ವಿಷಯಕ್ಕೆ ಹೋಗು

ಸದರ್ನ್ ಬರ್ಡ್ ವಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನ್ನುಭಾಗದ ವೀಕ್ಷಣೆಯ ಚಿತ್ರ

ಭಾರತದ ಎರಡನೆಯ ಅತೀ ದೊಡ್ಡ ಚಿಟ್ಟೆ ಸದರ್ನ್ ಬರ್ಡ್ ವಿಂಗ್ ಚಿಟ್ಟೆ (ಟ್ರಾಯ್ಡ್ಸ್ ಮಿನೋಸ್- ದಕ್ಷಿಣ ಭಾರತಹಕ್ಕಿ ರೆಕ್ಕೆಯ ಚಿಟ್ಟೆ). ಈ ಚಿಟ್ಟೆ ನೆಲಮಟ್ಟದಿಂದ ೩೦-೩೫ ಅಡಿಗಳಷ್ಟು ಎತ್ತರದಲ್ಲಿ ದೀರ್ಘ ಹಾರಾಟ ನಡೆಸುತ್ತದೆ. ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿ ಮರಗಳ ಮೇಲೆ. ಆಹಾರ ಸೇವನೆಗೆ ಮಾತ್ರ ಬೆಳಗ್ಗೆ ಮತ್ತು ಸಂಜೆ ನೆಲಮಟ್ಟದ ಲಾಂಟಾನಾ, ಇಕ್ಸೋರ ಮೊದಲಾದ ಗಿಡಗಳನ್ನು ಹುಡುಕಿಕೊಂಡು ಕೆಳಗಿಳಿಯುತ್ತದೆ. ಇದರ ರೆಕ್ಕೆಗಳ ಉದ್ದ ಸಾಮಾನ್ಯವಾಗಿ ೧೭೦ರಿಂದ ೧೯೦ಮೀ.ಮೀ. ಚಿಟ್ಟೆಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲ ದೇಶಗಳ ಕಾಡುಗಳಲ್ಲಿ ಹರಡಿಕೊಂಡಿರುತ್ತವೆ. ಕೆಲವೊಂದು ವಿಷಿಷ್ಟ ತಳಿಗಳು ಮಾತ್ರ ಕೆಲವು ಸೀಮಿತ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸದರ್ನ್ ಬರ್ಡ್ ವಿಂಗ್ ಚಿಟ್ಟೆಯು ಭಾರತದ ದಕ್ಷಿಣ ಭಾಗದ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಭಾರತದಲ್ಲಿ ಬರ್ಡ್ ವಿಂಗ್ ಹೆಸರಿನ ಹಲವು ದೊಡ್ಡ ಚಿಟ್ಟೆ ಜಾತಿಗಳಿವೆ. ಅವುಗಳಲ್ಲಿ ಕಾಮನ್ ಬರ್ಡ್ ವಿಂಗ್(೧೩೦ರಿಂದ ೧೬೦ಮೀ.ಮೀ. ರೆಕ್ಕೆ) ಒಂದು ಪ್ರಭೇದವಾದರೆ, ಗೋಲ್ಡನ್ ಬರ್ಡ್ ವಿಂಗ್(೧೧೦ರಿಂದ ೧೭೦ಮೀ.ಮೀ. ರೆಕ್ಕೆ) ಮತ್ತೊಂದು ಪ್ರಭೇದ.

ಲಕ್ಷಣಗಳು

[ಬದಲಾಯಿಸಿ]

