ವಿಷಯಕ್ಕೆ ಹೋಗು

ಸದಸ್ಯ:Anupriya salian/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಪಾರ್ಶ್ವನಾಥ ಸ್ವಾಮಿ, ಜೋಡು ಪದ್ಮಾವತಿ ಕ್ಷೇತ್ರ ಬಸದಿ ಬೊಮ್ಮನಗದ್ದೆ

ಅಂಕೋಲ ತಾಲೂಕಿನ ಬೊಮ್ಮನಗದ್ದೆ ಎಂಬ ಸ್ಥಳದಲ್ಲಿದೆ. ಇಲ್ಲಿಗೆ ಹೋಗಲು ತಾಲೂಕು ಕೇಂದ್ರ ಅಂಕೋಲಾದಿಂದ ೨೦ ಕಿಲೋಮೀಟರ್ ದೂರವಿರುವಂತೆ ಕುಮಟಾದಿಂದ ೩೦ ಕಿಲೋಮೀಟರ್ ದೂರ. ಅಂಕೋಲಾ ತಾಲೂಕಿನಲ್ಲಿರುವ ಗಂಗಾವಳಿ ಶಿರೂರು ಸೇತುವೆಯ ಹತ್ತಿರದಿಂದ ಏಳು ಕಿಲೋಮೀಟರ್ ಒಳಗೆ ಹೋಗಬೇಕು. ಆಗ ಸಿಗುವ ಶಿರಗುಂಜಿಯ ಬೊಮ್ಮನಗದ್ದೆಯ ಪ್ರಶಾಂತ ಸ್ಥಳದಲ್ಲಿ ಈ ಬಸದಿಯು ಸಿಗುತ್ತದೆ.

ಹಿನ್ನಲೆ

[ಬದಲಾಯಿಸಿ]

ಶ್ರೀ ಪಾರ್ಶ್ವನಾಥ ಸ್ವಾಮಿಯು ಮೂಲನಾಯಕರಾಗಿ ಆರಾಧಿಸಲ್ಪಡುವ ಈ ಬಸದಿಯು ಇತ್ತೀಚೆಗೆ ಅಂದರೆ ಸುಮಾರು ೮ ವರ್ಷಗಳ ಹಿಂದೆ ಶ್ರೀ ಧರಣೇಂದ್ರ ಜೈನ್‌ರಿಂದ ನಿರ್ಮಾಣವಾದುದು. ಶ್ರೀ ಸ್ವಾದಿ ಮಠಕ್ಕೆ ಸೇರಿದ್ದೆಂದು ಭಾವಿಸಲಾಗಿದೆ. ಸ್ಥಳೀಯರಾದ ಶ್ರೀ ಧರಣೇಂದ್ರ ಜೈನ್ ಇವರು ಇದನ್ನು ಖಾಸಗಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರೇ ಪುರೋಹಿತರಾಗಿದ್ದುಕೊಂಡು ನಿತ್ಯಾನುಷ್ಟಾನಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇದರ ಹಿನ್ನೆಲೆ ಇತಿಹಾಸಗಳನ್ನು ತಿಳಿಸುವ ಪ್ರಾಚೀನ ಶಾಸನ ಇತ್ಯಾದಿ ದಾಖಲೆಗಳು ಸಿಗುವುದಿಲ್ಲ. ಆದರೆ ಶರಾವತಿ ನದಿಯ ನೀರಿನಲ್ಲಿ ಮುಳುಗಡೆಯಾಗಿರುವ ನಾಗರವಳ್ಳಿ ಎಂಬಲ್ಲಿದ್ದ ಬಸದಿಯನ್ನು ಸ್ಥಳಾಂತರಿಸಿ ಇಲ್ಲಿ ಧರಣೇಂದ್ರ ಜೈನ್‌ರವರೇ ಇದನ್ನು ನಿರ್ಮಿಸಿದ್ದರು. ಈ ಬಸದಿಗೆ ಮೇಗಿನ ನೆಲೆ ಇಲ್ಲ ಕೆಳಗಿನ ಒಂದೇ ಅಂತಸ್ತು ಹೊಂದಿರುವ ಈ ಬಸದಿಯ ಮಾಡಿಗೆ ಟಿನ್ ಶೀಟ್‌ಗಳನ್ನು ಹಾಕಿ ನಿರ್ಮಿಸಲಾಗಿದೆ. ಬದಿಗಳಲ್ಲಿ ಗೋಡೆಗಳ ಬದಲಾಗಿ ಕಬ್ಬಿಣದ ಮೆಶ್ ಹಾಕಿ ಭದ್ರತೆಯನ್ನು ಒದಗಿಸಲಾಗಿದೆ.[]

