ಸದಸ್ಯ:Jeevitha b/sandbox
ಗೋಚರ
ಡಿಜಿಟಲ್ ಇಂಡಿಯಾ - ಸ್ವಾತಂತ್ರದ ಮಾರಾಟದ ಮತ್ತೊಂದು ದಾರಿಯಾಗದಿರಲಿ
ಸಾಮಾಜಿಕ ತಾಣಗಳ ಮೂಲಕ ಮಾಡಿದ ಪ್ರಚಾರ ಮದ್ಯಮ ವರ್ಗದ ವಿದ್ಯಾವಂತ ಯುವಜನರನ್ನು ಸೆಳೆಯಲು ಸಾಕಷ್ಟು ಕೊಡುಗೆ ನೀಡಿದ ಕಾರಣ ಇರಬಹುದು. ಡಿಜಿಟಲ್ ಇಂಡಿಯಾಗಾಗಿ ಕೇಂದ್ರ ಸರಕಾರವು ಟೊಂಕ ಕಟ್ಟಿ ನಿಂತಿದೆ. ಉಡಲೂ ತತ್ವಾರವಿರುವ ದೇಶದಲ್ಲಿ ಆಹಾರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಇಂತಹ ಜುಟ್ಟಿನ ಮಲ್ಲಿಗೆಗೆ ಬೇಕೆ ಎಂಬ ಪ್ರಶ್ನೆಯೂ ಎದ್ದು ನಿಂತಿದೆ. ಇರಲಿ! ಆಹಾರದ ಜೊತೆಗೆ ಇನ್ನೂ ಸಾಕಷ್ಟು ವಿಷಯಗಳಲ್ಲಿ ದೇಶವು ವೇಗವಾಗಿ ಸಾಗಬೇಕಾಗುತ್ತದೆ. ತನ್ನನ್ನು ತಾನು ಜಗತ್ತಿನ ಓಘಕ್ಕೆ ತೆರೆದುಕೊಳ್ಳಬೇಕಾಗುತ್ತದೆ.
ಆದರೆ ಇಲ್ಲಿ ಅನುಮಾನಾಸ್ಪದ ಪ್ರಸಂಗಗಳು ಪ್ರಧಾನಿಗಳ ಅಮೇರಿಕ ಭೇಟಿಯೊಂದಿಗೆ ನಡೆದಿವೆ. ಜಗತ್ತಿಗೆ ಭಾರತದ ಐಟಿ ಹೆಬ್ಬಾಗಿಲನ್ನು ಮೊದಲು ತೆರೆದವರು ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್. ಎಮ್ . ಕೃಷ್ಣ! ಬೆಂಗಳೂರನ್ನು ಸಿಂಗಾಪುರ ಮಾಡುವ ಘೋಷಣೆಯಲ್ಲಿ ಮೊಟ್ಟಮೊದಲು ಸಿಲಿಕಾನ್ ವ್ಯಾಲಿಗೆ ಎಡತಾಕಿದವರು. ಅಂದು ಅವರು ಹಾಕಿಕೊಟ್ಟ ದಾರಿಯಲ್ಲಿ ನೋಯಿಡಾ,ಕಲ್ಕತ್ತಾ, ಚೆನೈ, ಮುಂಬೈಗಳಲ್ಲಿ ಗಳು ಐ.ಟಿ ಕಂಪನಿಗಳು ಸಾಲುಗಟ್ಟಿದವು. ತಂತ್ರಜ್ಞಾನ ಕ್ಷೇತ್ರದಲ್ಲಿ ನೂರಿಪ್ಪತೈದು ಕೋಟಿ ಜನಸಂಖ್ಯೆಯುಳ್ಳ ದೇಶದ ಸುಪ್ತಸಾಮರ್ಥ್ಯ ಏನು ಎಂಬುದು ಜಗತ್ತಿಗೆ ಗೊತ್ತಾದದ್ದೇ ಆವಾಗ! ನಂತರ ಬಂದ ಮೊಬೈಲ್ ಕ್ರಾಂತಿ ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆಯ ಸಾಧ್ಯತೆಯನ್ನು ತಂತ್ರಜ್ಞಾನ ಆಧಾರಿತ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತೊಮ್ಮೆ ಸಾಬೀತುಪಡಿಸಿತು. ಚೀನಾ ತನ್ನ ತಂತ್ರಜ್ಞಾನ ಮಾರುಕಟ್ಟೆಯನ್ನು ಹೊರದೇಶದ ಕಂಪನಿಗಳಿಗೆ ಪ್ರವೇಶಾವಕಾಶದ ಮಿತಿಯನ್ನು ನಿಗ್ರಹಿಸುವುದರೊಂದಿಗೆ ಮತ್ತೆ ಈ ಕಂಪನಿಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆಯಾಗಿ ಮಾರ್ಪಟ್ಟಿತು. ಟಿ ವಿ ಮಾಧ್ಯಮದಂತೆಯೆ ಇಂಟರ್ ನೆಟ್ ಮಾಧ್ಯಮ ಕೂಡ ಜಾಹೀರಾತಿನೊಂದಿಗೆ ನಡೆಯುತ್ತದೆ. ಸಧ್ಯಕ್ಕೆ ಜಾಹೀರಾತಿನ ಮೂಲಕ ಸೈಬರ್ ಜಗತ್ತಿನಲ್ಲಿ ತನ್ನ ಅನಭಿಷಿಕ್ತ ಒಡೆತನವನ್ನು ಸ್ಥಾಪಿಸಿಕೊಂಡಿರುವುದು ಗೂಗಲ್ ಸಂಸ್ಥೆ. ಫೇಸ್ ಬುಕ್ ಕೂಡ ಜಾಹೀರಾತಿನಿಂದ ನಡೆಯುವ ಸಂಸ್ಥೆ. ಫೇಸ್ ಬುಕ್ ಪಾಲಿಗೆ ತನ್ನ ಪ್ರತಿಯೊಬ್ಬ ಬಳಕೆದಾರನೂ ಕೂಡ ಒಬ್ಬ ಹಣ ತಂದುಕೊಡುವ ಗ್ರಾಹಕ! ಗೂಗಲ್ ದೈತ್ಯನ ಮುಂದೆ ಫೇಸ್ ಬುಕ್ ಇನ್ನೂ ತಲೆ ಮಾಂಸ ಆರಿರದ ಕೂಸು! ಗೂಗಲ್ ನ ಆದಾಯ ಫೇಸ್ ಬುಕ್ ಗಿಂತ ಹತ್ತಾರು ಪಟ್ಟು ಹೆಚ್ಚು. ಗೂಗಲ್ ನ ಮುಂದೆ ತಲೆ ಎತ್ತಿ ನಿಲ್ಲಬೇಕಾದರೆ ಈ ಆದಾಯದ ಪ್ರಮಾಣವನ್ನು ಹೆಚ್ಚಿಸಿಕೊಳ್ಳವುದು ಫೇಸ್ ಬುಕ್ ಗೆ ಅನಿವಾರ್ಯ! ಇಲ್ಲಿ ಸಂಶಯಾಸ್ಪದ ನಡೆಗಳು ನಮಗೆ ಕಾಣಿಸುತ್ತವೆ. ಅಷ್ಟಕ್ಕೂ ಫೇಸ್ ಬುಕ್ ನ ಒಡೆಯ ಝುಕೆಂಬರ್ಗ್ ಮಹಾಶಯನಿಗೆ ಇದ್ದಕ್ಕಿದ್ದಂತೆ ಭಾರತದ ಹಳ್ಳಿಯ ಜನರ ಮೇಲೇಕಿಷ್ಟು ಪ್ರೀತಿ? ಅದೇಕೆ ಅವನಿಗೆ ಎಲ್ಲರಿಗೂ ಉಚಿತವಾಗಿ ಇಂಟರ್ ನೆಟ್ ಕೊಡಬೇಕು ಅಂತ ತೀವ್ರವಾಗಿ ಅನಿಸುತ್ತಿದೆ? ಉತ್ತರ ಅತ್ಯಂತ ನೇರ ಹಾಗು ಸಹಜವಾಗಿದೆ! ಕೊಂಚ ಹುಷಾರಾಗಿ ಓದಿ.. ಭಾರತ ದೇಶದಲ್ಲಿ ಇಂಟರ್ನೆಟ್ ಹೊಂದಿರುವವರ ಬಳಕೆದಾರರ ಸಂಖ್ಯೆ 35 