ಗಂಡು ಮತ್ತು ಹೆಣ್ಣು ಚಿಟ್ಟೆಗಳು ನೋಡಲು ಸರಿಸುಮಾರು ಒಂದೇ ತೆರನಾಗಿ ಕಾಣಿಸಿದರೂ ಗಂಡಿನ ಆಕಾರ ಸ್ವಲ್ಪ ಚಿಕ್ಕದು, ಜತೆಗೆ ಗಂಡು ಚಿಟ್ಟೆಯ ಹಳದಿ ರೆಕ್ಕೆಯ ಮೇಲೆ ಅಂಚಿನಲ್ಲಿ ಒಂದು ಸಾಲು ಕಪ್ಪು ಮಚ್ಚೆಗಳಿದ್ದರೆ, ಹೆಣ್ಣು ಚಿಟ್ಟೆಯ ಮೇಲೆ ಎರಡು ಸಾಲು ಕಪ್ಪು ಮಚ್ಚೆಗಳಿರುತ್ತವೆ. ಎರಡನೆಯ ಸಾಲಿನ ಮಚ್ಚೆ ಸುಮಾರಾಗಿ ತ್ರಿಕೋನಾಕಾರಕ್ಕಿದ್ದು ದೊಡ್ಡದಾಗಿರುತ್ತದೆ. ಬಾಹ್ಯವಾಗಿ ಹೆಣ್ಣು ಚಿಟ್ಟೆ ಮತ್ತು ಗಂಡು ಚಿಟ್ಟೆ ಎಂದು ವಿಂಗಡಿಸಲು ಇದೊಂದು ಪ್ರಮುಖ ಅಂಶ. ಉಳಿದಂತೆ ದೇಹದ ಮೇಲಿನ ಮಚ್ಚೆಗಳು, ಗಂಡಿನ ದೇಹದ ಎರಡೂ ಬದಿಯಲ್ಲಿ ಉದ್ದಕ್ಕೆ ಸಾಲಾಗಿ(ಹೆಣ್ಣು ಚಿಟ್ಟೆಗಳನ್ನು ಆಕರ್ಷಿಸಲು ಬೆಳೆದಿರುವ) ಕಾಣುವ ಕಪ್ಪು ಕೂದಲು, ಎರಡರ ಜನನಾಂಗಗಳೂ ಹೆಣ್ಣು-ಗಂಡು ವ್ಯತ್ಯಾಸ ಗುರುತಿಸಲು ಸಹಾಯಕವಾಗಿರುತ್ತವೆ.

ಹೆಣ್ಣು ಚಿಟ್ಟೆಯ ತಳಭಾಗ

ಸಂತಾನೋತ್ಪತ್ತಿ

[ಬದಲಾಯಿಸಿ]

