ಸದಸ್ಯ:Anilkumarthumbasoge/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನಪದ ಅಧ್ಯಯನವೆಂದರೆ ನಮ್ಮ ಎದುರುಗಿರುವ ಗ್ರಾಮದ ಜನಜೀವನವೆಂದೇ ಅರ್ಥ. ಮಾನವನ ಪ್ರತಿಯೊಂದು ಚಟುವಟಿಕೆಯಲ್ಲೂ ಗ್ರಾಮೀಣ ಸೊಗಡು ಇದ್ದೇ ಇರುತ್ತದೆ. ಇದು ಮೇಲು ನೋಟಕ್ಕೆ ನಾಗರಿಕ ಜನತೆಯಲ್ಲಿ ಕಾಣದಿದ್ದರೂ ವಿಶೇಷವಾಗಿ ಅವರ ನಡೆನುಡಿಗಳಲ್ಲಿ  ಕಂಡುಬರುತ್ತದೆ. ಭಾರತ ದೇಶದ ಸಂಸ್ಕೃತಿ, ಪರಂಪರೆ, ನೀತಿ, ನಿಯಮ, ಆಚಾರ-ವಿಚಾರಗಳನ್ನು ರೂಪಿಸುವಲ್ಲಿ ಗ್ರಾಮೀಣ ಸಂಸ್ಕೃತಿ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿನ ಸಂಸ್ಕೃತಿ ಕಾಲ, ದೇಶ, ಪರಿದಿಗಳ ಎಲ್ಲೆ ಮೀರಿ ನಿಂತು ಜೀವನದಿಯಂತೆ ನಿರಂತರವಾಗಿ ಹರಿದು ತನ್ನ ಗುರಿಮುಟ್ಟುತ್ತದೆ. ಗ್ರಾಮದ ಸಂಸ್ಕೃತಿ ಕೂಡ ವಿವಿಧತೆಯಲ್ಲಿ ಏಕತೆಯನ್ನು ಸಂಗಮಗೊಳಿಸುತ್ತದೆ.

‘ಸಂಸ್ಕೃತಿ’ಎಂಬ ಪದವು ವಿಶಾಲ ಅರ್ಥವನ್ನು ಪಡೆದುಕೊಂಡಿದೆ . ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಚೌಕಟ್ಟಿನಿಂದಾಗಿ  ಜ್ಞಾನ, ನಂಬಿಕೆ, ಕಲೆ, ಆಚಾರ-ವಿಚಾರ, ಕಾನೂನು ಸಂಪ್ರದಾಯಗಳು ಹಾಗೂ ಅಭ್ಯಾಸಗಳ ಸಂಕೀರ್ಣ ಮೊತ್ತವೇ ಸಂಸ್ಕೃತಿ. ಜನಪದರಲ್ಲಿನ ಮನೋಧರ್ಮದಲ್ಲಿ ಕಾಣುವ ಹಿರಿತನದ ಸೊಗಸನ್ನು ಗ್ರಾಮೀಣ ಸಂಸ್ಕೃತಿ ಎನ್ನಬಹುದು.ಸಂಸ್ಕೃತಿಕ ನಗರ ಮೈಸೂರು ಜಿಲ್ಲೆಯಿಂದ 52 ಕಿ.ಮೀ. ದೂರದಲ್ಲಿರುವ “ವನಸಿರಿನಾಡು” ಎಂದೇ ಪ್ರಸಿದ್ಧವಾದ ಹೆಚ್.ಡಿ.ಕೊಟೆ ತಾಲ್ಲೂಕಿನಲ್ಲಿ 'ತುಂಬಸೋಗೆ' ಒಂದು ದೊಡ್ಡ ಗ್ರಾಮವಾಗಿದೆ. ತಾಲ್ಲೂಕಿನಿಂದ 9 ಕಿ.ಮೀ. ಸಮೀಪದಲ್ಲಿರುವ ಕಪಿಲ ನದಿಯ ದಂಡೆಯ ಮೇಲಿದೆ. ಕಬಿನಿ ಅಣೆಕಟ್ಟಿನ ಎಡದಂಡೆ ನಾಲೆಯ ನೀರು ಈ ಊರಿನ ಅರ್ಧಭಾಗದ ಸುತ್ತ ಹಾದು ಹೋಗುತ್ತದೆ. ಈ ಗ್ರಾಮ ಭೌಗೋಳಿಕವಾಗಿ ವಿಶಿಷ್ಟತೆ ಹೊಂದಿದ್ದು, ಫಲವತತ್ತೆಯಿಂದ ಕೂಡಿದ ಪ್ರದೇಶವಾಗಿದೆ. ಕೃಷಿಯಲ್ಲಿ ಹತ್ತಿ, ರಾಗಿ, ಹುರುಳಿ, ಹಲಸಂದೆ, ಎಳ್ಳು, ಬಾಳೆ, ತೆಂಗು, ಚೆಂಡು ಹೂ, ಕಾಕಡ, ಕನಕಾಂಬರ ಹೂಗಳು ಇಲ್ಲಿನ ಮುಖ್ಯ ವಾಣ ಜ್ಯ ಬೆಳೆಗಳಾಗಿ ಕಂಡುಬರುತ್ತದೆ.

