ಸದಸ್ಯ:Dhanya holla/ನನ್ನ ಪ್ರಯೋಗಪುಟ 4
ಬಿಲ್ಲವರು
[ಬದಲಾಯಿಸಿ]ಬಿಲ್ಲವರು ತುಳುನಾಡಿನ ಮೂಲ ನಿವಾಸಿಗಳು. ತಮ್ಮದೇ ಪ್ರಾಚೀನ ಸಂಸ್ಕ್ರತಿ ಆಚರಣೆ ಸಂಪ್ರದಾಯವನ್ನು ಹೊಂದಿರುವ ದೈವಾರಾಧಕರು. ನಾಗಾರಾಧಕರು, ಭೂತಾರಾಧನೆಯ ಮೂಲ ಪುರುಷರು. ತುಳುನಾಡಿನ ಇತಿಹಾಸದಲ್ಲಿ ಬಿಲ್ಲವರ ಪಾತ್ರ ಮಹತ್ತರವಾದುದು. ಇವರನ್ನು ಪೂಜಾರಿ, ಪೂಜಾರ್ಮೆ, ಬಿಲ್ಲವ, ಬಿರುವ, ಬಿರ್ವೆ ಎಂದು ಕೂಡ ಕರೆಯುತ್ತಾರೆ. ಬಿಲ್ಲವ ಎಂಬ ಶಬ್ದ ಬೇಟೆಗಾರ ಎಂಬ ಶಬ್ದದಿಂದ ಬಂದಿರುವುದು. ಇವರು ಅರಸರ ಬೇಟೆಗಾರ ಯೋಧರು ಆಗಿದ್ದರು.
ಹಿನ್ನಲೆ
[ಬದಲಾಯಿಸಿ]ಬಿಲ್ಲವರು ದೈವದ ಆರಾಧಕರಾಗಿ ದೀಕ್ಷಾಬದ್ಧರಾಗಿ ಸೇವಾ ಕಾರ್ಯನಿರ್ವಹಿಸಿಕೊಂಡ ಕಾರಣದಿಂದ ಅವರಿಗೆ ಪೂಜಾರಿ ಎಂಬ ಉಪನಾಮ ಬಂದಿದೆ. ದೈವ ದೇವರುಗಳ ನೇಮ ಪರ್ವ ಆಚರಣೆಗಳಲ್ಲಿ ಬಿಲ್ಲವರಿಗೆ ಬಹಳ ಪ್ರಾಚೀನ ಕಾಲದಿಂದಲೂ ಪ್ರಧಾನ ಪಾತ್ರವಿದೆ. ಬಿಲ್ಲವರು ಪುರಾತನ ಕಾಲದಿಂದಲೂ ನಾಟಿ ವೈದ್ಯರಾಗಿ, ಬಿಲ್ಲವ ಮಹಿಳೆಯರು ಹೆಸರಾಂತ ಸೂಲಗಿತ್ತಿಯರಾಗಿ ಹೆಸರು ಪಡೆದವರು ಇವರು ತಮ್ಮ ನಿಷ್ಕಾಮ ಸೇವೆಯಿಂದ ಜನಾನುರಾಗಿಗಳಾಗಿದ್ದರು. ವೈದ್ಯ ವೃತ್ತಿಯಿಂದ ಬಿಲ್ಲವರಿಗೆ ಬೈದ್ಯ ಎಂಬ ಉಪನಾಮ ಬಂದಿದೆ. ವೈದ್ಯನಾಥ ದೈವದ ಆರಾಧನೆಯ ಸಂಧರ್ಭದಲ್ಲಿ ಬಿಲ್ಲವ ಜನಾಂಗದ ಪೂಜಾರಿಯೊಬ್ಬರು ಗಿಡಮೂಲಿಕೆಯ ಔಷಧಿಗಳನ್ನು ಮಣ್ಣಿನ ಪಾತ್ರಯಲ್ಲಿ ತುಂಬಿಸಿ ಅದರ ಮೇಲ್ಭಾಗವನ್ನು ಬಟ್ಟೆಯಲ್ಲಿ ಕಟ್ಟಿ ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ಆರಾಧನೆಯ ಸಂಧರ್ಭದಲ್ಲಿ ವೈದ್ಯನಾಥ ದೈವದ ಜೊತೆಯಲ್ಲಿ ಪ್ರದಕ್ಷಿಣೆ ಬರುವ ಸಂಪ್ರದಾಯ ಈಗಲೂ ಕೆಲವು ಕಡೆಗಳಲ್ಲಿ ಅಸ್ತಿತ್ವದಲ್ಲಿದೆ.
