ಸದಸ್ಯ:Divyashree.s1910461/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿಸ್ತವಿದ್ಯಾಲಯ ಶಾಲೆ[ಬದಲಾಯಿಸಿ]

ಕ್ರಿಸ್ತವಿದ್ಯಾಲಯ ಶಾಲೆ
ಕ್ರಿಸ್ತವಿದ್ಯಾಲಯ ಶಾಲೆ

ಇತಿಹಾಸ:[ಬದಲಾಯಿಸಿ]

ಕ್ರಿಸ್ತವಿದ್ಯಾಲಯ ಎಂಬ ಶಾಲೆಯು ಕರ್ನಾಟಕ ರಾಜ್ಯದ, ಬೆಂಗಳೂರು ಜಿಲ್ಲೆಯ, ದಕ್ಷಿಣ ವಲಯ-೩ರ ಸುದ್ದುಗುಂಟೆಪಾಳ್ಯ,ಭಾರತಿ ಲೇಔಟ್, ೮ನೇ ಅಡ್ಡರಸ್ತೆ, ಡಿ.ಆರ್.ಸಿ ಪೋಸ್ಟ್, ವಾರ್ಡ್-೧೫೨ರಲ್ಲಿ ಇರುವ ಕನ್ನಡ ಮಾಧ್ಯಮ ಶಾಲೆ. ಈ ಶಾಲೆ ೧೯೮೫ರಲ್ಲಿ ಪ್ರಾರಂಭವಾಯಿತು.ಶಾಲೆ ಪ್ರಾರಂಭವಾದಾಗ ಕೇವಲ ೨೦ ವಿದ್ಯಾರ್ಥಿಗಳು ಮಾತ್ರ ಇದ್ದರು. ಆದರೆ ಈಗ ಈ ಶಾಲೆಯು ಬೆಳವಣಿಗೆಯ ಅನೇಕ ಮಜಲುಗಳನ್ನು ದಾಟುತ್ತಾ, ಸಾವಿರಾರು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತಾ ಕಳೆದ ೩೫ ವರ್ಷಗಳಿಂದ ವಿದ್ಯಾದಾನ ಮಾಡುತ್ತಾ ಬಂದಿದೆ. ಕ್ರಿಸ್ತ ವಿದ್ಯಾಲಯದ ಬಗ್ಗೆ ಕನಸು ಕಂಡ ವ್ಯಕ್ತಿ ಆಗಿನ ಚಾಂದ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಪರಮ ಪೂಜ್ಯ ವಿಜಯಾನಂದ್ ನಡುಂಬರಮ್ ಆಗಿದ್ದರು. ೧೯೮೫ರಲ್ಲಿ ಅವರು ಸಿ ಎಂ ಐ ಧರ್ಮಸಭೆಯ ಪ್ರಯರ್ ಜನರಲ್ ಕೂಡ ಆಗಿದ್ದರು. ಸುದ್ದುಗುಂಟೆ ಪಾಳ್ಯದಲ್ಲಿ ಒಂದು ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಧರ್ಮರಾಂ ಅವರನ್ನು ಕೋರಿದಾಗ ಅವರು ಮುಂದಿಟ್ಟ ಒಂದು ಬೇಡಿಕೆ ಆಂಗ್ಲ ಮಾಧ್ಯಮದ ಜೊತೆಗೆ ಬಡ ಮಕ್ಕಳಿಗಾಗಿ ಒಂದು ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಬೇಕು ಎಂಬುದಾಗಿತ್ತು. ಈ ಬೇಡಿಕೆಯು ೧೯೮೫ರಲ್ಲಿ ಈಡೇರಿತು. ಕ್ರಿಸ್ತ ವಿದ್ಯಾಲಯ ಜನ್ಮ ತಾಳಿತು. ಅಂದಿನಿಂದ ಇಂದಿನವರೆಗೆ ಇದ್ದ, ಇರುವ ಎಲ್ಲಾ ಫಾದರ್ ರವರುಗಳು ಫಾ|| ಥಾಮಸ್ ಐಕ್ಕರ, ಫಾ|| ಅಲೆಕ್ಸ್, ಫಾ|| ಬೋಸ್, ಫಾ|| ಅಂತೋನಿ ಪಯ್ಯಪ್ಪಿಳ್ಳಿ ಮುಂತಾದವರ ಪ್ರೋತ್ಸಾಹದಿಂದ ಈ ಶಾಲೆ ಬಡ ಮಕ್ಕಳಿಗೆ ಶಿಕ್ಷಣ ಕೊಡುವ ಕಾರ್ಯದಲ್ಲಿ ಸದಾ ಯಶಸ್ಸಿನ ದಾರಿ ಹಿಡಿದಿದೆ. ಕಳೆದ ೩೫ ವರ್ಷಗಳಲ್ಲಿ ಈ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಧರ್ಮರಾಂ ಕಾಲೇಜಿನ ರೆಕ್ಟರ್ ಆದ ಎಲ್ಲಾ ಫಾದರ್ ರವರುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾದುದ್ದು ಅತ್ಯಂತ ಸೂಕ್ತ. ಈ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿರಂತರವಾಗಿ ೩೦ ವರ್ಷಗಳ ಅವಿರತ ಸೇವೆ ಸಲ್ಲಿಸಿರುವ ಪೂಜ್ಯ ಫಾ|| ಅಂತೋನಿ ಪಯ್ಯಪ್ಪಿಳ್ಳಿ ಇವರ ದೂರದೃಷ್ಟಿ, ದೃಢ ನಿರ್ಧಾರ, ಧೈರ್ಯ , ಸಾಹಸ, ಬಡ ಮಕ್ಕಳ ಬಗೆಗಿರುವ ಪ್ರೀತಿ, ಸಹಕಾರ, ಉತ್ತಮ ಆಡಳಿತ ವೈಖರಿ ಇವು ಶಾಲೆಯನ್ನು ಬಾನಿನ ಎತ್ತರಕ್ಕೆ ಮುನ್ನಡೆಸಿದೆ. ಈ ಸಂಸ್ಥೆಯ ಏಳಿಗೆಗಾಗಿ ದುಡಿದ ಮತ್ತೋರ್ವ ವ್ಯಕ್ತಿ ಸಿಸ್ಟರ್ ಜೆಮ್ಮರವರು. ೧೯೮೯ರಲ್ಲಿ ಶಾಲೆಗೆ ಪಾದಾರ್ಪಣೆ ಮಾಡಿದ ಇವರು ೪ ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದರು. ಅದೇ ರೀತಿ ಸಿಸ್ಟರ್ ಜಾಯ್ಸ್ ಮರಿಯ ಅವರು ಈ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ೧೯೯೧ರಿಂದ ೨೦೧೬ರ ವರೆಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಮಕ್ಕಳ ಮತ್ತು ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಸೇವೆ ಸ್ಮರಣಿಯವಾದದ್ದು. ಅದೇ ರೀತಿ ಪ್ರಸ್ತುತ ಸಿಸ್ಟರ್ ಕಾರ್ಮಿನ್ ಅವರು. ಕ್ರಿಸ್ತ ವಿದ್ಯಾಲಯ ಶಾಲೆಯ ಮುಖೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಸಹ ಕ್ರಿಸ್ತ ವಿದ್ಯಾಲಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಕಟ್ಟಡ:[ಬದಲಾಯಿಸಿ]

