ವಿಷಯಕ್ಕೆ ಹೋಗು

ಸದಸ್ಯ:ವೈಭವಿ ಜಿ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                  ಭರತನಾಟ್ಯ
                                      

ಭರತನಾಟ್ಯ ದೇಶದ ಸುಂದರ ನೃತ್ಯ ಪ್ರಕಾರಗಳಲ್ಲಿ ಒಂದು. 19ನೇ ಶತಮಾನದವರೆಗೆ ದೇವಸ್ಥಾನಗಳಲ್ಲಿ ದೇವರ ಪ್ರೀತ್ಯರ್ಥವಾಗಿ, ರಾಜರ ಆಸ್ಥಾನಗಳಲ್ಲಿ ಮನರಂಜನೆಯ ಪ್ರಕಾರವಾಗಿ ಪ್ರದರ್ಶಿತಗೊಳ್ಳುತ್ತಿದ್ದ ಭರತನಾಟ್ಯ 20ನೇ ಶತಮಾನದಲ್ಲಿ ಪರಿಪೂರ್ಣ ಪ್ರದರ್ಶಕ ಕಲೆಯಾಗಿ ರೂಪಗೊಂಡಿತು.

ಸಂಗೀತ, ನೃತ್ಯ ಮತ್ತು ಚಿತ್ರಕಲೆಗಳ ಆರಾಧಕರಾಗಿದ್ದ ಮೈಸೂರು ಒಡೆಯರು ಭರತನಾಟ್ಯಕ್ಕೆ ರಾಜಾಶ್ರಯ ನೀಡಿದರು. 20ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಮೈಸೂರಿನಲ್ಲಿ ವಿಭಿನ್ನ ಶೈಲಿಯ ಗುರುಗಳ ವಿಭಿನ್ನ ಪರಂಪರೆಯ ಭರತನಾಟ್ಯ ಪ್ರಕಾರಗಳು ಬೆಳೆದವು. ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ, ಮುಗೂರು ಅಮೃತಪ್ಪ, ಮೂಗೂರು ಜೇಜಮ್ಮ, ಕೋಲಾರ ಸುಬ್ಬಣ್ಣ, ಯಜಮಾನ ಕಿಟ್ಟಣ್ಣ ಮತ್ತು ಪುಟ್ಟಪ್ಪ, ನಂಜನಗೂಡು ದಾಸಪ್ಪ ಮತ್ತು ರಾಜಮ್ಮ ಮತ್ತಿತರ ನೃತ್ಯ ದಿಗ್ಗಜರು ತಮ್ಮದೇ ಪರಂಪರೆಯ ಶಿಷ್ಯರನ್ನು ಸೃಷ್ಟಿಸಿದ್ದರು.

ಪ್ರಸ್ತುತ ಕರ್ನಾಟಕದಲ್ಲಿ ಮೈಸೂರು, ಮೂಗೂರು (ಟಿ. ನರಸೀಪುರ ತಾಲ್ಲೂಕು), ನಂಜನಗೂಡು ಮತ್ತು ಕೋಲಾರ ಪರಂಪರೆಯ ನೃತ್ಯ ಪ್ರಕಾರಗಳಿವೆ.

ಮೈಸೂರು ಪರಂಪರೆಯ ಕಲಾವಿದರು ಜಟ್ಟಿ ತಾಯಮ್ಮನವರ ಶೈಲಿ ಅನುಸರಿಸುತ್ತಾರೆ. ಈ ಪರಂಪರೆಯಲ್ಲಿ ಅಭಿನಯಕ್ಕೆ ಒತ್ತು. ಪೂರ್ವರಂಗ ವಿಧಿಗೆ ಹೆಚ್ಚಿನ ಮಹತ್ವ. ಗೀತಗೋವಿಂದ, ನೀತಿ ಶತಕ, ಮುಕುಂದ ಮಾಲಾ ಮತ್ತು ಕೆಲ ಅಪರೂಪದ ಕನ್ನಡ ಕೃತಿಗಳನ್ನು ಬಳಸಿ ಪೂರ್ವರಂಗ ವಿಧಿ ಅಭಿನಯಿಸಲಾಗುತ್ತದೆ. ಜಟ್ಟಿ ತಾಯಮ್ಮನವರ ಶಿಷ್ಯೆಯಾದ ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ ಈ ಶೈಲಿಯನ್ನು ಮುಂದುವರಿಸಿಕೊಂಡು ನೂರಾರು ಶಿಷ್ಯರನ್ನು ಸೃಷ್ಟಿಸಿದ್ದಾರೆ.

