ಸದಸ್ಯ:Arpitha hb/ನನ್ನ ಪ್ರಯೋಗಪುಟ
ಲಾರೆನ್ಸ್ ಕೋಹಲ್ಬರ್ಗ್ ೨೦ ನೇ ಶತಮಾನದ, ಅಮೆರಿಕದ ಪ್ರಖ್ಯಾತ ಮನಶಾಸ್ತ್ರಜ್ಞರು ಹಾಗೂ ಶಿಕ್ಷಣ ತಜ್ಞರು. ಮನುಷ್ಯರಲ್ಲಿ ನೈತಿಕ ಬೆಳವಣಿಗೆ [೧]ಬಗ್ಗೆ ನೀಡಿರುವ ಇವರ ಸಿದ್ಧಾಂತ ಪ್ರಸಿದ್ಧಿ ಪಡೆದಿದೆ.
ಬಾಲ್ಯ ಮತ್ತು ಕುಟುಂಬ
[ಬದಲಾಯಿಸಿ]ಕೋಹಲ್ಬರ್ಗ್ ಅವರು ನ್ಯೂಯಾರ್ಕ್ ನ ಬ್ರೌನ್ಸ್ವಿಲ್ಲೆ ನಲ್ಲಿ ಅಕ್ಟೋಬರ್ ೨೫, ೧೯೨೭ರಂದು ಜನಿಸಿದರು. ಅಲ್ಫ್ರೆಡ್ ಕೋಹಲ್ಬರ್ಗ್ ಮತ್ತು ಅವರ ಎರಡನೇ ಹೆಂಡತಿಯಾದ ಚಾರ್ಲೆಟ್ ಅಲ್ಬ್ರೆಚ್ಟ್ ದಂಪತಿಯ ನಾಲ್ಕನೇ ಮಗ. ತಂದೆ ಜರ್ಮನ್ ಉದ್ಯಮಿ ಹಾಗೂ ತಾಯಿ ಜರ್ಮನ್ ರಸಾಯನಶಾಸ್ತ್ರಜ್ಞೆ. ಕೋಹಲ್ಬರ್ಗ್ ಅವರು ೧೪ ವಯಸ್ಸಿದ್ದಾಗಲೇ, ತಮ್ಮ ತಂದೆ ತಾಯಿಗಳು ವಿಚ್ಛೇದನ ಪಡೆದ ಕಾರಣ, ಕೋಹಲ್ಬರ್ಗ್ ಮತ್ತು ಅವರ ಅಕ್ಕಂದಿರು ಹಾಗೂ ಅಣ್ಣ ಆರು ತಿಂಗಳಿಗೊಮ್ಮೆ ತಂದೆ-ತಾಯಿಯೊಡನೆ ಇದ್ದು ಬರುತ್ತಿದ್ದರು.ಮಸಾಚುಸೆಟ್ಸ್ ನಲ್ಲಿ ಪ್ರೌಢ ಶಾಲೆಯನ್ನು ಮುಗಿಸಿ, ಹಲವಾರು ಯುದ್ಧಗಳಲ್ಲಿಯೂ ಭಾಗಿಯಾಗಿದ್ದರು. ೧೯೪೮ರಲ್ಲಿ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿ, ಅಲ್ಲಿಯೇ ೧೨೫೮ರಾಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ೧೯೫೫ರಲ್ಲಿ ಲೂಸಿ ಸ್ಟಿಗ್ಬರ್ಗ್ ಅವರನ್ನು ಮದುವೆಯಾಗಿ ಎರಡು ಗಂಡು ಮಕ್ಕಳ ತಂದೆಯಾದರು. ಕ್ಯಾಲಿಫೋರ್ನಿಯ, ಹಾರ್ವರ್ಡ್ ಹಾಗೂ ಶಿಕಾಗೋ ವಿಶ್ವವಿದ್ಯಾಲಯಗಳಲ್ಲಿ[೨] ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕೊಡುಗೆಗಳು
[ಬದಲಾಯಿಸಿ]ಮತ್ತೊಬ್ಬ ಮನಶಾಸ್ತ್ರಜ್ಞರಾದ ಜೀನ್ ಪಿಯಾಜೆಟ್[೩] ಅವರ ಕಾರ್ಯಗಳಿಂದ ಸ್ಫೂರ್ತಿ ಪಡೆದು ನೈತಿಕ ಬೆಳವಣಿಗೆಯ ಹಂತಗಳನ್ನು ಪ್ರತಿಪಾದಿಸಿದರು.[೪] ತಮ್ಮ ಈ ವಿಷಯದ ಬಗ್ಗೆ ಆಸಕ್ತಿಯು ಹೊಸ ಕ್ಷೇತ್ರವನ್ನೇ ಸೃಷ್ಟಿ ಮಾಡಿತು. ಮೂರು ಮುಖ್ಯ ವಿಭಾಗಗಳಲ್ಲಿ, ಒಟ್ಟು ಆರು ಹಂತಗಳಿವೆ. ಮೊದಲನೇ ಹಂತದಲ್ಲಿ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ನೈತಿಕತೆ ಬೆಳೆಸಿಕೊಳ್ಳುತ್ತೇವೆ, ಎರಡನೇ ಹಂತದಲ್ಲಿ ನೈತಿಕತೆಯಿಂದಾಗುವ ಸ್ವಂತ ಲಾಭಗಳನ್ನು ನೋಡಿಕೊಳ್ಳುತ್ತೇವೆ, ಮೂರನೇ ಹಂತದಲ್ಲಿ ಸಮಾಜದ ರೀತಿನೀತಿಯಂತೆ ನಡೆದುಕೊಳ್ಳುತ್ತೇವೆ, ನಾಲ್ಕನೇ ಹಂತದಲ್ಲಿ ಕಾನೂನು ಸುವ್ಯವಸ್ಥೆ ಇರುವಂತೆ ನಮ್ಮ ವರ್ತನೆ ಇರುತ್ತದೆ, ಐದನೇ ಹಂತದಲ್ಲಿ ಸಮಾಜದೊಂದಿಗಿನ ಒಪ್ಪಂದಗಳಂತೆ ಜವಾಬ್ದಾರಿಯುತವಾಗಿ ಮುನ್ನಡೆಯುತ್ತೇವೆ ಹಾಗೂ ಆರನೇ ಹಂತದಲ್ಲಿ ಸಾರ್ವತ್ರಿಕ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತೇವೆ. ಪ್ರತಿಯೊಂದು ಹಂತದಲ್ಲೂ ದ್ವಂದ್ವಗಳನ್ನು ಎದುರಿಸುವಾಗ ನೈತಿಕ ತರ್ಕಗಳ ಆಧಾರದ ಮೇಲೆ ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಈ ಸಿದ್ಧಾಂತದ ಅನುಸಾರ ಮಕ್ಕಳು ಹಿರಿಯರನ್ನು ಮಾದರಿಗಳನ್ನು ಇಟ್ಟುಕೊಂಡು ಅಥವಾ ಸಮಾಜದ ಇತರ ಗುಂಪುಗಳಿಗೆ ಅನುಗುಣವಾಗಿ ನೈತಿಕ ಮೌಲ್ಯಗಳನ್ನು ರೂಪಿಸಿಕೊಳ್ಳುತ್ತಾರೆ. ಆದ್ದರಿಂದ ನೈತಿಕ ಶಿಕ್ಷಣ ಶಾಲೆಗಳಲ್ಲಿ ಮುಖ್ಯ ಎಂಬುದನ್ನು ಮನಗಂಡ ಕೋಹಲ್ಬರ್ಗ್, ಅದು ಕಾರ್ಯರೂಪಕ್ಕೆ ತರುವಂತೆ ನೋಡಿಕೊಂಡರು. ಈ ಸಿದ್ಧಾಂವನ್ನು ಜೇಮ್ಸ್ ರೆಸ್ಟ್ ಹಾಗೂ ಎಲ್ಲಿಯಟ್ ಟ್ಯುರಿಯಲ್ ಅಂತಹ ಮಹಾನ್ ವಿದ್ವಾಂಸರು ಬೆಂಬಲಿಸಿದರು. ಬಹುಮುಖ್ಯವಾಗಿ ಹೆನ್ಸ್ ಡಿಲೆಮ್ಮ ಎನ್ನುವ ಪರಿಕಲ್ಪನೆಯನ್ನು ನೀಡಿದರು. ಇದರ ಪ್ರಕಾರ ಯುರೋಪಿನಲ್ಲಿಹೆನ್ಸ್ ಎಂಬ ವ್ಯಕ್ತಿಯು ತನ್ನ ಹೆಂಡತಿಯನ್ನು ಉಳಿಸಿಕೊಳ್ಳಲು ಯಾವ ರೀತಿಯ ನೈತಿಕ ತರ್ಕವನ್ನು ಉಪಯೋಗಿಸಬಹುದೆಂಬುದನ್ನು ತಿಳಿಸುತ್ತದೆ. ಹೆಂಡತಿಯ ಪ್ರಾಣವನ್ನು ಉಳಿಸುವುದು ಮುಖ್ಯವೋ ಇಲ್ಲವೇ ಹೆಂಡತಿಯನ್ನು ಉಳಿಸಿಕೊಳ್ಳಲು ಕದ್ದು ತರುವ ಔಷಧಿಯು ಮುಖ್ಯವೇ ಹಾಗೂ ಇದಕ್ಕೆ ಶಿಕ್ಷೆ ವಿಧಿಸಬೇಕೆ ಎನ್ನುವ ದ್ವಂದ್ವಾರ್ಥಗಳು ಮೂಡುತ್ತವೆ. ಇವರ ಈ ಸಿದ್ಧಾಂತಕ್ಕೆ ಹಲವಾರು ಟೀಕೆಗಳು ವ್ಯಕ್ತವಾಗಿವೆ. ಮೊದಲನೆಯದಾಗಿ, ಕೋಹಲ್ಬರ್ಗ್ ಪ್ರಕಾರ ಮಹಿಳೆಯರು ನೈತಿಕ ಬೆಳವಣಿಗೆಯ ಕೆಳಹಂತಗಳಲ್ಲಿ ಇರುತ್ತಾರೆ ಎಂಬುದಾದರೂ, ಇತರ ಅಧ್ಯಯನಗಳ ಪ್ರಕಾರ ಮಹಿಳೆ ಮತ್ತು ಪುರುಷರು ಇಬ್ಬರು ಮೇಲುಸ್ಥರದ ಹಂತಗಳನ್ನು ತಲುಪಬಹುದು. ಎರಡನೆಯದಾಗಿ ನೈತಿಕ ತರ್ಕಗಳಿಗೂ, ನೈತಿಕ ನಡವಳಿಕೆಗೂ ಇರುವ ಸಂಬಂಧದ ಬಗ್ಗೆ ಹೆಚ್ಚಾಗಿ ಒತ್ತು ನೀಡಲಿಲ್ಲ ಎಂಬುದು. ಮೂರನೆಯದಾಗಿ ಕೆಲವೊಮ್ಮೆ ಅಂತಃಪ್ರಜ್ಞೆಯನ್ನು ಬಳಸಿಯೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಹಾಗೂ ಪ್ರತಿಬಾರಿಯೂ ಅವು ನೈತಿಕ ಮೌಲ್ಯಗಳನ್ನು ಅವಲಂಬಿಸಬೇಕಾಗಿಲ್ಲವೆಂಬುದು. ನಾಲ್ಕನೆಯದಾಗಿ ಹೆನ್ಸ್ ಡಿಲೆಮ್ಮ ಕಾಲ್ಪನಿಕ ಸನ್ನಿವೇಶವಾಗಿದ್ದು, ನಿಜ ಜೀವನದಲ್ಲಿ ಯಾವ ರೀತಿಯ ವರ್ತನೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂಬುದು ತಿಳಿಯಲು ಯತ್ನಿಸಿಲ್ಲ. ಇವರ ಕೆಲವು ಬರವಣಿಗೆಗಳೆಂದರೆ 'ಎಸ್ಸೆ ಒನ್ ಮೊರಲ್ ಡೇವಲಪ್ಮೆಂಟ್', 'ದಿ ಫಿಲಾಸಫಿ ಆಫ್ ಮೊರಲ್ ಡೇವಲಪ್ಮೆಂಟ್', ದಿ ಸೈಕಾಲಜಿ ಆಫ್ ಮೊರಲ್ ಡೇವಲಪ್ಮೆಂಟ್', ಇತ್ಯಾದಿ.
ನಿಧನ
[ಬದಲಾಯಿಸಿ]೧೯೭೧ರಲ್ಲಿ, ಸೋಂಕು ತಗುಲಿ ದುರ್ಬಲಗೊಳ್ಳುತ್ತಾ ಬಂದರು. ಜನವರಿ ೧೯, ೧೯೮೭ರಲ್ಲ್ಲಿ ಬಾಸ್ಟನ್ನಿನ ಬಂದರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟರು ಎಂಬುದು ತಿಳಿದುಬಂದಿದೆ. ಸಾವಿನ ಸುದ್ದಿ ತಿಳಿದ ನಂತರ ಅವರ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ವಿಶೇಷ ಸಂಚಿಕೆಗಳನ್ನು ಅವರ ಸ್ಮರಣೆಯಲ್ಲಿ ಬಿಡುಗಡೆ ಮಾಡಿದರು.