • ವೃತ್ತಿ ಜೀವನದಲ್ಲಿ ಅವರು ಅತ್ಯಂತ್ಯ ಪರಿಶುದ್ಧರಾಗಿದ್ದರು. ಅಮಾಲ್ದಾರರಾಗಿದ್ದಾಗ ತಿಂಗಳಿಗೆ ಹತ್ತು ಕಾಲದ ಸಂಚಾರದಲ್ಲಿ ಅವರು ಗ್ರಾಮಸ್ಥರಿಂದ ಹಾಲು ಹಣ್ಣುಗಳನ್ನೂ ಬೆಲೆ ಕೊಡದೇ ಸ್ವಿಕರಿಸುತ್ತಿರಲಿಲ್ಲ. ಪಕ್ಕದ ಮನೆ ಖಾಲಿ ಬಿದ್ದಿದ್ದಾಗ ಆ ಮನೆಯಲ್ಲಿದ್ದ ಕರಿಬೇವಿನ ಸೊಪ್ಪನ್ನು ಕಿತ್ತಿದ್ದಕ್ಕಾಗಿ ಹೆಂಡತಿಯನ್ನು ಕೋರ್ಟಿಗೆ ಕರೆಸಿ ಜುಲ್ಮಾನೆ ಹಾಕಿದವರವರು. ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ಸಂಬಂಧಿಯನ್ನು ಕೆಲಸದಿಂದ ವಜಾ ಮಾಡಿದವರು, ಕೆಲಸವಿಲ್ಲದಿದ್ದರಿಂದ ಕಳ್ಳತನಕ್ಕೆ ಇಳಿದೇ ಎಂದ ಕಳ್ಳನೊಬ್ಬನಿಗೆ ಮನೆಯಲ್ಲೇ ಕೆಲಸ ಕೊಡುವ ಧೈರ್ಯ ಮಾಡಿದವರು. ಮೇಲಧಿಕಾರಿಗಳಿಗೆ ವಸ್ತುಗಳನ್ನು ಸರಬರಾಜು ಮಾಡಬೇಕಾಗಿ ಬಂದರೆ ಅವರಿಗೆ ಬಿಲ್ಲು ಕಳಿಸಿ ಹಣ ವಸೂಲಿ ಮಾಡಿದವರು ಅವರು. ಹೀಗೆ ಖಂಡಿತವಾದಿಗಳಾಗಿದ್ದುದರಿಂದ ಪಟ್ಟಣ್ಣನವರಿಗೆ ಹಲವು ನ್ಯಾಯವಾದ ಅವಕಾಶಗಳು ತಪ್ಪಿ ಹೋದವು. 1930 ರಲ್ಲಿ ಕಡೆಯ ಉಸಿರೆಳೆಯುವವರೆಗೂ ಪುಟ್ಟಣ್ಣನವರು ಸಾರ್ವಜನಿಕ ಸೇವೆಗಳಲ್ಲಿ ತೊಡಗಿದ್ದರು.
  • ಪುಟ್ಟಣ್ಣನವರದು ಕನ್ನಡ ಪುನರುಜ್ಜೀವನದ ಕಾಲ, ಸಾಹಿತ್ಯ ರಚನೆಗೆ ರಾಜಾಶ್ರಯ ಸಮೃದ್ಧವಾಗಿದ್ದ ಕಾಲ. ಆ ದಿನಗಳಲ್ಲಿ ಹಳೆಯ ಕಾಚ್ಯಗಳ ಪ್ರಕಟಣೆ, ಭಾಷಾಂತರ ರೂಪಾಂತರಗಳ ಹಾಗೂ ಸ್ವತಂತ್ರ ಕೃತಿಗಳ ರಚನೆ ಒಟ್ಟೊಟ್ಟಿಗೆ ಕಾಣಿಸಿಕೊಂಡವು. ಇಂಗ್ಲಿಷ್ ಶಿಕ್ಷಣ, ಸಂಸ್ಥಾನದ ಅಭಿವೃದ್ಧಿಯಲ್ಲಿ ಆಸಕ್ತರಾಗಿದ್ದ ದಿವಾನರುಗಳು ಪ್ರೋತ್ಸಾಹಗಳು ಕನ್ನಡದ ಕೆಲಸಗಳಿಗೆ ವೇಗವರ್ಧಕ ಅಂಶಗಳಾಗಿ ಒದಗಿಬಂದವು. ಬ್ರಿಟಿಷರ ಆಳ್ವಿಕೆಯಿಂದ ಭಾರತೀಯರ ಆಡಳಿತ, ವಿದ್ಯಾಭ್ಯಾಸ, ಸಾಮಾಜಿಜ ಜೀವನ ಮುಂತಾದ ಪ್ರತಿಯೊಂದು ರಂಗದಲ್ಲೂ ಬದಲಾವಣೆಗಳು ಕಂಡುಬಂದವು. ನಿರಂಕುಶ ಅರಸೊತ್ತಿಗೆಯಿಂದ ಸಾಂಕುಶವಾದ ಅರಸೊತ್ತಿಗೆಯ ಕಡೆಗೆ ರಾಜಕೀಯವಾಗಿ; ವರ್ಣಾಶ್ರಮದ ಕಟ್ಟುಪಾಡುಗಳಲ್ಲಿ ಶೈಥಿಲ್ಯ, ವಿದ್ಯಾಭ್ಯಾಸ ನೌಕರಿಗಳಲ್ಲಿ ಹೊಸ ಧೋರಣೆಗಳು, ಬಾಲ್ಯವಿವಾಹ ರದ್ಧತಿ ಹಾಗೂ ಸ್ತ್ರೀ ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹ ಸಾಮಾಜಿಕವಾಗಿ; ಪದ್ಯದಿಂದ ಗದ್ಯದೆಡೆಗೆ ಒಲವು, ಬಿಗುವಿನಿಂದ ನಾಜೂಕು ಸಾಹಿತ್ಯವಾಗಿ –ಮೊದಲಾದ ಸ್ಥಿತ್ಯಂತರಗಳು ಕಂಡುಬಂದವು. ಹಳೆಯದಕ್ಕೆ ಇತಿಶ್ರೀ ಹೇಳುತ್ತಿದ್ದಂತೆ ಹೊಸದಕ್ಕೆ ಶ್ರೀ ಗಣೇಶ ಪೂಜೆ ನಡೆಯಿತು.
  • ಇಂಗ್ಲೀಷಿನ ಹಲವು ಪ್ರಭಾವಗಳು ಸಾಂಸ್ಕೃತಿಕ ಭಿನ್ನತೆಯಿಂದ ಕೂಡಿದ್ದರೂ ಅವುಗಳನ್ನು ರುಚಿಭೇದದಂತೆ ಪುಟ್ಟಣ್ಣನವರೂ ಅವರ ಸಮಕಾಲೀನರೂ ಬಳಸಿಕೊಂಡರು. ಮಾರ್ಗವನ್ನು ಬಿಡದ, ದೇಸಿಯನ್ನು ಒಳಗೊಂಡು ಹೊಸ ಹೊಗರಿನ ಶೈಲಿಯ ಮಹತ್ವವನ್ನು ಅಂದಿನವರು ಕಂಡುಕೊಂಡರು. ತಾಯ್ನುಡಿಯ ಹಾಗೂ ಆಡುಮಾತಿನ ಮಹತ್ವ ಕ್ರಮೇಣ ಹೆಚ್ಚಾಯಿತು. ಜೊತೆಗೆ ಜೀವನವನ್ನೂ ದೈವವನ್ನೂ ಒಪ್ಪಿಕೊಂಡು ತಮ್ಮ ಸಂಸ್ಕೃತಿಯಲ್ಲಿ ಬೆಳಕು ಕಾಣುವ ಈ ಗುಂಪಿಗೆ ಆಂಗ್ಲ ಸಾಹಿತ್ಯದ ಅರಿವಿನಿಂದ ಹೊಸ ಹೆಬ್ಬಾಗಿಲು ತೆರೆಯಿತು. ದೇಶವೇ ಪಾರತಂತ್ರ್ಯದಲ್ಲಿದ್ದರೂ ನೈರಾಶ್ಯವಾಗಲೀ, ನಿರಾಸತೆಯಾಗಲೀ ಇವರುಗಳನ್ನು ಬಾಧಿಸಲಿಲ್ಲ. ಮೌಲ್ಯಗಳ ಬಗೆಗೆ ಗಟ್ಟಿ ನಿಲುವಿತ್ತು. ಹೊಣೆಗೆ ಹಿಂಜರಿಯದ ಮನಸ್ಸು ಇವುಗಳ ಕೊಡುಗೆಯಾಗಿತ್ತು.

