ವಿಷಯಕ್ಕೆ ಹೋಗು

ಸದಸ್ಯ:Abubakkar Siddeek H/ನನ್ನ ಪ್ರಯೋಗಪುಟ15

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಮಲ್ಲಿನಾಥ ಸ್ವಾಮಿ ಕೆರೆಬಸದಿಯು ಮೂಡಬಿದಿರೆಯಲ್ಲಿದ್ದು, ಇಲ್ಲಿ ಶ್ರೀ ಮಲ್ಲಿನಾಥ ಸ್ವಾಮಿಯನ್ನು ಮೂಲನಾಯಕ ಸ್ವಾಮಿಯಾಗಿ ಪೂಜಿಸುತ್ತಾರೆ.[][] ಬಸದಿಯ ಹತ್ತಿರ ಕೆರೆ ಇರುವುದರಿಂದ ಇದಕ್ಕೆ ಕೆರೆಬಸದಿ ಎಂಬ ಹೆಸರು ಬಂದಿದೆ.[] ಇದರ ಹತ್ತಿರವೇ ಬೈಕಣತಿಕಾರಿ ಬಸದಿಯಿದೆ. ಶಿಲಾಮಯವಾದ ಈ ಬಸದಿಯ ಮಾಡನ್ನು ಹೆಂಚಿನಿಂದ ನಿರ್ಮಿಸಲಾಗಿದೆ. ಈಗ ಈ ಬಸದಿಯನ್ನು ಮೂಡುಬಿದಿರೆ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ(ಜೈನ ಮಠ ಮೂಡಬಿದ್ರಿ ವ್ಯವಸ್ಥಾಪಕ ಟ್ರಸ್ಟಿ & ಮೂಡಬಿದ್ರಿ ಜೈನ ಸಮಾಜ ಕೆರೆ ಬಸದಿ ಮೂಲ ನಾಯಕ ಮಲ್ಲಿನಾಥ ಸ್ವಾಮಿ ಟ್ರಸ್ಟಿ)ಯವರು ನಡೆಸುತ್ತಿದ್ದಾರೆ.[][][] ಜೈನ ಬಸದಿಯ ಅಭಿಷೇಕ ಪ್ರದರ್ಶನಕ್ಕಾಗಿ ನಿರ್ಮಿಸಲಾದ ಈ ಕೊಳವು ೧೨ ನೇ ಶತಮಾನದಲ್ಲಿ ಜೈನ ಸ್ವಾಮಿಗಳು ಮತ್ತು ಸ್ಥಳೀಯ ಜೈನ ಸಮುದಾಯದಿಂದ ನಿರ್ಮಿಸಲಾಗಿದೆ.[]

ಇತಿಹಾಸ

[ಬದಲಾಯಿಸಿ]

ಭಕ್ತ ದೇರಮ್ಮ ಸೆಟ್ಟಿ ನಿರ್ಮಿಸಿದ ಈ ಬಸದಿಯನ್ನು ದೇರಮ್ಮ ಸೆಟ್ಟಿ ಬಸದಿ ಎಂದೂ ಕರೆಯುತ್ತಾರೆ.[] ಈ ಬಸದಿಯನ್ನು ೧೬ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.[] ೧೯೮೫ ರಲ್ಲಿ ಈ ಬಸದಿಯನ್ನು ಜೀರ್ಣೋದ್ಧಾರಗೊಳಿಸಲಾಯಿತು. ಈ ದೇವಾಲಯವು ಕಾಯೋತ್ಸರ್ಗದಲ್ಲಿ ಭಗವಾನ್ ಮಲ್ಲಿನಾಥನ ಕಪ್ಪು ಬಣ್ಣದ ವಿಗ್ರಹವನ್ನು ಹೊಂದಿದೆ.[೧೦]

ಮೂರ್ತಿಗಳು ಮತ್ತು ವಿನ್ಯಾಸ

[ಬದಲಾಯಿಸಿ]

ಇದು ಅರನಾಥ, ಮಲ್ಲಿನಾಥ ಮತ್ತು ಮುನಿ ಸುವ್ರನಾಥನ ವಿಗ್ರಹಗಳನ್ನು ಹೊಂದಿದೆ. ಇದರೊಂದಿಗೆ ಇದು ಎಲ್ಲಾ ೨೪ ಜೈನ ತೀರ್ಥಂಕರರ ವಿಗ್ರಹಗಳನ್ನು ಹೊಂದಿದೆ.[೧೧] ೪ ಅಡಿ ಎತ್ತರದ ಶ್ರೀ ಮಲ್ಲಿನಾಥ ಸ್ವಾಮಿಯ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ ಹಾಗೂ ಸ್ವಾಮಿಯ ಸುತ್ತಲೂ ಮಕರತೋರಣದ ಪ್ರಭಾವಳಿಯಿದೆ. ಉತ್ತರಕ್ಕೆ ಮುಖಮಾಡಿಕೊಂಡಿರುವ ಪದ್ಮವತಿದೇವಿ ಮತ್ತು ಬ್ರಹ್ಮದೇವರ ಮೂರ್ತಿಗಳು ಇಲ್ಲಿವೆ. ಬಸದಿಯನ್ನು ಪ್ರವೇಶಿಸುವಾಗ ಎಡ ಮತ್ತು ಬಲ ಬದಿಗಳಲ್ಲಿರುವ ಗೋಪುರವಿದೆ. ಗಂಧರ ಮತ್ತು ಶ್ರುತಸ್ಕಾಂತನ ಕಂಚಿನ ವಿಗ್ರಹ ಮತ್ತು ಕಲ್ಲಿನ ನಂದೀಶ್ವರದ್ವೀಪವನ್ನು ನಾವು ಕಾಣಬಹುದಾಗಿದೆ.[೧೨] ಅರನಾಥನಿಗೆ ಮಹೇಂದ್ರ ಯಕ್ಷ-ವಿಜಯ ಯಕ್ಷಿ, ಮಲ್ಲಿನಾಥನಿಗೆ ಕುಬೇರ ಯಕ್ಷ-ಅಪರಾಜಿತ ಯಕ್ಷಿ, ಮುನಿ ಸುವ್ರನಾಥನಿಗೆ ವರುಣ ಯಕ್ಷ-ಬಹುರೂಪಿಣಿ ಯಕ್ಷಿಯಾಗಿದೆ ಮತ್ತು ಇವು ಪೂಜಿಸಲ್ಪಡುತ್ತವೆ.