ವಿಶೇಷತೆ

[ಬದಲಾಯಿಸಿ]

ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ನೇಮಿನಾಥಸ್ವಾಮಿ, ಚೌವೀಸ ತೀರ್ಥಂಕರರು, ಚಕ್ರೇಶ್ವರಿ, ಕೂಷ್ಮಾಂಡಿನಿ, ಧರಣೇಂದ್ರ ಪದ್ಮಾವತಿ ಹಾಗೂ ಈ ಜೋಡಿ ಪದ್ಮಾವತಿಯನ್ನು ಆರಾಧಿಸಲಾಗುತ್ತಿದೆ. ಪೂಜಾ ಅಗತ್ಯಕ್ಕಾಗಿ ವಿಭಿನ್ನ ಜಾತಿಯ ಹೂಗಿಡಗಳನ್ನು ನೆಡಲಾಗಿದೆ. ಹುಬ್ಬಳ್ಳಿ, ಬೆಳಗಾವಿ ಕಡೆಯಿಂದ ಬರುವ ಭಕ್ತಾದಿಗಳು ಪೂಜೆ ಪುರಸ್ಕಾರಾದಿಗಳನ್ನು ನಡೆಸುತ್ತಿದ್ದಾರೆ. ತೀರಾ ವಿಶೇಷವೆನಿಸುವಂತೆ ಒಂದೇ ಶಿಲೆಯಲ್ಲಿ ಇಬ್ಬರು ಪದ್ಮಾವತಿ ದೇವಿಯರು ಮೂಡಿರುವ ಈ ಬಸದಿಯನ್ನು ಜೋಡು ಪದ್ಮಾವತಿ ಕ್ಷೇತ್ರವೆಂದೂ ಕರೆಯುತ್ತಾರೆ.

ಶಿಲಾ ವಿನ್ಯಾಸ

[ಬದಲಾಯಿಸಿ]