ಮುಂಗಾರು ಮಳೆ ಆರಂಭವಾದ ಕೆಲವು ದಿನಗಳ ಆನಂತರ ಚಿಟ್ಟೆಗಳು ಮಿಲನದ ಪ್ರಕ್ರಿಯೆ ಪೂರೈಸಿ, ಮೊಟ್ಟೆ ಇಡುವುದರಿಂದ ಆಗಸ್ಟ್-ಸೆಪ್ಟಂಬರ್ ನಲ್ಲಿ ಚಿಟ್ಟೆಗಳ ಲಾರ್ವಾಗಳು ಕಾಣಿಸಿಕೊಳ್ಳುತ್ತವೆ. ಆ ಸಮಯದಲ್ಲಿ ಕಾಡೊಳಗೆ ಕೆಲವು ನಿರ್ದಿಷ್ಟ ಸಸ್ಯಜಾತಿ, ಪೊದೆ, ಬಳ್ಳಿಗಳಲ್ಲಿ ಚಿಟ್ಟೆಗಳು ಇಟ್ಟಿರುವ ಮೊಟ್ಟೆಗಳು ಒಡೆದು ಲಾರ್ವಾಗಳು ಹರಿದಾಡುತ್ತಿರುತ್ತವೆ. ತಾಯಿ ಚಿಟ್ಟೆ ಮರಿಗಳಿಗೆ ಆಹಾರವಾಗಲಿರುವ ನಿರ್ದಿಷ್ಟ ಸಸ್ಯ ಅಥವಾ ಬಳ್ಳಿಯ ಮೇಲೆಯೆ ಮೊಟ್ಟೆ ಇಡುವುದರಿಂದ ಲಾರ್ವಾ ಅದೇ ಪರಿಸರದಲ್ಲಿ ಸುತ್ತಾಡುತ್ತಿರುತ್ತದೆ. ಲಾರ್ವಾ ಸ್ವಲ್ಪ ದುಂಡನೆಯ ಕಪ್ಪಾದ ಹೊಳೆಯುವ ದೇಹ ಹೊಂದಿರುತ್ತದೆ. ದೇಹದ ಅಂಚಿನಲ್ಲಿರುವ ಸೂಜಿಯಂತಹ ಭಾಗಗಳು ಗುಲಾಬಿ ಬಣ್ಣದ್ದಾಗಿದ್ದು ಆಕರ್ಷಕವಾಗಿರುತ್ತವೆ. ತಲೆಯ ಭಾಗವೂ ಗುಲಾಬಿ ಬಣ್ಣದ್ದಾಗಿದ್ದು ತಲೆಯ ಮೇಲೆ ಎರಡು ಆಂಟೆನಾದಂಥ ಭಾಗವಿರುತ್ತದೆ. ಲಾರ್ವಾ ದೇಹದ ಮೇಲೆ ಐದು ಮತ್ತು ಆರನೆಯ ಭಾಗದ ಮೇಲೆ ಅಡ್ಡಕ್ಕೆ ರೇಖೆ ಎಳೆದಂತೆ ಬಿಳಿಯ ಬಣ್ಣದ ರೇಖೆಯಿರುತ್ತದೆ. ನಿರಂತರವಾಗಿ ಆಹಾರವನ್ನು ಕಬಳಿಸುತ್ತಾ ಲಾರ್ವಾ ಹಲವಾರು ಬಾರಿ ಪೊರೆ ಕಳಚುತ್ತ ಪ್ಯೂಪಾವಸ್ಥೆಗೆ ಸಿದ್ಧವಾಗುತ್ತದೆ. ಪ್ಯೂಪಾವಸ್ಥೆಗೆ ಹೋಗುವ ಮುನ್ನಾದಿನ ಸುರಕ್ಷಿತವಾದ ದೃಢವಾದ ಗಿಡದ ಟೊಂಗೆಗೆ ತನ್ನ ದೇಹದಿಂದ ರೇಷ್ಮೆ ನೂಲಿನಂಥ ದಾರವನ್ನು ಬಿಡುತ್ತಾ ತಲೆಕೆಳಗಾಗಿ ನೇತುಹಾಕಿಕೊಳ್ಳುತ್ತದೆ. ಹಿಂಭಾಗವನ್ನು ಟೊಂಗೆಗೆ ತಾಗುವಂತೆ ಅಂಟಿಸಿಕೊಂಡು ತಲೆಯ ಭಾಗವನ್ನು ಒಂದು ನಿರ್ದಿಷ್ಟ ಅಂತರದಲ್ಲಿರುವಂತೆ ದಾರದಿಂದ ನೇತು ಹಾಕಿಕೊಳ್ಳುತ್ತದೆ. ಟೊಂಗೆಗೂ ಕೋಶಕ್ಕೂ ಇರುವ ದೂರವು ಕೋಶ ಒಡೆದು ಚಿಟ್ಟೆ ಹೊರಬರುವಾಗ ಕಾಲುಗಳಿಂದ ಗಿಡದ ಟೊಂಗೆಯನ್ನು ಹಿಡಿದು ಹೊರಬರಲು ಸಾಧ್ಯವಾಗುವಷ್ಟು ಅಂತರಕ್ಕೆ ಕರಾರುವಾಕ್ಕಾಗಿರುತ್ತದೆ. ಬೇರೆ ಲಾರ್ವಾ ಕ್ರಿಸಾಲಿಸ್ ಹಂತ ತಲುಪಿದಾಗ ಚಲನೆಯನ್ನು ಸಂಪೂರ್ಣ ನಿಲ್ಲಿಸಿರುತ್ತದೆ. ಆದರೆ ಈ ಚಿಟ್ಟೆಯ ವಿಶೇಷ ಎಂದರೆ, ಚಿಟ್ಟೆಯಾಗಿ ರೂಪಾಂತರವಾಗಿ ಹೊರಬರುವ ಮೂರ್ನಾಲ್ಕು ದಿನಗಳವರೆಗೂ ಎಚ್ಚರದ ಸ್ಥಿತಿಯಲ್ಲಿಯೇ ಇದ್ದು ಯಾವುದಾದರೂ ಶತ್ರು ಹತ್ತಿರ ಹೋದರೆ ಅಥವಾ ಸ್ಪರ್ಶಿಸಿದರೆ ಹಿಸ್ ಹಿಸ್ ಎನ್ನುವ ಆಕ್ರಮಣಕಾರಿ ಸದ್ದನ್ನು ಹೊರಡಿಸುತ್ತದೆ. ನಿದ್ದೆಗೆ ಜಾರಿದ ಒಂದೆರಡು ದಿನಗಳಲ್ಲಿ ಲಾರ್ವಾದ ಹೊರಕವಚ ರೂಪಾಂತರವಾಗಿ ಕ್ರಿಸಾಲಿಸ್ ನ ಹೊಳೆಯುವ ಬಣ್ಣ ಮುಸುಕಾಗಿ ಕಾಣುತ್ತದೆ. ಅಂದರೆ, ಅದರ ಕೋಶಾವಸ್ಥೆ ಮುಗಿಯುತ್ತಿದೆ ಎಂದರ್ಥ. ಮುಂದಿನ ಎರಡು ದಿನಗಳಲ್ಲಿ ಕೋಶವನ್ನು ಹರಿದುಕೊಂಡು ಚಿಟ್ಟೆ ಹೊರಬರುತ್ತದೆ. ಬೆಳಗ್ಗೆ ಸೂರ್ಯ ಹುಟ್ಟಿದ ಎರಡೂವರೆ ಮೂರು ಗಂಟೆಯ ಅವಧಿಯಲ್ಲಿ ಬಿಸಿಲು ತೀಕ್ಷ್ಣವಾಗಿರುವ ಸಮಯ ಚಿಟ್ಟೆ ಕೋಶದಿಂದ ಹೊರಬರುವ ಸಮಯ. ಕೋಶದಿಂದ ಹೊರಬಂದ ಚಿಟ್ಟೆಯ ರೆಕ್ಕೆಗಳು ನೀರಿನಲ್ಲಿ ನೆನೆದ ತೆಳುವಾದ ರೇಷ್ಮೆ ಬಟ್ಟೆಯಂತೆ ಸುಕ್ಕಾಗಿದ್ದು ಹಾರಲು ಅಸಮರ್ಥವಾಗಿರುತ್ತವೆ. ಕೋಶದಿಂದ ಹೊರಬಂದು ಟೊಂಗೆಯ ಮೇಲೇರಿ ಹಾರಲು ಶಕ್ತಿಗಳಿಸಿಕೊಳ್ಳಲು ಅದಕ್ಕೆ ಸೂರ್ಯನ ಬೆಳಕಿನ ಬಿಸಿ ಬೇಕೇಬೇಕು. ಆ ಸಮಯದಲ್ಲಿ ಅದು ಲಾರ್ವಾ ಆಗಿದ್ದಾಗ ತಿಂದಿದ್ದ ಅಪಾರ ಆಹಾರವನ್ನು ಗುದದ್ವಾರದ ಮೂಲಕ ವಿಸರ್ಜಿಸಿ ದೇಹವನ್ನು ಶುದ್ಧೀಕರಿಸಿಕೊಳ್ಳುತ್ತದೆ. ಅನಂತರ ದೇಹದೊಳಗೆ ರಕ್ತಕ್ಕೆ ಬದಲಾಗಿ ಇರುವ ಹಿಮೋಲಿಂಫ್ ಎಂಬ ಜೀವದ್ರವವನ್ನು ರೆಕ್ಕೆಗಳ ನಾಳಗಳೊಳಗೆ ಪಂಪ್ ಮಾಡಿಕೊಂಡು ರೆಕ್ಕೆಗಳನ್ನು ದೃಢಪಡಿಸಿಕೊಳ್ಳುತ್ತದೆ. ಹೂವಿನಿಂದ ಮಕರಂದ ಹೀರುವ ನಾಳವು ಹುಟ್ಟಿದಾಗ ಎರಡು ಅರ್ಧ ಕೊಳವೆಗಳಂತಿದ್ದು, ಅದರಲ್ಲಿರುವ ಸ್ನಾಯುಗಳನ್ನು ಒಂದಕ್ಕೊಂದು ತಿಕ್ಕಿಕೊಳ್ಳುತ್ತಾ ಬೆಸೆದು ಅದನ್ನೊಂದು ಪರಿಪೂರ್ಣ ಹೀರುಕೊಳವೆಯ ರೂಪಕ್ಕೆ ತರುತ್ತದೆ. ಈ ವೇಳೆಗೆ ದೇಹದಲ್ಲಿ ಸೂರ್ಯನ ಬೆಳಕಿನ ಕಾರಣದಿಂದ ಶಕ್ತಿ ಸಂಚಯವಾಗುವುದರಿಂದ ಟೊಂಗೆಗೆ ನೇತಾಡುವುದನ್ನು ಬಿಟ್ಟು, ಮೇಲೇರಿ ಕುಳಿತುಕೊಳ್ಳುತ್ತದೆ. ಆನಂತರ ಮೆಲ್ಲನೆ ರೆಕ್ಕೆಯನ್ನು ಪಟಪಟ ಆಡಿಸುತ್ತದೆ ಹಾರುವ ತಯಾರಿ ನಡೆಸುತ್ತದೆ. ರೆಕ್ಕೆ ಸಾಕಷ್ಟು ದೃಢವಾದ ಅನಂತರ ರೆಕ್ಕೆ ಬಡಿಯುತ್ತಾ ಕುಪ್ಪಳಿಸುತ್ತಾ ಸೂರ್ಯನ ಬೆಳಕು ತೀಕ್ಷ್ಣವಾಗಿರುವ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಅನಂತರ ಒಮ್ಮೆ ರೆಕ್ಕೆಯನ್ನು ರಿವ್ವನೆ ಬಡಿಯುತ್ತಾ ಹಾರಿ ತನ್ನ ಜೀವನವನ್ನು ಅರಸಿಕೊಂಡು ಹೋಗುತ್ತದೆ. []

