ವಿಷಯಕ್ಕೆ ಹೋಗು

ಸದಸ್ಯ:Bharathraj.karthadka/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಡ್ಯಾ ಕುಣಿತ

[ಬದಲಾಯಿಸಿ]

ಮುನ್ನುಡಿ

[ಬದಲಾಯಿಸಿ]

ಉತ್ತರ ಕನ್ನಡದ ಘಟ್ಟದ ಕೆಳಗಿನ ಭಾಗಗಳಲ್ಲಿ ಮುಖ್ಯವಾಗಿ ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ಕಂಡುಬರುವ ಒಂದು ಕಲೆ. 'ಕಾಡ್ಯಾ ಕುಣಿತ' ಅಥವಾ 'ಕಾಡಿನ ಕುಣಿತ' ಪರಂಪರಾಗತವಾಗಿ ಹರಿಜನರಲ್ಲಿ (ಹಳ್ಳಿಗರ) ಈ ಕಲೆ ಬೆಳೆದು ಬಂದಿದೆ. ಮೇಲಿಂದ ಮೇಲೆ ಬರುತ್ತಿದ್ದ ರೋಗ - ರುಜಿನಗಳಿಂದ ವಿಮುಕ್ತರಾಗಲು, ಕಾಡುವ ಪೀಡೆ, ಪಿಶಾಚಿಗಳನ್ನು ಹೊರಗೆ ಅಟ್ಟಲು ಈ ಕಾಡಿನ ಕುಣಿತ ಅಥವಾ ಕಾಡ್ಯಾ ಕುಣಿತ ರೂಢಿಯಲ್ಲಿ ಬಂದಂತೆ ಕಾಣುತ್ತದೆ. ಗ್ರಾಮೀಣರು ತಮಗೆ ಯಾವುದೇ ರೋಗ ರುಜಿನಗಳು ಬಂದಾಗ ಅದಕ್ಕೆ ಕಾರಣರಾದ ದೇವತೆಗಳ ಸಂತೃಪ್ತಿಗಾಗಿ ಪೂಜೆ, ಬಲಿ, ನೈವೇದ್ಯ ಅರ್ಪಿಸುತ್ತಾರೆ. ಪೂಜೆಯ ಜೊತೆಗೆ ಈ ರೋಗ-ರುಜಿನಗಳ ಪೀಡೆಯನ್ನು ಓಡಿಸುವುದಕ್ಕಾಗಿ ಎಲ್ಲರೂ ಸೇರಿ ಬಾರಿ ಗದ್ದಲ ಹಚ್ಚಿ ಕುಣಿಯುತ್ತಾರೆ. ಗದ್ದಲವಾದಾಗ ಕಾಡಿನ ಪ್ರಾಣಿಗಳು ಓಡಿಹೋಗುವಂತೆ ತಮ್ಮನ್ನು ಕಾಡುವ ಪೀಡೆಗಳೂ ಓಡಿಹೋಗುತ್ತದೆ ಎಂಬ ನಂಬಿಕೆಯಿದೆ. ಹೀಗೆ ತಮ್ಮನ್ನು ಕಾಡುವ ಅನಿಷ್ಟಗಳನ್ನು ನಿವಾರಿಸಲು ಕುಣಿಯುವ ಕುಣಿತವೇ ಹರಿಜನರ ಈ 'ಕಾಡ್ಯಾ ಕುಣಿತ' ವಾಗಿದೆ.

ಕುಣಿತದ ವಿಧಾನ

[ಬದಲಾಯಿಸಿ]

ಕಾಡ್ಯಾ ಕುಣಿತ ಈಗ ಒಂದು ರೀತಿಯಲ್ಲಿ ವಾರ್ಷಿಕ ಆಚರಣೆಯಾಗಿ ಉಳಿದಿರುವಂತೆ ಕಾಣುತ್ತದೆ. ವರ್ಷಕ್ಕೊಮ್ಮೆ ಮಕರ ಸಂಕ್ರಾಂತಿಯ ಮೊದಲ ಎಂಟು ದಿನಗಳ ಕಾಲ ಈ ಕುಣಿತ ನಡೆದು ಸಂಕ್ರಾಂತಿಗೆ ಮುಕ್ತಾಯಗೊಳ್ಳುತ್ತದೆ. ಕುಣಿತದ ಮೊದಲು ಈ ಜನಾಂಗದ ಹಿರಿಯರಾದ ಯಜಮಾನ ಹಾಗೂ ಕೋಲುಕಾರ ಇವರುಗಳು ಸೇರಿ ಆ ವರ್ಷ ಕುಣಿತ ಬೇಕೇ ಬೇಡವೇ ಎಂಬುದನ್ನು ನಿರ್ಧರಿಸಿ, ಅದಕ್ಕೆ ಬೇಕಾದ ಜನರನ್ನು ಆಯ್ಕೆ ಮಾಡುತ್ತಾರೆ. ನಂತರ ನಿಶ್ಚಿತ ದಿನ ಎಲ್ಲರೂ 'ಜಟ್ಟಿಗೆ ದೇವರ ಬಳಿ ಹೋಗಿ ಪೂಜೆ ಸಲ್ಲಿಸುತ್ತಾರೆ. ದೇವರ ಅಪ್ಪಣೆ ಪಡೆದು ಕುಣಿತ ಪ್ರಾರಂಭಿಸಲಾಗುತ್ತದೆ. ಕೆಲವು ಕಡೆ ತುಳಸಿ ಹುಣ್ಣಿಮೆಯ ನಂತರ ' ಕಾಡ್ಯಾ ಕುಣಿತ ' ಮಾಡುತ್ತ ತಿರುಗುವ ಪದ್ದತಿಯುಂಟು. ಕುಣಿಯುವವರಾರು ವಿಶೇಷ ವೇಷಭೂಷಣಗಳನ್ನು ಧರಿಸುವುದಿಲ್ಲ. ನಿತ್ಯದ ಉಡುಗೆಯಲ್ಲಿಯೇ ಇರುತ್ತಾರೆ. ಹಿನ್ನಲೆಯಲ್ಲಿ ತಾಳ, ಮೃದಂಗ, ಡೋಲಾಕಗಳನ್ನು ಬಳಸುತ್ತಾರೆ. ಗುಂಪಿನ ನಾಯಕ ಹಾಡು ಹೇಳುತ್ತಾನೆ. ಹಾಡಿನ ಒಂದು ಚರಣ ಪೂರ್ತಿಯಾಗುತ್ತಲೇ ಎಲ್ಲರೂ ಅದನ್ನು ಅನುಕರಿಸುತ್ತಾರೆ. ಮಧ್ಯ, ಮಧ್ಯ "ಓ.......ಕಾಡ್ಯಾ" ಎಂದು ಕೂಗುತ್ತಾರೆ. ಕುಣಿತಕ್ಕೆ ಯಾವುದೇ ನಿಯಮ ನಿಬಂಧನೆಗಳೇನೂ ಕಾಣುವುದಿಲ್ಲ. ವಾದ್ಯದವನ ಸುತ್ತಾಮುತ್ತಾ ನಿಂತುಕೊಂಡು ವಾದ್ಯಗಳ ಬಡಿತದ ಜೊತೆಗೆ ಹಾಡಿಕೊಂಡು ಕೈಗಳನ್ನು ಅರ್ಧ ಮೇಲಕ್ಕೆತ್ತುತ್ತಾ, ಇಳಿಸುತ್ತಾ, ಅತ್ತಿತ್ತಾ ಒನೆಯುತ್ತಾ, ಕಾಲು ಹಾಕುತ್ತಾ ಕುಣಿಯುತ್ತಾರೆ. ಮಧ್ಯೆ ಹಾಕುವ 'ಕೇಕೆ' ಯೇ ಒಂದು ವಿಶೇಷ ಕುಣಿತಕ್ಕೆ ಕಾಲದ ಮಿತಿಯೂ ಇಲ್ಲ. ಕಾಲು ಸೋಲುವವರೆಗೂ ಕುಣಿಯಬಹುದು.

ಕುಣಿತಕ್ಕೆ ಬೇಕಾದ ಸಾಮಗ್ರಿಗಳು.

[ಬದಲಾಯಿಸಿ]