ಸಾಹಿತ್ಯಾಸಕ್ತಿ[ಬದಲಾಯಿಸಿ]

  • ಪುಟ್ಟಣ್ಣನವರ ಸಾಹಿತ್ಯದೃಷ್ಟಿ ಅನುವಾದ ಮತ್ತು ಪಠ್ಯಗಳಿಂದ ಪ್ರಾರಂಭವಾಯಿತು. ಅವರ ಗದ್ಯಸಾಧನೆ ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೊಧನೆ, ಪಠ್ಯರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು ಈ ಮಾತಿಗೆ ಸಾಕ್ಷಿಯಾಗಿವೆ. ಗದ್ಯದ ಸಾಧ್ಯತೆಗಳನ್ನು ಪುಟ್ಟಣ್ಣನವರು ಬಹುಬೇಗ ಅರಿತುಕೊಂಡರು. ಕನ್ನಡ ಕಾದಂಬರಿಗಳಿಗೆ ವಸ್ತು ನಮ್ಮಲ್ಲೇ ವಿಪುಲವಾಗಿದೆ ಎಂಬುದನ್ನು ಅವರು ಕಂಡುಕೊಂಡಿದ್ದರು. ಮಾರ್ಗ ಕಾವ್ಯದ ತೆರಪಾಗುತ್ತಿದ್ದ ಸ್ಥಳಕ್ಕೆ ಇಂದಿಗೂ ಜನಪ್ರಿಯವಾದ ಕಾದಂಬರಿಯ ಪ್ರಕಾರವನ್ನು ಯಶಸ್ವಿಯಾಗಿ ತಂದವರಲ್ಲಿ ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದಾರೆ. ಕನ್ನಡಿಗರಿಗೆ ಪರಿಚಯವಿಲ್ಲದ ಬೇರೆ ಸಮಾಜಗಳ ಚಿತ್ರಣದಿಂದ ಕೂಡಿದ ಅನುವಾದಿತ ಕಾದಂಬರಿಗಳ ನಡುವೆ ಕನ್ನಡ ಜನರ ಆಚಾರ ವಿಚಾರ, ಸ್ವಭಾವ, ಮರ್ಯಾದೆ, ಆಸೆ ಆಕಾಂಕ್ಷೆಗಳು, ಪೂರ್ವಾಚಾರಶ್ರದ್ಧೆ , ನೇರ ಕೊಂಕುಗಳನ್ನು ಕನ್ನಡದ ನುಡಿಗಟ್ಟಿನಿಂದ ಶ್ರೀಮಂತವಾದ ಶೈಲಿಯಲ್ಲಿ ತಮ್ಮ ಕಾದಂಬರಿಗಳಲ್ಲಿ ಸೃಷ್ಟಿಸಿದರು. ‘ಮಾಡಿದ್ದುಣ್ಣೋ ಮಹರಾಯ’(1995), ‘ಮುಸುಗ ತೆಗೆಯೇ ಮಾಯಾಂಗನೇ’ ಹಾಗೂ ‘ಅವರಿಲ್ಲದೂಟ’ ಕಾದಂಬರಿಗಳು ಪುಟ್ಟಣ್ಣನವರ ಸಾಹಿತ್ಯಕ ಸಿದ್ಧಿಯ ಅತ್ಯುತ್ತಮ ಉದಾಹರಣೆಗಳು. ಈ ಕಾದಂಬರಿಗಳ ಬನಿ ಸೂಸುವ ಆಡುನುಡಿ ಮೊದಲ ಸುತ್ತಿನಲ್ಲೇ ಆಕರ್ಷಕವಾಗಿ ಕಾಣುತ್ತವೆ. ಜೊತೆಗೆ ಘಟನೆಗಳ ಒಳಸಂಬಂಧಗಳಿಂದ ಹೊರಡುವ ಧ್ವನಿಗೂ ಹೊರಡಿಸುತ್ತಿರುವ ವ್ಯಕ್ತಿಗೂ ಬಳಸಿರುವ ಭಾಷೆಗೂ ಬಿರುಕುಗಳಿಲ್ಲದೇ ಇರುವುದರಿಂದ ಸಾಹಿತ್ಯಕ ಮಹತ್ವದ ಭದ್ರ ನೆಲೆಗಟ್ಟು ಇವುಗಳಿಗೆ ದಕ್ಕಿದೆ. ಆ ಕಾಲದ ಸಾಮಾಜಿಕ ಹಾಗೂ ಜನಪದ ವಿಚಾರಗಳು ಬೆರಗುಗೊಳಿಸುವಂತೆ ಇಲ್ಲಿ ಚಿತ್ರಿತವಾಗಿದೆ. ಕಾಲದ ಪರಿಸರವನ್ನು ಪುಟ್ಟಣ್ಣನವರು ಅದರ ಎಲ್ಲ ಗೊಂದಲಗಳೊಡನೆಯೇ ಸೆರೆಹಿಡಿದಿದ್ದಾರೆ. ಅಂದಿನ ಸಾಂಸ್ಕೃತಿಕ ನೆಲೆಬೆಲೆಗಳೇನು ಎಂಬುದನ್ನು ಪುಟ್ಟಣ್ಣನವರ ಕಾದಂಬರಿಗಳಿಂದ ಸುಲಭವಾಗಿ ಕಂಡುಹಿಡಿಯಬಹುದು. ಜೊತೆಗೆ ಅವರ ಕಾದಂಬರಿಗಳಷ್ಟು ಸಮರ್ಥವಾಗಿ ಕನ್ನಡದ ಬೇರಾವ ಕಾದಂಬರಿಯೂ ಮೈಸೂರಿನ ರಾಜಾಸ್ಥಾನವನ್ನು ಚಿತ್ರಿಸಿಲ್ಲ. ನಿಜವಾದ ರಾಜಭಕ್ತರಿಂದ ಹಿಡಿದು ಸಮಯಸಾಧಕರವರೆಗೆ ಹಲವು ಜನರ ಪರಿಚಯ ಇಲ್ಲಿದೆ. ಕಲೆ ಸಾಹಿತ್ಯಗಳ ಪೋಷಣೆಗಾಗಿ, ದಾನಧರ್ಮಗಳಿಗಾಗಿ ಮುಮ್ಮಡಿಯವರ ಬೆಂಬಲವನ್ನು ತಿಳಿಸುವಾಗ ಅವರ ಅತ್ಯಜ್ವಲ ವ್ಯಕ್ತಿತ್ವವನ್ನು ರೂಪಿಸಿದಂತೆಯೇ ದೌಲತ್ತಿಗೆ ಎರವಾಗಿ ರಾಜಕೀಯದಲ್ಲಿ ಸೋತ, ಹಲವು ಕ್ಷೋಭೆಗಳ ನಡುವೆ ತೊಳಲಾಡುವ ರಾಜರ ಚಿತ್ರಣವನ್ನೂ ಅವರು ಕೊಟ್ಟಿದ್ದಾರೆ. ಮುಮ್ಮಡಿಯವರಲ್ಲಿ ಪುಟ್ಟಣ್ಣನವರಿಗೆ ಅಪರಿಮಿತ ಗೌರವವಿತ್ತು. ‘ರಾಜಾ ಪ್ರತ್ಯಕ್ಷ ದೇವತಾ’ ಎಂಬುದು ಪುಟ್ಟಣ್ಣನವರ ಒಪ್ಪಿದ ಧೋರಣೆ.
