ವಿಷಯಕ್ಕೆ ಹೋಗು

ಸದಸ್ಯ:Chaithra05/ನನ್ನ ಪ್ರಯೋಗಪುಟ4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಂತನಾಥ ಸ್ವಾಮಿ ಜಿನ ಚೈತ್ಯಾಲಯ, ಪಾಣೆಮಂಗಳೂರು

ಬಂಟ್ವಾಳ ತಾಲೂಕು ಪಾಣೆಮಂಗಳೂರು ಪೇಟೆಯಲ್ಲಿ ಅತ್ಯಂತ ಪೂರ್ವ ಭಾಗದಲ್ಲಿರುವ ಈ ಜಿನ ಚೈತ್ಯಾಲಯವು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಶ್ರೀ ಪದ್ಮಾವತಿ ಅಮ್ಮನವರ ಸಾನಿಧ್ಯದಿಂದಾಗಿ ಜನಾದರಣೀಯವಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ೨೦೦ ಮೀಟರ್ ಹತ್ತಿರದಲ್ಲಿ ಒಂದು ದಿನ್ನೆಯ ಮೇಲೆ ಈ ಬಸದಿಯು ಸ್ಥಿತವಾಗಿದೆ. ಬಂಟ್ವಾಳ ತಾಲೂಕು ಕೇಂದ್ರದಿಂದ ಇಲ್ಲಿಗೆ ಸುಮಾರು ೨ ಕಿ.ಮೀ ದೂರ. ಪ್ರಸಿದ್ಧ ನೇತ್ರಾವತಿ ನದಿಯ ಹಳೆಯ ಸಂಕದಿಂದ ೧ ಕಿ.ಮೀ ದೂರ. ರಸ್ತೆಯಿಂದ ಸುಮಾರು ೨೫ ಮೆಟ್ಟಿಲುಗಳನ್ನು ಏರಿದ ನಂತರ ಬಸದಿಯ ಅಂಗಳಗಳನ್ನು ಪ್ರವೇಶಿಸಬಹುದು. ಇದನ್ನು ಶ್ರೀ ಕ್ಷೇತ್ರ ಪಾಣೇರ್ ಎಂದು ಕರೆಯುವ ಪದ್ಧತಿಯೂ ಇದೆ.

ಅಲ್ಲಿ ನಿಂತಿರುವ ದ್ವಾರ ಪಾಲಕ ಬಿಂಬಗಳು ನಮ್ಮನ್ನು ಸ್ವಾಗತಿಸುತ್ತವೆ. ಎದುರು ಸಿಗುವ ಗೋಪುರವನ್ನು ದಾಟಿದ ಅನಂತರ ಬಸದಿಯ ಸುಂದರವಾದ ಮುಖ ಮಂಟಪವನ್ನು ತಲುಪಬಹುದು. ಮುಖ ಮಂಟಪವು ಬಸದಿಯ ಜಗಲಿಯಂತಿದ್ದು, ಮುಂದುವರಿದು ಹೋಗುವ ದ್ವಾರದ ಎರಡೂ ಬದಿಗಳಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಎಡಬಲ ಗೋಡೆಗಳ ಮೇಲೆ ಕೆಲವು ವರ್ಣಚಿತ್ರಗಳಿವೆ. ಅಲ್ಲಿಂದಲೇ ಶ್ರೀ ಅನಂತನಾಥ ಸ್ವಾಮಿಯ ದರ್ಶನವನ್ನು ಪಡೆಯಬಹುದು. ಯಾಕೆಂದರೆ ಇಲ್ಲಿಯೇ ಕಬ್ಬಿಣದ ಗ್ರಿಲ್ ಬಾಗಿಲನ್ನು ಜೋಡಿಸಲಾಗಿದೆ. ಈ ಬಾಗಿಲನ್ನು ದಾಟಿ ಮುಂದುವರಿದರೆ ಪ್ರಾರ್ಥನಾ ಮಂಟಪಕ್ಕೆ ಹೋಗಬಹುದು. ಇದು ಕೂಡಾ ಪ್ರಶಾಂತವಾದ ನಿರ್ಮಲ ಪ್ರದೇಶ. ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ಹತ್ತಿರವಾಗುತ್ತದೆ.

ವಿನ್ಯಾಸ

[ಬದಲಾಯಿಸಿ]