ವಿಜ್ಞಾನ ಪ್ರಯೋಗಾಲಯ
ವಿಜ್ಞಾನ ಪ್ರಯೋಗಾಲಯ

ಕ್ರಿಸ್ತ ವಿದ್ಯಾಲಯ ಶಾಲೆಯು ಬೃಹತ್ ಕಟ್ಟಡವನ್ನು ಹೊಂದಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಉತ್ತಮ ಕೊಠಡಿಗಳನ್ನು ಒಳಗೊಂಡಿದೆ. ಅದೇ ರೀತಿ ಮಕ್ಕಳು ಆಟವಾಡಲು ಆಟದ ಮೈದಾನವನ್ನು ಹೊಂದಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಈ ಶಾಲೆಯಲ್ಲಿ ಕಲ್ಪಿಸಲಾಗಿದೆ. ಅಂದರೆ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಪ್ರಾರ್ಥನಾ ಕೊಠಡಿ, ಸಭಾಂಗಣ ಹೀಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಮಕ್ಕಳಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಮತ್ತು ಅದಕ್ಕೆ ತಕ್ಕಂತಹ ತರಬೇತಿ ಅವಶ್ಯಕವಾಗಿರುವುದರಿಂದ ನಮ್ಮ ಪೂಜ್ಯ ಫಾದರ್ ಅದಕ್ಕೆ ಪೂರಕವಾದಂತಹ ಸೌಲಭ್ಯಗಳನ್ನು, ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದಾರೆ ಹಾಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದಾರೆ. ಪ್ರತ್ಯೇಕವಾದ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ.

ಸಭಾಂಗಣ
ಸಭಾಂಗಣ






ಸಿಬ್ಬಂದಿ ವರ್ಗ:[ಬದಲಾಯಿಸಿ]