ಇತಿಹಾಸ
[ಬದಲಾಯಿಸಿ]ಬಿಲ್ಲವರು ದೇಶದ ಒಟ್ಟು ಜನಸಂಖ್ಯೆಯ 1/5ರಷ್ಟಿರುವರು. ಈ ದ್ರಾವಿಡ ಜನಾಂಗದವರು ಕ್ರಿಸ್ತ ಪೂರ್ವದಲ್ಲಿ ಅಥವಾ ಅನಂತರದ ಕಾಲದಲ್ಲಿ ಉತ್ತರ ಸಿಂಹಳದಿಂದ ದಕ್ಷಿಣ ಭಾರತದ ಮಲಬಾರ್ ಕರಾವಳಿಗೆ ಬಂದಿರಬಹುದು. ಇವರು ಹಿಂದಿನ ಕಾಲದಲ್ಲಿ ಅರಸರ ಸೈನ್ಯದಲ್ಲಿ ಬಿಲ್ಲುಗಾರರಾಗಿದ್ದದರು. ತುಳು ಭಾಷಿಗರಾದ ಇವರು ಶೇಂದಿ ಇಳಿಸುವ ವೃತ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಬಿಲ್ಲವರಲ್ಲಿ 16 ಬಳಿಗಳಿವೆ. ಅದು ಪುನಃ ಉಪ ಬಳಿಗಳಾಗಿ ವಿಂಗಡನೆಯಾಗಿದೆ. ಬಿಲ್ಲವನು ತನ್ನ ತಂಗಿಯ ಮಗಳನ್ನು ಮತ್ತು ತಾಯಿಯ ಸೋದರಿಯ ಮಗಳನ್ನು ಮದುವೆಯಾಗುವುದಿಲ್ಲ. ತನ್ನ ಸೋದರ ಮಾವನ ಮಗಳನ್ನು ಮದುವೆಯಾಗುವರು. ಇಬ್ಬರು ಅಕ್ಕ ತಂಗಿಯರಿಗೆ ಅಥವಾ ಅಣ್ಣ ತಮ್ಮಂದಿರಿಗೆ, ಅಣ್ಣ ತಂಗಿಗೆ ಒಟ್ಟಿಗೆ ಮದುವೆ ಮಾಡುವರು.
ಸಂಪ್ರದಾಯ
[ಬದಲಾಯಿಸಿ]ಮದುವೆಯ ನಿಶ್ಚಿತಾರ್ಥ ಸಂಧರ್ಭದಲ್ಲಿ ವಧು ದಕ್ಷಿಣೆ ನಿಗದಿಯಿದೆ. ಮದುವೆಗೆ ಕೆಲವು ದಿವಸ ಮೊದಲು ವಧುವಿನ ಮಾವ ಅಥವಾ ಗುರಿಕಾರರು ವಧುವಿನ ಕುತ್ತಿಗೆಗೆ ಬಂಗಾರದ ಆಭರಣವನ್ನು ಕಟ್ಟುವರು. ಧಾರೆ ಎರೆಯುವ ಸಂಧರ್ಭದಲ್ಲಿ ಮೂಗುತ್ತಿಯನ್ನು ವಧುವಿನ ಅಂಗೈಯಲ್ಲಿ ಇಟ್ಟು ಅದರ ಮೇಲೆ ನೀರನ್ನು ಧಾರೆ ಎರೆಯಲಾಗುವುದು. ಸೀಮಂತ, ತೊಟ್ಟಿಲು ಹಾಕುವುದು, ಪ್ರಸವ ಸಮಯದ ಆಚರಣೆಗಳು ಇತರ ತುಳುವ ಜಾತಿಯವರಂತೆಯೇ ಇದೆ ಸಮಾಜ ಭಾಂಧವರ ಕುಲ ಪಂಚಾಯಿತಿಯಲ್ಲಿ ಊರಿನ ಸಮಾಜದ ಪ್ರಮುಖರು ಉಪಸ್ಥಿತರಿರುವರು. ಜಾತಿ ಭಾಂಧವರ ಎಲ್ಲಾ ವಿವಾದಗಳನ್ನು ಇಲ್ಲಿ ಪರಿಹರಿಸಲಾಗುತ್ತದೆ. ಪಂಚಾಯಿತಿಯ ನಿರ್ಣಗಳನ್ನು ಒಪ್ಪದವರನ್ನು ಜಾತಿಯಿಂದ ಬಹಿಷ್ಕರಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲೂ ಇವರ ಭೂತಸ್ಥಾನವಿದೆ. ಸಮಾಜದಲ್ಲಿ ಅಸಮಾನ್ಯರಾಗಿ ಬಾಳಿ ಬದುಕಿ ಅಸಮಾನ್ಯತೆಯನ್ನು ತೋರಿದವರ ಗುಡಿಗಳು ಜೊತೆಗೆ ಕಾಡಿನ ದೈವಗಳು, ಗುಡಿಕಾಯುವ ದೈವಗಳು, ಜನರಿಗೆ ಉಪದ್ರ ನೀಡುವ ದೈವಗಳು, ಜನರಿಗೆ ರೋಗಭಾದೆ ಹಾಗೂ ಸಂಕಷ್ಟ ನೀಡುವ ದೈವಗಳ ಭೂತಸ್ಥಾನಗಳಿವೆ. ಕೆಲವು ಕುಟುಂಬಗಳಿಗೆ ಪರ್ವ, ಕೆಲವು ದೈವಗಳಿಗೆ ಪ್ರಾಣಿಯ ರಕ್ತ ಬಲಿ ನೀಡುವರು. ಪ್ರತಿಯೊಂದು ಕುಟುಂಬಗಳಲ್ಲೂ ಕುಟುಂಬದ ದೈವವಿದೆ. ಭೂತಸ್ಥಾನದೊಳಗೆ ತಾಮ್ರದಿಂದ ಮಾಡಿದ ಭೂತದ ಪ್ರತಿಮೆಗಳು ಅಥವಾ ಆಕಾರಗಳಿರುವುದು. ಇವುಗಳು ಮಾನಾವಾಕೃತಿ ಇಲ್ಲವೆ ಹಂದಿ, ಹುಲಿ ಅಥವಾ ಹಕ್ಕಿಯ ರೂಪದಲ್ಲಿದೆ. ಆಚರಣೆಯ ಸಂಧರ್ಭದಲ್ಲಿ ಇವುಗಳನ್ನು ಹೊರಕ್ಕೆ ತಂದು ವಿವಿಧ ಭೂತಗಳ ಆಕೃತಿಯೆಂದು ಆರಾಧಿಸಲಾಗುವುದು. ಭೂತದ ಆರಾಧನೆಯ ಸಂಧರ್ಭದಲ್ಲಿ ಪೂಜಾರಿ ಅರ್ಚಕನು ದೊಡ್ಡ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಭೂತವನ್ನು ಮೈಮೇಲೆ ಆಹ್ವಾನಿಸಿಕೊಂಡು ಜನರ ಮುಂದೆ ನಡುಗುತ್ತಾ ಅವೇಶಕ್ಕೆ ಒಳಗಾಗುವನು, ಮಣಿ ಅಥವಾ ಆ ಜಾಗಟೆಯನ್ನು ಹಿಡಿದುಕೊಳ್ಳುವನು. ಬಿಲ್ಲವರ ಹೆಚ್ಚಿನ ಮನೆಗಳಲ್ಲಿ ಭೂತದ ಗುಡಿ ಅಥವಾ ಬೈದರ್ಕಳ ಗರಡಿ ಇರುತ್ತದೆ.
ಕಲ್ಲರ್ಟಿ ಬಂಟ ಬಿಲ್ಲವರು ಆರಾಧಿಸುವ ಪ್ರಮುಖ ದೈವ. ಇನ್ನೆರಡು ಪ್ರಮುಖ ದೈವಗಳು ಕೋಟಿಬೈದ್ಯ ಮತ್ತು ಚೆನ್ನಯ್ಯ ಬೈದ್ಯ. ಇವರಿಗೆ ಬಿಲ್ಲವ ಅರ್ಚಕರಿರುವರು. ಜೊತೆಗೆ ರಾವುಗುಳಿಗ , ಎತ್ತಿನ ಮುಖವಾಡದ ಮೈಸಂದಾಯ, ಕುದುರೆಯ ಮೇಲೆ ಕುಳಿತ ಜಾರಂದಾಯ, ಹಂದಿಯ ಮುಖವಾಡದ ಪಂಜುರ್ಲಿ, ಬೃಹತ್ ಆಕಾರದ ಮೂರ್ತಿಯ ಬೈದೆರ್ಲು ದೈವದ ಆರಾಧನೆಯನ್ನು ಮಾಡುತ್ತಾರೆ. ಬಿಲ್ಲವರು ಶೇಂದಿ ಇಳಿಸುವ ಕಾಯಕದ ಜೊತೆ ಕೃಷಿಕರು. ಸ್ವಂತ ಕೃಷಿ ಜಮೀನು ಹೊಂದಿದವರು. ತುಳುನಾಡಿನ ಇತರ ಮೂಲನಿವಾಸಿಗಳಂತೆ ಬಿಲ್ಲವರು ಮಾತೃ ಪ್ರಧಾನ ಕುಟುಂಬ ಪದ್ದತಿಯನ್ನು ಅನುಸರಿಸಿಕೊಂಡು ಬಂದವರು. ಅಳಿಯ ಕಟ್ಟಿನ ಈ ಪದ್ದತಿಯಲ್ಲಿ ತಾಯಿಗೆ ಮತ್ತು ಸೋದರ ಮಾವನಿಗೆ ಪ್ರಮುಖ ಸ್ಥಾನವಿದೆ. ಹಿಂದಿನ ಕಾಲದಲ್ಲಿ ಆಸ್ತಿ ಸಂಪತ್ತುಗಳು, ಮನೆಯ ಯಜಮಾನಿಕೆ ಹಿರಿಯ ಮಹಿಳೆಯ ಅಧೀನದಲ್ಲಿತ್ತು. ಆಸ್ತಿಯನ್ನು ತಮ್ಮೋಳಗೆ ಉಳಿಸಿಕೊಳ್ಳುವ ಸಲುವಾಗಿ ಕುಟುಂಬದ ಒಳಗೆ ಮದುವೆ ಸಂಭಂಧ ಎರ್ಪಡಿಸಲಾಗುತ್ತಿತ್ತು. ಪುರುಷ ಹಾಗೂ ಮಹಿಳೆಯರಲ್ಲಿ ಮರು ಮದುವೆಯ ಸಂಪ್ರದಾಯವಿತ್ತು. ಕೃಷಿ ಪ್ರಧಾನ ಕಾಲದಲ್ಲಿ ಅವಿಭಕ್ತ ಕುಟುಂಬ ಪದ್ದತಿಯಿತ್ತು. ಮಾಂಸಹಾರಿ ಆಹಾರವನ್ನು ತಯಾರಿಸಿ ತಮ್ಮ ಆರಾಧ್ಯ ದೈವಗಳಿಗೆ, ಪಿತೃಗಳಿಗೆ ಅರ್ಪಿಸಿ ಅನಂತರ ತಾವು ಸೇವಿಸುವ ಕ್ರಮವಿದೆ.
ಭೂತಾರಾಧನೆಯ ಸಂಧರ್ಭದಲ್ಲಿ ಹಾಡಲ್ಪಡುವ ಪಾಡ್ದನ ಅಥವಾ ಸಂಧಿ ಎಂಬ ತುಳು ಮೌಖಿಕ ಸಾಹಿತ್ಯವು ತುಳು ಜನಪದದಲ್ಲಿ ತಲಾತಲಾಂತರದಿಂದ ಉಳಿದು ಹರಿದು ಬಂದ ಶ್ರೇಷ್ಟ ಈತಿಹಾಸಿಕ ಚರಿತ್ರೆಯೂ ಹೌದು. ತುಳುನಾಡಿ ಕ್ರೀಡೆಯಾದ ಕೋಳಿ ಅಂಕದಲ್ಲಿ ಬಿಲ್ಲವರು ಆಸಕ್ತಿ ವಹಿಸುತ್ತಿದ್ದರು. ಕಂಬಳದ ಕೋಣವನ್ನು ಸಾಕುವುದು , ಕೋಣ ಓಡಿಸುವುದು ಮುಂತಾದವುಗಳಲ್ಲಿ ನೈಪುಣ್ಯತೆಯನ್ನು ಪಡೆದ ಸಾಕಷ್ಟು ಸಂಖ್ಯೆಯ ಬಿಲ್ಲವರು ಈಗಲೂ ಇದ್ದಾರೆ. ಹಲವು ಪ್ರತಿಷ್ಟಿತ ಮನೆತನಗಳಲ್ಲಿ ಇಂದಿಗೂ ಓಟದ ಕೋಣಗಳನ್ನು ಸಾಕುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಹವ್ಯಾಸ ರೂಢಿಯಲ್ಲಿದೆ. ಕುಟುಂಬ ಪದ್ಧತಿಯ ಅವನತಿಯೊಂದಿಗೆ ಜಮೀನುಗಳು ವಿಭಾಗಗಳಾಗಿ ಆಧುನಿಕರಣದಲ್ಲಿ ಜನರು ಬೇರೆ ಬೇರೆ ಉದ್ಯೋಗಗಳನ್ನು ಅವಲಂಬಿಸಿ ಕೃಷಿಯ ಪ್ರಾಧ್ಯಾನ್ಯತೆ ಕಡಿಮೆಯಾಯಿತು. ತುಳುನಾಡಿನ ಐತಿಹಾಸಿಕ ಪರಂಪರೆಯಲ್ಲಿ ಹಲವು ಮೂಲನಿವಾಸಿಗಳನ್ನು ಕಾಣಬಹುದು. ಅವರನ್ನು ಬೆರ್ಮೆರ್ ಎಂದು ಕರೆಯುತ್ತಾರೆ. ಬೆರ್ಮೆರ್ ಎಂದರೆ ತುಳುನಾಡಿನ ಮೂಲ ನಿವಾಸಿಗಳಾದ ಮುಗೇರ, ಮನ್ಸ, ಬಿಲ್ಲವ, ಕುಲಾಲ, ಗಾಣಿಗ, ಮಡಿವಾಳ ಮುಂತಾದ ವರ್ಗದವರÀ ಆರಾಧ್ಯ ದೈವ ಅಥವಾ ಕುಲದೈವ. ಅಸಾಮಾನ್ಯ ಸಾಧನೆ ತೋರಿ ಭೂತಾರಾಧನೆಯ ಮೂಲಕ ಆರಾಧನೆಗೊಳಪಟ್ಟವರು ಕೋಟಿಚೆನ್ನಯ, ಮುದ್ದ ಕುಲಲ(ಮೋಗೇರರರು) ಕೋಡ್ದಬ್ಬು ತನ್ನಿಮಾನಿಗ, ಕಾನದಕಟದ, ಕಲ್ಲುರ್ಟಿ ಕಲ್ಕುಡ ಕೊರಗತನಿಯ ಮುಂತಾದವರು. 15ನೇ ಶತಮಾನದ ಮಧ್ಯಭಾಗದಲ್ಲಿ ಅಂದರೆ ಸುಮಾರು 460 ವರ್ಷಗಳ ಹಿಂದೆ ತುಳುನಾಡಿನಲ್ಲಿ ವೀರರಾಗಿ ಬಾಳಿ ಬದುಕಿ ತಮ್ಮದೆ ಇತಿಹಾಸ ಸೃಷ್ಟಿಸಿದ ಅವಳಿ ವೀರರು ಕೋಟಿ ಚೆನ್ನಯರು. ಇವರನ್ನು ಬಿಲ್ಲವರು ತಮ್ಮ ಪ್ರಮುಖ ಅರಾಧ್ಯ ದೈವವಾಗಿ ಪೂಜಿಸುತ್ತಾರೆ. ತಿರುಪತಿ ತಿಮ್ಮಪ್ಪನಿಗೆ ಹುಂಡಿ ಕಾಣಿಕೆ ಸಲ್ಲಿಸುವ ಪದ್ದತಿ ಬಿಲ್ಲವರಲ್ಲಿ ಬಹಳ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಕುಟುಂಬದ ಮೂಲಸ್ಥಾನಗಳಲ್ಲಿ ದೈವಸ್ಥಾನಗಳಲ್ಲಿ ವರ್ಷಾವಧಿ ನೇಮ, ಪರ್ವ, ಆಚರಣೆಗಳ ಸಂಧರ್ಭದಲ್ಲಿ ನಿಗದಿತ ದಿನದಂದು ಕುಟುಂಬದ ಸದಸ್ಯರು ಒಟ್ಟು ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ತಿರುಪತಿ ತಿಮ್ಮಪ್ಪನಿಗೆ ಹುಂಡಿ ಕಾಣೀಕೆ ಸಲ್ಲಿಸುವ ಸಂಪ್ರಾದಾಯ ಈಗಲೂ ಆಚರಣೆಯಲ್ಲಿದೆ. ಸಾರಿಗೆ ವ್ಯವಸ್ಥೆಯಿಲ್ಲದ ಅಂದಿನ ಕಾಲದಲ್ಲಿ ನಾಥ ಪಂಥದ ಜೋಗಿಗಳಾದ ದಾಸಯ್ಯನವರ ನೇತೃತ್ವದಲ್ಲಿ ಜನರು ತಿರುಪತಿ ಪಾದಾಯಾತ್ರೆ ಮಾಡುತ್ತಿದ್ದರು. ಬಿಲ್ಲವರಲ್ಲಿ ಅನೇಕ ಮಂತ್ರವಾದಿಗಳು ತಮ್ಮ ಸಾಧನೆ ಹಾಗೂ ಮಾಂತ್ರಿಕ ತಾಂತ್ರಿಕ ಶಕ್ತಿಯಿಂದ ಅಸಾಮಾನ್ಯ ಸಾಧಕರಾಗಿ ಹೆಸರು ಪಡೆದಿದ್ದರು. ಬಂಟ್ವಾಳದ ಪಂಜಾಜೆ ಮನೆತನ, ಕಾಸರಗೋಡಿನ ಬಾಯಾರು ಗ್ರಾಮಾದಲ್ಲಿನ ಕೆಲ ಮನೆತನದ ಹಿರಿಯರು ಮಂತ್ರವಾದಿಗಳಾಗಿ ಸಾಧನೆ ಮಾಡಿದ್ದರು ಎಂಬ ಉಲ್ಲೇಖವಿದೆ. ಇದರ ಜೊತೆಗೆ ಬಿಲ್ಲವರು ಸಾಂಸ್ಕ್ರತಿಕ, ಧಾರ್ಮಿಕ ಸಾಮಾಜಿಕ ಚಟುವಟಿಕೆ, ಯಕ್ಷಗಾನ ಮುಂತಾದ ಚಟುವಟಿಕೆಯಲ್ಲೂ ತೊಡಗಿಸಿಕೊಂಡರು.
