ವಿಷಯಕ್ಕೆ ಹೋಗು

ಸದಸ್ಯ:Afridi kumta/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬)- ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಬಹುಮಖ ವ್ಯಕ್ತಿತ್ವವನ್ನು ಹೊಂದಿದ್ದವರು. ಅವರ ಅಧ್ಯಯನಶೀಲತೆ ಅಪಾರವಾದುದು. ತಮ್ಮ ವಿದ್ವತ್, ಪಾಂಡಿತ್ಯದಿಂದ ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ. [೧] [೨] [೩] [೪]

ಪರಿವಿಡಿ

   ೧ ವಿದ್ಯಾಭ್ಯಾಸ
   ೨ ವೃತ್ತಿ ಜೀವನ
   ೩ ಅಸ್ಪೃಶ್ಯತೆಯ ವಿರುದ್ದ ಹೋರಾಟ
   ೪ ಕೃತಿಗಳು
       ೪.೧ ಸಂಶೋಧನಾಪ್ರಬಂಧಗಳು
       ೪.೨ ಮೊಟ್ಟ ಮೊದಲ ಪ್ರಕಾಶಿತ ಕೃತಿ
   ೫ ರಾಜಕೀಯ ಜೀವನ
   ೬ ಭಾರತದ ಸಂವಿಧಾನ ಶಿಲ್ಪಿ
   ೭ ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ
   ೮ ಕರಡು ಸಮಿತಿಯ ಅದ್ಯಕ್ಷರಾಗಿ
   ೯ ಬೌದ್ಧ ಧರ್ಮಕ್ಕೆ ಮತಾಂತರ
   ೧೦ ಸ್ಮಾರಕ
   ೧೧ ಪ್ರಶಸ್ತಿ, ಗೌರವ
   ೧೨ ಬಾಹ್ಯ ಸಂಪರ್ಕಗಳು
   ೧೩ References
   ೧೪ Further reading

ವಿದ್ಯಾಭ್ಯಾಸ

   ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತಿದ್ದರು. ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು.
   ೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. ವಾಪಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ಪರದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು.
   ೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತೃ ಅಭ್ಯಾಸ ಮಾಡಿದರು. ೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು.
   ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇ'ಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು.
   ೧೯೨೦ರವರೆಗೆ ಮುಂಬೈಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧ ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು.
   ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.

ವೃತ್ತಿ ಜೀವನ

   ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿನ ಆಗುಹೋಗುಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಲೇ, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಆರಂಭಿಸಿದರು.
   ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ, ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು. ಭಾರತಕ್ಕೆ ಹಿಂದಿರುಗಿದ ಮರುವರ್ಷವೇ “ಬಹಿಷ್ಕೃತ ಹಿತಕಾರಿಣೀ ಸಭಾ” ಎಂಬ ದಲಿತ ವರ್ಗದ ಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು.