ಸದಸ್ಯ:Dhanya holla/ನನ್ನ ಪ್ರಯೋಗಪುಟ 3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗಮ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ[ಬದಲಾಯಿಸಿ]

ಸಂಗಮ ಸದಾಶಿವನೆಂದೇ ಕರೆಯಬಹುದಾದ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನ ಬಹಳ ಪರಾತನ ಕಾಲದ ದೇವಾಲಯ. ಇದು ಸಾವಿರ ಸಂಖ್ಯೆಯ ಚಾರಿತ್ರಿಕ ಅವಶೇಷಗಳಲ್ಲಿ ಸಿಕ್ಕ ದೇವಸ್ಥಾನಗಳಲ್ಲಿ ಅಳಿದುಳಿದವುಗಳಲ್ಲಿ ಅಭಿವೃದ್ದಿಯ ಕಡೆಗೆ ಜನರೊಲವು ಹರಿದು ಜೀರ್ಣೋದ್ಧಾರಗೊಂಡು ಅಷ್ಟಬಂಧ ಕಲಶಾಭಿಷೇಕ ನಡೆದ ದೇವಸ್ಥಾನಗಳಲ್ಲಿ ಒಂದು. ಪ್ರಕೃತಿಯ ಹಚ್ಚ ಸುರಿನ ಮಧ್ಯೆ ನೇತ್ರಾವತಿಯ ತಟದಲ್ಲೇ ನೆಲೆಯೂರಿದ ಈ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬ ಹಳ್ಳಿಯಲ್ಲಿದೆ. ಇದು ಒಂದು ಯಾತ್ರಾ ಸ್ಥಳವಾಗಿದೆ. ಅಷ್ಟೇನು ಪ್ರಸಿದ್ಧವಾಗದೇ ಇದ್ದರೂ, ಸಂಗಮ ಕ್ಷೇತ್ರವೆಂದು ಪ್ರಸಿದ್ಧಿ ಪಡೆಯುತ್ತಿದೆ. ಸಂಗಮ ಕ್ಷೇತ್ರ ಎಂದು ಹೆಸರು ಬರಲು ಇಲ್ಲಿ ದೇವಸ್ಥಾನದ ಎದುರುಗಡೆ ಸಂಗಮಿಸುವ ಎರಡು ನದಿಗಳೇ ಕಾರಣ. ಇಲ್ಲಿ ನೇತ್ರಾವತಿ ಮತ್ತು ಮೃತ್ಯುಂಜಯ ಎಂ ಎರಡು ನದಿ ದೇವಸ್ಥಾನದ ಎದುರುಗಡೆ ಸಂಗಮಿಸಿ ಮುಂದೆ ನೇತ್ರಾವತಿಯಾಗಿ ಮುಂದುವರೆಯುತ್ತದೆ.

ದೇವಸ್ಥಾನ ತಲುಪುವ ದಾರಿ[ಬದಲಾಯಿಸಿ]

ಪಜಿರಡ್ಕ ಧರ್ಮಸ್ಥಳದಿಂದ ಸುಮಾರು 9 ಕಿಲೋಮೀಟರ್ ಉಜಿರೆ ಕಡೆ ಬಂದರೆ ನೀರಚಿಲುಮೆ ಎಂಬ ಜಾಗ ಸಿಗುತ್ತದೆ. ಅಲ್ಲಿಂದ 3.5 ಕೀ.ಮೀ ಸಾಗಿದರೆ ಪಜಿರಡ್ಕ ದೇವಸ್ಥಾನ ಸಿಗುವುದು. ಅಲ್ಲದೇ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ 6 ಕೀ.ಮೀ ಸಾಗಿದರೆ ನೀರಚಿಲುಮೆ ಮೂಲಕ ದೇವಸ್ಥಾನಕ್ಕೆ ಹೋಗಬಹುದು. ಈ ಮಾರ್ಗವಲ್ಲದೇ ಇನ್ನೋಂದು ಮಾರ್ಗವಿದೆ. ಉಜಿರೆಯಿಂದ ಚಾರ್ಮಾಡಿ ಕಡೆಗೆ ಸಾಗುವಾಗ ಮಾರ್ಗ ಮಧ್ಯೆ ಸಿಗುವ ನಿಡಿಗಲ್‍ನಿಂದ 3.5 ಕೀ ಮೀ ಒಳಗೆ ಸಾಗಿದರೆ ಈ ದೇವಸ್ಥಾನ ತಲುಪಬಹುದು.