ಬಿಲ್ಲವರ ಆಚರಣೆಗಳು-ಹಬ್ಬಗಳು:
[ಬದಲಾಯಿಸಿ]‘ಕಜಂಬು ಮದುವೆ’ ತುಳುನಾಡಿನ ಜನಪದ ಪದ್ದತಿಯಲ್ಲಿ ಗಂಡು ಮಕ್ಕಳಿಗೆ ಏಳನೇ ವರ್ಷ ಪ್ರಾಯದಲ್ಲಿ ತಲೆಕೂದಲು ಕತ್ತರಿಸುವ ಧಾರ್ಮಿಕ ಆಚರಣೆಯೆ ಕಜಂಬು ಮದಿಮೆ. ಹೆಣ್ಣು ಋತುಮತಿಯಾದಾಗ ‘ಕರಪತ್ತವುನಿ’ (ಮಡಕೆ ಹಿಡಿಯುವುದು) ಎಂದರೇ ತೆಂಗಿನ ಮರದ ಬುಡದಲ್ಲಿ ಕುಳ್ಳಿಸರಿಸಿ ಮಣ್ಣಿನ ಕೊಡಪಾನದಿಂದ ಸ್ನಾನ ಮಾಡಿಸುವ ವಿಧಾನ ಅಚರಣೆಯಲ್ಲಿತ್ತು. ಹೆಣ್ಣಿಗೆ ಮೂಹೂರ್ತ ಸೇವೆ, ವಧುವಿನ ದಿಬ್ಬಣವನ್ನು ಸ್ವಾಗತಿಸುವುದು, ಧಾರೆ ಎರೆಯುವುದು, ಸೀಮಂತ, ತೊಟ್ಟಿಲು ಹಾಕುವುದು, ಗಂಡ ತೀರಿಕೊಂಡಾಗ ಹೆಣ್ಣು ಮತ್ತು ಹೆಣ್ಣು ಸತ್ತಾಗ ಗಂಡ ಮರುಮದುವೆಯಾಗುವ ಸಂಪ್ರಾದಾಯವಿತ್ತು. ಪ್ರೇತ ಮದುವೆ: ಎಳೆಯ ಪ್ರಾಯದಲ್ಲಿ ಮದುವೆಯಾಗದ ತೀರಿ ಹೋದ ಹೆಣ್ಣು ಗಂಡು ಪ್ರೇತಗಳಿಗೆ ಮದುವೆ ಮಾಡುವ ಪದ್ದತಿಯಿದೆ.
ಆಟಿ ತಿಂಗಳು:
[ಬದಲಾಯಿಸಿ](ಆಷಾಢ ಮಾಸ) ಆಟಿ ತಿಂಗಳು ಶುಭಕಾರ್ಯಗಳಿಗೆ ನಿಷಿದ್ಧವೆನಿಸಿದರೂ ತುಳುನಾಡಿನಲ್ಲಿ ಕೆಲವು ವಿಶಿಷ್ಟ ಆಚರಣೆಗಳು ನಡೆದು ಬಂದಿದೆ. ಮನೆಯ ಹಿರಿಯರು ಆಟಿ ತಿಂಗಳಿಗಾಗಿ ಮೂರು ತಿಂಗಳು ಮೊದಲೇ ಸಿದ್ಧತೆ ನಡೆಸುತ್ತಾರೆ. ಮನೆಯ ಮಾಡಿನಲ್ಲಿ ತೂಗು ಹಾಕಿದ ಸೌತೆ, ನಾನಾ ಬಗೆಯ ಉಪ್ಪಿನಕಾಯಿ, ಮಣ್ಣಿನ ಹಂಡೆಯಲ್ಲಿ ಹೆಬ್ಬಲಸು, ಮಾವು, ಹಲಸು, ಮೊದಲಾದವುಗಳನ್ನು ಶೇಖರಿಸಿಡುತ್ತಾರೆ, ಆಟಿ ತಿಂಗಳಲ್ಲಿ ಹೇರಳವಾಗಿ ದೊರೆಯುವ ತೇವು, ತಜಂಕು ಮೊದಲಾದ ಸೊಪ್ಪುಗಳಿಂದ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸುತ್ತಿದ್ದರು. ‘ಸೌರಾಮಾನ ಯುಗಾದಿ’ಯು ತುಳುವರ ಹೊಸವರ್ಷದ ಮೊದಲ ದಿನವಾಗಿರುವುದು. ಇದರ ಜೊತೆಗೆ ಮಾರಿ ಪೂಜೆ, ನಾಗರಪಂಚಮಿ, ಚೌತಿ, ದೀಪಾವಳಿ, ಬಲಿಪಾಡ್ಯಮಿ ತೆನೆಹಬ್ಬಗಳನ್ನು ಕೂಡ ಆಚರಿಸುತ್ತಿದ್ದರು. ಪುರಾತನ ಕಾಲದಿಂದಲೂ ಬಿಲ್ಲವರಿಗೆ ‘ನಾಯ್ಗ’ ಎಂಬ ಗೌರವ ಬಿರುದು ನೀಡುವ ಸಂಪ್ರಾದಾಯ ಅಸ್ತಿತ್ವದಲ್ಲಿತ್ತು. ವಿಜಯನಗರವನ್ನುಆಳಿದ ಪ್ರಖ್ಯಾತ ಅರಸನಾದ ಕೃಷ್ಣ ದೇವರಾಯನು ತುಳುವ ವಂಶಜನೆಂದೂ ದಾಖಲೆಗಳು ಹೇಳುತ್ತವೆ. ಈತ ನರಸ ನಾಯಕನ ಮಗ. ಉಡುಪಿಯ ಬಾರಕೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಯಕತನದಲ್ಲಿ ನಾಯ್ಗರೆಂದು ಬಿರುದಾಂಕಿತರಾದವರು ಬಿಲ್ಲವರು ಎನ್ನುವುದು ಚಾರಿತ್ರಿಕ ಆಧಾರದಿಂದ ಖಚಿತವಾಗಿರುವುದು.
ಬಿಲ್ಲವ ಮನೆತನಗಳು:
[ಬದಲಾಯಿಸಿ]ಬಂಟ್ವಾಳ ಪನೆಕಲ ಅರಸು ಮನೆ, ಕಾರ್ಕಳ ಕೈರಬೆಟ್ಟು ಅರಸು ಮನೆತನ, ನೆರ್ಲ ದೊಡ್ಡ ಮನೆ ಕಾರ್ಕಳ, ಮಂಗಳೂರು ತಾಲೂಕಿನ ಕೆಲ ಗುತ್ತು ಮನೆಗಳು (ಕಂಚಿಕಾರ ಗುತ್ತು ಕೋಡಿಕಲ್, ಕರ್ನಿರೆ ಕೊಪ್ಪಲಮನೆ ಮುಲ್ಕಿ ಮಂಗಳೂರು), ಕರ್ಕೇರ ಮೂಲಸ್ಥಾನ ಬಗಂಬಿಲ ಕೋಟೆಕಾರು, ಕಡುಪಾಡಿ ಮನೆ ಮಂಗಳೂರು, ಪಾಡ್ಯಾರು ಗುತ್ತು, ಶಿಬ್ರಿಕೆರೆ, ತೆಂಕ ಎಡಪದವು, ನಾಲ್ಕೂರು ಗುತ್ತು ಹಾಗೂ ಎಳ್ಕಾಜೆ ಗುತ್ತು ಮನೆತನಗಳು, ಪಡ್ಯೋಡಿ ಗುತ್ತು , ಕುಕ್ಕೇಡಿ ಗ್ರಾಮ, ನಟ್ಟಿಲ್ಲು ಮನೆ , ಬರ್ಕೆ ಮನೆಗಳು, ಗುರಿಕಾರ ಮನೆ ಮುಂತಾದವು .
ಶಿಕ್ಷಣ:
[ಬದಲಾಯಿಸಿ]ಬಿಲ್ಲವರ ವಿದ್ಯಾದಾಯಿನಿ ಸಭಾದವರು 1924ರಲ್ಲಿ ಸ್ಥಾಪಿಸಿದ ಕೆನಾರ ವಿದ್ಯಾಧಾಯಿನಿ ನೈಟ್ ಹೈಸ್ಕೂಲ್ ಇಂದಿನವರೆಗೂ ಅಸಂಖ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದೆ. ಎಂ.ಎಸ್ ರಾವ್ ಎಂಬ ಬಿಲ್ಲವರು ಜವಹರಲಾಲ್ ನೈಟ್ ಹೈಸ್ಕೂಲ್‍ನ್ನು ಆರಂಭಿಸಿದರು.
