ಸದಸ್ಯ:2231371GargiSrushteendra/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು


ಎಲ್ಲೆಡೆಯೂ ಹಸಿರು ತುಂಬಿದ ಮಲೆನಾಡಿನ ಜಿಲ್ಲೆ ಶಿವಮೊಗ್ಗದ ಒಂದು ಹಳ್ಳಿಯಾದ ಸಾಗರದಲ್ಲಿ ಹುಟ್ಟಿದವಳು ನಾನು. ಅದರಲ್ಲಿ ನನ್ನದೊಂದು ಪುಟ್ಟ ಊರು ಆದರೆ ಶಿವಪ್ಪನಾಯಕ ಹಾಗೂ ಚೆನ್ನಮ್ಮನಿಂದ ಸುಪ್ರಸಿದ್ಧವಾದ ಕೆಳದಿ. ಮಧ್ಯಮವರ್ಗದ ಕುಟುಂಬಗಳಿಂದಲೇ ತುಂಬಿರುವ ಈ ಹಳ್ಳಿಯ ಜನರಿಗೆ ಅಡಿಕೆ ಹಾಗೂ ಭತ್ತ ಪ್ರಮುಖ ಬೆಳೆ. ಇಂತಹ ಅಡಿಕೆ ಬೆಳೆಗಾರರಲಲ್ಲಿ ನನ್ನ ತಂದೆಯೂ ಒಬ್ಬರು.

 ಅತ್ತ ಪೇಟೆಯು ಅಲ್ಲದ, ಹಳ್ಳಿಯೂ ಅಲ್ಲದ ಊರಿನಲ್ಲಿ ೨೦೦೪ ಆಗಸ್ಟ್ ೧೨ರೆಂದು ನಾನು ಹುಟ್ಟಿದೆ. ನನ್ನ ಹುಟ್ಟಿಗೂ ಒಂದು ಸ್ವಾರಸ್ಯವಾದ ವಿಷಯವನ್ನು ಅಮ್ಮ ಯಾವಾಗಲೂ ಹೇಳುತ್ತಾರೆ. ಮದುವೆಯಾಗಿ ೧೦ ವರ್ಷವಾದರೂ ನನ್ನ ತಂದೆ, ತಾಯಿಗೆ ಮಕ್ಕಳಾಗಿರಲಿಲ್ಲವಂತೆ. ಎಲ್ಲ ತರಹದ ಔಷಧಗಳನ್ನು ಮಾಡಿದರೂ ಏನೂ ಪ್ರಯೋಜನ ಆಗಿರಲಿಲ್ಲ. ಹೀಗೆ ಮಕ್ಕಳಾಗುವ ಆಸೆಯನ್ನೇ ಬಿಟ್ಟಿದ್ದಾಗ ಪರಿಚಯಸ್ತರೊಬ್ಬರು ಶೃಂಗೇರಿಯಲ್ಲಿರುವ ಹಿರಿಯರೊಬ್ಬರ ಬಗ್ಗೆ ಹೇಳಿ, ಅನೇಕರಿಗೆ ಅವರ ಉಪಚಾರದಿಂದ ಮಕ್ಕಳಾಗಿದೆ ನೀವು ಬೇಕಿದ್ದರೆ ಒಮ್ಮೆ ಹೋಗಿ ಬನ್ನಿ ಎಂದರಂತೆ. ಇದೂ ಒಂದು ಆಗಿ ಹೋಗಲಿ ಎಂದು ಇವೆಲ್ಲವುದರ ಮೇಲೆ ಅಷ್ಟೆಲ್ಲ ನಂಬಿಕೆ ಇಲ್ಲದಿದ್ದರೂ ಅಪ್ಪ ಅಮ್ಮನೊಡನೆ ಹೋಗಿ ಅವ್ರು ಹೇಳಿದಂತೆ ಮಂತ್ರೋಪದೇಶ ಹಾಗೂ ಕೆಲವು ಆಹಾರ ಪದ್ದ್ಧತಿಯನ್ನು ಕೇಳಿಕೊಂಡು ಬಂದರಂತೆ. ಅದರ ಫಲವಾಗಿಯೇ ನಾನು ಜನಿಸಿದ್ದು. ಇದು ಅಮ್ಮನ ಧೃಢವಾದ ನಂಬಿಕೆ. ಹೀಗೆ ಎಷ್ಟೋ ವರ್ಷ ಕಾಡು, ಬಯಸಿ ಬಯಸಿ ಹುಟ್ಟಿದ ಒಬ್ಬಳೇ ಮಗಳಾದ್ದರಿಂದ ಮನೆಯಲ್ಲಿ ಸ್ವಲ್ಪ ಜಾಸ್ತಿ ಮುದ್ದು, ಕಾಳಜಿ, ಪ್ರೀತಿ, ಸಂಭ್ರಮಗಳಲ್ಲಿಯೇ ನನ್ನ ಬಾಲ್ಯ ಶುರುವಾಯಿತು.