  • ‘ಮಾಡಿದ್ದುಣ್ಣೋ ಮಹರಾಯ’ದ ಕಥೆ ನಡೆಯುವುದು ಚಾಮರಾಜನಗರದ ಬಳಿಯ ಸಂಜವಾಡಿಯಲ್ಲಿ. ಕಥೆಯ ಪ್ರಾದೇಶಿಕವಾದ ಹಿನ್ನೆಲೆ ಸ್ಪಷ್ಟವಾಗಿ ತಿಳಿಯುತ್ತದೆ. ‘ಲಂವಕೋರರು ಅವರಿಂದುಂಟಾಗುವ ಪ್ರಮಾದಗಳು; ಗ್ರಾಮಗಳಲ್ಲಿ ಕಕ್ಷಿ ಅದರ ದೋಷಗಳು; ಮೈಸೂರು ಮುಮ್ಮಡಿ ಶ್ರೀ ಕೃಷ್ಣರಾಜ ಪ್ರಭುವಿನ ಆಸ್ಥಾನ, ಅವರ ಮಹತ್ತರವಾದ ಔದಾರ್ಯ; ಆಸ್ಥಾನದ ನಕಲಿ; ಹೇಳಿದ್ದನ್ನೆಲ್ಲಾ ನಂಬುವ ಗ್ರಾಮವಾಸಿಗಳು; ಪತಿವ್ರತಾ ಚರಿತ್ರೆ; ಸಹಗಮನ; ಗ್ರಾಮಗಳ ಕೊಳಚೆ; ಅತ್ತೆ ಸೊಸೆಯರ ಪರಸ್ಪರ ಕಿರುಕುಳ; ಮಠದ ಉಪಾಧ್ಯಾಯ, ಅವನ ಕ್ರೌರ್ಯ, ಬಾಲಕರಿಗೆ ಅವ ಕೊಡುವ ಶಿಕ್ಷೆ, ಅವನ ಮಹತ್ತರವಾದ ಕೃತಘ್ನತೆ, ವಿದ್ಯಾರ್ಥಿಗಳಿಗೆ ಮಾಡುವ ಕ್ರೂರವಾಧ ಶಿಕ್ಷೆ, ಅದರ ಧರ್ಮ ಸೂಕ್ಷ್ಮ,ಕಾಪಟ್ಯ, ಅದರ ನೀಚ ಕೃತ್ಯಗಳು, ನಿಜವಾದ ಸೌಂದರ್ಯವನ್ನು ಸೌಂದರ್ಯವಲ್ಲವೆಂದು ಮಾಡುವ ವರ್ಣನೆ, ಪಾತಿವ್ರತ್ಯವನ್ನು ಭಂಗ ಮಾಡಲು ನಡೆಸಿದ ಅತಿ ಹೇಯವಾದ ಪ್ರಯತ್ನ, ಶಾಬರ ಪ್ರಯೋಗದ ನೀಚಕೃತ್ಯ, ಒಬ್ಬ ಐಲು ಮನುಷ್ಯರ ಹರಟೆಯಿಂದ ಹುಟ್ಟುವ ಹಾಸ್ಯ, ಒಬ್ಬ ಹುಟ್ಟು ಕಳ್ಳ ಹೇಳಿಕೊಳ್ಳುವ ಸ್ವವಿಚಾರದ ಕಥೆ, ಸ್ಮಶಾನದಲ್ಲಿ ನಡೆವ ಅತಿ ಭಯಂಕರವಾದ ವಿಷಯ, ಒಬ್ಬ ಮಹಾ ಮಂತ್ರವಾದಿ ಮಾಡಿದ ಅದ್ಭುತವಾದ ಕಾರ್ಯ ಮತ್ತು ಅದರ ಪಾರಮಾರ್ಥಿಕತೆ, ಆದ್ಯಂತವಾಗಿರುವ ನೀತಿಯ ಸಾರಾಂಶ – ಇವೇ ಮೊದಲಾದ ಸಂಗತಿಗಳನ್ನೆಲ್ಲಾ ಆಯಾ ಸ್ಥಳಗಳನ್ನೆಲ್ಲಾ ವಿವರಿಸಿದ್ದೇನೆ’ ಎಂದು ಪುಟ್ಟಣ್ಣನವರು ಪೀಠಿಕೆಯಲ್ಲಿ ಹೇಳಿದ್ದಾರೆ. ಕಾದಂಬರಿಯ ಘಟನೆಗಳ ಆನುಪೂರ್ವಿ ಹೆಚ್ಚು ಕಡಿಮೆ ಇದೇ ಆಗಿದೆ. ಸಂಗತಿಗಳು ಕಾಲಾನುಸಾರಿಯಾಗಿಯೂ ಇದೆ. ರಾಮಾಯಣವನ್ನೇ ಮನಸಿನ್ನಲ್ಲಿಟ್ಟುಕೊಂಡು ತಮ್ಮ ಮೊದಲ ಕಾದಂಬರಿ ‘ಮಾಡಿದ್ದುಣ್ಣೋ ಮಹರಾಯ’ವನ್ನು ರಚಿಸಿರುವುದು ಸ್ತ್ರೀಯ ಪಾತಿವ್ರತ್ಯವನ್ನು ಪುಟ್ಟಣ್ಣನವರು ಪ್ರಾಮಾಣಿಕತೆಯ ಒಂದು ರೂಪವೆಂದು ಪರಿಗಣಿಸಿರುವುದರಿಂದ. ತಮ್ಮ ಮೊದಲ ದಾಂಪತ್ಯದ ಬಿರುಕಿನ ಕಾರಣದಿಂದ ನೊಂದ ಪುಟ್ಟಣ್ಣನವರು, ಅದಕ್ಕೆ ವಿರುದ್ಧ ಮುಕ್ತಾಯವನ್ನು ಈ ಕೃತಿಯಲ್ಲಿ ಕಾಣಿಸಿದ್ದಾರೆ. ಒಂದು ಸಂಸ್ಕೃತಿಯ ಧೋರಣೆಯನ್ನು ವೈಯುಕ್ತಿಕ ನೆಲೆಗಟ್ಟಿನಲ್ಲಿ ಅನುಭವಿಸಿ, ಪಕ್ವತೆಯನ್ನು ಹೊಂದಿ ಕಲಾತ್ಮಕವಾಗಿ ಅದನ್ನು ಸಾಹಿತ್ಯಕ ಕೃತಿಯಾಗಿಸುವುದರ ಒಂದು ಶ್ರೇಷ್ಠ ಉದಾಹರಣೆ. – ‘ಮಾಡಿದ್ದುಣ್ಣೋ ಮಹರಾಯ’. ಮಿಕ್ಕ ಕಾದಂಬರಿಗಳಲ್ಲೂ ಅವರ ಜೀವನದ ವೈಯುಕ್ತಿಕ ಸಂಗತಿಗಳು ಇಣುಕುತ್ತವೆ.