ಕೋಟಿ, ಆದರೆ ಮೊಬೈಲ್ ಬಳಕೆದಾರರ ಸಂಖ್ಯೆ 96 ಕೋಟಿ! ಫೇಸ್ ಬುಕ್ ಗೆ ಕಂಪ್ಯೂಟರ್ ನಲ್ಲಿ ಇಂಟರ್ ನೆಟ್ ಬಳಕೆ ಮಾಡುವವರಿಗಿಂತ ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆ ಮಾಡುವವರ ಮೂಲಕ ಹೆಚ್ಚಿನ ಆದಾಯ ಬರುತ್ತದೆ. ಅಂದರೆ ಮೊಬೈಲ್ ಬಳಕೆದಾರರು ಹೆಚ್ಚು ಫೇಸ್ ಬುಕ್ ಬಳಸಿದಷ್ಟು ಹೆಚ್ಚು ಆದಾಯ ಝುಕೆಂಬರ್ಗ್ ಗೆ ಬರುತ್ತದೆ. ಈಗ ಝುಕೆಂಬರ್ಗ್ ಮೊಬೈಲ್ ಮೂಲಕ ಹೆಚ್ಚು ಜನರಿಗೆ ಇಂಟ್ ನೆಟ್ ತಲುಪಿಸಲು ಬಯಸುತ್ತಾರೆ. ಅಂದರೆ ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಸಲು ನೀವು ಇಂಟರ್ ನೆಟ್ ಕನೆಕ್ಷನ್ ಹೊಂದಿರಲೇಬೇಕು ಅಂತ ಏನೂ ಇಲ್ಲ.ನಿಮ್ಮ ಸಿಮ್ ಕಾರ್ಡ್ ಮೂಲಕ ಇಂಟರ್ ನೆಟ್ ಬಳಸಲು ಸಾಧ್ಯವಾಗುತ್ತದೆ! ಅಂದರೆ ನಿಮಗೆ ಇಂಟರ್ ನೆಟ್ ಸಂಪೂರ್ಣ ಉಚಿತ ಝುಕೆಂಬರ್ಗ್ ಪರವಾಗಿ! ಆದರೆ ಝುಕೆಂಬರ್ಗ್ ತಮ್ಮ ಅಂಕೆಗೊಳಪಟ್ಟ ಸುಮಾರು ಐವತ್ತು ಕಂಪನಿಗಳೊಡನೆ ಒಪ್ಪಂದ ಮಾಡಿಕೊಂಡು ಆ ಕಂಪನಿಗಳ ವೆಬ್ ಸೈಟನ್ನು ಮಾತ್ರ ಈ ಉಚಿತ ಇಂಟರ್ ನೆಟ್ ವ್ಯವಸ್ಥೆಯಲ್ಲಿ ಬಳಸಲು ಕೊಡುತ್ತಾರೆ. ಬೇರೆಲ್ಲ ವೆಬ್ ಸೈಟ್ ಗಳು ಬ್ಲಾಕ್ ಆಗಿರುತ್ತವೆ. ಸರಿ ತಪ್ಪೇನಿದೆ? ಮೊದಲೇ ಹೇಳಿದಂತೆ ಜಾಹೀರಾತು ಆಧಾರಿತ ವ್ಯವಸ್ಥೆಯಾದುದರಿಂದ ಬೇರೆ ಕಂಪನಿಯ ವೆಬ್ ಸೈಟ್ ಗಳು ಇಂಟ್ ನೆಟ್ ಹೊಂದಿರುವ ಶೇ26 ರಷ್ಟು ಜನರಿಗೆ ಮಾತ್ರ ತಲುಪಿದರೆ ಈ ಉಚಿತ ವ್ಯವಸ್ಥೆಯ ಮೂಲಕ ಶೇ.76 ಜನರನ್ನು ತಲುಪಬಹುದು! ಟಿ ಆರ್ ಪಿ ಹೆಚ್ಚಿದ್ದಷ್ಟು ಜಾಹೀರಾತಿನ ಬೆಲೆ ಏರಿಕೆಯಾಗುವ ಹಾಗೆ ಅತಿ ಹೆಚ್ಚು ಜನರನ್ನು ತಲುಪುವ ಈ ಐವತ್ತು ವೆಬ್ ಸೈಟ್ ಗಳಲ್ಲಿ ಜಾಹೀರಾತಿನ ಬೆಲೆ ಗಗನಕ್ಕೇರುತ್ತದೆ. ಈ ಉಚಿತ ನೆಟ್ ವರ್ಕ್ ಮುಖಾಂತರ ಜನರನ್ನು ತಲುಪಬೇಕಾದರೆ ಝುಕೆಂಬರ್ಗ್ ಎಂಬ ಹುಸಿ ರಾಜನಿಗೆ ಅವನು ಕೇಳಿದ ಬೆಲೆ ತೆರಬೇಕಾಗುತ್ತದೆ. ಸಹಜವಾಗಿಯೇ ಈ ಬೆಲೆ ತುಂಬಾ ದುಬಾರಿಯಾಗಿರುತ್ತದೆ. ಈ ಬೆಲೆ ತೆರಬಲ್ಲವರು ದೊಡ್ಡ ಬಂಡವಾಳ ಹೂಡಬಲ್ಲ ದೈತ್ಯ ಕಂಪನಿಗಳು ಮಾತ್ರ! ಅಲ್ಲಿಗೆ ಬೆಳೆಯಬಹುದಾದ ಸಣ್ಣ ಸ್ವದೇಶಿ ಕಂಪನಿಗಳು ಶಾಶ್ವತವಾಗಿ ಮುಚ್ಚಿ ಹೋಗುತ್ತವೆ. ಇದಕ್ಕಿಂತ ದೊಡ್ಡ ಅಪಾಯ ಎಂದರೆ ಅಲ್ಲದೇ ಉಚಿತ ಇಂಟರ್ ನೆಟ್ ಬಳಕೆದಾರರು ಅಕ್ಷರಷಃ ಝುಕೆಂಬರ್ಗ್ ನ ಗುಲಾಮರಾಗಿ ಹೋಗುತ್ತಾರೆ. ಉಚಿತವಾದುದರಿಂದ ಝುಕೆಂಬರ್ಗ್ ತೋರಿಸಿದ್ದನ್ನೇ ಇವರು ನೋಡಬೇಕು. ಈ ಮೂಲಕ ತನಗೆ ಬೇಕಾದ ರೀತಿಯಲ್ಲಿ ಜನರ ಅಭಿಪ್ರಾಯವನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಝುಕೆಂಬರ್ಗ್ ಗೆ ದೊರಕುತ್ತದೆ. ಕೇವಲ ಸಾಮಾಜಿಕ ಜಾಲತಾಣಗಳಿಂದಲೇ ಅಭಿಪ್ರಾಯ ರೂಪಿಸಿಕೊಂಡ ಅನೇಕ ಸಿನಿಮಾಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಇದು ರಾಜಕೀಯ, ಸಾಹಿತ್ಯ ಮತ್ತು ಶಿಕ್ಷಣವಲಯಕ್ಕೂ ವಿಸ್ತರಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಲ್ಲಿಗೆ ಪ್ರಜಾಪ್ರಭುತ್ವ ಎಂಬುದು ಮೂರಾಬಟ್ಟೆಯಾಗಿ ಹೋಗುತ್ತದೆ. ಅಮೇರಿಕದ ಸರ್ವಾಧಿಕಾರ ಸ್ಥಾಪನೆಯಾಗುತ್ತದೆ. ಇದಲ್ಲದೇ ಮತ್ತಿನ್ಯಾವ ಒಳಗುಟ್ಟುಗಳಿವೆ ಎಂಬುದು ಜನಸಾಮಾನ್ಯರಿಗೆ ಅರಿಯುವುದೂ ಅಸಾಧ್ಯ! ಅದೆಂತಹ ಅಪಾಯಕಾರಿ ನಾಗರ ಹುತ್ತಕ್ಕೆ ಡಿಜಿಟಲ್ ಇಂಡಿಯಾ ಮೂಲಕ ಕೈಹಾಕಿದ್ದೇವೆ ಎಂಬ ಅರಿವು ನಮಗೆ ಇದ್ದರೆ ಸಾಕು. ನಮ್ಮ ದೇಶದ ಸಾರ್ವಭೌಮತ್ವವನ್ನು ಕಾಪಿಡುವ ಹೊಣೆ ನಮ್ಮೆಲ್ಲರ ಕೈಲಿದೆ.