ಹಿನ್ನಲೆ[ಬದಲಾಯಿಸಿ]

ಪಕೃತಿಯ ಮಡಿಲಲ್ಲಿ ನೆಲೆದಿರುವ ಈ ಶಿವ ದೇವಾಲಯವು ಇತ್ತೀಚಿನ ವರ್ಷಗಳಲ್ಲಿ ಅಂದರೆ 2001 ರಿಂದ 2009ರಲ್ಲಿ ತ್ವರಿತವಾಗಿ ಪುನಃನಿರ್ಮಾಣಗೊಂಡು (ಎಪ್ರೀಲ್ 04 2009 ರಿಂದ ಎಪ್ರೀಲ್ 12 2009) ಬ್ರಹ್ಮಕಲಶಾಭಿಷೇಕವಾಗಿರುವ ದೇವಸ್ಥಾನ. ಸುತ್ತಲಿನ ಹತ್ತು ಗಾಮಗಳನ್ನೊಳಗೊಂಡ ಪಜಿರಡ್ಕ ಮಾಗಣೆ ಬೈಲಂಗಡಿಯ ಮಾಲೇರ ಸೀಮೆಗೆ ಸೇರಿದ್ದು. ಬೈಲಂಗಡಿಯರಸರ ಕಾಲದಲ್ಲಿ ಪಜಿರಡ್ಕ ಮಾಗಣೆಗೆಲ್ಲಾ ಏಕಮೇವಾದ್ವಿತೀಯವಾಗಿ ವಿಜೃಂಭಿಸಿದ ದೇವ ಮಂದಿರ.

ಇತಿಹಾಸ[ಬದಲಾಯಿಸಿ]