'ತುಂಬ' ಎಂದರೆ ‘ಹೆಚ್ಚು’ ‘ಸೋಗೆ’ ಎಂದರೆ 'ನವಿಲು' ಎಂದರ್ಥ. ಈ ಗ್ರಾಮದಲ್ಲಿ ತುಂಬ ಅಥವಾ ಹೆಚ್ಚು ಹೆಚ್ಚು ನವಿಲುಗಳು ಇದ್ದರಿಂದ ‘ತುಂಬಸೋಗೆ' ಎಂಬ ಹೆಸರು ಬಂದಿದೆ.ಸಾಂಸ್ಕೃತಿಕವಾಗಿರುವ ತುಂಬಸೋಗೆ ಗ್ರಾಮದಲ್ಲಿ ಜನಪದ ಸಾಹಿತ್ಯ , ಕಲೆ ,ನಾಟಕ, ಸಂಗೀತ ಪರಂಪರೆ ತಲೆಮಾರಿನಿಂದ ತಲೆಮಾರಿಗೆ ಬೆಳೆದು ಬರುತ್ತಲಿದೆ. ಪ್ರೀತಿ ವಾತ್ಸಲ್ಯ ತೊರುವ ಮೂಲಕ ಜಾನಪದೀಯ ಕಲೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ಗ್ರಾಮವಾಗಿದೆ. ಸಾಂಸ್ಕೃತಿಕ ಸಂಪತ್ತನ್ನು ಶೇಖರಿಸುತ್ತಿದ್ದರಿಂದ  "ತುಂಬಿ ಮಡಗಿಕೊಳ್ಳಲು ತುಂಬಸೋಗೆ" ಎಂದು ಕರೆಯುವ ಪ್ರತೀತಿ ಇಂದಿಗೂ ಜನಪದರಲ್ಲಿ ಇರುವುದನ್ನು ಕಾಣಬಹುದಾಗಿದೆ.

ಸಾಂಸ್ಕೃತಿಕ ಕ್ಷೇತ್ರವಾಗಿರುವ ಈ ಗ್ರಾಮದಲ್ಲಿ ಜನಪದ ಸಾಹಿತ್ಯ ಸಂಗೀತ ,ಕಲೆ ,ನಾಟಕ ಮನರಂಜನೆ, ಸಂಪ್ರದಾಯ ಮತ್ತು ಆಚಾರಣೆಗಳು ಪರಂಪರೆಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಈ ಗ್ರಾಮದಲ್ಲಿ ಹಲವಾರು ಜಾತಿ, ಜನಾಂಗಳಿದ್ದು ಸೌಹಾರ್ದತೆಯಲ್ಲಿ ಸಮನ್ವಯ ಸಹಬಾಳ್ವೆಯನ್ನು ಮೈಗೂಡಿಸಿಕೊಂಡು ಬದುಕುತ್ತಿದ್ದಾರೆ. ಗ್ರಾಮ ದೇವತೆ ಮಾರಮ್ಮನ ಹಬ್ಬವನ್ನು ಪ್ರತಿ ವರ್ಷ ಶಿವರಾತ್ರಿ ಹಬ್ಬವಾದ 15 ದಿನಗಳ ನಂತರದಲ್ಲಿ ಭಾನುವಾರದಂದು ನಡೆಯುತ್ತದೆ. ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿಯೇ ಮಾರಮ್ಮನ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ಗ್ರಾಮವಾಗಿದೆ ಎಂದು ಸುತ್ತಮುತ್ತಲ್ಲಿನ ಊರಿನವರು ಇಂದಿಗೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ಕಪಿಲ ನದಿಗೆ ಅಡ್ಡಲಾಗಿ ತುಂಬಸೋಗೆ ಗ್ರಾಮದ ಬಳಿ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು 1948 ರ ಮೇ 21ನೇಯ ತಾರೀಖು ಶಂಕುಸ್ಥಾಪನೆಯನ್ನು ನೆರವೆರಿಸಿದ್ದಾರೆ. ಈ ಸೇತುವೆ ಸರಗೂರು ಮಾರ್ಗದ ಸುತ್ತಮುತ್ತಲಿನ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ತುಂಬಸೋಗೆ ಸೇತುವೆ ಎಂದು ಕರೆಯುವ ಮೂಲಕ ಜನಮನದಲ್ಲಿ ಅಚ್ಚಳಿಯದೆ ಉಳಿಯುವುದರ ಜೊತೆಗೆ ಪ್ರಕೃತಿ ಸೌಂದರ್ಯದಲ್ಲಿ ಕಣ್ಣಿಗೆ ಕೋರೈಸುತ್ತದೆ.