ಸಿಬ್ಬಂದಿ ವರ್ಗ
ಸಿಬ್ಬಂದಿ ವರ್ಗ

ಈಗ ಪ್ರಸ್ತುತ ಕ್ರಿಸ್ತ ವಿದ್ಯಾಲಯ ಶಾಲೆಯಲ್ಲಿ ೨೪ ಶಿಕ್ಷಕರು, ಇಬ್ಬರು ಮುಖ್ಯೋಪಾಧ್ಯಾಯರು, ೯ ಮಂದಿ ಶಿಕ್ಷಕೇತರ ಸಿಬ್ಬಂದಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಯಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣವನ್ನು, ಪರಿಣಿತಿಯನ್ನು ಹೊಂದಿರುವವರು. ಇಲ್ಲಿರುವ ಪ್ರತಿಯೊಬ್ಬ ಶಿಕ್ಷಕ ಕೂಡ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತ ಕ್ರಿಸ್ತ ವಿದ್ಯಾಲಯದ ಶಾಲೆಯ ಪ್ರಗತಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವುದು ಗುರುವಿನ ಕರ್ತವ್ಯ. 'ಅಕ್ಷರ ಮಾತ್ರಂ ಕಲಿಸಿದಾತಂ ಗುರು' ಎಂಬ ಮಾತಿದೆ. ಇದು ನನ್ನ ಶಾಲೆಯ ಶಿಕ್ಷಕರ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಭಾರತೀಯರು ಗುರುಗಳಿಗೆ ಬಹು ಪೂಜ್ಯನೀಯ ಸ್ಥಾನವನ್ನು ನೀಡಿದ್ದಾರೆ.ನಮ್ಮ ಬದುಕಿನಲ್ಲಿ ಗುರುವಿನ ಪಾತ್ರ ಅತ್ಯಮೂಲ್ಯವಾದದ್ದು. ಒಂದು ಮಗು ಸಮಾಜದಲ್ಲಿ ಬದುಕಿ ಬಾಳಿ ಹೆಸರನ್ನು ಗಳಿಸಲು ತಾಯಿ ಎಷ್ಟು ಮುಖ್ಯವೋ ಅಷ್ಟೇ ಗುರುಗಳೂ ಕೂಡ ಮುಖ್ಯ. ಮಕ್ಕಳಲ್ಲಿ ಶಿಸ್ತನ್ನು ಬೆಳೆಸಿ, ಉತ್ಸಾಹವನ್ನು ತುಂಬಿ ಅವರ ಶಾರೀರಿಕ ಮತ್ತು ಮಾನಸಿಕ, ನೈತಿಕ ಬೆಳವಣಿಗೆಯ ಕಡೆಗೆ ಹೆಚ್ಚು ಗಮನ ಹರಿಸುವಲ್ಲಿ ಶಿಕ್ಷಕರು ಶ್ರಮದಿಂದ ದುಡಿಯುತ್ತಿದ್ದಾರೆ. ಮಕ್ಕಳ ಕಲಿಕೆಯ ಗುರಿ, ಪರೀಕ್ಷೆಯಲ್ಲಿ ಉತ್ತಮ ಮಟ್ಟದಲ್ಲಿ ತೇರ್ಗಡೆ ಹೊಂದುವುದಕ್ಕೆ ಸಹಾಯ ಮಾಡುವುದಷ್ಟೇ ಅಲ್ಲದೆ ಉತ್ತಮ ಮೌಲ್ಯಗಳನ್ನು ಬೆಳೆಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಕಾರ್ಯವು ಶಾಲೆಯಲ್ಲಿ ನಡೆಯುತ್ತಿದೆ. ಮಕ್ಕಳಲ್ಲಿ ಪ್ರಾಮಾಣಿಕತೆ, ನಿಷ್ಠೆ, ಧೈರ್ಯ , ಸ್ವಾವಲಂಬನೆ ಮುಂತಾದ ಗುಣಗಳನ್ನು ಬೆಳೆಸುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಶಾಲೆಯಲ್ಲಿರುವ ಎಲ್ಲಾ ಶಿಕ್ಷಕರು ತಮ್ಮ ತಮ್ಮ ವಿಷಯದಲ್ಲಿ ಹೆಚ್ಚಿನ ಪರಿಣಿತಿಯನ್ನು ಹೊಂದಿದ್ದು ಮಕ್ಕಳು ಎಲ್ಲಾ ವಿಷಯಗಳಲ್ಲಿ ಉತ್ತಮ ಪ್ರತಿಭೆಯನ್ನು ಹೊಂದುವಂತೆ ಮಾಡಿದ್ದಾರೆ. ಇದಕ್ಕೆಲ್ಲಾ ಪ್ರಮುಖ ಕಾರಣಕರ್ತರು ಶಾಲೆಯ ಮುಖ್ಯೋಪಾಧ್ಯಾಯರಾದ ಫಾ|| ಅಂತೋನಿ ಪಯ್ಯಪ್ಪಿಳ್ಳಿಯವರು. ಇವರ ಸಹಕಾರ, ತಾಳ್ಮೆ, ಪ್ರೀತಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾದರಿಯಾಗಿದೆ. ಈ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದಕ್ಕೆ ಪ್ರಮುಖ ಕಾರಣ ಈ ಸಂಸ್ಥೆಯ ಸಿಬ್ಬಂದಿ ವರ್ಗದ ಪ್ರಾಮಾಣಿಕ ದುಡಿಮೆ ಎಂದರೆ ತಪ್ಪಾಗಲಾರದು.

ಆಟದ ಮೈದಾನ
ಆಟದ ಮೈದಾನ

ಪಠ್ಯೇತರ ಚಟುವಟಿಕೆಗಳು:[ಬದಲಾಯಿಸಿ]