  • ‘ಮುಸುಗ ತೆಗೆಯೇ ಮಾಯಾಂಗನೆ’ಯ ಹೆಸರು ಈ ಕಾದಂಬರಿ ಪತ್ತೇದಾರಿ ಕಥೆಯನ್ನೋ ರಂಜನೀಯವಾದ ಸುರಸ ಕಥೆಯನ್ನೋ ಹೇಳುತ್ತದೆ ಎನಿಸುವಂತೆ ಮಾಡುತ್ತದೆ. ಇಲ್ಲಿ ಪತ್ತೇದಾರಿ ಎಳೆಯಿರುವುದೇನೋ ನಿಜವೇ. ಜೊತೆಗೆ ಕಾದಂಬರಿಯ ತೆಳುವಾದ ಕಥೆಯ ಹಂದರದಲ್ಲಿ ರಾಜಕೀಯ ಎಳೆಗಳಿವೆ. ಬ್ರಿಟಿಷರ ಕೈಯಿಂದ ಮೈಸೂರು ಅರಸೊತ್ತಿಗೆಯನ್ನು ಬಿಡಿಸಿ ಪುನ: ಅದನ್ನು ಮುಮ್ಮಡಿಯವರ ಕೈಸೇರುವಂತೆ ಮಾಡಲು ಬ್ರಿಟೀಷ್ ಸರದಾರನನ್ನು ತಮ್ಮ ಕಡೆಗೆ ಒಲಿಸಿಕೊಳ್ಳುವ ಒಂದು ಹವಣು ಕಾಣುತ್ತದೆ. ಕಥೆ ನಡೆಯುವುದು ಮೈಸೂರಿನಲ್ಲಿ. ಮುಮ್ಮಡಿಯವರ ರಾಜಾಸ್ಥಾನವೇ ಕಥೆಯ ಮೂಲ ವೇದಿಕೆ. ಅಂದಿನ ಮೈಸೂರಿನ ರಾಜಕೀಯ ಸ್ಥಿತಿಯಲ್ಲಿನ ಒಳಜಗಳಗಳು, ಅಸೂಯೆ, ಪಿತೂರಿ ಮೊದಲಾದ ಎಲ್ಲ ಗೊಂದಲಗಳೂ ಸ್ಪಷ್ಟವಾಗಿ ಚಿತ್ರಿತವಾಗಿದೆ. ಕಥೆಯ ಮುಖ್ಯ ಪಾತ್ರವಾದ ಅಪ್ರಮೇಯನ ಪ್ರಾಮಾಣಿಕತೆಯೊಂದೇ ಅವನ ಬಲ. ಪುರುಷ ಪ್ರಯತ್ನದ ಪ್ರತೀಕವಾಗಿ ಅಪ್ರಮೇಯ ಅಲ್ಲಿ ಕಾಣಿಸಿಕೊಳ್ಳುತ್ತದೆ. ‘ಅವರಿಲ್ಲದೂಟ’ದ ಕಥೆಯೂ ಮುಮ್ಮಡಿಯವರ ಕಾಲಮಾನದ್ದೇ. ಗರತಿಯೊಬ್ಬಳ ಮೇಲಿನ ಸಂಚು ಅಯಶಸ್ವಿಯಾಗುವುದಲ್ಲದೇ ನಿರಪರಾಧಿಗಳನ್ನು ಮೋಸಕ್ಕೊಳಗಾಗಿಸುವ ಯತ್ನವೂ ವಿಫಲವಾಗುವುದನ್ನು ಇಲ್ಲಿಮ ಕಾಣಬಹುದು. ಈ ಕೃತಿಯಲ್ಲಿ ಮೊದಲೆರಡು ಕಾದಂಬರಿಗಳಿಗಿಂತ ಸಂಭಾಷಣೆಗೆ ಹೆಚ್ಚಿನ ಮಹತ್ವ ದಕ್ಕಿದೆ. ಕಥೆಯ ಚುರುಕುಗತಿಗೆ ಇದರಿಂದ ಅನುಕೂಲವಾಗಿದೆ. ನ್ಯಾಯಕ್ಕೆ ಗೆಲುವು, ಅನ್ಯಾಯಕ್ಕೆ ಸೋಲು, ಪುರುಷ ಪ್ರಯತ್ನ ದೈವಕ್ಕೆ ಬಾಗುವುದು ಅನಿವಾರ್ಯ. ಎರಡು ಆಶಯಗಳು ಪುಟ್ಟಣ್ಣನವರ ಎಲ್ಲ ಕೃತಿಗಳಲ್ಲೂ ಕಾಣುವಂತಹುದೇ. ಪ್ರಮುಖವಾಗಿ ಅವರ ಕಾದಂಬರಿಗಳನ್ನು ಈ ಆಶಯಗಳೇ ನಿಯಂತ್ರಿಸುತ್ತವೆ. ಪುರಾಣ, ಇತಿಹಾಸ, ಕಾವ್ಯ, ಶಾಸ್ತ್ರ ಗ್ರಂಥಗಳು ಮತ್ತು ಇತರ ಹಲವು ಮೂಲಗಳಿಗಿಂತ ಆರಿಸಿದ ಸುಮಾರು ನೂರೈವತ್ತು ಕಥೆಗಳ ಸಂಕಲನವೇ ;ನೀತಿಚಿಂತಾಮಣಿ’ (1884) ಎಂಬ ಅನ್ವರ್ಥನಾಮಕ ಕೃತಿ. ಕಥೆ ಎಂದರೆ ಪ್ರತಿ ಮಗುವಿನ ಕಣ್ಣೂ ಅರಳುತ್ತದೆ, ಕುತೂಹಲ ಕೊನರುತ್ತದೆ. ಈ ಕಥನ ಕುತೂಹಲವನ್ನೇ ಪುಟ್ಟಣ್ಣನವರು ಬಾಲ ಶಿಕ್ಷಣದಲ್ಲಿ ಒಂದು ಖಾತರಿಯಾದ ಅಸ್ತ್ರವನ್ನಾಗಿಸಿದರು. ರಂಜನೆ, ಚಮತ್ಕಾರಗಳ ಅಂಶಗಳನ್ನು ಪುಟ್ಟಣ್ಣನವರು ಹಠದಿಂದೆಂಬಂತೆ ತೆಗೆದು ಹಾಕಿರುವುದರಿಂದ ಕಥೆಗಳ ಉದ್ದೇಶ ನೀತಿಬೋಧೆಯತ್ತ ಮಾತ್ರ ಎಂಬುದು ಸುಸ್ಪಷ್ಟ. ಮಕ್ಕಳ ಸಾಹಿತ್ಯ ನಿರ್ಮಾಪಕರೆಂಬ ಪಟ್ಟ ಈ ಕೃತಿಯಿಂದಲೇ ಪುಟ್ಟಣ್ಣನವರಿಗೆ ಲಭಿಸಿತು. ‘ಪುಟ್ಟಣ್ಣ ಹೇಳಿದ ಕಥೆಗಳು’ (ಪ್ರ1981) ಸಂಕಲನದಲ್ಲಿ ರೂಢಿಯ ಕಥೆಗಳಿಗೆ ಪ್ರಾಧಾನ್ಯ ದಕ್ಕಿದೆ. ಹಲವು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದ ಕಥೆಗಳು, ಹಸ್ತಪ್ರತಿಗಳಲ್ಲಿ ಉಳಿದಿದ್ದ ಕೆಲವು ಕಥೆಗಳು ಇಲ್ಲಿ ಒಟ್ಟುಗೂಡಿವೆ. ಹಳೆಯ ದಾಖಲೆಗಳು ಕಳೆಯಬಾರದೆಂಬುದು ಈ ಪ್ರಕಟಣೆಯ ಪ್ರಮುಖ ಉದ್ದೇಶ. ‘ಪೇಟೆ ಮಾತೇನಜ್ಜಿ’(1927) ಒಂದು ರಮ್ಯ ಕಥೆ. ಜನಪದ ಕಥೆಗಳಲ್ಲಿ ಕಾಣುವಂತಹದು. ‘ಕಲಾವತೀ ಪರಿಣಯ’ದಂತಹ ಮಾರ್ಗ ಕಾವ್ಯದ ಕಥೆಗೂ ಈ ಕಥೆಗೂ ಕೆಲವು ಹೋಲಿಕೆಗಳನ್ನು ಕಾಣಬಹುದು. ಷೇಕ್ಸ್ಫಿಯರ್ನ “All’s well that ends well” ನಾಟಕದಲ್ಲಿ ಕೂಡ ಇವೇ ಹೋಲಿಕೆಗಳನ್ನು ಕಾಣಬಹುದು. ಸ್ತ್ರೀಯ ಪ್ರಾಮಾಣೀಕತೆ ಪುಟ್ಟಣ್ಣನವರಿಗೆ ಬಲು ಪ್ರಿಯವಾದ ಆಶಯ. ತನ್ನ ಪಾತಿವ್ರತ್ಯದ ಬಲದಿಂದ ಎಂಥ ಕಷ್ಟವನ್ನೂ ಎದುರಿಸಬಲ್ಲ ಪಾತ್ರ ಇಲ್ಲಿನ ಚೆಲುವಾಜಿಯದು ಎಂಬುದೇ ಪುಟ್ಟಣ್ಣನವರಿಗೆ ಈ ಕಥಾನಕದಲ್ಲಿ ಮುಖ್ಯ ಆಕರ್ಷಣೆ.
