ಸದಸ್ಯ:Dinesha M/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೦೦೮ ಪಾರ್ಶ್ವನಾಥ ಸ್ವಾಮಿ ಶ್ರೀ ಜ್ವಾಲಾಮಾಲಿನಿ ದೇವಿ ಬಸದಿ, ಗೇರುಸೊಪ್ಪೆ

	ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗು ಮಹಾಮಾತೆ ಶ್ರೀ ಜ್ವಾಲಮಾಲಿನಿ ದೇವಿಯ ಈ ಬಸದಿಯನ್ನು ಹಿರೇ ಬಸದಿ ಎಂದೂ ಕರೆಯುತ್ತಾರೆ.

ಸ್ಥಳ ಮತ್ತು ಮಾ‍ರ್ಗ[ಬದಲಾಯಿಸಿ]

ಹೊನ್ನಾವರದಿಂದ ೩೯ಕಿ.ಮೀ ದೂರದಲ್ಲಿ ಶರಾವತಿ ಮತ್ತು ಕ¯ಕಟ್ಟೆ ನದಿಯ ಬಳಿಯಲ್ಲಿದೆ. ಗೇರುಸೊಪ್ಪೆ ಸರ್ಕಲ್‌ನಿಂದ ಬಸದಿಗೆ ೭ ಕಿ.ಮೀ ದೂರ. ಗೇರುಸೊಪ್ಪೆ ಪೇಟೆಯಿಂದ ದೋಣಿ ಮುಖಾಂತರ ಬರುವುದಾದರೆ ೧ ಕಿ.ಮೀ ದೂರ. ದೋಣಿ ದಾಟಿ ನಡೆದುಕೊಂಡು ಬರುವುದಾದರೆ ಗೇರುಸೊಪ್ಪೆ ಸರ್ಕಲ್‌ನಿಂದ ಮುಂದೆ ಜೋಗ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋದಾಗ ಎಡಭಾಗದಲ್ಲಿ ಅರಣ್ಯ ಇಲಾಖೆಯವರ ಸಿಂಗಳಿಕ ಪಾರ್ಕ್ ಇದೆ. ಅಲ್ಲೇ ಮುಂದೆ ಬಲಭಾಗದಲ್ಲಿ ಡ್ಯಾಂ ಸೈಟಿಗೆ ಹೋಗುವ ದಾರಿಯಿದೆ. ಅದೇ ರಸ್ತೆಯಲ್ಲಿ ಸೇತುವೆ ದಾಟಿ ಮುಂದೆ ಹೋದಾಗ ಸದಿಗೆ ಹೋಗುವ ರಸ್ತೆ ಸಿಗುತ್ತದೆ. ಆ ರಸ್ತೆ ಇಲ್ಲಿಗೇ ಬರುತ್ತದೆ. ಇದುವೇ ಈ ಗೇರುಸೊಪ್ಪೆಯ ಈ ಬಸದಿಗಳ ಸಮುಚ್ಛಯಕ್ಕೆ ಬರುವ ದಾರಿ. ಇದು ಈ ವರೆಗೆ ವಿವರಿಸಿದ ಬಸದಿಗಳ ಹತ್ತಿರದಲ್ಲೇ ಇದೆ. ಇದರ ಪೋಸ್ಟಲ್ ಮಾಹಿತಿ: ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಜ್ವಾಲಾಮಾಲಿನಿ ದೇವಿ ಬಸದಿ, ಬಸದಿ ಕೇರಿ, ನಗರಬಸದಿ ಕೇರಿ ಅಂಚೆ, ಗೇರುಸೊಪ್ಪೆ – ೫೮೧೩೮೪, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ.

ಇತಿಹಾಸ[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ ಇಲ್ಲಿ ಶ್ರೀ ಸಮಂತಭದ್ರಾಚಾರ್ಯರ ಮಠ ಇತ್ತೆಂದು ಹೇಳುತ್ತಾರೆ. ಇತಿಹಾಸದಲ್ಲಿ ಈ ಕ್ಷೇತ್ರದ ರಾಜಗುರು ಮೂಡುಬಿದಿರೆಯ ಭಟ್ಟಾರಕರು ಎಂಬ ಉಲ್ಲೇಖ ಇದೆ. ಇದು ಸಾದ್ವಿ ಮಠಕ್ಕೆ ಹತ್ತಿರದಲ್ಲಿರುವುದರಿಂದ ಯಾವುದೇ ದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆದಾಗ ಅವರ ಮಾರ್ಗದರ್ಶನ ಕೇಳಿ ಅದರಂತೆ ಇಲ್ಲಿಯವರು ನಡೆದುಕೊಳ್ಳುತ್ತಾರೆ. ಹಿಂದೆ ಇಲ್ಲಿ ಶ್ರೀ ಜಿನ್ನಯ್ಯ ಜ್ವಾಲಯ್ಯ ಶೆಟ್ಟಿ ಎಂಬವರಿದ್ದರು. ನಂತರ ಅವರ ಮಗನಾದ ಶ್ರೀ ಚಂದಯ್ಯ ಶೆಟ್ಟಿಯವರು ಇದನ್ನು ನಡೆಸಿಕೊಂಡು ಹೋದರು. ಈಗ ಅವರ ಮಕ್ಕಳಾದ ನಾಗರಾಜ ಚಂದಯ್ಯ ಶೆಟ್ಟಿ ಸಹೋದರರು ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಕಾಲ[ಬದಲಾಯಿಸಿ]

ಈ ಬಸದಿಯು ಕ್ರಿ.ಶ. ೯ನೇ ಶತಮಾನದಿಂದ ಇದೆ ಎಂದು ಹೇಳುತ್ತಾರೆ. ಇದಕ್ಕೆ ಸಂದಂಧಿಸಿದ ಬೇರೆ ಬೇರೆ ಶಿಲಾ ಶಾಸನಗಳಿದ್ದು ಅವುಗಳ ಅಧ್ಯಾಯನದಿಂದ ಈ ಬಸದಿಯ ಹಿನ್ನಲೆಯ ಕುರಿತು ನಿಖರವಾಗಿ ತಿಳಿದುಬಂದೀತು. ಈ ಬಸದಿಯ ಪೂರ್ಣ ಪ್ರಮಾಣದ ಜೀರ್ಣೋದ್ಧಾರ ಕಾರ್ಯ ನಡೆದಿಲ್ಲ. ಆದರೆ ಸದ್ಯ ಬಹಳ ಉತ್ತಮ ಸ್ಥಿತಿಯಲ್ಲಿದೆ.[೧]

ಆಡಳಿತ[ಬದಲಾಯಿಸಿ]

ಜೈನರಾದ ಸಾಳ್ವ ಅರಸು ಮನೆತನದ ರಾಜರು ಈ ಕ್ಷೇತ್ರದ ಆಡಳಿತ ನಡೆಸಿದ ಬಗ್ಗೆ ಅನೇಕ ಶಿಲಾಶಾಸನಗಳಲ್ಲಿ ಉಲ್ಲೇಖಿಸಿದ್ದು ಈ ಅರಸು ಮನೆತನದ ಕೊನೆಯ ರಾಣಿಯಾದ ರಾಣಿ ಚೆನ್ನಭೈರಾದೇವಿಯ ಕಾಲದಲ್ಲಿ ಅನೇಕ ಜಿನ ಮಂದಿರಗಳು ದೇವಾಲಯಗಳು ನಿರ್ಮಾಣವಾಗಿದ್ದವೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಅವಳ ಕಾಲದಲ್ಲಿಯೆ ಈ ಬಸದಿ ಕೂಡ ನಿರ್ಮಾಣವಾಗಿರಬೇಕು.

ಸ್ಥಿತಿ[ಬದಲಾಯಿಸಿ]

ಈಗ ಬಸದಿಯು ಹಂಚಿನ ಮಾಡನ್ನು ಹೊಂದಿದ್ದು, ಮೇಲಿನ ನೆಲೆಯನ್ನು ಹೊಂದಿಲ್ಲ. ಹಿಂದೆ ಮಾನಸ್ತಂಭ ಇತ್ತಂತೆ, ಈಗ ಇಲ್ಲ. ಪಾರಿಜಾತ ಹೂವಿನ ಗಿಡ ಮೊದಲು ಇತ್ತು, ಈಗ ಇಲ್ಲ. ಈಗ ಬೇರೆ ಹೂವಿನ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಚಂದ್ರಶಾಲೆ ಇದ್ದಿರುವುದಕ್ಕೆ ಪಳೆಯುಳಿಕೆ ಇದೆ. ಈಗ ಬಸದಿ ಪ್ರವೇಶಿಸಿದೊಡನೆ, ಪ್ರಾರ್ಥನಾ ಮಂಟಪ ಸಿಗುತ್ತದೆ. ಮುಂದೆ ಶುಕನಾಸಿ ಇದೆ.

