ವಿಷಯಕ್ಕೆ ಹೋಗು

ಸದಸ್ಯ:Amarnath100/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರಬ್ಬ- ದೇಶೀಯ ರೈತರ ಹಬ್ಬಗಳು

[ಬದಲಾಯಿಸಿ]

ದಕ್ಷಿಣ ಕರ್ನಾಟಕದ ರೈತಾಪಿಗಳಲ್ಲಿ ಆಚರಿಸಲ್ಪಡುವ ಬಹುಮುಖ್ಯವಾದ ಆಚರಣೆ. ಇದು ತುಂಬಾ ಸರಳವಾಗಿ ಆಚರಿಸಲ್ಪಡುವ ಕ್ರಿಯೆ. ಆದರೆ ಈ ಆಚರಣೆಯೇ ನಿರ್ದಿಷ್ಟ ವರ್ಷದ ಬೇಸಾಯದ ಕೆಲಸಗಳಿಗೆ ಮುನ್ನುಡಿ. ಗೊಲ್ಲ ಸಮುದಾಯಗಳಲ್ಲಿ ವಿಶೇಷವಾಗಿ ಕಾಣಬಹುದು. ಸಾಮಾನ್ಯವಾಗಿ ಮೃಗಶಿರ, ಆರಿದ್ರಾ ಮಳೆಗಳ ಸಂದರ್ಭದಲ್ಲಿ ಕಾರಬ್ಬವನ್ನು ಆಚರಿಸಲಾಗುತ್ತದೆ. ರಾಗಿ ಅಥವಾ ಭತ್ತದ ಸಸಿ ಮಡಿ (ಒಟ್ಲು ಬಿಡುವುದು) ಹಾಕುವ ಮುನ್ನ ಇದನ್ನು ಆಚರಿಸುವುದು ವಾಡಿಕೆ.

ಸಸಿ ಮಡಿ ಹಾಕುವ ದಿವಸದ ಬೆಳಿಗ್ಗೆ ಕರಿನ ಸೊಪ್ಪನ್ನು ತಂದು ತೋರಣ ಮಾಡಿ ಬಾಗಿಲಿಗೆ ಕಟ್ಟುತ್ತಾರೆ. ಕರಿನ ಸೊಪ್ಪೆಂದರೆ ಮಾವು, ಬೇವು ಮತ್ತು ಲಕ್ಕಿ -ಈ ಮೂರು ಸೊಪ್ಪುಗಳ ಸಂಗ್ರಹ. ಬೇಸಾಯದ ಸಲಕರಣೆಗಳಾದ ನೇಗಿಲು ನೊಗ ಮೇಣಿ ಇತ್ಯಾದಿ ಮುಟ್ಟುಗಳನ್ನೆಲ್ಲಾ ತೊಳೆದು ಅವುಗಳಿಗೆ ಸುಣ್ಣ-ಕೆಮ್ಮಣ್ಣು ಹಚ್ಚಿ, ಅಂಗುನೂಲು (ಹರಿಶಿನದ ದಾರ) ಕಟ್ಟಿ, ಎಡೆಹಾಕಿ ಪೂಜಿಸುತ್ತಾರೆ. ಎತ್ತು-ಕರಗಳಿಗೂ ಮೈತೊಳೆದುವುಗಳ ಹಣೆಗೆ, ಗೋಪುರಕ್ಕೆ, ಮುಂಗೊರಸಿಗೆ ಅಕ್ಷತೆ (ಅಕ್ಕಸ್ತೆ) ಇಟ್ಟು, ಕೊರಳಿಗೆ ಅಂಗುನೂಲು ಕಟ್ಟಿ ಎಡೆ ತಿನ್ನಿಸುತ್ತಾರೆ. ಅದೇ ದಿನ ಸಾಯಂಕಾಲ ಮನೆಯಲ್ಲಿ ಕುಕ್ಕೆಯೊಂದಕ್ಕೆ (ಬಿದಿರಿನಲ್ಲಿ ಮಾಡಿದ ಬುಟ್ಟಿ) ಬಿತ್ತನೆ ರಾಗಿ ತೋಡಿಕೊಂಡು, ನಡುಮನೆಯಲ್ಲಿ ನೆಲ ಸಾರಿಸಿ ರಂಗೋಲಿ ಬಿಡಿಸಿದ ಜಾಗದಲ್ಲಿ ಆ ಬುಟ್ಟಿಯನ್ನು ಇಟ್ಟು ಅದಕ್ಕೂ ಸಹ ಅಂಗುನೂಲು, ಅಕ್ಸತ್ತೆ ಇಟ್ಟು, ವಿಭೂತಿ ಧರಿಸಿ ಕುಕ್ಕೆ ಸಮೇತ ಹೊಲಕ್ಕೆ ತೆಗೆದುಕೊಂಡು ಹೋಗಿ ರಾಗಿ ಒಟ್ಲು ತೊಳೆಯುತ್ತಾರೆ.

ಶೆಟ್ಟಿಕೆರೆಯ ವಿಶೇಷ ಕಾರಬ್ಬ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ನಡೆಯುವ ಕಾರಬ್ಬ ವಿಶೇಷವಾದುದು. ಆ ವರ್ಷ ಯಾವ ಬೆಳೆ ಹುಲುಸಾಗುತ್ತದೆ, ಯಾವ ಬೆಳೆ ಚೆನ್ನಾಗಿ ಹುಲುಸುವರಿಯುವುದಿಲ್ಲ ಎಂಬುದನ್ನು ಇಲ್ಲಿ ನಡೆಯುವ ಧಾನ್ಯದ ಗಡಿಗೆ ಒಡೆಯುವ ಕ್ರಿಯೆಯ ಮೂಲಕ ರೈತಾಪಿಗಳು ತಿಳಿಯುತ್ತಾರೆ. ಹಳ್ಳಿಗರು ಕಾರಬ್ಬ ಮಾಡಿದ ಮರುದಿವಸ ಮೂಲಾ ನಕ್ಷತ್ರದಂದು ಇಲ್ಲಿ ಕಾರಬ್ಬ ನಡೆಯುತ್ತದೆ. ಅಂದು ಊರಿನ ಸಕಲಾದಿ ಜನರೂ ಮತ್ತು ಸುತ್ತ-ಮುತ್ತಲ ಗ್ರಾಮಗಳ ಒಕ್ಕಲುಗಳೂ ಶೆಟ್ಟಿಕೆರೆಯ ಆಚಿಜನೇಯ ದೇವಾಲಯದ ಬಳಿ ಸೇರಿರುತ್ತಾರೆ. ಒಂದು ಮಣ್ಣಿನ ಗಡಿಗೆಯಲ್ಲಿ (ಕರಗ) ತಾವು ಬೆಳೆಯುವ ಸಕಲ ಧಾನ್ಯಗಳನ್ನೂ ಒಂದೊಂದು ಹಿಡಿಯಷ್ಟು ತುಂಬಿ ಆ ಗಡಿಗೆಗೆ ಕರಿನ ಸೊಪ್ಪು, ಅಂಗುನೂಲು, ಅಕ್ಷತೆಗಳನ್ನಿಟ್ಟು ಪೂಜಿಸುತ್ತಾರೆ. ಹೀಗೆ ಪೂಜಿಸಿದ ನಂತರ ಎಲ್ಲರ ಅಪ್ಪಣೆ ಪಡೆದು ಪೂಜಾರಪ್ಪನು ಅಥವಾ ನಿಗದಿತ ವ್ಯಕ್ತಿಯು ಆ ಧಾನ್ಯ ತುಂಬಿದ ಕರಗವನ್ನು ಜೋಡೇತ್ತಿನ ನೇಗಿಲಿನಿಂದ ಹೊಡೆಯುತ್ತಾನೆ. ಹಾಗೆ ಹೊಡೆದ ರಭಸಕ್ಕೆ ಒಳಗಿನ ಧಾನ್ಯಗಳೆಲ್ಲಾ ದೂರಕ್ಕೆ ಚಲ್ಲಾಡುತ್ತವೆ. ಹೀಗೆ ಚೆಲ್ಲಿದ ಧಾನ್ಯಗಳಲ್ಲಿ ಯಾವುದು ಎಲ್ಲಕ್ಕಿಂತ ಮುಂದೆ ಬಿದ್ದಿರುತ್ತದೆಯೋ ಆ ಧಾನ್ಯ ಈ ವರ್ಷ ಉತ್ತಮ ಫಸಲು ಕೊಡುತ್ತದೆಂದು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಮುಂಗಾರು ಒಳ್ಳೆಯದೋ ಅಥವಾ ಹಿಂಗಾರು ಒಳ್ಳೆಯದೋ ಎಂಬುದನ್ನೂ ಸಹ ಈ ಆಚರಣೆಯಲ್ಲಿಯೇ ತಿಳಿಯುತ್ತಾರೆ. ಅಂದರೆ ಕರಗ ಹೊಡೆದಾಗ ಕಾಳುಗಳು ಮುಂದೆ ಬಿದ್ದಿದ್ದರೆ ಹಿಂಗಾರು ಒಳ್ಳೆಯದು ಮತ್ತು ರಾಗಿ ಮುಂದೆ ಬಿದ್ದಿದ್ದರೆ ಮುಂಗಾರು ಒಳ್ಳೆಯದು ಎಂದರ್ಥ.