ಈ ಕುಣಿತದಲ್ಲಿ ಬಳಕೆಯಾಗುವ ಹಿಮ್ಮೇಳದ ವಾದ್ಯ ' ಡೋಲಕ್ ' ಒಂದು ದ್ವಿಮುಖ ಚರ್ಮವಾದ್ಯ. ದೊಡ್ಡ ಹೊಜಿಯಂತಿರುವ ಮಣ್ಣಿನ ಹೊಳಲಿನ ಎರಡೂ ಕಡೆ ಬಾಯಿ ಇರುತ್ತದೆ. ಇವುಗಳಲ್ಲಿ ಒಂದು ಬಾಯಿ ದೊಡ್ಡದಾಗಿರುತ್ತದೆ. ಇನ್ನೊದು ಕಡೆ ಬಾಯಿ ಚಿಕ್ಕದಾಗಿರುತ್ತದೆ. ದೊಡ್ಡದಾದ ಬಾಯಿಯನ್ನು ಉಡ ಅಥವಾ ಚಾಪ ಎಂಬ ಪ್ರಾಣಿಯ ಚರ್ಮದಿಂದ ಮುಚ್ಚಿ ಬಿಗಿಯುತ್ತಾರೆ. ಕಿರಿದಾದ ಬಾಯಿ ತೆರೆದೇ ಇರುತ್ತದೆ. ' ಡೋಲಕ್ 'ಗೆ ದಾರ ಕಟ್ಟಿ ಹೆಗಲಿಗೆ ಇಲ್ಲವೇ ಕೊರಳಿಗೆ ತೂಗಿಹಾಕಿಕೊಂಡು ಬಾರಿಸುತ್ತಾರೆ. ಈ ತಂಡವು ಎಂಟು ದಿನಗಳ ಕಾಲ ಊರಿಂದ ಊರಿಗೆ ಹೋಗಿ ಹಗಲೆಲ್ಲ ಕುಣಿಯುತ್ತ ತಿರುಗುವರು. ರಾತ್ರಿಯಲ್ಲಿ ಯಾವುದಾದರೊಂದು ಊರಿನಲ್ಲಿ ಬೀಡು ಬಿಡುವರು. ಅಲ್ಲಿ ಅವರಿಗೆ ಅದರ ಸತ್ಕಾರ ದೊರೆಯುವುದು. ಕುಣಿತದವರನ್ನು ಜನರು ಬರಿಗೈಯಲ್ಲಿ ಕಳುಹಿಸುವುದಿಲ್ಲ. ಅಕ್ಕಿ, ತಂಗಿನಕಾಯಿ ಹಣ ಮುಂತಾದವುಗಳನ್ನು ಕೊಟ್ಟು ಗೌರವಿಸುತ್ತಾರೆ. ಈ ಎಂಟು ದಿನಗಳ ಕಾಲ ತಿರುಗಿ ಸಂಗ್ರಹಿಸಿದ ಅಕ್ಕಿ, ತೆಂಗಿನಕಾಯಿ, ಹಾಗೂ ಹಣದೊಂದಿಗೆ ಕೊನೆಯ ದಿನ ಊರಿಗೆ ಹಿಂದಿರುಗಿದ ಮೇಲೆ ದೇವರಿಗೆ ಪೂಜೆ ಸಲ್ಲಿಸಿ ಊರಿಗೆಲ್ಲ ಔತಣವನ್ನು ಏರ್ಪಡಿಸುವರು. ಅದಕ್ಕೆ ' ಕಾಡಿನ ಹಬ್ಬ ' ಎನ್ನುತ್ತಾರೆ. ಇಲ್ಲಿಗೆ ಈ ಕುಣಿತದ ವಿಧಾನಗಳೆಲ್ಲ ಪೂರ್ತಿಯಾಗುತ್ತವೆ. ಕುಣಿದು ಗಳಿಸಿಕೊಂಡು ಬರುವವರು ಕೆಲವರೇ ಆದರೂ ಅವರು ಗಳಿಸಿಕೊಂಡು ಬಂದುದನ್ನು ಇಡೀ ಸಮಾಜಕ್ಕೆ ಉಣ ಬಡಿಸುತ್ತಾರೆ. ಅವರು ಸಮಾಜದ ಪ್ರತಿನಿಧಿಗಳಾಗಿ ಊರ ಹಿರಿಯರಿಂದ ಆಯ್ಕೆಯಾದವರಾದ್ದರಿಂದ ಅವರ ಪೂಜೆ ಫಲ ಎಲ್ಲದರಲ್ಲೂ ಸಮಾಜಕ್ಕೆ ಸಮಾನ ಹಂಚಿಕೆಯಿದೆ. ' ಕಾಡಿನ ಹಬ್ಬ ' ಅಂತಹ ಒಂದು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕಾಡಿನ ಕುಣಿತದ ಹಾಡುಗಳು ತುಂಬ ಸ್ವಾರಸ್ಯಕರವಾಗಿದ್ದು ಸಾಂಸ್ಕೃತಿಕ ಹಾಗು ಸಾಮಾಜಿಕ ದೃಷ್ಟಿಯಿಂದ ಈ ಹಾಡುಗಳು ಅಧ್ಯಯನ ಯೋಗ್ಯವಾಗಿವೆಯೆಂದು ಹೇಳಬಹುದು. ಅವರ ಒಂದು ಹಾಡಿನ ನಾಲ್ಕು ಸಾಲುಗಳು ಹೀಗಿವೆ .

" ಓ ಕಾಡ್ಯಾ... ತೊಕನಾ ರಾಚೀಲಿ ಬಂದ್ನಲ ಕಾಡ್ಯಾ "

ತೋಟ್ಯಾಗು ತೆರನೆ ಮೂಡ ಬಂದ ಕಾಡ್ಯಾ

ಅನಗಲ್ ಅಡಿಯಾಗುಲ್ಲ | ಲಾಡಗೋಲ ರಸಗೋಲ

ಏನಂತೀ ಅಡಗೇ | ಕಜ್ಜಿ ತುರಿ ತೆಗುವೋ

ರೋಗಾ ರುಜಿ ತೆಗುವೋ | ಜರ ಚಾಡಿ ತೆಗುವೋ

ಕಾಲಕ್ಕೊಂದು ಹಬ್ಬವೋ

ಮೂರ್ ಮಕ್ಕಳ ಕಟ್ಕಂಡಿ ಬಂದ್ನಲ ಕಾಡ್ಯಾ....."

ಉಲ್ಲೇಖ

[ಬದಲಾಯಿಸಿ]
  1. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟ ಸಂಖ್ಯೆ: ೩೦-೩೧.