ಸದಸ್ಯ:Bhagyashree456/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ಥಿಕ ಸಮೀಕ್ಷೆ (Economics Survey) 2013-2014

ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು 2013-2014ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಜುಲೈ 9ರಂದು ಲೋಕಸಭೆಯಲ್ಲಿ ಮಂಡಿಸಿದರು. ಮಂದಗತಿಯಲ್ಲಿರುವ ಅರ್ಥ ವ್ಯವಸ್ಥೆಯನ್ನು ಪ್ರಗತಿಯ ಹಾದಿಗೆ ತರಲು ಹೂಡಿಕೆ ಪರಿಸರವನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಆರ್ಥಿಕ ಸಮೀಕ್ಷೆ  ಮುಖ್ಯಾಂಶಗಳು ಹೀಗಿವೆ:

ಯುವ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಈ ವರ್ಷ ಭಾರತದ ಅರ್ಥ ವ್ಯವಸ್ಥೆ ಶೇ.5.4 ರಿಂದ 5.9 ರವರೆಗೆ ಅಂದಾಜು ಪ್ರಗತಿ ಸಾಧಿಸುವ ಸಾಧ್ಯತೆಗಳಿವೆ. ಆದರೆ, ದುರ್ಬಲ ಮುಂಗಾರು ಮತ್ತು ಗೊಂದಲಮಯ ಬಾಹ್ಯ ಪರಿಸರವು ಆತಂಕಕಾರಿಯಾಗಿ ಉಳಿಯಲಿದೆ.

ಕಳೆದ 2 ವರ್ಷಗಳಿಂದ ಅರ್ಥವ್ಯವಸ್ಥೆಯ ಪ್ರಗತಿ ಮಂದಗತಿಯಲ್ಲಿರುವುದು ಕೈಗಾರಿಕಾ ವಲಯದ ಮೇಲೆ ಪರಿಣಾಮ ಬೀರಿದೆ. ಈ ಅವಧಿಯಲ್ಲಿ ಹಣದುಬ್ಬರ ದರವೂ ಕುಸಿದಿದೆ. ಆದರೆ ಸಂತೃಪ್ತ ಮಟ್ಟಕ್ಕಿಂತ ಮೇಲಿದೆ. ಆಹಾರ ಹಣದುಬ್ಬರವು ಏರಿಕೆಯ ಹಂತದಲ್ಲಿ ಮುಂದುವರಿಯಲು ಇದು ಕಾರಣವಾಗಿದೆ. ಹಣದುಬ್ಬರ ವರ್ಷಾಂತ್ಯದಲ್ಲಿ ಇಳಿಕೆ ಕಾಣುವ ಎಲ್ಲಾ ನಿರೀಕ್ಷೆಗಳಿವೆ. ಇದು ಆರ್ ಬಿಐನ ಬಡ್ಡಿದರ ಇಳಿಸುವ ಕ್ರಮಗಳಿಗೆ ಪ್ರೇರಣೆ ನೀಡಲಿದೆ. ಜತೆಗೆ, ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿಸಲು ಇಂಬು ಕೊಡಲಿದೆ. ಜಾಗತಿಕ ಅರ್ಥ ವ್ಯವಸ್ಥೆ ಸಾಧಾರಣವಾಗಿ ಸುಧಾರಣೆ ಕಾಣುವ ಎಲ್ಲಾ ನಿರೀಕ್ಷೆಗಳಿವೆ. ಮುಂದುವರಿದ ರಾಷ್ಟ್ರಗಳ ಅರ್ಥ ವ್ಯವಸ್ಥೆ ಉತ್ತಮವಾಗುತ್ತಿರುವುದೇ ಈ ನಿರೀಕ್ಷೆಗೆ ಕಾರಣ. ಹಿನ್ನೆಲೆಯಲ್ಲಿ ದೇಶದ ಅರ್ಥವ್ಯವಸ್ಥೆ ಈ ವರ್ಷ ಮತ್ತು ಮುಂದಿನ ದಿನಗಳಲ್ಲಿ ಪ್ರಗತಿಯ ಪಥಕ್ಕೆ ಸಾಗುವುದನ್ನು ನೋಡಬಹುದು.

ದುರ್ಬಲ ಮುಂಗಾರು, ಬಾಹ್ಯ ಸವಾಲುಗಳು ಮತ್ತು ದುರ್ಬಲ ಹೂಡಿಕೆ ಪರಿಸರದಿಂದಾಗಿ ಅರ್ಥ ವ್ಯವಸ್ಥೆ ಮಂದಗತಿಯಲ್ಲಿದೆ. ಇದರ ಪರಿಣಾಮವಾಗಿ ಕಳೆದ ವರ್ಷ ಜಿಡಿಪಿ ಪ್ರಗತಿ ದರ ಶೇ.4.7ಕ್ಕೆ ಕುಸಿದಿತ್ತು. ಆದರೆ, ಹೂಡಿಕೆ ಪರಿಸರ ಮತ್ತು ಆಡಳಿತ ಸುಧಾರಣೆಗೆ ಈಗ ಸರಕಾರ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಮುಂಬರುವ ದಿನಗಳಲ್ಲಿ ಅರ್ಥ ವ್ಯವಸ್ಥೆ ಶೇ. 7 ರಿಂದ 8ರ ಮಟ್ಟಕ್ಕೆ ಬೆಳವಣಿಗೆ ಕಾಣಲಿದೆ.

ದೇಶದಲ್ಲಿ ವ್ಯಾಪಾರ, ವಹಿವಾಟಿನ ಭಾವನೆಗಳನ್ನು ಪುನಶ್ಚೇತನಗೊಳಿಸುವುದೇ ಸರಕಾರದ ಆದ್ಯತೆಯಾಗಿದೆ. ಹೂಡಿಕೆ ಆವರ್ತವನ್ನು ಪುನಾರಂಭಿಸುವುದೇ ಸರಕಾರದ ಉದ್ದೇಶ. ಅರ್ಥ ವ್ಯವಸ್ಥೆಯಲ್ಲಿರುವ ರಚನಾತ್ಮಕ ಅಡೆತಡೆಗಳನ್ನು ನಿವಾರಿಸಿ, ವಿತ್ತೀಯ ಸದೃಢತೆಗೆ ಪೂರಕವಾಗಿ ನೀತಿಗಳನ್ನು ಜಾರಿಗೆ ತರಲು ಒತ್ತು ನೀಡಲಾಗುವುದು.