ಸದಸ್ಯರ ಚರ್ಚೆಪುಟ:Muaad gm/sandbox
ಬೂರಿಹಬ್ಬ
[ಬದಲಾಯಿಸಿ]ಸತತ ಐದು ದಿನಗಳ ಕಾಲ ನಡೆಯುವ ವಿಶಿಷ್ಟ ಹಬ್ಬ. ದೀಪಾವಳಿಯ ಹಿಂದಿನ ದಿನ ಪ್ರಾರಂಭ. ಪ್ರತಿ ದಿನ ಒಂದೊಂದು ಆಚರಣೆ, ಚಿಕ್ಕವರು ದೊಡ್ಡವರಾದಿಯಾಗಿ ಎಲ್ಲರೂ ಪಾಲ್ಗೊಂಡು ಖುಷಿ ಪಡುವ ರೀತಿ ಅನನ್ಯವಾದುದು.
ಮೊದಲ ದಿನ ಭೂತಗಳಿಗೆ ಕೋಳಿಯ ಬಲಿ ನಡೆಯುತ್ತದೆ, ಅವುಗಳನ್ನು ಸಂತೃಪ್ತಗೊಳಿಸಿದರೆ ಉಳಿದಿದ್ದೆಲ್ಲವೂ ಸುಸೂತ್ರ ಎಂದು ಜನಪದರ ನಂಬಿಕೆ, ಹಾಗಾಗಿ ಅವಕ್ಕೆ ಮೊದಲ ಆದ್ಯತೆ. ಅಂದು ಬೆಳಿಗ್ಗೆಯೇ ಅಡಿಕೆ ಹಿಂಗಾರ, ಪಚ್ಚೆತೆನೆ ಹಗೂ ಹಣ್ಣಡಿಕೆಗಳನ್ನು ಸುಟ್ಟು ಬೂದಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹುಡುಗರು ಖುಷಿಗಾಗಿ ಕಳ್ಳತನ ಮಾಡುವ ಪ್ರಸಂಗ ವಿಶೇಷವಾದದ್ದು. ತೆಂಗಿನ ಕಾಯಿಗಳನ್ನು ಕದಿಯುತ್ತಾರೆ, ಹಸೆಕಲ್ಲನ್ನೇ ಎತ್ತಿ ಬಚ್ಚಿಟ್ಟುಬಿಡುತ್ತಾರೆ, ಅರೆಯಲು ಕಲ್ಲಿಲ್ಲದೆ ಹೆಂಗಸರ ಪರದಾಟ ಇವರಿಗೆ ನಗೆಪಾಟಲಿನ ಸಂಗತಿ. ಬೀದಿಯಲ್ಲಿ ನಿಲ್ಲಿಸಿದ್ದ ಗಾಡಿಯ ಚಕ್ರವನ್ನೇ ಬಿಚ್ಚಿ ಬೇರೆಡೆ ಸಾಗಿಸಿಬಿಡುತ್ತಾರೆ.
ಮರುದಿನ ಅಮಾವಾಸ್ಯೆ, ಅಂದು ಜಾನುವಾರುಗಳ ಹಬ್ಬ, ಅವುಗಳಿಗೆ ಮೈತೊಳೆದು, ಅಲಂಕಾರ ಮಾಡಿ ಬೆದರಿಸುತ್ತಾರೆ-ಅಂದರೆ ಓಡಿಸುತ್ತಾರೆ. ಅದರ ಮರುದಿನ ಪಾಡ್ಯ, ಅಂತಹ ವಿಶೇಷವೇನಿಲ್ಲ. ಆದರೆ ನಂತರದ ದಿನ-ಅಂದರೆ ನಾಲ್ಕನೆಯ ದಿನ ಅತ್ಯಂತ ಮುಖ್ಯವಾದುದು, ಅಂದು ಕರಿ ಹಬ್ಬ. ಬಲೀಂದ್ರನ ಪೂಜೆ, ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಎತ್ತಿನ ಗಾಡಿ, ನೇಗಿಲು, ನೊಗ, ಮಚ್ಚು, ಕುಡುಗೋಲು ಮುಂತಾದ ಸಕಲೆಂಟು ಹತಾರಗಳನ್ನು ಸ್ವಚ್ಚವಾಗಿ ತೊಳೆದು ಅಚ್ಚುಕಟ್ಟಾಗಿ ಜೋಡಿಸಿ ಅರಿಶಿನ-ಕುಂಕುಮ ಹೂ-ಪತ್ರೆಗಳನಿಟ್ಟು ಪೂಜೆ ಮಾಡುತ್ತಾರೆ.
ಐದನೇ ದಿನ ಹಾಗೂ ಕೊನೆಯ ದಿನ ವರ್ಷದ ತೊಡಕು. ಮನೆಯಲ್ಲಿ ಸಿಹಿ ಅಡುಗೆ. ಗದ್ದೆಯಿಂದ ಹೊಸ ಕದಿರು ತಂದು ಅಕ್ಕಿಯನ್ನು ಬಿಡಿಸಿ ಅದರಿಂದ ವಿಶೇಷ ತಿನಿಸುಗಳನ್ನು ಮಾಡಿ ಊಟ ಮಾಡುತ್ತಾರೆ. ಜೊತೆಗೆ ಭತ್ತದ ಕದಿರುಗಳನ್ನು ತಂದು ಮನೆಯ ವಿವಿಧ ಜಾಗಗಳಲ್ಲಿಡುವುದು ಸಂಪ್ರದಾಯ.
ಹೀಗೆ ಭೂತಗಳಿಗೆ ಬಲಿ ಕೊಡುವುದರಿಂದ ಶುರುವಾಗುವ ಬೂರಿ ಹಬ್ಬ ಭತ್ತದ ಹೊಸ ಕದಿರನ್ನು ತರುವ ಕ್ರಿಯೆಯೊಂದಿಗೆ ಮುಕ್ತಾಯವಾಗುತ್ತದೆ. ಭರ್ತಿ ಐದು ದಿನ ಕಾಲ ಬೇಸಾಯದ ವಿವಿಧ ಅವಿಭಾಜ್ಯ ಅಂಗಗಳಿಗೆ ನಮಿಸಿ ಧನ್ಯತೆ ಹೊಂದುವ ರೀತಿಯೇ ವಿಶಿಷ್ಟವಾದದ್ದು.