ಸದಸ್ಯರ ಚರ್ಚೆಪುಟ:Maxan lobo/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಸರಗೋಡು

ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿರುವ ಒಂದು ಜಿಲ್ಲೆ. ಕರ್ನಾಟಕದ ಮಂಗಳೂರಿನಿಂದ ಕೆಲವೇ ಮೈಲಿಗಳಷ್ಟು ದೂರದಲ್ಲಿದೆ. ಕೇರಳದ ಗಡಿ ಜಿಲ್ಲೆಯಾಗಿರುವ ಕಾಸರಗೋಡು ಸಾಕಷ್ಟು ಮಂದಿ ಕನ್ನಡಿಗರನ್ನು ಹೊಂದಿದೆ. ಹಾಗಾಗಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವೂ ಸೇರಿದಂತೆ ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಹಲವು ಮುಖಗಳನ್ನು ಇಲ್ಲಿ ಕಾಣಬಹುದು. ರಾಷ್ಟ್ರಕವಿ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ ಮುಂತಾದ ಕನ್ನಡದ ಪ್ರಸಿದ್ಧ ಕವಿಗಳು ಕಾಸರಗೋಡಿಗೆ ಸೇರಿದವರು.

ವೈಶಿಷ್ಟ್ಯ

ದಕ್ಷಿಣಕನ್ನಡ ಜಿಲ್ಲೆಯನ್ನು ಬಾಚಿ ತಬ್ಬಿಕೊಂಡಂತಿದೆ ಕಾಸರಗೋಡು. ಸುಳ್ಯದಿಂದ ಹರಿದು ಬರುವ ನದಿ ಪಯಸ್ವಿನಿ ಕಾಸರಗೋಡಿನ ಪರಿಸರದಲ್ಲಿ ಹಾದು ‘ಚಂದ್ರಗಿರಿ’ ಎಂಬ ಹೆಸರಿನಿಂದ ಸಾಗುತ್ತದೆ. ನದಿಯ ಒಂದು ಬದಿಯಲ್ಲಿ ಬಹುಪಾಲು ಕನ್ನಡಿಗರ ಕಾಸರಗೋಡು ತಾಲ್ಲೂಕು, ಇನ್ನೊಂದು ಬದಿಯಲ್ಲಿ ಬೆರಳೆಣಿಕೆ ಕನ್ನಡಿಗರ ಹೊಸದುರ್ಗ.[೨]

ಬಹುಭಾಷಾ ಭೂಮಿ ಕಾಸರಗೋಡಿನಲ್ಲಿ ಕನ್ನಡ, ತುಳು, ಮಲಯಾಳ, ಕೊಂಕಣಿ, ಮರಾಠಿ, ಹವ್ಯಕ, ಕೋಟ, ಶಿವಳ್ಳಿ, ಬ್ಯಾರಿ– ಹೀಗೆ ಹಲವು ಭಾಷೆಗಳ ಸೊಗಡು, ಸಾಹಿತ್ಯದ ಕಂಪು ಹರಡಿದೆ. ನೀರ್ಚಾಲು ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಗಳು, ಮಂಜೇಶ್ವರ ಗೋವಿಂದ ಪೈಯವರ ‘ಗಿಳಿವಿಂಡು’ ಮತ್ತು ಡಾ. ಕಯ್ಯಾರ ಕಿಞ್ಜಣ್ಣ ರೈಗಳ ನಿವಾಸ ‘ಕವಿತಾ ಕುಟೀರ’ ಅಮೂಲ್ಯ ಗ್ರಂಥಗಳ ಸಂಗ್ರಹವನ್ನು ಹೊಂದಿದೆ. ಕಾಸರಗೋಡಿನಲ್ಲಿ ಯಕ್ಷಗಾನ ‘ಬೊಂಬೆಯಾಟ’ ಮತ್ತು ಅದರ ಸಂಗ್ರಹಾಲಯವೂ ಇದೆ.

ಸಮುದ್ರದ ಅಲೆಗಳಿಗೆ ಸದಾ ಮೈಯೊಡ್ಡುವ ಬೇಕಲಕೋಟೆಯಲ್ಲಿ ಬೀಚ್, ಪಾರ್ಕ್, ಉತ್ಖನನದ ಮೂಲಕ ಕಂಡ ಗತವೈಭವದ ಅರಮನೆಯ ಅಡಿಪಾಯ, ಸುತ್ತಲಿನ ಉದ್ಯಾನ ಮತ್ತು ಐತಿಹಾಸಿಕ ಕೋಟೆಯ ಸೌಂದರ್ಯವನ್ನು ಜತೆಯಾಗಿ ಸವಿಯಬಹುದು. ಜಿಲ್ಲೆಯಲ್ಲಿರುವ ಮಾಯಿಪ್ಪಾಡಿ ಅರಮನೆ, ಚಂದ್ರಗಿರಿ ಕೋಟೆ, ಆರಿಕ್ಕಾಡಿ ಕೋಟೆಗಳಿಗೆ ಐತಿಹಾಸಿಕ ಪ್ರಾಧಾನ್ಯತೆ ಇದೆ.