ಬರ್ಡ್ ವಿಂಗ್ ಪ್ರಭೇದದ ಎಲ್ಲ ಚಿಟ್ಟೆಗಳಿಗೆ ಮರಿ ಇಡಲು ಅರಿಸ್ಟೋಲೋಶಿಯ ಇಂಡಿಕ ಸಸ್ಯವೇ ಬೇಕು. ಪಶ್ಚಿಮಘಟ್ಟ ಮತ್ತದರ ಆಸುಪಾಸಿನಲ್ಲಿ ಇದು ಬಳ್ಳಿಯ ರೂಪದಲ್ಲಿ ಬೆಳೆದಿರುತ್ತವೆ. ಇದು ಸ್ವಲ್ಪ ಅಪರೂಪದ ಸಸ್ಯ ಜಾತಿಯಾಗಿರುವುದರಿಂದ ಮುಂಗಾರಿನ ಸಮಯದಲ್ಲಿ ಈ ಗಿಡವನ್ನು ಹುಡುಕಿಕೊಂಡಿದ್ದರೆ, ಬರ್ಡ್ ವಿಂಗ್ ಚಿಟ್ಟೆಗಳು ಮೊಟ್ಟೆ ಇಡುವುದನ್ನು ಗಮನಿಸಬಹುದು. ಈ ಬಳ್ಳಿಯು ವಾರ್ಷಿಕವಾಗಿ ಹೂಬಿಟ್ಟು ಕಾಯಾಗಿ ಬೀಜ ಪ್ರಸರಣದಿಂದ ಹರಡುತ್ತದೆ. ಇದರ ಬೇರು ವಿಸ್ತಾರಕ್ಕೆ ವ್ಯಾಪಿಸಿ ಬೇರಿನಿಂದಲೂ ಹೊಸ ಬಳ್ಳಿಗಳು ಹುಟ್ಟಬಹುದು. ಈ ಸಸ್ಯಕ್ಕೆ ಹಲವಾರು ಔಷಧೀಯ ಮತ್ತು ವಿಷದ ಗುಣವಿದೆ. ಒಂದುವೇಳೆ ಈ ಬಳ್ಳಿ ನಾಮಾವಶೇಷವಾದರೆ, ಬರ್ಡ್ ವಿಂಗ್ ಜಾತೀಯ ಚಿಟ್ಟೆಗಳು ಹೋಸ್ಟ್ ಪ್ಲಾಂಟ್ ಇಲ್ಲದೆ ನಿರ್ನಾಮವಾತಬಹುದು. ಇದೊಂದು ನಿಸರ್ಗದ ಸರಪಣಿ ಪ್ರಕ್ರಿಯೆಯಾಗಿದೆ.[]

ಮೊಟ್ಟೆ - (ಪ್ಯೂಪಾ)

[ಬದಲಾಯಿಸಿ]

ತಿಳಿ ಕಂದು ಅಥವಾ ಹಸಿರು, ಉತ್ತಮವಾದ ಕಂದು ಬಣ್ಣದ - ವ್ಯತಿರಿಕ್ತ ಬಣ್ಣದ ಪಟ್ಟೆ ಅಥವಾ ಪಟ್ಟೆಗಳು ಮತ್ತು ಅತಿಚಿಕ್ಕ ಗುರುತುಗಳಿಂದ ಗುರುತಿಸಲಾಗಿದೆ. ಅವು ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತದೆ. ಸ್ಪರ್ಶಿಸಿದರೆ, ಅದು ಓಲಾಡುತ್ತದೆ ಮತ್ತು ಹಿಸ್ಸಿಂಗ್ (ಸ್ಸ್-ಸ್ಸ್) ಶಬ್ದಗಳನ್ನು ಮಾಡುತ್ತದೆ. []

ಉಲ್ಲೇಖನ

[ಬದಲಾಯಿಸಿ]