ಸದಸ್ಯರ ಚರ್ಚೆಪುಟ:Shubamchettiappa/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                      ===== ಕಾಗೆ ಕಪ್ಪಾದದ್ದು =====

ಬಹಳ ಹಿಂದಿನ ಕಾಲದಲ್ಲಿ ಕಾಗೆ ಪೂರ್ಣ ಬೆಳ್ಳಗಿತ್ತು. ಸ್ವರ್ಗದ ಪಕ್ಷಿಯೆಂದು ಅದನ್ನು ಕರೆಯುತ್ತಿದ್ದರು. ಬ್ರಹ್ಮನಿಗೆ ಅದು ಪ್ರಿಯವಾದದ್ದರಿಂದ ಅವನು ಒಂದು ದಿನ ಕೇಳಿದ: ``ಕಾಗೆ, ನೀನು ನನ್ನ ದೂತನಾಗ್ತೀಯಾ?"

``ಆಗ್ಲಿ, ಮಹಾಪ್ರಭೂ" ಎಂದಿತು ಕಾಗೆ.

ಅಲ್ಲಿಂದ ಮುಂದೆ ಸ್ವರ್ಗ, ಮರ್ತ್ಯ, ಪಾತಾಳಗಳಿಗೆ ಯಾವ ಸುದ್ದಿಯನ್ನು ಕಳಿಸಬೇಕಾದರೂ ಬ್ರಹ್ಮ ಕಾಗೆಯನ್ನು ಅಟ್ಟುತ್ತಿದ್ದ.

ಒಂದು ದಿನ ಬ್ರಹ್ಮ ಜೇಡಿಮಣ್ಣಿನಿಂದ ಮನುಷ್ಯಾಕೃತಿ ಒಂದನ್ನು ಮಾಡಿ ತನ್ನ ಸುತ್ತಲಿದ್ದ ಇತರ ಪ್ರಾಣಿಗಳನ್ನು ಕೇಳಿದ: ``ಹ್ಯಾಗಿದೆ ಇದು?" ``ಚೆನ್ನಾಗಿದೆ, ಚೆನ್ನಾಗಿದೆ" ಎಂದು ಎಲ್ಲವೂ ಉತ್ತರ ಕೊಟ್ಟವು. ಕಾಗೆ ಮಾತ್ರ ಮೌನವಾಗಿ ಕುಳಿತಿತ್ತು. ``ನಿನಗೇನನಿಸುತ್ತೆ ಕಾಗೆ?" ಎಂದು ಕೇಳಿದ ಬ್ರಹ್ಮ. ``ಆಕೃತಿ ಚೆನ್ನಾಗಿದೆ, ಆದರೆ ಜೀವ ಇದ್ದಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು" ಎಂದಿತು ಕಾಗೆ.

ಬ್ರಹ್ಮ, ``ನೀನು ಹೇಳೋದು ಸರಿ. ಇಲ್ಲಿಂದ ಗಾವುದದಾಚೆ ಜೀವಕಾರಂಜಿಯಿದೆ. ಅಲ್ಲಿಂದ ನೀನು ನೀರು ತಂದರೆ ಈ ಮನುಷ್ಯನಿಗೆ ಜೀವ ತುಂಬಿ ಅಮರನನ್ನಾಗಿ ಮಾಡಬಹುದು" ಎಂದ. ``ನನ್ನ ಕೊಕ್ಕಿನಲ್ಲಿ ತರುವಷ್ಟು ನೀರು ಸಾಕೆ?" ಎಂದು ಕೇಳಿತು ಕಾಗೆ. ``ಸಾಲದು. ಕಾರಂಜಿಯ ಪಕ್ಕದಲ್ಲಿ ಒಂದು ಪಾತ್ರೆ ಇದೆ. ಅದರ ತುಂಬಾ ತುಂಬಿಕೊಂಡು ಬಾ. ಆದರೆ ನೆನಪಿಡು ಅದರಲ್ಲಿ ಒಂದು ತೊಟ್ಟನ್ನೂ ನೀನು ಕುಡೀಬಾರದು" ಎಂದನು ಬ್ರಹ್ಮ.