ನನ್ನದು ಒಂದು ಸಮಾಜವಾದಿ ಹಿನ್ನಲೆ ಇರುವ ಕುಟುಂಬ. ನನ್ನ ಅಜ್ಜ ಅನೇಕ ಸಂಘ ಸಂಸ್ಥೆಗಳನ್ನು ನಡೆಸಿದವರು. ಅಷ್ಟೇ ಅಲ್ಲ ಸಾಹಿತ್ಯ, ನಾಟಕಗಳಲ್ಲಿ ಆಸಕ್ತಿ ಇದ್ದವರು ಕೂಡ. ಇಂದಿಗೂ ತುಂಬಾ ಅಪರೂಪದ ಪುಸ್ತಕಗಳು ನಮ್ಮ ಮನೆಯ ಬೀರುವಿನಲ್ಲಿ ಸುಲಭವಾಗಿ ಸಿಗುತ್ತದೆ. ನನ್ನ ತಂದೆ ಹಾಗು ಅವರ ಅಣ್ಣಂದಿರು ಸಹ ರಾಜಕೀಯ, ಬರಹ ಇವುಗಳಲ್ಲಿ ಸದಾ ತೊಡಗಿಸಿಕೊಂಡವರಾದ್ದರಿಂದ ಬಾಲ್ಯದಲ್ಲಿ ಮನೆಯಲ್ಲಿ ನಡೆಯುತ್ತಿದ್ದ ಬಹುತೇಕ ಚರ್ಚೆಗಳು ಇವುಗಳ ಬಗ್ಗೆಯೇ ಇರುತ್ತಿದ್ದವು. ಹಾಗಾಗಿ ತಂತಾನೆಯೇ ನನಗೂ ಇವುಗಳಲ್ಲಿ ಆಸಕ್ತಿ ಶುರುವಾಯಿತು. ಊರ ತುದಿಯಲ್ಲಿ ನನ್ನ ಶಾಲೆಯಿತ್ತು. ಶಾಲೆಯ ದಿನಗಳಲ್ಲೇ ಕಥೆ, ಕವಿತೆ ಬರೆಯುವ ಹವ್ಯಾಸವಿತ್ತು. ಅಪ್ಪ ನನಗೆಂದೇ ತುಂತುರು, ಬಾಲಮಂಗಳದಂತಹ ಮಕ್ಕಳ ಪುಸ್ತಕ ತಂದು ಕೊಡುತ್ತಿದ್ದರು. ಇದು ನನ್ನ ಬರವಣಿಗೆಗೆ ಇನ್ನು ಹೆಚ್ಚಿನ ಉತ್ತೇಜನ ನೀಡಿತು.

 ಪ್ರಾಥಮಿಕ ಶಾಲೆಯ ಸಿಹಿ ನೆನಪುಗಳು ಇನ್ನು ಹಸಿಯಾಗಿಯೇ ಇದೆ. ಭಾಷಣ, ಕಥೆ ಹೇಳುವುದು ಇಂತಹ ಸ್ಪರ್ಧೆಗಳಲ್ಲಿ ಸದಾ ನಾನೇ ಮುಂದು. ಪ್ರತಿ ವರ್ಷವೂ 'ಪ್ರತಿಭಾಕಾರಂಜಿಯಲ್ಲಿ' ತಾಲೂಕು, ಜಿಲ್ಲಾ ಮಟ್ಟಗಳಲ್ಲಿ ಬಹುಮಾನ ತರುತ್ತಿದ್ದರಿಂದ ಶಿಕ್ಷಕರಿಗೂ ನನ್ನ ಕಂಡರೆ ಪ್ರೀತಿ. ಮನೆಯಲ್ಲಿದ್ದ ಸಮಾಜವಾದಿ ವಾತಾವರಣ, ಹಾಗು ನನ್ನ ಆಸಕ್ತಿಗಳಿಂದ ಮೊದಲಿಂದಲೂ ಮೂಢನಂಬಿಕೆ, ಜಾತಿ ಪದ್ಧತಿ ಇವೆಲ್ಲವನ್ನೂ ವಿರೋಧಿಸುತ್ತಿದ್ದೆ, ಆಗ ಕೆಲವರು ಪ್ರೋತ್ಸಾಹಿಸಿದರೆ, ಇನ್ನು ಕೆಲವರು ದೂಷಿಸುತ್ತಿದ್ದರು. ಹೀಗೆ ಪೋಷಕರ ಪ್ರೋತ್ಸಾಹ, ಶಿಕ್ಷಕರ ಬೆಂಬಲದಿಂದ ನನ್ನ ಪ್ರಾಥಮಿಕ ಶಿಕ್ಷಣ ಮುಗಿಯಿತು.