ಮೂಗೂರು ಪರಂಪರೆಯ ಕಲಾವಿದರು ನೃತ್ತ, ಅಡವು ಮತ್ತು ಜತಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಜತಿಸ್ವರ, ವರ್ಣ, ತಿಲ್ಲಾನ, ಪದ, ಜಾವಳಿಗಳಿಗೂ ಮಹತ್ವ. ನೂಪುರ ನೃತ್ಯ ಶಾಲೆಯ ಗುರು ಲಲಿತಾ ಶ್ರೀನಿವಾಸನ್, ಮೂಗೂರು ಜೇಜಮ್ಮನವರ ಶಿಷ್ಯ ಮಾಧವ ರಾವ್ ಮತ್ತಿತರರು ಈ ಪರಂಪರೆಯನ್ನು ಪ್ರತಿನಿಧಿಸುತ್ತಾರೆ.

ಕೋಲಾರ ಕಿಟ್ಟಣ್ಣ ಪರಂಪರೆಯಲ್ಲಿ ಅರಮನೆಯ ವಿಧಿ, ದೇವಾಲಯ ವಿಧಿಗಳಿಗೆ ಆದ್ಯತೆ. ಇದಲ್ಲದೇ ಸಾಮಾನ್ಯ ನೃತ್ಯಗಳಲ್ಲಿ ಭರತ ಚೂರ್ಣಿಕಾ, ಪ್ರಬಂಧ, ಅಷ್ಟ ದಿಕ್ಪಾಲಕ ಆರಾಧನೆ, ಸ್ವರ ಜತಿ, ಸ್ವರ ಪ್ರಬಂಧ, ನವ ಸಂಧಿ ನೃತ್ಯ, ಸಪ್ತ ತಾಳೇಶ್ವರಿ ವರ್ಣ, ಉಗಾಭೋಗ ಇತ್ಯಾದಿಗಳಿಗೆ ಮಹತ್ವ. ಈ ಪರಂಪರೆಯ ನೃತ್ಯ ಸಿರಿವಂತಿಕೆ ಮತ್ತೆಲ್ಲೂ ಕಾಣದು. ಭರತಕಲಾಮಣಿ ಸಿ. ರಾಧಾಕೃಷ್ಣ ಈ ಪರಂಪರೆಯ ಕೊಂಡಿ.

ನಂಜನಗೂಡು ದಾಸಪ್ಪನವರಿಂದ ಆರಂಭವಾಗಿ ನಂಜನಗೂಡು ರಾಜಮ್ಮನವರಿಂದ ಶಾಶ್ವತಗೊಂಡಿರುವ ನಂಜನಗೂಡು ಪರಂಪರೆಯಲ್ಲಿ ಅಪೂರ್ವ ಭಾವ ಮತ್ತು ನೃತ್ಯಕ್ಕೆ ಮಹತ್ವ. ಮೈಸೂರು ಆಸ್ಥಾನದಲ್ಲಿ ನಟುವಾಂಗ ಕಲಾವಿದರಾಗಿದ್ದ ನಾಟ್ಯಾಚಾರ್ಯ ದಾಸಪ್ಪ ನೃತ್ಯಕಲೆಯ ಪರಂಪರೆ ಆರಂಭಿಸಿದರು. ನೃತ್ತ ಮತ್ತು ಅಭಿನಯವನ್ನು ಸಮ್ಮಿಶ್ರಗೊಳಿಸಿದರು. ಅವರ ಶಿಷ್ಯೆ ರಾಜಮ್ಮ ಶ್ರದ್ಧೆಯಿಂದ ಈ ಪರಂಪರೆ ಮುಂದುವರಿಸಿದರು. ರಾಜಮ್ಮನ ಶಿಷ್ಯ ದಿವಂಗತ ಸುಬ್ರಹ್ಮಣ್ಯ ಕೌಶಿಕ ಅವರು ಈ ಪರಂಪರೆಗೆ ಮತ್ತಷ್ಟು ರಂಗು ತುಂಬಿದರು. ನೃತ್ಯದಲ್ಲಿ ರಾಗ, ತಾನ, ಪಲ್ಲವಿಯನ್ನು ಪ್ರಸ್ತುತಪಡಿಸುವ ಕೌಶಲ್ಯವನ್ನು ಪುನರುತ್ಥಾನಗೊಳಿಸಿದರು. .