ಸದಸ್ಯ:ಅನು ಅಮೀನ್ ಸಂಕಮಾರ್/sandbox 2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧನದ ದಾರಿ[ಬದಲಾಯಿಸಿ]

ಹಳೆಯದೊಂದು ಕಿವಿಮಾತು-ಹಣಕ್ಕೆ ಮೂರೇ ದಾರಿಗಳು:ದಾನ,ಭೋಗ,ನಾಶ. ಬೇರೆಯವರಿಗೆ ದಾನ ಮಾಡದಿದ್ದ ಹಣ,ತಾನು ಅನುಭವಿಸದಿದ್ದ ಹಣ ನಾಶವಾಗುವುದು ಖಂಡಿತ. ಹಣವನ್ನು ಸಂಪಾದಿಸಬೇಕಾಗಿರುವುದು ಸರಿಯೆ.ಹಣವಿಲ್ಲದೆ ಬದುಕು ಸಾಗಲಾರದು. ಸಂಪಾದಿಸಿದ ಹಣವನ್ನು ಉಳಿಸಕೊಳ್ಳಬೇಕೆಂಬುದು ಸರಿಯೆ. ಮುಂದೆ ಹೇಗೋ ಏನೋ!ಆದರೆ ಗಳಿಕೆ ಉಳಿಕೆಗಳಲ್ಲಿ ಒಂದು ಔಚಿತ್ಯಜ್ಞಾನ ಇರ ಬೇಕಾಗುತ್ತದೆ.ಹಣವನ್ನು ಗಳಿಸುವುದರಲ್ಲಿ ಬಾಳನ್ನೆಲ್ಲ ಕಳೆದರೆ ,ಹಣದ ಪ್ರಯೋಜನವನ್ನು ಪಡೆದುಕೊಳ್ಳುವುದು ಯಾವಾಗ? ಹಣ ತನ್ನ ಕೈ ಬಿಡಬಾರದೆಂದು ಜೋಪಾನವಾಗಿ ಕೂಡಿಟ್ಟರೂ ಹಣದ ಪ್ರಯೋಜನವನ್ನು ಪಡೆದುಕೊಂಡಂತಾಯಿತೆ? ಮೊದಲಿಗೆ ಹಣವಿಲ್ಲದ ಬಡವ ;ಆಮೇಲೆ ಹಣವುಳ್ಳ ಬಡವ!ಹಣ ಬಂದಿತೆಂದು ಅವನು ತನ್ನ ಬಡವತನವನ್ನೇನು ಬಿಡುವುದಿಲ್ಲ.'ಜಿಪುಣನಂಥ ದಾನಿಯಿಲ್ಲ'ಎಂಬ ಇನ್ನೊಂದು ಮಾತಿದೆ.ಉಳಿದ ದಾನಿಗಳು ತಾವು ಅನುಭವಿಸಿ, ಉಳಿದದ್ದನ್ನು ಕೈಯೆತ್ತಿ ದಾನ ಮಾಡುತ್ತಾರೆ. ಜಿಪುಣನೋ ತಾನೂ ಅನುಭವಿಸದೆ ,ಕೈಯಿಂದ ಮುಟ್ಟದೆಯೇ ,ತನ್ನ ಅರಿವಿಲ್ಲದೆಯೇ ,ಬೇರೆಯವರಿಗೆ ಬಿಟ್ಟು ಹೋಗುತ್ತೇನೆ.ಹಣ ಬಂದ ಕಾಲಕ್ಕೆ ಅದನ್ನು ಅನುಭವಿಸುವುದು ಒಂದು ದಾರಿ.ಅನುಭವಿಸುವವನ ಬದುಕಂತೂ ಸಂತೋಷದಂದ ಕೂಡಿರುತ್ತದೆ.ತಾನೂ ಅನುಭವಿಸಿ, ಇತರರ ಅನುಭವಕ್ಕೂ ಅದನ್ನು ಒದಗಿಸಿ ,ತನ್ನ ಸಂತೋಷ ಮತ್ತು ಇತರರ ಸಂತೋಷ ಎರಡನ್ನೂ ಸಾಧಿಸಿಕೊಳ್ಳುವುದು ಎರಡನೆಯ ದಾರಿ. ಆದರೆ ತಾವೂ ತಿನ್ನದೆ ಪರರಿಗೂ ಕೊಡದೆ ಇರುವವರು ಏನು ಮಾಡಿದಂತಾಯಿತು? ಹಣದ ಪ್ರಯೋಜನ ಬದುಕಿನ ಸೌಲಭ್ಯಗಳಿಗೆ ಕಾರಣವಾಗುವುದು .ಬದುಕಿಗೆ ಅಗತ್ಯವಾದುದೆಲ್ಲ ಹಣದಿಂದ ಬರುತ್ತದೆ ಎಂದಲ್ಲ. ಆದರೆ ಬದುಕನ್ನು ಹಗುರಗೊಳಿಸುವಲ್ಲಿ ಹಣ ನೆರವಾಗುತ್ತದೆ. ಇದನ್ನು ಮೀರಿ ಹಣಕ್ಕೆ ಬೆಲೆಯಿಲ್ಲ.