  ಮುಂದೆ ಪ್ರೌಢಶಾಲೆಗೆ ಎಂದು ಮನೆಯಿಂದ ೮ ಕೀ. ಮೀ ದೂರದ ದಿನವೂ ನನ್ನ ಪ್ರಯಾಣ. ನಾವು ಇಪ್ಪತ್ತು ಮಕ್ಕಳು ಒಂದು ಶಾಲಾವಾಹನದಲ್ಲಿ ಹೋಗಿ ಬರೋದೇ ಒಂದು ಮಜಾ. ಅದೊಂದು ಕ್ರೈಸ್ತ ಶಾಲೆಯಾದ್ದರಿಂದ ತುಂಬಾ ಶಿಸ್ತು, ಸ್ವಚ್ಛತೆ ಇತ್ತು. ಅಲ್ಲಿ ನಾನು ಇಂಗ್ಲಿಷ್ ಮಾತಾಡುವುದನ್ನು ಸ್ಪಷ್ಟವಾಗಿ ಕಲಿತದ್ದು. ಅಲ್ಲಿಯೂ ಕೂಡ ನಾನು ಭಾಷಣ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದು ಮುಂದುವರೆದಿತ್ತು. ಇಂತಹುದೇ ಒಂದು ಮರೆಯಲಾಗಡಾ ಸಂದರ್ಭವೆಂದರೆ ನಾನು ೧೦ನೆ ತರಗತಿಯಲ್ಲಿದ್ದಾಗ ತಾಲೂಕು ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು. ಅದರ ಆಯ್ಕೆ ಪ್ರಕ್ರಿಯೆಗೆ ನನ್ನ ಶಾಲೆಯಿಂದ ನನ್ನನ್ನು ನನ್ನ ಕನ್ನಡ ಪ್ರಾಧ್ಯಾಪಕರು ಕಳುಹಿಸಿದ್ದರು. ಇಡೀ ತಾಲೂಕಿನ ಮಕ್ಕಳ ಪರೀಕ್ಷೆ ನಡೆದು ನಂತರ ನನ್ನನ್ನು ಸಮ್ಮೇಳನದ ಅಧ್ಯಕ್ಷೆ ಎಂದು ಆಯ್ಕೆ ಮಾಡಿದರು. ಆ ದಿನ ಅಮ್ಮನ ಮುಖದಲ್ಲಿದ್ದ ಆ ಹೆಮ್ಮೆಯ ಭಾವವನ್ನು ಇಂದಿಗೂ ಮರೆಯಲಾಗುವುದಿಲ್ಲ. ಸಾರ್ವಜನಿಕ ಕಾರ್ಯಕರ್ಮವಾದ್ದರಿಂದ ಸುಮಾರು ೫೦೦ ಜನ ಸೇರಿದ್ದರು. ಅವರೆಲ್ಲರೆದುರು ನಿಂತು ಧೈರ್ಯವಾಗಿ ನನ್ನ ಅನಿಸಿಕೆಯನ್ನು ಹೇಳಿದಾಗ ನನಗೂ ನನ್ನ ಬಗ್ಗೆ ಹೆಮ್ಮೆಯೆನಿಸಿತ್ತು. ದೊಡ್ಡ ಕಾರ್ಯಕ್ರಮವಾದ್ದರಿಂದ ಅಪ್ಪ ಅಮ್ಮನೊಂದಿಗೆ ಚರ್ಚಿಸಿ ನನ್ನ ಭಾಷಣ ತಯಾರು ಮಾಡಿದ್ದೆ. ಬೆಳಿಗ್ಗೆ ನನ್ನ ಕೈ ಇಂದಲೇ ಕನ್ನಡ ಧ್ವಜ ಆರೋಹಣ ಮಾಡಿಸಿದ್ದರು. ನಂತರ ಕಾರ್ಯಕ್ರಮ, ಎಲ್ಲವು ಆದಮೇಲೆ ಅನೇಕರಿಂದ ಪ್ರಶಂಸೆ ಬಂದಿತ್ತು. ಈ ಕಾರ್ಯಕ್ರಮದಲ್ಲಿ ನನ್ನ ಭಾಷಾ ಪ್ರೌಢಿಮೆ, ವಿಷಯ ಮಂಡನೆ ಎಲ್ಲವನ್ನು ಮೆಚ್ಚಿ ಮುಂದಿನ ತಿಂಗಳು ಇದ್ದ ಜಿಲ್ಲಾ ಮಟ್ಟದ ಸಮ್ಮೇಳನಕ್ಕೂ ನನ್ನನ್ನೇ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದರು. ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ನನ್ನನ್ನು ಸನ್ಮಾನಿಸಿದರು. ಅಂದಿನ ಸಭೆಯಲ್ಲಿ ಕೂಡ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೋಸ, ಮೂಢನಂಬಿಕೆ, ಮದ್ಯಪಾನ ನಿಷೇಧದಂತಹ ವಿಷಯಗಳನನ್ನು ಮಂಡಿಸಿದೆ. ಮಕ್ಕಳಾಗಿ ನಾವು ಪಡುತ್ತಿರುವ ಅನೇಕ ಕಷ್ಟಗಳನ್ನು ಮಕ್ಕಳ ಪ್ರತಿನಿಧಿಯಾಗಿ ಮುಕ್ತವಾಗಿ ಹೇಳಿಕೊಳ್ಳಲು ನನಗೊಂದು ಒಳ್ಳೆಯ ಅವಕಾಶ ದೊರೆತಂತಾಗಿತ್ತು. ಅದು ನನ್ನ ಜೀವನದ ಸುದಿನ. ಇವೆಲ್ಲದರ ಜೊತೆಗೆ ಹತ್ತನೇ ತರಗತಿಯ ತಯಾರಿ ಕೂಡ ತುಂಬಾ ಕಠಿಣ ಶ್ರಮದೊಂದಿಗೆ ನಡೆದಿತ್ತು. ಪರೀಕ್ಷೆಗೆ ಇನ್ನೆರಡು ವಾರ ಇರುವಾಗ ಜಗತ್ತನ್ನೇ ಬೆಚ್ಚಿ ಬೀಳಿಸಿದಂತಹ ಕೊರೊನ ಎಂಬ ಹೆಮ್ಮಾರಿ ಭಾರತಕ್ಕೆ ಲಗ್ಗೆ ಇಟ್ಟಿತ್ತು. ಇವೆಲ್ಲ ಗೊಂದಲಗಳ ನಡುವೆಯೇ ತೀವ್ರ ಭದ್ರತೆಯ ನಡುವೆ ನಮ್ಮ ಪರೀಕ್ಷೆ ಮುಗಿದಿತ್ತು. ಇನ್ನೆರಡು ವರ್ಶಗಳ ಕಾಲದ ಓದು ಹೆಚ್ಚಾಗಿ ಮನೆಯಿಂದಲೇ ಆಗಿ ನಮ್ಮ ಕಾಲೇಜಿಗೆ ಕಾಲಿಡುವ ಕನಸಿಗೆ ತನ್ನೇರು ಎರಚಿತ್ತು ಕೊರೊನ.

 ಇದೆಲ್ಲವೂ ಮುಗಿದ ನಂತರ ನಾನು ಓದಿಗೆಂದು ಬೆಂಗಳೂರಿಗೆ ಕಾಲಿಟ್ಟೆ, ನನ್ನ ಕನಸಿನ ಗುರಿಯತ್ತ ಸಾಗಲು ಕ್ರೈಸ್ಟ್ ಯೂನಿವರ್ಸಿಟಿ ಸೇರಿದೆ. ನನ್ನ ಓದು, ನನ್ನ ನಡೆ ಸಮಾಜದಲ್ಲಿ ಏನಾದರು ಒಂದು ಬದಲಾವಣೆ ತರಬೇಕು ಹಾಗು ಅದರಿಂದ ಬೇರೆಯವರಿಗೆ ಒಳ್ಳೆಯದಾಗಬೇಕು ಎಂಬುದೇ ನನ್ನ ಆಶಯ. ಇದು ನನ್ನ ಪುಟ್ಟ ಪ್ರಪಂಚದ ಕಿರುಪರಿಚಯ.