ವಿಷಯಕ್ಕೆ ಹೋಗು

ಸಂಚಿ ಹೊನ್ನಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಂಚಿಯ ಹೊನ್ನಮ್ಮ ಇಂದ ಪುನರ್ನಿರ್ದೇಶಿತ)

ಸಂಚಿಯ ಹೊನ್ನಮ್ಮ ಸುಮಾರು ಕ್ರಿ.ಶ.೧೬೮೦ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ (ಕ್ರಿ.ಶ.೧೬೭೩-೧೭೦೪) ಸಂಚಿಯ ಊಳಿಗದಲ್ಲಿ ಇದ್ದ ಮಹಿಳೆ. ಈಕೆ ಮೈಸೂರು ಜಿಲ್ಲೆಯ ಯಳಂದೂರಿನಲ್ಲಿ ಹುಟ್ಟಿದವಳು. ಇದೆ ಸ್ಥಳಕ್ಕೆ ಸೇರಿದ್ದ ಚಿಕ್ಕದೇವರಾಜರ ಪಟ್ಟದರಸಿಯಾಗಿದ್ದ ದೇವರಾಜಮ್ಮಣ್ಣಿಯ ಬಾಲ್ಯ ಸ್ನೇಹಿತೆಯಾಗಿದ್ದಳು.

ಹನ್ನೆರಡನೆಯ ಶತಮಾನದ ಅಕ್ಕಮಹಾದೇವಿ ಮತ್ತಿತರ ವಚನಕಾರ್ತಿಯರನ್ನು ಬಿಟ್ಟರೆ, ಕನ್ನಡದಲ್ಲಿ ಸ್ತ್ರೀಯರು ಕೃತಿ ರಚನೆ ಮಾಡಿದ ನಿದರ್ಶನಗಳು ದೊರೆಯುವುದು ಹದಿನೆಂಟನೆಯ ಶತಮಾನದಲ್ಲಿಯೇ. ಚಿಕದೇವರಾಯರ ಅರಮನೆಯ ಪರಿಸರದಲ್ಲಿ, ಹೊನ್ನಮ್ಮ, ಶೃಂಗಾರಮ್ಮ, ಚೆಲುವಾಂಬೆಯರೆಂಬ ಕವಯಿತ್ರಿಯರಿದ್ದರು.

ಶೃಂಗಾರಮ್ಮನು ಬರೆದ ‘ಪದ್ಮಿನೀ ಕಲ್ಯಾಣ’, ರಾಣಿಯಾದ ಚೆಲುವಾಂಬೆ ಬರೆದ ‘ವರನಂದೀ ಕಲ್ಯಾಣ’ ಮತ್ತು ‘ವೆಂಕಟಾಚಲ ಮಹಾತ್ಮೆ ಲಾಲಿಪದ’, ಇವುಗಳನ್ನು ಹೆಸರಿಸಬಹುದು. ಇವರುಗಳಲ್ಲಿ ಹೊನ್ನಮ್ಮನ ಕಾವ್ಯಶಕ್ತಿಯೆ ಎದ್ದು ಕಾಣುವಂಥದ್ದು, ಹೊನ್ನಮ್ಮನಿಗೆ ‘ಸಂಚಿಯ ಹೊನ್ನಮ್ಮ’ ಎನ್ನುವುದು ಪೂರ್ತಿಯಾದ ಹೆಸರು. ಸಂಚಿ ಎಂದರೆ ಚೀಲ; ಹೊನ್ನಮ್ಮ ಎಲೆಯಡಕೆಯ ಚೀಲವನ್ನು ಹಿಡಿದು, ಅರಮನೆಯಲ್ಲಿ ರಾಜ – ರಾಣಿಯರ ಸಮೀಪವರ್ತಿಯಾಗಿ ಕೆಲಸ ಮಾಡಿಕೊಂಡಿದ್ದವಳು. ಅರಮನೆಯ ಊಳಿಗದ ಹೆಣ್ಣಾದ ಇವಳು ಸಿಂಗರಾರ್ಯನಿಂದ ವ್ಯಾಸಂಗವನ್ನು ಪಡೆದು, ‘ಹದಿಬದೆಯ ಧರ್ಮ’ ಎಂಬ ಕಾವ್ಯವನ್ನು ಬರೆದು ಕವಯಿತ್ರಿಯಾದಳು. ಈ ‘ಹದಿಬದೆಯ ಧರ್ಮ’ (ಪತಿವ್ರತೆಯರ ಧರ್ಮ ಅಥವಾ ಕರ್ತವ್ಯ) ಎನ್ನುವುದು ಗೃಹಿಣೀ ಧರ್ಮದ ಕೈಪಿಡಿ. ಗಂಡನೊಡನೆ, ಗರತಿಯಾಗಿ ಸುಗಮವಾಗಿ ಸಂಸಾರ ಮಾಡುವ ಹೆಣ್ಣಿಗೆ ಹೇಳಿದ ಬುದ್ಧಿವಾದದಂತಿದೆ ಈ ಕಾವ್ಯ. ಧರ್ಮಶಾಸ್ತ್ರದಲ್ಲಿರುವ ಸಂಗತಿಗಳನ್ನೆಲ್ಲಾ ಸಂಗ್ರಹಿಸಿ, ಕನ್ನಡದ ಹೆಣ್ಣು ಮಕ್ಕಳಿಗೆ ತಿಳಿಯುವಂತೆ ಸಾಂಗತ್ಯದಲ್ಲಿ ಈ ನೀತಿ ಕಾವ್ಯ ರಚಿತವಾಗಿದೆ. ೯ ಸಂಧಿಗಳು ಹಾಗು ೪೨೦ ಪದ್ಯಗಳನ್ನು ಒಳಗೊಂಡ ಈ ಕೃತಿಯು ತನ್ನ ಕಾವ್ಯಸೌಂದರ್ಯದಿಂದಾಗಿ ಹಾಗು ದಿಟ್ಟ ಸ್ತ್ರೀಪರ ಧೋರಣೆಯಿಂದಾಗಿ ಖ್ಯಾತವಾಗಿದೆ. ಇದರ ಒಂದು ಪದ್ಯ :