ವಲಸೆ:
[ಬದಲಾಯಿಸಿ]ಕರ್ನಾಟಕದ ಘಟ್ಟ ಪ್ರದೇಶಗಳಾದ ತೀರ್ಥಹಳ್ಳಿ, ಮೂಡಿಗೆರೆ , ಶೃಂಗೇರಿ, ಕೊಪ್ಪ, ಚಿಕ್ಕಮಂಗಳೂರು, ಮಡಿಕೇರಿ, ಸಕಲೇಶಪುರವರೆಗಿನ ಘಟ್ಟ ಪ್ರದೇಶಗಳಿಗೆ ತಾಗಿಕೊಂಡಿರುವ ಹತ್ತಿರದಿಂದ ತುಳುನಾಡಿನ ಭಾಗಗಳ ಕೂಲಿ ಕಾರ್ಮಿಕರು ಘಟ್ಟ ಪ್ರದೇಶಕ್ಕೆ ಹೋಗಿ ಬರುತ್ತಿದ್ದರು.
ಸಮಾವೇಶ ಮತ್ತು ಸಂಘಟನೆ:
[ಬದಲಾಯಿಸಿ]1869 ರಲ್ಲಿ ಅರಸಪ್ಪನವರ ನೇತೃತ್ವದಲ್ಲಿ ಬಹಳ ದೊಡ್ಡ ಸಮಾವೇಶವನ್ನು ಎರ್ಪಡಿಸಲಾಗಿತ್ತು. ಈ ಸಭೆಯಲ್ಲಿ 500 ಬಿಲ್ಲವರು ಭಾಗವಹಿಸಿದ್ದರು. ಬಿಲ್ಲವರ ಯೂನಿಯನ್ ಕುದ್ರೋಳಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿ, ಮುಕ್ಕ ಬಿಲ್ಲವ ಸಂಘ ಸುರತ್ಕಲ್, ಬಿಲ್ಲವ ಸಮಾಜ ಸೇವಾ ಸಂಘಗಳು, ಹೆಜಮಾಡಿ ಬಿಲ್ಲವ ಸಂಘ ಮುಂತಾದವು ಪ್ರಮುಖ ಬಿಲ್ಲವ ಸಂಘಗಳು, ಬಿಲ್ಲವ ಪ್ರಮುಖರು: ಬಿ. ಕೊರಗಪ್ಪ-ಖ್ಯಾತ ನ್ಯಾಯಾಧಿಶರು. ದಕ್ಷ ಅಧಿಕಾರಿ ಸಮಾಜ ಸೇವಕ ಕಂಕನಾಡಿ ದೂಮಪ್ಪ ಬಿ.ಎ, ಕಾರ್ಕಳದಲ್ಲಿ ಶಿಕ್ಷಣ ಕ್ರಾಂತಿಗೆ ದೀವಿಗೆ ಹಚಿದ ಶ್ರೀ . ಎನ್. ರಾಮಪ್ಪ ಕಲ್ಯ. ಖ್ಯಾತ ಕಂಬಳ ಓಟಗಾರ ಗೆರ್ತಿಲ ದೇವು ಪೂಜಾರಿ, ನಾಟಿ ವೈದ್ಯೆ ಹೊನ್ನಮ್ಮ ಸ್ವಾತಂತ್ರ್ಯ ಹೋರಾಟಗಾರರಾದ ಬಜಾಲ್ ದುಗ್ಗಪ್ಪ ಸುವರ್ಣ, ಎ. ಅಚ್ಯುತನ್. ಎಂ. ಮಂಜು, ಕೆ, ದಾಮೋದರ ಬಂಗೇರ, ಕುಂಜಿಬೆಟ್ಟು ಪೂವಪ್ಪ ಬಂಗೇರರು, ಕೆ.ಪಿ. ಮದನ ಮಾಸ್ಟರ್
ಬಿಲ್ಲವರು ಇಂದು:
[ಬದಲಾಯಿಸಿ]ಇಂದು ಬಿಲ್ಲವರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೃಷಿಗೆ ಪ್ರಾಶಸ್ತ್ಯ ಕಡಿಮೆಯಾಗಿದೆ. ಅವಿಭಕ್ತ ಕುಟುಂಬಗಳು ಇಲ್ಲವಾಗಿದೆ. ಔದ್ಯೋಗಿಕ ಸಾಮಾಜಿಕ ಕ್ಷೇತ್ರÀದಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ. ರಾಜಕೀಯವಾಗಿ ಪ್ರಾತಿನಿಧ್ಯವನ್ನು ಪಡೆದಿದ್ದಾರೆ. ದೇಶ ವಿದೇಶಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದಿದ್ದಾರೆ. ಆರ್ಥಿಕವಾಗಿ ಸದೃಢವಾಗಿದ್ದಾರೆ. ಮುಂಬಯಿಯ ಬಿಲ್ಲವರು ಸರ್ವಾಂಗೀಣ ಪ್ರಗತಿಯನ್ನು ಸಾಧಿಸಿ ತುಳುನಾಡಿಗೆ ಕೀರ್ತಿಯನ್ನು ತಂದಿದ್ದಾರೆ.