ಪ್ರವೇಶ ದ್ವಾರವನ್ನು ದಾಟಿದ ನಂತರ ಮುಗಮಂಟಪ, ಮಹಾಮಂಟಪ, ಅರ್ಥಮಂಟಪ ಮತ್ತು ಗರ್ಭಗುಡಿ ಸಿಗುತ್ತದೆ. ಮಾರ್ಗದಲ್ಲಿ ಒಂದು ನಾಗರಾಜ ಗುಡಿಯನ್ನು ಸಹ ನಿರ್ಮಿಸಲಾಗಿದೆ. ಬಸದಿಯ ಸುತ್ತಲೂ ವಿಜಯನಗರ ಶೈಲಿಯ ಕಂಬಗಳಿವೆ. ಯುಕ್ತ ಸ್ಥಳಗಳಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಬಸದಿಯ ಸುತ್ತ ಗೋಡೆಯಿದ್ದು, ಅದನ್ನು ಮುರಕಲ್ಲಿನಿಂದ ನಿರ್ಮಿಸಲಾಗಿದೆ.

ಪೂಜಾ ವಿಧಾನ

[ಬದಲಾಯಿಸಿ]

ಮೂಲ ಸ್ವಾಮಿಗೆ ದಿನವೂ ಕ್ಷೀರಾಭಿಷೇಕ ಮತ್ತು ಜಲಾಭಿಷೇಕ ಮಾಡಲಾಗುತ್ತದೆ. ನಾಗದೇವತೆಯ ಪೂಜೆ, ಮಹಾ ನೈವೇದ್ಯ ಪೂಜೆ ಮತ್ತು ಇತರ ಆರಾಧನೆಗಳನ್ನು ಸ್ವಾಮಿಗೆ ಸಲ್ಲಿಸಲಾಗುತ್ತದೆ. ಪದ್ಮಾವತಿದೇವಿಯ ಮೂರ್ತಿಗೆ ಸೀರೆ ಉಡಿಸಿ, ಬಳೆಗಳನ್ನು ತೊಡಿಸಿ, ಹೂವಿನಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ವಿದ್ಯಾಬುದ್ಧಿಗೆ, ಕಷ್ಟ ಪರಿಹಾರಕ್ಕೆ, ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಪೂಜೆ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮಾತ್ರ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಇಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ. ದೀಪಾವಳಿ, ಯುಗಾದಿ, ಹುಣ್ಣಿಮೆ, ನೋಂಪು, ಜೀವದಯಾಷ್ಟಮಿ ಮುಂತಾದ ಹಬ್ಬಗಳನ್ನು ಬಸದಿಯಲ್ಲಿ ಆಚರಿಸಲಾಗುತ್ತದೆ. ಬಸದಿಯ ಅಂಗಳದ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಬಳಿಯಲ್ಲಿ ತ್ರಿಶೂಲ ಮತ್ತು ನಾಗರಕಲ್ಲಿದೆ. ಈ ಕ್ಷೇತ್ರಪಾಲನಲ್ಲಿ ಮಹಾನವಮಿ ಪೂಜೆ ಮಾಡಿಸಿ ಮಳೆ ಬರದಾಗ ಹರಕೆ ಹೇಳುವ ವಿಶೇಷ ಸಂಪ್ರದಾಯವಿದೆ. ಅಂಗಳದಲ್ಲಿ ಅಷ್ಟದಿಕ್ಪಾಲಕರ ಮೂರ್ತಿಗಳಿದ್ದು ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.ahimsaiyatrai.com/2018/08/kere-basadi-moodbidri.html?m=1
  2. http://jainmath.blogspot.com/2015/10/the-18-basadis-of-moodbidri-manageing.html
  3. https://www.ahimsaiyatrai.com/2018/08/kere-basadi-moodbidri.html?m=1
  4. https://www.top-rated.online/cities/Alangar/place/p/8757614/Kere+Basadi+Jain+Temple
  5. https://wikimapia.org/458757/Kere-Basadi
  6. ಶೆಣೈ, ಉಮನಾಥ್ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೧೩೬.
  7. https://www.top-rated.online/cities/Alangar/place/p/8757614/Kere+Basadi+Jain+Temple
  8. https://www.inditales.com/moodbidri-ancient-jain-temple-karnataka/
  9. https://www.jainheritagecentres.com/jainism-in-india/karnataka/moodabidri/
  10. https://www.jainheritagecentres.com/jainism-in-india/karnataka/moodabidri/
  11. https://www.inditales.com/moodbidri-ancient-jain-temple-karnataka/
  12. https://www.ahimsaiyatrai.com/2018/08/kere-basadi-moodbidri.html?m=1