  • ಚೀನಾ ದೇಶದ ತತ್ತ್ವಜ್ಞಾನಿ ಕನ್ಫ್ಯೂಷಿಯಸ್ಸನ್ನು ಕುರಿತ ‘ಕಾಂಪೂಷನ ಚರಿತ್ರೆ’ (1892), ಮುಮ್ಮಡಿಯವರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ‘ಕುಣಿಗಲ ರಾಮಶಾಸ್ತ್ರಿಗಳ ಚರಿತ್ರೆ’ (1910), ಹೈದರಾಬಾದಿನ ಮಂತ್ರಿ ‘ಸರ್ ಸಾಲಾರ್ ಜಂಗನ ಚರಿತ್ರೆ’(1917), ಬಹುಮನಿ ಸಂಸ್ಥಾನದ ಮಂತ್ರಿ ;ಮಹಮ್ಮದ್ ಗವಾನನ ಚರಿತ್ರೆ’ (1922) ಮತ್ತು ಸ್ವಸಾಮರ್ಥ್ಯದಿಂದ ರಾಜ್ಯ ಕಟ್ಟಿ ಆಳಿದ ಶಿವಾಜಿಯ ವೃತ್ತಾಂತ ‘ಛತ್ರಪತಿ ಶಿವಾಜಿ ಮಹಾರಾಜ’ (ಪ್ರ1981) – ಇವು ಪುಟ್ಟಣ್ನನವರು ರಚಿಸಿದ ಐದು ಜೀವನಚರಿತ್ರೆಗಳು. ಪುಟ್ಟಣ್ಣನವರ ಆಸಕ್ತಿ ಮುಖ್ಯವಾಗಿ ಎರಡು ಕ್ಷೇತ್ರಗಳಲ್ಲಿ ದುಡಿದವರಿಗೆ ಮಾತ್ರ ಮೀಸಲು. ಪಾರಮಾರ್ಥಿಕ, ಧಾರ್ಮಿಕ ರಂಗಗಳಲ್ಲಿ ಸಾಧನೆ ಮಾಡಿದವರ ಮೊದಲ ಗುಂಪು. ಇಂಥವರು ಪುಟ್ಟಣ್ಣನವರ ಅಸೀಮ ಕೃತಜ್ಞತೆಗೆ ಪಾತ್ರರು. ಅಧಿಕಾರ ಸ್ಥಾನದಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಣೆ ಮಾಡಿದವರು ಇನ್ನೊಂದು ಗುಂಪು. ಈ ಎರಡೂ ಗುಂಪಿನವರೂ ಯಾವುದೇ ವ್ಯಯಕ್ತಿಕ ಲಾಭಗಳಿಗೆ ಮನಸೋತವರಲ್ಲ. ಧರ್ಮ ಮತ್ತು ಸರಕಾರ ಈ ಎರಡು ವಲಯಗಳಲ್ಲೂ ಸಾವಯವ ಸಂಬಂಧವನ್ನು ಪುಟ್ಟಣ್ಣನವರು ಗುರುತಿಸುತ್ತಾರೆ. ಕಾಂಪೂಷನ ತತ್ತ್ವಜ್ಞಾನಿ ಕೋಶಾಧಿಕಾರಿಯಾಗಿ ದಂಡನಾಯಕನಾಗಿ ದುಡಿದವನು. ರಾಜಾಶ್ರಯ ಸಿಕ್ಕಿದರೆ ಅನೇಕ ಮಹಾಕಾರ್ಯಗಳಿಗೆ ಇಂಬಾದೀತು ಎಂದು ಆಶಿಸಿದವನು. ರಾಮಶಾಸ್ತ್ರಿಗಳು ರಾಜಸ್ಥಾನದ ಕೃಪೆಯನ್ನು ಪಡೆದೇ ತಮ್ಮ ಧಾರ್ಮಿಕ ಕರ್ತವ್ಯಗಳನ್ನು ನೆರವೇರಿಸಿದರು. ಸಾಲರ್ ಜಂಗ್ ಮತ್ತು ಮಹಮ್ಮದ್ ಗವಾನ್ ಕೂಡಾ ಅತ್ಯುನ್ನತ ಪದವಿಯಲ್ಲಿದ್ದಾಗಲೂ ಧರ್ಮವನ್ನು ಒಪ್ಪಿ ನಡೆದವರು. ಶಿವಾಜಿ ಬಾಲ್ಯದಿಂದ ಗಾಢವಾದ ಧಾರ್ಮಿಕ ಪರಿಸರದಲ್ಲಿ ಬೆಳೆದು ಸ್ವತ: ರಾಜ್ಯಕಟ್ಟಿ ಆಳಿ ಆರ್ಯಧರ್ಮವನ್ನು ರಕ್ಷಿಸಿದವನು. ಪುಟ್ಟಣ್ಣನವರ ದೃಷ್ಟಿಯಲ್ಲಿ ಅಧಿಕಾರ ಸ್ಥಾನದಲ್ಲಿ ಧರ್ಮದ ಚೈತನ್ಯ ಅತ್ಯಂತ ಸುಸಂಬದ್ಧವಾದುದು. ರಾಜಕೀಯ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ, ಆಗುವ ಅನರ್ಥಗಳನ್ನು ತಿಳಿದುದ್ದರಿಂದ ಅಧಿಕಾರದ ಮಹತ್ವವನ್ನೂ ನೀತಿಪರವಾದ ಬಾಳು ಮಾತ್ರ ಗೌರವಾರಹವಾದುದು ಎಂಬ ನಂಬಿಕೆಯಿಂದ ಧರ್ಮದ ಮಹತ್ವವನ್ನೂ ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದರು. ಮೊದಲ ನಾಲ್ವರು ಸ್ವತ: ವಿದ್ವಾಂಸರು. ಶಿವಾಜಿ ಪಂಡಿತ ಪೋಷಣೆಯಿಂದ ಈ ಕೊರತೆಯನ್ನು ತುಂಬಿಕೊಂಡವನು. ಪುಟ್ಟಣ್ಣನವರ ಜೀವನಚರಿತ್ರೆಗಳಲ್ಲಿ ಈ ಹೋಲಿಕೆಗಳು ಒಂದು ಅಂತ:ಸೂತ್ರವನ್ನು ಕಲ್ಪಿಸಿವೆ.

ಭಾಷಂತರಕಾರರಾಗಿ ಪುಟ್ಟಣ್ಣ[ಬದಲಾಯಿಸಿ]

ಪುಟ್ಟಣ್ಣನವರು ಷೇಕ್ಸ್ಫಿಯರನ ಮೂರು ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಸಿಂಬಲೈನ್’ ನಾಟಕದ ರೂಪಾಂತರ ‘ಜಯಸಿಂಹರಾಜ ಚರಿತ್ರೆ’ (1881), ಇದು ಕಥನ ರೂಪದಲ್ಲಿದೆ. ‘ಕಿಂಗ್ ಲಿಯರ್’ ನಾಟಕದ ರೂಪಾಂತರ ‘ಹೇಮಚಂದ್ರ ವಿಲಾಸ’(1899), ಇದು ಗದ್ಯ ಪದ್ಯ ಮಿಶ್ರ ನಾಟಕ. ‘ಹ್ಯಾಮ್ಲೆಟ್’ ನಾಟಕದ ರೂಪಾಂತರ ‘ಹೇಮಲತ’ (ರಚನೆ 1920, ಅಪ್ರಕಟಿತ). ಇದು ಕೂಡ ಗದ್ಯಪದ್ಯಮಿಶ್ರ ನಾಟಕ. ಮೂರು ಕೃತಿಗಳೂ ರೂಪಾಂತರಗಳೇ. ಈ ಮೂರೂ ಕೃತಿಗಳಲ್ಲೂ ಕನ್ನಡಕ್ಕೆ ಹೊಂದುವಂತೆ ಔಚಿತ್ಯವನ್ನರಿತು ಹಲವು ಬದಲಾವಣೆಗಳನ್ನು ಪುಟ್ಟಣ್ಣನವರು ಮಾಡಿಕೊಂಡಿದ್ದಾರೆ. ಷೇಕ್ಸ್ಫಿಯರನ ನಾಟಕಗಳಲ್ಲಿ ಪೂರ್ಣ ಗದ್ಯವನ್ನು ಉಪಯೋಗಿಸಿದವರಲ್ಲಿ ಪುಟ್ಟಣ್ಣನವರದು ಮೊದಲ ಸಾಲಿನ ಹೆಸರು. ಆ ಕಾಲಕ್ಕೆ ಇದೊಂದು ಅಪೂರ್ವ ಸಾಧನೆ. ಈ ರೂಪಾಂತರಗಳಲ್ಲಿ ಮೂಲದ ಸತ್ವವನ್ನು ಕನ್ನಡಕ್ಕೆ ತರುವ ಧ್ಯೇಯವಿದೆ. ಸಿದ್ಧಿ ಒಂದು ಮಿತಿಯಲ್ಲಿ ಮಾತ್ರ ದೊರಕಿದೆ. ಇಲ್ಲಿನ ಯಾವೊಂದು ರೂಪಾಂತರದಲ್ಲೂ ಮೂಲದ ಕಾವ್ಯಗುಣವಾಗಲೀ ವೈದುಷ್ಯವಾಗಲೀ ಇಲ್ಲ. ಇಲ್ಲಿನ ವಿವರಣಾತ್ಮಕ ಗದ್ಯದಲ್ಲಿ ಅಚ್ಚುಕಟ್ಟು ಕೂಡಾ ಕಡಿಮೆ. ಆದರೆ ಸಂವಹನಕ್ಕೆ ಅಡ್ಡಿಯಿಲ್ಲ. ಕಾವ್ಯಕ್ಕೆ ಸಂಬಂಧಿಸಿದಂತೆ ಪುಟ್ಟಣ್ಣನವರು ತಮ್ಮ ಮಿತಿಯನ್ನರಿತು ಗದ್ಯದಲ್ಲಿ ಸಾಧನೆಯ ಅವಕಾಶಗಳನ್ನುತಿಳಿದುಕೊಂಡಿದ್ದು , ಷೇಕ್ಸ್ಫಿಯರನ ನಾಟಕಗಳನ್ನು ಪೂರ್ಣ ಗದ್ಯದಲ್ಲಿ ಬರೆಯುವುದು ಒಂದು ಸಾಹಿತ್ಯಿಕ ಧೋರಣೆ ಆಗದಿದ್ದಾಗಲೂ ಹಾಗೆ ಮಾಡಿದ್ದು ಮತ್ತು ಸಾಧ್ಯವಿದ್ದೆಡೆಗಳಲ್ಲೆಲ್ಲಾ ಆಡುಮಾತನ್ನು ಬಳಸಿದ್ದು ಇಲ್ಲಿನ ಹೆಚ್ಚಳ. ಥಾಮಸ್ ಡೇ ಬರೆದ ‘ದಿ ಹಿಸ್ಟರಿ ಆಫ್ ಸ್ಯಾಂಡ್ ಫರ್ಢ್ ಆಂಡ್ ಮರ್ವನ್’ ಕೃತಿಯ ರೂಪಾಂತರವೇ ‘ಸುಮತಿ ಮದನಕುಮಾರರ ಚರಿತ್ರೆ’ (1897). ಮಕ್ಕಳಿಗೆ ಕಥೆಗಳ ಮೂಲಕ ಒಳ್ಳೆಯ ನಡತೆಯನ್ನು ಮತ್ತು ವಿದ್ಯಾಭ್ಯಾಸದ ವಿಷಯಗಳನ್ನು ಭೋದಿಸುವುದೇ ಇಲ್ಲಿಯ ಸ್ವಾರಸ್ಯ. ಇಬ್ಬರು ಮುಗ್ಧ ಬಾಲಕರು ಗುರುಕುಲವಾಸದಲ್ಲಿ ಸ್ವಲ್ಪ ಕಾಲ ಬೆಳೆಯುವ ಚಿತ್ರಣ ಹಾಗೂ ಉಪಾಧ್ಯಾಯರು ಕೊಡುವ ಉತ್ತಮ ಶಿಕ್ಷಣ ಕ್ರಮ ಈ ಕೃತಿಯ ವಸ್ತು. ಮೂಲದ ಸಾರ ರೂಪಾಂತರದಲ್ಲಿ ಸೊಗಸಾದ ಭಟ್ಟಿಯಿಳಿದಿದೆ. ಪುಟ್ಟಣ್ಣನವರ ರೂಪಾಂತರಗಳಲ್ಲಿ ಈ ಕೃತಿ ಅತ್ಯಂತ ಯಶಸ್ವಿಯಾದುದು. ‘ಹಾತಿಂ ತಾಯ್’(ರಚನೆ 1920, ಅಪ್ರಕಟಿತ) ಪರ್ಷಿಯನ್ ಮೂಲದ್ದು. ಈ ಕೃತಿಯ ಇಂಗ್ಲಿಷ್ ಭಾಷಾಂತರದಿಂದ ಕನ್ನಡದ ತಮ್ಮ ಭಾಷಾಂತರವನ್ನು ಪುಟ್ಟಣ್ಣನವರು ಸಿದ್ಧಪಡಿಸಿದ್ದಾರೆ. ಹಾತಿಮ ಅಪರಿಗ್ರಹದ ಸಾಕಾರಮೂರ್ತಿ ಎಂಬುದೇ ಪುಟ್ಟಣ್ಣನವರಿಗೆ ಆಕರ್ಷಣೆಯನ್ನುಂಟುಮಾಡಿದೆ. ಇಂಗ್ಲಿಷ್ ಮೂಲದ ನಾಲ್ಕೂ ಕೃತಿಗಳು ರೂಪಾಂತರಗಳು. ಇಂಗ್ಲೀಷೇತರ ಮೂಲದ ‘ಹಾತಿಂತಾಯ್’ ಉಪಲಬ್ಧ ದಾಖಲೆಗಳ ಪ್ರಕಾರ ಪುಟ್ಟಣ್ಣನವರ ೇಕೈಕ ಭಾಷಾಂತರ ಕೃತಿ.