ಹಣವಿದ್ದು ಅದನ್ನು ಬಳಸದಿದ್ದರೆ ಏನು? ಹಣವಿರದೆ ಇದ್ದರೆ ಏನು? ಬಡವನಿಗೂ ಜಿಪುಣನಿಗೂ ,ಬದುಕಿನ ಬಗೆಯಲ್ಲೇನು ಅಂತರವಿರದು. ಜಿಪುಣನ ಹಣ ಹಿಡಿಯುವುದು ಮೂರನೆಯ ದಾರಿಯನ್ನು.ಅದು ಹೇಳಹೆಸರಿಲ್ಲದೆ ಹಾಳಾಗುತ್ತದೆ. ಇವನು ಕೂಡಿಟ್ಟದ್ದು ಯಾರ ದುಂದಿಗೂ ಒದಗುತ್ತದೆ. ಅದೇನು ಊರ್ಜಿತವಾಗಲಾರದು.

ಕುರುಡು ಕಾಂಚಣ[ಬದಲಾಯಿಸಿ]

ಹಣದ ಹಿಂದೆ ಓಡುವವರೇ ಎಲ್ಲರೂ! ಹಣದ ಬೇಟೆ ಯಾರಿಗೂ ಬೇಸರವಿಲ್ಲ! ಹಣವಿಲ್ಲದೆ ಏನನ್ನು ತಾನೆ ಮಾಡಬಹುದು ,ಎಂದು ಹಣದ ಬೇಟೆಯಲ್ಲಿ ತೊಡಗಿದವರ ಸವಾಲು. ಹಣವಿದ್ದರೆ ಏನನ್ನಾದರೂ ಮಾಡಿಯೇವು ಎಂದು ಅವರ ಹುಮ್ಮಸ. ಆದರೆ ಒಂದು ಗಳಿಗೆ ಬೇಟೆಯನ್ನು ನಿಲ್ಲಿಸಿ ಆಲೋಚಿಸಿದರೆ-ಬದುಕಿನ ಮುಖ್ಯ ವಿವರಗಳೆಲ್ಲ ಹಣದಿಂದ ಬರುವವರೇ ಅಲ್ಲ!ಸ್ನೇಹ ,ಪ್ರೀತಿ, ತೃಪ್ತಿ, ಆರೋಗ್ಯ ,ಹರ್ಷ, ಜಾಣತನ ,ಪ್ರತಿಭೆ, ಕಲೆಯಲ್ಲಿ ಅಭಿರುಚಿ,ಅನುಕೂಲವಾದ ದಾಂಪತ್ಯ ಸರಸಸಂವಾದ-ಇವುಗಳಲ್ಲಿ ಯಾವುದನ್ನು ತಾನೆ ಹಣದಿಂದ ಪಡೆದುಕೊಳ್ಳಲಾದೀತು? ರಾಶಿ ರಾಶಿ ಹಣವಿದ್ದರೂ ಇವನ್ನು ಎಳ್ಳಷ್ಟೂ ಪಡೆಯದೆ ಹೋಗುವವರನ್ನು ಯಾರು ಕಂಡಿಲ್ಲ? ಅವರ ಸಂಕಟವನ್ನು ಯಾರು ಕೇಳಿಲ್ಲ? ಬೇಸರವನ್ನು ಕಳೆಯಲು ನೆರವಾಗುವ ಹಣ ನೆಮ್ಮದಿಯನ್ನೂ ತಂದೀತೆಂಬ ನಿಶ್ಚಯವಿರದು. ಹಣಕ್ಕೆ ಕಣ್ಣಿಲ್ಲ;ತನ್ನನ್ನು ನಂಬಿಕೊಂಡವರು ಯಾರು ಎಂದು ಅದು ಕಾಣಲಾರದು. ನಮಗೆ ಅದರ ಮೇಲಿರುವ ಆಸೆ ಅದಕ್ಕೆ ನಮ್ಮ ಮೇಲೆ ಇರಲಾರದು. ಎಷ್ಟಾದರೂ ಅದು ಕುರುಡು-ಕಾಂಚಣ ವಲ್ಲವೆ? ಅದನ್ನೇ ನಂಬಿದವರು ತಾವೂ ಕುರುಡರೇ ಆದಾರು!