ಸದಸ್ಯ:Jiivak/Sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೀಲು ಗೊಂಬೆಯಾಟ : ಕೀಲುಗೊಂಬೆಯಾಟ ಪರಂಪರೆ ನಶಿಸಿದೆ ಎಂಬುದು ಎಲ್ಲರ ಭಾವನೆ; ಪ್ರಸ್ತುತ ಈ ಗೊಂಬೆಯಾಟ ಪರಂಪರೆ ಕೋಲಾರ ಜಿಲ್ಲೆಯ ಅಚ್ಚಟನಹಳ್ಳಿ ಗ್ರಾಮದಲ್ಲಿ ಜೀವಂತವಾಗಿದೆ.

ಕೀಲುಗೊಂಬೆಯಾಟ ತಂತ್ರ ಮತ್ತು ಪ್ರಯೋಗ: ಕರ್ನಾಟಕ ಗಡಿ ಭಾಗದಲ್ಲಿ ಹೊಂದಿಕೊಂಡಿರುವ ಕಾಸರಗೋಡು ಭಾಗದಲ್ಲಿ ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡವಿದೆ, ಈ ಗೊಂಬೆಯಾಟದ ಸ್ಥಾಪಕರು ದಿ.ಕೆ.ವೆಂಕಟಕೃಷ್ಣಯ್ಯ, ಪ್ರಸ್ತುತ ಇವರ ಪುತ್ರ ರಮೇಶ ಕೆ.ವಿ. 1981ರಲ್ಲಿ ಈ ತಂಡ ತನ್ನ ಮೊದಲ ಪ್ರಯೋಗವನ್ನು ನೀಡಿದ್ದು ಸಲಾಕಿ ಗೊಂಬೆಯಾಟ ಎಂದು ಕರೆಯುವ ಶೈಲಿಯು ಇವರದಾಗಿತ್ತು. ಈ ಗೊಂಬೆಯಾಟದವರು ತಿಳಿಸುವಂತೆ ಗೊಂಬೆಗಳು ತೆಂಕು ಶೈಲಿಯ ಆಕಾರ ಹಾಗೂ ಪ್ರಭಾವ ಹೊಂದಿದ್ದರೂ ಕುಣಿಸುವಲ್ಲಿ ಈ ಗೊಂಬೆಗಳಿಗೆ ಸೂತ್ರಗಳಿಲ್ಲ, ಗೊಂಬೆಯ ಕೆಳ ಭಾಗದಲ್ಲಿ ಉದ್ದನೆಯ ಸಲಾಕಿಗೆ ಗೊಂಬೆಯನ್ನು ತೂರಿಸಿ ಅಟ್ಟದ ಕೆಳಭಾಗದಿಂದ ಕೈಗಳಲ್ಲಿ ಹಿಡಿದ ಗೊಂಬೆಗಳನ್ನು ಮೇಲೆತ್ತಿ ತೋರಿಸುವ ತಂತ್ರಗಾರಿಕೆಯನ್ನು ಕರ್ನಾಟಕದಲ್ಲಿ ಮೊದಲಬಾರಿಗೆ ಬಳಸಿದ ಕೀರ್ತಿ ಈ ತಂಡದ ಕಲಾವಿದರಿಗೆ ಸೇರುವುದು. ಕರ್ನಾಟಕ ಹಾಗೂ ಕೇರಳಕ್ಕೆ ಈ ತಂತ್ರಗಾರಿಕೆ ಹೊಸತು ಎನಿಸಿದರೂ ಈ ಬಗೆಯ ತಂತ್ರಗಾರಿಕೆಯನ್ನು ಮೈಸೂರು ತಿಪಟೂರು