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ

ಪೆಣ್ಣಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು?

ತಮ್ಮೆಲ್ಲರನ್ನು ಹಡೆದವಳು ಹೆಣ್ಣಲ್ಲವೆ? ಕಾಪಾಡಿದವಳು ಹೆಣ್ಣಲ್ಲವೆ? ಹೀಗಿರುವಾಗ ಹೆಣ್ಣು ಹೆಣ್ಣು ಎಂದು ಯಾಕೆ ನಿಕೃಷ್ಟರಾಗಿ ಕಾಣುತ್ತಾರೋ ಕಣ್ಣು ಕಾಣದ ಈ ಮೂರ್ಖರು, ಎಂಬ ಮಾತಿನಲ್ಲಿ ಹೊನ್ನಮ್ಮ ಮುಖ್ಯವಾಗಿ ಗಂಡಸರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಪರಂಪರಾಗತವಾಗಿ ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳು ಭಾವನೆಯನ್ನು ಬೆಳೆಯಿಸಿದ ಮನೋಧರ್ಮವನ್ನು ಹೊನ್ನಮ್ಮ ಖಂಡಿಸಿದ ಈ ಮಾತು ಹೊಸತಾಗಿದೆ. ಇದೊಂದು ಮಾತನ್ನು ಬಿಟ್ಟರೆ ಇವಳ ಕೃತಿ ಹೆಣ್ಣಿನಲ್ಲಿ ಯಾವ ವೈಚಾರಿಕ ಜಾಗೃತಿಯನ್ನಾಗಲಿ, ಹೆಚ್ಚಿನ ಆತ್ಮಾಭಿಮಾನಗಳನ್ನಾಗಲಿ ಪ್ರೇರಿಸದೆ, ಪತಿಪಾದಸೇವೆಯನ್ನು ಮಾಡಿಕೊಂಡು, ಉತ್ತಮ ಗೃಹಿಣಿಯಾಗಿ ಹೆಣ್ಣು ಹೇಗೆ ಬಾಳಬೇಕೆಂಬುದನ್ನು ಹೇಳಿಕೊಂಡು ಹೋಗುತ್ತದೆ. ‘ಹದಿಬದೆಯ ಧರ್ಮ’ದಿಂದ ಆಧುನಿಕ ವಿಚಾರ ಧಾರೆಯನ್ನು ನಿರೀಕ್ಷಿಸುವುದೇ ತಪ್ಪು; ಅರಮನೆಯ ಊಳಿಗದ ಹೆಣ್ಣೊಬ್ಬಳು, ಅಂದಿನ ಪರಿಸರದಲ್ಲಿ ಕವಯಿತ್ರಿಯಾಗಿ ರೂಪುಗೊಂಡ ಆಶ್ಚರ್ಯಕ್ಕೆ ಸಂತೋಷಪಡಬೇಕಾಗಿದೆ. ಆದರೆ ಹೊನ್ನಮ್ಮನ ಬರೆವಣಿಗೆ ಮಾತ್ರ ತನ್ನ ಅಚ್ಚಗನ್ನಡದ ಸೊಗಸಿನಿಂದ, ಹೃದ್ಯವಾಗಿದೆ.

ಆಧಾರಗಳು

[ಬದಲಾಯಿಸಿ]

http://kanaja.in/archives/14904 Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.