ಸದಸ್ಯ:Archana 1840568/WEP 2019-20

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆದುಳು

ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಎರಡೂ ಒಂದಕ್ಕೊಂದು ಪೂರಕವಾಗಿವೆ. ಆದರೆ ವೈದ್ಯವಿಜ್ಞಾನ ಮೆದುಳಿನ ಬಗ್ಗೆ ತಿಳಿದಿರುವ ಮಾಹಿತಿ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅತ್ಯಲ್ಪ. ಏಕೆಂದರೆ ಮೆದುಳಿನ ಕಾರ್ಯವೈಖರಿ ಮತ್ತು ಜೀವಕೋಶಗಳ ಅಂಶಗಳು ತೀರಾ ಸಂಕೀರ್ಣ ಮತ್ತು ಜಟಿಲವಾಗಿವೆ. ಹಾಗಾಗಿ ಮನುಷ್ಯರು ಯೋಚಿಸುವ ಶಕ್ತಿ ಏರುಪೇರಾದರೆ ಆಗುವ ಮನೋರೋಗ ಇಂದಿಗೂ ವೈದ್ಯವಿಜ್ಞಾನಕ್ಕೆ ಒಂದು ಸವಾಲಾಗಿದೆ.ಇದುವರೆಗೂ ಮನೋರೋಗಕ್ಕೆ ಮದ್ದಿಲ್ಲ ಎಂದೇ ನಂಬಿಕೊಂಡು ಬಂದಿದ್ದೆವು. ಆದರೆ ಇತ್ತೀಚೆಗೆ ಮೆದುಳಿನ ಸಂಶೋಧನೆ ಮತ್ತು ಚಿಕಿತ್ಸಾ ಕ್ರಮಗಳಿಗೆ ಹೆಚ್ಚಿನ ಒತ್ತು ಮತ್ತು ಧನಸಹಾಯ ನೀಡಿರುವುದರಿಂದ ಮೆದುಳಿನ ಕಾರ್ಯವೈಖರಿಯನ್ನು ಅರಿಯುವ ನಿಟ್ಟಿನಲ್ಲಿ ಹಲವು ಮಾಹಿತಿಗಳು ಹೊರಬಂದಿವೆ. ಮೆದುಳಿನ ಬಗ್ಗೆ ನಮಗೆ ತಿಳಿದಿರುವುದು ತೀರಾ ಅಲ್ಪವಾಗಿದ.ಇತ್ತೀಚಿಗೆ ಕಂಡುಹಿಡಿಯಲಾಗಿರುವ ರೂಪುರೇಶೆ ತಂತ್ರಜ್ಞಾನ ಬಂದ ಮೇಲೆಯೇ ಮೆದುಳಿನ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ದೇಹದ ಇತರ ಅಂಗಗಳು ಒಂದು ವಿಧದ ಸ್ನಾಯು ಅಥವಾ ಜೀವಕೋಶಗಳಿಂದ ನಿರ್ಮಿಸಲ್ಪಟ್ಟಿವೆ. ಆದರೆ ಮೆದುಳಿನ ಸರಿಸುಮಾರು ಎಂಭತ್ತೈದು ಶೇಖಡಾ ಸೆರೆಬ್ರಮ್ ಎಂಬ ಕೋಶಗಳಿಂದ ನಿರ್ಮಿಸಲ್ಪಟ್ಟಿದೆ. ಇದು ಅತ್ತ ಪೂರ್ಣ ದ್ರವವೂ ಅಲ್ಲದ, ಇತ್ತ ಪೂರ್ಣ ಘನವೂ ಅಲ್ಲದ ರೂಪದಲ್ಲಿದೆ. ಈ ಎಂಭತ್ತೈದು ಶೇಖಡಾ ಭಾಗ ದೇಹದ ಪ್ರತಿ ಅಂಗದ ಚಲನೆಯನ್ನು ನಿಯಂತ್ರಿಸುತ್ತದೆ. ಮೆದುಳಿನ ತೂಕವನ್ನು ಅಳೆದಾಗ ವಯಸ್ಕ ಪುರುಷರ ಮೆದುಳು ಸರಾಸರಿ 1,336 ಗ್ರಾಂ ಹೊಂದಿದ್ದರೆ ಮಹಿಳೆಯರ ಮೆದುಳು 1,198 ಗ್ರಾಂ ಎಂದು ಕಂಡುಬಂದಿದೆ.ದೇಹದ ಗಾತ್ರಕ್ಕೆ ಹೋಲಿಸಿದರೆ ಮನುಷ್ಯರು ಅತಿ ದೊಡ್ಡ ಮೆದುಳನ್ನು ಹೊಂದಿದ್ದಾರೆ. ಭೂಜೀವಿಗಳಲ್ಲಿಯೇ ಅತಿದೊಡ್ಡದಾದ ಪ್ರಾಣಿಯಾದ ಆನೆಯ ಮೆದುಳು ದೊಡ್ಡಗಾತ್ರದಲ್ಲಿದ್ದರೂ ಆನೆಯ ಶರೀರಕ್ಕೆ ಹೋಲಿಸಿದರೆ ಮನುಷ್ಯರಿಗಿಂತ ಕೊಂಚ ಚಿಕ್ಕದಾಗಿದೆ. ಅತಿ ಚಿಕ್ಕ ಮೆದುಳು ಹೊಂದಿರುವ ಪ್ರಾಣಿ ಎಂದರೆ ಮೀನು (ಇದರ ಸ್ಮರಣ ಶಕ್ತಿ ಕೇವಲ ಒಂದು ಸೆಕೆಂಡುಗಳು ಮಾತ್ರ). ಮೆದುಳಿನ ಹೋಲಿಕೆಯ ಗಾತ್ರಕ್ಕೂ ಪ್ರಾಣಿಯ ಚಿಂತನಾ ಸಾಮರ್ಥ್ಯಕ್ಕೂ ನಿಕಟ ಸಂಬಂಧವಿದೆ.[೧]


ಮೆದುಳು ಮತ್ತು ಆಮ್ಲಜನಕ

ಮೆದುಳಿಗೆ ಸತತವಾಗಿ ರಕ್ತದ ಪೂರೈಕೆ ಆಗುತ್ತಲೇ ಇರಬೇಕು. ಮೆದುಳಿಗೆ ಅಗತ್ಯವಿರುವ ಶಕ್ತಿ ರಕ್ತದಲ್ಲಿರುವ ಗ್ಲುಕೋಸ್ ಮೂಲಕ ಸಿಗುತ್ತದೆ. ಈ ಗ್ಲುಕೋಸ್ ಅನ್ನು ಬಳಸಿ ಮೆದುಳು ಉತ್ಪಾದಿಸುವ ಶಕ್ತಿ ಸುಮಾರು ಮೂವತ್ತರಿಂದ ಮೂವತ್ತೈದು ವ್ಯಾಟ್ ಗಳಷ್ಟಿದೆ.ಮೆದುಳಿಗೆ ಸತತವಾಗಿ ಪೂರೈಕೆಯಾಗುವ ರಕ್ತದಲ್ಲಿ ಆಮ್ಲಜನಕ ಇರಲೇ ಬೇಕು. ಎಷ್ಟು ಎಂದರೆ ಇಡಿಯ ದೇಹಕ್ಕೆ ಪೂರೈಕೆಯಾಗುವ ಆಮ್ಲಜನಕದ ಸುಮಾರು ಇಪ್ಪತ್ತು ಶೇಖಡಾ. ಒಂದು ವೇಳೆ ರಕ್ತದಲ್ಲಿ ಆಮ್ಲಜನಕ ಇಲ್ಲದೇ ಇದ್ದರೆ ಏಳರಿಂದ ಒಂಭತ್ತು ಸೆಕೆಂಡುಗಳಲ್ಲಿಯೇ ಸ್ಮೃತಿ ತಪ್ಪುತ್ತದೆ.ಮೆದುಳಿಗೆ ಹೆಚ್ಚಿನ ಭಾರ ನೀಡಿದಾಗ ಮೆದುಳಿನ ತಾಪಮಾನ ಏರುತ್ತದೆ. ಒಂದು ವೇಳೆ ಸರಿಯಾದ ಪ್ರಮಾಣದ ಆಮ್ಲಜನಕ ಸಿಗದೇ ಇದ್ದಾಗಲೂ ಮೆದುಳು ವಿಪರೀತ ಬಿಸಿಯಾಗುತ್ತದೆ. ಈ ಹೊತ್ತಿನಲ್ಲಿ ಮೆದುಳು ತಂಪುಗೊಳ್ಳಲು ಹೆಚ್ಚಿನ ಗಾಳಿಯನ್ನು ಒಳಸೆಳೆದುಕೊಳ್ಳಲು ಸ್ನಾಯುಗಳಿಗೆ ಸೂಚನೆ ನೀಡುತ್ತದೆ. ಇದೇ ಆಕಳಿಕೆ. ಆಕಳಿಕೆಯಿಂದ ಕೂಡಲೇ ಕೊರತೆಯಿದ್ದ ಆಮ್ಲಜನಕ ಪೂರೈಕೆಗೊಂಡು ತಂಪುಗೊಳ್ಳುತ್ತದೆ. ಮೆದುಳಿನಲ್ಲಿ ಅತಿಸೂಕ್ಷ್ಮವಾದ ರಕ್ತನಾಳಗಳಿದ್ದು ಸತತವಾಗಿ ರಕ್ತವನ್ನು ಪೂರೈಸುತ್ತಾ ಇರುತ್ತದೆ. ರಕ್ತದ ಮೂಲಕ ಆಗಮಿಸಿದ ಆಮ್ಲಜನಕವನ್ನು ಮೆದುಳಿನ ಪ್ರತಿ ಜೀವಕೋಶಕ್ಕೆ ತಲುಪಿಸುವುದು ಇವುಗಳ ಕೆಲಸ.ಇವುಗಳನ್ನು ಒಂದು ವೇಳೆ ಬಿಡಿಸಿ ಒಂದೇ ನಾಳವನ್ನಾಗಿಸಿದರೆ ಅದರ ಉದ್ದ 150,000ಮೈಲುಗಳಾಗುತ್ತದೆ! ಅಲ್ಲದೇ ಈ ನಾಳಗಳು ಅತಿ ಬಲಿಷ್ಠವೂ ಆಗಿರುತ್ತವೆ. ಅಲ್ಲದೇ ರಕ್ತವನ್ನು ಪೂರೈಸುವ ವೇಗವೂ ಅತಿ ಹೆಚ್ಚಿರುತ್ತದೆ.