ಗರ್ಭಗೃಹದಲ್ಲಿ ವಿರಾಜಮಾನವಾಗಿರುವ ಶ್ರೀ ಸ್ವಾಮಿಯ ವಿಗ್ರಹವು ತುಂಬಾ ಮನೋಹರವಾಗಿದೆ. ಪದ್ಮ ಪೀಠದ ಮೇಲೆ ಖಡ್ಗಾಸನ ಭಂಗಿಯಲ್ಲಿ ನಿಂತುಕೊಂಡಿದೆ. ಕಾಲುಗಳ ಬಳಿಯಲ್ಲಿ ನಿಂತುಕೊಂಡಿರುವ ಯಕ್ಷ ಯಕ್ಷಿಯರ ಬಿಂಬಗಳಿವೆ. ಇವರಿಗಿಂತ ಮೇಲ್ಗಡೆಯಲ್ಲಿ ಸ್ವಾಮಿಯ ಇಕ್ಕೆಲಗಳಲ್ಲಿ ಅಂಕಣವನ್ನು ಹೊಂದಿರುವ ಕಂಬದಂತಹ ರಚನೆಗಳಿವೆ. ಅದಕ್ಕಿಂತ ಮೇಲ್ಗಡೆ ಕಂಚಿನ ಅರ್ಧ ಚಂದ್ರಾಕಾರದ ಸುಂದರ ಪ್ರಭಾವಳಿಯಿದೆ. ಮಕರದ ಬಾಯಿಯಿಂದ ಹೊರಟ ಮಕರ ತೋರಣವು ಹಲವು ಸುರುಳಿಗಳನ್ನು ಹೊಂದಿದ್ದು, ಇದರ ಚೆಲುವನ್ನು ಹೆಚ್ಚಿಸಿದೆ.ಬದಿಗಳಲ್ಲಿ ಇನ್ನೂ ಕೆಲವು ಅಲಂಕಾರಿಕ ರಚನೆಗಳಿವೆ. ಅದರ ಮಧ್ಯದಲ್ಲಿ ಮೇಲ್ಗಡೆ ಕೀರ್ತಿಮುಖ ಹಾಗೂ ಮುಕ್ಕೊಡೆಗಳು ಇವೆ.

ಈ ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿಯ ಕಾರಣಿಕ ಶಕ್ತಿಯು ವಿಶೇಷವಾಗಿದೆ.

ವಿಧಿ-ವಿಧಾನ

[ಬದಲಾಯಿಸಿ]

ಬೇರೆ ಬೇರೆ ಊರುಗಳಿಂದ ಇಲ್ಲಿಗಾಗಮಿಸಿ ಅಭಿಷೇಕ ಪೂಜಾದಿಗಳನ್ನು ಮಾಡಿಸಿಕೊಂಡು ಹೋಗುತ್ತಾರೆ. ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರದಂದು ದೇವಿಗೆ ಹೂವಿನ ಪೂಜೆ, ಲಕ್ಷ ಹೂವಿನ ಪೂಜೆ, ವರಹ ಪೂಜೆ, ಕುಂಕುಮಾರ್ಚನೆ ಇತ್ಯಾದಿಗಳನ್ನು ನಡೆಸಲಾಗುತ್ತದೆ. ಶ್ರೀ ದೇವಿಯ ಸನ್ನಿಧಿಯಲ್ಲಿ ಪುಷ್ಪ ಪ್ರಸಾದದ ಅಪ್ಪಣೆಯ ಅನುಸಾರ ವಧುವರರ ಹೊಂದಾಣಿಕೆ ಮೇಳಾಮೇಳಿಯನ್ನು ನಿರ್ಧರಿಸುತ್ತಾರೆ. []

ಇತಿಹಾಸ

[ಬದಲಾಯಿಸಿ]

ಈ ದೇವಿಯ ಬಗ್ಗೆ ಚದುರ ಚಂದಯ್ಯನೆಂಬ ಮೂಡುಬಿದಿರೆಯ ಕವಿಯು ಕ್ರಿ.ಶ ೧೮೩೦ರ ಸುಮಾರಿಗೆ ಈ ರೀತಿ ಹೇಳಿದ್ದಾನೆ. ಹುಂಬುಚ್ಚ ಪುರದೊಳತಿಶಯ ತತ್ವತಿ ಯೆಂಬಂತೆ ಶ್ರೀ ಪದ್ಮಾವತಿಯು | ತುಂಬಿದ ಸೌಭಾಗ್ಯ ಸೊಬಗು ಪ್ರತಾಪದಿ ಸಂಭ್ರಮಗಳ ನೇನನೆಂಬೆ || ಆತನು ಹೇಳುವಂತೆ, ಇಲ್ಲಿಯ ಪದ್ಮಾವತಿಯು, ಹೊಂಬುಚ್ಚದ ಪದ್ಮಾವತಿಯ ಪ್ರತಿರೂಪ. ಸೌಭಾಗ್ಯ ಸೊಬಗು ಪ್ರತಾಪಗಳಲ್ಲಿ ಈ ದೇವಿಗೆ ಸಮಾನ ಎಂದಾಯಿತು. ಹೀಗೆ ಉನ್ನತ ಇತಿಹಾಸವಿರುವ ಈ ಜಿನಾಲಯದಲ್ಲಿ ಅನುಕೂಲತೆ, ಸಹಕಾರಗಳು ಮೂಲ ಸ್ವಾಮಿಯ ಹೆಸರಿನಂತೆ ಅನಂತವಾಗಿ ಒದಗಿ ಬರುತ್ತದೆ. ಯಾವುದೇ ಅಭಾವ ನ್ಯೂನತೆಗಳು ಕಂಡುಬರುವುದಿಲ್ಲ. ನಿರೀಕ್ಷೆಯಂತೆ ಎಲ್ಲವೂ ನಡೆಯುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ. p. ೩೧೦.