ಐತಿಹಾಸಿಕ ವಿಶೇಷತೆ[ಬದಲಾಯಿಸಿ]

ಗಂಧ ಕುಟಿ ಇರಬೇಕಾದ ಈ ಸ್ಥಳದಲ್ಲಿ ಶ್ರೀ ಕೂಷ್ಮಾಂಡಿನಿ ದೇವಿ ಮತ್ತು ಶ್ರೀ ಬ್ರಹ್ಮ ದೇವರ ದೊಡ್ಡ ಮೂರ್ತಿಗಳಿವೆ. ಗರ್ಭಗುಡಿಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಿಂಬವಿದೆ. ಮಹಾಮಾತೆ ಪದ್ಮಾವತಿ ದೇವಿಯು ಖಡ್ಗಾಸನದಲ್ಲಿದ್ದು, ಉತ್ತರ ದಿಕ್ಕಿಗೆ ಮುಖಮಾಡಿದೆ. ಈ ದೇವಿಗೆ ಸೀರೆ ಉಡಿಸಿ ಬಳೆ ತೊಡಿಸಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಅಮ್ಮನವರ ಕಾಲಿನ ಬಳಿ ಕುಕ್ಕುಟ ಸರ್ಪ ಇದೆ. ಬಸದಿಯಲ್ಲಿ ಅಡಿಕೆ ಹೂವಿನಿಂದ ಪ್ರಸಾದ ಕೇಳುವ ಪದ್ಧತಿ ಇದೆ. ಒಮ್ಮೆ ತಿಳಿಯದೆ ಅಮ್ಮನವರ ಮೂರ್ತಿಯನ್ನು ಸ್ವಚ್ಛಗೊಳಿಸಲೆಂದು ಪೀಠದಿಂದ ತಂದು ಬಾವಿ ಕಟ್ಟೆಯ ಮೇಲೆ ಜಿನ್ನಯ್ಯ ಶೆಟ್ಟಿಯವರು ಇರಿಸಿ ಸ್ವಚ್ಛಗೊಳಿಸಿದರು. ನಂತರ ಅಮ್ಮನವರ ಬಿಂಬವನ್ನು ಮೇಲಕ್ಕೆ ಎತ್ತಲು ಸಾಧ್ಯವಾಗಲಿಲ್ಲ. ಆಗ ಊರಿನ ಹಿರಿಯರು ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ ತಾಯಿಗೆ ಇಪ್ಪತೊಂದು ಕಾಯಿ ಒಪ್ಪಿಸುವುದಾಗಿ ಹರಕೆಮಾಡಿಕೊಂಡ ನಂತರ ಮೂರ್ತಿಯ ಭಾರವು ಕಡಿಮೆಯಾಗಿ ಎತ್ತಲು ಸಾಧ್ಯವಾಯಿತು. ಬಸದಿಯ ಗೇಣಿದಾರರಾದ ಈಶ್ವರ ನಾಯ್ಕ ಎಂಬವರು ಹಿಂದೆ ಚಂದಯ್ಯ ಶೆಟ್ಟಿಯವರು ಪೂಜೆ ಮಾಡುವ ಸಮಯದಲ್ಲಿ ಬಸದಿಗೆ ಆರು ಚೆಂಬು ಎಣ್ಣೆ ಮತ್ತು ಆರು ಮಾನಿಗೆ ಅಕ್ಕಿ ದೇವರ ನೈವೇದ್ಯಕ್ಕೆ ಕೊಡಬೇಕಾಗಿತ್ತು. ದೀಪ ಹಚ್ಚಲು ಎಣ್ಣೆಗೆ ತೊಂದರೆಯಾದಾಗ ಚಂದಯ್ಯ ಶೆಟ್ಟರು ಎರಡು ಮೂರು ಸಾರಿ ಕೇಳಿದರೂ ಅವರು ಎಣ್ಣೆ ಕೊಡಲು ತಡ ಮಾಡಿದರು. ತಿರುಗಿ ತಿರುಗಿ ಕೇಳಿ ಸಾಕಾಗಿ ಎಣ್ಣೆ ನೀನೆ ತರಿಸಿಕೋ ಎಂದು ಶೆಟ್ಟರು ಪ್ರಾರ್ಥಿಸಿಕೊಂಡರAತೆ. ನಂತರ ಗೇಣಿದಾರರಿಗೆ ಎರಡು ಕಣ್ಣುಗಳು ಸರಿಯಾಗಿ ಕಾಣಿಸದಂತೆ ಆಗಿ ಮನುಷ್ಯರ ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವರು ಬೇರೆ ದೇವಾಲಯದಲ್ಲಿ ವಿಚಾರಿಸಿದಾಗ ಅಮ್ಮನವರ ಬಸದಿಗೆ ಸರಿಯಾಗಿ ಎಣ್ಣೆ ಕೊಡು ಎಂದು ತಿಳಿಸಿದರು. ನಂತರ ತಪ್ಪಿನ ಅರಿವಾಗಿ ಅಮ್ಮನವರಲ್ಲಿ ಕ್ಷಮೆ ಕೇಳಿ, ಎಣ್ಣೆ ಅರ್ಪಿಸಿದರು. ನಂತರ ಅವರ ಕಣ್ಣುಗಳು ಸರಿಯಗಿ ಕಾಣಲಾರಂಭವಾಯಿತು.