ಅದಕ್ಕೆ ಒಪ್ಪಿ ಕಾಗೆ ಕಾರಂಜಿಯ ಕಡೆಗೆ ಹಾರಿತು. ಗಾವುದದಾಚೆ ಹೋಗುವ ಹೊತ್ತಿಗೆ ಸಹಜವಾಗಿಯೇ ಅದಕ್ಕೆ ತುಂಬಾ ಬಾಯಾರಿಕೆಯಾಯಿತು. ಕಾಗೆ ಪಾತ್ರೆಯಲ್ಲಿ ನೀರು ತುಂಬಿಸಿಕೊಂಡು ಅದನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಬರುತ್ತಿದ್ದಾಗ ಬಾಯಾರಿಕೆ ತಡೆಯಲಾರದೆ ಅಂದುಕೊಂಡಿತು: `ನಾನು ಒಂದು ಗುಟುಕು ಕುಡಿದರೆ ಬ್ರಹ್ಮನಿಗೆ ಹ್ಯಾಗೆ ಗೊತ್ತಾಗುತ್ತೆ?" ಹಾಗೆ ಯೋಚಿಸುತ್ತಾ ಅದು ಒಂದು ಗುಟುಕು ಕುಡಿಯಿತು. ಅನಂತರ ಎರಡು ಗುಟುಕು. ಕಡೆಗೆ ಪಾತ್ರೆಯ ನೀರೆಲ್ಲವನ್ನೂ ಕುಡಿದು ಕೆಳಗೆ ನಾಲ್ಕಾರು ಹನಿಗಳನ್ನು ಮಾತ್ರ ಉಳಿಸಿತು.

ಅದನ್ನು ನೋಡಿ ಬ್ರಹ್ಮ ``ಇದೇನು ಇಷ್ಟು ಸ್ವಲ್ಪ ತಂದಿದ್ದೀ?" ಎಂದು ಕೇಳಿದ.

``ಕಾರಂಜಿಯಲ್ಲಿ ಇದ್ದುದೇ ಅಷ್ಟು" ಎಂದಿತು ಕಾಗೆ.

ಅಷ್ಟರಲ್ಲಿ ಉದ್ದ ಪುಕ್ಕದ ಬಿಳಿ ಪಾರಿವಾಳವೊಂದು ಹಾರಿ ಬಂದು, ``ಮಹಾಪ್ರಭೂ ಕಾಗೆ ಸುಳ್ಳು ಹೇಳ್ತಿದೆ. ಅದು ದಾರಿಯಲ್ಲಿ ಹಾರಿಬರುತ್ತಿದ್ದಾಗ ನಾನು ಮರದಮೇಲೆ ಕೂತಿದ್ದೆ. ಕಾಗೆ ಪಾತ್ರೆಯಿಂದ ನೀರನ್ನು ಕುಡೀತಾ ಇದ್ದದ್ದನ್ನು ನಾನೇ ಕಣ್ಣಾರೆ ಕಂಡೆ" ಎಂದು ವರದಿ ಒಪ್ಪಿಸಿತು.

ಸುಳ್ಳು ಹೇಳಿ ಮೋಸಮಾಡಿದ ಕಾಗೆಯ ಮೇಲೆ ಬ್ರಹ್ಮನಿಗೆ ವಿಪರೀತ ಸಿಟ್ಟು ಬಂತು. ಅವನು ``ನೀನು ಕಪ್ಪಾಗಿ ಹೋಗು ನಿನ್ನನ್ನು ಯಾರೂ ಗೌರವಿಸದಿರಲಿ" ಎಂದು ಶಾಪ ಕೊಟ್ಟ. ತಕ್ಷಣ ಬಿಳಿಯ ಕಾಗೆ ಪೂರ್ಣ ಕಪ್ಪಾಯಿತು.

ಅಂದಿನಿಂದಲೂ ಕಾಗೆ ಕಪ್ಪಾಗಿಯೇ ಉಳಿದುಬಿಟ್ಟಿದೆ.