ಕಾಸರಗೋಡಿಗೆ ಸಮೀಪದ ಸರೋವರ ಕ್ಷೇತ್ರ ಅನಂತಪುರ, ಅಲ್ಲಿನ ಮೊಸಳೆ ‘ಬಬಿಯಾ’, ಪಕ್ಕದ ಮುಜುಂಗಾವಿನಲ್ಲಿರುವ ವಿಶಾಲ ಸರೋವರ ಪ್ರವಾಸಿಗರ ಆಕರ್ಷಣೆಯ ಚುಂಬಕಗಳು. ವಿನಾಯಕನ ದೇವಾಲಯ ಮಧೂರು, ಬೇಳ ಶೋಕಮಾತಾ ಇಗರ್ಜಿಯಲ್ಲಿರುವ ಗುಹೆ, ಮಂಜೇಶ್ವರದ ಜೈನಬಸದಿ, ಕಾಞಂಗಾಡಿನಲ್ಲಿರುವ ಆನಂದಾಶ್ರಮ ಮತ್ತು ನಿತ್ಯಾನಂದಾಶ್ರಮಗಳು ಕಾಸರಗೋಡಿನ ಪರಿಸರದ ಆಧ್ಯಾತ್ಮಿಕ ತಾಣಗಳು. ಪೊಸಡಿಗುಂಪೆ ಮತ್ತು ರಾಣಿಪುರಂ ಚಾರಣಕ್ಕೆ ಅನುಕೂಲಕರವಾದ ಉನ್ನತ ಬೆಟ್ಟಗಳು. ನೀಲೇಶ್ವರದ ಸನಿಹದಲ್ಲಿರುವ ‘ಹಿನ್ನೀರ ಸರೋವರ’ ಮನಸ್ಸಿಗೆ ಮುದವನ್ನು ನೀಡುತ್ತದೆ.

ತೆಂಗು ಕೃಷಿ ಕುರಿತಾದ ಸಂಶೋಧನಾ ಚಟುವಟಿಕೆಗಳಲ್ಲಿ ನಿರತವಾದ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ತಳಿವೈವಿಧ್ಯ, ಒಳಸುರಿಗಳ ಬಗೆಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಹಾಲಿನ ಸಂಸ್ಕರಣೆಯ ವಿಧಾನಗಳನ್ನು ಮಾವುಂಗಾಲ್‌ನಲ್ಲಿರುವ ‘ಮಿಲ್ಮಾ ಡೈರಿ’ಯಲ್ಲಿ ವೀಕ್ಷಿಸಬಹುದು. ಓಣಂ ಹಬ್ಬದ ಸಂದರ್ಭದಲ್ಲಿ ರಚಿಸಲಾಗುವ ಹೂವಿನ ರಂಗವಲ್ಲಿಗಳು, ಮುಸ್ಲಿಂ ಕಲಾಪ್ರಕಾರಗಳಾದ ಒಪ್ಪನ ಮತ್ತು ದಫ್‌ಮುಟ್ಟು ಕಾಸರಗೋಡಿನ ಪಯಣದಲ್ಲಿರುವ ಜನರಿಗೆ ಮನರಂಜನೆಯನ್ನು ನೀಡುತ್ತವೆ.

ಇಲ್ಲಿನ ಜನರ ಪ್ರಧಾನ ಆಹಾರ ಕುಚ್ಚಿಲಕ್ಕಿಯ ಅನ್ನ, ‘ಪರೋಟಾ’ ಮತ್ತು ‘ಪುಟ್ಟು’ ವಿಶೇಷ ತಿನಿಸುಗಳು. ಕಡಲಿನ ಸನಿಹದಲ್ಲೇ ಸಾಗುವ ‘ಡಬಲ್ ಲೈನ್’ ರೈಲು ಮಾರ್ಗ ಮತ್ತು ಸಮಾನಾಂತರವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ ಕಾಸರಗೋಡನ್ನು ಸಂಪರ್ಕಿಸಲಿರುವ ಸೌಕರ್ಯವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ಕಾಸರಗೋಡನ್ನು ಸಂದರ್ಶಿಸುವ ಪ್ರವಾಸಿಗರಿಗೆ ಈ ಜಿಲ್ಲೆಯ ನೈಸರ್ಗಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮುಖಗಳು ಶಿಕ್ಷಣಾಸಕ್ತಿಯನ್ನು ಮೂಡಿಸುತ್ತವೆ, ಮನರಂಜನೆಯನ್ನು ನೀಡುತ್ತವೆ

ಪ್ರಮುಖ ಪ್ರವಾಸ ತಾಣಗಳು

   ಅಡೂರು
   ಅಜಾನೂರು
   ಅನಂತಪುರ ದೇವಸ್ಥಾನ
   ಕಣಿಪುರ ದೇವಸ್ಥಾನ, ಕುಂಬಳೆ
   ಮಧೂರು ದೇವಸ್ಥಾನ
   ಚಂದ್ರಗಿರಿ ಕೋಟೆ
   ಕಣ್ವತೀರ್ಥ ಬೀಚ್ ರೆಸಾರ್ಟ್
   ಬೇಕಲ ಕೋಟೆ
   ಮುಜುಂಗಾವು ದೇವಸ್ಥಾನ
   ಕುಂಟಿಕಾನ ದೇವಸ್ಥಾನ
   ಮಲ್ಲ ದುರ್ಗಾಪರಮೇಶ್ವರಿ ದೇವಸ್ಥಾನ