ಭಾಗದಲ್ಲಿ ಪ್ರಚಲಿತವಿದ್ದ ಕೀಲುಗೊಂಬೆಯಾಟ ಮಾದರಿಯನ್ನು ಹೋಲುವುದು. ಈ ಶೈಲಿಯ ಗೊಂಬೆಯಾಟ ಇಂದಿಗೂ ಪಶ್ಚಿಮ ಬಂಗಾಲದಲ್ಲಿ ಅತ್ಯಂತ ಖ್ಯಾತಿ ಪಡೆದಿದೆ, ಈ ಪ್ರಕಾರವನ್ನು ಡಾಂಗೆರ ಪುತುಲ್ (ದಂಡದ ಮೂಲಕ ಕುಣಿಸುವ ಗೊಂಬೆ) ಎಂದು ಕರೆಯಲಾಗಿದೆ.ಕರ್ನಾಟಕದಲ್ಲಿ ಸೂತ್ರದ ಗೊಂಬೆಯಾಟ ಪ್ರಸಿದ್ಧಿ ಪಡೆದಂತೆ ಉತ್ತರ ಭಾರತದ ಭಾಗದಲ್ಲಿ ಡಾಂಗೆರ ಪುತುಲ್ ಅತ್ಯಂತ ಜನಪ್ರಿಯತೆಯನ್ನು ಪಡೆದಿರುವ ಗೊಂಬೆಯಾಟ ಮಾಧ್ಯಮವಾಗಿದೆ. ಈ ಶೈಲಿಯನ್ನು ಆಧರಿಸಿ ಕೊಲ್ಕತ್ತಾದ ಶ್ರೀ ಸುರೇಶ ದತ್ತಾ ಇವರು ಅಲ್ಲಾವುದ್ದೀನ್ ಅದ್ಭುತ ಕಥೆ ಒಂದು ಸಾವಿರಕ್ಕೂ ಮಿಗಿಲಾಗಿ ಪ್ರದರ್ಶನ ನೀಡಿ ರಾಷ್ಟ್ರೀಯ ಅಂತರ್ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವರು. ಈ ಒಂದು ಮಾದರಿಯ ತಂತ್ರಗಾರಿಕೆ ಕರ್ನಾಟಕದಲ್ಲಿ 1930ರ ದಶಕದಲ್ಲಿ ಇತ್ತೆಂಬುದು ಇಂದು ಇತಿಹಾಸದ ಕೋಶದಲ್ಲಿ ಸೇರ್ಪಡೆಯಾದ ವಿಷಯವಾಗಿದೆ. 2003-ರ ತನಕ ಕಾಸರಗೋಡು ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡ ಕೀಲು ಗೊಂಬೆಯಾಟ ಮಾದರಿಯ ತಂತ್ರವನ್ನು ಅಳವಡಿಸಿ ಪ್ರದರ್ಶನ ನೀಡುತ್ತಿದ್ದರು, ಇತ್ತೀಚಿಗೆ ಈ ಶೈಲಿಯು ಬಹಳಷ್ಟು ಶ್ರಮದಾಯಕವಾದುದೆಂದು ತಿಳಿದು ಪುನ: ಸೂತ್ರದ ಸಹಾಯದಿಂದ ಕುಣಿಸುವ ತಂತ್ರವನ್ನು ಅಳವಡಿಸಿಕೊಂಡು ತಮ್ಮ ಪ್ರದರ್ಶನಗಳನ್ನು ನೀಡಿ ಜನ ಮೆಚ್ಚುಗೆ ಪಡೆದಿರುವರು.