ಈ ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ.ಕ್ರಿಸ್ತ ವಿದ್ಯಾಲಯದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ವಿಧವಾದ ಸಹಾಯ, ಸಹಕಾರ ಹಾಗೂ ಅವಕಾಶಗಳನ್ನು ನೀಡಲಾಗುತ್ತದೆ. ಮಕ್ಕಳಿಗೆ ನಾಟಕ, ನೃತ್ಯ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಹಾಡುಗಾರಿಕೆ, ಚಿತ್ರಕಲೆ, ಆಶುಭಾಷಣ, ಪ್ರಬಂಧ ರಚನೆ, ಆಟೋಟ ಸ್ಪರ್ಧೆಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರ ಹೊಮ್ಮಲು ಸಾಧ್ಯವಾಗುತ್ತಿದೆ. ಜೊತೆಯಲ್ಲಿ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಮೌಲ್ಯ ಶಿಕ್ಷಣ, ಶಿಸ್ತು, ಸಮಯ ಪರಿಪಾಲನೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿದೆ. ವರ್ಷದ ಪ್ರಾರಂಭದಲ್ಲಿ ೪ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ಮಕ್ಕಳನ್ನು ಕೆಂಪು, ನೀಲಿ, ಹಳದಿ ಹಾಗೂ ಹಸಿರು ತಂಡಗಳೆಂದು ನಾಲ್ಕು ತಂಡಗಳಾಗಿ ವಿಂಗಡಿಸಿ ಅವುಗಳ ಮುಂದಾಳತ್ವವನ್ನು ಶಿಕ್ಷಕರಿಗೆ ವಹಿಸಿಕೊಡಲಾಗುತ್ತದೆ. ವರ್ಷದ ಕೊನೆಯಲ್ಲಿ ಮಕ್ಕಳಿಗಾಗಿ ಪ್ರತಿಭಾ ದಿನಾಚರಣೆಯನ್ನು ಆಚರಿಸಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ. ಅಷ್ಟೇ ಅಲ್ಲದೆ ಪ್ರಸ್ತುತ ಶಾಲೆಯಲ್ಲಿ ೩:೧೫ ರಿಂದ ೪:೦೦ ಗಂಟೆಯವರೆಗೆ ಪಠ್ಯೇತರ ಚಟುವಟಿಕೆಗಳಾದ ಯೋಗ, ನೃತ್ಯ, ಚಿತ್ರಕಲೆ, ನಾಟಕ, ಸಂಗೀತ, ಕ್ರೀಡೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಶಾಲೆಯ ಎಲ್ಲಾ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡುತ್ತಿದ್ದಾರೆ. ಅಂತರ್ ಶಾಲೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡುತ್ತಾ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಪ್ರತಿಭೆಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಲು ಸಹಾಯ ಮಾಡುತ್ತಿದ್ದಾರೆ. ಚರ್ಚಾಸ್ಪರ್ಧೆ, ರಸಪ್ರಶ್ನೆ, ಚಿತ್ರಕಲೆ, ನೃತ್ಯ, ರಂಗೋಲಿ, ಕ್ರೀಡೆ ಹೀಗೆ ಹಲವಾರು ಅಂತರ್ ಶಾಲೆ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿರುವುದು ಕೂಡ ಇದೆ. ಇದರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ ಹಾಗೂ ಅವರ ಯಶಸ್ಸಿಗೆ ಪುಟ್ಟ ಹೆಜ್ಜೆಯನ್ನಿಡಲು ಕಾರಣವಾಗುತ್ತ ಭವಿಷ್ಯದಲ್ಲೂ ಯಶಸ್ವಿ ವ್ಯಕ್ತಿಗಳಾಗಲು ಸಹಾಯ ಮಾಡುತ್ತದೆ.

ವಿಶೇಷ ಸೌಲಭ್ಯಗಳು:[ಬದಲಾಯಿಸಿ]

ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ, ಸಾಯಂಕಾಲ ಹಾಲು ವಿತರಣೆಯನ್ನು ಮಾಡಲಾಗುತ್ತದೆ.ವೈದ್ಯಕೀಯ ತಪಾಸಣೆ:ಮಕ್ಕಳಿಗೆ ಶಿಸ್ತು ಎಷ್ಟು ಮುಖ್ಯವೋ ಶುಚಿತ್ವವೂ ಕೂಡ ಅಷ್ಟೇ ಮುಖ್ಯ. ಶುಚಿಯಾಗಿ ಶಾಲೆಗೆ ಬರಲು ಬೇಕಾದ ಸೂಚನೆಗಳನ್ನು ನಿರಂತರವಾಗಿ ಮಕ್ಕಳಿಗೆ ನೀಡುತ್ತಿದ್ದಾರೆ. ವರ್ಷಕ್ಕೆ ಎರಡು ಬಾರಿ ಶಾಲೆಯಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸುತ್ತಾರೆ. ವೈದ್ಯರು ಮಕ್ಕಳನ್ನು ಕಂಡು ಅವರ ಆರೋಗ್ಯಕ್ಕೆ ಸಂಬಂಧಿಸಿದಂತಹ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಹೊಲಿಗೆ ತರಬೇತಿ:ಶಾಲೆಯ ಸುತ್ತ ಮುತ್ತ ಇರುವ ಬಡ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಶಾಲೆಯಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪ್ರೌಢ ಶಾಲೆಯ ಮಕ್ಕಳಿಗೂ ಕೂಡ ಈ ತರಬೇತಿಯನ್ನು ನೀಡಲಾಗುತ್ತದೆ. ಮಕ್ಕಳಿಗೆಶಾಲೆಯು ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ ಮುಂತಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದುವರಿಯಲು, ಪ್ರಗತಿಯನ್ನು ಸಾಧಿಸಲು ಸದಾ ಶ್ರಮಿಸುತ್ತಿದೆ.

