ಸದಸ್ಯ:Dinesha M/ನನ್ನ ಪ್ರಯೋಗಪುಟ8
ಚಂದ್ರನಾಥ ಸ್ವಾಮಿ ದಿಗಂಬರ ಜೈನ ಬಸದಿ, ಚಾರ
ಮಾರ್ಗ
[ಬದಲಾಯಿಸಿ]ಬಹು ಪ್ರಾಚೀನ ಈ ಬಸದಿಯು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಹೆಬ್ರಿ ಗ್ರಾಮದ ಚಾರ ಎಂಬಲ್ಲಿದೆ. ಹಿಂದೊಮ್ಮೆ ಸಾವಿರಾರು ಸಂಖ್ಯೆಯ ಜನ ನಿವಾಸಗಳನ್ನು ಹೊಂದಿದ್ದ ಈ ಸ್ಥಳವನ್ನು ಅಂಗಡಿ ಶಹರಾ ಎಂದು ಕರೆಯುತ್ತಿದ್ದರಂತೆ.ಇದು ಹೆಬ್ರಿ ಬೀಡಿನಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ.
ಇತಿಹಾಸ
[ಬದಲಾಯಿಸಿ]ಬಾರಕೂರು ಅರಸೊತ್ತಿಗೆಗೆ ಸೇರಿದ ಹಾಗೂ ಸುರಾಲು ಅರಮನೆಯ ಅಧೀನದಲ್ಲಿದ್ದ ಈ ಚಂದ್ರನಾಥಸ್ವಾಮಿಯ ಜೈನಬಸದಿಯನ್ನು ಸಮಾರು ೯೦೦ ವರ್ಷಗಳ ಹಿಂದೆ ಮಾದಂಣ ಸೆಟ್ಟಿ ಮತ್ತು ಹೊಸಬು ಸಹೋದರರು ಕಟ್ಟಿಸಿದರು ಎಂದು ಹೇಳಲಾಗಿದೆ. ಬಾರಕೂರು, ಹೊಯ್ಸಳರ ಮತ್ತು ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಬಹಳ ಉತ್ತಮ ಸ್ಥಿತಿಯಲ್ಲಿದ್ದ ಈ ಬಸದಿಯು ಮುಂದೆ ಸುರಾಲು ಅರಮನೆಯವರಿಂದ ನಡೆಸಲ್ಪಡುತ್ತಿತ್ತು. ಇದರ ಶಿಲ್ಪಕಲೆಯು ಬಹಳ ಆಕರ್ಷಕವಾಗಿದ್ದು, ಈ ಜಲ್ಲೆಯ ಕೆಲವೇ ಜಿನಾಲಯಗಳಲ್ಲಿ ಇಷ್ಟು ಸುಂದರವಾದ ಶಿಲ್ಪಕಲಾಕೃತಿಗಳನ್ನು ಕಾಣಬಹುದಾಗಿದೆ.[೧]
ಆರಾಧನೆ
[ಬದಲಾಯಿಸಿ]ಇಲ್ಲಿ ಬ್ರಹ್ಮದೇವರು, ಯಕ್ಷಿ ಜ್ವಾಲಾಮಾಲಿನಿ, ಕ್ಷೇತ್ರಪಾಲ, ನಾಗದೇವರು, ಧರ್ಮದೇವತೆಗಳು, ಪಟ್ಟದ ಪಂಜುರ್ಲಿ, ಕಲ್ಕುಡ, ವರ್ತೆ, ಬೊಬ್ಬರ್ಯ ಮುಂತಾದವರು ಆರಾಧಿಸಲ್ಪಡುತ್ತಿದ್ದಾರೆ. ಬಸದಿಯಲ್ಲಿ ನಡೆಯುವ ಪೂಜೆಗಾಗಿ ಎರಡು ಪಾರಿಜಾತ ಹೂವಿನ ಗಿಡಗಳು, ಅಶೋಕ ಗಿಡ, ಗುಲಾಬಿ, ದಾಸವಾಳ ಇತ್ಯಾದಿ ಹೂಗಳ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಬಸದಿಯನ್ನು ಪ್ರವೇಶಿಸುವ ಪ್ರಮುಖದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಮೊದಲು ಸಿಗುವ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಒಂದು ಒಳಮಂಟಪವಿದೆ ಅಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಮೊದಲು ಸಿಗುವ ಚಂದ್ರಶಾಲೆಯನ್ನು ಬಸದಿಗೆ ಬಂದವರು ಕುಳಿತುಕೊಳ್ಳಲಿಕ್ಕಾಗಿ ಉಪಯೋಗಿಸುತ್ತಾರೆ. ಒಳಗಿನ ತೀರ್ಥಂಕರ ಮಂಟಪದಲ್ಲಿ ಗಂಧಕುಟಿಯಿದೆ. ಅಲ್ಲಿಯೂ ಕೆಲವು ಮೂರ್ತಿಗಳಿದ್ದು ಪೂಜಿಸಲ್ಪಡುತ್ತಿವೆ. ಇಲ್ಲಿರುವ ಒಂದು ಪ್ರಮುಖ ಸಾನ್ನಿಧ್ಯವೆಂದರೆ ಶ್ರೀ ಜ್ವಾಲಾಮಾಲಿನಿ ದೇವಿ, ಭಯಭಕ್ತಿಯಿಂದ ಪೂಜಿಸಬೇಕಾದ ಜಿನ ಶಾಸನದೇವತೆ ಇವರು. ಅದರಂತೆ ಇಲ್ಲಿ ಶ್ರೀ ಪದ್ಮಾವತಿ ಅಮ್ಮನವರೂ ಪೂಜಿಸಲ್ಪಡುತ್ತಿದ್ದಾರೆ. ಯಥಾಪ್ರಕಾರ ಸೀರೆ ಉಡಿಸಿ, ಬಳೆ ಹಾಕಿ, ಶೃಂಗಾರಗೊಳಿಸಿ ಪೂಜೆಯನ್ನು ನಡೆಸಲಾಗುತ್ತದೆ. ಕೊನೆಯಲ್ಲಿ ಪ್ರಸಾದ ಅಥವಾ ಅಪ್ಪಣೆಯನ್ನು ಕೇಳುವ ಕ್ರಮವೂ ಇದೆ. ಕೆಲವು ಕಷ್ಟ ಪರಿಹಾರಕ್ಕಾಗಿ ಹರಕೆಗಳನ್ನು ಹೇಳಿ ಪ್ರಾರ್ಥನೆಯನ್ನು ನಡೆಸಲಾಗುತ್ತದೆ. ಕಾರ್ಯವು ಕೈಗೂಡಿದರೆ ಹರಕೆಯನ್ನು ಸಮರ್ಪಿಸಿ ಪೂಜೆಯನ್ನು ನಡೆಸಲಾಗುತ್ತದೆ.
ಶಿಲಾ ವಿಶೇಷತೆ
[ಬದಲಾಯಿಸಿ]ಗರ್ಭಗೃಹದಲ್ಲಿ ವಿರಾಜಮಾನರಾಗಿರುವ ಮೂಲಸ್ವಾಮಿ ಭಗವಾನ್ ಚಂದ್ರನಾಥ ಸ್ವಾಮಿ ಶಿಲೆಯ ಬಿಂಬದಲ್ಲಿ ಸನ್ನಿಹಿತರಾಗಿದ್ದಾರೆ. ಶಿಲೆಯ ಬಿಂಬ ಸುಮಾರು ನಾಲ್ಕುವರೆ ಅಡಿ ಎತ್ತರವಿದೆ. ಪರ್ಯಂಕಾಸನ ಭಂಗಿ, ಮಕರ ತೋರಣವಿರುವ ಪ್ರಭಾವಳಿಯಿದೆ. ಹತ್ತು ವರ್ಷಗಳ ಹಿಂದೆ ಬಿಂಬಕ್ಕೆ ವಜ್ರಲೇಪನ ಮಾಡಿ, ಇನ್ನಷ್ಟು ಸುಂದರಗೊಳಿಸಲಾಗಿದೆ. ಈ ಸನ್ನಿಧಾನದಲ್ಲಿಯೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವ ಪದ್ಧತಿ ಇದೆ.
ಪೂಜೆ
[ಬದಲಾಯಿಸಿ]ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿ ಪೂಜೆ ನಡೆಸಲಾಗುತ್ತದೆ. ಆನವರಿ ಕೊನೆಯ ವಾರದಲ್ಲಿ ವಾರ್ಷಿಕ ಪೂಜೆಯನ್ನು ನೆರವೇರಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೮೫.