ಇತರ ಕೃತಿಗಳು[ಬದಲಾಯಿಸಿ]

ಪುಟ್ಟಣ್ಣನವರು ಪಾಳೆಯಗಾರರನ್ನು ಕುರಿತು ಮೊದಲು ಬರೆದ ಕೃತಿ ‘ಪಾಳಯಗಾರರು’(1923), ಮುಂದೆ ‘ಚಿತ್ರದುರ್ಗದ ಪಾಳಯಗಾರರು’(1924),ಗುಮ್ಮನನಾಯಕನ ಪಾಳಯದ ಪಾಳಯಗಾರರು(1926),’ಹಾಘಲವಾಡಿ ಪಾಳಯಗಾರರು(1931), ಮತ್ತು ಇಕ್ಕೇರಿ ಸಂಸ್ಥಾನದ ಚರಿತ್ರೆ’(1931)ಗಳು ಪ್ರಕಟಗೊಂಡವು. ತಮ್ಮ ಅಮಲ್ದಾರ ವೃತ್ತಿಯಲ್ಲಿ ಹಲವು ಊರುಗಳನ್ನು ಸುತ್ತಬೇಕಾದ ಪುಟ್ಟಣ್ಣನವರು ಆಯಾ ಪಾಳಯಗಾರರ ವಂಶಸ್ಥರ ಬಳಿಯಲ್ಲಿದ್ದ ದಾಖಲೆಗಳನ್ನು ಸಂಗ್ರಹಿಸಿದರು. ಶಾಸನ ಸಂಪುಟಗಳ ಅಧ್ಯಯನದ ಪೂರಣ ಪ್ರಯೋಜನವನ್ನು ಪಡೆದುಕೊಂಡರು. ಈ ಪಾಳಯಗಾರರ ವಿಚಾಋವಾಗಿ ಬೇರೆ ಎಲ್ಲೂ ಇಷ್ಟು ವ್ಯವಸ್ಥಿತವಾದ ದಾಖಲೆಗಳು ಸಿಗುವುದಿಲ್ಲ. ತಮ್ಮ ಶ್ರಮ ಹಾಗೂ ಸಂಶೋಧಕ ಪ್ರವೃತ್ತಿಗಳಿಂದ ಪುಟ್ಟಣ್ಣನವರು ಹೊಸ ಅಂಶಗಳನ್ನು ಬೆಳಕಿಗೆ ತಂದರು. ಆವರೆಗೆ ಸ್ವೀಕೃತವಾಗಿದ್ದ ಹಲವು ತಪ್ಪುಗಳನ್ನು ಹೊರಗೆಳೆದರು. ಅಂದಿನ ಬಖೈರು ಕೈಫಿಯತ್ತುಗಳೆಂದೇ ಅನ್ಯಭಾಷಾ ಪದಗಳಿಂದ ಕೂಡಿದ ಈ ಕೃತಿಗಳು ವಿಶಿಷ್ಟ ರಚನೆಗಳು. ಪುಟ್ಟಣ್ಣನವರ ಈ ಗ್ರಂಥಗಳು ಈ ಕ್ಷೇತ್ರದ ಆಧಾರ ಗ್ರಂಥಗಳೂ, ಆಕರ ಗ್ರಂಥಗಳೂ ಆಗಿವೆ. ಕಾಲಾನುಸಾರಿಯಾಗಿ ಆಳಿದ ರಾಜರು, ಮುಖ್ಯ ಘಟನೆಗಳು, ಆಸ್ಥಾನದ ವಿವರಗಳು, ಮತಾಚಾರ, ವಂಶಾವಳಿ ಇತ್ಯಾದಿ ವಿಷಯಗಳನ್ನು ಪುಟ್ಟಣ್ಣನವರು ಈ ಕೃತಿಗಳಲ್ಲಿ ತಿಳಿಸಿದ್ದಾರೆ. ಅಗತ್ಯವಿದ್ದೆಡೆಗಳಲ್ಲೆಲ್ಲ ಅನುಷಂಗಿಕ ವಿಚಾರಗಳನ್ನು ತಿಳಿಸಿದ್ದಾರೆ. ಚಾಮರಾಜ ಒಡೆಯರ ಅಧಿಕಾರಾವಧಿಯಲ್ಲಿ ಹಲವು ಪಾಠಶಾಲೆಗಳು ಆರಂಭವಾದವು. ಅರಮನೆಯ ದರ್ಬಾರು ಭಕ್ಷಿಗಳಾದ ಅಂಬಿಲ್ ನರಸಿಂಹಯ್ಯಂಗಾರರ ಪ್ರೋತ್ಸಾಹ, ದಿವಾನ್ ರಂಗಾಚಾರ್ಲು, ವಿದ್ಯಾಭ್ಯಾಸದ ಇಲಾಖೆಯ ಡೈರೆಚ್ಟರ್ ಲೂಯಿರೈಸ್ ಅವರುಗಳ ಪ್ರೋತ್ಸಾಹ, ಶಿಕ್ಷಣಾಧಿಕಾರಿಯವರುಗಳಾದ ಎಚ್.ಜೆ ಭಾಬಾ ಹಾಗೂ ಎಂ. ಶಾಮರಾವ್ ಇವರುಗಳ ಪ್ರೋತ್ಸಾಹದಿಂದ ಪುಟ್ಟಣ್ಣನವರು ತಮ್ಮ ಪಠ್ಯಕೃತಿಗಳನ್ನು ರಚಿಸಿದರು. ಎರಡು ಭಾಗಗಳಲ್ಲಿ ‘ಹಿಂದೂ ಚರಿತ್ರ ದರ್ಪಣ’(1882). ಹಿಂದೂ ಚರಿತ್ರ ಸಂಗ್ರಹ’(1887),’ಕನ್ನಡ ಒಂದನೆಯ ಪುಸ್ತಕ’(1895) ಹಾಗೂ ಕನ್ನಡ ಲೇಖನ ಲಕ್ಷಣ’(1915) – ಈ ನಾಲ್ಕು ಪುಟ್ಟಣ್ಣನವರ ಪಠ್ಯ ಕೃತಿಗಳು. ಮೊದಲ ಎರಡು ಎಂ.ಬಿ ಶ್ರೀನಿವಾಸಯ್ಯಂಗಾರರ ಸಹಕೃತ್ವದಲ್ಲಿ ರಚಿತವಾದವು. ಮೂರನೆಯದರ ಗದ್ಯಪಾಠವನ್ನು ಪುಟ್ಟಣ್ನನವರೂ ಹೊಸಕಾಲದ ಕವಿತೆಗಳನ್ನು ಎಸ್.