ಹಿಂದೆ ಅಂದರೆ ಸುಮಾರು 7-8 ಶತಮಾನಗಳ ಕೆಳಗೆ ದೇವರಗುಡ್ಡೆ ಎಂದು ಕರೆಯಲ್ಪಡುವ “ಆದಿ ಪಜಿರಡ್ಕ’ದಲ್ಲಿ ವಿಶಾಲವಾಗಿ ಹಸಿರು ಹುಲ್ಲು ಕಂಗೊಳಿಸುತ್ತಿದ್ದ ಕಾಲದಲ್ಲಿ ಒಂದು ದಿನ:, ದಿನ ಬೆಳಗಾದರೆ ದನಗಳಿಗಾಗಿ ಹುಲ್ಲು ಹೆರೆದು ತರುವುದೇ ಉದ್ಯೋಗವಾಗಿದ್ದ ಹೊಲತಿಯೊಬ್ಬಳು ತನ್ನ ಕಾಯಕವಾಗಿ ಹರಿತ ಕತ್ತಿಯನ್ನು ಝಳಪಿಸುತ್ತಾ ಹಸಿರು ಹುಲ್ಲನ್ನು ಕಡಿಯುತ್ತಾ ನಡೆದಾಗ ಅದ್ಭುತವೊಂದು ನಡೆಯಿತು. ಕತ್ತಿ ಕಪ್ಪಗಿನ ಕಲ್ಲೊಂದಕ್ಕೆ ತಾಗಿತು. ತಕ್ಷಣ ಆ ಕಲ್ಲಿನಿಂದ ರಕ್ತ ಹರಿದು ಬಂತು. ಹೆದರಿದ ಹೆಣ್ಣು ಊರೆಲ್ಲಾ ಬೊಬ್ಬಿಟ್ಟಳು. ಜನರೆಲ್ಲಾ ಓಡಿ ಬಂದು ಸ್ಥಳ ಪರಿಶೀಲನೆ ನಡೆಸಿ ಸಂದರ್ಭದೊಡನೆ ಅರ್ಥ ವಿವರಿಸಿದಾಗ ರಕ್ತ ಸುರಿಸಿದ ಕಲ್ಲು ಸಾಮಾನ್ಯ ಕಲ್ಲಾಗಿರದೆ ಹಳೆಯ ಕಾಲದ ಶಿವಲಿಂಗವೆಂದು ಮನದಟ್ಟಾಯಿತು. ಪರಿಶೀಲನೆಯಿಂದ ಸಾವಿರಾರು ವರ್ಷಗಳ ಹಿಂದಿನ ಶಿವಾಲಯದ ಕುರುಹುಗಳನ್ನು ಕಂಡರು. ಸದ್ಯದ ಸ್ಥಿತಿಯಲ್ಲಿ ಮತ್ತೆ ಆಲಯ ನಿರ್ಮಿಸಬೇಕೆಂದುಕೊಂಡರು. ಆದರೆ ಶಿವಗೃಹ ನಿರ್ಮಾಣಕ್ಕೆ ಉತ್ತಮ ನದಿ ಮೊದಲಾದ ಅವಶ್ಯಕತೆ, ಪತ್ರ ಪುಷ್ಪ ಫಲಗಳುಳ್ಳ ಧಾತ್ರಿ, ಧನ, ಗೋದಾನ್ಯವಸೆವ ಧರಿತ್ರಿ ಇವೆಲ್ಲ ಬೇಕು. ನದಿಯಲ್ಲದಿದ್ದರೂ ಹಿಂದೊಮ್ಮೆ ಉಳಿದೆಲ್ಲ ವೈಭವವಿದ್ದಿರಬಹುದಾದರೂ ಅಲ್ಲಿ ಆ ಕಾಲಕ್ಕೆ ಅದು ಪಾಳುಬಿದ್ದ ಗುಡ್ಡವಾಗಿತ್ತು. ಜನವಸತಿಗಳಿಂದ ಬಲು ದೂರವಾಗಿತ್ತು. ಹಾಗೆಂದು ಊರ ಮುಂದಾಳುಗಳಿಗೆ ಹಗಲು-ರಾತ್ರಿ ಚಿಂತೆಯುಂಟಾಯಿತು. ಊರ ಹಿರಿಯರಿಗೆ ಕನಸಿನಲ್ಲಿ ಸದಾಶಿವನ ದರ್ಶನವಾಯಿತು. ಮೃತ್ಯುಂಜಯ ಹಾಗೂ ನೇತ್ರಾವತಿ ಸಂಧಿಸಿ ಲೀನವಾಗುವಲ್ಲಿ ಗುಡಿ ಕಟ್ಟುವಂತೆ ಪರಶಿವನ ಆಜ್ಞೆಯಾಯಿತು. ಇಂಧು ಚಕ್ರತೀರ್ಥವೆಂದು ಪ್ರಸಿದ್ಧವಾದ ಸಂಗಮ ತೀರ್ಥದ ದಡದಲ್ಲೇ ಗುಡಿ ಕಟ್ಟಿ ಲಿಂಗ ಸ್ಥಾಪನೆಯಾಗಿ ಶಿವಾಲಯ ತಲೆಯೆತ್ತಿ ನಿಂತಿತು. ಪಜಿರಡ್ಕದ ಸದಾಶಿವ ಇಲ್ಲಿ ನೆಲೆಯಾದನು. ಈ ಸ್ಥಳ ಪಜಿರಡ್ಕ ಎಂದೇ ಪ್ರಸಿದ್ಧವಾಯಿತು. ಪಜಿರಡ್ಕ ಎಂದರೆ ತುಳು ಭಾಷೆಯಾಗುತ್ತದೆ. ಹೇಗೆಂದರೆ ಪಜಿರ್ ಎಂದರೆ ತುಳು ಭಾಷೆಯಲ್ಲಿ ಹಸಿರು ಹುಲ್ಲು ಎಂದರ್ಥ, ಹಾಗೇಯೇ ಅಡ್ಕ ಎಂದರೆ ಸ್ಥಳ ಎಂದರ್ಥ ಇವೆರಡೂ ಕೂಡಿ ಪಜಿರಡ್ಕ ಎಂದಾಯಿತು. ಹಿಂದೆ ಲಿಂಗೋದ್ಭವವಾದ ಅಂದಿನ ಪಜಿರಡ್ಕ-ದೇವರಗುಡ್ಡೆ ಇಂದಿನ ಪಜಿರಡ್ಕ ದೇವಾಲಯದ ಒಂದು ಕಿ.ಮೀ ದೂರದಲ್ಲಿದೆ. ಆದಿಪಜಿರಡ್ಕ ಎಂದು ಕರೆಯಲ್ಪಡುವ ಇಲ್ಲಿ ಭಗ್ನ ಲಿಂಗ ಹಾಗೂ ಹಳೆಯ ಮಂದಿರದ ಭಗ್ನಾವಶೇಷಗಳಿವೆ.

ಉಲ್ಲೇಖ[ಬದಲಾಯಿಸಿ]