ಬಸದಿಗೆ ಮಾನಸ್ತಂಭವಾಗಲೀ, ಚಂದ್ರಶಾಲೆಯಾಗಲೀ, ತ್ಯಾಗಿ ನಿವಾಸವಾಗಲಿ ಇರುವುದಿಲ್ಲ. ಬಸದಿಯ ಪ್ರವೇಶದ್ವಾರದ ಇಕ್ಕೆಲೆಗಳಲ್ಲಿ ಶಿಲ್ಪಕಲಾಕೃತಿಗಳಾಗಲೀ ಇರುವುದಿಲ್ಲ. ಇದು ಚಿಕ್ಕ ಬಸದಿಯಾಗಿರುವುದರಿಂದ ಪ್ರಾರ್ಥನಾ ಮಂಟಪ, ಘಂಟಾ ಮಂಟಪ, ಶುಕನಾಶಿ ಇತ್ಯಾದಿ ಮಂಟಪಗಳೂ ಇರುವುದಿಲ್ಲ. ಈ ಬಸದಿಯಲ್ಲಿರುವ ವಿಶೇಷ ಹಾಗೂ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿ ಒಂದೇ ಶಿಲೆಯಲ್ಲಿ ಮೂಡಿರುವ ಶ್ರೀ ಪದ್ಮಾವತಿ ದೇವಿಯ ಜೋಡಿ ಬಿಂಬಗಳು. ಇದು ಪಾರ್ಶ್ವನಾಥ ಸ್ವಾಮಿಯ ಬಲಬದಿಯಲ್ಲಿ ಸ್ವಲ್ಪ ಕೆಳಗೆ ಇದೆ. ಇದರಲ್ಲಿರುವ ಪದ್ಮಾವತಿ ದೇವಿ ಬಿಂಬಗಳು ಪರಸ್ಪರ ಆಲಂಗಿಸಿಕೊಂಡು ಎದುರು ನೋಡುತ್ತಿವೆ. ಇಬ್ಬರೂ ಕೈಗಳಲ್ಲಿ ಫಲಗಳನ್ನು ಹಿಡಿದುಕೊಂಡಿದ್ದಾರೆ. ಇಬ್ಬರೂ ಸರ್ಷದ ಶರೀರವನ್ನು ಹೊಂದಿದ್ದಾರೆ, ಕಿರೀಟಧಾರಿಗಳಾಗಿದ್ದಾರೆ. ಸರ್ಪದ ಹೆಡೆಗಳು ಏಳೇಳು ಬಾಯಿಗಳನ್ನು ಹೊಂದಿವೆ. ಬದಿಯಲ್ಲೇ ಲಲಿತಾಸನ ಭಂಗಿಯ ಪದ್ಮಾವತಿ ದೇವಿಯ ಇನ್ನೊಂದು ಲೋಹದ ಮೂರ್ತಿ ಇದೆ. ಶ್ರೀ ಪಾರ್ಶ್ವನಾಥ ಸ್ವಾಮಿಯ ಕೆಳಗಡೆ ಇನ್ನೊಂದು ಶಿಲೆಯ ಪದ್ಮಾವತಿ ಅಮ್ಮನವರ ಮೂರ್ತಿ ಇದೆ.

ಆಚರಣೆ

[ಬದಲಾಯಿಸಿ]

ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಿಂಬವು ಶಿಲೆಯದ್ದಾಗಿದ್ದು ಪರ್ಯಂಕಾಸನ ಭಂಗಿಯಲ್ಲಿದೆ. ಪ್ರತಿದಿನ ಸ್ವಾಮಿಗೆ ಅಭಿಷೇಕ ಪೂಜೆಗಳೂ ವಿಶೇಷ ದಿನಗಳಲ್ಲಿ ಪಂಚಾಮೃತ ಅಭಿಷೇಕವೂ ನಡೆಯುತ್ತದೆ. ಬಳಿಯಲ್ಲಿ ಪಾರ್ಶ್ವನಾಥ ಸ್ವಾಮಿಯ ಇನ್ನೊಂದು ಚಿಕ್ಕ ಲೋಹದ ಬಿಂಬವೂ ಇದೆ. ಇಲ್ಲಿ ದಿನಕ್ಕೆ ಒಂದೇ ಬಾರಿ ಪೂಜೆ ನಡೆಯುತ್ತಿದ್ದರೂ ವಾರ್ಷಿಕೋತ್ಸವ, ತೀರ್ಥಂಕರ ಭಗವಾನರ ಜನ್ಮ ಜಯಂತಿಗಳು, ನವರಾತ್ರಿ ಪೂಜೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಇಲ್ಲಿ ಹೇಳಿದ ಹರಕೆಗಳು ಫಲವನ್ನು ನೀಡುತ್ತವೆ ಹಾಗೂ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಬಸದಿಯ ಹೊರಗಡೆ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ತ್ರಿಶೂಲ ಮತ್ತು ನಾಗರ ಕಲ್ಲುಗಳನ್ನು ಕಾಣಬಹುದು. ವಿಶೇಷ ದಿನಗಳಲ್ಲಿ ಪದ್ಮಾವತಿ ದೇವಿಯ ದರ್ಶನ ಸೇವೆ ಇರುತ್ತದೆ. ಇಲ್ಲಿ ಅನೇಕರು ತಮ್ಮ ಸಮಸ್ಯೆಗಳಿಗೆ ಉತ್ತರವನ್ನೂ, ಪರಿಹಾರವನ್ನೂ ಪಡೆಯುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. p. ೪೦೫-೪೦೬.