ಕೀಲುಗೊಂಬೆಯಾಟ

ಕೀಲುಗೊಂಬೆಯಾಟ ಪ್ರಕಾರ ಇಂದು ಅಸ್ತಿತ್ವದಲ್ಲಿ ಇಲ್ಲವಾಗಿದೆ. ಇದರ ರಂಗ ಮಂಚ ಪೆಟ್ಟಿಗೆಯಾಕಾರವಾಗಿರುತಿತ್ತು. ಪ್ರೇಕ್ಷಕರಿಗೆ ಗೊಂಬೆಗಳು ಮಾತ್ರ ತೋರಿ ಬರುವಂತೆ ಕೀಲುಗಳ ಸಹಾಯದಿಂದ ಕುಣಿಸುತ್ತಿದ್ದರು. ಜನಪದ ಕಥೆಯನ್ನು ವಿಶ್ವಕರ್ಮ ಕಲಾಕಾರರು ಪ್ರದರ್ಶಿಸುತಿದ್ದರು. ಇಂದು ಈ ಬಗೆಯ ಗೊಂಬೆಗಳನ್ನು ಮೈಸೂರು ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಡಲಾಗಿದೆ, ಈ ಗೊಂಬೆಗಳನ್ನು ಮೈಸೂರು ಜಾನಪದ ಸಂಗ್ರಹಾಲಯಕ್ಕೆ ಸೇರಿಸಿದ ಕೀರ್ತಿ ಪ್ರೊ. ಜೀ.ಶಂ.ಪರಮಶಿವಯ್ಯ ಹಾಗೂ ಸಂಗ್ರಹಾಲಯದ ಕ್ಯುರೇಟರ್ ಆಗಿದ್ದ ದಿ. ಪಿ.ಆರ್. ತಿಪ್ಪೇಸ್ವಾಮಿ ಇವರಿಗೆ ಸಲ್ಲುವುದು. ಮೂಲತಃ ಈ ಪ್ರಕಾರವು ತಿಪಟೂರು ಭಾಗದ ಹೊನ್ನವಳ್ಳಿ ಎಂಬ ಗ್ರಾಮದಲ್ಲಿ ಇತ್ತೆಂಬುದಾಗಿ ತಿಳಿಯಲಾಗಿದೆ. ಕಟ್ಟಿಗೆಯಿಂದ ಮಾಡಿದ ಈ ಗೊಂಬೆಗಳನ್ನು ವಿಶ್ವಕರ್ಮ ಜನವರ್ಗದವರು ಕುಣಿಸುತ್ತಿದ್ದರು. ಗೊಂಬೆಯ ಕೆಳಭಾಗದಲ್ಲಿ ಉದ್ದನೆಯ ಕೊಳವೆ ಅಳವಡಿಸುತ್ತಿದ್ದರು. ಇದರ ಮೂಲಕ ಕೈ-ಕಾಲುಗಳಗೆ ಜೋಡಿಸಿದ ಸೂತ್ರವನ್ನು ಆಡಿಸುವ ತಂತ್ರದ ಮೂಲಕ ಗೊಂಬೆಯಾಟ ಪ್ರದಶರ್ಿಸುತ್ತಿದ್ದರು. ಸಾಮಾನ್ಯವಾಗಿ ಸಂತೆ, ಅಥವಾ ಜಾತ್ರೆಗಳಲ್ಲಿ ಡೇರೆ ಹಾಕಿ ಹಗಲು ವೇಳೆ ಪ್ರದರ್ಶನ ನೀಡುತ್ತಿದ್ದರು. ಟಿಕೇಟು ಪಡೆದು ಗೊಂಬೆಯಾಟವನ್ನು ಜನ ನೋಡುತ್ತಿದ್ದರು. ಈ ಕಲೆಯು 1930ರ ವೇಳೆಗೆ ಕ್ಷೀಣಗೊಂಡಿತ್ತು. ಈ ಪ್ರಕಾರದಲ್ಲಿ ಮೃದಂಗ ತಾಳ ಮತ್ತು ಬಿದಿರಿನ ಪಟ್ಟಿಯ ಪೀಪಿ (ರಾಜಸ್ಥಾನದ ಕಟ್ ಪುತ್ಲಿ ಪ್ರಕಾರದಲ್ಲಿ ಈ ವಾದ್ಯವನ್ನು ಬೋಲಿ ಎಂದು ಕರೆಯಲಾಗಿದೆ) ಉಪಯೋಗಿಸುತ್ತಿದ್ದರು. ಹಾಸ್ಯ ಪಾತ್ರಗಳಲ್ಲಿ ದಾಸಯ್ಯ, ಮಡಿವಾಳ ಗೊಂಬೆಗಳು ಇರುತ್ತಿದ್ದವು. ಮುಖ್ಯ ಪಾತ್ರಗಳಲ್ಲಿ ರಾಜ, ರಾಣಿ, ಹಾಗೂ ಸೈನಿಕರ ಗೊಂಬೆಗಳನ್ನು ಬಳಸುತ್ತಿದ್ದರು. ಇಂದು ಈ ಪ್ರಕಾರವು ಕರ್ನಾಟಕ ದಲ್ಲಿ ನೋಡಲು ವಸ್ತು ಸಂಗ್ರಹಾಲಯದಲ್ಲಿ ಮಾತ್ರ ದೊರಕುವುದು.

ಲೇಖನ: ಎಸ್. ಎ.ಕೃಷ್ಣಯ್ಯ

 ಗೊಂಬೆಯಾಟ

[೧]


Reference:

  1. ಉಲ್ಲೇಖ: S.A.Krishnaiah 1998, Karnataka Puppetry Pub: R.R.C. Udupi 576102