ಶಿಲಾ ವಿನ್ಯಾಸ[ಬದಲಾಯಿಸಿ]

ಬಸದಿಯ ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ ಕಪ್ಪುಶಿಲೆ, ಪದ್ಮಾಸನ ಭಂಗಿಯ ಸುಂದರ ಮೂರ್ತಿಯಲ್ಲಿ ವಿರಾಜಮಾನರಾಗಿದ್ದಾರೆ. ಮಕರ ತೋರಣ, ಪೀಠ ಸೇರಿ ೫ ಅಡಿ ಎತ್ತರವಿದ್ದು, ಪ್ರತಿದಿನ ಪಂಚಾಮೃತಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ ನಡೆಯುತ್ತದೆ. ವಾರ್ಷಿಕೋತ್ಸವವು ದಸರಾ ಸಮಯದಲ್ಲಿ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ೧೦೮ ಕಲಶದ ಅಭಿಷೇಕ, ನವಕಲಶ, ಕಬ್ಬಿನ ಹಾಲು, ಗಂಧ, ಅರಶಿನ ಮತ್ತು ಚಂದನದ ಅಭಿಷೇಕ, ನವಗ್ರಹ ಶಾಂತಿ, ಕಲಿಕುಂಡ ಆರಾಧನೆ, ವಜ್ರ ಪಂಜರ ಆರಾಧನೆ ಮುಂತಾದ ಆರಾಧನೆಗಳು ನಡೆಯುತ್ತವೆ. ಮಹಾಮಾತೆ ಜ್ವಾಲಮಾಲಿನಿ ಅಮ್ಮನವರಿಗೆ ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತವರು, ವಿವಾಹಕ್ಕಾಗಿ ಹರಕೆ ಹೊತ್ತವರು ಬಂದು ಹರಕೆ ಸಲ್ಲಿಸುತ್ತಾರೆ. ದೇವಸ್ಥಾನದ ಹಿಂಬದಿ ಬಲ ಮೂಲೆಯಲ್ಲಿ ಕ್ಷೇತ್ರಪಾಲ ಸನ್ನಿಧಿಯಿದ್ದು ಅಲ್ಲಿ ಜಟ್ಟಿಗ, ನಾಗ, ವೀರಭದ್ರ, ಮಣಿಭದ್ರ, ಮಹಾಸತಿ ಮತ್ತು ಬ್ರಹ್ಮಯಕ್ಷನ ಮೂರ್ತಿಗಳಿವೆ. ಅವೆಲ್ಲವನ್ನು ಒಂದು ಮುರಕಲ್ಲಿನ ಪೀಠದ ಮೇಲಿಟ್ಟು ಪೂಜಿಸಲಾಗುತ್ತಿತ್ತು. ಈಗ ಆ ಪೀಠವು ಬಹಳ ಶಿಥಿಲಗೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೩೯೨.