ಜಿ ನರಸಿಂಹಾಚಾರ್ಯರೂ ರಚಿಸಿದರು. ನಾಲ್ಕನೆಯದು ಪುಟ್ಟಣ್ಣನವರೊಬ್ಬರೇ ರಚಿಸಿದ ಕೃತಿ. ಕನ್ನಡದಲ್ಲಿ ಇಂಥಾ ಪಠ್ಯಗಳ ರಚನೆಗೆ ಸಿದ್ಧ ಸೂತ್ರಗಳಿಲ್ಲದಿದ್ದ ಕಾಲದಲ್ಲಿ ಮಕ್ಕಳಿಗೆ ಬೀಧಿಸಬೇಕಾದ ಅಂಶಗಳನ್ನು ಒಂದು ಕ್ರಮಕ್ಕೆ ಅಳವಡಿಸಿ ರಚಿಸಿದ ಈ ಕೃತಿಗಳು ತಮ್ಮ ಮುಂದಿನ ಅಂಥ ಕೃತಿಗಳಿಗೆ ಮಾರ್ಗದರ್ಶಿಗಳಾದವು. ಸುವ್ಯವಸ್ಥಿಯ ವಿಷಯ, ಸಂಗ್ರಹಗುಣ, ನಕ್ಷೆ, ಭೂಪಟ, ಚಿತ್ರಗಳು ಇಲ್ಲಿನ ಅಚ್ಚುಕಟ್ಟನ್ನು ತಿಳಿಸುತ್ತದೆ. ಪ್ರಾರಂಭದ ಪಠ್ಯಗಳೇ ಇಷ್ಟು ಚೆನ್ನಾಗಿರುವುದು ಸಂತೋಷದ ವಿಷಯವಾಗಿದೆ. ನಾಡಿನ ಎಳೆಯರನ್ನು ಕಂಡರೆ ಪುಟ್ಟಣ್ಣನವರಿಗಿದ್ದ ಪ್ರೀತಿ, ಶಿಕ್ಷಣದಲ್ಲಿದ್ದ ಆಸಕ್ತಿ ಈ ಕೃತಿಗಳ ರಚನೆಗೆ ಮೂಲ ಕಾರಣ. ಪುಟ್ಟಣ್ಣನವರ ವೃತ್ತಿ ಜೀವನ ಪ್ರಾರಂಭವಾದುದೇ ಉಪಾಧ್ಯಾಯ ವೃತ್ತಿಯಿಂದ ಎಂಬುದು ಆಕಸ್ಮಿಕವಾದರೂ ಗಮನಾರ್ಹವಾದ ಸಂಗತಿಯಾಗಿದೆ.

ಪತ್ರಿಕೋದ್ಯಮಿಯಾಗಿ ಪುಟ್ಟಣ್ಣ[ಬದಲಾಯಿಸಿ]

ಪುಟ್ಟಣ್ಣನವರು ಎಂ.ಬಿ ಶ್ರೀನಿವಾಸಯ್ಯಂಗಾರರೊಡನೆ 1883ರ ಅಕ್ಟೋಬರ್ ತಿಂಗಳಿನಲ್ಲಿ ‘ಹಿತಬೋಧಿನಿ’ ಮಾಸ ಪತ್ರಿಕೆಯನ್ನು ಆರಂಭಿಸಿದರು. ಪುಟ್ಟಣ್ಣನವರ ಸಾಮಾಜಿಕ ಪ್ರಜ್ಞೆ ಕಳಕಳಿಗಳು ಅಲ್ಲಿ ಸುವ್ಯಕ್ತ. ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ, ಜೀವನಚರಿತ್ರೆ, ದೇಶಾಂತರ ವರ್ತಮಾನ ಸಂಗ್ರಹ, ಕಥೆಗಳು ಇತ್ಯಾಧಿ ಹಲವು ಉಪಯುಕ್ತ ವಿಷಯಗಳು ಈ ಪತ್ರಿಕೆಯಲ್ಲಿ ಪ್ರಚುರವಾದವು. ಸ್ವತ: ಪುಟ್ಟಣ್ಣನವರೇ ಹಲವು ಲೇಖನಗಳನ್ನು ಬರೆದರು. ಆರು ತಿಂಗಳುಗಳ ಕಾಲ ನಡೆಸಿದ ಮೇಲೆ ತಮ್ಮ ಬಿ.ಎ ವ್ಯಾಸಂಗಕ್ಕಾಗಿ ಮದರಾಸಿಗೆ ತೆರಳಿದಾಗ ಪುಟ್ಟಣ್ಣನವರು ‘ಹಿತಬೋಧಿನಿ’ಯನ್ನು ಎಂ.ವೆಂಕಟಕೃಷ್ಣಯ್ಯನವರಿಗೆ ಒಪ್ಪಿಸಿದರು. ಈ ಪತ್ರಿಕೆಯ ನಿರ್ವಹಣೆಯಿಂದ ವೆಂಕಟಕೃಷ್ಣಯ್ಯನವರ ಪತ್ರಿಕಾ ಜೀವನದ ನಾಂದಿಯಾದುದು ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲೊಂದು ಮಹತ್ವದ ಸಂಗತಿಯಾಗಿದೆ. ತಮ್ಮಿಂದ ಪತ್ರಿಕೋದ್ಯಮದ ದೀಕ್ಷೆಯನ್ನು ಪಡೆದ ಸಿಡಿಲು ಮರಿಯ ಉಜ್ವಲ ವ್ಯಕ್ತಿತ್ವವನ್ನು ಪುಟ್ಟಣ್ಣನವರು ಗುರುತಿಸಿದ್ದು ಅವರ ಗುಣಗ್ರಹಣೆಯ ಗುರುತು. ಕನ್ನಡ ನುಡಿ ಮನ್ನಣೆ ಹಾಗೂ ಗದ್ಯದ ಬೆಳವಣಿಗೆಗೆ ಪ್ರೋತ್ಸಾಹ ‘ಹಿತಬೋಧಿನಿ’ಯ ಮುಖ್ಯಸಾಧನೆಗಳು. ಪುಟ್ಟಣ್ಣನವರ ಐವತ್ತು ಉಪಲಬ್ಧ ಲೇಖನಗಳಲ್ಲಿ ಕಾಣುವ ಪ್ರಮುಖ ಅಂಶಗಳೆಂದರೆ ಪ್ರಾಮಾಣಿಕತೆ, ಕನ್ನಡ ಪ್ರೇಮ ಹಾಗೂ ಸಾಮಾಜಿಕ ಕಳಕಳಿ. ಇಲ್ಲಿ ಚಾರಿತ್ರಿಕ ವ್ಯಕ್ತಿಗಳನ್ನು ಕುರಿತ ಲೇಖನಗಳಿವೆ. ಕನ್ನಡನಾಡಿನ ರಾಜರು, ರಾಜಭಕ್ತರು, ವೀರರು ಹಾಗೂ ಜನಸಾಮಾನ್ಯರನ್ನು ಕುರಿತ ಲೇಖನಗಳಿವೆ. ವಜ್ಞಾನಿಗಳನ್ನು ಕುರಿತ ಲೇಖನಗಳಿವೆ, ಸಾಮಾಜಿಕ ಪ್ರಜ್ಞೆಯ ಲೇಖನಗಳಿವೆ. ಭಾಷಾ ಸಂಬಂಧವನ್ನು ಕುರಿತ ಲೇಖನಗಳಿವೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿದ ಲೇಖನಗಳಿವೆ. ಪುಟ್ಟಣ್ಣನವರ ಸಮಕಾಲೀನರನ್ನು ಕುರಿತ ಲೇಖನಗಳೂ ಇವೆ.