ಕಂಪ್ಯೂಟರ್ ಲ್ಯಾಬ್
ಕಂಪ್ಯೂಟರ್ ಲ್ಯಾಬ್





ಪರೀಕ್ಷೆಗಳು:[ಬದಲಾಯಿಸಿ]

ಒಂದು ವರ್ಷದ ಅವಧಿಯಲ್ಲಿ ೬ ಉಪಪರೀಕ್ಷೆಗಳು ನಡೆಯುತ್ತವೆ. ಈ ಪರೀಕ್ಷೆಗಳ ಅಂಕಗಳು ಯಥಾಕಾಲಕ್ಕೆ ಅಂಕಪಟ್ಟಿಗಳಲ್ಲಿ ತುಂಬಿಸಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಶಿಕ್ಷಕರು ಮತ್ತು ಪೋಷಕರ ಭೇಟಿ ಕಾರ್ಯಕ್ರಮ ನಡೆಯುತ್ತದೆ. ಪೋಷಕರು ಸಂಬಂಧಪಟ್ಟ ಅಧ್ಯಾಪಕರನ್ನು ಕಂಡು ತಮ್ಮ ಮಕ್ಕಳ ಪ್ರಗತಿಯ ಬಗ್ಗೆ ಚರ್ಚಿಸಿ ಅವರಿಂದ ಸಲಹೆಯನ್ನು ಸ್ವೀಕರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಆಚರಣೆಗಳು:[ಬದಲಾಯಿಸಿ]

ಪ್ರತಿ ವರ್ಷ ಶಾಲೆಯನ್ನು ಮೇ ೨೯ರಿಂದ ಪ್ರಾರಂಭಿಸಲಾಗುತ್ತದೆ. ಅಂದಿನಿಂದ ಶಾಲೆಯಲ್ಲಿ ಜೂನ್ ೧೫ರಂದು ಶಾಲೆಯ ಪ್ರಾಂಶುಪಾಲರ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನಾಚರಣೆ, ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆ, ನವೆಂಬರ್ ೧೪ರಂದು ಮಕ್ಕಳ ದಿನಾಚರಣೆ, ಡಿಸೆಂಬರ್ ೨೩ರಂದು ಕ್ರಿಸ್ಮಸ್ ಆಚರಣೆ ಮತ್ತು ಪ್ರತಿಭಾ ದಿನಾಚರಣೆಯನ್ನು ಆಚರಿಸುತ್ತಾರೆ. ಜನವರಿ ತಿಂಗಳಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ. ಜೊತೆಗೆ ಶಾಲಾವತಿಯಿಂದ ಅಂತರಕಾಲೇಜು ಸ್ಪರ್ಧೆಯನ್ನು ಕೂಡ ಏರ್ಪಡಿಸಿ ದ ರಾ ಬೇಂದ್ರೆ ಕವನಗಾಯನ ಸ್ಪರ್ಧೆ, ಪ್ರಬಂಧ ರಚನೆ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಿ ಬೇರೆ ಶಾಲೆಯ ಮಕ್ಕಳಿಗೂ ಕೂಡ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಪ್ರವಾಸ:[ಬದಲಾಯಿಸಿ]