ಮೆದುಳಿನ ಚಟುವಟಿಕೆಯನ್ನು ಬಿಳಿದ್ರವ್ಯ ಮತ್ತು ಬೂದುದ್ರವ್ಯ ಎಂಬ ಎರಡು ವಿಧದ ದ್ರವ್ಯಗಳು ನಿಯಂತ್ರಿಸುತ್ತವೆ. ಬಿಳಿ ದ್ರವ್ಯ ಶೇಖಡಾ ಅರವತ್ತಿಷ್ಟದ್ದರೆ ಉಳಿದ ನಲವತ್ತು ಶೇಖಡಾ ಬೂದುದ್ರವ್ಯವಾಗಿದೆ. ಈ ಎರಡೂ ದ್ರವ್ಯಗಳು ಸತತವಾಗಿ ಸಂಕೇತಗಳನ್ನು ಕಳುಹಿಸುತ್ತಾ ಸ್ವೀಕರಿಸುತ್ತಾ ಇದ್ದು ದೇಹದ ವಿವಿಧ ಚಟುವಟಿಕೆಯನ್ನು ನಿಯಂತ್ರಿಸುತ್ತವೆ. ಆದರೆ ಎರಡೂ ದ್ರವ್ಯಗಳು ಪ್ರತ್ಯೇಕ ಅಂಗಗಳನ್ನು ನಿಯಂತ್ರಿಸುತ್ತವೆ. ಇವರಡೂ ದ್ರವ್ಯಗಳಲ್ಲಿ ಬೂದುದ್ರವ್ಯ ಪ್ರಮುಖವಾದ ಚಟುವಟಿಕೆಗಳನ್ನು (ನಿರ್ಣಯ ಕೈಗೊಳ್ಳುವುದು, ಹೊಸ ವಿಷಯಗಳನ್ನು ಗ್ರಹಿಸುವುದು ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು) ನಿರ್ವಹಿಸಲು ನ್ಯೂರಾನ್ ಗಳನ್ನು ಬಳಸಿಕೊಳ್ಳುತ್ತದೆ. ಬಿಳಿದ್ರವ್ಯ ದೇಹದ ಐಚ್ಛಿಕ ಮತ್ತು ಅನೈಚ್ಛಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಇತ್ತೀಚಿನ ಸಂಶೋಧನೆಗಳ ಮೂಲಕ ಸಾಬೀತಾದ ವಿಷಯವೆಂದರೆ ಮೆದುಳಿಗೆ ಸಾಗರ ಉತ್ಪನ್ನಗಳು ಅತ್ಯುತ್ತಮ ಆಹಾರವಾಗಿದೆ. ಇದರಿಂದ ಮೆದುಳಿನ ಕಾರ್ಯಕ್ಷಮತೆ ಶೇಖಡಾ ಹದಿನೈದರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ.ಮರೆವು ಮೊದಲಾದ ಮೆದುಳಿನ ಕಾಯಿಲೆಗಳನ್ನು ತಡೆಯಲು ವೈದ್ಯರು ಸಾಗರ ಉತ್ಪನ್ನಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಲು ಸಲಹೆ ಮಾಡುತ್ತಾರೆ.[೨]