ಪ್ರತಿ ವರ್ಷ ಈ ಶಾಲೆಯಲ್ಲಿ ನಮ್ಮ ಪೂಜ್ಯ ಫಾದರ್ ಅವರು ಶೈಕ್ಷಣೀಯ ಪ್ರವಾಸವನ್ನು ಕೈಗೊಳ್ಳುತ್ತಾರೆ. ವಿಶೇಷವಾಗಿ ಹತ್ತನೇ ತರಗತಿಯ ಮಕ್ಕಳನ್ನು ಪ್ರತಿವರ್ಷ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೊರ ರಾಜ್ಯಗಳಾದ ರಾಜಸ್ಥಾನ, ದೆಹಲಿ, ಗುಜರಾತ್, ತಮಿಳುನಾಡು, ಕೇರಳ ಹೀಗೆ ಅಲ್ಲಿರುವ ಪ್ರವಾಸಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ಇತ್ತೀಚಿಗೆ ೩ ವರ್ಷಗಳಿಂದ ಮಕ್ಕಳನ್ನು ಹೊರ ರಾಜ್ಯಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿಮಾನದಲ್ಲೂ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಶಾಲೆಯ ಶುಲ್ಕ ಪಾವತಿಸುವುದೇ ಕಷ್ಟವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಈ ರೀತಿ ವಿಮಾನ ಪ್ರಯಾಣದ ಅವಕಾಶ ಕಲ್ಪಿಸಿಕೊಟ್ಟಾಗ ಅವರಿಗೂ ತುಂಬಾ ಸಂತೋಷವಾಗುತ್ತದೆ ಹಾಗೂ ಅವರ ಜೀವನದ ಅತ್ಯಂತ ಸುಂದರ ಹಾಗೂ ನೆನಪಿನ ದಿನಗಳಾಗಿ ಉಳಿಯುತ್ತದೆ.

ಶಿಕ್ಷಣ:[ಬದಲಾಯಿಸಿ]

ಗ್ರಂಥಾಲಯ
ಗ್ರಂಥಾಲಯ

ಪ್ರಸ್ತುತ ಈ ಶಾಲೆಯಲ್ಲಿ ೧ ರಿಂದ ೧೦ನೇ ತರಗತಿಯವರೆಗೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ.ಸುಮಾರು ೬೫೦ ರಿಂದ ೭೦೦ ವಿದ್ಯಾರ್ಥಿಗಳು ಈ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಕ್ರಿಸ್ತ ವಿದ್ಯಾಲಯ ಶಾಲೆಯಲ್ಲಿ ನಾನು ಕಂಡಂತೆ ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ವಿಶೇಷ ಸಂಗತಿ ಎಂದರೆ ಬೇರೆ ಶಾಲೆಗಳಿಗೆ ಹೋಲಿಸಿದರೆ ನಮ್ಮ ಶಾಲೆಯಲ್ಲಿ ಶಾಲಾ ಶುಲ್ಕ ತುಂಬಾ ಕಡಿಮೆ. ಕಡಿಮೆ ಶುಲ್ಕವನ್ನು ತೆಗೆದುಕೊಂಡು ಬಡಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಸಮವಸ್ತ್ರದಿಂದ ಹಿಡಿದು ಪುಸ್ತಕಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ವಿತರಿಸುತ್ತಾರೆ. ಅಷ್ಟೆ ಅಲ್ಲದೆ ವಿದ್ಯಾರ್ಥಿಗಳು ಕೂಡ ಪ್ರತಿವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಾರೆ. ಪ್ರತೀ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿರುವುದು ಗಮನಾರ್ಹ. ೪-೫ ಬಾರಿ ಶೇಕಡ ೧೦೦ ರಷ್ಟು ಫಲಿತಾಂಶವೂ ಕೂಡ ಬಂದಿದೆ. ಮಕ್ಕಳ ಈ ಸಾಧನೆಗೆ ಶಾಲೆ ನೀಡುತ್ತಿರುವ ಪ್ರೋತ್ಸಾಹ, ಶಿಕ್ಷಕರ ಅವಿರತ ಸೇವೆಯೇ ಕಾರಣ ಎಂದರೆ ತಪ್ಪಾಗಲಾರದು.

ಮಕ್ಕಳ ಸಾಧನೆ:[ಬದಲಾಯಿಸಿ]

ಕ್ರಿಸ್ತ ವಿದ್ಯಾಲಯ ಎಂಬ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ಮುಂದೆ ಉನ್ನತ ಶಿಕ್ಷಣವನ್ನು ಮುಗಿಸಿದ ಎಷ್ಟೋ ಮಕ್ಕಳು ಸಮಾಜದ ಎಷ್ಟೋ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು, ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಎಂಜಿನಿಯರಿಂಗ್, ವೈದ್ಯಕೀಯ, ಶಿಕ್ಷಣ , ಪೊಲೀಸ್ ಇಲಾಖೆ, ರೆವೆನ್ಯೂ, ಉನ್ನತ ಉದ್ಯಮಗಳು, ಉಪನ್ಯಾಸಕರು, ನೃತ್ಯ ಕಲಾವಿದರು, ನಾಟಕ ಕ್ಷೇತ್ರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಗಳ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇದು ಶಾಲೆಗೆ ಮತ್ತು ತಂದೆ ತಾಯಿಗೆ ಬಹಳ ಹೆಮ್ಮೆಯ ಮತ್ತು ಸಂತೋಷದ ಸಂಗತಿ. ನಮ್ಮ ಶಾಲೆಯಲ್ಲಿ ಓದಿರುವ ರತ್ನಮಂಜರಿ, ಸಿ. ಪಿ. ಮಂಜುನಾಥ್ ( ಉಪನ್ಯಾಸಕರು), ಡಾ|| ರೇಖಾ (ವೈದ್ಯಕೀಯ ಇಲಾಖೆ), ಮಂಜುನಾಥ ಬಡಿಗೇರ (ನಾಟಕ ಕ್ಷೇತ್ರ) , ಭೈರೇಗೌಡ (ಎಂಜಿನಿಯರಿಂಗ್ ಕ್ಷೇತ್ರ) ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಸ್ತುತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆಯನ್ನು ಮಾಡುತ್ತಿರುವ ಕ್ರಿಸ್ತ ವಿದ್ಯಾಲಯ ಶಾಲೆಗೆ ಏಸುಕ್ರಿಸ್ತರ ವರಪ್ರಸಾದ ಸದಾ ಇದ್ದೆ ಇರುತ್ತದೆ. ಪ್ರಸ್ತುತ ಬೆಂಗಳೂರು ದಕ್ಷಿಣ ವಲಯ-೩ರಲ್ಲಿ ಕ್ರಿಸ್ತ ವಿದ್ಯಾಲಯ ಪ್ರತಿಷ್ಠಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದಾಗಿದೆ ಹಾಗೂ ಇದಕ್ಕೆ ಪ್ರಮುಖ ಕಾರಣ ಎಂದರೆ ಶಾಲೆಯ ಏಳಿಗೆಗಾಗಿ ದುಡಿಯುತ್ತಿರುವ ಫಾ|| ಅಂತೋನಿ ಪಯ್ಯಪ್ಪಿಳ್ಳಿ ಅವರು. ಅವರ ಜೊತೆಗೆ ಶಿಕ್ಷಕರು ಮತ್ತು ಮಕ್ಕಳು ಕೈ ಜೋಡಿಸಿ ಈ ಶಾಲೆಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುತ್ತಿರುವುದು ಗಮನಾರ್ಹ.


<ɾ>Geetha, G. N. (2020, June 2). Christha vidyalaya [Telephone interview]</ɾ>

<ɾ>Anthony Swamy, M. (2020, June 2). Christha vidyalaya [Telephone interview]</ɾ>