ಮೆದುಳು ಮತ್ತು ಪರಿಸರ

ನಮ್ಮ ಮೆದುಳು ನಾವಿರುವ ಪರಿಸರದ ಸಮಯಗಳಿಗೆ ಅನುಸಾರವಾಗಿ ಸ್ಪಂದಿಸುತ್ತದೆ. ಒಂದು ವೇಳೆ ಭೂಮಿಯ ಇನ್ನೊಂದು ಭಾಗಕ್ಕೆ ಪಯಣಿಸಿದರೆ ಅಲ್ಲಿನ ಕಾಲಮಾನ ಕೆಲವು ಗಂಟೆಗಳಷ್ಟು ಹಿಂದೆ ಅಥವಾ ಮುಂದೆ ಇರುವುದರಿಂದ ಮೆದುಳು ಆ ಸಮಯಕ್ಕೆ ಹೊಂದಿಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಪ್ರಾರಂಭದ ದಿನಗಳಲ್ಲಿ ಅಲ್ಲಿನ ರಾತ್ರಿಯ ಹೊತ್ತು ನಿದ್ದೆ ಬರದೇ ಹಗಲಿನ ಹೊತ್ತು ನಿದ್ದೆ ತಡೆಯಲಾಗದೇ ಇರುವುದೇ ಜೆಟ್ ಲ್ಯಾಗ್. ಈ ಸ್ಥಿತಿ ಮೆದುಳಿನ ಮೇಲೆ ಪ್ರಭಾವ ಬೀರಬಹುದು ಹಾಗೂ ಸ್ಮರಣಶಕ್ತಿ ಮತ್ತು ಕಲಿಯುವಿಕೆಯ ಸಾಮರ್ಥ್ಯವನ್ನು ಕುಗ್ಗಿಸಬಹುದು. ನಾವು ಯಾವ ವಿಷಯವನ್ನು ಎಷ್ಟು ಬಾರಿ ನೆನಪಿಸಿಕೊಳ್ಳುತ್ತೇವೆಯೋ ಅಷ್ಟೂ ಸಲದ ಮಾಹಿತಿ ಒಂದೇ ಬಗೆಯದ್ದಾಗಿರುವುದಿಲ್ಲ. ಪ್ರತಿ ಬಾರಿಯೂ ಇದಕ್ಕೆ ಸಂಬಂಧಿಸಿದ ವ್ಯಕ್ತಿ ಅಥವಾ ಇತರ ವಿಷಯಗಳು ಕೊಂಚವಾಗಿ ಸೇರುತ್ತಾ ಹೋಗುತ್ತವೆ. ನೆನಪು ಹಳೆಯದಾದಷ್ಟೂ ಹೊಸ ವಿಷಯಗಳು ಸೇರುವ ಸಾಧ್ಯತೆ ಹೆಚ್ಚು.ನಿಸರ್ಗ ಹಗಲು ರಾತ್ರಿಗಳನ್ನು ಸೃಷ್ಟಿಸಿರುವುದೇ ಕೆಲಸ ಮತ್ತು ನಿದ್ರೆಗಾಗಿ. ಮೆದುಳಿನ ಕೋಶಗಳಿಗೂ ರಾತ್ರಿಯ ಕತ್ತಲಿಗೂ ನಿಕಟ ಸಂಬಂಧವಿದೆ. ಸಕಲ ಜೀವಜಾಲ ಈ ರಾತ್ರಿ ಹಗಲಿನ ಬೆಳಕಿನ ಬದಲಾವಣೆಗಳಿಗನುಸಾರವಾಗಿ ತಮ್ಮ ಚಟುವಟಿಕೆಗಳನ್ನು ನಿರ್ವಹಿಸುತ್ತವೆ.[೩]

  1. https://kannada.gizbot.com/news/purpose-brain-computer-interface-system-016023.html
  2. https://kannada.boldsky.com/insync/pulse/2016/facts-you-never-knew-about-the-human-brain.html
  3. https://kannada.boldsky.com/health/wellness/2014/7-incredible-facts-about-the-human-brain-you-probably-didn-t-008359.html